ನಮ್ಮ ಸಾಧನೆಯನ್ನು ಬೇರೆಯವರೊಂದಿಗೆ ಹೋಲಿಸಿಕೊಂಡು ನಾವೇಕೆ ಕುಬ್ಜರಾಗಬೇಕು?
ಈ ಅಂಕಣದಲ್ಲಿ ಹಿಂದೊಮ್ಮೆ The Habit of Winning ಪುಸ್ತಕದ ಬಗ್ಗೆ ಪ್ರಸ್ತಾಪಿಸಿದ್ದೆ.
ನೀವು ಪ್ರಕಾಶ ಅಯ್ಯರ್ ಅವರ ಹೆಸರನ್ನು ಕೇಳಿರುವ ಸಾಧ್ಯತೆ ಕಮ್ಮಿ ಎಂಬುದು ನನ್ನ ಊಹೆ. ಈ ಅಂಕಣದಲ್ಲಿ ಹಿಂದೊಮ್ಮೆ ಅವರ The Habit of Winning ಪುಸ್ತಕದ ಬಗ್ಗೆ ಪ್ರಸ್ತಾಪಿಸಿದ್ದೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಅವರು ಕಾರ್ಪೋರೆಟ್ ಜಗತ್ತಿನಲ್ಲಿ ಸೋಪಿನಿಂದ ಹಿಡಿದು ಕೋಕಾದ ತನಕ ಎಲ್ಲವನ್ನೂ ಮಾರಾಟ ಮಾಡಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ಅವರು ಕಿಂಬರ್ಲಿ ಕ್ಲರ್ಕ್ ಲಿವರ್ ಎಂಬ ಕಂಪನಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಇತ್ತೀಚೆಗೆ ಅಯ್ಯರ್ ಅವರು ಹೇಳಿದ ಎರಡು ಸಾಮಾನ್ಯ ಆದರೆ ಕುತೂಹಲದ ಪ್ರಸಂಗವನ್ನು ಗಮನಿಸುತ್ತಿದ್ದೆ. ನಮ್ಮ ದೃಷ್ಟಿಕೋನವನ್ನು ಹೇಗೆ ಬದಲಿಸಿಕೊಳ್ಳಬೇಕು, ಅದರಿಂದ ಆಗುವ ಪರಿಣಾಮಗಳು ಎಷ್ಟು ಭಿನ್ನವಾಗಿರುತ್ತವೆ ಎಂಬುದನ್ನು ಅಯ್ಯರ್ ಪರಿಣಾಮಕಾರಿಯಾಗಿ ಹೇಳಿದ್ದಾರೆ. ನಾವು ಸದಾ ನಮ್ಮದೇ ಆದ ಲೆಕ್ಕಾಚಾರದಲ್ಲಿ ಮುಳುಗಿರುತ್ತೇವೆ. ನಮ್ಮೆಲ್ಲ ಯೋಚನೆಗಳು ಸಾಂಪ್ರದಾಯಿಕ ನೆಲೆಯಲ್ಲಿ ಆರಂಭಗೊಂಡು ಹಾಗೆಯೇ ಮುಗಿಯುತ್ತದೆ. ನಮ್ಮ ಮನಸ್ಸಿನಲ್ಲಿ ಹುಟ್ಟುವ ಸೂರ್ಯನೂ ಪ್ರತಿದಿನ ಪೂರ್ವದಲ್ಲಿ ಹುಟ್ಟಿ, ಪಶ್ಚಿಮದಲ್ಲಿಯೇ ಮುಳುಗುತ್ತಾನೆ. ಅಷ್ಟರಮಟ್ಟಿಗೆ ನಾವು ಸಂಪ್ರದಾಯಸ್ಥರು. ನಮ್ಮ ಕನಸಿನಲ್ಲೂ ಸೂರ್ಯ ಉತ್ತರಕ್ಕೋ, ದಕ್ಷಿಣಕ್ಕೋ ಮೂಡುವುದಿಲ್ಲ. ನಮ್ಮ ಯೋಚನೆಯ ಗತಿಯನ್ನು ತುಸು ಬದಲಿಸಿಕೊಂಡರೆ ನಮ್ಮಲ್ಲಿ ಆಗುವ ಬದಲಾವಣೆಯಿದೆಯಲ್ಲ, ಅದು ಆಗಾಧ. ಇರಲಿ, ಮುಂದೆ ಹೇಳುವ ಪ್ರಸಂಗವನ್ನು ಓದಿ.
