ಆಡ್ವಾಣಿ ರಿಟೈರ್ಡ್ ಹರ್ಟ್ ಆದರೆ ಯಾರಿಗೆ ನೋವು?
ಆಡ್ವಾಣಿಯವರನ್ನು ತುಸುಮಟ್ಟಿಗೆ ಸಮಾಧಾನಿಸಿ ರಾಜಿನಾಮೆ ಹಿಂತೆಗೆಸುವುದರಲ್ಲಿ ಬಿಜೆಪಿ ಸಫಲವಾಗಿರಬಹುದು. ಆದರೆ ಒಟ್ಟಾರೆ ಪ್ರಹಸನದಿಂದ ತಿಳಿದುಬರುವ ಸಂಗತಿ ಎಂದರೆ ಆಡ್ವಾಣಿಯವರ ಇನ್ನಿಂಗ್ಸ್ ಮುಗಿದಿದೆ.
ಆಡ್ವಾಣಿಯವರ ರಾಜಿನಾಮೆ ಪ್ರಕರಣವನ್ನು ಗ್ರಹಿಸುವುದಾದರೂ ಹೇಗೆ? ಇದೂ ಇತಿಹಾಸದ ಒಂದು ಮೈಲಿಗಲ್ಲೇ? ಏಕೆಂದರೆ 1969ರಲ್ಲಿ ಸಿಂಡಿಕೇಟ್ ಎಂದು ಕರೆಸಿಕೊಳ್ಳುತ್ತಿದ್ದ ಕಾಂಗ್ರೆಸ್ನ ಹಳೆ ರಚನೆಯನ್ನು ಇಂದಿರಾ ಗಾಂಧಿ ಇಲ್ಲವಾಗಿಸಿದರು. ಆನಂತರವೇ ನಾವು ಈಗ ನೋಡುತ್ತಿರುವ ಕಾಂಗ್ರೆಸ್ ರೂಪುಗೊಂಡಿದ್ದು. ಅಥವಾ ಕಳೆದ 9 ವರ್ಷಗಳಿಂದ ಸತ್ವಹೀನ ಪ್ರತಿಪಕ್ಷವಾಗಿದ್ದ ಬಿಜೆಪಿಯ ಮುಜುಗರದ ಪುಟಗಳಲ್ಲಿ ಇದೂ ಒಂದೇ? ಹೀಗೆ ಆಡ್ವಾಣಿ ಮುನಿಸಿಕೊಂಡು ತಣ್ಣಗಾಗಿದ್ದು 2014ರ ಲೋಕಸಭೆ ಚುನಾವಣೆ ಮೇಲೆ ಏನಾದರೂ ಪರಿಣಾಮ ಬೀರಬಲ್ಲದೇ? ಈ ನಿಟ್ಟಿನಲ್ಲಿ ಕೆಲ ಅಂಶಗಳನ್ನು ಹೀಗೆ ಬಿಚ್ಚಿಡಬಹುದು.
