ಅಂಕಣಗಳು

ಮೋದಿ ಮೋಡಿಯತ್ತ ಯಡಿಯೂರಪ್ಪ ಗಾಡಿ...!

ನಂಬಿಕೆ, ವಿಶ್ವಾಸ, ಪರಹಿತ ಸಹಿಷ್ಣುತೆ ಬರದಿಂದ ಹೋಳಾದ ರಾಜ್ಯ ಬಿಜೆಪಿ...

ಮೋದಿ ಮೋಡಿಯತ್ತ ಯಡಿಯೂರಪ್ಪ ಗಾಡಿ...!
ಬಿ.ಎಸ್.ಯಡಿಯೂರಪ್ಪ, ನರೇಂದ್ರ ಮೋದಿ
Published On :

ನಂಬಿಕೆ, ವಿಶ್ವಾಸ, ಪರಹಿತ ಸಹಿಷ್ಣುತೆ ಬರದಿಂದ ಹೋಳಾದ ರಾಜ್ಯ ಬಿಜೆಪಿ-ಕೆಜೆಪಿ ನಡುವೆ ಸ್ನೇಹ ಮರುಸ್ಥಾಪನೆ ಭಾವನೆಗಳ ಮುಂಗಾರು ಆರಂಭವಾಗಿದೆ.
ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ನರೇಂದ್ರ ಮೋದಿ ಮತ್ತು ಲಾಲ್‌ಕೃಷ್ಣ ಆಡ್ವಾಣಿ ನಡುವೆ ಉಚ್ಛ ನಾಯಕತ್ವಕ್ಕಾಗಿ ನಡೆದ ಸಂಘರ್ಷ ತಾರ್ಕಿಕ ಅಂತ್ಯ ಕಂಡಿದೆ. ಯಡಿಯೂರಪ್ಪನವರ ಬಗ್ಗೆ ಮೃದು ಧೋರಣೆ ಹೊಂದಿರುವ ಮೋದಿ ಉನ್ನತ ಸ್ಥಾನಕ್ಕೆ ಏರಿದ್ದಾರೆ. ರಾಷ್ಟ್ರಮಟ್ಟದ ಆಗು ಹೋಗುಗಳ ನೆರಳು ರಾಜ್ಯ ಬಿಜೆಪಿ ಮೇಲೂ ಬಿದ್ದಿದ್ದು, ಕೆಜೆಪಿಯಲ್ಲೂ ಪ್ರತಿದ್ವನಿಸುತ್ತಿದೆ ವಿಧಾನಸಭೆ ಚುನಾವಣೆಯಲ್ಲಿ ಬೋರಲು ಬಿದ್ದಿರುವ ಉಭಯ ಪಕ್ಷಗಳಲ್ಲಿ ಮುಂಬರುವ ಲೋಕಸಭೆ ಚುನಾವಣೆ ಹೊತ್ತಿಗಾದರೂ ವಿಲೀನವಾಗಬೇಕು ಎಂಬ ಆಸೆಯ ಟಿಸಿಲೊಡೆದಿದೆ. ಆದರೆ ಪ್ರತಿಷ್ಠೆ ಮತ್ತು ಆತ್ಮಾಭಿಮಾನ ಈ ಏಕತೆ ಪ್ರಕ್ರಿಯೆ ಆರಂಭ ಮುಹೂರ್ತವನ್ನು ಮುಂದಕ್ಕೆ ತಳ್ಳುತ್ತಿದೆ.
