ಅಂದು ಆಡ್ವಾಣಿಯವರ ಶ್ರೀರಕ್ಷೆ ಇರದಿದ್ದರೆ ಇಂದು ಮೋದಿ ಎಲ್ಲಿರುತ್ತಿದ್ದರು?
ಇಂಥದೊಂದು ಸಂದರ್ಭ ಮುಂದೊಮ್ಮೆ ತಮ್ಮ ಜೀವನದಲ್ಲಿ ಎದುರಾಗಬಹುದು ಎಂದು...
ಇಂಥದೊಂದು ಸಂದರ್ಭ ಮುಂದೊಮ್ಮೆ ತಮ್ಮ ಜೀವನದಲ್ಲಿ ಎದುರಾಗಬಹುದು ಎಂದು ಸ್ವತಃ ಎಲ್.ಕೆ. ಆಡ್ವಾಣಿ ಅವರು ಕನಸು-ಮನಸಿನಲ್ಲಿಯೂ ಅಂದುಕೊಂಡಿರಲಿಕ್ಕಿಲ್ಲ. ತಾವೇ ಕಟ್ಟಿದ ಭಾರತೀಯ ಜನತಾ ಪಕ್ಷದ ಎಲ್ಲ ಹುದ್ದೆ, ಹೊಣೆಗಾರಿಕೆಗಳಿಗೆ ರಾಜಿನಾಮೆ ಕೊಟ್ಟು 'ಸರ್ವಸಂಗ ಪರಿತ್ಯಾಗಿ' ಆಗಿಬಿಟ್ಟರು. ಬೇರೆ ಯಾರಾದರೂ ಇಂಥ ನಿರ್ಧಾರ ಕೈಗೊಂಡಿದ್ದರೆ ಅಂಥ ಅಚ್ಚರಿ, ಆತಂಕ, ಆಘಾತ ಆಗುತ್ತಿರಲಿಲ್ಲ. ಆದರೆ ಇಡೀ ಬದುಕನ್ನೇ ಒಂದು ಪಕ್ಷ, ಅದರ ಸಂರಚನೆ, ಸಂಸ್ಥಾಪನೆ ಹಾಗೂ ಏಳಿಗೆಗಾಗಿ ಮುಡಿಪಾಗಿಟ್ಟವರು, ಆ ಪಕ್ಷದೊಂದಿಗೆ ತಮ್ಮ ವ್ಯಕ್ತಿತ್ವ, ಜೀವನವನ್ನು ರೂಪಿಸಿಕೊಂಡವರು, ಪಕ್ಷದ ಜವಾಬ್ದಾರಿ ಸಾಕು ಎಂದು ಕೈಚೆಲ್ಲಿ ಬಿಡುವುದಿದೆಯಲ್ಲ, ಇದನ್ನು ಅರಗಿಸಿಕೊಳ್ಳುವುದು ಕಷ್ಟ. ಹಿರಿಯ ಜೀವ ಅದೆಷ್ಟು ಪರಿತಪಿಸಿ ಈ ನಿರ್ಧಾರಕ್ಕೆ ಬಂತೋ ಗೊತ್ತಿಲ್ಲ.
ಆಡ್ವಾಣಿಯವರನ್ನು ಹತ್ತಿರದಿಂದ ಬಲ್ಲವರಿಗೂ ಇದು ಅಚ್ಚರಿ ನಡೆಯೇ. ಮನೆಯಲ್ಲಿ ತನ್ನ ಮಾತನ್ನು ಯಾರೂ ಕೇಳುತ್ತಿಲ್ಲ, ತನಗೆ ಸಿಗಬೇಕಾದ ಗೌರವ, ಮರ್ಯಾದೆ ಸಿಗುತ್ತಿಲ್ಲ, ತನ್ನನ್ನು ಯಾರೂ ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದು ಮಗ, ಹೆಂಡತಿ, ಮನೆ ಮಂದಿಯ ಮೇಲೆ ಮುನಿಸಿಕೊಂಡು ಯಾರಿಗೂ ಹೇಳದೇ ಕೇಳದೇ ಅಪ್ಪ ತಾನೇ ಕಟ್ಟಿದ ಮನೆಯನ್ನು ತೊರೆದು ಬರಿಗೈಲಿ ಹೊರಟು ಬಿಡುತ್ತಾನಲ್ಲ, ಆಡ್ವಾಣಿಯವರ ನಡೆಯೂ ಯಾಕೋ ಹಾಗೆ ಅನಿಸಿತು.
ಇದು ವಯೋ ಸಹಜ ವೈರಾಗ್ಯವೋ, ವಿರಸವೋ, ಹತಾಶೆಯೋ, ಅಸಹಾಯಕತೆಯೋ, ವಿಧಿಯಾಟವೋ, ಪರಿಸ್ಥಿತಿಯ ಕ್ರೂರ ಅಣಕವೋ... ಗೊತ್ತಿಲ್ಲ. ಹಿರಿಯ ಜೀವ ನೊಂದಿದೆ, ಘಾಸಿಗೊಂಡು ಚೀರಿದೆ. ನೋವಿಗೆ ಶರಣಾಗಿದೆ.
