ಅಂಕಣಗಳು

ಎಲ್ಲರಂತೆ ಅಲ್ಲ ನಮ್ಮ ದೇಶದ ರಾಜಕಾರಣಿಗಳು!

Published On :

ಭಾರತ ಇನ್ನುಳಿದ ಪ್ರಜಾಪ್ರಭುತ್ವ ರಾಷ್ಟ್ರಗಳಂತಲ್ಲ. ಇಲ್ಲಿ ಅಪರಾಧವೆಸಗುವ ರಾಜಕಾರಣಿಗಳು ನಿರ್ಭೀತರಾಗಿ ತಲೆ ಎತ್ತಿಕೊಂಡು ಓಡಾಡುತ್ತಾರೆ. ಆಗಾಗ ಸುರೇಶ್ ಕಲ್ಮಾಡಿ ಮತ್ತು ಎ. ರಾಜಾರಂಥವರು ಜೈಲು ಸೇರಿದ ಉದಾಹರಣೆ ಇವೆಯಾದರೂ, ನಮ್ಮನ್ನು ಪ್ರತಿನಿಧಿಸುವವರು ಕಾನೂನಿಗಿಂತಲೂ ಎತ್ತರದಲ್ಲಿದ್ದಾರೆ ಎನ್ನುವ ಎಣಿಕೆಯಂತೂ ಸುಳ್ಳಾಗಿಲ್ಲ. ಇತ್ತೀಚೆಗೆ ಅಶ್ವಿನಿ ಕುಮಾರ್ ಮತ್ತು ಬನ್ಸಲ್ ಉದುರಿಸಿದ- 'ನಾನೇನೂ ತಪ್ಪು ಮಾಡಿಲ್ಲ' ಎನ್ನುವ ನುಡಿಮುತ್ತು ಭ್ರಷ್ಟಾಚಾರಕ್ಕೆ 'ಪಾಸ್‌ವರ್ಡ್‌' ಆಗಿಹೋಗಿದೆ.
ಇನ್ನುಳಿದ ರಾಷ್ಟ್ರಗಳಲ್ಲಿ ಪರಿಸ್ಥಿತಿ ಹೀಗಿಲ್ಲ. ಅಪರಾಧವೆಸಗಿದ ಪ್ರಧಾನಿ ಮತ್ತು ರಾಷ್ಟ್ರಪತಿಗಳು ತಮ್ಮ ತಪ್ಪಿಗೆ ಕಠಿಣ ಶಿಕ್ಷೆ ಅನುಭವಿಸಿದ ಅನೇಕ ನಿದರ್ಶನಗಳಿವೆ. ಭಾರತದೊಂದಿಗೆ 'ಅನೂಹ್ಯ' ಸಂಬಂಧ ಹೊಂದಿರುವ ಇಟಲಿಯಲ್ಲಿ ಏನಾಯಿತೋ ನೋಡಿ- ಪ್ರಧಾನ ಮಂತ್ರಿ ಕಚೇರಿಯಿಂದ ಇತ್ತೀಚೆಗೆ ಹೊರಬಿದ್ದಿದ್ದ ಸಿಲ್ವಿಯೋ ಬರ್ಲೆಸ್ಕೋನಿಗೆ ಈಗ ನಾಲ್ಕು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ನೀಡಿದ ಎನ್ನುವ ಆರೋಪ ಅವರ ಮೇಲಿದೆಯಾದರೂ, ಅದಕ್ಕಿಂತ ಹೆಚ್ಚಾಗಿ  ತೆರಿಗೆ ವಂಚನೆ, ವಕೀಲರಿಗೆ ಲಂಚದ ಆಮಿಷ ಒಡ್ಡಿದ್ದು ಮತ್ತು ಗೋಪ್ಯತೆಯನ್ನು ಉಲ್ಲಂಘಿಸಿದ ಅಪರಾಧಕ್ಕಾಗಿ ಅವರಿಗೆ ಈ ಕಠಿಣ ಶಿಕ್ಷೆ ವಿಧಿಸಲಾಗಿದೆ.
