ರಾಮದಾಸ್ ಬೋರ್ಡ್ ಕಿತ್ತೊಯ್ತು!
ರಾಮದಾಸ್ ಬೋರ್ಡ್ ಕಿತ್ತೊಯ್ತು!
ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಹಿಂದಿನ ಶಾಸಕ ಎಸ್.ಎ. ರಾಮದಾಸ್ ಅವರು ಬಿಜೆಪಿ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ತಮ್ಮದೇ ಆದ ಆಸರೆ ಟ್ರಸ್ಟ್ ರಚಿಸಿಕೊಂಡು ಕ್ಷೇತ್ರ ವ್ಯಾಪ್ತಿಯಲ್ಲಿ ಹಲವಾರು ಜನೋಪಯೋಗಿ ಕೆಲಸ ಕಾರ್ಯಗಳನ್ನು ಕೈಗೊಂಡಿದ್ದರು. ಕುಟುಂಬದ ಸದಸ್ಯರಿಗೆ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯ ಪತ್ರ, ಗಿಡಗಳ ವಿತರಣೆ, ವೃದ್ಧರಿಗೆ ಶಾಲು, ನಿವಾಸಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು, ಕೊನೆಗೆ ಮನೆಗಳ ಮುಂದೆ ಮಾಲೀಕರ ಹೆಸರು, ಮನೆಯ ಸಂಖ್ಯೆ ಇರುವ ಬೋರ್ಡ್‌ಗಳನ್ನು ಬರೆಸಿ ಹಾಕಿಸಿದ್ದರು. ಕೇಸರಿ ಬಣ್ಣದ ಟಿ ಶರ್ಟ್ ಧರಿಸಿದ್ದ ಸ್ವಯಂ ಸೇವಕರು ಕ್ಷೇತ್ರ ವ್ಯಾಪ್ತಿಯ ಎಲ್ಲ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸಾರ್ವಜನಿಕರ ಕುಂದುಕೊರತೆಗಳನ್ನು ವಿಚಾರಿಸುತ್ತಿದ್ದರು. ಇವೆಲ್ಲಾ ತಮ್ಮನ್ನು ಕೈಹಿಡಿಯುತ್ತವೆ ಎಂದು ರಾಮದಾಸ್ ನಂಬಿದ್ದರು. ಆದರೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ರಾಮದಾಸ್ ಸೋತರು. ಕ್ಷೇತ್ರದ ಮತದಾರರು ಕಾಂಗ್ರೆಸ್‌ನ ಎಂ.ಕೆ. ಸೋಮಶೇಖರ್ ಅವರ ಕೈ ಹಿಡಿದರು. ಹೀಗಾಗಿ ಮನೆಗಳ ಮುಂದೆ ಬೋರ್ಡ್ ಹಾಕ್ದೋರು, ಹಾಕಿಸ್ದೋರು ಎಲ್ಲಾ ನಾಪತ್ತೆ!
ಅಕ್ಷರ ಜಾತ್ರೆಯಲ್ಲಿ ಊಟಕ್ಕೆ ವಡೆ, ಪಾಯಸ!
ಮೈಸೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಇತ್ತೀಚೆಗೆ ನಂಜನಗೂಡಿನಲ್ಲಿ ಜರುಗಿತು. ಸಮ್ಮೇಳನ ಹೇಗಾದರೂ ನಡೆದಿರಲಿ ಎರಡೂ ದಿನವೂ ಊಟ ಭರ್ಜರಿಯಾಗಿತ್ತು. ಎರಡನೇ ದಿನ ಊಟಕ್ಕೆ ವಡೆ- ಪಾಯಸ ಮಾಡಿಸಲಾಗಿತ್ತು. ಇದನ್ನು ಕಂಡ ಸಾಹಿತ್ಯಾಸಕ್ತರು ಖುಷಿಯಿಂದ ಊಟ ಮಾಡುತ್ತಿದ್ದರೆ ಮತ್ತೆ ಕೆಲವರು ಪಿಸುಪಿಸು ಮಾತನಾಡಿಕೊಂಡು ನಗುತ್ತಿದ್ದರು. ಯಾಕೆ ಗೊತ್ತೆ? ಸಾಮಾನ್ಯವಾಗಿ ವಡೆ, ಪಾಯಸ ಮಾಡಿಸೋದು ತಿಥಿ ಊಟಕ್ಕೆ.
ಎಲ್ಲಿಯ ಚೆನ್ನಮ್ಮ.. ಎಲ್ಲಿಯ ರಾಣಿ ಬಹದ್ದೂರ್?