ಹೌದು, ರಾಜ್ಯ ಬಿಜೆಪಿ ಮೊದಲ ಹಂತದ ಅನೇಕ ಮುಖಂಡರಿಗೆ ಬಿಜೆಪಿ-ಕೆಜೆಪಿ ಒಂದಾಗುವುದು ಇಷ್ಟವಿಲ್ಲ. ಅವರೆಲ್ಲರೂ ಸಹಜವಾಗಿಯೇ ಯಡಿಯೂರಪ್ಪ ಅವರ ಕಟ್ಟಾ ವಿರೋಧಿಗಳು. ಆದರೆ ಪಕ್ಷದ ಭವಿಷ್ಯದ ಬಗ್ಗೆ ತಮ್ಮದೇ ಆದ ಶೈಲಿಯಲ್ಲಿ ವಿಶ್ಲೇಷಣೆ ಮಾಡುತ್ತಿರುವ ಎರಡನೇ ಹಂತದ ನಾಯಕರು, ಶಾಸಕರು ಹಾಗೂ ಕಾರ್ಯಕರ್ತರು ಬಿಜೆಪಿಗೆ ಯಡಿಯೂರಪ್ಪ ಅವರನ್ನು ಮತ್ತೆ ಕರೆತರಬೇಕೆಂಬ ಹವಣಿಕೆಯಲ್ಲಿದ್ದಾರೆ. ಅತ್ತ ಬಿಜೆಪಿಗೆ ಬರಬೇಕೆಂಬ ಬಯಕೆ ಯಡಿಯೂರಪ್ಪ ಅವರಲ್ಲೂ ಚಿಗುರಿದೆ. ಆದರೆ ತಮ್ಮ ಅಂತರ್ಯದ ಇಂಗಿತಕ್ಕೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ಬೇಡಿಕೆ ಹೆಚ್ಚಿಸಿಕೊಳ್ಳುವ ತವಕದಲ್ಲಿದ್ದಾರೆ.
ಯಾರು ಏನೇ ಹೇಳಲಿ ಒಂದು ಮಾತಂತೂ ಸತ್ಯ. ಬಿಜೆಪಿಗೆ ಯಡಿಯೂರಪ್ಪ ಹಾಗೂ ಯಡಿಯೂರಪ್ಪ ಅವರಿಗೆ ಬಿಜೆಪಿ ಅನಿವಾರ್ಯ ಎಂಬುದನ್ನು ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಸಾಬೀತು ಮಾಡಿದೆ. ಮೊದಲೇ ಆಡಳಿತವಿರೋಧಿ ಅಲೆಯಲ್ಲಿ ಸಿಲುಕಿದ್ದ ಬಿಜೆಪಿಯನ್ನು ಅದರಿಂದ ಸಿಡಿದು ಹೊರಹೋದ ಯಡಿಯೂರಪ್ಪ ಮುಳುಗಿಸಿದ್ದಾರೆ. ಜತೆಗೆ ತಾವೂ ಮುಳುಗಿದ್ದಾರೆ. ಯಾವುದೇ ಒಂದು ಪಕ್ಷ ಆಂತರಿಕ ಕಲಹದಿಂದ ಚೂರಾದಾಗ ಕಂಡು-ಕೇಳರಿಯದ್ದನ್ನು ಸಾಧಿಸಿಯೇ ತೀರುವ ಭ್ರಮೆ ಉಭಯ ತುಂಡುಗಳನ್ನು ಆವರಿಸಿಕೊಂಡಿರುತ್ತದೆ. ಆದರೆ ಅದು ಭ್ರಮೆ ಎಂದು ತಿಳಿಯುವ ಹೊತ್ತಿಗೆ ಮುಗ್ಗರಿಸಿ ಬಿದ್ದಿರುತ್ತವೆ. ಈಗ ರಾಜ್ಯ ಬಿಜೆಪಿ ಮತ್ತು ಕೆಜೆಪಿ ಎರಡೂ ಕೂಡ ಇಂತಹುದೇ ಸ್ಥಿತಿಯಲ್ಲಿವೆ. ಇವುಗಳನ್ನು ಮೇಲೆತ್ತಿ ಅಕ್ಕಪಕ್ಕ ನಿಲ್ಲಿಸಲು ಇರುವ ದಾರಿಗಳ ಅನ್ವೇಷಣೆಯಲ್ಲಿ ಕಾರ್ಯಕರ್ತರು ನಿರತರಾಗಿದ್ದಾರೆ.
