ಅಂಕಣಗಳು

ಚೌರಾಸಿಯಾ ಸಮುದಾಯದವರ ಬದುಕಿಗೆ ಎಲೆಯೇ ಆಸರೆ

ವೀಳ್ಯದ ಎಲೆ ಮತ್ತು ಅಡಕೆಗೆ ನಮ್ಮ ಸಮಾಜದಲ್ಲಿ ಶ್ರೇಷ್ಠವಾದ ಸ್ಥಾನಮಾನವಿದೆ.

Published On :

ವೀಳ್ಯದ ಎಲೆ ಮತ್ತು ಅಡಕೆಗೆ ನಮ್ಮ ಸಮಾಜದಲ್ಲಿ ಶ್ರೇಷ್ಠವಾದ ಸ್ಥಾನಮಾನವಿದೆ. ಏಕೆಂದರೆ, ಪೂಜೆ, ಪುನಸ್ಕಾರ ಸೇರಿದಂತೆ ಯಾವುದೇ ಶುಭ ಸಮಾರಂಭಗಳಲ್ಲಿ ಎಲೆ ಮತ್ತು ಅಡಕೆ ಇರಲೇಬೇಕು. ಇನ್ನು ಮನೆಗೆ ಬರುವ ಮುತ್ತೈದೆಯರನ್ನು ಬರಿಗೈಲಿ ಕಳುಹಿಸುವ ವಾಡಿಕೆ ಇಲ್ಲವೇ ಇಲ್ಲ.
ಅರಿಶಿಣ, ಕುಂಕುಮದ ಜೊತೆಗೆ ಎಲೆ ಮತ್ತು ಅಡಕೆಯನ್ನು ಅವರ ಕೈಗಿಟ್ಟು ಕಳುಹಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.
ಇನ್ನು ಹಲವಾರು ಸಮುದಾಯಗಳಲ್ಲಿ ವಿವಾಹ ನಿಶ್ಚಿತಾರ್ಥವಂತೂ ಎಲೆ ಮತ್ತು ಅಡಕೆ ಇಲ್ಲದೆ ನಡೆಯುವುದೇ ಇಲ್ಲ. ವಧು ಮತ್ತು ವರನ ಕಡೆಯವರು ಎಲೆ ಬದಲಿಸಿಕೊಳ್ಳುವ ಶಾಸ್ತ್ರ ಪೂರೈಸದ ಹೊರತು ನಿಶ್ಚಿತಾರ್ಥ ಸಂಪೂರ್ಣ ಆಗುವುದಿಲ್ಲ. ಇಂಥಹ ವೀಳ್ಯದ ಎಲೆಯ ಹಿಂದೆಯೂ ಸಮುದಾಯವೊಂದರ ಭಾರಿ ಇತಿಹಾಸವೇ ಅಡಗಿದೆ. ಆ ಸಮುದಾಯ ಬೆಳೆದು ಬಂದಿದ್ದೇ ಈ ವೀಳ್ಯದ ಎಲೆಯಿಂದ. ಇದು ಅಚ್ಚರಿಯಾದರೂ ನಿಜ. ಅದುವೇ 'ಚೌರಾಸಿಯಾ' ಸಮಾಜ.
ಎಲೆ, ಅಡಿಕೆಯಿಂದಲೇ ಬದುಕು: ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಪಾನ್ ಬೀಡಾ ಅಂಗಡಿಗಳನ್ನು ನಾವು ಕಾಣುತ್ತೇವೆ. ಆ ಅಂಗಡಿಗಳ ಸ್ಥಾಪಕರೇ ಈ ಚೌರಾಸಿಯಾ ಸಮಾಜದವರು. ಎಲೆ ಮತ್ತು ಅಡಕೆಯಿಂದಲೇ ಬದುಕು ಕಟ್ಟಿಕೊಂಡು ಬಂದವರು ಈ ಸಮುದಾಯದ ಜನ. ಆದರೆ ಈಗೀಗ ಪಾನ್ ಬೀಡಾ ಅಂಗಡಿಗಳು ಕೇವಲ ಚೌರಾಸಿಯ ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ. ಬೇರೆ ಬೇರೆ ಜಾತಿಯ ನಿರುದ್ಯೋಗಿ ಯುವಕರು ಸಹ ಬೀಡಾ ಆಂಗಡಿಗಳನ್ನು ತೆರೆದು ಜೀವನೋಪಾಯಕ್ಕೆ ಮಾರ್ಗ ಕಂಡುಕೊಂಡಿದ್ದಾರೆ. ಚೌರಾಸಿಯ ಸಮಾಜದವರ ಜನಸಂಖ್ಯೆ ಕರ್ನಾಟಕದಲ್ಲಿ ಹೆಚ್ಚೇನೂ ಇಲ್ಲ. ಹೆಚ್ಚೆಂದರೆ ಒಂದು ಸಾವಿರದಷ್ಟು ಇರಬಹುದು.
ಇರುವ ಜನರಲ್ಲಿ ಶೇ.2ರಷ್ಟು ಮಂದಿ ಮೂಲ ಕಸುಬು ಬಿಟ್ಟು ಬೇರೆ ಕೆಲಸಗಳನ್ನು ನೋಡಿಕೊಂಡಿದ್ದಾರೆ. ಅವರಲ್ಲಿ ಕೆಲವರು ಓದಿಕೊಂಡು ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿದ್ದಾರೆ. ಇನ್ನೂ 98ರಷ್ಟು ಮಂದಿ ಅದೇ ಬೀಡಾ ಆಂಗಡಿಗಳನ್ನು ತಮ್ಮ ಜೀವನೋಪಾಯಕ್ಕೆ ನೆಚ್ಚಿಕೊಂಡಿದ್ದಾರೆ.
ಇನ್ನು ಚೌರಾಸಿಯಾ ಸಮುದಾಯದಕ್ಕೆ ಇರುವ ಪೌರಾಣಿಕ ಹಿನ್ನೆಲೆ ಏನು ಎಂಬುದನ್ನು ನೋಡೋಣ. ಸಮಾಜದ ಹಿರಿಯರು ಹೇಳುವ ಪ್ರಕಾರ, ಇವರು ಬ್ರಹ್ಮನ ಮೂಲದವರು. ಬ್ರಹ್ಮ ದೇವನಿಗೆ ನಾಲ್ಕು ಮಕ್ಕಳು. ತಂದೆ ಮಾಡುವ ಯಜ್ಞ ಮತ್ತು ಯಾಗಾದಿಗಳಿಗೆ ಸಾಮಗ್ರಿಗಳನ್ನು ಪೂರೈಸುವುದು ಅವರ ಕೆಲಸ. ಒಮ್ಮೆ ಯಜ್ಞ ಮಾಡುವಾಗ ಪೂಜೆಗೆ ಬೇಕಾದ ಎಲೆ ಮತ್ತು ಅಡಕೆ ಇರಲಿಲ್ಲ.
ಚೌರಾಸಿ ಎಂದರೆ 84: ಇದರಿಂದ ಬ್ರಹ್ಮದೇವನಿಗೆ ಸಿಟ್ಟು ಬಂತು. ಕೂಡಲೇ ಒಬ್ಬ ಮಗ ಹೋಗಿ ಎಲೆ ಅಡಕೆ ತಂದಿಟ್ಟು. ಇನ್ನು ಮುಂದೆ ನಾನು ಮಾಡುವ ಯಜ್ಞ, ಯಾಗ ಮತ್ತು ಹೋಮ ಹವನಾದಿಗಳಿಗೆ ಎಲೆ, ಅಡಕೆ ಪೂರೈಸುವುದು ನಿನ್ನ ಜವಾಬ್ದಾರಿ ಎಂದು ಆತನಿಗೆ ಬ್ರಹ್ಮದೇವ ಅಪ್ಪಣೆ ಮಾಡಿದ. ಅಂದಿನಿಂದ ಬ್ರಹ್ಮದೇವನ ಒಬ್ಬ ಮಗ ಎಲೆ ಮತ್ತು ಅಡಕೆ ಸಂಗ್ರಹಿಸುವ ಕಾರ್ಯದಲ್ಲಿ ನಿರತನಾದ. ಆತನ ವಂಶ ಬೆಳೆದು ಒಟ್ಟು 84 ಮಂದಿ ಆದರು. ಜೊತೆಗೆ ಸಮುದಾಯವೊಂದು ರೂಪುಗೊಂಡಿತು. ಚೌರಾಸಿ ಎಂದರೆ 84. ಅದು ಕ್ರಮೇಣ ಸಮುದಾಯದ ಹೆಸರು ಆಗಿ ಹೋಯಿತು.