ಆಡ್ವಾಣಿ ಮಾಡಿದ್ದು ಸರಿಯೋ, ತಪ್ಪೋ ಎಂಬುದು ಚರ್ಚಾರ್ಹ. ಅವರ ನಡೆಯಿಂದ ಯಾರಿಗೆ ಲಾಭವಾಯಿತು, ಯಾರಿಗೆ ನಷ್ಟವಾಯಿತು ಎಂಬುದೂ ಚರ್ಚಾಸ್ಪದ. ಏನೇ ಆಗಲಿ ಆಡ್ವಾಣಿಯವರಂಥ ಮೇರು ನಾಯಕರು ಹೀಗೆ ಮಾಡಬಾರದಿತ್ತು ಎಂಬ ಮಾತನ್ನೂ ಒಪ್ಪೋಣ. ಇದರಿಂದ ಬಿಜೆಪಿಗೆ ಬಹಳ ನಷ್ಟವಾಯಿತು. ಕಾರ್ಯಕರ್ತರ ಮನೋಸ್ಥೈರ್ಯ ಕುಂದಿತು, ನೈತಿಕತೆಗೆ ಪೆಟ್ಟಾಯಿತು ಎನ್ನುವವರ ಮಾತನ್ನು ನಿರಾಕರಿಸಲು ಸಾಧ್ಯವಿಲ್ಲ.
ಏನೇ ಇರಲಿ, ಆಡ್ವಾಣಿಯವರು ಇನ್ನಷ್ಟು ಸಂಯಮದಿಂದ ವರ್ತಿಸಬೇಕಿತ್ತು, ಯಾಕೆಂದರೆ ಅಂಥ ವರ್ತನೆಯನ್ನು ಬೇರೆ ಯಾರಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲ. ಕೇವಲ ಆಡ್ವಾಣಿಯವರಿಂದ ಮಾತ್ರ ನಿರೀಕ್ಷಿಸಲು ಸಾಧ್ಯ ಎಂಬ ಮಾತು ಸಹ ಸತ್ಯವೇ. ತಾವೇ ಬೆಳೆಸಿದ, ರೂಪಿಸಿದ, ಪೋಷಿಸಿದ, ಮನಸಾ ಬೆಂಬಲಿಸಿದ ಶಿಷ್ಯ ನರೇಂದ್ರ ಮೋದಿಯ ಏಳಿಗೆಯನ್ನು ಕೂಡ ಅವರು ಸಹಿಸದಾದರಾ ಎಂಬ ಪ್ರಶ್ನೆ ಸಹ ಎಲ್ಲರಲ್ಲಿ ಕೊರೆಯುತ್ತಿರುವುದು ಸುಳ್ಳಲ್ಲ. ಪಕ್ಷದಲ್ಲಿ ಆಡ್ವಾಣಿ ಏಕಾಂಗಿಯಾದರೂ, ಎಲ್ಲ ಕಡೆಗಳಿಂದ ಮಾನಸಿಕ ಕಿರಿಕಿರಿಗೆ ಒಳಗಾದರೂ, ಎಲ್ಲೋ ತಾನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪ್ರಜ್ಞೆ ಕಾಡಿ ಅದರಿಂದ ಹೊರಬರಲು ಅವರು ಈ ನಿರ್ಧಾರ ಕೈಗೊಂಡರಾ ಎಂದೂ ಅನಿಸುವುದುಂಟು. ಪಕ್ಷದಲ್ಲಿ ತಾವು 'ಉರಿದು ನಂದು ಹೋಗುತ್ತಿರುವ ದೀಪ' ಎಂಬ ಸುಪ್ತ ಸಂದೇಶವನ್ನು ಮನಗಾಣಲು ಅವರು ಸೋತರಾ ಅಥವಾ ಒಮ್ಮೆಯಾದರೂ ಪ್ರಧಾನಿಯಾಗಬೇಕೆಂಬ ಅಧಿಕಾರದ ಹಪಾಹಪಿಗೆ ಅವರೂ ಕಟ್ಟುಬಿದ್ದರಾ ಎಂಬ ಪ್ರಶ್ನೆಗಳನ್ನೂ ಹೊಸಕಿ ಹಾಕುವಂತಿಲ್ಲ. ಅವರ ಒಂದು ನಿರ್ಧಾರ ಈ ಎಲ್ಲ ಪ್ರಶ್ನೆ, ಸಂದೇಹಗಳನ್ನು ಹುಟ್ಟು ಹಾಕಿದೆ.