- ಆಡ್ವಾಣಿಯವರಿಗೆ 85ರ ಪ್ರಾಯವಾಗಿದೆ. ಯಾವುದೇ ಮಾನದಂಡದಿಂದ ನೋಡಿದರೂ ಅವರಿಗೆ ವಯಸ್ಸಾಗಿದೆ. ಈಗ ಬಿಜೆಪಿಯ ಚುನಾವಣೆ ಸಮಿತಿ ಅಧ್ಯಕ್ಷರು ಯಾರಾಗಬೇಕು, ಯಾರಾಗಬಾರದು ಎಂದೆಲ್ಲ ತಲೆಕೆಡಿಸಿಕೊಳ್ಳುವುದಕ್ಕಿಂತ ವೇದ ಪದ್ಧತಿಯ ಕೊನೆಯ ಹಂತವಾದ ಸನ್ಯಾಸವನ್ನು ಅಪ್ಪಿಕೊಳ್ಳಬೇಕಾದ ವಯಸ್ಸು ಇದಲ್ಲವೇ? ತಮ್ಮ ರಾಜಿನಾಮೆ ಪತ್ರದಲ್ಲಿ ಆಡ್ವಾಣಿಯವರು ಪಕ್ಷವನ್ನು ಕಟ್ಟಿದ ನಾನಾಜಿ ದೇಶ್ಮುಖ್ ಅವರನ್ನು ಉದಾಹರಿಸಿದ್ದರು. ಇದೇ ನಾನಾಜಿ ದೇಶ್ಮುಖ್ ಅವರು 1980ರಲ್ಲಿ ಹೇಳಿದ್ದರು- 70ರ ಪ್ರಾಯದಲ್ಲಿ ಸಂಘ ಪರಿವಾರಕ್ಕೆ ಸೇರಿದ ಎಲ್ಲ ರಾಜಕಾರಣಿಗಳೂ ನಿವೃತ್ತರಾಗಿ ಸಾಮಾಜಿಕ ಸೇವೆಯಲ್ಲಿ ಉಳಿದ ಆಯಸ್ಸನ್ನು ಕಳೆಯಬೇಕು- ಎಂದು. ಅದಿರಲಿ, ಆಡ್ವಾಣಿಯವರು ಪಕ್ಷದ ಪ್ರಮುಖ ಹುದ್ದೆಗಳಿಗೆ ರಾಜಿನಾಮೆ ನೀಡಿದ ಸಂದರ್ಭದಲ್ಲೇ ಎನ್ಡಿಎ ಅಧ್ಯಕ್ಷ ಸ್ಥಾನಕ್ಕೇಕೆ ರಾಜಿನಾಮೆ ಸಲ್ಲಿಸಲಿಲ್ಲ? ಭಾರತೀಯ ರಾಜಕಾರಣಿ ಇಂಥ ಅಧಿಕಾರದ ಆಟಗಳಿಂದ ಯಾವತ್ತೂ ಹೊರಬರಲಾರನೇ?
- 'ಬಹಳ ಸಮಯಗಳಿಂದ ಪಕ್ಷದ ಪ್ರಸ್ತುತ ಕಾರ್ಯವೈಖರಿ ಹಾಗೂ ಅದು ಸಾಗುತ್ತಿರುವ ದಿಕ್ಕನ್ನು ಒಪ್ಪಿಕೊಳ್ಳುವುದಕ್ಕೆ ಕಷ್ಟವಾಗುತ್ತಿದೆ. ದೇಶ ಮತ್ತು ದೇಶವಾಸಿಗಳೇ ಮುಖ್ಯ ಎನ್ನುತ್ತಿದ್ದ ಸಿದ್ಧಾಂತಬದ್ಧ ಪಕ್ಷದಲ್ಲಿ ತಾನಿದ್ದೇನೆ ಎಂದು ಅನ್ನಿಸುತ್ತಲೇ ಇಲ್ಲ. ನಮ್ಮ ಹೆಚ್ಚಿನ ನಾಯಕರು ವೈಯಕ್ತಿಕ ಅಜೆಂಡಾಕ್ಕೆ ಮಾತ್ರ ಸೀಮಿತರಾಗಿದ್ದಾರೆ' ಎಂಬುದು ರಾಜಿನಾಮೆ ಪತ್ರದಲ್ಲಿ ಆಡ್ವಾಣಿಯವರ ಅಭಿಮತವಾಗಿತ್ತು.
