ಊರ್ನಾಗೆ ಜಗಳ ಮಾಡ್ಕಂಡು ಕೆರೆ ನೀರು ಮುಟ್ದಂಗೆ ಹೋದ್ರು
ಮನೆ ಮುಂದ್ಲಾಗಡೆ ಮೈಲಾರಿ ಪೇಪ್ರು ವೋದ್ಕಂಡು ಕೂತಿದ್ದು...
ಮನೆ ಮುಂದ್ಲಾಗಡೆ ಮೈಲಾರಿ ಪೇಪ್ರು ವೋದ್ಕಂಡು ಕೂತಿದ್ದು. ಅವುನ್ನ ನೋಡಿ ಅಮಾಸೆ ಬಂದ. 'ಏನ್ಲಾ ಮೈಲಾರಿ, ಈವತ್ತು ಪೇಪರ್ನಾಗೆ ಏನದೆ ವಿಸೇಸ ?' ಅಂತ ಕೇಳ್ದ.
'ಏನಿಲ್ಲ ಕಣ್ಲಾ, ಅದೇ ನ್ಯೂಜು, ಕಮ್ಲ ಪಕ್ಸುದೋರು ಮೋದಿಗೆ ಹೈ ಲೆವೆಲ್ಲು ಪೋಸ್ಟು ಕೊಟ್ಟವ್ರಂತೆ. ಅದುಕ್ಕೆ ತಡ್ಕಳಕ್ಕೆ ಹಾಕ್ದೆ ಬಾಣದ ಪಕ್ಸುದೋರು ಅದೇ ಬಿಹಾರದ ಸಿಯೆಮ್ಮು ನಿತೀಸು ಕುಮಾರು ಎನ್‌ಡಿಎ ಬುಟ್ಟು ವೊಂಟೋದ್ರಂತೆ. ಇಡೀ ಪೇಪ್ರು ತುಂಬ ಆದೇ ನ್ಯೂಜು ತಂಬೋಗದೆ' ಅಂದ ಮೈಲಾರಿ.
'ಅಲ್ಲ ಕಣ್ಲಾ ವೂರ್ನಾಗೆ ಜಗಳ ಮಾಡ್ಕಂಡು ಕೆರೆ ನೀರು ಮುಟ್ದಂಗೆ ವೋದ್ರು ಅನ್ನಂಗೆ ಮೋದಿಗೆ ಕಮ್ಲ ಪಕ್ಸುದೋರು ಪವರ್ರು ಕೊಟ್ರೆ ನಿತೀಸು ಕುಮಾರ್ಗೆ ಏನಂತೆ ? ಇದು ಮಕ್ಳು ಆಟ್ಕೆ ಆಯ್ತು ಬುಡು' ಅಂದ ಅಮಾಸೆ. ಆಟೊತ್ಗೆ ಕೆಜೆಪಿ ಲೀಡ್ರು ಯಡೂರಪ್ನೋರು ಆತ್ಲಾಗೇ ಬಂದ್ರು. 'ನಮುಸ್ಕಾರ ಸಾ, ಏನ್ಸಾ ವೊಳ್ಳೇ ಖುಸಿ ಮೂಡ್ನಾಗೆ ಇದ್ದೀರಿ. ನಿಮ್ ಪಾರ್ಟಿ ಸಿಂಬಲ್ಲು, ಅದೇ ಟೆಂಗಿನಕಾಯಿ ಅದುಕ್ಕೆ ವೊಳ್ಳೇ ರೇಟು ಏನರ ಬಂತಾ?' ಅಂತ ಮೈಲಾರಿ ಕೇಳ್ದ.
ಆ ಮಾತು ಕೇಳಿ ಯಡೂರಪ್ನೋರು ಕಿವಿನಾಗೆ ಬೆಂಕಿ ಬಂದೋಯ್ತು. 'ಏನ್ಲಾ ಮಷ್ಕಿರಿ ಮಾಡ್ತಾ ಇದ್ದೀಯ. ಎಲೆಕ್ಸನ್ನಾಗೆ ಜನ ನಮ್ ಪಾರ್ಟಿ ಕೈಗೆ ಟೆಂಗಿನಕಾಯಿ ಚಿಪ್ಪು ಕೊಟ್ರು ಅಂತೇಳಿ ಕಿಂಡಲ್ಲು ಮಾಡ್ತಾಯಿದ್ದೀಯ. ವಸಿ ತಡ್ಕ, ಇನ್ನಾ ಪಾರ್ಲಿಮೆಂಟು ಎಲೆಕ್ಸನ್ ಬತ್ತದೆ. ಇಪ್ಪತ್ತು ಸೀಟು ಗೆದ್ದು ತೋರುಸ್ತೀನಿ. ಇಲ್ಲಾಂದೆರ ಬೂಕನಕೆರೆ ಕಡೀಕೆ ತಲೆ ಹಾಕೀನೂ ಮಲ್ಗಲ್ಲ. ಆವಾಗ ಪ್ರಧಾನೀನೇ ನನ್ ಮನೆಬಾಗ್ಲು ವುಡಿಕ್ಕಂಡು ಬರ್ಬೇಕು. ಟೆಂಗಿನಕಾಯಿ ಅಂತೆ ಟೆಂಗಿನಕಾಯಿ. ತಲೆಮ್ಯಾಲೆ ಕಾಯಿ ವೊಡುದ್ಬುಟ್ಟೇನು ವುಸಾರು' ಅಂದ್ರು ಯಡೂರಪ್ನೋರು.