ಬಿಜೆಪಿಯಲ್ಲಿ ವಾಜಪೇಯಿ ಹಾಗೂ ಆಡ್ವಾಣಿಯವರದು ಪ್ರಶ್ನಾತೀತ ನಾಯಕತ್ವ. ಅವರಿಬ್ಬರ ನಿರ್ಧಾರಗಳನ್ನು ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಸಂಘ ಪರಿವಾರವೂ ಇವರಿಬ್ಬರನ್ನು ಪ್ರಶ್ನಿಸಿದ್ದು ಇಲ್ಲವೇ ಇಲ್ಲ. ವಾಜಪೇಯಿ 'ಹೂಂ' ಅಂದರೆ, ಆಡ್ವಾಣಿ 'ಉಹುಂ' ಎಂದು ಹೇಳಿದ್ದು ಇಲ್ಲವೇ ಇಲ್ಲ. ಆಡ್ವಾಣಿ 'ಉಹುಂ' ಅಂತಾರೆಂಬುದು ಗೊತ್ತಾದರೆ ವಾಜಪೇಯಿ 'ಹೂಂ' ಅಂದುಬಿಡುತ್ತಿದ್ದರು. ಐದೂವರೆ ದಶಕಗಳ ರಾಜಕೀಯ ಸಂಬಂಧ, ಸುದೀರ್ಘ ಪಯಣದಲ್ಲಿ ಅವರಿಬ್ಬರು ಮುಖ ಕೆಡಿಸಿಕೊಂಡಿದ್ದು, ಸ್ವಾಟೆ ತಿರುವಿಕೊಂಡಿದ್ದು, ಶಟಗೊಂಡು ಹೋಗಿದ್ದು ಇಲ್ಲವೇ ಇಲ್ಲ. ಸಣ್ಣ ಪುಟ್ಟ ಸಂಗತಿಗಳ ಬಗ್ಗೆ ಇಬ್ಬರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅವು ಔಷಧವಿಲ್ಲದೇ ಹೋಗುವ ನೆಗಡಿಯಂತೆ ಹೊರಟು ಹೋಗುತ್ತಿದ್ದವು. ಎಂಥ ವಿಪರ್ಯಾಸ ಅಂದ್ರೆ ವಾಜಪೇಯಿ ಹಾಗೂ ಆಡ್ವಾಣಿ ಅವರ ನಡುವಿನ ಭಿನ್ನಾಭಿಪ್ರಾಯ ಬಹಿರಂಗಗೊಂಡಿದ್ದು ಎರಡು ಪ್ರಸಂಗಗಳಲ್ಲಿ ಮಾತ್ರ. ಮೊದಲನೆಯದು ಅಯೋಧ್ಯೆ ರಥಯಾತ್ರೆ ವಿಷಯವಾಗಿ ಹಾಗೂ ಎರಡನೆಯದು 2002ರ ಗೋಧ್ರಾ ನರಮೇಧದ ಹಿನ್ನೆಲೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ರಾಜಿನಾಮೆ ನೀಡಬೇಕೆಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಟ್ಟು ಹಿಡಿದ ಸಂದರ್ಭದಲ್ಲಿ. ಮೊದಲನೆಯದು ಇಲ್ಲಿ ಅಪ್ರಸ್ತುತ ಬಿಡಿ.
ಯಾರ ವಿಷಯವಾಗಿ, ಯಾವ ಕಾರಣಕ್ಕಾಗಿ ಆಡ್ವಾಣಿ ಅಂದು ವಾಜಪೇಯಿ ಜತೆಗೆ ಜಟಾಪಟಿ ನಡೆಸಿದರೋ, ಅದೇ ವ್ಯಕ್ತಿಗೆ ಮೊನ್ನೆ ಗೋವಾದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಆಡ್ವಾಣಿಯವರನ್ನು ಲೆಕ್ಕಿಸದೇ, ಅವರ ಗೈರು ಹಾಜರಿಯಲ್ಲಿ ಮಹತ್ವದ ಸ್ಥಾನವನ್ನು ನೀಡಿದ್ದು ಹಾಗೂ ಅದೇ ನೋವಿನಲ್ಲಿ ಪಕ್ಷದ ಎಲ್ಲ ಜವಾಬ್ದಾರಿಗಳಿಗೆ ರಾಜಿನಾಮೆ ಕೊಡುವಂಥ ಸ್ಥಿತಿ ತಲೆದೋರಿದ್ದು ಮಾತ್ರ ಘೋರ ವಿಪರ್ಯಾಸ. 'ನರೇಂದ್ರ ಮೋದಿ ರಾಜಧರ್ಮ ಪಾಲಿಸಲೇಬೇಕು. ಗೋಧ್ರಾ ನರಮೇಧಕ್ಕೆ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು' ಎಂದು ಪ್ರಧಾನಿ ವಾಜಪೇಯಿ ಒಂದೆಡೆ ಹೇಳುತ್ತಿದ್ದರೆ, 'ಸಾಧ್ಯವೇ ಇಲ್ಲ, ಮೋದಿ ಅಂಥ ಅಪರಾಧವೆಸಗಿಲ್ಲ. ಆ ಹತ್ಯೆಯಲ್ಲಿ ಅವರ ಪಾತ್ರ ಇಲ್ಲ. ಅವರು ರಾಜಿನಾಮೆ ನೀಡುವ ಅಗತ್ಯವಿಲ್ಲ' ಎಂದು ಸಾರಾಸಗಟು ಬೇಡಿಕೆಯನ್ನು ಆಡ್ವಾಣಿ ತಿರಸ್ಕರಿಸಿದ್ದರು.
