ಅಂಕಣಗಳು

ನಿಷೇಧದಲ್ಲಿ ಸಮಾನತೆ ಇರಲಿ

ಚಟಗಳಿಗೆ ದಾಸನಾದವನು ಬೇಗ ಚಟ್ಟ ಏರುವುದು ನಿಜ ಎಂಬುದು ಈಗಾಗಲೇ ಸಾಬೀತಾದ ವಿಷಯ.

Published On :

ಚಟಗಳಿಗೆ ದಾಸನಾದವನು ಬೇಗ ಚಟ್ಟ ಏರುವುದು ನಿಜ ಎಂಬುದು ಈಗಾಗಲೇ ಸಾಬೀತಾದ ವಿಷಯ. ಆದ್ದರಿಂದ ದಿಢೀರ್ ತೀರ್ಮಾನ ತೆಗೆದುಕೊಳ್ಳುತ್ತಿರುವ ನಮ್ಮ ನೂತನ ಮುಖ್ಯಮಂತ್ರಿಯವರು ಗುಟ್ಕಾ ದಾಸರು ಬೇಗ ಚಟ್ಟ ಏರಬಾರದೆಂದು ಬಯಸಿ ಸುಪ್ರೀಂಕೋರ್ಟ್ ಆದೇಶದ ನೆಪದಲ್ಲಿ ಗುಟ್ಕಾ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆಗಳು. ಚಟ್ಟ ಏರಲು ಸಿಗರೇಟೂ ಕಾರಣ ಎಂದು ಸುಪ್ರಿಂಕೋರ್ಟ್ ಈಗಾಗಲೇ ಸಿಗರೇಟು, ಬೀಡಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಸೇವಿಸಲು ನಿಷೇಧಿಸಿದೆ. ಆದರೆ ಗುಪ್ತವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸೇದಲು ಯಾವ ನಿರ್ಬಂಧಗಳೂ ಇಲ್ಲ. ಇದು ಮುಕ್ತವಾಗಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ವೇಗದಲ್ಲಿ ಚಟ್ಟ ಏರಿಸುವ ಇನ್ನೊಂದು ಚಟ ಮದ್ಯಪಾನ.
ಮದ್ಯಪಾನವನ್ನು ಈಗಾಗಲೇ ನಿಯಂತ್ರಿಸಲಾಗಿದೆ. ಆದರೆ ವೈಯಕ್ತಿಕವಾಗಿ ಮನೆಗಳಲ್ಲಿ, ಸಾಮೂಹಿಕವಾಗಿ ಬಾರುಗಳಲ್ಲಿ ಕುಡಿಯಲು ಯಾವುದೇ ನಿರ್ಬಂಧಗಳಿಲ್ಲ. ನಮ್ಮ ಸಿದ್ರಾಮಯ್ಯನವರ ಯೋಚನಾ ಲಹರಿ ಏನು ಎಂಬುದು ತಿಳಿಯದಾಗಿದೆ. ಒಂದೆಡೆ ಗುಟ್ಕಾ ನಿಷೇಧಿಸುತ್ತಾರೆ. ಮತ್ತೊಂದೆಡೆ ಸುಲಭದಲ್ಲಿ ಕಡಿಮೆ ದರದಲ್ಲಿ ಮದ್ಯವನ್ನು ಸರ್ಕಾರವೇ ಪೂರೈಸುತ್ತದೆ ಎನ್ನುತ್ತಾರೆ. ಚಟ್ಟ ಏರಿಸಲು ಕಾರಣ ಮದ್ಯಪಾನ, ತಂಬಾಕು ಸೇವನೆ, ಗುಟ್ಕಾ ಸೇವನೆಗೆ ಸಮಾನವಾಗಿದೆ. ಆದ್ದರಿಂದ ನಿಷೇಧಿಸುವುದಾದರೆ ಎಲ್ಲವನ್ನೂ ಸಂಪೂರ್ಣವಾಗಿ ನಿಷೇಧಿಸಲಿ. ವೈಯಕ್ತಿಕವಾಗಿ ಸಿಗರೇಟು ಸೇದಬಹುದಾದರೆ, ಸಾಮೂಹಿಕವಾಗಿ ಮದ್ಯಪಾನ ಮಾಡಬಹುದಾದರೆ, ಬೇರೆಯವರಿಗೆ ತೊಂದರೆ ಕೊಡದಂತೆ ಗುಟ್ಕಾ ಸೇವನೆ ಯಾಕೆ ಬೇಡ? ಗುಟ್ಕಾದಿಂದ ಇಂದು ಅನೇಕ ಚಿಕ್ಕ ಪುಟ್ಟ ವ್ಯಾಪಾರಿಗಳು ಜೀವನಮಾರ್ಗ ಕಂಡುಕೊಂಡಿದ್ದಾರೆ. ಬೀಡಿ, ಸಿಗರೇಟು ಅಂಗಡಿಗಳಲ್ಲಿ ಗುಟ್ಕಾದ್ದೇ ಪ್ರಮುಖ ಪಾಲು. ನಿತ್ಯವೂ ಮೊಪೆಡ್‌ಗಳಲ್ಲಿ ಸಂಚರಿಸಿ, ಮೂಲೆ ಮೂಲೆಗಳಲ್ಲಿರುವ ಸಣ್ಣ ಸಣ್ಣ ಅಂಗಡಿಗಳಿಗೆ ಗುಟ್ಕಾ ಸರಬರಾಜು ಮಾಡುವ ಲಕ್ಷಾಂತರ ಜನಗಳಿದ್ದಾರೆ. ಗುಟ್ಕಾ ನಿಷೇಧಿಸಿದರೆ ಇವರೇನು ಮಾಡಬೇಕು? ಇದಕ್ಕಿಂತ ಮಾರಕವಾದ ಮದ್ಯಪಾನ ನಿಷೇಧ ಇಲ್ಲದಾಗ ಗುಟ್ಕಾ ನಿಷೇಧ ಯಾಕೆ? ಗುಟ್ಕಾ ಕಂಪನಿಗಳಿಂದ ಸರ್ಕಾರಕ್ಕೆ ಸಲ್ಲಬೇಕಾದ ಮಾಮೂಲು ನಿಂತಿದೆಯಾ? ಎಂಬ ಅನುಮಾನ ಕಾಡುತ್ತಿದೆ. ಕಾರಣ ಸಿದ್ದರಾಮಯ್ಯನವರು ಅನುಮಾನಗಳಿಗೆ ಆಸ್ಪದ ಕೊಡದೆ ನಿಷೇಧಿಸುವುದಾದರೆ ಸಾರಾಸಗಟಾಗಿ ಮದ್ಯಪಾನ, ಧೂಮಪಾನ ಮತ್ತು ಗುಟ್ಕಾ ಸಂಪೂರ್ಣವಾಗಿ ನಿಷೇಧಿಸಲಿ. ಇಲ್ಲವಾದರೆ ಗುಟ್ಕಾ ಮಾತ್ರ ನಿಷೇಧ ಬೇಡ ಎಂದು ನನ್ನ ಅಭಿಪ್ರಾಯ.

- ಜಿ. ಹರಿಪ್ರಿಯ
ಕಂಪ್ಲಿ, ಬಳ್ಳಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.