ಎಲೆ ಮತ್ತು ಆಡಕೆಯಿಂದ ಬಂದ ಈ ಸಮುದಾಯದ ಜನ ಈ ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಅವರ ಆಸ್ಥಾನಗಳನ್ನು ಸೇರಿಕೊಂಡರು. ರಾಜರು ಮಾಡುವ ಪೂಜೆ, ಪುನಸ್ಕಾರಗಳಿಗೆ ಅವರು ಎಲೆ ಮತ್ತು ಅಡಕೆ ಒದಗಿಸುತ್ತಿದ್ದರು. ಈ ಕೆಲಸಕ್ಕೆ ಕ್ರಮೇಣ ಅನ್ಯ ಜಾತಿಯ ಜನರೂ ಮುಂದಾದಾಗ ಚೌರಾಸಿಯಾ ಸಮಾಜದವರು ಅರಮನೆಗಳನ್ನು ಬಿಟ್ಟು ವಲಸೆ ಹೋಗಲು ಶುರು ಮಾಡಿದರು. ಪಾನ್ ಶಾಪ್‌ಗಳನ್ನು ತೆರೆಯಲು ಆರಂಭಿಸಿದರು. ಇವರು ಮೂಲತ: ಉತ್ತರ ಭಾರತದವರು. ಬನಾರಸ್ ಮತ್ತು ವಾರಾಣಸಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿಂದ ವಲಸೆ ಹೊರಟು ನಾನಾ ರಾಜ್ಯಗಳಲ್ಲಿ ನೆಲೆ ನಿಂತಿದ್ದಾರೆ.
ಮತ್ತೊಂದು ಪುರಾಣ ಕಥೆ: ಈಗ ಮತ್ತೊಂದು ಪುರಾಣ ಕಥೆಯ ಬಗ್ಗೆಯೂ ವಿವರವಿದೆ. ಆದಿಶಕ್ತಿ ಜಗತ್ತು ಸೃಷ್ಠಿ ಮಾಡಿದಾಗ ಇಬ್ಬರು ಸಹೋದರರು ಇದ್ದರಂತೆ. ಅಣ್ಣನಾದವನು ಒಮ್ಮೆ ದೇವರ ಪೂಜೆಗೆ ಕುಳಿತಾಗ ವೀಳ್ಯದ ಎಲೆ ಇರಲಿಲ್ಲ. ಆಗ ಆತ ಎಲೆ ತರುವಂತೆ ತಮ್ಮನಿಗೆ ಸೂಚಿಸುತ್ತಾನೆ. ಅಣ್ಣನ ಆದೇಶದ ಪ್ರಕಾರ ತಮ್ಮ ಎಲೆ ಹುಡುಕೊಂಡು ಹೋಗುತ್ತಾನೆ. ಅದರೆ, ಎಲ್ಲಿಯೂ ಸಿಗುವುದಿಲ್ಲ.
