ನಮ್ಮನ್ನು ತಿದ್ದಿದವರು ಬಿದ್ದಾಗ ನಗೋದು ತರವೇ?
ಉದ್ಯಮಿ ಹರೀಶ್‌ಕುಮಾರ್ ಅಂದರೆ ಸಾಕು; ಜನ ಕಣ್ಣರಳಿಸುತ್ತಾರೆ. ಮೊನ್ನೆಯಷ್ಟೇ...

ಉದ್ಯಮಿ ಹರೀಶ್‌ಕುಮಾರ್ ಅಂದರೆ ಸಾಕು; ಜನ ಕಣ್ಣರಳಿಸುತ್ತಾರೆ. ಮೊನ್ನೆಯಷ್ಟೇ ಪೇಪರಿನಲ್ಲಿ ಅವರ ಫೋಟೋ ನೋಡಿದೆವು ಅಲ್ವಾ ಎಂದು ನೆನಪಿಸಿಕೊಳ್ಳುತ್ತಾರೆ. ಕೇವಲ ಹದಿನೈದು ವರ್ಷದಲ್ಲಿ ರಾಜ್ಯದ ನಂಬರ್‌ಒನ್ ಉದ್ಯಮಿ ಅನ್ನಿಸಿಕೊಳ್ಳುವುದು ಸುಲಭವಲ್ಲ. ಈ ಲೆವೆಲ್ ತಲುಪಬೇಕಾದರೆ ಆ ಮನುಷ್ಯ ವಿಪರೀತ ಕಷ್ಟಪಟ್ಟಿರ್ತಾನೆ ಎಂದೆಲ್ಲಾ ಮಾತಾಡಿಕೊಳ್ಳುತ್ತಾರೆ. ಅಷ್ಟಕ್ಕೇ ಸುಮ್ಮನಾಗದೆ-ಹರೀಶ್‌ಕುಮಾರ್ ಬಹಳ ಸಿಂಪಲ್ ಅಂತೆ. ಈಗ ಕೋಟ್ಯಾಧಿಪತಿ ಅನ್ನಿಸಿಕೊಂಡಿದ್ರೂ ಯಾವುದೇ ಹಮ್ಮು ಬಿಮ್ಮೂ ಬೆಳೆಸಿಕೊಂಡಿಲ್ವಂತೆ. ಕಷ್ಟದಲ್ಲಿ ಇರುವವರನ್ನು ಕಂಡರೆ ಬಹಳ ಮರುಗ್ತಾರಂತೆ. ಬಡವರ ಮಕ್ಕಳ ಶಿಕ್ಷಣಕ್ಕೆಂದು ತಮ್ಮ ಸಂಪಾದನೆಯ ಸ್ವಲ್ಪ ಹಣವನ್ನು ಮೀಸಲಾಗಿ ಇಡ್ತಾರಂತೆ. ಅವರ ಕಂಪನೀಲಿ ತುಂಬಾ ಒಳ್ಳೆಯ ಸಂಬಳ-ಸವಲತ್ತುಗಳು ಇವೆಯಂತೆ. ಯಾರಾದ್ರೂ ಸರಿಯಾಗಿ ಕೆಲಸ ಮಾಡ್ತಾ ಇಲ್ಲ ಅಂತ ಗೊತ್ತಾದ್ರೆ ಮಾತ್ರ ತಕ್ಷಣವೇ ಸಸ್ಪೆಂಡ್ ಮಾಡಿಬಿಡ್ತಾರಂತೆ ಬಹಳ ಮುಂಗೋಪಿಯಂತೆ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದರು.