ವಸಿ ಸಮಾಧಾನ ತಕ್ಕಳ್ಳಿ, ಏನೋ ಮಾತ್ಗೆ ಹಂಗಂದೆ. ಅದುಕ್ಕೆ ಈ ಪಾಟಿ ಸೀರಿಯಸ್ಸು ಆಬುಟ್ರೆ ಹೆಂಗೆ ? ಈವಾಗ ಮೋದಿಗೆ ಕಮ್ಲ ಪಕ್ಸುದೋರು ಪವರ್ರು ಕೊಟ್ಟವ್ರಂತೆ. ಇನ್ನ ನೀವು ಆ ಪಾರ್ಟಿಗೆ ಹಾರ್ಕಳಾದು ಯಾವಾಗ ಅಂತ ಮೈಲಾರಿ ಕೇಳ್ದ.
ಇದುಕ್ಕೆ ಕಣ್ಲಾ ನಾನು ಕಣ್ಗೆ ಎಣ್ಣೆ ಬುಟ್ಕಂಡು ಕಾಯ್ತಾ ಇದ್ದಿದ್ದು, ವೋಗಿದ್ಕಡೆ ಬಂದಿದ್ಕಡೆ ಆ ಅಡ್ವಾಣಿಯೋರು ನನ್ನುನ್ನ ಬಾಯ್ಗೆ ಬಂದಂಗೆ ಬಯ್ಯೋರು, ನನ್ ದುಸ್ಮನ್ ಅನಂತು ಯಡೂರಪ್ಪ ಹಂಗೆ, ಹಿಂಗೆ ಅಂತ ಕಿವಿ ತುಂಬಾ ವೂದೋರು. ಈವಾಗ ಮಾತಾಡ್ಲಿ ನೋಡಾವ. ಮೋದಿ ನನ್ ಪ್ರೆಂಡು ಕಣಲೇ' ಅಂದ್ರು ಯಡೂರಪ್ನೋರು. 'ವೋ ಇಸ್ಯ ಹಂಗಾ ? ಮತ್ತೆ ಕಮ್ಲ ಪಕ್ಸುಕ್ಕೆ ವೋಗಾಕಿಲ್ಲ ವೋಗಾಕಿಲ್ಲ ಅಂತ ರಾಗ ಹಾಡ್ತಾಯಿರಾದು ಯಾಕೆ?' ಅಂತೇಳಿ ಮೈಲಾರಿ ಕೇಳ್ದ. 'ಮೋದಿಗೆ ಪವರ್ರು ಸಿಕ್ತು ಅಂತೇಳಿ ವೋಡೋಗಿ ಕಮ್ಲ ಪಕ್ಸದ ಕಾಲಿಂಗು ಬೆಲ್ಲು ವೊತ್ತುದ್ರೆ ಮರ್ವಾದೆ ಇರ್ತದಾ? ಡಿಮ್ಯಾಂಡು ಇರ್ಬೇಕು ಅಂತಂದ್ರೆ ನಾನು ಕಮ್ಲ ಪಕ್ಸುಕ್ಕೆ ವೋಗಾಕಿಲ್ಲ ವೋಗಾಕಿಲ್ಲ ಅಂತ ಯಾರು ಕೇಳ್ದೇಯಿದ್ರೂ ಹೇಳ್ತಾಯಿರ್ಬೇಕು. ವೋಗಾಕಿಲ್ಲ ಅಂದ್ರೆ ವೋಯ್ತಾರೆ ಅಂತ ಮೀನಿಂಗು ಕಣಲೇ ಕೋತಿ ನನ್ನ ಮಗ್ನೆ' ಅಂದ್ರು ಯಡೂರಪ್ನೋರು.
