ಡೆಂಘೀ ಜ್ವರ ಬೀಡಬೇಕಿದ್ರೆ ಮದ್ಯ ಕುಡಿಬೇಕು ಸ್ವಾಮಿ!
ರಾಜ್ಯದ ನಾನಾ ಭಾಗಗಳಲ್ಲಿ ಡೆಂಘೀ ಕಾಣಿಸಿಕೊಂಡು ಹತ್ತಾರು ಮಂದಿ ಸಾವಿಗೀಡಾಗಿದ್ದಾರೆ. ಅದರಲ್ಲೂ ಮೈಸೂರು ಜಿಲ್ಲೆಯ...
ರಾಜ್ಯದ ನಾನಾ ಭಾಗಗಳಲ್ಲಿ ಡೆಂಘೀ ಕಾಣಿಸಿಕೊಂಡು ಹತ್ತಾರು ಮಂದಿ ಸಾವಿಗೀಡಾಗಿದ್ದಾರೆ. ಅದರಲ್ಲೂ ಮೈಸೂರು ಜಿಲ್ಲೆಯ ಡಿ. ಸಾಲುಂಡಿಯಲ್ಲಿ ನಾಲ್ವರು ಮಕ್ಕಳು ಸಾವಿಗೀಡಾಗಿದ್ದು ಇಡೀ ರಾಜ್ಯದ ಗಮನ ಸೆಳೆಯಿತು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಗ್ರಾಮಕ್ಕೆ ಭೇಟಿ ನೀಡಿ, ಮಕ್ಕಳ ಪೋಷಕರಿಗೆ ತಲಾ 1 ಲಕ್ಷ ಪರಿಹಾರ ವಿತರಿಸಿದರು. ಹೀಗಿರುವಾಗ ಮೈಸೂರಿನವರೇ ಆದ ಚಂದ್ರಶೇಖರ್ ಎಂಬವರು 'ಡೆಂಘೀಗೆ ಮದ್ಯವೇ ಮದ್ದು' ಎಂದು ಘೋಷಿಸಿದ್ದಾರೆ. ಇದನ್ನು ಹೇಳಲು ಸುದ್ದಿಗೋಷ್ಠಿ ಕರೆದಿದ್ದರು. ಡೆಂಘೀ ಜ್ವರ ಕಾಣಿಸಿಕೊಂಡರೆ ತಿಳಿ ಸಾರು ಹಾಗೂ 600 ಎಂಎಲ್ ನೀರನ್ನು ಕಾಯಿಸಿ 450 ಎಂಎಲ್‌ಗೆ ಇಳಿಸಿ, 30 ಎಂಎಲ್ ವಿಸ್ಕಿ ಅಥವಾ ಬ್ರಾಂದಿಯೊಂದಿಗೆ ಸೇರಿಸಿ ಕುಡಿಸಿದರೆ ಜ್ವರ ವಾಸಿಯಾಗುತ್ತದೆ! ಇದನ್ನು ನಾನು ಕಳೆದ 10 ವರ್ಷಗಳಿಂದ ನಮ್ಮ ಮನೆಯವರ ಮೇಲೆ ಪ್ರಯೋಗ ಮಾಡಿ, ಯಶಸ್ವಿಯಾಗಿದ್ದೇನೆ ಎಂದು ಹರಟತೊಡಗಿದರು. ಅವರ ತಲೆಹರಟೆಗೆ ಬ್ರೇಕ್ ಹಾಕಿದ ಪತ್ರಕರ್ತರು ಹತ್ತಾರು ಪ್ರಶ್ನೆ ಕೇಳಿ, ತರಾಟೆಗೆ ತೆಗೆದುಕೊಳ್ಳುತ್ತಿರುವ ಮದ್ಯೆಯೇ ಈ 'ಮದ್ಯ ಸಂಶೋಧಕ' ಅಲ್ಲಿಂದ ಕಾಲ್ಕಿತ್ತರು.
ಖಾಲಿ ಸಭೆ ನೋಡಿ ಸುದ್ದಿಗೋಷ್ಠಿ ಮಾಡಿದ ಎಸ್ಪಿ !
ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳನ್ನು ಕಾಯುವುದು ಬಿಟ್ಟರೆ ಜನ ಸಾಮಾನ್ಯರನ್ನು ಕಾಯಿಸುವುದೇ ಹೆಚ್ಚು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ ದೌರ್ಜನ್ಯ ತಡೆ ಸಭೆ ಸಂದರ್ಭ ಪ್ರತಿ ಬಾರಿಯೂ ಎಸ್‌ಪಿ ಮತ್ತು ಪೊಲೀಸ್ ಕಮಿಷನರ್ ಕಾಯುವ ಸರದಿ! ಭಾನುವಾರದ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಪತ್ರಕರ್ತರು ಮಾತ್ರ ಇದ್ದರು. ದಲಿತ ಮುಖಂಡರು ಬರಲೇ ಇಲ್ಲ. ಕಾದು ಕಾದು ಸುಸ್ತಾದ ಎಸ್‌ಪಿ ಮತ್ತು ಅಧಿಕಾರಿಗಳು ಪತ್ರಕರ್ತರನ್ನು ಉದ್ದೇಶಿಸಿ 'ಎಂತೂ ಬಂದಿದ್ದೀರಿ ಸುಮ್ಮನೆ ಏಕೆ ವಾಪಸ್ ಹೋಗಬೇಕು? ಜಿಲ್ಲಾ ಪೊಲೀಸ್ ವಿಭಾಗದ ಬಗ್ಗೆ ಸುದ್ದಿಗೋಷ್ಠಿ ಮಾಡುತ್ತೇವೆ' ಎಂದು ಅವರ ಸಾಧನೆ, ಉಪವಿಭಾಗ ರಚನೆ ಬಗ್ಗೆ ಹೇಳಿ ಮುಗಿಸಿದರು.
ಗಪ್ಪಿ ಮೀನು ಗಪ್‌ಚುಪ್
ಡೆಂಘೀ ಜ್ವರ ಹರಡಲು ಟೈರ್, ತೆಂಗಿನ ಮೊಟ್ಟೆ, ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವುದೇ ಕಾರಣ. ಈ ನೀರಿನಲ್ಲಿ ಡೆಂಘೀ ಜ್ವರಕ್ಕೆ ಕಾರಣವಾಗುವ ಸೊಳ್ಳೆಗಳು ಮರಿ ಮಾಡುತ್ತವೆ. ಇದನ್ನು ತಡೆಯಲು ಮೈಸೂರಿನ ಸಮಾಜಸೇವಕರೊಬ್ಬರು ಡೆಂಘೀಪೀಡಿತ ಪ್ರದೇಶಗಳಿಗೆ ಗಪ್ಪಿ ಮೀನುಗಳು ಹಾಗೂ ಕುಂಡಗಳನ್ನು ನೀಡಿದರು. ಈ ಮೀನಿನ ಮರಿಗಳು ಸೊಳ್ಳೆಯ ಮೊಟ್ಟೆ ಮತ್ತು ಲಾರ್ವಾವನ್ನು ತಿನ್ನುತ್ತವೆ. ಇದರಿಂದ ಸೊಳ್ಳೆಗಳ ಕಾಟ ಇರುವುದಿಲ್ಲ ಎಂಬ ತಿಳುವಳಿಕೆ ನೀಡಿದ್ದರು. ಆದರೆ, ಈ ಗಪ್ಪಿ ಮೀನುಗಳಿಗೆ ಒಂದು ಕಡೆ ಸೊಳ್ಳೆ ಆಹಾರವಾದರೆ ಮತ್ತೊಂದು ಕಡೆ ಅವುಗಳಿಗೆ ಬೇರೆ ರೀತಿಯ ಆಹಾರ ಇರುತ್ತದೆ. ಆದರೆ, ಈ ಗಪ್ಪಿ ಮೀನು ಮತ್ತು ಕುಂಡ ಪಡೆದ ಸಂಸ್ಥೆಯೊಂದರಲ್ಲಿ ಮೀನುಗಳಿಗೆ ಉಪ್ಪಿಟ್ಟು ಮತ್ತು ಪಕೋಡವನ್ನು ಆಹಾರವಾಗಿ ಹಾಕಿದರು. ಅವುಗಳನ್ನು ತಿಂದ ಗಪ್ಪಿ ಮೀನುಗಳು ಗಪ್‌ಚುಪ್ ಆಗಿವೆ ಅರ್ಥಾತ್ ಸಾವಿಗೀಡಾಗಿವೆ! ಸೊಳ್ಳೆಗಳು ಸಂಗೀತ ಹಾಡುತ್ತಿವೆ.
ಪತ್ರಕರ್ತರಿಗೆ ಹಳೆಕಾರು, ಇದು ಶಾಸಕರ ಕಾರುಬಾರು!