ಅಣ್ಣನ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಭಯದಲ್ಲಿ ತಮ್ಮ ಯೋಚನಾ ಮಗ್ನನಾಗಿರುವಾಗ ಶೇಷ ನಾಗನ ತಲೆಯ ಮೇಲೆ ಮೂರು ವೀಳ್ಯದ ಎಲೆ ಇರುವುದನ್ನು ನೋಡುತ್ತಾನೆ. ಆದರೆ, ಹತ್ತಿರ ಹೋಗಲು ಭಯ. ಹೀಗಾಗಿ ತಮ್ಮ ನಾಗದೇವನನ್ನು ಭಕ್ತಿಯಿಂದ ಪ್ರಾರ್ಥಿಸುತ್ತಾನೆ. ಆಗ ನಾಗರಾಜ ಪ್ರಸನ್ನನಾಗಿ ತನ್ನ ತಲೆಯ ಮೇಲಿದ್ದ ಮೂರು ಎಲೆಗಳ ಪೈಕಿ ಒಂದನ್ನು ತಮ್ಮನಿಗೆ ಕೊಡುತ್ತಾನೆ. ಆದರೆ, ಒಂದು ಎಲೆಯಿಂದ ಪೂಜೆ ಮುಗಿಯುವುದಿಲ್ಲ. ಇನ್ನೂ ಎರಡು ಎಲೆ ತರುವಂತೆ ಅಣ್ಣ ಸೂಚಿಸಬಹುದು ಎಂದು ತಮ್ಮ ಚಿಂತೆಗೀಡಾಗುತ್ತಾನೆ. ಆಗ ಅವನೇ ವೀಳ್ಯದ ಎಲೆಯ ಬೇಸಾಯ ಶುರುವಿಟ್ಟುಕೊಳ್ಳುತ್ತಾನೆ. ಹೆಚ್ಚು ಎಲೆಗಳೊಂದಿಗೆ ಅಣ್ಣನ ಬಳಿಗೆ ಹೋಗುತ್ತಾನೆ. ಇದರಿಂದ ಖುಷಿಯಾಗುವ ಅಣ್ಣ ವೀಳ್ಯದ ಎಲೆಯ ಕೃಷಿ ಮುಂದುವರಿಸಿಕೊಂಡು ಹೋಗುವಂತೆ ಸೂಚಿಸುತ್ತಾನೆ.
ಹೀಗಾಗಿ ಚೌರಾಸಿಯ ಸಮಾಜದವರು ಮೂಲ ಕಸುಬು ವೀಳ್ಯದ ಎಲೆಯ ಬೇಸಾಯ ಆಯಿತು ಎನ್ನುತ್ತಾರೆ ದಕ್ಷಿಣ ಭಾರತ ಚೌರಾಸಿಯಾ ಸಮಾಜದ ಬೆಂಗಳೂರು ಘಟಕದ ಅಧ್ಯಕ್ಷ ಮುಖಂಡರಾದ ವಿಜಯ ಪ್ರಕಾಶ್ ಚೌರಾಸಿಯಾ. ಈ ಸಮಾಜದವರು ಸಸ್ಯಾಹಾರಿಗಳು. ಇವರು ಬಹುತೇಕ ಬ್ರಾಹ್ಮಣ ಸಂಪ್ರದಾಯವನ್ನು ಅನುಸರಿಸುತ್ತಾರೆ. ಮದುವೆ, ಮುಂಜಿ ಮತ್ತಿತರ ಶುಭ ಕಾರ್ಯಕ್ರಮಗಳು ಬ್ರಾಹ್ಮಣ ಸಂಪ್ರದಾಯದ ಪ್ರಕಾರವೇ ನಡೆಯುತ್ತದೆ. ಖ್ಯಾತ ಕೊಳಲು ವಾದಕ ಹರಿಪ್ರಸಾದ್ ಚೌರಾಸಿಯಾ ಇದೇ ಸಮುದಾಯಕ್ಕೆ ಸೇರಿದವರು ಎಂದು ಹಿರಿಯರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಬೀಡಾ ಆಂಗಡಿಗಳ ಮೂಲಕವೇ ನಮ್ಮಲ್ಲಿ ಬಹುತೇಕ ಮಂದಿ ಇಂದಿಗೂ ಜೀವನ ನಡೆಸುತ್ತಿದ್ದಾರೆ. ಕೈಯ್ಯಲ್ಲಿ 50 ರುಪಾಯಿ ಇದ್ದರೆ ಸಾಕು, ಅದನ್ನೇ ಬಂಡವಾಳ ಮಾಡಿಕೊಂಡು ಅಂಗಡಿಗಳನ್ನು ತೆರೆಯುತ್ತಿದ್ದವರು ನಮ್ಮ ಜನ. ಆದರೆ, ಈ ವೃತ್ತಿಗೆ ಅನ್ಯರ ಪ್ರವೇಶವಾದ ಬಳಿಕ ನಮ್ಮ ಮೂಲ ಕಸುಬಿಗೆ ಪೆಟ್ಟು ಬಿದ್ದಿದೆ. ಇನ್ನು ಎಲೆ ಬೇಸಾಯವಂತೂ ಇಲ್ಲದಂತೆ ಆಗಿದೆ ಎನ್ನುತ್ತಾರೆ ಅವರು.