ಜನರ ಮಾತುಗಳಲ್ಲಿ ಸ್ವಲ್ಪ ಉತ್ಪ್ರೇಕ್ಷೆಯಿತ್ತು. ವಾಸ್ತವ ಏನೆಂದರೆ, ಬಳ್ಳಾರಿಯಿಂದ ನೂರೈವತ್ತು ಕಿಲೋ ಮೀಟರು ದೂರವಿದ್ದ ಒಂದು ಪುಟ್ಟ ಹಳ್ಳಿ ಹರೀಶನ ಹುಟ್ಟೂರು. ಅಲ್ಲಿನ ಭೂ ಮಾಲೀಕರ ಜಮೀನಿನಲ್ಲಿ ಹರೀಶನ ತಂದೆ ಕೆಲಸ ಮಾಡುತ್ತಿದ್ದರು. ಯಾವುದೋ ಹಬ್ಬದ ಸಂದರ್ಭದಲ್ಲಿ ಸಾಲವಾಗಿ ಪಡೆದ ಹಣಕ್ಕೆ ಭೂ ಮಾಲೀಕರು ವರ್ಷವಿಡೀ ಜೀತ ಮಾಡಿಸುವುದನ್ನು ಕಂಡು ನೊಂದಿದ್ದರು. ತಮಗೆ ಬಂದಂಥ ಕಷ್ಟ ಮಗನಿಗೆ ಬರುವುದು ಬೇಡ ಎಂದು ಹರೀಶನನ್ನು ಚೆನ್ನಾಗಿ ಓದಿಸಿದರು. ಹರೀಶ ಓದು ಮುಗಿಯುತ್ತಿದ್ದಂತೆಯೇ ಬೆಂಗಳೂರಿಗೆ ಬಂದು ಪೀಣ್ಯದ ಇಂಡಸ್ಟ್ರಿಯಲ್ ಏರಿಯಾದಲ್ಲಿದ್ದ ಫ್ಯಾಕ್ಟರಿಯೊಂದರಲ್ಲಿ ನೌಕರಿಗೆ ಸೇರಿಕೊಂಡ. ಆರು ವರ್ಷ ಅಲ್ಲಿ ಕೆಲಸ ಮಾಡಿದ ಮೇಲೆ, ವ್ಯವಹಾರದ ಗುಟ್ಟುಗಳು ಅರ್ಥವಾದವು. ಅವರಿವರ ಕೈ ಕೆಳಗೆ ದುಡಿಯುವ ಬದಲು ನಾನೇ ಸ್ವಂತ ಉದ್ದಿಮೆ ಆರಂಭಿಸಬಾರದೇಕೆ ಅನ್ನಿಸಿತು. ತಕ್ಷಣವೇ ಊರಿಗೆ ಹೋಗಿ ತಂದೆಗೆ ಎಲ್ಲವನ್ನೂ ವಿವರಿಸಿದ. ಅವರು, ತಮಗಿದ್ದ ಆಸ್ತಿಯಲ್ಲಿ ಅರ್ಧದಷ್ಟು ಮಾರಿ, ಅದರಿಂದ ಬಂದ ಹಣವನ್ನು ಹರೀಶನ ಕೈಗಿಟ್ಟು-ಕಷ್ಟಪಟ್ಟು ದುಡಿ. ಒಳ್ಳೆಯದಾಗುತ್ತೆ ಎಂದರು. ಹರೀಶ, ಹಗಲು-ರಾತ್ರಿಗಳನ್ನು ಗಮನಿಸದೆ ದುಡಿದ. ಜೊತೆಗಿದ್ದವರಿಂದಲೂ ಒಳ್ಳೆಯ ಕೆಲಸ ತೆಗೆದ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಉತ್ಪನ್ನಗಳನ್ನು ತಯಾರಿಸಿದ. ಅವುಗಳಿಗೆ ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ಬೆಲೆ ಇಟ್ಟ. ಕಂಪನಿಯಲ್ಲಿ ಕೆಲವು ಮೈಗಳ್ಳರು ಸೇರಿಕೊಂಡಿದ್ದಾರೆ ಎಂದು ಅನ್ನಿಸಿದಾಗ ಅವರನ್ನು ಪತ್ತೆ ಹಚ್ಚಿ ಮುಲಾಜಿಲ್ಲದೆ ಸಸ್ಪೆಂಡ್ ಮಾಡಿದ. ಪತ್ರಿಕೆಯಲ್ಲಿ ಬಡ ಕುಟುಂಬದ ವಿದ್ಯಾರ್ಥಿಗಳ ಕುರಿತು ಸುದ್ದಿ ಪ್ರಕಟವಾದಾಗ ತಕ್ಷಣವೇ ಅವರಿಗೆ ಸಹಾಯ ಮಾಡಲು ಮುಂದಾದ. ಈ ಘಟನೆಗಳು ರೆಕ್ಕೆ ಪುಕ್ಕ ಪಡೆದುಕೊಂಡು ಹತ್ತು ಜನರನ್ನು ತಲುಪಿ ನಾನಾ ಬಗೆಯ ಸುದ್ದಿಗೆ ಕಾರಣವಾಗಿದ್ದವು.