'ಹಾಳಾದ್ರು ಈ ರಾಜ್ಕೀಯ ಲೆಕ್ಕಾಚಾರ್ವೇ ತಲ್ಯಾಗೆ ವೋಗಾಕಿಲ್ಲ. ವೋಗ್ಲಿ ಬುಟ್ಟಾಕಿ ಕಮ್ಲ ಪಕ್ಸುಕ್ಕೆ ವೋಗಾದು ಯಾವಾಗ ?' ಅಂತೇಳಿ ಮೈಲಾರಿ ಕೇಳ್ದ. ಅಯ್ಯೋ ಮುಂಡೇದೆ, ನನ್ ಯೋಚ್ನೆ ನಂಗೆ, ನಿಂದೊಳ್ಳೆ' ಅಂತೇಳಿ ಯಡೂರಪ್ನೋರು ತಿರ್ಗ ಸಿಟ್ಟಾಬುಟ್ರು. ಅದೇನು ಸಿವ ಅಂಥದ್ದು ಯೋಚ್ನೆ ಬಂದಿರಾದು ?' ಅಂದ ಮೈಲಾರಿ. 'ನಮ್ ಪಾರ್ಟಿ ಲೀಡ್ರು ಸೋಭಕ್ಕೆ ತೀರ್ಥಯಾತ್ರೆ ವೋಯ್ತೀನಿ ಅಂತ ವೋಗಿ ಅಲ್ಲೆಲ್ಲೋ ನೀರ್ನಾಗೆ ಸಿಕ್ಕಾಕ್ಕಂಬುಟ್ಟವ್ರಂತೆ. ಹಾಳಾದ್ದು ಪೋನು ಬ್ಯಾರೆ ಸಿಕ್ತಾಯಿಲ್ಲ' ಅಂತೇಳಿ ಯಡೂರಪ್ನೋರು ಅಲ್ಲಿಂದ ವೊಂಟ್ರು.
ಅವ್ರು ಅತ್ಲಾಗೆ ವೋಯ್ತಾಯಿದ್ದಂಗೆ ಇತ್ಲಾಗೆ ಬಂದ್ರು ವರ್ತೂರು ಹುಲಿ ಪ್ರಕಾಸು. ಮೈಲಾರಿ ಪುಲ್ ಖುಸಿ ಆಗೋಗಿ, 'ಪ್ರಕಾಸಣ್ಣ ನಮುಸ್ಕಾರ, ಇದೇನಣ್ಣ ಹೆಗ್ಲು ಮ್ಯಾಲೆ ಬಟ್ಟೆ ಗಂಟು. ಜವಳಿ ಖಾತೆ ವೋದ್ರೂವೆ ಬಟ್ಟೆ ಬುಡ್ಲಿಲ್ವಾ ?' ಅಂದ ಮೈಲಾರಿ.
'ಸುಮ್ಕಿರಲೇ ಈವಾಗ್ಲೇ ವೊಟ್ಟೆ ವುರೀತಾ ಐತೆ. ಜೆಲೋಸಿಲ್ಲು ಪುಲ್ ಬಾಟ್ಲು ಕುಡುದ್ರೂ ಕಮ್ಮಿ ಆಗಿಲ್ಲ. ವೊಟ್ಟೆನಾಗೆ ವುರಿತಾಯಿರೋ ಬೆಂಕಿಗೆ ನೀನು ಬ್ಯಾರೆ ಪೆಟ್ರೋಲ್ ಸುರಿತಾಯಿದ್ದೀಯ. ಕೈ ಪಕ್ಸ ಸೇರ್ಕಂಡು ತಿರ್ಗ ಮಂತ್ರಿ ಆಗಣ ಅಂತೇಳಿ ಸೂಟು ವೊಲಿಸ್ಕಂಡಿದ್ದೆ. ಮಂಗಂದು ಮಿಸ್ಸು ಆಗೋಯ್ತು. ಅದೇ ಯೋಚ್ನೆನಾಗೆ ದಪ್ಪ ಬ್ಯಾರೆ ಆಬುಟ್ಟಿದ್ದೀನಿ. ಸೂಟು ಟೈಟು ಆಬುಟ್ಟದೆ ವಾಪ್ಸು ಕೊಡಕ್ಕೆ ವೋಯ್ತಾಯಿದ್ದೀನಿ' ಅಂದ್ರು ಪ್ರಕಾಸು. ಮೈಲಾರಿ ಹೇಳ್ದೆಕೇಳ್ದೆ ಪೋಟಾಬುಟ್ಟ.
- ಕೆ.ವಿ.ಪ್ರಭಾಕರ್
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