ಮೈಸೂರು ವಿಶ್ವವಿದ್ಯಾಲಯ ಮಾನಸ ಗಂಗೋತ್ರಿ ಕ್ಯಾಂಪಸ್‌ನಲ್ಲಿ ಬಿ.ಎನ್. ಬಹದ್ದೂರ್ ಅವರು ವ್ಯವಹಾರ ನಿರ್ವಹಣಾ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ಕೋಟ್ಯಂತರ ರುಪಾಯಿ ನೆರವು ನೀಡಿದ್ದಾರೆ. ಹೀಗಾಗಿ ಸಂಸ್ಥೆಗೆ ಬಿ.ಎನ್. ಬಹದ್ದೂರ್ ವ್ಯವಹಾರ ನಿರ್ವಹಣಾ ಸಂಸ್ಥೆ ಎಂದೂ, ಸಭಾಂಗಣಕ್ಕೆ ರಾಣಿ ಬಹದ್ದೂರ್ ಸಭಾಂಗಣ ಎಂದು ಹೆಸರಿಸಲಾಗಿದೆ. ಇತ್ತೀಚೆಗೆ ಇಲ್ಲಿ ಹೆಚ್ಚು ಸಮಾರಂಭಗಳು ನಡೆಯುತ್ತಿವೆ. ಕಳೆದ ವಾರ ಇಲ್ಲಿ ಮಹೇಶ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಉದ್ಘಾಟನಾ ಕಾರ್ಯಕ್ರಮ ಇತ್ತು. ಇದಕ್ಕೆ ಪಿಯು ಉಪ ನಿರ್ದೇಶಕ ಕೆ.ಎಂ. ಪುಟ್ಟು ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿದ್ದರು. ಮಾತನಾಡುವಾಗ ರಾಣಿ ಬಹದ್ದೂರ್ ಸಭಾಂಗಣ ಎನ್ನುವ ಬದಲು ಕಿತ್ತೂರು ರಾಣಿ ಚೆನ್ನಮ್ಮ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಿರುವುದು ಬಹಳ ಶ್ಲಾಘನೀಯವಾದುದು ಎಂದರು. ಎಲ್ಲಿಯ ಕಿತ್ತೂರು ರಾಣಿ ಚೆನ್ನಮ್ಮ, ಎಲ್ಲಿಯ ರಾಣಿ ಬಹದ್ದೂರ್. ನಗುವ ಸರದಿ ಸಭಿಕರದಾಗಿತ್ತು.
ಸಚಿವ ಎಚ್.ಸಿ.ಮಹದೇವಪ್ಪಗೆ ಖಾತೆ ಕಳೆದುಕೊಳ್ಳುವ ಭೀತಿ
ಕಡಿಮೆ ಮತಗಳ ಅಂತರದಲ್ಲಿ ಗೆದ್ದು ಭಾರಿ ಖಾತೆಯನ್ನೇ ಗಿಟ್ಟಿಸಿಕೊಂಡ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ ಟಿ. ನರಸೀಪುರ ಶಾಸಕ, ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ಖಾತೆ ಕಳೆದುಕೊಳ್ಳುವ ಭೀತಿ ಎದುರಾಗಿದೆ! ಇತ್ತೀಚೆಗೆ ಹನೂರಿನಲ್ಲಿ ಅಭಿನಂದನಾ ಸಮಾರಂಭ ನಡೆದಿತ್ತು. ಅವರ ಪಕ್ಷದವರೇ ಆದ ಶಾಸಕ ಆರ್. ನರೇಂದ್ರ ಭಾಷಣ ಮಾಡಲು ನಿಂತರು. ಮಾತಿನ ಭರಾಟೆಯಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಎಂದು ಹೇಳುವ ಬದಲು ಎಚ್.ಎಸ್. ಮಹದೇವಪ್ರಸಾದ್ ಎಂದು ಬಿಟ್ಟರು. ಇದರಿಂದ ಗಾಬರಿಯಾದ ಲೋಕೋಪಯೋಗಿ ಸಚಿವರು ತಮ್ಮ ಭಾಷಣದ ಸರದಿ ಬಂದಾಗ ನಾನು ಸರಿಯಾಗಿ ಕೆಲಸ ಮಾಡಬೇಕು. ಇಲ್ಲವಾದರೆ ನಮ್ಮ ಚೀಫ್ ಪ್ಲಾನರ್ ಎಚ್.ಎಸ್. ಮಹದೇವಪ್ರಸಾದ್‌ಗೆ ನನ್ನ ಖಾತೆ ಹೋಗುತ್ತದೆ. ಈಗಾಗಲೇ ನರೇಂದ್ರ ಬೇರೆ ಹೇಳಿ ಬಿಟ್ಟಿದ್ದಾರೆ. ಮಹದೇವಪ್ರಸಾದ್ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ನಾನು, ಸಿದ್ದರಾಮಯ್ಯ ಸೇರಿದಂತೆ ನಮ್ಮ ಸಚಿವ ಮಿತ್ರರೆಲ್ಲ ಯಾವುದೇ ಹೋಟೆಲ್‌ಗೆ ಹೋದರೂ ಅವರೇ ತಿಂಡಿ, ಊಟ ಆರ್ಡರ್ ಮಾಡುತ್ತಾರೆ. ನಾವು ತಿನ್ನುತ್ತೇವೆ ಅಷ್ಟೇ. ಹಾಗಾಗಿ ನಾನು ಹುಷಾರಾಗಿ ಕೆಲಸ ಮಾಡುತ್ತೇನೆ. ಇಲ್ಲವಾದರೆ ಖಾತೆ ಕಳೆದುಕೊಳ್ಳಬೇಕಾಗುತ್ತದೆ ಎಂದಾಗ ಸಭೆಯಲ್ಲಿ ನಗೆಗಡಲು!
