Hmmm... ಪಾಂಚ್ ವಿಜಯ್ ಮಲ್ಯ
ನಿಮ್ಮ ಕಿಂಗ್‌ಫಿಷರ್ ನೌಕರರಿಗೆ ಸಂಬಳ ಕೊಡೋಕೆ ದುಡ್ಡಿಲ್ಲ ಅಂದ್ರಂತೆ? ಆ ಸೌರಭ್ ತಿವಾರಿ ಥರ ಕೆಲಸಾನೇ ಮಾಡದೇ ಇರೋರಿಗೆಲ್ಲಾ ಕೋಟಿ ಕೋಟಿ ಕೊಡ್ತೀರ, ಕೆಲಸ ಮಾಡೋರಿಗೆ ಕೋಡೋಕೆ ದುಡ್ಡಿಲ್ವಾ? ನಿಮ್ಮಂಥ ಫೇಮಸ್ ಕರೋಡ್‌ಪತಿಗಳೇ ಹಿಂಗಂದ್ರೆ ಹೆಂಗೆ?
ಹೌದೌದು. ಈಗೀಗ ನಾವು ನಮ್ಮೂರಲ್ಲಿ ತುಂಬಾ ಫೇಮಸ್ಸು, ಲಾಸಾಗಿರೋದ್ರಲ್ಲಿ.
- ಕಿಂಗ್‌ಫಿಷರ್ ಹಾರ್ತಾ ಇಲ್ಲ ಅಂತ ಜಗ್ಗೇಶ್ ಥರಾ ಕಾಗೆ ಹಾರಿಸ್ತಿದೀರಾ..ಸರಿ ಹಂಗಿದ್ರೆ, 'ಹಾರಿಸುವಾತ ಬೇಸರ ಮೂಡಿ ಆಟ ಮುಗಿಸಿದ', ಅಂತ ಮುಗಿಸೋದಲ್ವಾ?
ಮುಗಿಸ್‌ಬೇಕು ಕಣ್ರೀ, ಕಿಂಗ್‌ಪಿಷರ್ ನಂಬ್‌ಕೊಂಡ್ರೆ ಆಗಲ್ಲ. ಚಿಯರ್ ಗರ್ಲ್ಸ್ ಮತ್ತು ಸಂಜೆ ಹೊತ್ತು ಚಿಯರ್ಸ್ ಹೇಳುವ ಬಾಯ್ಸ್‌ಗಳಿಂದಲೇ ನಮ್ ಜೀವನ ನಡೀತಿರೋದು.
- ಸರಿ, ನೀವು ಆನ್‌ಲೈನ್ 'ಬುಕ್ಕಿಂಗ್' ಮಾಡ್ತೀರಾ ಅಂತ ನಿಮ್ಮ ಮೇಲೆ ಇನ್ನೂ ಆಪಾದನೆ ಬಂದಿಲ್ವಾ?
ಅದೊಂದ್ ಬಾಕಿ ಇತ್ತು. ಸುಮ್ನಿರ್ರೀ, ಇರೋ ಬರೋ ಮಾನನೂ ಹರಾಜ್ ಹಾಕ್‌ಬೇಡಿ.
- ಕಿಂಗ್‌ಫಿಷರ್ ಏರ್‌ಲೈನ್ಸ್ ಬುಕ್ಕಿಂಗ್ ಬಗ್ಗೆ ಹೇಳಿದ್ದು ಕಣ್ರೀ. ಸರಿ, ಈ ಗಗನ ಯಾತ್ರೆ, ತೀರ್ಥಯಾತ್ರೆ ಮಾಡ್ಕೊಂಡ್ ಆರಾಮಾಗಿದ್ರಿ, ಈ ಐಪಿಎಲ್ ಸಹವಾಸ ಬೇಕಿತ್ತಾ? ಒಂದ್ಸಲಾನು ಗೆಲ್ಲಲಿಲ್ಲ ನಮ್ಮ ಆರ್‌ಸಿಬಿ?