ಮೋದಿ ಬೆಂಬಲಕ್ಕೆ ಮಹಾಗೋಡೆಯಾಗಿ ನಿಂತವರೇ ಆಡ್ವಾಣಿ. ಇಲ್ಲದಿದ್ದರೆ ಅಂದೇ ಮೋದಿ ರಾಜಿನಾಮೆ ನೀಡಿ ನಿರ್ಗಮಿಸಬೇಕಿತ್ತು. ಈ ಪ್ರಸಂಗದಿಂದ ಇಬ್ಬರ ಸಂಬಂಧ ತುಸು ಹಳಸಿತು. ಮೊದಲ ಬಾರಿಗೆ ಇಬ್ಬರ ಭಿನ್ನಾಭಿಪ್ರಾಯ ಬೀದಿಗೆ ಬಿದ್ದಿತ್ತು. ಅಂದು ಮೋದಿ ಬೆಂಬಲಕ್ಕೆ ಆಡ್ವಾಣಿಯವರು ನಿಲ್ಲದೇ, ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ನೀಡಬೇಕಾದ ಪರಿಸ್ಥಿತಿ ಉದ್ಭವಿಸಿದ್ದರೆ ಏನಾಗುತ್ತಿತ್ತು ಎಂಬುದನ್ನು ಯೋಚಿಸಬೇಕು. ಆದರೆ ಅಂಥ ಪರಿಸ್ಥಿತಿ ಉದ್ಭವಿಸುವುದನ್ನು ತಪ್ಪಿಸಿದ್ದು ಮಾತ್ರ ಆಡ್ವಾಣಿ ಎಂಬುದೂ ಸೂರ್ಯನಷ್ಟೇ ಸತ್ಯ. 2002ರಲ್ಲಿ ಇದೇ ಗೋವಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ನರೇಂದ್ರ ಮೋದಿ ತಲೆಕಾಯ್ದ ಆಡ್ವಾಣಿ ಒಂದೆಡೆ, 11 ವರ್ಷಗಳ ಬಳಿಕ ಇದೇ ಗೋವಾದಲ್ಲಿ ಮೊನ್ನೆ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನರೇಂದ್ರ ಮೋದಿ ಪಕ್ಷದ ಮುಂದಿನ ಲೋಕಸಭಾ ಚುನಾವಣೆಗೆ ಸಾರಥಿ ಎಂದು ಘೋಷಿಸುವ ಸಂದರ್ಭದಲ್ಲಿ ಅದನ್ನು ವಿರೋಧಿಸಿ, ದೂರವೇ ಉಳಿದ ಅದೇ ಆಡ್ವಾಣಿ ಇನ್ನೊಂದೆಡೆ. ವಿಪರ್ಯಾಸ ಅಂದ್ರೆ ಇದೇ ಇರಬೇಕು. ಹಾಗೆ ನೋಡಿದರೆ, ನರೇಂದ್ರ ಮೋದಿಯವರ ಸಾಮರ್ಥ್ಯ ಗುರುತಿಸಿ, ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು, ಅವರಿಗೊಂದು ಹೊಣೆಗಾರಿಕೆ ಕೊಟ್ಟು ಪಕ್ಷದಲ್ಲಿ ಬೆಳೆಸಿದವರೇ ಆಡ್ವಾಣಿ. ಕೇಶುಭಾಯಿ ಪಟೇಲ್ ಗುಜರಾತಿನ ಮುಖ್ಯಮಂತ್ರಿಯಾದಾಗ ನರೇಂದ್ರ ಮೋದಿ ತಮ್ಮ ರಾಜ್ಯದೊಳಗೆ ಕಾಲಿಡಕೂಡದೆಂದು ತಾಕೀತು ಹಾಕಿದ್ದರು. ಅದರಂತೆ ಮೋದಿ ಐದು ವರ್ಷ ತಮ್ಮ ರಾಜ್ಯದಲ್ಲೇ ಕಾಲಿಟ್ಟಿರಲಿಲ್ಲ. ಆ ಸಮಯದಲ್ಲಿ ಮೋದಿಯವರನ್ನು ದಿಲ್ಲಿಗೆ ಕರೆದುಕೊಂಡು ಬಂದು, ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮಾಡಿದವರೇ ಆಡ್ವಾಣಿ. ಈಗ ನರೇಂದ್ರ ಮೋದಿಯವರ ದಾರಿಗೆ ಆಡ್ವಾಣಿಯವರೇ ಅಡ್ಡಗೋಡೆ! ಹಂತ ಹಂತವಾಗಿ ಕೈ ಹಿಡಿದು ನಡೆಸಿದ ಆಡ್ವಾಣಿಯವರ ವಿರುದ್ಧವೇ ಮೋದಿಯವರ ಗುಟುರು! ಇದು ಒಂದು ರೀತಿಯಲ್ಲಿ ಶಿಷ್ಯನ ವಿರುದ್ಧ ಕುತಂತ್ರವೋ, ಶಿಷ್ಯನಿಂದ ಗುರುವಿಗೇ ತಿರುಮಂತ್ರವೋ?