ತುಳು ಭಾಷೆಗಾಗಿ ಬಿಜೆಪಿಯಲ್ಲಿ ಕಿತ್ತಾಟ
ಬೆಳ್ತಂಗಡಿ ಕಾಂಗ್ರೆಸ್ ಶಾಸಕ ವಸಂತ ಬಂಗೇರ ವಿಧಾನಸಭೆಯಲ್ಲಿ ತುಳುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಲು ನಿರಾಕರಿಸಿದ್ದರಿಂದ ಖೇದಗೊಂಡಿರುವ ದಕ್ಷಿಣ ಕನ್ನಡ ಜಿಪಂ ಸದಸ್ಯ (ಬಿಜೆಪಿ) ಸಂತೋಷ್ ಕುಮಾರ್ ಬೊಳಿಯಾರ್ ಇತ್ತೀಚೆಗೆ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ತುಳುವಿನಲ್ಲಿಯೇ ಮಾತನಾಡಿದರು. ಅಲ್ಲದೇ ಇನ್ನು ಮುಂದೆ ಎಲ್ಲರೂ ತುಳುವಿನಲ್ಲಿಯೇ ಮಾತನಾಡಬೇಕು ಎಂದು ಫರ್ಮಾನು ಹೊರಡಿಸಿದರು. ಅಧಿಕಾರಿಗಳಿಗೆ ಅರ್ಥ ಆಗಲ್ಲ. ಕನ್ನಡದಲ್ಲಿಯೇ ಮಾತನಾಡಿ ಎಂದು ಜಿಪಂ ಅಧ್ಯಕ್ಷರು ಸೂಚಿಸಿದರು. ಬೇಕಾದರೆ ಅವರೂ ತುಳು ಕಲಿಯಲಿ ಎಂದು ಸಂತೋಷ್ ತಿರುಗೇಟು ನೀಡಿದರು. ಕೊನೆಗೆ ಪಕ್ಷದವರೇ ಆದ ಸಂಸದ ನಳಿನ್ ಕುಮಾರ್ ಕಟೀಲ್ ಕನ್ನಡದಲ್ಲಿ ಮಾತನಾಡುವಂತೆ ಸಲಹೆ ಮಾಡಿದರು. ಇದನ್ನು ಕೇಳಿ ಸಂತೋಷ್, ಆ ಕ್ಷಣ ಸುಮ್ಮನಿದ್ದರು. ಆದರೆ ಅಪರಾಹ್ನದ ಸೆಷನ್‌ನಲ್ಲಿ ತುಳುವಿನಲ್ಲಿಯೇ ಮಾತನಾಡಿ, 'ತುಳು 8ನೇ ಪರಿಚ್ಛೇದಕ್ಕೆ ಸೇರದೆ ಇರಲು ಜನಪ್ರತಿನಿಧಿಗಳೇ ಕಾರಣ. ಕೇಂದ್ರದಲ್ಲಿ ಈ ಬಗ್ಗೆ ಗಮನ ಸೆಳೆಯಬೇಕಿರುವುದು ಎಂಪಿಗಳು. ಅವರು ಅಲ್ಲಿ ತುಳು ಪರ ಧ್ವನಿ ಎತ್ತಿ ಮಾತನಾಡಿಲ್ಲ' ಎಂದು ತಮ್ಮದೇ ಪಕ್ಷದ ಸಂಸದರಿಗೆ ಟಾಂಗ್ ನೀಡಿದರು.
- ನಂಬಿರಾಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