ಬಿಜೆಪಿ ಮತ್ತು ಕೆಜೆಪಿ ವಿಲೀನ ಅಗತ್ಯದ ಬಗ್ಗೆ ಎರಡೂ ಪಾಳೆಯಗಳಲ್ಲಿ ಚಿಂತನೆ ಮೂಡಲು ಕಾರಣಗಳು ಇಲ್ಲದಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಡೆದ ಒಟ್ಟು ಮತಗಳು ಶೇಕಡಾ 35. ಪ್ರತಿಪಕ್ಷ ಜೆಡಿಎಸ್ ಪಡೆದದ್ದು ಶೇಕಡಾ 20. ಬಿಜೆಪಿ 19.64 ಹಾಗೂ ಕೆಜೆಪಿ ಶೇಕಡಾ 9.73. ಕೆಜೆಪಿ ಪಡೆದ ಮತಗಳಿಂದಾಗಿ ಬಿಜೆಪಿ 35 ಕಡೆ ಸೋಲು ಅನುಭವಿಸಿದೆ. ಆಂತರಿಕ ಕಚ್ಚಾಟ, ಭ್ರಷ್ಟಾಚಾರ, ಹಗರಣಗಳ ಸರಣಿಯಿಂದ ಉದ್ಭವಿಸಿದ ಆಡಳಿತವಿರೋಧಿ ಅಲೆಯ ನಡುವೆಯೂ ಬಿಜೆಪಿ ಮತ್ತು ಕೆಜೆಪಿ ಎರಡೂ ಪಕ್ಷಗಳು ಪಡೆದ ಮತಗಳನ್ನು ಒಗ್ಗೂಡಿಸಿದರೆ ಶೇಕಡಾ 30 ದಾಟುತ್ತದೆ. ಈ ಅಂಕಿ-ಅಂಶಗಳ ಪ್ರಕಾರ ಒಂದೊಮ್ಮೆ ಬಿಜೆಪಿ ಮತ್ತು ಯಡಿಯೂರಪ್ಪ ಒಟ್ಟಾಗಿ ಇದ್ದಿದ್ದರೆ 35 ಸ್ಥಾನಗಳು ಹೆಚ್ಚಾಗಿ ಬರುವ ಸಾಧ್ಯತೆ ಇತ್ತು. ಈ ಸ್ಥಾನಗಳಲ್ಲಿ ಬಹುತೇಕ ಕಾಂಗ್ರೆಸ್‌ಗೇ ಸೇರಿದ್ದಾಗುತ್ತಿತ್ತು. ಆಗ ಕಾಂಗ್ರೆಸ್ ಸರಕಾರ ರಚಿಸಲು ಅನ್ಯ ಪಕ್ಷಗಳ ಮೊರೆ ಹೋಗಬೇಕಿತ್ತು. ಈಗಿರುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರುವುದು ಅಸಾಧ್ಯವಾಗುತ್ತಿತ್ತು. ಬಿಜೆಪಿ ಮತ್ತು ಜೆಡಿಎಸ್ ಒಗ್ಗೂಡಿ ಸರಕಾರ ರಚಿಸುವ ಸಾಧ್ಯತೆ ಇತ್ತು. ಇದು ಮರಣೋತ್ತರ ಪರೀಕ್ಷೆಯ ವರದಿ ಆಗಿದ್ದರೂ ಸಾಧ್ಯಾ-ಸಾಧ್ಯತೆಗಳನ್ನು ತಳ್ಳಿ ಹಾಕುವಂತಿರಲಿಲ್ಲ. ಈ ಸಾಧ್ಯಾ-ಸಾಧ್ಯತೆಯ ಪರಾಮರ್ಶೆಗೆ ಇಳಿದಿರುವ ಬಿಜೆಪಿ ಮತ್ತು ಕೆಜೆಪಿ ಲೋಕಸಭೆ ಚುನಾವಣೆ ಹೊತ್ತಿಗಾದರೂ ಒಗ್ಗೂಡಲು ಇರುವ ಮಾರ್ಗೋಪಾಯಗಳನ್ನು ಹುಡುಕುತ್ತಿವೆ.
