ಅಂಕಣಗಳು

ಅಟ್ಟೆ ಮೊಟ್ಟೆ ನಾಗರಮೊಟ್ಟೆ ಪಾಪು ಕೈಲಿ ಪೀಪಿಕೊಟ್ಟು...

Published On :

ನಮ್ಮ ಪಿ.ಜಿ.ಯ ಎದುರು ಮನೆಯಲ್ಲಿರುವಾಕೆ ಅಂಜನಾ. ಅವಳೀಗ ಐದನೇ ಕ್ಲಾಸು. ಅವಳಿಗೆ ಐಶ್ವರ್ಯ ಎಂಬ ಹೆಸರಿನ, ಅವಳದೇ ತರಗತಿಯ ಗೆಳತಿ ಇದ್ದಾಳೆ. ಇಬ್ಬರೂ ಕಳೆದ ವರ್ಷ ಫೆವಿಕಾಲ್ ಥರಾ ಸದಾ ಅಂಟಿಕೊಂಡೇ ಇರುತ್ತಿದ್ದರು. ಪಿ.ಜಿ.ಯಲ್ಲಿದ್ದ ಗೆಳತಿಯರೆಲ್ಲ ಆ ಮಕ್ಕಳನ್ನು 'ಎರಡು ನಕ್ಷತ್ರಗಳು' ಎಂದೇ ಕರೆಯುತ್ತಿದ್ದರು. 'ಜೋಡಿ ಜೀವ' ಎಂದು ತಮಾಷೆ ಮಾಡುತ್ತಿದ್ದರು. ನಮ್ಮ ಗೇಲಿ, ಟೀಕೆಯನ್ನು ಆ ಮಕ್ಕಳು ಕಾಂಪ್ಲಿಮೆಂಟ್ ಎಂದು ಭಾವಿಸಿ ಆರಾಮಾಗಿದ್ದವು!
'ಈ ಎರಡು ನಕ್ಷತ್ರಗಳು' ವರ್ಷವಿಡೀ ವ್ಯಾನ್ ಡ್ರೈವರ್‌ನ ಪಕ್ಕ ಕೂತು ಟಾಟಾ ಮಾಡುತ್ತಿದ್ದವು. ಆದರೆ ಈ ಬಾರಿ ಶಾಲೆ ಆರಂಭವಾಗಿ ಎಂಟು ದಿನ ಕಳೆದರೂ ವ್ಯಾನ್‌ನಲ್ಲಿ ಐಶ್ವರ್ಯ ಕಾಣಲಿಲ್ಲ. ಅವಳೇನಾದ್ರೂ ಬೇರೆ ಸ್ಕೂಲ್‌ಗೆ ಸೇರಿದಳೋ ಅಥವಾ ಆಕೆಯ ತಂದೆಗೆ ಟ್ರಾನ್ಸ್‌ಫರ್ ಆಯ್ತೋ ಎಂಬ ಅನುಮಾನದಿಂದ, ನಿನ್ನೆ ಶನಿವಾರ ಮಧ್ಯಾಹ್ನ ಅಂಜನಾಳನ್ನು ವಿಚಾರಿಸಿದಾಗ-'ಆಕೆ ಕೂಲ್ ಆಗಿ ಹೇಳಿದಳು: 'ಅವಳು ಈಗ ನನ್ ಜೊತೆ ಠೂ ಬಿಟ್ಟಿದ್ದಾಳೆ ಅಕ್ಕಾ. ಹಾಗಾಗಿ ಅವಳು ವ್ಯಾನ್‌ನಲ್ಲಿ ಬರ್ತಿಲ್ಲ. ಸೈಕಲ್‌ನಲಿ ಬರ್ತಾಳೆ...' ಅಂಜನಾ ಹೇಳಿದ ಈ ಮಾತು, ಬಾಲ್ಯದ ದಿನಗಳನ್ನು ನನಗೆ ಮತ್ತೆ ಮತ್ತೆ ನೆನಪು ಮಾಡಿಕೊಟ್ಟಿತು.
ಹೈಸ್ಕೂಲಿನಲ್ಲಿ ನನ್ನ ಜೀವದ ಗೆಳತಿಯಾಗಿದ್ದಾಕೆ ಪವಿತ್ರಾ. ಸೆಕೆಂಡ್ ಕ್ಲಾಸ್‌ಗೆ ಮೋಸವಿಲ್ಲ ಎಂಬಂತೆ ಓದುತ್ತಿದ್ದ ಅವಳು, ಖೋ ಖೋ, ಥ್ರೋಬಾಲ್‌ನ ಶಾಲಾ ತಂಡದ ಕ್ಯಾಪ್ಟನ್ ಆಗಿದ್ದಳು. ತನ್ನೆಲ್ಲಾ ಸಂಕಟಗಳನ್ನು ನನ್ನೊಂದಿಗೆ ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಳು. ಮನೆಯಲ್ಲಿ ಏನಾದರೂ ವಿಶೇಷ ಮಾಡಿದರೆ ಅದನ್ನು ತಪ್ಪದೇ ತಂದು ಕೊಡುತ್ತಿದ್ದಳು. ನಾನು ಯಾವುದೇ ಸಲಹೆ  ನೀಡಿದರೂ ಅದನ್ನು ತಪ್ಪದೇ ಪಾಲಿಸುತ್ತಿದ್ದಳು.
ಇಂಥ ಹಿನ್ನೆಲೆಯ ಪವಿತ್ರಾಳೊಂದಿಗೆ 'ಠೂ' ಬಿಡಬೇಕಾಗಿ ಬಂತು. ಅದಕ್ಕೆ ಕಾರಣವಾದದ್ದು ಖೋ ಖೋ ಆಟವೇ ಎಂಬುದು ವಿಪರ್ಯಾಸ. ಅದೊಮ್ಮೆ ಏನಾಯಿತೆಂದರೆ, ಒಂದೇ ತರಗತಿಯಲ್ಲಿ ಎರಡು ಟೀಂ ಮಾಡಿದ ಪಿ.ಟಿ. ಮಾಸ್ಟರು, ಯಾರು ಚೆನ್ನಾಗಿ ಆಡ್ತೀರೋ ನೋಡೋಣ ಎಂದರು. ಪವಿತ್ರಾ, ನನ್ನ ವಿರುದ್ಧದ ತಂಡದಲ್ಲಿದ್ದಳು. ಆಕೆ ಶಾಲಾ ತಂಡದ ನಾಯಕಿ ಆಗಿದ್ದುದರಿಂದ ಹಾಗೂ ಆಟದಲ್ಲಿ ಆಕೆಗೆ ವಿಪರೀತ ತಿಳಿವಳಿಕೆ ಇದ್ದುದರಿಂದ, ಅವಳನ್ನು 'ಔಟ್‌' ಮಾಡಲು ಸಾಧ್ಯವೇ ಇಲ್ಲ ಎಂದು ಎಲ್ಲರೂ ಹೇಳುತ್ತಿದ್ದರು. ಅವತ್ತು ನಾನಾದರೂ ಯಾಕೆ ಅಂಥ ಹಠಕ್ಕೆ ಬಿದ್ದೆನೊ ಗೊತ್ತಿಲ್ಲ; ಪವಿತ್ರಾಳನ್ನು ಔಟ್ ಮಾಡಿಯೇ ತೀರುತ್ತೇನೆಂದು ಛಾಲೆಂಜ್ ಮಾಡಿದೆ ಮತ್ತು ಅದರಲ್ಲಿ ಯಶಸ್ವಿಯೂ ಆದೆ. ಅವಳನ್ನು ಔಟ್ ಮಾಡುವ ಹುಚ್ಚು ಆವೇಶದಲ್ಲಿ ಅದೆಷ್ಟು ಜೋರಾಗಿ ಅವಳ ಬೆನ್ನ ಮೇಲೆ ಹೊಡೆದೆನೆಂದರೆ, ಆಟ ಮುಗಿದ ಮೂರು ದಿನಗಳ ನಂತರವೂ ಅವಳ ಬೆನ್ನ ಮೇಲೆ ಬಾಸುಂಡೆಯ ಕಲೆ ಉಳಿದಿತ್ತು. ಆಟ ಮುಗಿದ ನಂತರ ನಾನೇ ಮುಂದಾಗಿ 'ಸಾರಿ' ಹೇಳಿದ್ದರೆ ಎಲ್ಲವೂ ಸರಿ ಹೋಗುತ್ತಿತ್ತೇನೋ. ಆದರೆ, ಗೆದ್ದ ಹಮ್ಮಿನಲ್ಲಿದ್ದ ನಾನು 'ಸಾರಿ' ಕೇಳಲೇ ಇಲ್ಲ. ಅವತ್ತಿನಿಂದಲೇ ಪವಿತ್ರಾ ನನ್ನೊಂದಿಗೆ ಮಾತು ನಿಲ್ಲಿಸಿದಳು.