ಕರ್ನಾಟಕದಲ್ಲಿ ಚೌರಾಸಿಯಾ ಸಮಾಜದವರನ್ನು ಜಾತಿ ಪಟ್ಟಿಯಲ್ಲಿ ಇತರ ಹಿಂದುಳಿದ ವರ್ಗಗಳ ಗುಂಪಿಗೆ ಸೇರಿಸಲಾಗಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಜಾತಿ ಇದು. ಇನ್ನು ರಾಜಕೀಯ ಕ್ಷೇತ್ರದಲ್ಲಂತೂ ಅವಕಾಶಗಳೇ ಇಲ್ಲ. ಹೀಗಾಗಿ ಜಾತಿಯ ಒಬ್ಬರಿಗೂ ರಾಜಕೀಯದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಇತ್ತೀಚೆಗೆ ಸಮಾಜವನ್ನು ಸಂಘಟಿಸುವ ಕೆಲಸ ರಾಜ್ಯದಲ್ಲಿ ಆಗುತ್ತಿದೆ. ಇದಕ್ಕಾಗಿ ದಕ್ಷಿಣ ಭಾರತ ಚೌರಾಸಿಯಾ ಸಮಾಜ ನಾನಾ ಪ್ರಯತ್ನಗಳನ್ನು ನಡೆಸುತ್ತಿದೆ. ಜೂನ್ 9ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಸಮಾವೇಶವನ್ನೂ ಆಯೋಜಿಸಲಾಗಿದೆ ಎನ್ನುತ್ತಾರೆ ಬೆಂಗಳೂರು ಘಟದ ಅಧ್ಯಕ್ಷ ಆನಂದ್ ಚೌರಾಸಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಗೋಪಾಲ್ ಚೌರಾಸಿಯಾ.
ನಮ್ಮ ಸಮಾಜದಲ್ಲಿ ಕೆಲ ಶ್ರೀಮಂತ ಕುಟುಂಬಗಳು ಇರಬಹುದು. ಆದರೆ, ಗ್ರಾಮೀಣ ಪ್ರದೇಶದಲ್ಲಿರುವ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಸರ್ಕಾರದ ನಾನಾ ಸೌಲಭ್ಯಗಳ ಬಗ್ಗೆಯೂ ಅವರಿಗೆ ಅರಿವಿಲ್ಲ. ಶಿಕ್ಷಣದ ಕೊರತೆಯೂ ಇದಕ್ಕೆ ಕಾರಣ ಎಂಬುದು ಅವರ ಅಭಿಪ್ರಾಯ. ಇದಕ್ಕಾಗಿಯೇ ಸಂಘಟನೆ ಸಮಾಜದವರ ಸಮೀಕ್ಷೆ ನಡೆಸಲು ಮುಂದಾಗಿದೆ. ನಿಧಿಯೊಂದನ್ನು ಸ್ಥಾಪಿಸಿ ಬಡವರಿಗೆ ನೆರವಿನ ಹಸ್ತ ಚಾಚಲು ಮುಂದಾಗಿದೆ. ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದ ಬಗ್ಗೆ ತರಬೇತಿ ನೀಡುವ ಯೋಜನೆಯನ್ನೂ ರೂಪಿಸಲಾಗಿದೆ.

- ಕೆ.ವಿ.ಪ್ರಭಾಕರ
 prabhukolar@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.