ಬೆಂಗಳೂರಿಗರ ಬೇಡಿಕೆಗಳಿಗೆ ಮಣೆ ಹಾಕುವರೇ ಶಾಸಕರು?
ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ರಾಜಕೀಯ ಪಕ್ಷಗಳು ಚುನಾವಣಾ...
ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ತಮ್ಮ ಪ್ರಣಾಳಿಕೆಯನ್ನು ಪ್ರಕಟಿಸುತ್ತಾ ಬಂದಿವೆ. ಅವುಗಳಲ್ಲಿನ ದೊಡ್ಡ ದೊಡ್ಡ ಭರವಸೆಗಳೆಲ್ಲ ಹಾಳೆಯ ಮೇಲೆಯೇ ಉಳಿದು ಹೋಗುವುದರಿಂದ, ಜನರೂ ಪ್ರಣಾಣಿಕೆಗಳನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ವಿಷಯ ಅದಲ್ಲ. ಈ ಬಾರಿ ಬೆಂಗಳೂರಿಗರು ಹಿಂದೆ ಯಾರೂ ಇಡದಂತಹ ಹೆಜ್ಜೆಯನ್ನಿಟ್ಟಿದ್ದಾರೆ. ಮೊದಲಿಗೆ ಅವರು, ಕರ್ನಾಟಕದ ಉಳಿದ ಭಾಗಗಳಲ್ಲಿನಂತೆ ಪಕ್ಷದ ಮುಖ ನೋಡಿ ಮತ ಹಾಕದೆ ಅಭ್ಯರ್ಥಿಗಳ ಅರ್ಹತೆಯನ್ನು ನೋಡಿ ಮತ ನೀಡಿದ್ದಾರೆ. ಈಗ ಅವರು ಬೆಂಗಳೂರಿನ 28 ಶಾಸಕರು ನಗರಕ್ಕಾಗಿ ಮಾಡಬೇಕಿರುವ ಕೆಲಸಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಅಂದರೆ ನಾಗರಿಕ ಪ್ರಣಾಳಿಕೆಯನ್ನು!
ಅವರ ಸಂದೇಶ ಸ್ಪಷ್ಟವಾಗಿದೆ: ನಾಗರಿಕರಿಂದ ಆಯ್ಕೆಯಾಗಿ, ನಾಗರಿಕರಿಗೆ ಉತ್ತರದಾಯಿಯಾಗಿರುವ ಪ್ರಜಾಕೇಂದ್ರಿತ ಸರ್ಕಾರ ಮತ್ತು ನಾಯಕತ್ವ ಬರಬೇಕು. ಪ್ರಮುಖ ನಿರ್ಧಾರಗಳ ರೂಪಣೆಯಲ್ಲಿ ಪ್ರಜೆಗಳೂ ಭಾಗವಹಿಸುವಂತಾಗಬೇಕು ಮತ್ತು ಸರ್ಕಾರದ ಇತರ ಮಟ್ಟಗಳ ಮತ್ತು ಮುನಿಸಿಪಾಲಿಟಿಗಳ ಸಹಭಾಗಿತ್ವದಲ್ಲಿ ಕೆಲಸ ಮಾಡಿ ಯಶಸ್ವೀ ಅಭಿವೃದ್ಧಿಗೆ ಒಂದೇ ತೆರನಾದ ವಿಧಾನಗಳನ್ನು ಅನುಸರಿಸುವಂತಹ ಆಡಳಿತ ಬರಬೇಕು.