ನಮಗೆ, ನರಸಿಂಹಮೂರ್ತಿ ಎಂಬ ಅಧ್ಯಾಪಕರಿದ್ದರು. ಹಿಂದಿನ ದಿನ ಮಾಡಿದ್ದ ಪಾಠಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳುವುದು, ಉತ್ತರ ಹೇಳದವರಿಗೆ, ಸರಿಯುತ್ತರ ಹೇಳಿದವರಿಂದ ಕೆನ್ನೆಗೆ ಹೊಡೆಸುವುದು ಅವರ ಪದ್ಧತಿ. ಅವತ್ತೊಂದು ದಿನ ಒಂದೇ ಪ್ರಶ್ನೆಗೆ ಏಳು ಹುಡುಗಿಯರೂ ಉತ್ತರ ಹೇಳಲಿಲ್ಲ. ನಾನು ಹೇಳಿಬಿಟ್ಟೆ. 'ಹೂಂ, ಎಲ್ಲರಿಗೂ ಕೆನ್ನೆಗೆ ಎರಡೆರಡು ಏಟು ಹಾಕು...' ಎಂದು ಮೇಷ್ಟ್ರು ಆಜ್ಞಾಪಿಸಿದರು. ಮೊದಲು ಸಿಕ್ಕವಳೇ ಪವಿತ್ರಾ. ಹೇಳಿ ಕೇಳಿ ಮಾತು ಬಿಟ್ಟಿದ್ದವಳು. ಈಗ ಜೋರಾಗಿ ಹೊಡೆದರೆ ತಪ್ಪು ಭಾವಿಸಬಹುದೇನೋ ಅನ್ನಿಸಿ, ಮೆಲ್ಲಗೆ ಹೊಡೆದೆ. ಮುದ್ದು ಮಾಡುವ ನೆಪದಲ್ಲಿ ಮಕ್ಕಳ ಕೆನ್ನೆಗೆ ತಟ್ಟಿದಂತಿದ್ದ ನನ್ನ ಹೊಡೆತ ಗಮನಿಸಿದ ಮೇಷ್ಟ್ರು, ಸ್ವಲ್ಪ ನಿಲ್ಸು ಎಂದರು. ನಂತರ, ಎರಡನೇ ಹುಡುಗಿಯ ಕೆನ್ನೆಗೆ ತಾವೇ 'ಫೈಡ್‌' ಎಂದು ಬಾರಿಸಿ, ಹೀಗೆ ಹೊಡೆಯಬೇಕು. ಹೂಂ ಈಗ ಮತ್ತೆ ಹೊಡಿ ಅಂದರು. ಮೇಷ್ಟ್ರ ಮೇಲಿನ ಹೆದರಿಕೆಯಿಂದ ಇದ್ದ ಶಕ್ತಿಯನ್ನೆಲ್ಲ ರಟ್ಟೆಗೆ ತಂದುಕೊಂಡು ಪವಿತ್ರಾಗೆ ಹೊಡೆದು ಬಿಟ್ಟೆ.
ಈ ಘಟನೆಯ ನಂತರ ನಮ್ಮ ನಡುವಣ ಗೆಳೆತನದ ತಂತು ಕಡಿದೇ ಹೋಯ್ತು. ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ಪವಿತ್ರಾ ಹೊಂಚು ಹಾಕಿದಳು. ಆದರೆ ನಾನು ಆಟಕ್ಕೆ ಹೋಗುವುದನ್ನೇ ನಿಲ್ಲಿಸಿ ಬಿಟ್ಟೆ. ಪಾಠದಲ್ಲಿ ನಾನು ಮುಂದಿದ್ದ ಕಾರಣದಿಂದ ಅವಳಿಗೆ ನನ್ನ ಕೆನ್ನೆಗೆ ಹೊಡೆಯುವ ಅವಕಾಶ ಸಿಗಲೇ ಇಲ್ಲ. ಆದರೆ ಗೆಳತಿಯರ ಬಳಿ ಇಲ್ಲಸಲ್ಲದ್ದು ಹೇಳಿಕೊಂಡಳು. ನನ್ನನ್ನು ಕಂಡರೆ ಆಗದಿದ್ದವರೆಲ್ಲ ಇದೇ ಸಮಯ ಅಂದುಕೊಂಡು ಚಾಡಿ ಚುಚ್ಚಲು ಆರಂಭಿಸಿದರು. ಆದರೆ, ಪವಿತ್ರಾ ಹಾಗೂ ಉಳಿದವರು ಎಷ್ಟೇ ರೇಗಿಸಿದರೂ, ಅವರೊಂದಿಗೆ ಜಗಳ ಮಾಡುವ ಉಮೇದು ನನಗೆ ಬರಲೇ ಇಲ್ಲ. - ಹೀಗೇ, ಒಂದು ವರ್ಷವೇ ಕಳೆದು ಹೋಯಿತು. ಎಸ್ಸೆಸ್ಸೆಲ್ಸಿಯಲ್ಲಿ ಹೇಗಾದರೂ ಸರಿ, ಹೆಚ್ಚಿನ ಮಾರ್ಕ್ಸ್ ತೆಗೆಯಬೇಕೆಂಬ ಹಠ ಇಬ್ಬರಿಗೂ ಬಂತು. ಇಬ್ಬರೂ ಜಿದ್ದಿಗೆ ಬಿದ್ದವರಂತೆ ಓದಿದೆವು. ಕಡೆಗೊಮ್ಮೆ, ಪವಿತ್ರಾಳೇ ಮುಂದಾಗಿ ಮಾತಾಡಿಸಬೇಕಾದ ಸಂದರ್ಭ ಬಂದೇ ಬಿಟ್ಟಿತು. ವಾರ್ಷಿಕ ಪರೀಕ್ಷೆ ಶುರುವಾಗಿ, ಗಣಿತದ ಪರೀಕ್ಷೆ ಶುರುವಾಗಲು ಎರಡು ದಿನವಿದ್ದಾಗ, ಇದ್ದಕ್ಕಿದ್ದಂತೆ ಎದುರು ನಿಂತ ಪವಿತ್ರಾ ಹೇಳಿದಳು: 'ಮ್ಯಾಥ್ಸ್‌ನಲ್ಲಿ ನಾನು ವೀಕು. ಅದು ನಿನಗೂ ಗೊತ್ತಿದೆ. ನಾನೂ ಪ್ರಿಪೇರ್ ಆಗಿದ್ದೀನಿ. ಆದರೂ ನನ್ನ ಬಗ್ಗೆ ನನಗೇ ಅನುಮಾನ. ಹೇಗಿದ್ರೂ ಹಿಂದಿನ ಡೆಸ್ಕ್‌ನಲ್ಲಿದ್ದೀಯ. ಸ್ವಲ್ಪ ತೋರಿಸು...'
ಅವಳೇ ಮುಂದಾಗಿ ಮಾತಾಡಿಸಿದಳಲ್ಲ; ಅದೊಂದೇ ಕಾರಣಕ್ಕೆ ನಾನು ಉಬ್ಬಿ ಹೋದೆ. ನನಗೆ ಗೊತ್ತಿದ್ದ ಲೆಕ್ಕಗಳನ್ನೆಲ್ಲ ಇನ್ವಿಜಿಲೇಟರ್‌ಗೆ ಗೊತ್ತಾಗದಂತೆ ಪವಿತ್ರಾಗೆ ತೋರಿಸಿದೆ. ಮರುದಿನದಿಂದ ನಾವು ಹೊಸ ಪ್ರೇಮಿಗಳ ಥರಾ ಪದೇ ಪದೇ ನಾಚಿಕೊಂಡು ಒಂದೊಂದೇ ಮಾತಾಡುತ್ತಾ ಹತ್ತಿರಾದೆವು. ಪರೀಕ್ಷೆ ಮುಗಿದ ದಿನ ಅವಳು ಎಲ್ಲರ ಮುಂದೆಯೇ ತಬ್ಬಿಕೊಂಡು 'ಹೋ' ಎಂದು ಅತ್ತುಬಿಟ್ಟಳು. ಅವಳ ಬೆನ್ನು ನೇವರಿಸುತ್ತಿದ್ದಂತೆಯೇ ನನಗೂ ಕಣ್ತುಂಬಿ ಬಂದಿತ್ತು.
ಇದನ್ನೆಲ್ಲ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಲೇ, ಅಂಜಲಿಯನ್ನು ಕರೆದು-'ಚಿನ್ನೀ, ನೀನು ಹ್ಯಾಗೆ ಠೂ ಬಿಟ್ಟೆ ಎಂದಾಗ ಅವಳು ಕೆನ್ನೆ ಊದಿಸಿಕೊಂಡು -ಅಟ್ಟೆ ಮೊಟ್ಟೆ ನಾಗರಮೊಟ್ಟೆ ಪಾಪು ಕೈಲಿ ಪೀಪಿ ಕೊಟ್ಟ ಸಾಯೋತನ್ಕ ಮಾತಾಡ್ಬೇಡ ಠೂ ಠೂ ಠೂ' ಅಂದಳು!

- ನಾನು ಪ್ರಣತಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.