ಮೊನ್ನೆ ಆಡ್ವಾಣಿಯವರು ಮನನೊಂದು ಬಿಜೆಪಿಯ ತಮ್ಮೆಲ್ಲ ಜವಾಬ್ದಾರಿ ಹುದ್ದೆಗಳಿಗೆ ರಾಜಿನಾಮೆ ಕೊಟ್ಟಾಗ, ಅವರ ಆತ್ಮಕತೆ ಂಣ ಈ್ಟ್ಡಟಿಡ್ಠಿಣ ಂಣ ಔ್ಝಜಿಜ (ನನ್ನ ದೇಶ, ನನ್ನ ಜೀವನ) ಪುಸ್ತಕಕ್ಕಾಗಿ ತಡಕಾಡಿದೆ. ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸುವಾಗ ನೆನಪಾದ ಕೆಲ ಘಟನೆಗಳಿಗಾಗಿ ಪುಟಗಳನ್ನು ತಿರುವಿ ಹಾಕಿದೆ. ನರೇಂದ್ರ ಮೋದಿ ಕುರಿತಂತೆ ತಮ್ಮ ಹಾಗೂ ವಾಜಪೇಯಿ ಮಧ್ಯೆ ಮೂಡಿದ ಭಿನ್ನಾಭಿಪ್ರಾಯಗಳ ಕುರಿತು ಆಡ್ವಾಣಿ ಸಾಕಷ್ಟು ವಿವರಗಳನ್ನು ಪ್ರಸ್ತಾಪಿಸಿದ್ದನ್ನು ಮತ್ತೊಮ್ಮೆ ಓದಬೇಕೆನಿಸಿತು. ನಿಮ್ಮ ಕುತೂಹಲಕ್ಕಾಗಿ ಅವನ್ನೆಲ್ಲ ಇಲ್ಲಿ ನೀಡುತ್ತಿದ್ದೇನೆ. ಈ ಸಂದರ್ಭದಲ್ಲಿ ಆಡ್ವಾಣಿ ಆತ್ಮಕತೆಯ ಕೆಲವು ಸಾಲುಗಳನ್ನು ಓದಿದರೆ ಬೇರೆಯ ಹೊಳಹುಗಳು ದಕ್ಕಬಹುದು. ಹಾಗಾದರೆ ಆಡ್ವಾಣಿಯವರು ಬರೆದಿದ್ದಾದರೂ ಏನು? ಓದಿ.
----
ಫೆಬ್ರವರಿ 2002ರಲ್ಲಿ ಗುಜರಾತ್‌ನ ಗೋಧ್ರಾದಲ್ಲಿ ಕರಸೇವಕರ ಸಾಮೂಹಿಕ ಹತ್ಯೆಯ ನಂತರ ಎದ್ದ ಕೋಮು ಗಲಭೆಯ ಸಮಯ. ಗುಜರಾತ್ ಸರ್ಕಾರ, ಅದರಲ್ಲಿಯೂ ನಿರ್ದಿಷ್ಟವಾಗಿ ಭಯಾನಕ ಹತ್ಯಾಕಾಂಡದ ಪರಿಣಾಮವಾಗಿ ನರೇಂದ್ರ ಮೋದಿಯವರು ಕಟು ಟೀಕೆ ಎದುರಿಸಬೇಕಾಯಿತು. ಮೋದಿಯ ರಾಜಿನಾಮೆಗಾಗಿ ಪ್ರತಿಪಕ್ಷಗಳ ಬೇಡಿಕೆ ಉತ್ತುಂಗ ತಲುಪಿತ್ತು. ಬಿಜೆಪಿ ಮತ್ತು ಆಡಳಿತ ನಡೆಸುತ್ತಿದ್ದ ಎನ್‌ಡಿಎ ಮೈತ್ರಿಕೂಟದ ಒಳಗೆಯೇ ಹಲವಾರು ಜನರು ಮೋದಿ ಕೆಳಗಿಳಿಯಬೇಕೆಂದು ಯೋಚಿಸಲು ಆರಂಭಿಸಿದರು. ಆದರೆ ಈ ವಿಚಾರವಾಗಿ ನನ್ನ ದೃಷ್ಟಿಕೋನ ಪೂರ್ಣವಾಗಿ ಭಿನ್ನವಾಗಿತ್ತು. ಗುಜರಾತ್‌ನ ಸಮಾಜದ ವಿವಿಧ ವರ್ಗಕ್ಕೆ ಸೇರಿದ ಅಪಾರ ಜನರೊಂದಿಗೆ ಮಾತನಾಡಿದ ನಂತರ ಮೋದಿಯವರತ್ತ ಅನ್ಯಾಯವಾಗಿ ಗುರಿಯಿಡಲಾಗಿದೆ ಎಂದು ನನಗೆ ಮನವರಿಕೆಯಾಯಿತು. ಮೋದಿ ಅಪರಾಧಿ ಆಗಿರಲಿಲ್ಲ. ಬದಲು ಅವರು ಸ್ವಯಂ ರಾಜಕೀಯ ಬಲಿಪಶುವಾಗಿದ್ದರು.