2000-2007ರ ವರೆಗೂ ಇಸ್ರೇಲ್‌ನ ಅಧ್ಯಕ್ಷರಾಗಿದ್ದ ಮೋಶೆ ಕತ್ಸಾವ್‌ಗೆ ತನ್ನ ಸಹೋದ್ಯೋಗಿಗಳಿಗೆ ಕಿರುಕುಳ ನೀಡಿದ ಕಾರಣಕ್ಕೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದ ಇಸ್ರೇಲ್‌ನ ಸುಪ್ರೀಂ ಕೋರ್ಟ್, 'ರಾಷ್ಟ್ರದ ನೇತೃತ್ವ ವಹಿಸಿಕೊಂಡಿದ್ದ ವ್ಯಕ್ತಿಯೊಬ್ಬ ಈಗ ಜೈಲು ಸೇರುತ್ತಿರುವುದು ನೋಡುವುದು ನಿಜಕ್ಕೂ ವಿಪರ್ಯಾಸ' ಎಂದು ಹೇಳಿತ್ತು. ಆದರೂ ಮೋಶೆಗೆ ಶಿಕ್ಷೆಯಿಂದ ಬಚಾವಾಗಲು ಸಾಧ್ಯವಾಗಲಿಲ್ಲ.
ಹಾಗಂತ ನಮ್ಮ ರಾಷ್ಟ್ರಪತಿಗಳು ಅಥವಾ ಪ್ರಧಾನಿಗಳು ಅಪ್ರಾಪ್ತ ವಯಸ್ಸಿನ ಬಾಲಕಿಯರಿಗೆ ಕಿರುಕುಳ ನೀಡಿದ್ದಾರೆ ಎಂಬುದು ಇದರರ್ಥವಲ್ಲ. ನಮಗೆ ಗೊತ್ತಿರುವ ಮಟ್ಟಿಗಂತೂ ಇದುವರೆಗೂ ಯಾರೂ ಹಾಗೆ ಮಾಡಿಲ್ಲ. ಆದರೆ ವರ್ಷಗಳವರೆಗೆ ತೆರಿಗೆ ಪಾವತಿಸುವುದನ್ನು 'ಮರೆತವರು' ಮತ್ತು ಭಾರತದ ರಹಸ್ಯ ದಾಖಲೆಗಳನ್ನು ವಿದೇಶೀ ಏಜೆನ್ಸಿಗಳ ಕೈಗೆ ನೀಡಿದ ನಾಯಕರ ಸಂಖ್ಯೆ ನಮ್ಮಲ್ಲಿ ಕಡಿಮೆಯೇನೂ ಇಲ್ಲವಲ್ಲ? ಅವರಿಗೇನೂ ಆಗಿಲ್ಲ ಎನ್ನುವುದು ಎಷ್ಟು ಸತ್ಯವೋ, ಅವರನ್ನು ಜನ ಹುಚ್ಚೆದ್ದು 'ಆರಾಧಿಸುತ್ತಾರೆ' ಎನ್ನುವುದೂ ಅಷ್ಟೇ ಸತ್ಯ.
