ನಮ್ಮೆಲ್ಲರ ಆಯುಷ್ಯದ ತುದಿಯಲ್ಲೂ ಆಡ್ವಾಣಿ ಕಂಡಂತಹುದೇ ಶರಶಯ್ಯೆ!
ಹಾಗೆ ನೋಡಿದರೆ ಅದು ಸರಿಸುಮಾರು ಎಲ್ಲರ ಮನೆಗಳಲ್ಲೂ ಒಂದು ಹಂತದಲ್ಲಿ...
ಹಾಗೆ ನೋಡಿದರೆ ಅದು ಸರಿಸುಮಾರು ಎಲ್ಲರ ಮನೆಗಳಲ್ಲೂ ಒಂದು ಹಂತದಲ್ಲಿ ನಡೆಯುವ ವಿದ್ಯಮಾನ. 'ಸಾಕು, ಇವತ್ತಿನ ವಹಿವಾಟುಗಳು ನಿನಗೆ ಅರ್ಥವಾಗೋದಲ್ಲ' ಅಂತ ಯಾವುದೋ ದಿಕ್ಕು ನೋಡಿ ಅಪ್ಪನಿಗೆ ಹೇಳುವ ಮಗ. ಅಂಥ ಮಾತನ್ನು ಹೇಳುವ ಅರ್ಹತೆಯೇ ನಿನಗಿಲ್ಲ ಎಂಬಂತೆ ಇನ್ನೆತ್ತಲೋ ನೋಡಿ ದುಡ್ಡಿಡುವ ಕಪಾಟಿನ ಬೀಗದ ಕೈಯನ್ನು ಮತ್ತಷ್ಟು ಭದ್ರವಾಗಿರಿಸಿಕೊಳ್ಳುವ ಅಪ್ಪ. ಹಲ ವರ್ಷಗಳ ಅವಧಿಯಲ್ಲಿ ರೂಪುಗೊಂಡ ಭಾವನಾತ್ಮಕತೆ ಮತ್ತು ಪ್ರಸ್ತುತದ ವಾಸ್ತವಗಳ ನಡುವಿನ ಸಂಘರ್ಷ ಯಾವತ್ತೂ ಘೋರವೇ.
ಅಂಥ ಸಂದರ್ಭಗಳಲ್ಲೆಲ್ಲ ಮಗನೆದುರು ಆ ಕಾಲದ ಅಗತ್ಯಗಳನ್ನು ತ್ವರಿತವಾಗಿ ಪೂರೈಸಿಬಿಡುವ ಆಕ್ರಮಣಕಾರಿ ದಾರಿ ತೆರೆದುಕೊಂಡಿರುತ್ತದೆ. ಅಪ್ಪನಿಗೆ ತಾನು ಪೊರೆದ ವ್ಯವಸ್ಥೆಯ ಮೇಲಿನ ಹಕ್ಕು ಮುಖ್ಯವಾಗುತ್ತದೆ. ತೋಟದ ಪಕ್ಕದ ಖಾಲಿ ಜಾಗದಲ್ಲಿ ರಬ್ಬರ್ ಬೆಳೆಸುತ್ತೇನೆ ಎಂಬ ಮಗನ ಉತ್ಸಾಹ ಅಪ್ಪನಿಗೆ ಹರೆಯದ ಉನ್ಮಾದದಂತೆ, ತಾನಿದುವರೆಗೆ ಮಾಡಿದ್ದು ನಾಲಾಯಕ್ ಎಂದು ಮಗ ಅಣಕಿಸುತ್ತಿರುವಂತೆ ಭಾಸವಾಗಿ ಹತಾಶೆಗೆ ಕಾರಣವಾಗುತ್ತದೆ.