ಆದ್ದರಿಂದ ಮುಖ್ಯಮಂತ್ರಿಯಾಗಿ ವರ್ಷವೂ ಕಳೆದಿರದ ಮೋದಿಯವರನ್ನು ಸಂಕೀರ್ಣ ಕೋಮು ಸನ್ನಿವೇಶಕ್ಕೆ ಬಲಿಪಶು ಮಾಡುವುದು ನಿಶ್ಚಿತವಾಗಿಯೂ ಅನ್ಯಾಯವಾಗುತ್ತದೆ ಎಂದು ನಾನು ಯೋಚಿಸಿದೆ. ಹಾಗೆ ಮಾಡುವುದರಿಂದ ಗುಜರಾತ್ ಸಾಮಾಜಿಕ ಸ್ಥಿತಿಗತಿಯು ದೀರ್ಘಕಾಲೀನವಾಗಿ ಹದಗೆಡಬಹುದು ಎಂದು ನಾನೆಣಿಸಿದೆ. ಗುಜರಾತ್‌ನಲ್ಲಿ ಸಂಭವಿಸಿದ್ದಕ್ಕೆ ಅಟಲ್‌ಜೀಯವರಿಗೆ ಆಳವಾದ ನೋವಾಗಿದೆ ಎಂದು ನನಗೆ ಗೊತ್ತಿತ್ತು. 1998, ಮಾರ್ಚ್‌ನಲ್ಲಿ ನಮ್ಮ ಸರ್ಕಾರ ರಚನೆಯಾದಂದಿನಿಂದ ದೇಶದಲ್ಲಿ ಕೋಮು ಹಿಂಸೆಯ ಘಟನೆಗಳನ್ನು ತೀವ್ರವಾಗಿ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದೆವು. ಒಮ್ಮೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಹಿಂದು ಕೋಮು ಉನ್ಮಾದಕ್ಕೆ ಗುರಿಯಾಗುತ್ತಾರೆ ಎಂಬ ನಮ್ಮ ವಿರೋಧಿಗಳ ಕುತ್ಸಿತ ಆಪಾದನೆಗೆ 2002ರ ಈ ಘಟನೆಯ ಮೊದಲಿನ ನಮ್ಮ ಕಾರ್ಯನಿರ್ವಹಣೆಯು ಪೂರ್ಣ ವಿರುದ್ಧವಾಗಿತ್ತು. ನಿಜವೆಂದರೆ ಅಟಲ್‌ಜೀಯವರ ಸರ್ಕಾರ ದೇಶದ ಮುಸ್ಲಿಮರು ಮಾತ್ರವಲ್ಲದೆ ವಿಶ್ವದಾದ್ಯಂತ ಇರುವ ಮುಸ್ಲಿಮ್ ದೇಶಗಳ ಉತ್ತಮ ಅಭಿಪ್ರಾಯಗಳಿಸಲು ಆರಂಭಿಸಿತ್ತು. ಇದ್ದಕ್ಕಿದ್ದಂತೆ, ಗುಜರಾತ್‌ನಲ್ಲಿ ಸಂಭವಿಸಿದ ಕೋಮು ಹಿಂಸೆ ದಳ್ಳುರಿಯ ನಂತರ, ನಮ್ಮ ಸೈದ್ಧಾಂತಿಕ ಎದುರಾಳಿಗಳು ನಡೆಸಿದ ಉಗ್ರ ಪ್ರಚಾರದಿಂದಾಗಿ ನಮ್ಮ ಪಕ್ಷ ಮತ್ತು ಕೇಂದ್ರ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಯಿತು.
ಅಟಲ್‌ಜೀ ಅವರ ಮನಸ್ಸಿನಲ್ಲಿ ಇದು ಭಾರವಾಗಿ ಕೂತಿತ್ತು. ಏನೋ ಒಂದು ಕ್ರಮ ತೆಗೆದುಕೊಳ್ಳಬೇಕಾದ್ದು ಅನಿವಾರ್ಯ ಎಂದು ಅವರು ಭಾವಿಸಿದರು. ಮೋದಿಯ ರಾಜಿನಾಮೆ ಪಡೆಯುವಂತೆ ಅವರ ಮೇಲೆ ಒತ್ತಡ ಹೆಚ್ಚುತ್ತಿತ್ತು. ಈ ಬಗ್ಗೆ ಅಟಲ್‌ಜೀ ಬಹಿರಂಗವಾಗಿ ಏನೂ ಹೇಳದೇ ಇದ್ದರೂ ಮೋದಿ ರಾಜಿನಾಮೆ ನೀಡಬೇಕೆಂದು ಅವರು ಬಯಸಿದ್ದರು ಎಂದು ನನಗೆ ತಿಳಿದಿತ್ತು. ಅದಕ್ಕೆ ನನ್ನ ಒಪ್ಪಿಗೆ ಇರಲಿಲ್ಲ ಎಂಬುದು ಅವರಿಗೂ ತಿಳಿದಿತ್ತು.
