ಅಂಕಣಗಳು

ಗೆಲುವಿನ ಸೋಪಾನಕ್ಕೆ ಬ್ರಾನ್‌ಸನ್ ದಿಕ್ಸೂಚಿ

ಬಿಸಿನೆಸ್‌ನ ವಿಷಯಕ್ಕೆ ಬಂದರೆ, ಇವತ್ತಿಗೂ ಎಲ್ಲರೂ ಕೇಳುವ ಪ್ರಶ್ನೆ ಇದೊಂದೇ...

Published On :

ಬ್ರಾನ್ಸನ್ ಬಗ್ಗೆ ಎಷ್ಟೇ ಬರೆದರೂ ಹಳತೆನ್ನಿಸುವುದಿಲ್ಲ. ಏಕೆಂದರೆ ಆತ ಯಾವಾಗಲೂ ಹೊಸ ವಿಚಾರಗಳನ್ನೇ ಹರವಿಡುತ್ತಾನೆ. ಹಾಗೆಂದೇ ರಿಚರ್ಡ್ ಬ್ರಾನ್ಸನ್ ಇತ್ತೀಚೆಗೆ ಬರೆದ ಲೇಖನವೊಂದು ಇಲ್ಲಿದೆ. ಸಾಧನೆಯ ಹಾದಿಯಲ್ಲಿ ವಿರಾಮ- ತೃಪ್ತಿಗಳಿಗೂ ಪ್ರಾಮುಖ್ಯವಿದೆ. ಆ ತಂಪನ್ನು ಬಿಚ್ಚಿಡುವ ಧ್ವನಿಯೂ ಜತೆಯಾಗಿದೆ.

ಬಿಸಿನೆಸ್‌ನ ವಿಷಯಕ್ಕೆ ಬಂದರೆ, ಇವತ್ತಿಗೂ ಎಲ್ಲರೂ ಕೇಳುವ ಪ್ರಶ್ನೆ ಇದೊಂದೇ: ಯಶಸ್ಸಿನ ಕೀಲಿ ಕೈ ಎಲ್ಲಿದೆ? ಒಂದು ವ್ಯವಹಾರದಲ್ಲಿ ಸಕ್ಸಸ್ ಆಗಬೇಕಾದರೆ ಅನುಸರಿಸಲೇಬೇಕಾದ ಮಾರ್ಗದರ್ಶಿ ಸೂತ್ರಗಳು ಯಾವುವು? ಕೇವಲ ಶ್ರದ್ಧೆ ಹಾಗೂ ನಿರಂತರ ಶ್ರಮದಿಂದಲೇ ಯಶಸ್ಸು ಸಿಕ್ಕಿ ಬಿಡುತ್ತಾ? ಅಥವಾ ಯಶಸ್ಸು ಸಿಗಬೇಕೆಂದರೆ ದೈವಬಲ ಹಾಗೂ ಅದೃಷ್ಟದ ಬಲವೂ ಇರಬೇಕಾ?
ಇಂಥ ಪ್ರಶ್ನೆಗಳಿಗೆ ಬಹುಶಃ ಯಾರೊಬ್ಬರೂ 'ಇದಮಿತ್ಥಂ' ಎಂದು ಉತ್ತರ ಹೇಳಲು ಸಾಧ್ಯವಿಲ್ಲ ಅನಿಸುತ್ತದೆ. ನಮ್ಮ-ನಿಮ್ಮ ಮಾತುಗಳು, ಅಂದಾಜುಗಳು ಅತ್ಲಾಗಿರಲಿ, ಯಶಸ್ಸಿನ ಕೀಲಿ ಕೈ ಎಲ್ಲಿದೆ ಎಂಬ ಪ್ರಶ್ನೆಗೆ, ತನ್ನ ಪ್ರತಿಯೊಂದು ವ್ಯವಹಾರದಲ್ಲೂ ಯಶಸ್ಸು ಕಂಡ ರಿಚರ್ಡ್ ಬ್ರಾನ್‌ಸನ್ ಏನು ಹೇಳಿರಬಹುದು ಎಂದು ಹುಡುಕಿದಾಗ, ಅಪರೂಪದ, ಆಪ್ತ ಸಲಹೆಗಳು ಕಂಡವು. ಅವು ನಿಮಗೂ ಇಷ್ಟವಾಗಬಹುದು ಎಂಬ ಕಾರಣಕ್ಕೆ ಹೆಕ್ಕಿ ಕೊಡುತ್ತಿದ್ದೇನೆ. ಓದಿಕೊಳ್ಳಿ.