ಕೆಲದಿನಗಳ ಹಿಂದೆ ರಾಷ್ಟ್ರಮಟ್ಟದಲ್ಲಿ ಬಿಚ್ಚಿಕೊಂಡ ಆಡ್ವಾಣಿ ರಾಜಿನಾಮೆ ಪ್ರಕರಣದ ಒಡಲಾಳದಲ್ಲೂ ಇದ್ದಿದ್ದು ಇಂಥದೊಂದು ಪೀಳಿಗೆಯ ಸಂಘರ್ಷವೇ ಎನಿಸುತ್ತದೆ. ಕುಟುಂಬದ ಮಟ್ಟದಲ್ಲಿ ಆಪ್ತವಲಯದಲ್ಲಿ ಮಾತ್ರ ಈ ತಿಕ್ಕಾಟ ಜಾಹೀರುಗೊಂಡು ಕೊನೆಗೆ ಹೇಗಾದರೊಂದು ಅಂತ್ಯ ಕಂಡುಬಿಡುತ್ತದೆ. ಆದರೆ ನಾಯಕತ್ವದ ಮೇಲಾಟದಲ್ಲಿ ಮೋದಿ ವರ್ಸಸ್ ಆಡ್ವಾಣಿ ಎಂಬ ಸುದ್ದಿ ದೇಶಕ್ಕೆ ಸಂಬಂಧಿಸಿದ್ದಾದ್ದರಿಂದ ನೋಡನೋಡುತ್ತಿದ್ದಂತೆ ಚರ್ಚೆ ಪರ-ವಿರೋಧಗಳಲ್ಲಿ ಭಾರಿ ಕಾವು ಪಡೆದುಕೊಂಡಿತು.
ಬಿಜೆಪಿಯಲ್ಲಿ ವಾಜಪೇಯಿ- ಆಡ್ವಾಣಿ ಕಾಲಘಟ್ಟ ಮುಗಿದು, ಆ ಪಕ್ಷವನ್ನು ಬೆಂಬಲಿಸುವ ಹೆಚ್ಚಿನವರಲ್ಲಿ ಮೋದಿ ಅಲೆಯ ನವ ನಾಯಕತ್ವದ ಕನಸು ಕಣ್ಣೆದುರು ಹೊಯ್ದಾಡುತ್ತಿದೆ ಎಂಬುದು ವಾಸ್ತವವೇ. ಮನೆಯ ಹಿರಿಜೀವಕ್ಕೆ ಅಲ್ಮೆರಾದ ಕೀಗೊಂಚಲನ್ನು ಮಗನಿಗೆ ಹಸ್ತಾಂತರಿಸುವ ಒತ್ತಡ ಬಂದಾಗ ಕಾಡಿದ ಖಾಲಿತನ- ದಿಗಿಲುಗಳೇ ಆಡ್ವಾಣಿಯವರನ್ನೂ ಕಾಡಿದ್ದಿರಬಹುದು. ಆದರೆ ಅಷ್ಟೆಲ್ಲ ತಳಮಟ್ಟದಿಂದ ಕೆಲಸ ಮಾಡಿರುವ, ದೇಶದ ಮೂಲೆ ಮೂಲೆ ಸುತ್ತಿರುವ ಆಡ್ವಾಣಿಯಂಥವರೇ ಬದಲಾಗುತ್ತಿರುವ ಜನರ ಮಿಡಿತ, ಎದುರಾಗಿರುವ ವಾಸ್ತವಗಳನ್ನು ಒಪ್ಪಿಕೊಳ್ಳುವುದಕ್ಕಾಗದೇ ತಕರಾರು ತೆಗೆಯಬೇಕಾಗಿ ಬಂತೇ ಅನ್ನೋದಷ್ಟೆ ಕಾಡುವ ಪ್ರಶ್ನೆ. ಅದನ್ನು ಮೀರಿ ಇಬ್ಬರ ಪೈಕಿ ಒಬ್ಬರನ್ನು ವಿಲನ್ನಂತೆ ಇನ್ನೊಬ್ಬರನ್ನು ಹೀರೋನಂತೆ 'ಇದಮಿತ್ಥಂ' ಎಂದು ವಿಶ್ಲೇಷಿಸುವ ಪ್ರಕ್ರಿಯೆ ಅಂಥ ತೂಕದ್ದೇನಲ್ಲ. ಏಕೆಂದರೆ ಬದಲಾಗಿರುವ ಕಾಲದ ಮಿಡಿತವನ್ನು ಲೆಕ್ಕಿಸದೆ ತಮ್ಮ ಸುತ್ತ ಭರವಸೆಗುಂದಿದ ಮುಖಗಳನ್ನೇ ಇಟ್ಟುಕೊಂಡು ಈಗ ನಿರಾಕರಣ ಧೋರಣೆಯಲ್ಲಿರುವವರೇ ಹಲ ಪೀಳಿಗೆಗಳ ಹಿಂದಿನ ಹೀರೋ ಆಗಿದ್ದರು. ಎರಡು ಸ್ಥಾನಬಲದ ಪಕ್ಷವನ್ನು ಇವತ್ತಿನ ಮಟ್ಟಕ್ಕೆ ತಂದಿರಿಸಿದ ಪ್ರಮುಖ ಪ್ರೇರಕ ಶಕ್ತಿ ಅವರೇ ಎಂಬ ಬಗ್ಗೆ ಬಹುಮಂದಿ ಸಮ್ಮತಿಸುತ್ತಾರೆ. ಇದೀಗ ಅವರ ಜಾಗದಲ್ಲಿ ಯುವ ಪೀಳಿಗೆಯ ಹೀರೋ ಆಗಿರುವವರು ನರೇಂದ್ರ ಮೋದಿ. ಎರಡು ದಶಕಗಳ ಹಿಂದೆ ರಥಯಾತ್ರೆಯ ಪುಳಕಕ್ಕೆ ಸಿಲುಕಿದವರು, ಆಡ್ವಾಣಿ ತಮ್ಮ ಎಂಬತ್ತೈದರ ಪ್ರಾಯದಲ್ಲಿ ಹಠವಾಣಿ ಮೊಳಗಿಸುತ್ತಾರೆ ಎಂದೇನೂ ಅಂದುಕೊಂಡಿರಲಿಲ್ಲ. ಅಂತೆಯೇ ಇವತ್ತಿನ ಹೀರೋವಿಗೂ ನಿವೃತ್ತಿ ಸಮಯ ಬರುತ್ತದೆ. ಆಗ ಅವರ ವ್ಯಕ್ತಿತ್ವ ಅಭಿವ್ಯಕ್ತಗೊಳ್ಳುವುದು ಹೇಗೆ ಎಂಬುದನ್ನು ಈಗಲೇ ನಿಖರವಾಗಿ ಹೇಳುವುದೂ ಸಾಧ್ಯವಿಲ್ಲ. ಹೀಗಾಗಿ ಈತ ಸುಭಗ- ಇನ್ನೊಬ್ಬ ಸರಿಯಿಲ್ಲ ಎಂಬ ಈ ಕ್ಷಣದ ಸತ್ಯವನ್ನು ಅತಿಯಾಗಿ ನೆಚ್ಚಿಕೊಳ್ಳುವುದು ನಮ್ಮ ರೋಚಕತೆಯ ಹಸಿವನ್ನು ಇಂಗಿಸಬಹುದಷ್ಟೆ.
ತಲೆಮಾರುಗಳ ಸಂಘರ್ಷವು ಹುಟ್ಟುಹಾಕುವ ಕಳೆದುಕೊಳ್ಳುವ ಭಯಕ್ಕೆ ಎಂಥವರನ್ನೂ ಉದ್ದೇಶಶುದ್ಧಿ ಇಲ್ಲದವರನ್ನಾಗಿ ಮಾಡುವ ಶಕ್ತಿಯಿದೆ. ಅಪ್ಪನಿಂದ ಮಗನಿಗೆ ಅಧಿಕಾರ ಹಸ್ತಾಂತರ ಎಂಬುದು ಅವರಿಬ್ಬರಿಗೇ ಸಂಬಂಧಿಸಿದ ವಿಷಯವಾಗಿರುವುದಿಲ್ಲ. ಆದ್ದರಿಂದಲೇ ಅವರಿಬ್ಬರ ಸುತ್ತಲಿನ ಹಿತಾಸಕ್ತಿಗಳು ಅಲ್ಲಿ ಕೈಜೋಡಿಸಿ ರಾಜಕೀಯ ಶುರುವಾಗುತ್ತದೆ. ಅಪ್ಪನ ಆಡಳಿತಾವಧಿಯಲ್ಲಿ ಯಥಾಸ್ಥಿತಿಗೆ ರೂಢಿಗೊಂಡಿರುವ ಕುಟುಂಬದ ಕೆಲ ಸದಸ್ಯರಿಗೆ, ಮಗ ತರಬಹುದಾದ ಬದಲಾವಣೆಗಳಲ್ಲಿ ತಮ್ಮ ಜಾಗವೆಲ್ಲೋ ಎಂಬ ಅಭದ್ರತೆ. ಉಳಿದ ಕಿರಿ ಸದಸ್ಯರಿಗೆ ಹೊಸರಕ್ತವನ್ನು ಬೆಂಬಲಿಸುವ ಉತ್ಕರ್ಷ. ಚುಕ್ಕಾಣಿ ಹಿಡಿಯುವ ಮಗ ಅಖೈರಾಗಿ ಬೆಳಗಿಬಿಟ್ಟರೆ ಎಂಬ ಮತ್ಸರ ಕುಟುಂಬದ ವಿರೋಧಿಗಳಿಗೆ. ಪೀಳಿಗೆಗಳ ನಡುವಿನ ಸಹಜ ಅಂತರವೇ 'ನೀ ಕೊಡೆ- ನಾ ಬಿಡೆ' ಎಂಬ ಬೃಹನ್ನಾಟಕವಾಗಿ ಮುಂದುವರಿಯುವುದರಲ್ಲಿ ಇಂಥ ಎಲ್ಲ ಹಿತಾಸಕ್ತಿಗಳ ಕೊಡುಗೆಯಿದೆ. ಪೊರೆದ ತಂದೆ, ಪ್ರೀತಿಸಿದ ಮಗ ಪರಸ್ಪರ ವೈರಿಗಳಂತೆ ಕಾಣುವ ವಿಚಿತ್ರ ಸನ್ನಿವೇಶವೊಂದು ನಿರ್ಮಾಣವಾಗಿ ಬಿಡುತ್ತದೆ. ತಮ್ಮ ಓರಗೆಯವನಲ್ಲದ ಹೊಸ ನೇತಾರನ ಜತೆ ಕೆಲಸ ಮಾಡುವ ಸಂದರ್ಭ ಬಂದರೆ ತಾವು ಮಬ್ಬಾಗಿಬಿಡುತ್ತೇವೆ ಎಂಬ ಆತಂಕದಲ್ಲಿ ಆಡ್ವಾಣಿಯವರ ಅಕ್ಕಪಕ್ಕದಲ್ಲಿರುವ ಅವರ ಹತ್ತಿರದ ವಯೋವಾನದ ಮುಖಂಡರು, ಸಲಹೆಗಾರರು, ಮೈತ್ರಿಕೂಟದ ನಾಯಕರ ಚಿತ್ರಣವನ್ನು ಕಣ್ಣಿಗೆ ತಂದುಕೊಂಡರೆ ಒಟ್ಟಾರೆ ಸಂಘರ್ಷದ ವ್ಯಾಪ್ತಿ ಅರಿವಾಗುತ್ತದೆ. ಇಂಥ ಲಾಬಿಗಳಿಗೆ ಇಲ್ಲವೆನ್ನಲಾಗದ ಹಿರಿಮನುಷ್ಯನ ನಡೆಗಳು ಇನ್ನಷ್ಟು ಸಂಕೀರ್ಣತೆಗಳಿಗೆ ಕಾರಣವಾಗುತ್ತವೆ.