ಮುಂದೆ ಶೀಘ್ರದಲ್ಲಿ 2002ರ ಏಪ್ರಿಲ್‌ನಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಗೋವಾದಲ್ಲಿ ನಡೆಯಲಿದ್ದಿತು. ಈ ಸಭೆ ಗುಜರಾತ್ ಬಗ್ಗೆ ಏನು ಚರ್ಚಿಸುತ್ತದೆ ಹಾಗೂ ಮೋದಿಯ ಭವಿಷ್ಯ ಏನು ಎಂಬ ಬಗ್ಗೆ ದೇಶದ ಮಾಧ್ಯಮಗಳಲ್ಲಿ ಚರ್ಚೆ ನಡೆದಿತ್ತು. ದೆಹಲಿಯಿಂದ ಗೋವಾಕ್ಕೆ ಹೋಗುವ ವೇಳೆ ತಮ್ಮ ಜತೆಗೆ ಬರುವಂತೆ ಅಟಲ್‌ಜೀ ನನ್ನನ್ನು ಕೇಳಿದರು. ಪ್ರಧಾನಿಯವರ ವಿಶೇಷ ವಿಮಾನದಲ್ಲಿ ಪ್ರತ್ಯೇಕ ಸಮಾಲೋಚನಾ ಕೊಠಡಿಯಲ್ಲಿ ನಮ್ಮ ಜತೆ ವಿದೇಶಾಂಗ ಸಚಿವ ಜಸ್ವಂತ್‌ಸಿಂಗ್ ಹಾಗೂ ಸಂಪರ್ಕ ಮತ್ತು ವಾರ್ತಾ ಸಚಿವ ಅರುಣ್ ಶೌರಿ ಅವರೂ ಕುಳಿತಿದ್ದರು. ಎರಡು ಗಂಟೆಗಳ ಈ ಹಾರಾಟದಲ್ಲಿ ಪ್ರಾರಂಭದಲ್ಲೇ ಮಾತು ಗುಜರಾತ್‌ನತ್ತ ಹೊರಳಿತು. ಈ ವಿಷಯ ಬಂದಾಗ ಅಟಲ್‌ಜೀ ಸುದೀರ್ಘ ಕಾಲ ಮೌನಿಯಾದರು. ಯಾರೂ ಮಾತನಾಡಲಿಲ್ಲ. ಅನೇಕ ಕ್ಷಣಗಳ ನಂತರ ಜಸ್ವಂತ್‌ಸಿಂಗ್ ಮೌನ ಮುರಿದು 'ಏನು ಆಲೋಚನೆ ಮಾಡುತ್ತಿದ್ದೀರಿ, ಅಟಲ್‌ಜೀ' ಎಂದು ಕೇಳಿದರು.
ಅಟಲ್‌ಜೀ ಉತ್ತರಿಸಿದರು: 'ಕಮ್‌ಸೆ ಕಮ್ ಇಸ್ತೀಫೇ ಕಾ ಆಫರ್ ತೋ ಕರ್ತೆ' (ಕೊನೆ ಪಕ್ಷ ಮೋದಿಯವರು ರಾಜಿನಾಮೆ ಕೊಡುವುದಾಗಿ ಹೇಳಬಹುದಲ್ಲ?) 'ಮೋದಿ ರಾಜಿನಾಮೆಯಿಂದ ಗುಜರಾತ್ ಪರಿಸ್ಥಿತಿ ಸುಧಾರಿಸುವುದು ಎಂದಾದರೆ ಅವರು ರಾಜಿನಾಮೆ ನೀಡುವಂತೆ ನಾನು ಹೇಳುತ್ತೇನೆ. ಆದರೆ ಅದರಿಂದ ಉಪಯೋಗ ಆಗುವುದೆಂದು ನಾನು ನಂಬುವುದಿಲ್ಲ. ರಾಷ್ಟ್ರೀಯ ಮಂಡಲಿಯಾಗಲಿ, ಕಾರ್ಯಕಾರಿ ಸಮಿತಿಯಾಗಲಿ ರಾಜಿನಾಮೆ ಸ್ವೀಕರಿಸಬಹುದೆಂದು ಹೇಳಲಾಗದು' ಎಂದು ನಾನು ಹೇಳಿದೆ.
ನಾವು ಗೋವಾ ತಲುಪಿದ ಕೂಡಲೇ ನಾನು ಮೋದಿಯನ್ನು ಕರೆದು ರಾಜಿನಾಮೆಯ ಪ್ರಸ್ತಾಪ ಮಾಡುವಂತೆ ಹೇಳಿದೆ. ಅವರು ಕೂಡಲೇ ಒಪ್ಪಿದರು. ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಗುಜರಾತ್ ಬಗ್ಗೆ ಚರ್ಚೆ ಆಯಿತು. ಎಲ್ಲರ ಮಾತಿನ ನಂತರ ಮೋದಿ ಮಾತನಾಡಿ ಗುಜರಾತಿನಲ್ಲಿ ನಡೆದುದನ್ನು ಆದ್ಯಂತವಾಗಿ- ಗೋಧ್ರಾ ಹಾಗೂ ಗೋಧ್ರೋತ್ತರ ಘಟನೆಗಳನ್ನು ವಿವರಿಸಿದರು. ಗುಜರಾತಿನ ಕೋಮು ಸಂಬಂಧಿ ಚರಿತ್ರೆಯನ್ನೂ ಅವರು ವಿವರಿಸಿ ಹಿಂದಿನ ದಶಕಗಳಲ್ಲಿ ಕೋಮು ಗಲಭೆ ನಡೆದು ಅಹಮದಾಬಾದ್ ಹಾಗೂ ಇತರ ನಗರಗಳಲ್ಲಿ ಕ್ಷೋಭೆ ಉಂಟಾಗಿದ್ದು -ದಿನಗಟ್ಟಲೆ, ತಿಂಗಳುಗಟ್ಟಲೆ ಕರ್ಫ್ಯೂ ವಿಧಿಸಿದ್ದು ಇತ್ಯಾದಿ ವಿಷಯ ವಿವರಿಸಿದರು. 'ಆದರೂ ನನ್ನ ರಾಜ್ಯದಲ್ಲಿ ಆಗಿರುವುದಕ್ಕೆ ರಾಜ್ಯ ಸರಕಾರದ ಮುಖ್ಯಸ್ಥನಾಗಿ ನಾನು ಹೊಣೆ ಹೊತ್ತುಕೊಳ್ಳುತ್ತೇನೆ. ನಾನು ರಾಜಿನಾಮೆ ಕೊಡಲು ಸಿದ್ಧ' ಎಂದರು.