----
'ಯಶಸ್ಸಿನ ಮೂಲ ಯಾವುದು? ವ್ಯವಹಾರದಲ್ಲಿ ಯಶಸ್ಸು ಕಾಣಬೇಕಾದರೆ ಮಾಡಬೇಕಿರುವ ಅತಿ ಮುಖ್ಯವಾದ ಕೆಲಸ ಯಾವುದು ಎಂಬುದು ನನಗೆ ಮೇಲಿಂದ ಮೇಲೆ ಎದುರಾಗುವ ಪ್ರಶ್ನೆ. ನನ್ನ ವಿವರಣೆಗಳನ್ನು ಈಗಾಗಲೇ ವಿವರಿಸಿದ್ದಾಗಿದೆ. ಹಾಗಾಗಿ ಅದೀಗ ಅಪ್ರಸ್ತುತ. ಈಗ ತಾನೆ ಯಶಸ್ಸಿನ ಸವಿ ಕಾಣುತ್ತಿರುವ ಯುವ ಉದ್ಯಮಿಗಳು ತಮ್ಮ ಯಶೋಗಾಥೆಗೆ ಇರುವ ಕಾರಣವನ್ನು ಹೇಗೆ ವಿವರಿಸಬಹುದೆಂಬುದನ್ನು ತಿಳಿಯುವ ಆಸೆಯಾಯಿತು. ನಾನು ತಡ ಮಾಡಲಿಲ್ಲ. ಇಂಗ್ಲೆಂಡಿನಲ್ಲಿ ತುಂಬ ವೇಗವಾಗಿ ಬೆಳೆಯುತ್ತಿರುವ ನೂರು ಕಂಪನಿಗಳ ಪಟ್ಟಿ ತಯಾರಿಸಿ, ಅವುಗಳ ಮುಖ್ಯಸ್ಥರಿಗೆ ಔತಣಕೂಟ ಹಮ್ಮಿಕೊಂಡೆ. ಈ ಕಾರ್ಯಕ್ರಮಕ್ಕೆ ನಮ್ಮ ವರ್ಜಿನ್ ಕಂಪನಿಯ ಪ್ರಮುಖ ಅಧಿಕಾರಿಗಳನ್ನೂ ಆಹ್ವಾನಿಸಿದೆ. ಅವತ್ತು ನಗು, ಕೇಕೆ, ಅಭಿನಂದನೆಗಳೊಂದಿಗೇ ಕಾರ್ಯಕ್ರಮ ಶುರುವಾಯಿತು. ಮೊದಲಿಗೆ ತನ್ನ ಗೆಲುವಿನ ಹಿಂದಿರುವ ಗುಟ್ಟನ್ನು ತೆರೆದಿಟ್ಟಾತ ಮಕ್ಕಳ ಆಹಾರ ತಯಾರಿಕೆಯಲ್ಲಿ ದೊಡ್ಡ ಯಶಸ್ಸು ಕಂಡ 'ಎಲ್ಲಾಸ್ ಕಿಚನ್‌'ನ ಮಾಲೀಕ ಪೌಲ್ ಲಿಂಡ್ಲೆ. ಆತ ತುಂಬ ಸ್ಪಷ್ಟವಾಗಿ ಹೇಳಿದ.