ಹೊಕೈಟೋ ಝಮೊಮಿ!
ಹೀಗೆಂದರೆ ಏನು, ಅದರ ಅರ್ಥವೇನು, ಅದೇನು ಊರಾ, ವ್ಯಕ್ತಿಯ ಹೆಸರಾ... ಮುಂತಾದ ಪ್ರಶ್ನೆಗಳು ತಲೆಯಲ್ಲಿ ಸುಳಿದಾಡಿ ಗೊಂದಲವುಂಟಾಗಬಹುದು.
ಹೊಕೈಟೋ ಝಮೊಮಿ ಅಂದರೆ ಒಬ್ಬ ಕ್ರಿಕೆಟ್ ಆಟಗಾರನ ಹೆಸರು. ಅಂದರೆ ನಿಮಗೆ ತಕ್ಷಣ ನಂಬಲು ಕಷ್ಟವಾಗಬಹುದು. ಯಾಕೆಂದರೆ ನೀವು ಅವನ ಹೆಸರನ್ನು ಹೆಚ್ಚು ಸಲ ಕೇಳಿರಲಿಕ್ಕಿಲ್ಲ. ಇನ್ನು ಆತ ಮೈದಾನದಲ್ಲಿ ನಿಂತು ಆಡಿದ್ದನ್ನು ನೋಡಿರಲಿಕ್ಕಿಲ್ಲ. ಆದರೆ ಆತ ಗ್ರೇಟ್ ಕ್ರಿಕೆಟರ್. ಅವನ ಊರಿನಲ್ಲಿ ಹೊಕೈಟೊಗೆ ಅಪಾರ ಅಭಿಮಾನಿಗಳಿದ್ದಾರೆ. ಆತ ಲಕ್ಷಾಂತರ ಜನರಿಗೆ ಆರಾಧ್ಯ ದೈವ. ಈಗ ನಿಮಗೆ ಮತ್ತಷ್ಟು ಗೊಂದಲವಾಗಿರಲಿಕ್ಕೆ ಸಾಕು. ಈತ ಯಾವ ದೇಶ, ಯಾವ ಟೀಮಿನ ಪರ ಕ್ರಿಕೆಟ್ ಆಡಿದ, ಆಡುತ್ತಿದ್ದಾನೆಂದು ಯೋಚಿಸಬಹುದು.
2008ರಲ್ಲಿ ಮೊದಲ ಬಾರಿಗೆ ಹೊಕೈಟೋ ಐಪಿಎಲ್ ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ. ಹೊಕೈಟೋ ಮೂಲತಃ ನಾಗಾಲ್ಯಾಂಡ್‌ನವ. ಆ ರಾಜ್ಯದಿಂದ ಹೊರಹೊಮ್ಮಿದ ಪ್ರಪ್ರಥಮ ಕ್ರಿಕೆಟ್ ಪ್ರತಿಭೆ. ಆತ ಭಾರತ ತಂಡದಲ್ಲಿ ಜಾಗ ಗಿಟ್ಟಿಸಿಕೊಳ್ಳದೇ ಇರಬಹುದು. ಆದರೆ ಒಂದು ರೀತಿಯಲ್ಲಿ ಆತ ಹೀರೋ. ಕುಗ್ರಾಮವೊಂದರಲ್ಲಿ ಹುಟ್ಟಿದ, ಬಡತನದಲ್ಲಿಯೇ ಬೆಳೆದ ಸಾಮಾನ್ಯರಲ್ಲಿ ಸಾಮಾನ್ಯನನಾದ ಹಳ್ಳಿಹುಡುಗನೊಬ್ಬ ಈ ಸಾಧನೆ ಮಾಡಿದ್ದು ಮಾತ್ರ ಅಸಾಮಾನ್ಯವೇ ಸರಿ.
ಹೊಕೈಟೋ ಫೈನಲ್ ಪಂದ್ಯದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿಲ್ಲ. ಅದು ಬಿಡಿ. ಆತ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಒಂದೂ ಪಂದ್ಯದಲ್ಲಿ ಆಡಲಿಲ್ಲ.