ಮುಂದೆ ಏನಾಯಿತೆಂದರೆ, ಮೆಚ್ಚಿನ ಹುಡುಗಿಯೊಂದಿಗೆ ಹರೀಶನ ಮದುವೆಯಾಯಿತು. ಅವನ ಬದುಕಿಂದ ಅಮ್ಮ ಕಣ್ಮರೆಯಾಗುವುದೂ, ಮಗನ ಕೇಕೆ ಮನೆ ತುಂಬುವುದೂ ತಿಂಗಳ ಅಂತರದಲ್ಲಿ ನಡೆದು ಹೋಯಿತು. ತಂದೆಯ ವಿಷಯವಾಗಿ ಹರೀಶನಿಗೆ ತುಂಬ ಅಭಿಮಾನ. 'ಸಂದರ್ಭ ಬಂದ್ರೆ ನಿನ್ನನ್ನು ಬಿಟ್ಟು ಬದುಕಬಲ್ಲೆ. ಆದರೆ ಅಪ್ಪನನ್ನು ಬಿಟ್ಟು ಬದುಕಲಾರೆ' ಎಂದು ಆತ ಹೆಂಡತಿಗೆ ಸ್ಪಷ್ಟವಾಗಿ ಹೇಳಿದ್ದ. ಅಮ್ಮ ತೀರಿಕೊಂಡ ಸಂದರ್ಭದಲ್ಲಿ-'ಅಪ್ಪಾ, ಊರಲ್ಲೇ ಇದ್ರೆ ನಿನಗೆ ತೊಂದರೆ ಆಗುತ್ತೆ. ಬೆಂಗಳೂರಿಗೆ ಬಂದು ಬಿಡು' ಎಂದು ಒತ್ತಾಯಿಸಿದ್ದ. 'ಬ್ಯಾಡ ಮಗಾ. ಆ ಸಿಟೀಲಿ ನಾನಾದ್ರೂ ಏನು ಮಾಡ್ಬೇಕಿದೆ? ನಾನು ಇಲ್ಲೇ ಇರ್ತೇನೆ ' ಎಂದು ಹರೀಶನ ತಂದೆ ಸ್ಪಷ್ಟವಾಗಿ ಹೇಳಿದ್ದರು.
ಹೀಗಿರುವಾಗಲೇ ಯಶಸ್ವೀ ಯುವ ಉದ್ಯಮಿ ಪ್ರಶಸ್ತಿಯು ಹರೀಶನಿಗೆ ಒಲಿದು ಬಂತು. ರಾಜ್ಯದ ಕೈಗಾರಿಕಾ ಸಚಿವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯುವುದೆಂದು ಪ್ರಕಟಣೆ ಹೊರಬಿತ್ತು. ಈ ಸಂಭ್ರಮವನ್ನು ನೋಡಲು ಹರೀಶನ ತಂದೆಯೂ ಆಸೆಪಟ್ಟರು. ಕಾರ್ಯಕ್ರಮ ನಡೆಯಲು ನಾಲ್ಕು ದಿನ ಇರುವಾಗಲೇ ಬೆಂಗಳೂರಿಗೆ ಬಂದು, ಮಗನ ಸಡಗರವನ್ನು ಕಣ್ತುಂಬಿಕೊಂಡರು.
ಅಪ್ಪ ಬಹಳ ಅಪರೂಪಕ್ಕೆ ಬೆಂಗಳೂರಿಗೆ ಬಂದಿದ್ದಾರೆ. ಅವರಿಗೆ ಈ ಮಹಾನಗರದ ಎಲ್ಲ ಸೊಬಗನ್ನೂ ತೋರಿಸಬೇಕು. ಒಳ್ಳೆಯ ಹೋಟೆಲುಗಳಲ್ಲಿ ಊಟ ಮಾಡಿಸಬೇಕು ಎಂದು ಹರೀಶ ನಿರ್ಧರಿಸಿದ. ಅವನ ನಿಲುವಿಗೆ ಹೆಂಡತಿಯೂ ಸಹಮತ ಸೂಚಿಸಿದಳು. ಇದೇ ಸಂದರ್ಭಕ್ಕೆ ಕಂಪನಿಯ ನೌಕರರು-'ಅವಾರ್ಡ್ ಬಂತಲ್ಲ ಪಾರ್ಟಿ ಕೊಡಿಸಿ ಸಾರ್' ಎಂದು ಕೇಳಲು ಶುರುವಿಟ್ಟರು. ಪಾರ್ಟಿಯ ನೆಪದಲ್ಲಿ ಅಪ್ಪನಿಗೆ ಫೈವ್‌ಸ್ಟಾರ್ ಹೋಟೆಲ್ ತೋರಿಸೋಣ. ಅದೇ ಪಾರ್ಟಿಯಲ್ಲಿ ಕಂಪನಿಯ ನೌಕರರಿಗೆಲ್ಲ ಅಪ್ಪನ ಪರಿಚಯ ಮಾಡಿಕೊಡೋಣ ಎಂದು ಹರೀಶ ನಿರ್ಧರಿಸಿದ. ಪಾರ್ಟಿಯ ದಿನಾಂಕವನ್ನೂ 'ಫಿಕ್ಸ್' ಮಾಡಿದ.