***
ಏನೋಪ್ಪ? ಆಡ್ವಾಣಿಯಾದರೇನು, ಮೋದಿ ಬಂದರೇನು ಎಂಬ ದೇಶಾವರಿ ನಿಟ್ಟುಸಿರಿಟ್ಟು ಈ ಸಂಘರ್ಷದ ಚರ್ಚೆಗೆ ಮಂಗಳ ಹಾಡಬಹುದು. ದೇಶ ಸಾಗಬಹುದಾದ ಹಾದಿ, ಲೋಕ ಹೊರಳಬಹುದಾದ ಮಗ್ಗುಲುಗಳ ಕತೆ ಏನಾದರಾಗಲಿ. ಆದರೆ ವೈಯಕ್ತಿಕ ನೆಲೆಯಲ್ಲಿ ಹಾಗೂ ಸಮಾಜದ ಮಟ್ಟದಲ್ಲಿ ನಾವೆಲ್ಲರೂ ಕಾಲದ ಪ್ರವಾಹದಲ್ಲಿ ಈಜುತ್ತಿರುವವರು ಎಂಬುದಂತೂ ನಿಜ ತಾನೇ? ಪ್ರತಿ ಸಾಮಾನ್ಯ ಜೀವಿಗೂ ಅವನದೇ ಸೀಮಿತ ಚೌಕಟ್ಟಿನಲ್ಲಿ ಉದಯೋನ್ಮುಖ- ಪ್ರವರ್ಧಮಾನ- ನಿರ್ಗಮನ ಈ ಎಲ್ಲ ಹಂತಗಳು ಇದ್ದೇ ಇರುತ್ತವಲ್ಲ? ದೊಡ್ಡ ಮಟ್ಟದಲ್ಲಿ ಅಲ್ಲದಿದ್ದರೂ ವೈಯಕ್ತಿಕ ಹಂತದಲ್ಲಿ ಅಧಿಕಾರ ಹಸ್ತಾಂತರವೆಂಬ ಸೂಕ್ಷ್ಮಘಟ್ಟ ಎಲ್ಲರಿಗೂ ಎದುರಾಗುವುದು ಇದ್ದದ್ದೇ. ಸಾಮಾನ್ಯರಾದ ನಮ್ಮೆಲ್ಲರ ನಿವೃತ್ತಿ ಗಳಿಗೆಗಳು ಹೇಗಿರುತ್ತವೆ? ಆ ಅವಧಿಗೆ ಸಿದ್ಧತೆಯೊಂದು ಅವಶ್ಯವೆ? ಲೋಕ ಸುತ್ತಿದ, ರಾಜಕೀಯದ ಹೊರತಾಗಿಯೂ ವಿಸ್ತಾರ ಓದಿಗೆ ತೆರೆದುಕೊಂಡಿರುವ, ಜೀವನಾನುಭವಕ್ಕೆ ಬಿದ್ದು ಪಕ್ವವಾಗಿರುವ ಆಡ್ವಾಣಿಯಂಥವರ ಪಾಲಿಗೇ ನಿವೃತ್ತಿ ಎಂಬುದು ಅಷ್ಟು ಸುಲಭಕ್ಕೆ ನಿಭಾಯಿಸಲಾಗದ ಸಂಗತಿಯಾಗುತ್ತಿರಬೇಕಾದರೆ, ನಮ್ಮೆಲ್ಲರ ವೈಯಕ್ತಿಕ ವಿಶ್ವದಲ್ಲಿ ನಿವೃತ್ತಿ ಎಂಬುದು ತಾಕಲಾಟಗಳನ್ನು ಎಬ್ಬಿಸದಿರದೇ?