ಮೋದಿ ಇಷ್ಟು ಹೇಳುತ್ತಲೇ ನೂರಕ್ಕೂ ಅಧಿಕವಿದ್ದ ಸದಸ್ಯರು ಹಾಗೂ ಆಮಂತ್ರಿತ ಪಕ್ಷದ ಪದಾಧಿಕಾರಿಗಳು 'ಇಸ್ತೀಫಾ ಮತ್ ದೋ, ಇಸ್ತೀಫಾ ಮತ್ ದೋ' (ರಾಜಿನಾಮೆ ಕೊಡಬೇಡಿ, ರಾಜಿನಾಮೆ ಕೊಡಬೇಡಿ) ಎಂದು ಒಕ್ಕೊರಲಿನಿಂದ ಕೂಗಿದರು. ನಾನು ಈ ವಿಷಯವಾಗಿ ಪ್ರತ್ಯೇಕವಾಗಿ ಹಿರಿಯ ನಾಯಕರ ಅಭಿಪ್ರಾಯ ಪಡೆದೆ. 'ಅವರು ರಾಜಿನಾಮೆ ಕೊಡುವುದು ಬೇಡ' ಎಂದು ಪ್ರತಿಯೊಬ್ಬರೂ ಹೇಳಿದರು. ದಿ. ಪ್ರಮೋದ್ ಮಹಾಜನ್‌ರಂಥ ಕೆಲವರು 'ಸವಾಲ್ ಹೀ ನಹೀ ಉಠತಾ' (ರಾಜಿನಾಮೆಯ ಪ್ರಶ್ನೆಯೇ ಇಲ್ಲ) ಎಂದು ದೃಢವಾಗಿ ಹೇಳಿದರು. ಮೋದಿ ಬಚಾವಾದರು.
------
ಈಗ ಹೇಳಿ, ಮೋದಿಯವರು ಇಷ್ಟು ಎತ್ತರಕ್ಕೆ ಬೆಳೆದಿದ್ದರೆ, ಭವಿಷ್ಯತ್ತಿನ ಪ್ರಧಾನಿ ಎಂದು ಬಿಂಬಿತರಾಗಿದ್ದರೆ ಅದರಲ್ಲಿ ಆಡ್ವಾಣಿಯವರ ಯೋಗದಾನ ಎಷ್ಟಿದೆಯೆಂಬುದು ಗೊತ್ತಾದೀತು. ವಾಜಪೇಯಿ ಹಾಕಿದ ಗೆರೆಯನ್ನು ದಾಟಿ, ದಕ್ಕಿಸಿಕೊಂಡವರಿದ್ದರೆ ಅದು ಆಡ್ವಾಣಿ ಮಾತ್ರ, ಅದೂ ಮೋದಿಯವರಿಗಾಗಿ! ಆಡ್ವಾಣಿಯವರ ಶ್ರೀರಕ್ಷೆ ಇಲ್ಲದಿದ್ದರೆ ಎಲ್ಲಿಯ ಮೋದಿ? ಏನು ತಾನು? ವಾಜಪೇಯಿ ಆದಿಯಾಗಿ ದೇಶಕ್ಕೆ ದೇಶವೇ ಮೋದಿಯವರನ್ನು 'ಬಲಿ' ತೆಗೆದುಕೊಳ್ಳಲು ಹೊಂಚು ಹಾಕುತ್ತಿದ್ದಾಗ ಏಕಾಂಗಿಯಾಗಿ ಬೆಂಬಲಕ್ಕೆ ನಿಂತ ಆಡ್ವಾಣಿ, ಮೋದಿಯವರನ್ನು ರಕ್ಷಿಸಿದರು. ಅದೇ ಗೋಧ್ರಾ ಭೂತ ಇಂದಿಗೂ ಅವರನ್ನು ಕಾಡುತ್ತಿದೆ. ಒಂದು ವೇಳೆ ಅಂದು ಮೋದಿ ರಾಜಿನಾಮೆ ಕೊಟ್ಟಿದ್ದಿದ್ದರೆ ರಾಜಕೀಯವಾಗಿ ತಲೆ ಎತ್ತಲಾಗುತ್ತಿತ್ತಾ? ಈಗ ಹೇಳಿ.
2002ರ ಗೋವಾ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಏನಾಯ್ತು ಎಂಬುದನ್ನು ಒಂದು ಕ್ಷಣ ನರೇಂದ್ರ ಮೋದಿಯವರು ನೆನಪಿಸಿಕೊಂಡಿದ್ದರೆ, ಮೊನ್ನೆಯ ಕಾರ್ಯಕಾರಿಣಿಯಲ್ಲಿ ಆಡ್ವಾಣಿ ಗೈರು ಹಾಜರಿಯಲ್ಲಿ 'ಪಟ್ಟಾಭಿಷೇಕ' ಮಾಡಿಸಿಕೊಳ್ಳುತ್ತಿರಲಿಲ್ಲ!
- ವಿಶ್ವೇಶ್ವರ ಭಟ್
vbhat@me.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