ಫಿಲಿಪೀನ್ಸ್‌ನಲ್ಲಿ ಜೋಸೆಫ್ ಎಸ್ಟ್ರಾಡಾ ಎನ್ನುವ ಮೋಹಕನಟನೊಬ್ಬ ಆ ದೇಶದ ಅಧ್ಯಕ್ಷನಾದ. ಅಮೆರಿಕದ ಅಧ್ಯಕ್ಷರುಗಳಂತೆ ಫಿಲಿಪೀನ್ಸ್‌ನ ಅಧ್ಯಕ್ಷರೂ ಅಧಿಕಾರವನ್ನು ಕಳವಳಕ್ಕೀಡುಮಾಡುವಂತೆ ಬಳಸಿಕೊಳ್ಳುತ್ತಾರೆ. ಎಸ್ಟ್ರಾಡಾ, ಆ್ಯಕ್ಷನ್ ಥ್ರಿಲ್ಲರ್ ಸಿನೆಮಾದಲ್ಲಿನ ನಾಯಕನಂತೆ ವರ್ತಿಸತೊಡಗಿದ. ಇಡೀ ದೇಶವೇ ರಂಗಸಜ್ಜಿಕೆ ಎಂಬಂತೆ ನಟಿಸತೊಡಗಿದ. ಇನ್ನೂ ತನ್ನ ನೈಪುಣ್ಯವನ್ನು ಪ್ರದರ್ಶಿಸುತ್ತಿದ್ದನೋ ಏನೋ? ಮಧ್ಯದಲ್ಲಿಯೇ ಆತನನ್ನು ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ತಳ್ಳಲಾಯಿತು. ಆತನ ವಿರುದ್ಧ ಸಲ್ಲಿಸಲಾದ 8 ಆರೋಪಗಳಲ್ಲಿ ಪ್ರಮುಖವಾದದ್ದು ಸುಲಿಗೆಯ ಆರೋಪ. ನಂತರ ಆ ಸ್ಥಾನದಲ್ಲಿ ಬಂದು ಕುಳಿತ ಗ್ಲೋರಿಯಾ ಮೆಕಪೆಗಲ್ ಕೂಡ ವಂಚನೆ ಆರೋಪದಡಿಯಲ್ಲಿ ಕಂಬಿ ಎಣಿಸಿದಳು.
ಹಾಗೆ ನೋಡಿದರೆ, ತಮ್ಮ ನಾಯಕರನ್ನು ಉತ್ತರದಾಯಿಯನ್ನಾಗಿ ಮಾಡುವಲ್ಲಿನ ಏಷಿಯಾದ ಕೆಲವು ರಾಷ್ಟ್ರಗಳ 'ಪ್ರಜಾಪ್ರಭುತ್ವ ರುಜುವಾತುಗಳು' ನಮ್ಮ ಕಣ್ಣಿಗೆ ಬೀಳುತ್ತಿಲ್ಲ. 2009ರಲ್ಲಿ ತೈವಾನ್‌ನ ಅಧ್ಯಕ್ಷ ಚೆನ್‌ಶುಯಿ-ಬಿಯಾನ್‌ಗೆ ಭ್ರಷ್ಟಾಚಾರ ಆರೋಪದಡಿಯಲ್ಲಿ ಜೈಲಿಗೆ ಕಳುಹಿಸಲಾಯಿತು. ಅದಾದ ಎರಡು ವರ್ಷಗಳ ನಂತರ ಅವರ ಮೇಲಿನ ಫೋರ್ಜರಿ ಆಪಾದನೆಯೂ ಸಾಬೀತಾಗಿ ಅವರ ಶಿಕ್ಷೆಯನ್ನು ಮೂರು ವರ್ಷಗಳಿಗೆ ವಿಸ್ತರಿಸಲಾಯಿತು. ಇಂಥದ್ದೇ ಘಟನೆಗಳು ದಕ್ಷಿಣ ಕೋರಿಯಾದಲ್ಲೂ ಘಟಿಸಿವೆ. ಇನ್ನು ಥಾಯ್ಲ್ಯಾಂಡ್ ಪ್ರಧಾನಿಯಾಗಿದ್ದ ಥಕ್ಸಿನ್ ಶಿನಾವಾತ್ರಾ ಜೈಲು ಶಿಕ್ಷೆ ತಪ್ಪಿಸಿಕೊಳ್ಳುವುದಕ್ಕಾಗಿ ದೇಶದಿಂದಲೇ ಓಡಿಹೋಗಿದ್ದ. ಈಗ ಅವರ ಸಹೋದರಿ ಯಿಂಗ್‌ಲಕ್ ಪ್ರಧಾನಿ ಹುದ್ದೆಯಲ್ಲಿದ್ದಾರಾದರೂ ಶಿನಾವಾತ್ರಾ ಮಾತ್ರ ದೇಶದಿಂದ ಹೊರಗೇ ಇದ್ದಾರೆ.
ಯುದ್ಧಾಪರಾಧಗಳ ವಿಷಯಕ್ಕೆ ಬಂದಾಗ ಅವು ಬೇರೆಯದ್ದೇ ವಲಯದಲ್ಲಿ ಬರುತ್ತವೆ. ಅದರಲ್ಲಿ ಶಿಕ್ಷೆ ಎನ್ನುವುದು 'ಸೆಲೆಕ್ಟಿವ್‌' ಆಗಿರುತ್ತದೆ. ಇತ್ತೀಚೆಗೆ ಗ್ವಾಟೇಮಾಲಾದ ಮಾಜಿ ಸರ್ವಾಧಿಕಾರಿ ಎಪ್ರೇನ್ ಮಂಟೋಗೆ, ಮಯಾನ್ ಜನಾಂಗದ ಹತ್ಯಾಕಾಂಡ ನಡೆಸಿದ ಆರೋಪದಡಿಯಲ್ಲಿ 80 ವರ್ಷಗಳ ಕಾರಾಗೃಹ ಶಿಕ್ಷೆ ನೀಡಲಾಗಿದೆ. ಕಳೆದ ವರ್ಷ ಲೈಬೇರಿಯಾದ ಮಾಜಿ ಅಧ್ಯಕ್ಷ ಚಾರ್ಲ್ಸ್ ಟೇಯ್ಲರ್‌ಗೂ ಇದೇ ಅಪರಾಧಕ್ಕಾಗಿ 50 ವರ್ಷ ಜೈಲು ಶಿಕ್ಷೆ ನೀಡಲಾಗಿದೆ.
ನಮ್ಮ ಸಮಯದ ಅತಿಘೋರ ಯುದ್ಧಾಪರಾಧವನ್ನು ನಡೆಸಿದವರ ದೊಡ್ಡ ಪಟ್ಟಿಯೇ ಇದೆ. ಕಿಸಿಂಜರ್ ಮತ್ತು ನಿಕ್ಸಾನ್ ವಿಯೆಟ್ನಾಮ್‌ನಲ್ಲಿ, ಚೆನಿ ಮತ್ತು ಬುಷ್ ಇರಾಕ್‌ನಲ್ಲಿ ನಡೆಸಿದ ಗದ್ದಲಗಳೇನು ಸಾಮಾನ್ಯವೇ? ಆದರೆ ಅವರಿಗೆಂದಿಗೂ ಈ ವಿಚಾರವಾಗಿ ನ್ಯಾಯಾಲಯದಲ್ಲಿ ತಲೆಬಗ್ಗಿಸಿ ನಿಲ್ಲುವ ಸಂದರ್ಭ ಬರುವುದಿಲ್ಲ. 'ಸೂಪರ್‌ಪವರ್‌' ಆಗುವುದರ ಲಾಭಗಳಲ್ಲಿ ಇದೂ ಒಂದು! ಪ್ರಜಾಪ್ರಭುತ್ವದಲ್ಲಿ ಸರಿಯಾದ ನಿಯಮಗಳನ್ನು ಅಳವಡಿಸಿಕೊಳ್ಳಬೇಕೆಂದರೆ ನಾವು ನೋಡಬೇಕಾದದ್ದು ಅಮೆರಿಕದತ್ತ ಅಲ್ಲ. ಬ್ರಿಟನ್‌ನತ್ತ.