ನಿಜ ಹೇಳಬೇಕೆಂದರೆ ಬಿಜೆಪಿ ಮೊದಲ ಹಂತದ ನಾಯಕರಾದ ಅನಂತಕುಮಾರ್, ಸದಾನಂದಗೌಡ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಪ್ರಹ್ಲಾದ ಜೋಶಿ ಅವರಿಗೆ ಯಡಿಯೂರಪ್ಪನವರ ಪಕ್ಷ ಮರುಪ್ರವೇಶ ಕಿಂಚಿತ್ತೂ ಇಷ್ಟವಿಲ್ಲ. ಆದರೆ ಬಹುತೇಕ ಶಾಸಕರು ಹಾಗೂ ಕಾರ್ಯಕರ್ತರಿಗೆ ಪಕ್ಷದ ಏಳ್ಗೆ ದೃಷ್ಟಿಯಿಂದ ಯಡಿಯೂರಪ್ಪ ಬಿಜೆಪಿಗೆ ಬರುವುದು ಬೇಕಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಬೇಕೆಂದು ವರಿಷ್ಠರನ್ನು ಕೋರಿ ಶಾಸಕಾಂಗ ಪಕ್ಷದ ಸಭೆ ನಿರ್ಣಯ ಕೈಗೊಂಡಿರುವುದು ಇದಕ್ಕೆ ಸಾಕ್ಷಿ. ಇದು ರಾಷ್ಟ್ರೀಯ ಮಟ್ಟದಲ್ಲಿ ನಿರ್ಣಯ ಆಗಬೇಕಾದ ವಿಷಯ ಎಂದು ಅನಂತಕುಮಾರ್ ಮತ್ತಿತರ ಮುಖಂಡರು ಹೇಳಿದರೂ ಶಾಸಕಾಂಗ ಸಭೆ ಅದಕ್ಕೆ ಸೊಪ್ಪು ಹಾಕದೇ ಹೋದದ್ದು ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶ. 'ವರಿಷ್ಠರ ತೀರ್ಮಾನ ಏನೇ ಇರಲಿ, ನಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದೇವೆ' ಎಂದು ಹೇಳುವ ಧಾರ್ಷ್ಟ್ಯವನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ಪ್ರದರ್ಶಿಸಿದ್ದಾರೆ. ಆ ಮೂಲಕ ತಮ್ಮ ನಿಲುವಿನ ಬದ್ಧತೆಯನ್ನೂ ತೋರ್ಪಡಿಸಿದ್ದಾರೆ. ಇಂತಹ ಶಾಸಕರ ಒಲವು ಕೂಡ ಬಿಜೆಪಿ ಮತ್ತು ಕೆಜೆಪಿ ವಿಲೀನ ಪರ ಇರುವುದರಿಂದ ಕಾರ್ಯಕರ್ತರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಹಾಗೆಯೇ ಮೊದಲ ಹಂತದ ನಾಯಕರ ನಿದ್ದೆಗೆಡಿಸಿದೆ.