ಈಗ 30-40ರ ವಯೋವುತಿಯಲ್ಲಿರುವ ಪೀಳಿಗೆ ಯೋಚಿಸಲೇಬೇಕಾದ ಅಂಶ. ಹಿಂದಿನ ಪೀಳಿಗೆಯ ಅನುಭವವನ್ನು ಆಧರಿಸಿ ಅದೇ ಹಾದಿಯಲ್ಲಿ ನಡೆದರಾಯಿತು ಎಂದು ಹಗುರಾಗುವ ಸೌಭಾಗ್ಯ ಇವರದ್ದಲ್ಲ. ಅಪ್ಪನ ಕೃಷಿ, ಅಪ್ಪನ ಉದ್ಯಮ ನೋಡಿಕೊಳ್ಳುವುದಕ್ಕೆ ಮಕ್ಕಳ ತಲೆಮಾರು ಸನ್ನದ್ಧವಾಗುವ ಸನ್ನಿವೇಶಕ್ಕಿಂತ ಬೇರೆಯದೇ ಸ್ವರೂಪ ತಲೆಎತ್ತಿದೆ. ಉದರಪೋಷಣೆಗೆ ಆಧಾರವಾದ ವೃತ್ತಿ ಇಲ್ಲವೇ ವಹಿವಾಟು ಪೀಳಿಗೆಯಿಂದ ಪೀಳಿಗೆಗೆ ಸಾಂಪ್ರದಾಯಿಕವಾಗಿ ಹಸ್ತಾಂತರವಾಗುತ್ತ ಬರುವ ನಮೂನೆ ಈಗ ಪ್ರಮುಖವಾಗಿ ಉಳಿದುಕೊಂಡಿಲ್ಲ. ತಂದೆ-ತಾಯಿ ಉದ್ಯೋಗದಲ್ಲಿರುತ್ತಾರೆ ಹಾಗೂ ನಿವೃತ್ತಿ ಸಮೀಪಿಸುವ ವೇಳೆಗೆಲ್ಲ ತಮ್ಮ ಮಕ್ಕಳು ನೌಕರಿ ಹಿಡಿದಿದ್ದನ್ನು ನೋಡುತ್ತಾರೆ. ಇದು ಈಗಿರುವ ಮತ್ತು ಮುಂದಿನ ದಿನಗಳಲ್ಲಿ ಢಾಳಾಗುವ ಪ್ರಕ್ರಿಯೆ. ಇಲ್ಲಿ ಹಸ್ತಾಂತರಿಸುವುದು ಎಂಬ ತೊಳಲಾಟ ಕಾಣುವುದಿಲ್ಲವಾದರೂ ಆ ಜಾಗದಲ್ಲಿ ಕಾಣಿಸಿಕೊಳ್ಳುವ ಸಂದಿಗ್ಧಗಳು ಹಲವಿವೆ.
ಹಳೆಕಾಲವೇ ಬದುಕಿಗೆ ಚೆನ್ನಾಗಿತ್ತು ಎಂಬ ಅಭಿಪ್ರಾಯ ಹಲವು ಆಯಾಮಗಳಲ್ಲಿ ನಿಜವಿರಬಹುದಾದರೂ ಸರಾಸರಿ ಜೀವಿತಾವಧಿ ಎಂಬುದು ಈಗಿಗಿಂತ ಕಡಿಮೆಯಾಗಿತ್ತು ಎಂಬುದು ಅಷ್ಟೇ ಸತ್ಯ. ಐವತ್ತು ವರ್ಷಗಳ ಹಿಂದೆ ನಿವೃತ್ತಿ ವಯಸ್ಸು 55 ಇದ್ದಾಗ ಲೈಫ್ ಎಕ್ಸ್ಪೆಕ್ಟೆನ್ಸಿ ಇದ್ದಿದ್ದು 60 ವರ್ಷ. ಐದು ವರ್ಷಕ್ಕಿಂತ ಹೆಚ್ಚು ಪಿಂಚಣಿ ತೆಗೆದುಕೊಂಡವರ ಸಂಖ್ಯೆ ಕಡಿಮೆ. ಸೇವಾವಧಿಯಲ್ಲೇ ತೀರಿಕೊಂಡವರ ಸಂಖ್ಯೆಯೂ ಹೆಚ್ಚೆ. ಅರವತ್ತು ವರ್ಷಕ್ಕೆ ನಿವೃತ್ತಿ ನಿಗದಿಯಾಗಿರುವ ಈಗಿನ ಲೈಫ್ ಎಕ್ಸ್ಪೆಕ್ಟೆನ್ಸಿ 75 ವರ್ಷ. ಅಂದರೆ ಬೆಲೆ ಏರಿಕೆಯ ಈ ಪರ್ವಕಾಲದಲ್ಲಿ ಆತ ಕೆಲಸವಿಲ್ಲದ ಹದಿನೈದು ವರ್ಷಗಳಿಗೆ ಕೂಡಿಡಬೇಕು. ಸಾಮಾನ್ಯನೊಬ್ಬ ಪಿತಾಮಹನಾಗುತ್ತಲೇ ಬೇಡವೆಂದರೂ ನಿರ್ಮಾಣವಾಗುವ ಶರಶಯ್ಯೆಯ ಮೊದಲ ಮೊನಚು ಬಾಣವಿದು.