ಕಾರ್‌ನಲ್ಲಿ ಹೊರಗೆ ಹೊರಟಾಗಲೆಲ್ಲ ತಂದೆಯೊಂದಿಗೆ ಏನೇನೋ ಮಾತಾಡಬೇಕು ಎಂದು ಹರೀಶನಿಗೆ ಆಸೆಯಾಗುತ್ತಿತ್ತು. ಆದರೆ, ಅವನು ಒಂದೆರಡು ಮಾತಾಡುತ್ತಿದ್ದಂತೆಯೇ ಯಾರೋ ಫೋನ್ ಮಾಡುತ್ತಿದ್ದರು. ಅವರ ಮಾತು ಮುಗಿಯುತ್ತಿದ್ದಂತೆಯೇ ಮತ್ತೊಂದು, ಮಗದೊಂದು ಕಾಲ್ ಬಂದು ಹರೀಶ ಬ್ಯುಸಿಯಾಗಿ ಬಿಡುತ್ತಿದ್ದ. ತಾವು ಹೋಗಲಿರುವ ಹೋಟೆಲಿನ ಬಗ್ಗೆ, ಅಲ್ಲಿಗೆ ಬರುವ ತನ್ನ ಸಿಬ್ಬಂದಿಯ ಬಗ್ಗೆ ಪ್ರಯಾಣದ ಸಂದರ್ಭದಲ್ಲಿಯೇ ತಂದೆಗೆ ವಿವರಿಸಿದರೆ ಆಯ್ತು ಎಂದುಕೊಂಡಿದ್ದ. ಆದರೆ, ಮೇಲಿಂದ ಮೇಲೆ ಬಂದ ವ್ಯವಹಾರ ಸಂಬಂಧಿ ಫೋನ್‌ಗಳು ಅವನ ಲೆಕ್ಕಾಚಾರವನ್ನೆಲ್ಲ ಉಲ್ಟಾ ಮಾಡಿಬಿಟ್ಟವು.
ಹೆಂಡತಿ, ಮಗನೊಂದಿಗೆ ಹರೀಶ ಕಾರ್‌ನಿಂದ ಇಳಿಯುತ್ತಿದ್ದಂತೆಯೇ ಅವನ ಕಂಪನಿಯ ನೌಕರರೆಲ್ಲ ಓಡೋಡಿ ಬಂದರು. ಅವರನ್ನೆಲ್ಲ ಬೆರಗಿನಿಂದ ನೋಡುತ್ತಲೇ, ಪಂಚೆ -ಶರ್ಟ್ ಧರಿಸಿ, ಹೆಗಲ ಮೇಲೊಂದು ಟವಲ್ ಹಾಕಿಕೊಂಡಿದ್ದ ಹರೀಶನ ತಂದೆಯೂ ಕಾರ್‌ನಿಂದ ಇಳಿದರು. 'ಇವರು ನಮ್ಮ ತಂದೆ' ಎಂದು ಹರೀಶ ತಕ್ಷಣವೇ ಹೇಳಿದ. ಎಲ್ಲರೂ 'ನಮಸ್ಕಾರ ಸಾರ್' ಎಂದರು. ನಂತರದ ಕೆಲವೇ ನಿಮಿಷಗಳಲ್ಲಿ ಪಾರ್ಟಿ ಶುರುವಾಯಿತು. ಹೇಳಿ ಕೇಳಿ ಅದು ಫೈವ್‌ಸ್ಟಾರ್ ಹೋಟೆಲು. ಅಲ್ಲಿನ ಝಗಮಗ ಬೆಳಕು, ಜಾರುವಂತಿದ್ದ ನೆಲ, ಅದರ ಮೇಲಿದ್ದ ರತ್ನಗಂಬಳಿ, ಆಗೊಮ್ಮೆ ಈಗೊಮ್ಮೆ ಸುಳಿದಾಡುತ್ತಿದ್ದ ಬಾತುಕೋಳಿಗಳು, ಹಚ್ಚ ಹರಿಸಿನ ಮೈದಾನ, ಅದರ ಮಧ್ಯೆಯೇ ಇದ್ದ ಪುಟಾಣಿ ಜಲಪಾತಗಳು... ಇದನ್ನೆಲ್ಲ ಕಂಡು ಹರೀಶನ ತಂದೆ ಅವಕ್ಕಾದರು. ತಾವು ಬಂದಿರುವ ಜಾಗ ಯಾವುದೆಂದೇ ಅವರಿಗೆ ಗೊತ್ತಾಗಲಿಲ್ಲ. ಅವರು, ಮಗನನ್ನು ಸನ್ನೆ ಮಾಡಿ ಕರೆದು ಕೇಳಿಯೇ ಬಿಟ್ಟರು: 'ಮಗಾ,. ಇದು ಅರಮನೇನಾ?'