ವಾಸ್ತವ ಏನೆಂದರೆ, ಬಿಜೆಪಿಗೆ ನಿಕಟವಾಗಿರುವವರೇ ಹೇಳುವಂತೆ ಕಳೆದ 17 ವರ್ಷಗಳಲ್ಲಿ ಈ 'ಸಿದ್ಧಾಂತ ಬದ್ಧ ಪಕ್ಷ' ಕಾಂಗ್ರೆಸ್ನ ಇನ್ನೊಂದು ಅವತರಣಿಕೆ ಆಗಿದೆ ಅಷ್ಟೇ. ಅದೇ ಆಂತರಿಕ ಕಚ್ಚಾಟಗಳು, ಅಧಿಕಾರಕ್ಕಾಗಿ ತಮ್ಮೊಳಗೇ ಸಂಘರ್ಷ. ಬಿಜೆಪಿಯ ಜಾತಿ ರಾಜಕಾರಣವೂ ಇನ್ಯಾವ ಪಕ್ಷಗಳಿಗಿಂತ ಭಿನ್ನವಾಗಿಲ್ಲ. ಆರ್ಥಿಕವಾಗಿ ಅಸಾಧುವಾದ ಎಲ್ಲ ಯೋಜನೆಗಳನ್ನೂ ಬೆಂಬಲಿಸುತ್ತ, ತಾನು ಅಧಿಕಾರದಲ್ಲಿದ್ದಾಗ ಯಾವ ನೀತಿಗಳ ಪರವಾಗಿತ್ತೋ ಅದನ್ನೇ ಪ್ರತಿಪಕ್ಷ ಸ್ಥಾನದಲ್ಲಿ ನಿಂತು ವಿರೋಧಿಸುತ್ತ ದಿನಗಳೆಯುತ್ತಿರುವ ಪಕ್ಷ ಬಿಜೆಪಿ. ಅಂದಮೇಲೆ ಆಡ್ವಾಣಿ ಯಾವ ಸಿದ್ಧಾಂತಗಳ ಬಗ್ಗೆ ದೂರುತ್ತಿದ್ದಾರೆ? ಇನ್ನು ವೈಯಕ್ತಿಕ ಅಜೆಂಡಾಗಳ ವಿಷಯಕ್ಕೆ ಬರೋಣ. ಆಡ್ವಾಣಿಯವರು ಈ ಪ್ರಶ್ನೆ ಏಕೆ ಎತ್ತಿದ್ದಾರೆಂದರೆ ವೈಯಕ್ತಿಕ ಅಜೆಂಡಾ ಸಾಧಿಸುವುದರಲ್ಲಿ ತಮ್ಮನ್ನು ಉಳಿದವರು ಹಿಂದಕ್ಕಟ್ಟುತ್ತಿದ್ದಾರೆ ಎಂಬ ಆತಂಕ ಕಾಡಿರುವುದರಿಂದಲಷ್ಟೆ.
- ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ರಾಜಕೀಯ ಪಕ್ಷಗಳೆಲ್ಲ ಪೀಳಿಗೆಯ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಿವೆ. ಜನ ಅಂತಹ ಬದಲಾವಣೆಯನ್ನು ಬಯಸಿದ್ದಾರೆ ಎಂಬುದು ಅವರೆಲ್ಲರಿಗೂ ಮನದಟ್ಟಾಗಿದೆ. ಚೀನಾದಂಥ ರಾಷ್ಟ್ರ ಈ ಅಂಶವನ್ನು ಅದೆಷ್ಟು ಶಿಸ್ತುಬದ್ಧವಾಗಿ ಅನುಷ್ಠಾನಕ್ಕೆ ತರುತ್ತಿದೆ ಎಂಬುದನ್ನು ಗಮನಿಸಬೇಕು. ಪ್ರತಿ ದಶಕಕ್ಕೂ ಅದು ಅನುಭವ ಮತ್ತು ಶಕ್ತಿಗಳ ಹದಮಿಳಿತವಿರುವ ಹೊಸ ನಾಯಕನನ್ನು ಮುನ್ನೆಲೆಗೆ ತರುತ್ತಿದೆ. ಇತ್ತೀಚೆಗೆ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಚೀನಾದ ಯುವ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಭೇಟಿಯಾದಾಗ ಅವರಿಬ್ಬರ ನಡುವಿನ ವ್ಯತ್ಯಾಸ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. ಜಗತ್ತಿನ ವಿದ್ಯಮಾನಗಳ ಬಗ್ಗೆ ಪಕ್ಕಾ ಅರಿವು, ನಿಖರ ದೃಷ್ಟಿಕೋನ ಹಾಗೂ ಸ್ಫುಟವಾದ ಇಂಗ್ಲಿಷ್ ಉಚ್ಛಾರಣೆಗಳ ಮೂಲಕ ಜಿನ್ಪಿಂಗ್ ನಳನಳಿಸುತ್ತಿದ್ದರು. ಇದೇ ಹಿನ್ನೆಲೆಯಲ್ಲಿ ಬಿಜೆಪಿಯ ಭವಿಷ್ಯದ ನೇತಾರನಿಗೆ ಯುವ ವರ್ಚಸ್ಸಿರಬೇಕು ಎಂಬ ಆರೆಸ್ಸೆಸ್ನ ಅಭಿಪ್ರಾಯವೂ ಸರಿಯಾಗಿಯೇ ಇದೆ. ಮೋದಿ ಈ ಯುವ ಗುಂಪಿನಲ್ಲಿ ಬರುತ್ತಾರೋ ಇಲ್ಲವೋ ಎಂಬುದಕ್ಕಿಂತ ಆ ಪಾತ್ರಕ್ಕೆ ಅವರೇ ಸೂಕ್ತ ಎಂದು ಎಲ್ಲ ಸಮೀಕ್ಷೆಗಳು ಹಾಗೂ ಬಿಜೆಪಿಯ ಆಂತರಿಕ ತುಡಿತಗಳು ಸ್ಪಷ್ಟಪಡಿಸಿವೆ. ಬಿಜೆಪಿಯ ನವ ಪೀಳಿಗೆಯ ರಾಜಕಾರಣಿಗಳ ಪೈಕಿ ನರೇಂದ್ರ ಮೋದಿ ಅವರಷ್ಟು ಜನಪ್ರಿಯರು ಯಾರೂ ಇಲ್ಲ. ಅಷ್ಟಾಗಿಯೂ ಶಿಸ್ತುಬದ್ಧ ಪಕ್ಷ ಎನಿಸಿಕೊಂಡ ಬಿಜೆಪಿಯಲ್ಲಿ ಮೋದಿ ಉಮೇದುವಾರಿಕೆಗೆ ಒತ್ತಾಸೆ ವ್ಯಕ್ತಪಡಿಸಿ ಆಡ್ವಾಣಿ ನಿವಾಸದೆದುರು ಪ್ರತಿಭಟನೆಗಳು ನಡೆದಿದ್ದು ಒಪ್ಪತಕ್ಕ ಅಂಶವಲ್ಲ. ಇದೂ ಬಿಜೆಪಿ ಹೇಗೆ ಕಾಂಗ್ರೆಸ್ನಂತೆಯೇ ಅರಾಜಕವಾಗಿದೆ ಎಂಬುದರ ಸಂಕೇತ.