ನಾವು  ತಯಾರಿಸುವ ಉತ್ಪನ್ನದ ಬೆಲೆ ಎಲ್ಲರಿಗೂ ಕೈಗೆಟಕುವಂತಿರಬೇಕು. ಯಾವುದೇ ಉತ್ಪನ್ನಕ್ಕೆ ಕಡಿಮೆ ಬೆಲೆ ಇದೆ ಎಂದಾದರೆ, ಅದು ಯಶಸ್ಸಿನ ಮೊದಲ ಮೆಟ್ಟಿಲು ಎಂದೇ ಅರ್ಥ. ನಾವು ತಯಾರಿಸುವ ಎಲ್ಲಾಸ್ ಕಿಚನ್‌ನ ಆಹಾರ ಪದಾರ್ಥಗಳನ್ನು ಕುರಿತು ಹೇಳುವುದಾದರೆ: ಇಂಥದೊಂದು ಸಾಹಸಕ್ಕೆ ನಾನು ಮುಂದಾದದ್ದು ನನ್ನ ಮಗಳ ಕಾರಣಕ್ಕೆ. ಏಕೆಂದರೆ ಮಗಳಿಗೆಂದು ನಾವು ಹೆಚ್ಚು ಹಣ ನೀಡಿ ತಿಂಡಿ ಪದಾರ್ಥಗಳನ್ನು ತರುತ್ತಿದ್ದೆವು. ಆದರೆ ಮಗಳು ಯಾವುದನ್ನೂ ಇಷ್ಟಪಡುತ್ತಿರಲಿಲ್ಲ. ಮಕ್ಕಳಿಗೆ ಇಷ್ಟವಾಗಲಿಲ್ಲ ಅಂದ ಮೇಲೆ, ಆ ತಿಂಡಿಯಲ್ಲಿ ಅಪರೂಪದ ಟೇಸ್ಟ್ ಆಗಲಿ, ಪೌಷ್ಠಿಕ ಅಂಶವಾಗಲಿ ಇಲ್ಲ ಎಂದೇ ಅರ್ಥ. ಎಲ್ಲ ಮಕ್ಕಳಿಗೂ ಇಷ್ಟವಾಗುವ, ಅವರ ಆರೋಗ್ಯಕ್ಕೂ ಸಹಕಾರಿಯಾಗುವಂತೆ ಸಾಧ್ಯವಾದಷ್ಟೂ ಕಡಿಮೆ ಬೆಲೆಯಲ್ಲಿ ನಾನೇ ತಯಾರಿಸಿ ಮಾರಬಾರದೇಕೆ ಅನ್ನಿಸಿತು. ಮರುದಿನದಿಂದಲೇ ಈ ಸಂಬಂಧವಾಗಿ ಉದ್ಯಮಿಗಳು ಹಾಗೂ ಆಹಾರ ತಜ್ಞರ ಸಲಹೆ ಪಡೆದೆ. ತಿಂಡಿಗೆ ಯಾವ ಬಣ್ಣ ಹಾಕಿದರೆ ಅದು ಮಕ್ಕಳನ್ನು ಬೇಗ ಆಕರ್ಷಿಸುತ್ತದೆ, ಯಾವ್ಯಾವ ವಸ್ತುಗಳ ಬಳಕೆಯಿಂದ ಮಕ್ಕಳ ಆರೋಗ್ಯಕ್ಕೆ ಒಳಿತಾಗುತ್ತದೆ ಎಂದೆಲ್ಲ ವಿಚಾರಿಸಿದೆ. ನಂತರ, ತಜ್ಞರ ಸಲಹೆಯಂತೆಯೇ ಆಹಾರ ಪದಾರ್ಥಗಳನ್ನು ಉತ್ಪಾದಿಸಿದೆ. ರಾಸಾಯನಿಕಗಳ ಬಳಕೆ ನಿಷೇಧಿಸಿದೆ. ಲಾಭದ ಬಗ್ಗೆ ಯೋಚಿಸದೆ, ನಷ್ಟವಾಗದಿದ್ದರೆ ಸಾಕು ಎಂದುಕೊಂಡು, ಕಡಿಮೆ ಬೆಲೆ ಇಟ್ಟು ಮಾರುಕಟ್ಟೆಗೆ ಬಿಟ್ಟೆ. ಪರಿಣಾಮ ಏನಾಯಿತೆಂದರೆ, ಎಲ್ಲಾ ಮಕ್ಕಳೂ ಎಲ್ಲಾಸ್ ಕಿಚನ್‌ನ ತಿನಿಸುಗಳಿಗೆ ಮುಗಿಬಿದ್ದವು. ಹೀಗಾಗಿ ಮಾರುಕಟ್ಟೆ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಆಹಾರ ಪದಾರ್ಥದ ಉತ್ಪಾದನಾ ರಂಗದ ನಂಬರ್ ಒನ್ ಪಟ್ಟ ಅಲಂಕರಿಸಲು ನಮಗೆ ಸಾಧ್ಯವಾಯಿತು.  
----
ಪೌಲ್ ಲಿಂಡ್ಲೆಯ ಮಾತುಗಳನ್ನು ಕೇಳಿದವರೆಲ್ಲ ಖುಷಿಪಟ್ಟರು. ಅದರ ಬೆನ್ನಿಗೇ -ಒಂದು ವೇಳೆ ಮೊದಲ ಪ್ರಯತ್ನದಲ್ಲೇ ಪ್ರಚಂಡ ಸೋಲು ಕೈ ಹಿಡಿದರೆ ಏನು ಮಾಡಬೇಕು ಎಂಬ ಪ್ರಶ್ನೆಯೂ ಕೇಳಿ ಬಂತು. ನಾನು ತಕ್ಷಣ ಹೇಳಿದೆ; ಮೊದಲ ಸೋಲಿಂದ ಕಂಗೆಡಬಾರದು. ಸೋಲು ಗೆಲುವಿನ ಸೋಪಾನ ಅಂದುಕೊಳ್ಳಬೇಕು. ಈ ಮಾತಿಗೆ ಉದಾಹರಣೆಯಾಗಿ ಡಿಲಾನ್ ಜಾನ್ಸನ್‌ನ ಕಥೆ ಹೇಳಿದೆ: ಈ ಜಾನ್ಸನ್, ಅಡುಗೆಯವರಾಗಿ ದೊಡ್ಡ ಹೆಸರು ಮಾಡಿದ್ದಾತ. ಮುಂದೆ ತಾನೇ ಒಂದು ಹೋಟೆಲ್ ಆರಂಭಿಸಲು ಮುಂದಾದ. ತನ್ನ ಕೆಲಸದ ಬಗ್ಗೆ ಮಾತ್ರ ಆತನಿಗೆ ತಿಳಿದಿತ್ತು. ಆದರೆ ವ್ಯವಹಾರದ ಬಗ್ಗೆ ಅರಿವಿರಲಿಲ್ಲ. ಪರಿಣಾಮವಾಗಿ ಲಾಸ್ ಆಗಿಬಿಡ್ತು. ಇದರಿಂದ ಜಾನ್ಸನ್ ಧೃತಿಗೆಡಲಿಲ್ಲ. ಎಲ್ಲಿ ತಪ್ಪಾಗಿತ್ತು ಎಂದು ತಿಳಿದುಕೊಂಡ. ಹೋಟೆಲ್ ಉದ್ಯಮ ಆರಂಭಿಸಿದರೆ ಹೆಚ್ಚಿನ ಬಂಡವಾಳ ಬೇಕಾಗುತ್ತೆ ಅನಿಸಿದ್ದರಿಂದ ಅದರತ್ತ ತಿರುಗಿ ಕೂಡ ನೋಡಲಿಲ್ಲ. ಬದಲಿಗೆ ಕಡಿಮೆ ಬಂಡವಾಳದಲ್ಲಿ ಮುಗಿಯುವ 'ಸಾಸ್‌' ತಯಾರಿಕೆಗೆ ಮುಂದಾದ. ಈ ಪ್ರಯತ್ನದಲ್ಲಿ ಯಶಸ್ಸು ಕಾಣಬೇಕಿದ್ದರೆ, ಈಗಾಗಲೇ ಮಾರುಕಟ್ಟೆಯಲ್ಲಿರುವ ಸಾಸ್‌ಗಳಿಗಿಂತ ಭಿನ್ನವಾದ ರುಚಿ ಹೊಸ ಉತ್ಪನ್ನಕ್ಕೆ ಇರಬೇಕಿತ್ತು. ಜಾನ್ಸನ್, ತನ್ನ ಪಾಠಶಾಲೆಯ ಅನುಭವವನ್ನೆಲ್ಲ ಒತ್ತೆಯಿಟ್ಟು ಹೊಸ ಬಗೆಯ ಸಾಸ್ ತಯಾರಿಸಿದ. ಅವನ ಶ್ರಮ ವ್ಯರ್ಥವಾಗಲಿಲ್ಲ. ಆತನ ಉತ್ಪಾದನೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಬಂತು. ಇದರರ್ಥ ಇಷ್ಟೆ: ಕಡಿಮೆ ಬಂಡವಾಳ ಬಯಸುವ ವ್ಯವಹಾರಕ್ಕೆ ಕೈ ಹಾಕುವುದು, ತಯಾರಿಕೆಯ ಉತ್ಪನ್ನದಲ್ಲಿ ವಿಶೇಷ ಗುಣಮಟ್ಟ ಇರುವಂತೆ ನೋಡಿಕೊಳ್ಳುವುದು, ಯಶಸ್ಸಿಗೆ ಹಂಬಲಿಸುವವರು ಅನುಸರಿಸಬೇಕಾದ ಪ್ರಮುಖ ಸೂತ್ರ.
ಕೆಲವರಿರುತ್ತಾರೆ. ಅವರೆಲ್ಲ ತುಂಬ ಉತ್ಸಾಹದಿಂದಲೇ ಉದ್ಯಮ ಆರಂಭಿಸುತ್ತಾರೆ. ಆರಂಭದಲ್ಲಿ ಯಶಸ್ಸನ್ನೂ ಕಾಣುತ್ತಾರೆ. ಅಷ್ಟಕ್ಕೆ ಅವರಿಗೆ ಮೈ ಮರೆವು ಬಂದು ಬಿಡುತ್ತದೆ. ಈಗಾಗಲೇ ಮೊದಲ ಹಂತದ ಯಶಸ್ಸು ದಕ್ಕಿರುವುದರಿಂದ ನಿಮ್ಮ ಕಂಪನಿಯ ಉತ್ಪನ್ನದ ಬಗ್ಗೆ ಎಲ್ಲರಿಗೂ ತಿಳಿದಿದೆ. ಹಾಗಾಗಿ ಮುಂದೆಯೂ ಅವರು ನಮ್ಮ ಉತ್ಪನ್ನಗಳಿಗೇ ಅಂಟಿಕೊಂಡಿರುತ್ತಾರೆ ಎಂದು ಭಾವಿಸುತ್ತಾರೆ. ಆದರೆ, ವಾಸ್ತವ ಹಾಗಿರುವುದಿಲ್ಲ. ಯಾವುದೇ ಉತ್ಪಾದನೆಯ ವಿಷಯಕ್ಕೆ ಬಂದರೂ, ಎದುರಾಳಿ ಕಂಪನಿಗಳು ಹತ್ತಾರು ಇರುತ್ತವೆ. ಎಲ್ಲವೂ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಲು ಪ್ರಯತ್ನಿಸುತ್ತಲೇ ಇರುತ್ತವೆ. ಹಾಗಾಗಿ, ಯಶಸ್ವೀ ಉದ್ಯಮಿ ಅನ್ನಿಸಿಕೊಳ್ಳಬೇಕಾದವನು, ಉಳಿದೆಲ್ಲರಿಗಿಂತ ಎರಡು ಗಂಟೆ ಮೊದಲೇ ಕೆಲಸ ಆರಂಭಿಸಬೇಕು ಹಾಗೂ ಎಂಥ ಸಂದರ್ಭದಲ್ಲೂ ಮೈಮರೆಯಬಾರದು...