ಆದರೆ ಈಡನ್ ಗಾರ್ಡನ್ ಮೈದಾನದಲ್ಲಿ ನೆಟ್ ಪ್ರ್ಯಾಕ್ಟೀಸ್ ಮಾಡಿದ್ದೇ ಆತನ ಅತಿ ದೊಡ್ಡ ಸಾಧನೆಯ ಮೈಲಿಗಲ್ಲು. ಆ ಹೊಕೈಟೋ ಪಾಲಿಗೆ ಅದೇ ಸಾಧನೆಯ ಶಿಖರ. ಒಂದು ದಿನ ತಾನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರಿಕೆಟ್ ಪಟುಗಳ ಜತೆಯಲ್ಲಿ ಆಡುತ್ತೇನೆ, ಅವರೊಂದಿಗೆ ಒಂದೇ ಬಸ್‌ನಲ್ಲಿ, ವಿಮಾನದಲ್ಲಿ ಪ್ರಯಾಣ ಮಾಡುತ್ತೇನೆ. ಒಂದೇ ರೂಮಿನಲ್ಲಿರುತ್ತೇನೆಂದು ಆತ ಕನಸು -ಮನಸಿನಲ್ಲಿಯೂ ಯೋಚಿಸಿರಲಿಲ್ಲ. ತನ್ನ ಈ ಸಾಧನೆ ಕಂಡು ಇಡೀ ನಾಗಾಲ್ಯಾಂಡ್ ಹೆಮ್ಮೆ ಪಡಬಹುದು. ನನ್ನಂತಾಗಬೇಕೆಂದು ತನ್ನ ರಾಜ್ಯದ ಯುವಕರು ಆಸೆಪಡಬಹುದೆಂಬುದನ್ನು ಕಲ್ಪಿಸಿಕೊಂಡು ಪುಳಕಿತನಾಗುತ್ತಿದ್ದ. ಹೊಕೈಟೋ ಈ ಸಾಧನೆಗೆ ಅವನ ತಂದೆ-ತಾಯಿಗಳ ಆನಂದಕ್ಕೆ ಪಾರವೇ ಇರಲಿಲ್ಲ. ರಿಕಿ ಪಾಂಟಿಂಗ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಪಕ್ಕದಲ್ಲಿ ತಮ್ಮ ಮಗ ನಿಂತಿರುವ ಚಿತ್ರವನ್ನು ಎಲ್ಲರಿಗೂ ತೋರಿಸುತ್ತಾ ಸಂತಸ ಪಡುತ್ತಿದ್ದರು.
ಹಾಗಂತ ಹೊಕೈಟೋಗೆ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಒಂದು ಪಂದ್ಯವನ್ನೂ ಆಡುವ ನಶೀಬು ಸಿಗಲಿಲ್ಲ.
ಇಂಥ ಸಂದರ್ಭದಲ್ಲಿ ಹೊಕೈಟೋನ ಕ್ರಿಕೆಟ್ ಜೀವನವನ್ನು ಯಶಸ್ಸು ಅಂತ ಭಾವಿಸುವುದೋ ಅಥವಾ ಸೋಲು ಅಂತ ತಿಳಿಯುವುದೋ? ಹೊಕೈಟೋ ಪಾಲಿಗೆ ಇದು ದೊಡ್ಡ ಸಾಧನೆಯೇ. ಆದರೆ ನೀವು ಏನಂತ ಭಾವಿಸುತ್ತೀರಿ?