ಈಗಿನವರಿಗೆ ಮಕ್ಕಳಿಗೆ ಅಧಿಕಾರ ಬಿಟ್ಟುಕೊಡಬೇಕಲ್ಲ ಎಂಬ ಸಂಕಟವಾದರೆ ಮುಂದಿನವರಿಗೆ ಆ ಸಮಯದಲ್ಲಿ ಮಕ್ಕಳು ಹತ್ತಿರದಲ್ಲಿರುವುದೇ ಅನುಮಾನ. ಈಗ ಪ್ರಿ ನರ್ಸರಿಯಿಂದಲೇ ಆರಂಭವಾಗಿ ವೃತ್ತಿಪರ ಕೋರ್ಸುಗಳವರೆಗೂ ಅಪ್ಪ-ಅಮ್ಮನ ಕಣ್ರೆಪ್ಪೆ ಎದುರು ಕುಳಿತವರಂತೆ ಅತ್ಯಂತ ರಕ್ಷಣಾತ್ಮಕವಾಗಿ ಬೆಳೆಯುತ್ತಿರುವ ಮಕ್ಕಳು ಕೆಲಸವೊಂದು ಸಿಗುತ್ತಲೇ ಅದು ನೀಡುವ ಉನ್ಮಾದಿತ ಸ್ವಾತಂತ್ರ್ಯವನ್ನು ಅರಸಿಕೊಂಡು ತಮ್ಮದೇ ಜಗತ್ತು ನಿರ್ಮಿಸಿಕೊಳ್ಳಲಿದ್ದಾರೆ. 'ಇಷ್ಟೆಲ್ಲ ಮಾಡಿದ ನಮಗೆ ಸಿಕ್ಕಿದ್ದು ಇದೇನಾ' ಎಂಬ ಸ್ವಗತದ ಬಾಣ ಮನಸ್ಸನ್ನು ಕ್ರೂರವಾಗಿಯೇ ಇರಿಯಲಿದೆ. ಹಿಂದೆಲ್ಲ ಕೂಡು ಕುಟುಂಬಗಳಿದ್ದವು. ನಿವೃತ್ತಿ ಹೊಂದಿದವನಿಗೂ ಮನೆಯಲ್ಲೊಂದು ಜವಾಬ್ದಾರಿ ನಿರ್ವಹಣೆ ಕಾದಿರುತ್ತಿತ್ತು. ಈಗ ಮಗ-ಸೊಸೆ/ ಮಗಳು-ಅಳಿಯ ಜತೆ ವಾಸಿಸುವುದೂ ಯಾರಿಗೂ ಸಮ್ಮತವಲ್ಲ. ಹೀಗಾಗಿ ಸಂಧ್ಯಾಕಾಲದಲ್ಲಿ ಉಳಿದುಕೊಳ್ಳುವವರು ನಾನು- ಅವಳು ಹಾಗೂ ಅವಳು-ನಾನು.