ಹೌದ್ರೀ ಕಿಂಗ್‌ಫಿಷರ್‌ನಲ್ಲಿ ಹೋದ ಮಾನ ಐಪಿಎಲ್ ಗೆದ್ರೂ ಬರುತ್ಯೇ. ನಂಗಂತೂ ಸಾಕಾಗಿ ಹೋಗಿದೆ. ಹೆಂಗಿದ್ರೂ ಐಪಿಎಲ್ ಮುಗೀತು. ದೇಶಾಂತರ ಹೋಗಿಬಿಡ್ತೀನಿ.
- ಮಗನ ಹೆಸರು ಸಿದ್ಧಾರ್ಥ ಅಂದಾಕ್ಷಣ ನೀವು ಬುದ್ಧ ಆಗ್‌ಬಹುದು ಅಂತನಾ?
ಹಂಗಲ್ರೀ, ದೇಶಾಂತರ ಅಂದ್ರೆ, ವಿದೇಶ ಪ್ರವಾಸ ಹೋಗ್ತಿದೀನಿ ಅಂತ ಅರ್ಥ.
(ಕಾಲ್ಪನಿಕ ಸಂದರ್ಶನ)
ಒಮ್ಮೆ ಭೇಟಿ ಕೊಡಿ
ಯಾಕೋ ಬರೆಯೋಕೆ ಮೂಡಿಲ್ಲ ಅಂತ ಬರಹಗಾರರು ಹೇಳೋದು ಕಾಮನ್. ಹಾಗೇನೇ ಓದುಗರಿಗೂ ಒಂದೊಂದ್‌ಸಲ ಓದೋಕೆ ಮೂಡಿರಲ್ಲ. ಅಂಥ ಸಮಯದಲ್ಲಿ ಓದದೇನೆ ಒಂದಿಷ್ಟು ರಿಲ್ಯಾಕ್ಸ್ ಆಗುವಂಥ ಅವಕಾಶ ಕೊಡುವುದು ಚಿತ್ರಗಳು. ಇಲ್ಲಿ ಕೆಲವೊಂದು ಪ್ರಸಿದ್ಧ ಪೇಂಟಿಂಗ್ಸ್‌ಗಳ ಗ್ಯಾಲರಿ ಇರುವ ವೆಬ್‌ಸೈಟ್‌ಗಳಿವೆ. ನೀವೂ ಅಂತದ್ದೇ ಮೂಡಿನಲ್ಲಿದ್ದರೆ ನೋಡಿ ಖುಷಿಪಡಿ.
n bit.ly/a8fy7F n bit.ly/16pzgz n bit.ly/aKUfsJ n bit.ly/fWOQYZ n bit.ly/11qOziV
ಹರಿ-ಕಥೆ
ನಾನ್ ವೆಜಿಟೇರಿಯನ್ ನಾಣಿ, ಡೋಂಟ್‌ಕೇರ್ ಡೋಗ್ರಾ ಮತ್ತು ಕಂಜೂಸ್ ಖೇಮು ಒಂದಿನ ಫುಲ್ ಅಪ್‌ಸೆಟ್ ಆಗಿದ್ರು. ಖಾಲಿ ಕ್ವಾಟ್ರು ಬಾಟ್ಲು ಥರ ಲೈಫು, ಆಚೆಗಾಕವ್ಳೆ ವೈಫು ಅನ್ನೋದು ಅವರೆಲ್ಲರ ಕಾಮನ್ ಪ್ರಾಬ್ಲಮ್ಮು. ಹಂಗಾಗಿ ನಾವು ಇನ್ನೊಂದ್ ಸ್ವಲ್ಪ ಹಾಕ್ಕೊಂಡ್ರೆ ಹೆಂಡತಿಯರು ಸರಿ ಹೋಗ್ತಾರೆ ಅಂತ ಮತ್ತೆ ಒಟ್ಟಿಗೇ ಬಾರಿಗೆ ಹೋದ್ರು. ಒಂದೊಂದ್ ಪೆಗ್ ಆರ್ಡರ್ ಮಾಡಿದ್ರು. ಮೊದಲೇ ಸೋಡಾ, ನೀರು ಮಿಕ್ಸ್ ಮಾಡಿ ಮೂವರಿಗೂ ಒಂದೊಂದ್ ಗ್ಲಾಸ್ ತಗೊಂಡು ಬಂದ ಬಾರ್‌ಟೆಂಡರ್. ಗ್ಲಾಸ್ ಎತ್ತಲು