ನೋಡಿ. ಭಾರತದಲ್ಲಿ ದೇಶಕ್ಕೆ ದೇಶವೇ ಕ್ರಿಕೆಟ್ ನೋಡಬಹುದು. ಹತ್ತಾರು ಕೋಟಿ ಜನ ಕ್ರಿಕೆಟ್ ಆಡಬಹುದು. ಅವರೆಲ್ಲರೂ ತಾವೂ ಅಂತಾರಾಷ್ಟ್ರೀಯ ಮ್ಯಾಚಿನಲ್ಲಿ ಆಡಬೇಕೆಂದು ಆಸೆಪಡಬಹುದು. ಆದರೆ ಕೆಲವೇ ಕೆಲ ಜನ ಮಾತ್ರ ಟೀಮಿಗೆ ಸೇರಲು ಅರ್ಹತೆ ಪಡೆಯುತ್ತಾರೆ. ಅದೇನು ಕಡಿಮೆ ಸಾಧನೆಯಲ್ಲ. ನೀವು ಬೇರೆಯವರ ಜತೆಗಿಂತ ಸದಾ ನಿಮ್ಮ ಜತೆಗೆ ರೇಸಿನಲ್ಲಿ ಸೆಣಸುತ್ತಿರುತ್ತೀರಿ ಎಂಬುದು ಬಹಳ ಮಂದಿಗೆ ಗೊತ್ತಿರುವುದಿಲ್ಲ. ಬೇರೆಯವರ ಜತೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ಕ್ಲಾಸಿನಲ್ಲಿ ಚೆನ್ನಾಗಿ perform ಮಾಡುವುದು ಮುಖ್ಯ. ನೀವು ಮೊದಲನೆ ರ್ಯಾಂಕ್ ಪಡೆಯದಿರಬಹುದು. ನೀವು ಸಿಇಒ ಆಗದಿದ್ದರೇನಂತೆ. ಯಶಸ್ವಿ ಮ್ಯಾನೇಜರ್ ಆಗುವುದು ಸಹ ಅಷ್ಟೇ ಮುಖ್ಯ. ಹೊಕೈಟೋ ಆಗುವುದು ಸಾಧನೆಯೇ. ಎಲ್ಲರೂ ತೆಂಡುಲ್ಕರ್ ಆಗಲು ಸಾಧ್ಯವಿಲ್ಲ. ವಿವಿಎಸ್ ಲಕ್ಷ್ಮಣ್, ಗಂಗೂಲಿಯಾಗುವುದು ಸಹ ಮುಖ್ಯವೇ. ನೈಕಿ ಕಂಪನಿ ಕೆಲ ವರ್ಷಗಳ ಹಿಂದೆ ಬಿಡುಗಡೆ ಮಾಡಿದ ಜಾಹಿರಾತಿನಲ್ಲಿ ಹೀಗೆ ಬರೆದಿತ್ತು-'You dont win silver. You loose gold.'
ಹೊಕೈಟೋ ಮಾಡಿದ್ದು ಇಂದಿನ ಸಾಧನೆ. ನಾಳೆ ಆತ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆಯಬಹುದು. ಕೆಲಸಕ್ಕೆ ಸೇರಿದ ಆರಂಭದಲ್ಲಿ ಮೋಟರ್‌ಬೈಕ್‌ನ್ನು ಖರೀದಿಸಲು ಹರಸಾಹಸ ಮಾಡಬೇಕಾಗುತ್ತದೆ. ಕೆಲ ವರ್ಷಗಳ ಬಳಿಕ ಕಾರನ್ನು ಖರೀದಿಸುವಾಗ ಬೈಕ್ ಖರೀದಿಸಿದ್ದೇ ಸಾಹಸ ಎಂಬ ಭಾವ ನಮ್ಮ ಮುಂದೆ ಹಾದು ಹೋಗುತ್ತದೆ. ಇವೆಲ್ಲ ನನ್ನಿಂದ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಕೇಳಿಕೊಂಡರೆ ತಕ್ಷಣಕ್ಕೆ ಉತ್ತರ ಸಿಗಲಿಕ್ಕಿಲ್ಲ.
ಅವೆಲ್ಲ ಇರಲಿ. ನಮ್ಮ ಸಾಧನೆಯನ್ನು ಬೇರೆಯವರೊಂದಿಗೆ ಹೋಲಿಸಿಕೊಂಡು ನಾವು ಕುಬ್ಜರಾಗುವುದು ಬೇಡ.