ಮೊದಲ ಹಂತದ ನಾಯಕರ ನಿದ್ದೆಗೆಡಲು ಕಾರಣಗಳು ಇಲ್ಲದಿಲ್ಲ. ಯಡಿಯೂರಪ್ಪ ಮತ್ತೆ ಪಕ್ಷಕ್ಕೆ ಬಂದರೆ ತಮ್ಮ ನಾಯಕತ್ವಕ್ಕೆ ಸಂಚಕಾರ, ತಾವೆಲ್ಲಿ ಪಕ್ಕಕ್ಕೆ ಸರಿದು ಹೋಗಬೇಕಾಗುತ್ತದೋ ಎಂಬ ಭೀತಿ ಅವರದು. ಹೀಗಾಗಿಯೇ ಯಡಿಯೂರಪ್ಪ ಅವರಿಂದಾಗಿಯೇ ರಾಜ್ಯ ಬಿಜೆಪಿಗೆ ಕೆಟ್ಟ ಹೆಸರು ಬಂದದ್ದು. ಈಗ ಹೇಗಿದ್ದರೂ ಆಚೆ ಹೋಗಿದ್ದಾರೆ. ವಿಧಾನಸಭೆ ಚುನಾವಣೆಯೂ ಮುಗಿದಿದೆ. ಮುಂದಿನ ಚುನಾವಣೆ ಹೊತ್ತಿಗೆ ಬಿಜೆಪಿ ತನ್ನ ಕಾಲ ಮೇಲೆ ತಾನು ನಿಲ್ಲುತ್ತದೆ. ಹೀಗಾಗಿ ಅವರನ್ನು ಕರೆತರುವುದು ಬೇಡ ಎನ್ನುತ್ತಿದ್ದಾರೆ. ಆದರೆ ಎರಡನೇ ಹಂತದ ನಾಯಕರು ಹಾಗೂ ಶಾಸಕರ ನಿಲುವು ಬೇರೆ. ರಾಜ್ಯದ ಪ್ರಬಲ ಲಿಂಗಾಯತ ಸಮುದಾಯ ಯಡಿಯೂರಪ್ಪ ಕಾರಣಕ್ಕೆ ಬಿಜೆಪಿಯಿಂದ ವಿಮುಖವಾಗಿದೆ. ಪರ್ಯಾಯ ಎಂದು ಕಾಂಗ್ರೆಸ್ ಕೈ ಹಿಡಿದಿದೆ. ಆದರೆ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ (ಅಹಿಂದ) ಸಮುದಾಯಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿದೆ. ಹೀಗಾಗಿ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬಂದರೆ ಲಿಂಗಾಯತ ಸಮುದಾಯ ಕೂಡ ಇತ್ತ ವಾಲುತ್ತದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇದರಿಂದ ಅನುಕೂಲ ಆಗುತ್ತದೆ ಎಂಬ ತರ್ಕ ಅವರದು.
ಆದರೆ ಇದನ್ನು ಕಾರ್ಯಗತ ಮಾಡುವುದು ಹೇಗೆ ಎಂಬ ಯೋಚನೆ ಅವರದು. ಏಕೆಂದರೆ ಮೊದಲ ಹಂತದ ನಾಯಕರು ಮಾತಿಗೆ ಹೋಗುವುದಿಲ್ಲ. ಎರಡನೇ ಹಂತದ ನಾಯಕರು ಹೋದರೆ ಯಡಿಯೂರಪ್ಪ ಕ್ಯಾರೆ ಅನ್ನುವುದಿಲ್ಲ. ಹೀಗಾಗಿ ಇದಕ್ಕೆ ಚಾಲನೆ ನೀಡಬೇಕಾದರೆ ರಾಷ್ಟ್ರೀಯ ನಾಯಕರೇ ಆಗಬೇಕು. ಹೀಗಾಗಿಯೇ ಮೇಲ್ಮನೆ ಸದಸ್ಯ ಗೋ. ಮಧುಸೂದನ ಅವರು ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದು ಯಡಿಯೂರಪ್ಪನವರ ಜತೆ ಸಂಧಾನ ಮಾತುಕತೆ ಆರಂಭಿಸಿ ಎಂದು ಕೋರಿಕೆ ಸಲ್ಲಿಸಿದ್ದಾರೆ.