ಇದು ನಮ್ಮ ಬೆಂಗಳೂರು ಫೌಂಡೇಷನ್(ಎನ್‌ಬಿಎಫ್) ಹೆಜ್ಜೆಯಾಗಿದ್ದು, ಅದು ಬಹಳಷ್ಟು ನಿವಾಸಿ ಕಲ್ಯಾಣ ಸಂಘಗಳನ್ನು ಮತ್ತು ಸಾಮಾಜಿಕ ಸಂಘಟನೆಗಳನ್ನು ಒಂದೇ ಚಪ್ಪರದಡಿ ತಂದು, ನಗರವನ್ನು, ನಾಗರಿಕರನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಪ್ರಣಾಳಿಕೆಯೊಂದನ್ನು ಸಿದ್ಧಪಡಿಸಿದೆ. ಕೆಲವು ದಿನಗಳ ಹಿಂದೆ ಎನ್‌ಬಿಎಫ್‌ನಿಂದ ಆಯೋಜನೆಗೊಂಡಿದ್ದ ಸಮಾರಂಭವೊಂದರಲ್ಲಿ, ಮುಖ್ಯಮಂತ್ರಿಗಳಿಗೆ ಮತ್ತು ಹೊಸತಾಗಿ ಆಯ್ಕೆಯಾದ ಶಾಸಕರಿಗೆ ಇದನ್ನು ಕೊಡಲಾಯಿತು. ಈ ಫೌಂಡೇಷನ್ ಮತ್ತು ಜನತೆ, ಪ್ರತಿ ಮೂರು ತಿಂಗಳಿಗೊಮ್ಮೆ ತಮ್ಮ ಬೇಡಿಕೆಗಳ ಸ್ಥಿತಿಗತಿ ಹೇಗಿದೆ ಎಂದು ಪರಿಶೀಲಿಸಲಿದ್ದಾರಾದ್ದರಿಂದ ಯಾವೊಬ್ಬ ಶಾಸಕನಿಗೂ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇದೇ ರೀತಿಯ ನಡೆಯನ್ನು ರಾಜ್ಯದ ಎಲ್ಲಾ ನಗರಗಳಲ್ಲೂ ಅನುಸರಿಸುವಂತಾಗಬೇಕು.
ನಾಗರಿಕ ಪ್ರಣಾಳಿಕೆಯಲ್ಲಿರುವ ಬೇಡಿಕೆಗಳು ಈ ರೀತಿ ಇವೆ:
- ಬೆಂಗಳೂರು ಮೆಟ್ರೋಪಾಲಿಟನ್ ರೀಜನ್ ಆ್ಯಕ್ಟ್(ಬಿಎಮ್‌ಆರ್‌ಜಿಎ) ಎಂಬ ಹೊಸ ಶಾಸನವನ್ನು ರಚಿಸಬೇಕು. ಅದರಲ್ಲಿಯೇ ಬಿಡಬ್ಲ್ಯೂಎಸ್‌ಎಸ್‌ಬಿ ಕಾಯ್ದೆ, ಬಿಬಿಎಂಪಿ ಕಾಯ್ದೆಗಳು ಸೇರಿಕೊಳ್ಳಬೇಕು. ಇದರಡಿ ಮೆಟ್ರೋಪಾಲಿಟನ್ ಯೋಜನಾ ಆಯೋಗವನ್ನೂ ಸ್ಥಾಪಿಸಬೇಕು.
- ವಾರ್ಡ್ ಸಮಿತಿಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬದಲು ಆರಿಸಿ ಕಳುಹಿಸುವಂತಹ ಕಾನೂನು ಜಾರಿಯಾಗಬೇಕು. ಸಾರ್ವಜನಿಕ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಸ್ಥಳೀಯ ಸಮಿತಿಗಳನ್ನು ಸ್ಥಾಪಿಸಬೇಕು.
- ಜನರ ಅಭಿಪ್ರಾಯ ಸಂಗ್ರಹಿಸಿ ವಿಸ್ತಾರವಾದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ಅವು ಸಾಮಾಜಿಕ, ಆರ್ಥಿಕ ಮತ್ತು ನೈಸರ್ಗಿಕ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ರಚನೆಯಾಗಬೇಕು. ಅದರಲ್ಲೂ ವಿಪತ್ತುನಿರ್ವಹಣಾ ಯೋಜನೆಗೆ ಹೆಚ್ಚಿನ ಒತ್ತು ಕೊಡಬೇಕು.
- ಕಾನೂನು, ಸರ್ಕಾರಿ ನೀತಿಗಳು ಮತ್ತು ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಕಾಲಕಾಲಕ್ಕೆ ಕಲೆಹಾಕುತ್ತಿರಬೇಕು.
- ಲೋಕಾಯುಕ್ತ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಬೇಕು.
- ನಗರ ಯೋಜನೆ ಮತ್ತು ಆಡಳಿತ(ಐಯುಪಿಜಿ) ಸಂಸ್ಥೆಯನ್ನು ಸ್ಥಾಪಿಸಬೇಕು.