ಕೆಲಸ ಮಾಡುವ ಸ್ಥಳದಲ್ಲಿ ದೊರೆಯುತ್ತಿದ್ದ ಗೌರವ ನಿವೃತ್ತಿಯೊಂದಿಗೆ ಸಮಾಪ್ತವಾಗುತ್ತಾದ್ದರಿಂದ ಕುಟುಂಬದ ನೆಲೆಯಲ್ಲಿ ಅದಾಗಲೇ ಎದುರಿಸುತ್ತಿರುವ 'ಐಡೆಂಟಿಟಿ ಕ್ರೈಸಿಸ್' ಅನ್ನು ಇನ್ನಷ್ಟು ಕುದಿಸಿಟ್ಟಂತಾಗುತ್ತದೆ. ಕೆಲಸದ ಸ್ಥಳದ 'ಹಲೋ ಸರ್', ನಮಸ್ಕಾರಗಳು, ಶುಭಾಶಯಗಳು ನಿಲ್ಲುತ್ತವೆ. ಮಕ್ಕಳ ಜತೆಗೇ ಬದುಕುತ್ತಿದ್ದಾನೆ ಎಂದುಕೊಂಡರೂ ನಿವೃತ್ತಿ ಹೊಂದಿದವನಿಗೆ ಆ ಮನೆಯಲ್ಲಿ ಮೊದಲಿನ ಪ್ರಾಮುಖ್ಯವಿರದು. 'ಆಫೀಸಿಗೆ ಹೋಗುವವರು ಮೊದಲು ತಿಂಡಿ ತಿನ್ನಲಿ. ನೀವು ಹೇಗಂದ್ರೂ ಮನೇಲೆ ಇರ್ತೀರಲ್ಲ' ಅಂತ ಹೆಂಡತಿಯೇ ಹೇಳುತ್ತಾಳೆ. ಹಾಗಾದರೆ ತನ್ನ ಜೀವನ ಸಮರಕ್ಕೆ ಬೆಲೆಯೇ ಇಲ್ಲವಾ ಎಂದುಕೊಳ್ಳುತ್ತಿರುವಾಗಲೇ, ನಮ್ಮ ಹೋರಾಟಗಳ ಮುಂದೆ ನಿಮ್ಮದೇನು ಎಂಬಂತೆ ಅವರದ್ದೇ ಜಗತ್ತಿನಲ್ಲಿ ವ್ಯಸ್ತವಾಗಿರುವ ಮಕ್ಕಳು ವ್ಯಾಕುಲತೆ ಹೆಚ್ಚಿಸುತ್ತಾರೆ. ಬದುಕು ಮುಕ್ತಾಯವಾಗುವ ಮೊದಲೇ ಜಗತ್ತಿಗೆ ಅಪ್ರಸ್ತುತವಾಗಿಬಿಟ್ಟಿರುವ ಯಾತನೆ.
ಇವೆಲ್ಲವುಗಳಿಂದ ನಿರಾಳರಾಗುವುದು ಹೇಗೆ ಎಂಬುದಕ್ಕೆ ರೆಡಿಮೇಡ್ ಉತ್ತರವೇನೂ ಇಲ್ಲ. ಓದು, ಸಂಗೀತ, ನಿಸರ್ಗವನ್ನು ಆಸ್ವಾದಿಸುವುದು ಇಂಥ ಹವ್ಯಾಸಗಳೇ ಆಗ ಬಹುದೊಡ್ಡ ಸಂಪತ್ತಾಗುತ್ತವೆ ಎನ್ನುತ್ತಾರೆ ತಿಳಿದವರು. ಆದರೆ ಅಭಿರುಚಿಗಳನ್ನೆಲ್ಲ ನಿವೃತ್ತಿ ನಂತರ ರೂಪಿಸಿಕೊಳ್ಳುವುದು ಆಗದ ಮಾತು. ಪುರಸೊತ್ತಿಲ್ಲದ ಕಾಲದಲ್ಲೇ ಅದರ ತಯಾರಿಯಾಗಬೇಕು. ಎಲ್ಲರ ಕಾಲವೂ ಹೀಗೇ ಸವೆಯುತ್ತದೆ ಎಂಬ ಅರಿವೊಂದು ಎಲ್ಲ ಹೃದಯಗಳಲ್ಲೂ ಇದ್ದರೆ ಕೊನೆಪಕ್ಷ ಮಾನಸಿಕವಾಗಿ ಸಿದ್ಧರಾಗಿದ್ದು ಶರಶಯ್ಯೆಯಲ್ಲಿ ಕೊಸರಾಡದೆ ಮಲಗಬಹುದೇನೋ?
- ಚೈತನ್ಯ ಹೆಗಡೆ
cchegde@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