ಇನ್ನು ಯಡಿಯೂರಪ್ಪನವರ ವಿಚಾರ. ಈವರೆಗೂ ಬಿಜೆಪಿಯಲ್ಲಿ ಆಡ್ವಾಣಿ ಮತ್ತು ಅನಂತ್‌ಕುಮಾರ್ ಅವರ ಮಾತೇ ನಡೆಯುತ್ತಿತ್ತು. ಹೀಗಾಗಿ ಯಡಿಯೂರಪ್ಪ ಅವರು ಒಳಗೆ ಬರಲು ಆಗುತ್ತಿರಲಿಲ್ಲ. ಬಂದರೂ ಬೆಲೆ ಸಿಗುತ್ತಿರಲಿಲ್ಲ. ಆದರೆ, ಈಗ ಆಡ್ವಾಣಿ ಮತ್ತು ಅನಂತ್‌ಕುಮಾರ್‌ಗೆ ಆಗದ ನರೇಂದ್ರ ಮೋದಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ. ಬಿಜೆಪಿ ಜತೆ ಹೋಗಲು ಯಡಿಯೂರಪ್ಪ ಅವರಿಗೆ ಇದ್ದ ಸಮಸ್ಯೆಯೂ ದೂರವಾಗುತ್ತಿದೆ. ಏಕೆಂದರೆ, ಅವರು ಮೋದಿ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆಡ್ವಾಣಿ ಮತ್ತು ಅನಂತ್‌ಕುಮಾರ್ ಅವರ ವಿರೋಧಿ ಎಂಬ ಕಾರಣಕ್ಕೆ ಮೋದಿಗೆ ಹತ್ತಿರವಾಗಿದ್ದಾರೆ.  ಬಿಜೆಪಿಗೆ ಯಡಿಯೂರಪ್ಪ ಅವರ ಬಗ್ಗೆ ಮತ್ತು ಯಡಿಯೂರಪ್ಪ ಅವರಿಗೆ ಮೋದಿ ಬಗ್ಗೆ ಮೃದು ಧೋರಣೆ ಇದೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುವುದು ಸದ್ಯಕ್ಕೆ ಮೋದಿ ಅವರ ಮುಂದಿರುವ ಸವಾಲು. ಈ ಕಾರಣಕ್ಕಾಗಿ ಯಾವ ರಾಜ್ಯವನ್ನೂ ಅವರು ನಿರ್ಲಕ್ಷಿಸುವಂತಿಲ್ಲ. ಅದರಲ್ಲೂ ದಕ್ಷಿಣ ಭಾರತದಕರ್ನಾಟಕದಲ್ಲಿ ಮಾತ್ರ ಬಿಜೆಪಿ ಬಲಾಢ್ಯವಾಗಿರುವುದು. ಇಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಬೇಕಿದ್ದರೆ ಪಕ್ಷಕ್ಕೆ ಯಡಿಯೂರಪ್ಪ ಅನಿವಾರ್ಯತೆ ಏನು ಎಂಬುದು ಮೋದಿಯವರಿಗೆ ಚೆನ್ನಾಗಿ ಗೊತ್ತಿದೆ. ಯಡಿಯೂರಪ್ಪ ನೇತೃತ್ವದಲ್ಲಿ 2008ರಲ್ಲಿ ಬಿಜೆಪಿ 110 ಸ್ಥಾನಗಳನ್ನು ಪಡೆದಿತ್ತು. ಈಗ ಯಡಿಯೂರಪ್ಪ ಅವರಿಲ್ಲದ ಬಿಜೆಪಿ ಈಗ ಕೇವಲ 40 ಸ್ಥಾನಗಳನ್ನು ಪಡೆದಿದೆ. ಮತ್ತೆ ಬಿಜೆಪಿ ಹೆಚ್ಚು ಸ್ಥಾನ ಪಡೆಯಬೇಕಾದರೆ ಯಡಿಯೂರಪ್ಪ ಅನಿವಾರ್ಯ ಎಂಬುದು ತಿಳಿಯದಷ್ಟು ಮುಗ್ದರಲ್ಲ ಮೋದಿ. ಹೀಗಾಗಿ ಮುಂದಿನ ಚುನಾವಣೆಗೆ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ತರಲು ಅವರು ಗಂಭೀರ ಪ್ರಯತ್ನ ಮಾಡುವುದು ಶತಃಸಿದ್ಧ.