- ಎಮ್‌ಎಲ್‌ಎ ಎಲ್‌ಎಡಿ ಸ್ಕೀಮ್‌ನಡಿಯಲ್ಲಿ ಅಭಿವೃದ್ಧಿಯ ಬಗ್ಗೆ ಮಾಹಿತಿಯನ್ನು ಪ್ರಕಟಿಸಬೇಕು.
- ಎಲ್ಲಾ ಸರ್ಕಾರಿ ದಾಖಲೆ ಮತ್ತು ಮಾಹಿತಿ ಸೇವೆಗಳು ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಮಾಡಬೇಕು.
- ಎಲ್ಲಾ ಸೇವೆಗಳಿಗೂ 'ಸಕಾಲ' ಅನ್ವಯವಾಗಬೇಕು.
- ಮಂದಗತಿಯಲ್ಲಿ ಸಾಗುತ್ತಿರುವ ಎಲ್ಲಾ ಮೂಲಸೌಕರ್ಯಾಭಿವೃದ್ಧಿ ಯೋಜನೆಗಳನ್ನು ಶೀಘ್ರವಾಗಿ ಮುಗಿಸಬೇಕು.
- ಘನತ್ಯಾಜ್ಯ ವಿಲೇವಾರಿಯ ನಿರ್ವಹಣೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಇನ್ನಷ್ಟು ಹೆಚ್ಚಿಸಲು ಘನತ್ಯಾಜ್ಯ ನಿರ್ವಹಣಾ ಪ್ರಾಧಿಕಾರವನ್ನು ರಚಿಸಬೇಕು.
- ಎಲ್ಲಾ ಕೆರೆಗಳನ್ನು ಪುನರುಜ್ಜೀವಗೊಳಿಸುವ ಕೆಲಸವಾಗಬೇಕು ಮತ್ತು ಮಳೆ ನೀರು ಕೊಯ್ಲು ಯೋಜನೆಯ ಕಟ್ಟುನಿಟ್ಟಿನ ಅನುಷ್ಠಾನವಾಗಬೇಕು. ಅಂತರ್ಜಲದ ಬಳಕೆಯ ಬಗ್ಗೆ ಕಾಲಕಾಲಕ್ಕೆ ಪರೀಶೀಲನೆ ನಡೆಯಬೇಕು.
- ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಬಲಿಷ್ಠಪಡಿಸಬೇಕು. ಸಾಮೂಹಿಕ ಕ್ಷಿಪ್ರ ಪ್ರಯಾಣ ಮತ್ತು ಸರ್ಕ್ಯುಲರ್ ರೇಲ್ವೆಯ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು. ಎಲ್ಲಾ ಪ್ರಮುಖ ರಸ್ತೆಗಳನ್ನು ಆರು ಕಿರುದಾರಿಗಳನ್ನಾಗಿ ಮಾರ್ಪಡಿಸಬೇಕು. ಸಿಗ್ನಲ್ ಮುಕ್ತ ಮತ್ತು ಜಂಕ್ಷನ್ ಮುಕ್ತ ಪಥಗಳು ಬರಬೇಕು. ಹೊರವರ್ತುಲ ರಸ್ತೆಯನ್ನು ಸಿಗ್ನಲ್ ಮುಕ್ತವಾಗಿಸಬೇಕು. ಬಿಎಮ್‌ಟಿಸಿ ಪಡೆಯನ್ನು ದ್ವಿಗುಣಗೊಳಿಸುವುದರ ಜೊತೆಗೆ ದಿಕ್ಕು ಆಧರಿತ ಸಾರ್ವಜನಿಕ ಸಾರಿಗೆ ಮಾರ್ಗಗಳನ್ನು ವಿಸ್ತರಿಸಬೇಕು. ಹೆಚ್ಚು ಪಾರ್ಕಿಂಗ್ ಜಾಗಗಳನ್ನು ಸ್ಥಾಪಿಸಬೇಕು.
- ಮುಂದಿನ ಮೂರು ವರ್ಷಗಳಲ್ಲಿ ಮೆಟ್ರೋ ರೇಲ್ವೆಯ ಮೊದಲ ಮತ್ತು ಎರಡನೆಯ ಹಂತವನ್ನು ಸಂಪೂರ್ಣಮಾಡುವುದರ ಜೊತೆಗೆ ಅವನ್ನು ಹೊರವಲಯದ ನಗರಗಳವರೆಗೆ ವಿಸ್ತರಿಸಬೇಕು.