ಹೊರಟ್ರೆ, ಏನಾಶ್ಚರ್ಯ! ಮೂವರ ಗ್ಲಾಸ್‌ನಲ್ಲೂ ಒಂದೊಂದು ನೊಣ ಈಜಾಡುತ್ತಿದ್ದವು. ಬಾರ್‌ಟೆಂಡರ್‌ಗಿಂತ ಒಳ್ಳೇ ಗೆಳೆಯ ಇಲ್ಲ ಅನ್ನೋ ಈ ಗೆಳೆಯರ ನಂಬಿಕೆಗೆ ಭಂಗ ಬಂತು. ನೊಣ ಹಾಕ್ಕೊಂಡ್ ಬಂದಿದೀಯ ಅಂತ ಬಯ್ಯೋಣ ಅಂತ ತಲೆ ಎತ್ತಿದ್ರೆ ಬಾರ್‌ಟೆಂಡರ್ ಆಗ್ಲೆ ಗಾಯಬ್. ಮೂವರೂ ಗೆಳೆಯರು ಮುಖ ಮುಖ ನೋಡ್ಕೊಂಡ್, ಈಗೇನ್ ಮಾಡೋದು ಅಂತ ಕಣ್ಣಲ್ಲೇ ಮಾತಾಡ್ಕೊಂಡ್ರು. ಒಂದೆರಡು ಕ್ಷಣಗಳ ನಂತರ ನಾನ್ ವೆಜಿಟೇರಿಯನ್ ನಾಣಿ, ಮುಲಾಜಿಲ್ಲದೆ, ನಾನು ಕುಡಿಯೊಲ್ಲ ಅಂತ ತನ್ನ ಗ್ಲಾಸ್ ಅನ್ನು ಪಕ್ಕಕ್ಕೆ ಸರಿಸಿಬಿಟ್ಟ. ಡೋಂಟ್‌ಕೇರ್ ಡೋಗ್ರಾ ನೊಣಕ್ಕೆಲ್ಲಾ ತಲೆಕೆಡಿಸ್ಕೊಳ್ಳೋಕೆ ನಾನೇನ್ ಈಗ ಸಿನಿಮಾದ್ ಸುದೀಪೇ ಅಂತ, ನೊಣವನ್ನು ಎತ್ತಿ ಬಿಸಾಕಿ ಕುಡಿಯೋಕೆ ಶುರುಮಾಡಿ, ಪಕ್ಕದಲ್ಲಿ ಕೂತಿದ್ದ ಖೇಮು ಕಡೆ ತಿರುಗಿದ. ಕಂಜೂಸ್ ಖೇಮು ತನ್ನ ಗ್ಲಾಸ್‌ನಲ್ಲಿದ್ದ ನೊಣವನ್ನು ಎತ್ತಿ ಅದರ ಕುತ್ತಿಗೆ ಹಿಚುಕುತ್ತಾ ಅದನ್ನು ಗ್ಲಾಸಿಗೆ ಹತ್ತಿರವೇ ಹಿಡಿದುಕೊಂಡು ಹೇಳುತ್ತಿದ್ದ 'ಬಡ್ಡೀಮಗನೆ, ಬಿಟ್ಟಿ ಎಣ್ಣೆ ಹೊಡೆಯೋಕೆ ಪ್ಲ್ಯಾನ್ ಹಾಕಿದ್ಯಲ್ಲ, ಅಷ್ಟು ಸುಲಭವಾಗಿ ಬಿಟ್‌ಬಿಡ್ತೀನಾ, ಕಕ್ಕು ಮಗನೇ, ಕುಡಿದಿರೋ ಎಣ್ಣೆನೆಲ್ಲಾ ಮೊದಲು ಕಕ್ಕು'
ಸ್ಯಾಂಡಲ್‌ವುಡ್
ಹೆಚ್ಚು ಕಮ್ಮಿ ಆದರೆ ಯೋಗರಾಜ ಭಟ್ಟರ ನಂಬರ್ ಒನ್ ಪಟ್ಟಕ್ಕೆ ಸಂಚಕಾರ ಬಂದರೂ ಬರಬಹುದು ಎನ್ನುವಂಥ ಅನಿಸಿಕೆ ಮೂಡಿಸಿರುವ ಸೂರಿ 'ಕಡ್ಡಿಪುಡಿ'ಯ ಮೂಲಕ ಕನ್ನಡ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದ್ದಾರೆ. ಮೊದಲ ಎರಡು ದಿನಗಳಲ್ಲಿ ಪ್ರೇಕ್ಷಕರ ರೆಸ್ಪಾನ್ಸ್ ಕೂಡ ಭರ್ಜರಿ. ಶಿವಣ್ಣರ ಅಭಿಮಾನಿಗಳಂತೂ ಫುಲ್‌ಖುಷ್. ಅವರ ಬಹಳ ದಿನಗಳ ನಿರೀಕ್ಷೆಗೆ ಫಲ ಸಿಕ್ಕಿದೆ. ಸ್ವಲ್ಪ ಅತಿಶಯೋಕ್ತಿ ಸೇರಿಸಿ ಹೇಳಿದರೆ, ಥಿಯೇಟರ್‌ನ ನೆಲದ ಮೇಲೆ ಬಿದ್ದ ಚಿಲ್ಲರೆ ಕಾಸುಗಳನ್ನು ಆಯ್ದುಕೊಂಡರೆ ನಿರ್ಮಾಪಕ ಅರ್ಧ ಸೇಫ್ ಆಗಬಹುದು ಎಂಬಂಥ ಪರಿಸ್ಥಿತಿ ಚಿತ್ರಮಂದಿರಗಳಲ್ಲಿ. ಜೊತೆಗೆ ಕಮರ್ಷಿಯಲ್ ವ್ಯಾಲ್ಯೂ ಬಿಟ್ಟು ನೋಡಿದರೂ 'ಕಡ್ಡಿಪುಡಿ' ಒಂದು ಕ್ಲಾಸಿಕ್ ಅಂಡರ್‌ವರ್ಲ್ಡ್ ಚಿತ್ರ ಎಂಬ ಅನಿಸಿಕೆ ವ್ಯಕ್ತವಾಗಿದೆ. ಹಾಗಾಗಿ, ಈ ಸಂದರ್ಭ ಒಂದು ಮಾತಿಗೆ ವೇದಿಕೆಯಾಗಿದೆ. ಆಕಸ್ಮಾತ್ ಶಿವರಾಜ್‌ಕುಮಾರ್ ಅವರಿಗೆ ಅಂಡರ್‌ವರ್ಲ್ಡ್ ಸಿನಿಮಾಗಳು ಸಾಕು ಎನಿಸಿದ್ದರೆ ಅದನ್ನು ಕಾರ್ಯಗತಗೊಳಿಸಲು ಕಡ್ಡಿಪುಡಿ ಒಳ್ಳೆಯ ವೇದಿಕೆ ಆಗಬಹುದು. ಶಿವಣ್ಣ ಲಾಂಗ್ ಬಿಟ್ಟರೆ ಅವರ ಅಭಿಮಾನಿಗಳಿಗೆ ಬೇಸರವಾಗುವುದು ನಿಜ. ಅಲ್ಲದೆ, ಲಾಂಗ್ ಕೈ ಬಿಡುವುದು, ಶಿವಣ್ಣರ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟ ವಿಷಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೂ, ಒಂದು ವೇಳೆ ಅಂಥದೊಂದು ಯೋಚನೆಯೇನಾದರೂ ಶಿವಣ್ಣರ ತಲೆಯಲ್ಲಿದ್ದರೆ, ವರ್ಲ್ಡ್‌ಕಪ್ ಗೆದ್ದ ಸಂತಸದ ಕ್ಷಣದಲ್ಲೇ ಸಚಿನ್ ನಿವೃತ್ತಿ ಆಗಬಹುದಿತ್ತು ಎನ್ನುವ ಮಾತುಗಳಂತೆ ಕಡ್ಡಿಪುಡಿಯಂಥ ಪವರ್‌ಫುಲ್ ಚಿತ್ರ ಕೊಟ್ಟ ನಂತರ ಶಿವಣ್ಣ ತೆರೆಯ ಮೇಲೆ ಅಂಡರ್‌ವರ್ಲ್ಡ್‌ಕಪ್ ಎತ್ತಿ ಹಿಡಿಯುವುದು ಸಾಕು ಎಂಬ ನಿರ್ಧಾರಕ್ಕೆ ಬರುವುದು ಒಳ್ಳೆಯ ಟೈಮಿಂಗ್ ಆಗಬಹುದೇನೋ. ಆದರೆ ಅಭಿಮಾನಿಗಳ ಪ್ರೀತಿ ಬಿಡಬೇಕಲ್ಲ...