-----
ಎಲ ಎಲಾ, ನಮಗೇ ಗೊತ್ತಿರುವ ಸಂಗತಿಗಳೇ ತಾನೆ ಎಂದು ನೀವು ಪ್ರಶ್ನಿಸಬಹುದು. ಎಲ್ಲ ಗೊತ್ತಿದ್ದರೂ ನಾವು ಅದರ ಪ್ರಯೋಗಕ್ಕೆ ಮುಂದಾಗಲಿಲ್ಲ. ಆದರೆ, ಬ್ರಾನ್ಸನ್ ಪ್ರತಿ ಬಾರಿಯೂ ತನ್ನನ್ನೇ ಪ್ರಯೋಗಕ್ಕೆ ಒಡ್ಡಿಕೊಂಡು ಗೆದ್ದ. ನಮಗೂ, ಅವನಿಗೂ ಇರುವ ವ್ಯತ್ಯಾಸವೇ ಇದು. ಏನಂತೀರಿ?
ಹೆಚ್ಚು ಹಣವಿರದೆ ಶ್ರೀಮಂತನಾಗೋದು!
ಸ್ಪರ್ಧಾತ್ಮಕತೆ, ಉತ್ಸಾಹ ಕಾಯ್ದುಕೊಂಡಿರುವುದು, ಯಶಸ್ಸಿನತ್ತ ಓಟ ಇವೆಲ್ಲವೂ ಅಗತ್ಯವೇ. ಆ ಬಗ್ಗೆ ಸ್ಫೂರ್ತಿಗಾಗಿ ಹುಡುಕಾಡುವುದರಲ್ಲಿ ಹಿಂಜರಿಕೆ ಬೇಕಿಲ್ಲ. ಆದರೂ ಇದು ಒಂದೇ ಸಮನೇ ದೌಡಿಗೆ ಬಿದ್ದಿರುವ ಜಮಾನಾ. ಇಲ್ಲಿ ಎಷ್ಟೇ ಅಪ್‌ಡೇಟ್ ಎನಿಸಿಕೊಂಡರೂ, ಯಾವ ಪ್ರಮಾಣದ ಪ್ರಗತಿ ಸಾಧಿಸಿದರೂ ಅದು ಕೆಲವೊಮ್ಮೆ ಅಲ್ಪ ಎಂದೆನಿಸುತ್ತದೆ. ಈ ಅತೃಪ್ತಿಯೇ ಇನ್ನೂ ಹೆಚ್ಚಿನ ಸಾಧನೆಗೆ ಮೂಲ ಎಂಬುದು ಹೌದಾದರೂ ಅದು ನಮ್ಮನ್ನು ಹತಾಶೆಯ ಮಡುವಿಗೆ ತಳ್ಳಿಬಿಡಬಾರದಲ್ಲ? ಹೀಗಾಗಿ ಆಗಾಗ ಯಥಾಸ್ಥಿತಿಯ ಕುರಿತೂ ಖುಷಿ ಪಡುತ್ತ ಇರಬೇಕಾಗುತ್ತದೆ.