ಆದರೆ, ಯಡಿಯೂರಪ್ಪ ಅವರ ತಂತ್ರವೇ ಬೇರೆ. ವಿಧಾನಸಭೆಯ ಒಳಗೂ, ನಾನು ಮತ್ತೆ ಬಿಜೆಪಿಗೆ ಸೇರುವ ಪ್ರಶ್ನೆ ಇಲ್ಲ. ಆ ಪಕ್ಷದ ಮುಖಂಡರು ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು. ಅಂಥವರೊಂದಿಗೆ ಯಾವುದೇ ಕಾರಣಕ್ಕೂ ಮತ್ತೆ ಸ್ನೇಹ ಬೆಳೆಸಲು ಇಷ್ಟಪಡುವುದಿಲ್ಲ. ಇನ್ನು ಮುಂದಾದರೂ ನನ್ನದೇ ಆದ ಪಕ್ಷ ಕಟ್ಟಿ ಗೌರವದ ಬದುಕು ಸಾಗಿಸಲು ಅವಕಾಶ ಮಾಡಿಕೊಡಿ ಎಂದು ಕೋರಿದ್ದಾರೆ. ವಿಧಾನಸಭೆ ಒಳಗಷ್ಟೇ ಅಲ್ಲ, ಹೊರಗೂ ಹತ್ತಾರು ಬಾರಿ ಈ ಮಾತುಗಳನ್ನು ಪುನರುಚ್ಚರಿಸಿದ್ದಾರೆ. ಯಡಿಯೂರಪ್ಪ ಅವರ ಈ ಮಾತಿನ ಒಳಾರ್ಥ ಬೇರೆಯೇ ಇದೆ. ಯಾರೇ ಆಗಲಿ, ನಾನು ಹೋಗುವುದಿಲ್ಲ ಎಂಬುದು ಖಚಿತವಾದರೆ ಅದನ್ನು ಪದೇ ಪದೇ ಹೇಳುವುದಿಲ್ಲ. ಒಮ್ಮೆ ಹೇಳಿ ಸುಮ್ಮನಾಗುತ್ತಾರೆ. ಹೀಗಿರುವಾಗ ಪದೇ ಪದೇ ಹೋಗುವುದಿಲ್ಲ ಎಂದರೆ ಅದರ ಹಿಂದೆ ಹೋಗುವ ಆಸಕ್ತಿ ಇದೆ ಎಂದೇ ಅರ್ಥ. ಜತೆಗೆ ನನ್ನನ್ನು ಆಹ್ವಾನಿಸಲಿ ಎಂಬ ಬಯಕೆಯೂ ಇದೆ. ಬರುವುದಿಲ್ಲ ಎಂದು ಹೇಳಿಕೊಂಡು ಬೇಡಿಕೆ ಸೃಷ್ಟಿ ಮಾಡಿಕೊಳ್ಳುವ ತಂತ್ರವೂ ಈ ಮಾತಿನ ಹಿಂದೆ ಇದೆ.