ಡಬ್ಕುಡಬಲ್ ತುದಾಂಡಲ್...
ಗುಟ್ಕಾ ನಿಷೇಧ
ಇನ್ಮೇಲಾದ್ರೂ ಫೇಸ್‌ಬುಕ್ 'ವಾಲ್'ಗಳೂ ಜಗಳ-ಕಿರಿಕಿರಿಗಳಿಲ್ಲದೆ ಸ್ವಚ್ಛವಾಗಿರಬಹುದೇ?
- ಕವಿಯೊಬ್ಬ ಪ್ರಾಮಾಣಿಕ ಪೊಲೀಸ್ ಆದ್ರೆ, ವಿಲನ್‌ಗಳು ಹೆಂಗೆ ಆವಾಜ್ ಹಾಕ್ತಾರೆ?
ಮಗನೆ, ಜಾಸ್ತಿ ಹಾರಾಡಿದ್ರೆ ಪೆನ್ನು ಪೇಪರ್ರು ಸಿಗದೇ ಇರೋ ಜಾಗಕ್ಕೆ ಟ್ರಾನ್ಸ್‌ಫರ್ ಮಾಡಿಸ್‌ಬಿಡ್ತೀನಿ ಅಷ್ಟೆ.
- 'ರಣಧೀರ' ಚಿತ್ರದ ಸ್ಟೈಲ್‌ನಲ್ಲಿ ಮಾಸ್ಟರ್ ಮಂಜುನಾಥ್ ಬಿಗ್‌ಬಾಸ್ ಬಗ್ಗೆ ಏನು ಹೇಳಬಹುದು?
ದೊಡ್ಡ ಮನೆ, ಸಣ್ಣ ಜನ.
- ಕಡ್ಡಿಪುಡಿ ಸಿನಿಮಾ ಬಗ್ಗೆ ಮೊದಲ ದಿನದ ಪ್ರೇಕ್ಷಕನ ಪ್ರತಿಕ್ರಿಯೆ
ಸಿನಿಮಾ ಚೆನ್ನಾಗಿದೆ. ಆದ್ರೆ ಕಡ್ಡಿಪುಡಿ ಅನ್ನೋ ಹೆಸ್ರು ಕೇಳಿ ನಮ್ ಸಿಎಂ ಇದನ್ನೂ ಬ್ಯಾನ್ ಮಾಡಿಬಿಟ್ರೆ ಕಷ್ಟ.
- ಒಂದು ಡೌಟು...
ಯಾರಾದ್ರೂ ಬಿಗ್‌ಬಾಸ್‌ನಿಂದ ಔಟ್ ಆದ್ರೆ 'ಅವರನ್ನ ಮನೆಯಿಂದ ಹೊರಗೆ ಹಾಕಿದ್ರು' ಅನ್‌ಬೇಕಾ ಇಲ್ಲ
'ಮನೆಗ್ ಕಳಿಸಿದ್ರು' ಅನ್‌ಬೇಕಾ?
-ಹರಿ
harikannadaprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