ಈ ನಿಟ್ಟಿನಲ್ಲಿ ಇರುವುದರ ಬಗ್ಗೆ ಸಂತೃಪ್ತಿಭಾವ ತಾಳುವ ಬಗ್ಗೆ ಸಲಹೆ ನೀಡುವ ಲೇಖನವೊಂದು ಆಸಕ್ತಿದಾಯಕ ಎನಿಸಿತು. ಡೇವಿಡ್ ಎಂಬುವವರು 'ರ್ಯಾಪ್ಟಿಟ್ಯೂಡ್‌' ಎಂಬ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದ ಲೇಖನದ ಶೀರ್ಷಿಕೆ, 'ಹೌ ಟು ಗೆಟ್ ರಿಚ್ ವಿದೌಟ್ ಮೇಕಿಂಗ್ ಮೋರ್ ಮನಿ'. ಹೆಚ್ಚು ಹಣ ಮಾಡದೆಯೂ ಶ್ರೀಮಂತನಾಗುವುದು ಹೇಗೆ? ದೀರ್ಘ ಲೇಖನದ ಕೆಲ ಭಾಗವನ್ನಷ್ಟೇ ಇಲ್ಲಿ ನೀಡುವುದು ಔಚಿತ್ಯವೆನಿಸುತ್ತಿದೆ. ಆತ ಬರೆಯುತ್ತಾನೆ-
ಹತ್ತೇ ಕ್ರಿಸ್‌ಮಸ್‌ಗಳು ಉರುಳುತ್ತಿದ್ದಂತೆ ಹೊಸ ಆಟಿಕೆಗಾಗಿ ಹಪಾಹಪಿಸುವ ನನ್ನ ಉತ್ಸಾಹ ಕಳೆಗುಂದುತ್ತಾ ಬಂತು. ಚಾಕೊಲೇಟ್ ಸೇರಿದಂತೆ ಎಲ್ಲವೂ ಸಪ್ಪೆ ಎನ್ನಿಸತೊಡಗಿತು. ಒಂದು ಹಂತದಲ್ಲಿ ನನ್ನ ಬಳಿ ಹೆಚ್ಚಿನ ಅಗತ್ಯಗಳೆಲ್ಲವೂ ಇದ್ದಾಗಲೂ ಖಾಲಿತನ ಕಾಡಿತು. ಆಲೋಚನೆಗೆ ಬಿದ್ದಾಗ ಕೊನೆಗೆ ಸ್ಫುರಿಸಿತು: ನಾನು ಯಾವತ್ತೂ ಶ್ರೀಮಂತನಾಗಿದ್ದೆ. ಆದರೆ ಅದನ್ನು ಅರಿತುಕೊಳ್ಳಲೇ ಇಲ್ಲ ಅಂತ!
ಬಹುಶಃ ನಿಮ್ಮ ವಿಷಯದಲ್ಲೂ ಹೀಗೆಯೆ ಇದ್ದಿರಬಹುದು. ಜಗತ್ತಿನ ಸರಾಸರಿ ಆದಾಯ ಪ್ರತಿವರ್ಷಕ್ಕೆ 7 ಸಾವಿರ ಡಾಲರ್‌ಗಳು ಅನ್ನೋದೊಂದು ಅಂದಾಜು. ವಾಸ್ತವದಲ್ಲಿ ಬಹುಮತದ ಮಂದಿ ಇದಕ್ಕಿಂತ ಕಡಿಮೆ ಆದಾಯ ಹೊಂದಿರುವವರು. ಜಗತ್ತಿನ ಶೇ. 