ಮಂಗಳೂರಲ್ಲಿ ಚುನಾವಣೆಗೆ ಮುನ್ನ ಸಿಕ್ಕ ಸಿಕ್ಕ ಸಮಾರಂಭಗಳಲ್ಲಿ, ರಾಜಕೀಯ ನಾಯಕರ ಪುಣ್ಯತಿಥಿಗಳಲ್ಲಿ ಬಡವರಿಗೆ ತಲಾ 5 ಕಿಲೊ ಅಕ್ಕಿ ಉಚಿತವಾಗಿ ನೀಡಿ, ಕೊನೆಗೆ ಶಾಸಕರೂ ಆದ ಜೆ.ಆರ್.ಲೋಬೊ ಭರವಸೆಗಳನ್ನು ನೀಡುವ ಮೂಲಕ 'ಭರವಸೆ' ಮೂಡಿಸುತ್ತಿದ್ದಾರೆ! ಇತ್ತೀಚೆಗೆ ಮಹೀಂದ್ರ ಫಸ್ಟ್‌ಚಾಯ್ಸ್ ಶೋರೂಮ್ ಉದ್ಘಾಟನೆ ವೇಳೆ ಅವರು ಪತ್ರಕರ್ತರಿಗೂ ಭರವಸೆ ನೀಡಿದ್ದು ವಿಶೇಷವಾಗಿತ್ತು. ಹೇಳಿ ಕೇಳಿ ಸೆಕೆಂಡ್ ಹ್ಯಾಂಡ್ ಕಾರ್ ಶೋರೂಮ್ ಉದ್ಘಾಟನೆ. ಪತ್ರಕರ್ತರೂ ಹಳೆ ಕಾರುಗಳನ್ನು ಆಸೆಗಣ್ಣುಗಳಿಂದ ನೋಡುತ್ತಿದ್ದರು. ಇದನ್ನು ನೋಡಿ ಪತ್ರಕರ್ತರ ಬಳಿಗೆ ಬಂದ ಲೋಬೊ, ಎಲ್ಲ ಪತ್ರಕರ್ತರಿಗೂ ಒಂದೊಂದು ಕಾರು ಎಂದು ಭರವಸೆ ನೀಡಿಯೇ ಬಿಟ್ಟರು. ಲೋಬೊ ಜೋಕ್ ಮಾಡಿದ್ದೋ? ನಿಜವಾಗಿಯೂ ಹೇಳಿದ್ದೋ? ಎಂಬ ಗೊಂದಲದಲ್ಲಿದ್ದ ಪತ್ರಕರ್ತರು, ನಮಗೇನಿದ್ದರೂ ಹಳೆಕಾರು ಈಗ ಕಾಂಗ್ರೆಸ್ ಶಾಸಕರದ್ದೇ ಕಾರು ಬಾರು ಎಂದು ಪಿಸುಗುಟ್ಟಿದರು.
ಸಾವಯವ ಕೃಷಿಗೆ 'ಶೃದ್ಧಾಂಜಲಿ'!
ಮಂಗಳೂರು ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಸಾವಯವ ಕೃಷಿ ಉದ್ಘಾಟನೆ ಸಮಾರಂಭ. ಎಲ್ಲ ಗಣ್ಯರು ವೇದಿಕೆಗೆ ಬಂದಿದ್ದಾರೆ. ಕಾರ್ಯಕ್ರಮ ನಿರೂಪಕರು ಆರಂಭದಲ್ಲಿ ಮೌನ ಪ್ರಾರ್ಥನೆ ಎಂದರು. ಎಲ್ಲರೂ ಎದ್ದು ನಿಂತರು. 1 ನಿಮಿಷ ಮೌನ ಪ್ರಾರ್ಥನೆ ನಡೆಯಿತು. ಆದರೆ ಎಲ್ಲರ ಮುಖದಲ್ಲಿ ಪ್ರಶ್ನಾರ್ಥಕ ಚಿಹ್ನೆ. ಏಕೆಂದರೆ ಪ್ರಾರ್ಥನೆ ಅಂದರೆ ದೇವರ ಸ್ತುತಿ ಅಥವಾ ಸರ್ವಧರ್ಮ ಸಮಭಾವದ ಹಾಡು ಹಾಡುವುದು ರೂಢಿ. ಶ್ರದ್ಧಾಂಜಲಿಗೆ ಮಾತ್ರ ಮೌನ ಪ್ರಾರ್ಥನೆ ಮಾಡುತ್ತಾರೆ. ಸಾವಯವ ಕೃಷಿಗೆ ಮೌನ ಪ್ರಾರ್ಥನೆ ಮಾಡಿದ್ದು ಏಕೆ ಎಂದು ಗೊತ್ತಾಗಲೇ ಇಲ್ಲ!
- ನಂಬಿರಾಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