ಈ ಮಾತು, ಹರೀಶನ ಕಂಪನಿಯ ಸಿಬ್ಬಂದಿಗೂ ಕೇಳಿಸಿತು. ಅವರು ವಾರೆಗಣ್ಣಲ್ಲೇ ಇತ್ತ ನೋಡಿ, ಕಿಸಕ್ಕನೆ ನಕ್ಕರು. ಅದೆಲ್ಲ ಕಾಣಿಸಲೇ ಇಲ್ಲ ಎಂಬಂತೆ ಹರೀಶ ಹೇಳಿದ: 'ಇದು ಅರಮನೆಯಲ್ಲ, ಫೈವ್‌ಸ್ಟಾರ್ ಹೋಟೆಲು ಕಣಪ್ಪಾ...'
ಸ್ವಲ್ಪ ಸಮಯದ ನಂತರ, ಎಲ್ಲರ ಟೇಬಲ್‌ಗೂ ತಿಂಡಿ ಬಂತು. ಅದರೊಂದಿಗೆ ಚಮಚ, ಫೋರ್ಕ್ ಇದ್ದವು. ಅವುಗಳಿಂದಲೇ ತಿಂಡಿ ತಿನ್ನಲು ಹರೀಶನ ತಂದೆ ಪ್ರಯತ್ನಿಸಿದರು. ಆದರೆ ಅಭ್ಯಾಸವಿಲ್ಲದ ಕಾರಣ, ಇದ್ಯಾಕೋ ಕಿರಿಕಿರಿ ಅನ್ನಿಸಿತು. ಅವರು ಹಿಂದೆ, ಮುಂದೆ ನೋಡದೆ ಸ್ಪೂನನ್ನು ಎತ್ತಿಟ್ಟು ಊಟ ಮಾಡುವ ಶೈಲಿಯಲ್ಲಿಯೇ ತಿಂದು ಮುಗಿಸಿದರು. ತಿಂಡಿಯ ಜೊತೆಗಿದ್ದ ಮಸಾಲೆ ಬಹಳ ಟೇಸ್ಟ್ ಅನಿಸಿದ್ದರಿಂದ, ಒಂದೊಂದೇ ಬೆರಳನ್ನು ಬಾಯಿಗಿಟ್ಟುಕೊಂಡು 'ಸೊರ್' ಎಂದು ಚೀಪಿಕೊಂಡರು. ಸುತ್ತಲೂ ಕುಳಿತಿದ್ದವರು ಅತ್ತಿಂದಿತ್ತ ಓಡಾಡುತ್ತಿದ್ದ ಸಪ್ಲೈಯರ್‌ಗಳು ಇದನ್ನು ಕಂಡು ಮುಖ ಸಿಂಡರಿಸಿಕೊಂಡರು. ಆದರೆ ಎಲ್ಲವನ್ನೂ ಕಂಡರೂ ಹರೀಶ ತುಟಿಪಿಟಕ್ ಅನ್ನಲಿಲ್ಲ.
ಕೆಲಹೊತ್ತಿನಲ್ಲೇ ಊಟವೂ ಮುಗಿಯಿತು. ಎಲ್ಲ ಟೇಬಲ್‌ಗಳಿಗೂ ಸೋಂಪ್ ಬಂತು. ಕಲ್ಲು ಸಕ್ಕರೆಯ ಪುಡಿಯಂತಿದ್ದ ಅದರ ರುಚಿ ಹರೀಶನ ತಂದೆಗೆ ತುಂಬಾ ಇಷ್ಟವಾಯಿತು. ಕಾರ್ ಹತ್ತಿದರೆ ಸಾಕು, ಮಗ ಫೋನ್‌ನಲ್ಲಿ ಮುಳುಗಿ ಬಿಡುತ್ತಾನೆ. ದಾರಿ ಮಧ್ಯೆ ಬಾಯಾಡಿಸಲು ಇರಲಿ ಎಂದುಕೊಂಡು ಅವರು ಎರಡು ಹಿಡಿಯಷ್ಟು ಸೋಂಪ್ ತೆಗೆದು, ಯಾರಿಗೂ ಗೊತ್ತಾಗದಂತೆ ಟವೆಲ್‌ನಲ್ಲಿ ಕಟ್ಟಿಕೊಂಡರು. ಅದಕ್ಕೂ ಮುಂಚೆಯೇ ಬಂದಿದ್ದ ಗೋಡಂಬಿ ಹಾಗೂ ಕಡ್ಲೆ ಬೀಜವನ್ನೂ ಅವರು ಗಂಟಲ್ಲಿ ಕಟ್ಟಿಕೊಂಡಿದ್ದರು.
'ನಾನು ಎಲ್ಲರಿಗೂ ವಿಶ್ ಮಾಡಿ ಬರ್ತೇನೆ. ನೀವು ಹೊರಡಿ' ಎಂದು ತಂದೆಯನ್ನು ಎಬ್ಬಿಸಿದ ಹರೀಶ. ಅವರು ನಾಲ್ಕು ಹೆಜ್ಜೆ ನಡೆದಿರುವಾಗಲೇ ಅನಾಹುತವಾಗಿ ಹೋಯಿತು. ಕಾರ್ಪೆಟ್‌ನ ಒಂದು ದಾರ ಚಪ್ಪಲಿಗೆ ಸಿಕ್ಕಿಕೊಂಡು, ಎಡವಿದ್ದರಿಂದ ಹರೀಶನ ತಂದೆ ಜಾರಿ ಬಿದ್ದರು. ಅವರು ಬಿದ್ದ ರಭಸಕ್ಕೆ ಟವಲ್ ಒಂದೆಡೆಗೆ ಜಾರಿ ಬಿದ್ದು ಅದರಲ್ಲಿದ್ದ ಸೋಂಪ್, ಕಡ್ಲೆ ಬೀಜ, ಗೋಡಂಬಿಗಳು ಹೋಟೆಲಿನ ಅಷ್ಟದಿಕ್ಕಿಗೂ ಚೆಲ್ಲಾಡಿ ಹೋದವು.
ಇದನ್ನು ಕಂಡ ಹೋಟೆಲಿನ ಸಿಬ್ಬಂದಿ ಮುಸಿಮುಸಿ ನಕ್ಕರು. ಹರೀಶನ ಕಂಪನಿಯ ಜನ ಗುಸುಗುಸು ಮಾತಾಡಿಕೊಂಡರು. ಒಂದಿಬ್ಬರಂತೂ 'ಅಯ್ಯೋ ಹೋಟೆಲಿಂದ ಕದ್ಕೊಂಡು ಹೋಗ್ತಿದ್ರಾ?' ಎಂದೂ ಕೇಳಿಬಿಟ್ಟರು. ಮೊದಲೇ ಕೋಪಿಷ್ಟ ಅನ್ನಿಸಿಕೊಂಡಿದ್ದ ಹರೀಶ, ಈ ಸಂದರ್ಭದಲ್ಲಿ ತಂದೆಯ ಮೇಲೆ ರೇಗಾಡುವುದು, ಹೊರಗಡೆ ಬಂದಾಗ ಹೇಗೆ ನಡ್ಕೋಬೇಕು ಅನ್ನೋದೇ ನಿನಗೆ ಗೊತ್ತಾಗಲ್ಲ, ಕಾಮನ್‌ಸೆನ್ಸ್ ಅನ್ನೋದು ಇಲ್ವೇ ಇಲ್ಲ ಎಂದೆಲ್ಲ ಕೂಗಾಡುವುದು ಗ್ಯಾರಂಟಿ ಎಂದುಕೊಂಡರು. ಆದರೆ, ಹರೀಶ ಎಲ್ಲರ ನಿರೀಕ್ಷೆಗೆ ವಿರುದ್ಧವಾಗಿ ನಡೆದುಕೊಂಡ. ಸರಸರನೆ ಬಂದು ತಂದೆಯನ್ನು ಮೇಲೆತ್ತಿದ. 'ಅಪ್ಪಾ, ಇವನ್ನೆಲ್ಲಾ ಕಾರ್ ಒಳಗೆ ಕೂತು ತಿನ್ನಬೇಕು ಅಂದ್ಕೊಂಡಿದ್ಯಾ?' ಎಂದ. ನಂತರ ವೆಯ್ಟರ್ ಒಬ್ಬರನ್ನು ಕರೆದು ಒಂದು ಹಿಡಿಯಷ್ಟು ಸೋಂಪ್ ತರಿಸಿಕೊಂಡು ಅಪ್ಪನ ಜೇಬಿಗೆ ಹಾಕಿ, ಹೋಗೋಣ ನಡಿ ಎಂದುಬಿಟ್ಟ. ಹೋಟೆಲಿನಲ್ಲಿದ್ದ ಜನ, ಅವರ ಮಾತುಗಳಿಂದ ಕಸಿವಿಸಿಗೊಂಡಿದ್ದ ಹರೀಶನ ತಂದೆ, ಮನೆಗೆ ಬಂದೊಡನೆಯೇ-'ಗೊತ್ತಾಗದೆ ತಪ್ಪು ಮಾಡಿಬಿಟ್ಟೆ ಕಣಪ್ಪಾ. ಬೇಜಾರು ಮಾಡ್ಕೋಬೇಡ' ಅಂದರು. ನಿನ್ನ ಕಡೆಯಿಂದ ಯಾವ ತಪ್ಪೂ ಆಗಿಲ್ಲ. ನೀನು ಆರಾಮಾಗಿ ಇರಪ್ಪಾ ಎಂದ ಹರೀಶ, ಅವತ್ತು ತುಂಬ ಹೊತ್ತಿನವರೆಗೂ ತಂದೆಯೊಂದಿಗೆ ಹರಟೆ ಹೊಡೆದ.