ಇಲ್ಲಿ ಇನ್ನೂ ಒಂದು ವಿಚಾರ ಇದೆ. ಏಕಾಏಕಿ ಬಿಜೆಪಿಗೆ ಹೋದರೆ ಜನ ತಮ್ಮ ಬಗ್ಗೆ ಲಘುವಾಗಿ ಮಾತನಾಡಿಕೊಳ್ಳುತ್ತಾರೆ ಎಂಬ ಭಯ ಯಡಿಯೂರಪ್ಪ ಅವರನ್ನು ಕಾಡುತ್ತಿದೆ. ಕರೆದ ತಕ್ಷಣ ಹೋದರೆ, ಹೊಸ ಪಕ್ಷ ಕಟ್ಟಿ ಏನೂ ಸಾಧನೆ ಮಾಡಲು ಸಾಧ್ಯವಾಗದೆ ಮತ್ತೆ ಬಿಜೆಪಿಗೆ ಹೋಗಿದ್ದಾರೆ ಎಂದು ಜನ ಆಡಿಕೊಂಡು ನಗುತ್ತಾರೆ. ಅದರ ಬದಲು ಬೇಡಿಕೆ ಸೃಷ್ಟಿಸಿಕೊಂಡುನಂತರ ಬಿಜೆಪಿಗೆ ಸೇರುವುದು. ಒಂದು ವೇಳೆ ಜನ ಕೇಳಿದರೆ ಬಿಜೆಪಿಯವರು ಬಲವಂತ ಮಾಡಿದರು. ತಾವು ಬಿಜೆಪಿ ತೊರೆಯಲು ಕಾರಣರಾದವರ ಮಾತು ಈಗ ಪಕ್ಷದಲ್ಲಿ ನಡೆಯುವುದಿಲ್ಲ. ಅದಕ್ಕಾಗಿ ಬಿಜೆಪಿಗೆ ಹೋದೆ ಎನ್ನುವ ಸಂದೇಶ ರವಾನಿಸಲು ಈ ರೀತಿ ಮಾತನಾಡುತ್ತಿದ್ದಾರೆ.
ಇನ್ನು ಹೊಸ ಪಕ್ಷ ಸಂಘಟಿಸಿ ಅಧಿಕಾರಕ್ಕೆ ಬರುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬುದು ಅವರಿಗೂ ಗೊತ್ತು. ಹಿಂದೆ ಕೆಜೆಪಿ ಕಟ್ಟಿದಾಗ ಬಿಜೆಪಿ ವಿರೋಧಿ ಅಲೆ ಇತ್ತು. ಯಡಿಯೂರಪ್ಪ ಅವರಿಗೂ ಉತ್ಸಾಹವಿತ್ತು. ಜತೆಗೆ ಅವರು ಮತ್ತು ಬೆಂಬಲಿಗರಲ್ಲಿ ಒಂದು ವೇಗವಿತ್ತು. ಆದರೆ, ಈ ವೇಗ ಮತ್ತು ಉತ್ಸಾಹ ಹೆಚ್ಚು ದಿನ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ವಿಚಾರದಲ್ಲಿ ಇದು ಸಾಬೀತಾಗಿತ್ತು. ಆದ್ದರಿಂದ ಈ ತೀವ್ರತೆ ಕಡಿಮೆಯಾಗುವ ಮೊದಲೇ ಬಿಜೆಪಿ ಸೇರಿಕೊಳ್ಳುವುದು ಯಡಿಯೂರಪ್ಪ ಅವರ ಉದ್ದೇಶ. ಮೇಲಾಗಿ ಬಿಜೆಪಿ ಮೇಲಿನ ಸಿಟ್ಟೂ ಕಡಿಮೆಯಾಗಿದೆ. ಮೋದಿ ಪ್ರಮುಖ ಸ್ಥಾನಕ್ಕೆ ಬಂದಿರುವುದರಿಂದ ಹೇಳಿಕೊಳ್ಳಲು ಒಂದು ನೆಪವೂ ಇದೆ. ಹೀಗಾಗಿ ಲೋಕಸಭೆ ಚುನಾವಣೆ ವೇಳೆ ಯಡಿಯೂರಪ್ಪ ಅವರು ಮತ್ತೆ ಬಿಜೆಪಿ ಅಂಗಳದಲ್ಲಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

ಲಗೋರಿ: ಕೆಟ್ಟ ಮೇಲೆ ಯಾರಿಗೆ ಬೇಕಾದರೂ ಬುದ್ದಿ ಬರಬಹುದು.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.