20ರಷ್ಟು ಜನಸಂಖ್ಯೆ ಮಾತ್ರವೇ ಉನ್ನತ ಆದಾಯವಿರುವ ದೇಶಗಳಲ್ಲಿ ಬದುಕುತ್ತದೆ. ಆದರೆ ಸಂಪತ್ತು ಎಂಬುದು ಹಣದ ಮುಖಾಂತರವಷ್ಟೇ ಅಭಿವ್ಯಕ್ತಗೊಳ್ಳುವುದಿಲ್ಲ. ಅಂದರೆ ನೀವು ಎಷ್ಟು ವಸ್ತುಗಳನ್ನು ಕೊಳ್ಳಬಲ್ಲಿರಿ ಎಂಬುದರ ಆಧಾರದಲ್ಲಿ ಮಾತ್ರವೇ ಸಿರಿವಂತಿಕೆ ನಿರ್ಧಾರವಾಗುವುದಿಲ್ಲ. ನಿಮ್ಮ ಅಧಿಕಾರ ಮತ್ತು ಹಕ್ಕುಗಳನ್ನು ಅನುಭವಿಸುವ ಮುಕ್ತತೆಯನ್ನೂ ಸಿರಿವಂತಿಕೆ ಎಂಬ ಚೌಕಟ್ಟಿನಲ್ಲೇ ಇರಿಸಿ ಅಳೆಯಬೇಕಾಗುತ್ತದೆ. ಸಾಮರ್ಥ್ಯ, ಜ್ಞಾನ ಎಲ್ಲವೂ ಸಿರಿವಂತಿಕೆ ಮಟ್ಟವನ್ನು ಹೆಚ್ಚಿಸುವ ಅಂಶಗಳಾಗುತ್ತವೆ.
ನೀವು ದಕ್ಷಿಣ ಕೊರಿಯಾದಲ್ಲಿ ಇದ್ದೀರಿ ಎನ್ನುವುದಾದರೆ ಈ ಬರಹವನ್ನು ಓದುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಸೆನ್ಸಾರ್ ಇದೆ. ನೀವು ಈ ಬರಹವನ್ನು ಓದುತ್ತಿದ್ದೀರಿ, ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಮುಕ್ತರಾಗಿದ್ದೀರಿ, ನಿಮ್ಮಿಚ್ಛೆಯಂತೆ ಪ್ರಯಾಣ ಬೆಳೆಸುತ್ತೀರಿ, ನಿಮ್ಮ ನಂಬಿಕೆಯನ್ನು ಆತಂಕವಿಲ್ಲದೇ ಆಚರಿಸಬಲ್ಲಿರಿ, ನಿಮ್ಮಿಷ್ಟದ ಕಲಾಪ್ರಕಾರಗಳನ್ನು ಆಸ್ವಾದಿಸಬಲ್ಲಿರಿ ಎನ್ನುವುದಾದರೆ ನೀವು ಅದ್ಭುತ ಹಂತದಲ್ಲಿದ್ದೀರಿ.
ಇದುವೇ ಸಿರಿವಂತಿಕೆ. ಈ ಭಾಗ್ಯ ಮನುಕುಲದ ಇತಿಹಾಸದಲ್ಲಿ ಬಂದುಹೋದ ಎಷ್ಟೋ ಮಂದಿಗೆ ಲಭಿಸಿರಲಿಕ್ಕಿಲ್ಲ. ನಿಜ, ನಿಮ್ಮ ಈ ಹಕ್ಕುಗಳ ಆಸ್ವಾದನೆಯನ್ನು ಗಮನಿಸಿ ನಿಮ್ಮನ್ನು ಶ್ರೀಮಂತ ಎಂದು ಯಾರೂ ಕರೆಯದೇ ಇದ್ದಿರಬಹುದು. ಆದರೆ ಕರೆಯುವುದಲ್ಲ ಮುಖ್ಯ, ನಿಮ್ಮೊಳಗೆ ಅಂಥದೊಂದು ಶ್ರೀಮಂತಿಕೆಯ ಇರುವನ್ನು ಅನುಭವಿಸುವುದು- ಅರಿತುಕೊಳ್ಳುವುದು ಶ್ರೇಷ್ಠವಾದದ್ದು!

-ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.