ಪಾರ್ಟಿ ಮುಗಿದ ಮರುದಿನ, ನಿನ್ನೆಯ ಪಾರ್ಟಿ ಹೇಗಿತ್ತು ಎಂದು ವಿಚಾರಿಸುವ ಅಭ್ಯಾಸ ಹರೀಶನಿಗಿತ್ತು. ಅವತ್ತೂ ಮಾಮೂಲಾಗಿಯೇ ವಿಚಾರಿಸಿದ. ನೌಕರರು ಹಾರಿಕೆಯ ಉತ್ತರ ಹೇಳಿ ಕಾಲ್ತೆಗೆದರು. ಅದನ್ನು ಗಮನಿಸಿ, ಹರೀಶ ಹೀಗೆಂದ: 'ಗೆಳೆಯರೆ, ನಿನ್ನೆಯ ಪಾರ್ಟಿಯಲ್ಲಿ ನನ್ನ ತಂದೆಯ ವರ್ತನೆ ನಿಮಗೆಲ್ಲಾ ಕಸಿವಿಸಿ ಉಂಟು ಮಾಡಿರುತ್ತೆ. ಆ ಮುದುಕ ಶುದ್ಧ ಅಬ್ಬೇಪಾರಿಯಂತೆ ವರ್ತಿಸಿ ಸಭೆಯ ಗಾಂಭೀರ್ಯವನ್ನೇ ಹಾಳು ಮಾಡಿಬಿಟ್ಟ. ಐದೂ ಬೆರಳುಗಳನ್ನು ಬಾಯಿಗಿಟ್ಟು 'ಸೊರ್' ಎಂದು ಚೀಪುತ್ತಾ ಎಲ್ಲರ ಮರ್ಯಾದೆ ತೆಗೆದ. ನಂತರ ಸೋಂಪ್‌ನ ಟವೆಲ್‌ನಲ್ಲಿ ಕಟ್ಟಿಕೊಂಡು ಜಾರಿಬಿದ್ದು, ಇಡೀ ಕಂಪನಿಗೇ ಕೆಟ್ಟ ಹೆಸರು ತಂದು ಬಿಟ್ಟ ಎಂದೆಲ್ಲಾ ಯೋಚಿಸಿರ್ತೀರಿ. ಆದ್ರೆ, ಫ್ರೆಂಡ್ಸ್, ಒಂದ್ಸಲ ಹೀಗೆ ಯೋಚಿಸಿ ನೋಡಿ: ನಮ್ಮ ತಂದೆ ಜೀವಮಾನದಲ್ಲಿ ಅದೇ ಮೊದಲ ಬಾರಿಗೆ ಫೈವ್ ಸ್ಟಾರ್ ಹೋಟೆಲಿಗೆ ಬಂದದ್ದು. ಅವರಿಗೆ ದಿನಾಲೂ ಬರಿಗೈಲಿ ತಿಂಡಿ ತಿಂದು ಅಭ್ಯಾಸ. ಅಂಥವರ ಮುಂದೆ ಚಮಚ, ಫೋರ್ಕ್ ಇಟ್ಟರೆ ಅದೆಲ್ಲಾ ಕಿರಿಕಿರಿ ಅನ್ನಿಸುವುದು ಸಹಜ. ಅಂಥ ಸಂದರ್ಭದಲ್ಲಿ ಅವರಿಗೆ ಹೇಗೆ ಅನುಕೂಲವೋ, ಹಾಗೆಯೇ ಬದುಕಲು ಬಿಟ್ಟು ಬಿಡೋಣ. ಇನ್ನು ಸೊಂಪ್ ತಗೊಂಡ ವಿಷಯ: ಹೋಟೆಲಿನಲ್ಲಿ ಪಡೆದ ಪ್ರತಿಯೊಂದಕ್ಕೂ ನಾವು ಹಣ ಕೊಟ್ಟು ಆಗಿದೆ. ಹೀಗಿರುವಾಗ ಮಾರ್ಗಮಧ್ಯೆ ಬಾಯಾಡಿಸಲೆಂದು, ಒಂದು ಹಿಡಿಯಷ್ಟು ಎತ್ತಿಕೊಂಡರೆ ಅದರಲ್ಲಿ ತಪ್ಪೇನು? ಒಂದು ವಿಷಯ ನೆನಪಿಡಿ: ಬಾಲ್ಯದಲ್ಲಿ, ಹೊರಗೆ ಹೋದ ಸಂದರ್ಭದಲ್ಲಿ ಹುಡುಗಾಟದ ಕಾರಣದಿಂದ ನಾವು ಮಾಡಬಾರದ ತಪ್ಪು ಮಾಡಿರುತ್ತೇವೆ. ಅಂಥ ಸಂದರ್ಭದಲ್ಲೆಲ್ಲ ಅಪ್ಪಂದಿರು ನಮ್ಮನ್ನು ತಿದ್ದಿರುತ್ತಾರೆ. ನಮ್ಮ ರಕ್ಷಣೆಗಾಗಿ ಓಡಿ ಬಂದಿರುತ್ತಾರೆ. ನಮ್ಮ ತಪ್ಪುಗಳಿಗಾಗಿ ಕ್ಷಮೆ ಬೇಡಿರುತ್ತಾರೆ. ಆನಂತರ ಏನೂ ಆಗಿಯೇ ಇಲ್ಲವೇನೋ ಎಂಬಂತೆ ಹೆಗಲ ಮೇಲೆ ಕೂರಿಸಿಕೊಂಡು ಮುದ್ದು ಮಾಡಿರುತ್ತಾರೆ. ಅಂಥ ಅಪ್ಪಂದಿರನ್ನು, ನಮ್ಮ ಪ್ರತಿಷ್ಠೆ ತೋರಿಸಲು ಹಮ್ಮಿಕೊಂಡ ಕಾರ್ಯಕ್ರಮಗಳಲ್ಲಿ ಶಿಸ್ತು ಪಾಲಿಸಲಿಲ್ಲ, ಟಿಪ್‌ಟಾಪ್ ಆಗಿ ಕೂರಲಿಲ್ಲ ಎಂಬ ಕಾರಣಕ್ಕೆ ಹಂಗಿಸುವುದು ಎಷ್ಟರ ಮಟ್ಟಿಗೆ ಸರಿ?'
ಹರೀಶ ಮಾತು ಮುಗಿಸುತ್ತಿದ್ದಂತೆಯೇ ಅಲ್ಲಿದ್ದವರೆಲ್ಲ ಚಪ್ಪಾಳೆ ಹೊಡೆದರು. ಕೆಲವರು ಮಾತು ಹೊರಡದೆ ಗದ್ಗದರಾಗಿದ್ದರು.
----
ಈಗ ಯೋಚಿಸೋಣ: ಹರೀಶನ ಜಾಗದಲ್ಲಿ ನಾವ್ಯಾರಾದರೂ ಇದ್ದಿದ್ದರೆ ಏನು ಮಾಡುತ್ತಿದ್ದೆವು ಹೇಳಿ? ಮನೆ ತಲುಪಿದ ತಕ್ಷಣ ಅಪ್ಪನೊಂದಿಗೆ ಜಗಳಕ್ಕೆ ಬೀಳುತ್ತಿದ್ದೆವು. ಇದೇ ಕೊನೆ. ಆಫೀಸಿನವರ ಮುಂದೆ ನಮ್ಮ ಮರ್ಯಾದೆ ತೆಗೆದುಬಿಟ್ಟೆ. ಇನ್ನು ಸತ್ರೂ ನಿನ್ನನ್ನು ಎಲ್ಲಿಗೂ ಕರ್ಕೊಂಡ್ ಹೋಗಲ್ಲ ಎಂದು ಚೀರುತ್ತಿದ್ದೆವು. ಬಂಧುಗಳೊಂದಿಗೆ ಈ ವಿಷಯ ಹೇಳಿ ಅಪ್ಪನ ಮರ್ಯಾದೆ ತೆಗೆಯುತ್ತಿದ್ದೆವು.
ಉಹುಂ, ಇಳಿಗಾಲದಲ್ಲಿ ಅಪ್ಪಂದಿರನ್ನೂ ಹಂಗಿಸುವುದಲ್ಲ; ಪ್ರೀತಿಸುವ, ಗೌರವಿಸುವ ಸರದಿ ಎಲ್ಲರದ್ದೂ ಆಗಲಿ. ಈ ಕಥೆಯು ಹರೀಶನಿಗೆ ಬಂದಂಥ ಸದಾಶಯವೇ ಎಲ್ಲರ ಬಾಳಿಗೂ ಬರಲಿ ಎಂಬುದು ಈ ಕ್ಷಣದ ಪ್ರಾರ್ಥನೆ, ಹಾರೈಕೆ.
- ಎ.ಆರ್. ಮಣಿಕಾಂತ್
armanikanth@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