- ಇಲ್ಲೊಂದು ಪ್ರಶ್ನೆಯಿದೆ. ಏಕೀಕೃತ ಬಿಜೆಪಿ ಎಂಬುದು ಈಗ ಉಳಿದುಕೊಂಡಿದೆಯೇ? ಗುಜರಾತ್ ಬಿಜೆಪಿ ಎಂಬುದೇ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಮೀರಿಸುವಂತೆ ಬೆಳೆದು ನಿಂತಿದೆ. ದೆಹಲಿಯಲ್ಲಿ ಚುನಾವಣೆ ಕಣಕ್ಕೆ ಇಳಿಯಲು ನಾಚಿಕೆ ಪಟ್ಟುಕೊಂಡಿರುವ ಸಹೋದ್ಯೋಗಿಗಳೊಂದಿಗೆ ಶಿವರಾಜ್ ಸಿಂಗ್ ಚೌಹಾಣ್, ರಮಣ್ ಸಿಂಗ್ ಇವರೆಲ್ಲ ಎಷ್ಟರಮಟ್ಟಿಗೆ ಬೆಸಗೊಂಡಿದ್ದಾರೆ? ಆಡ್ವಾಣಿಯವರ ರಾಜಿನಾಮೆ ಪ್ರಹಸನದಲ್ಲಿ ತಿಳಿದುಬಂದ ಆಶ್ಚರ್ಯಕರ ವಿಚಾರ ಎಂದರೆ ಚೌಹಾಣ್ ಹಾಗೂ ರಮಣ್ ಸಹ ಮೋದಿ ಅಧಿಕಾರಕ್ಕೆ ತಣ್ಣಗೆ ಶರಣಾಗಿರುವ ಅಂಶ. ಆಡ್ವಾಣಿ ರಾಜಿನಾಮೆ ಸಲ್ಲಿಸುತ್ತಿದ್ದಂತೆ ಬಿಜೆಪಿ ಇಬ್ಭಾಗವಾಗಲಿದೆ ಎಂಬಂತೆ ಕೆಲವರು ಮಾತನಾಡಿದರು. ಅಂಥ ಯಾವ ಸಾಧ್ಯತೆಗಳೂ ಇರಲಿಲ್ಲ. ಏಕೆಂದರೆ ಚೌಹಾಣ್, ರಮಣ್ ಸಿಂಗ್ರಂಥ ಪ್ರಾದೇಶಿಕ ಹುಲಿಗಳು ಅವರ ಪ್ರದೇಶದಲ್ಲೇ ಸುಖವಾಗಿದ್ದಾರೆ. ಬಿಜೆಪಿಯ ಕೇಂದ್ರವೂ ಪಕ್ಷದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಅವರ ಇಚ್ಛೆಯಂತೆ ಇರುವುದಕ್ಕೆ ಬಿಟ್ಟಿದೆ. ಅವರ್ಯಾರಿಗೂ ದೆಹಲಿ ಗದ್ದುಗೆಯ ತಲುಬಿಲ್ಲ.
- ಆಡ್ವಾಣಿಯವರ ಪ್ರಹಸನ 2014ರ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದೇ? ಆ ಸಾಧ್ಯತೆಯೂ ಇಲ್ಲ. ಪ್ರಧಾನಿಯಾಗುವ ಅವಕಾಶ ಆಡ್ವಾಣಿಯವರಿಗೂ ಬಂದಿತ್ತು ಹಾಗೂ ಅವರದನ್ನು ಸೋತರು. ಗೃಹ ಸಚಿವ ಹಾಗೂ ಉಪ ಪ್ರಧಾನಿಯಾಗಿಯೂ ಅವರು ಜನರ ನಿರೀಕ್ಷೆಗಳಿಗೆ ತಕ್ಕಂತಿರಲಿಲ್ಲ. ಸರ್ದಾರ್ ಪಟೇಲರಂಥವರ ವ್ಯಕ್ತಿತ್ವಗಳಿಗೆ ಹೋಲಿಸಿದಾಗಂತೂ ಇವರು ತುಂಬ ಕುಬ್ಜರಾಗಿಯೇ ಕಾಣುತ್ತಿದ್ದರು. ಲೋಕಸಭೆಯಲ್ಲಿ 2 ಸ್ಥಾನಗಳನ್ನು ಹೊಂದಿದ್ದ ಬಿಜೆಪಿಯನ್ನು 1990ರಲ್ಲಿ 180 ಸ್ಥಾನಗಳಿಗೆ ತೆಗೆದುಕೊಂಡು ಹೋದವರು ಎಂಬುದನ್ನು ಒಪ್ಪೋಣ. ಅದು ಹಳೆಕತೆ. ನಂತರ ಅವರ ಸ್ವವಿವರವು ಝಗಮಗಿಸುವಂಥ ಯಾವ ಸಾಧನೆಗಳನ್ನೂ ಆಡ್ವಾಣಿ ಮಾಡಲಿಲ್ಲ. ಮತದಾರರಿಗೆ ಈಗ ಆಡ್ವಾಣಿ ಪ್ರಸ್ತುತರಾಗಿದ್ದಾರೆಯೇ ಎಂಬುದು ಅತ್ಯಂತ ಚರ್ಚಾರ್ಹ ವಿಷಯ. ಅವರು ಹೀಗೆಯೇ ನೇಪಥ್ಯಕ್ಕೆ ಸರಿದುಹೋದರೂ ಬಿಜೆಪಿ ಇನ್ನಷ್ಟು ಹೊಸತಾಗಿ ಹಾಗೂ ಶಕ್ತಿಶಾಲಿಯಾಗಿ ಹೊರಹೊಮ್ಮುವುದೇ ಹೊರತು ಇನ್ಯಾವ ನಷ್ಟವಾಗದು.