1999ರಲ್ಲಿ ಕನ್ಸರ್‌ವೇಟಿವ್ ಪಕ್ಷದ ಮಂತ್ರಿ ಜೊನಥಾನ್ ಯೇಟ್ಕಿನ್ ಮತ್ತು 2001ರಲ್ಲಿ ಅದೇ ಪಕ್ಷದ ಉಪಾಧ್ಯಕ್ಷ ಜೆಫ್ರಿ ಆರ್ಚರ್‌ರನ್ನು ವಚನ ಭ್ರಷ್ಟತೆಯ ಆರೋಪದ ಮೇಲೆ ಬಂಧಿಸಲಾಯಿತು. ಇನ್ನು ಕ್ರಿಸ್ ಹುಹ್ನೆ ಎಂಬ ಇಂಧನ ಸಚಿವ 2003ರಲ್ಲಿ ಓವರ್‌ಸ್ಪೀಡಿಂಗ್ ಮಾಡಿ ಸಿಕ್ಕಿಬಿದ್ದ. ಆದರೆ ಕಾರು ನಡೆಸಿದ್ದು ತನ್ನ ಪತ್ನಿ ಎಂದು ಹೇಳಿ ಶಿಕ್ಷೆಯಿಂದ ತಪ್ಪಿಸಿಕೊಂಡ. ಅದಾದ 8 ವರ್ಷಗಳ ನಂತರ ಹುಹ್ನೆ ಇನ್ನೊಬ್ಬ ಮಹಿಳೆಯ ಮೋಹಕ್ಕೆ ಸಿಲುಕಿ ಮೊದಲ ಹೆಂಡತಿಯನ್ನು ಬಿಟ್ಟುಬಿಟ್ಟ. ಇದರಿಂದ ರೊಚ್ಚಿಗೆದ್ದ ಆತನ ಮೊದಲ ಹೆಂಡತಿ, ತನ್ನ ಪತಿ 2003ರಲ್ಲಿ ಹೇಳಿದ್ದ ಸುಳ್ಳನ್ನು ಬಹಿರಂಗಮಾಡಿಬಿಟ್ಟಳು. ಆದರೆ ನ್ಯಾಯಾಲಯ ಇಬ್ಬರನ್ನೂ ಜೈಲಿಗೆ ಕಳುಹಿಸಿತು!
ಇದನ್ನು ಇತ್ತೀಚೆಗೆ ಮುಂಬೈನಲ್ಲಾದ ಘಟನೆಯೊಂದಿಗೆ ಹೋಲಿಸಿ ನೋಡಿ! ಪೊಲೀಸ್ ಅಧಿಕಾರಿಯೊಬ್ಬ , ಮಿತಿಮೀರಿದ ವೇಗದಲ್ಲಿ ಕಾರು ಚಲಾಯಿಸಿದ್ದಾರೆ ಎನ್ನುವ ಕಾರಣಕ್ಕೆ ಶಾಸಕರೊಬ್ಬರಿಗೆ ದಂಡ ವಿಧಿಸಿದ. ಆ ನಂತರ ಆದದ್ದೇನು? ಆ ಪೊಲೀಸ್ ಅಧಿಕಾರಿಯನ್ನೇ ಸಸ್ಪೆಂಡ್ ಮಾಡಲಾಯಿತು. ನಂತರ ಆತನನ್ನು ವಿಧಾನಸಭೆಗೆ ಕರೆಸಿಕೊಂಡ ಶಾಸಕರ ಗುಂಪು ಆತನ ಮೇಲೆ ದಾಳಿ ಮಾಡಿತು! ಭಾರತದಲ್ಲಿ 'ಜನತೆಯ ಪ್ರತಿನಿಧಿಗಳು' ಎಂದು ಕರೆಸಿಕೊಳ್ಳುವವರು ನಿಜಕ್ಕೂ ಜನತೆಯನ್ನು ಅವಮಾನಿಸುತ್ತಿದ್ದಾರೆ.

ಟಿ.ಜೆ.ಎಸ್ ಚಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.