- ಕ್ರೈಸಿಸ್ ಪ್ರಿಪೇರ್ಡ್‌ನೆಸ್ ಗ್ರೂಪ್(ಸಿಪಿಜಿ), ರಿಸ್ಕ್ ಅಸೆಸ್‌ಮೆಂಟ್ ಆ್ಯಂಡ್ ಅನಲೈಸಿಸ್ ಗ್ರೂಪ್(ರಾಗ್) ಮತ್ತು ಕ್ರೈಸಿಸ್ ಮ್ಯಾನೇಜ್‌ಮೆಂಟ್ ಗ್ರೂಪ್(ಸಿಎಮ್‌ಜಿ)ಗಳನ್ನು ಸ್ಥಾಪಿಸಬೇಕು. ಬೃಹತ್ ಕಟ್ಟಡಗಳು ಅಗ್ನಿ ಅವಘಡಗಳಿಂದ ಪಾರಾಗುವ ವ್ಯವಸ್ಥೆ ಹೊಂದಿವೆಯೇ ಎನ್ನುವುದನ್ನು ಪರೀಕ್ಷಿಸಬೇಕು. ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಮಹಿಳೆಯರ ಭದ್ರತೆಗೆ ಹೆಚ್ಚು ಒತ್ತು ಕೊಡಬೇಕು.
- ಗ್ರಾಮೀಣ ವಲಯದ ಬಡವರಿಗಾಗಿ ಕಡಿಮೆ ವೆಚ್ಚದ ವಸತಿಗಳನ್ನು ನಿರ್ಮಿಸಬೇಕು.
ಬೆಳೆಯುತ್ತಿರುವ ಬೆಂಗಳೂರಿನ ನಿವಾಸಿಗಳ ಬೇಡಿಕೆಗಳಿವು. ಅವರ ಬೇಡಿಕೆಗಳನ್ನು ಈಡೇರಿಸುವುದು ಕಷ್ಟವೇನಲ್ಲ. ಅದಕ್ಕೆ ಮುಖ್ಯವಾಗಿ ಬೇಕಿರುವುದು ಇಚ್ಛಾಶಕ್ತಿ. ಶಾಸಕರುಗಳಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂಬ ಆಸೆಯಿದ್ದರೆ ಜನತೆಯ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು. ಇನ್ನು ಆಡಳಿತ ಕಾಂಗ್ರೆಸ್, ನಾಗರಿಕ ಪ್ರಣಾಳಿಕೆಯಲ್ಲಿರುವ ಅಂಶಗಳನ್ನೆಲ್ಲ ಜಾರಿಗೆ ತರಲು ಶ್ರಮಿಸಬೇಕು. ರಾಜ್ಯದ ಅರ್ಧದಷ್ಟು ಜಿಡಿಪಿ ಬೆಂಗಳೂರಿನಿಂದಲೇ ಉತ್ಪಾದನೆಯಾಗುತ್ತದೆ ಎನ್ನುವುದನ್ನು ಅದು ಮರೆಯಬಾರದು.
ಕೊನೆಯ ಗುಟುಕು: ಹೀಗೊಂದು ಕುತೂಹಲಕರ ಟ್ವೀಟ್- ಹವಾಮಾನ ವಾರ್ತೆ: ಬಿಸಿಲಿನಿಂದಾಗಿ ಬೆಂಗಳೂರಿನ ತಾಪಮಾನ 21 ಡಿಗ್ರಿಯಷ್ಟಿದೆ, ದೆಹಲಿಯಲ್ಲಿ ಧಗೆ ಹೆಚ್ಚಾಗಿದೆ, ಚೆನೈ ಸುಟ್ಟುಕರಕಲಾಗಿದೆ, ಕೋಲ್ಕತ್ತಾ ಕುದಿಯುತ್ತಿದೆ, ಹೈದ್ರಾಬಾದ್ ಹುರಿದುಹೋಗಿದೆ, ಇನ್ನು ಮುಂಬೈ ಮೆತ್ತಗಾಗಿದೆ!
- ಎಚ್.ಎಸ್. ಬಲರಾಮ್
hsbalram@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