- ಕೊನೆಯದಾಗಿ, ಚುನಾವಣೆ ಸಮಿತಿಗೆ ಮೋದಿ ಸಾರಥ್ಯವನ್ನು ಆಡ್ವಾಣಿ ಏಕೆ ವಿರೋಧಿಸುತ್ತಾರೆ? ಗೋಧ್ರೋತ್ತರ ಹಿಂಸೆಗಳ ಕಲೆ ಅವರಲ್ಲಿ ಉಳಿದುಕೊಂಡಿದೆ ಎಂದೇ? ಆದರೆ ಆ ಸಮಯದಲ್ಲಿ ಮೋದಿ ರಾಜಿನಾಮೆ ನೀಡಲಿ ಎಂಬ ವಾಜಪೇಯಿ ಅಭಿಪ್ರಾಯವನ್ನು ವಿರೋಧಿಸಿ ಅವರನ್ನು ಉಳಿಸಿದ್ದು ಆಡ್ವಾಣಿಯವರೇ ಅಲ್ಲವೇ? ಹಿಂದು ಮತ್ತು ಮುಸ್ಲಿಂ ಸಮುದಾಯಗಳ ಸುಮಾರು 2 ಸಾವಿರ ಪ್ರಾಣಗಳನ್ನು ಆಹುತಿಯಾಗಿಸಿದ್ದು ಆಡ್ವಾಣಿ ರಥಯಾತ್ರೆಯೇ ಅಲ್ಲವೇ? ಇದೇ 'ಸಿದ್ಧಾಂತನಿಷ್ಠತೆ' ಬಗ್ಗೆ ಆಡ್ವಾಣಿ ಮಾತನಾಡುತ್ತಿದ್ದಾರೆಯೇ? ಹಿಂದುತ್ವವನ್ನು ಕೇಂದ್ರಸ್ಥಾನಕ್ಕೆ ತಂದವರೇ ಆಡ್ವಾಣಿ. ಅಂದಮೇಲೆ ಆಡ್ವಾಣಿ ಮಾತುಗಳಲ್ಲಿ ಯಾವ ತರ್ಕವಿದೆ?
ರಾಜಿನಾಮೆ ವಾಪಾಸು ಪಡೆದರೂ ಆಡ್ವಾಣಿ 'ರಿಟೈರ್ಡ್ ಹರ್ಟ್' ಆಗಿರುವುದು ಸ್ಪಷ್ಟ. ಕಾಂಗ್ರೆಸ್ ವಿರುದ್ಧ ಪ್ರಬಲ ಪ್ರತಿಪಕ್ಷದ ಉಗಮಕ್ಕೆ ಕಾರಣರಾದವರಿಗೆ ಇಂಥ ಸ್ಥಿತಿ ಬರಬಾರದಿತ್ತು. ಆದರೆ ಏನು ಮಾಡೋದು ಹೇಳಿ? ಭಾರತದಲ್ಲಿ ಗೌರವಯುತವಾಗಿ ನೇಪಥ್ಯಕ್ಕೆ ಸರಿಯುವುದು ಎಂಬ ಪದ್ಧತಿಯೇ ಇಲ್ಲ!
- ಸಂದೀಪನ್ ದೇವ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