ದೊಡ್ಡದೋ, ಚಿಕ್ಕದೋ, ನಮ್ಮ ಸಾಧನೆ ನಮಗೆ ಸಮಾಧಾನ, ನೆಮ್ಮದಿ ನೀಡಬೇಕು. ಸಾಧನೆಯ ನಂತರವೂ ಕೊರಗುವುದೇ ಆದರೆ ಅದರಿಂದ ಪ್ರಯೋಜನವಾದರೂ ಏನು? ಓಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತನಿಗಿಂತ ಕಂಚಿನ ಪದಕ ಪಡೆದವನೇ ಹೆಚ್ಚು ಸಮಾಧಾನ ಪಡುತ್ತಾನಂತೆ. ಕಾರಣವಿಷ್ಟೆ. ಬೆಳ್ಳಿ ಪದಕ ಪಡೆದವ ಚಿನ್ನದ ಪದಕ ಸಿಗಲಿಲ್ಲ ಎಂದು ಸದಾ ಕೊರಗುತ್ತಿರುತ್ತಾನಂತೆ. ಅದೇ ಕಂಚಿನ ಪದಕ ವಿಜೇತ ಕನಿಷ್ಠ ಇದಾದರೂ ಸಿಕ್ಕಿತಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಾನಂತೆ.
ಈ ಹಿನ್ನೆಲೆಯಲ್ಲಿ ಹೊಕೈಟೋ ಸಾಧನೆಯನ್ನು ನೋಡಬೇಕು.
ಹೊಕೈಟೋ ತಾನು ಸಚಿನ್ ತೆಂಡುಲ್ಕರ್ ಆಗಲಿಲ್ಲ ಎಂದು ಕೊರಗುವುದಿಲ್ಲ. ತನಗೆ ತಂಡದಲ್ಲಿ ಸ್ಥಾನ ಸಿಕ್ಕರೂ ಆಡಲು ಆಗಲಿಲ್ಲ ಎಂದು ತನ್ನ ನಸೀಬನ್ನು ಹಳಿಯುವುದಿಲ್ಲ. ಆತನಿಗೆ ತಂಡದಲ್ಲಿ ಜಾಗ ಗಿಟ್ಟಿಸಿದ್ದೇ ದೊಡ್ಡ ಸಾಧನೆಯೆಂಬುದು ಗೊತ್ತು. ಹೀಗಾಗಿ ಅವನ ಜೀವನದಲ್ಲಿ ಹತಾಶೆ, ವಿಷಾದಕ್ಕೆ ಜಾಗವೇ ಇಲ್ಲ. ತನ್ನ ರಾಜ್ಯದ ಯಾವನಿಗೂ ಸಾಧ್ಯವಾಗುದಿರುವುದು ತನ್ನಿಂದ ಸಾಧ್ಯವಾಯಿತಲ್ಲ ಎಂದು ಆತ ಖುಷಿಪಡುತ್ತಾನೆ. ಆತನ ರಾಜ್ಯದವರಿಗೂ ಆತನದು ಅಸಾಮಾನ್ಯ ಸಾಧನೆಯಾಗಿ ಕಾಣುತ್ತದೆ. ಆ ರಾಜ್ಯದಿಂದ ಮುಂದೊಂದು ದಿನ ಯಾರೇ ಭಾರತ ಕ್ರಿಕೆಟ್ ತಂಡದಲ್ಲಿ ಜಾಗ ಗಿಟ್ಟಿಸಿಕೊಂಡರೂ ಅವರು ಅಂಥ ಸಾಧನೆ ಮಾಡಿದವರ ಪೈಕಿ ಎರಡನೆಯವರಾಗುತ್ತಾರೆಯೇ ಶಿವಾಯ್, ಹೊಕೈಟೋನ ಹಿರಿಮೆಗೆ ಸರಿಹೊಂದುವುದಿಲ್ಲ. ಈ ಪರಮ ಆತ್ಮತೃಪ್ತಿಯಿದೆಯಲ್ಲ, ಇದು ಸಾಧನೆ ತಂದುಕೊಡುವ ಅತ್ಯಂತ ದೊಡ್ಡ ಬಹುಮಾನ!
ನನಗೆ ಇಲ್ಲಿ ಸದಾನಂದ ವಿಶ್ವನಾಥ ಎಂಬ ಅಪರೂಪದ ಕ್ರಿಕೆಟಿಗ ನೆನಪಾಗುತ್ತಾನೆ. ಆತನಲ್ಲಿ ಸಾಕಷ್ಟು talent ಇತ್ತು. ತಾನೊಬ್ಬ ಉತ್ತಮ ವಿಕೆಟ್‌ಕೀಪರ್ ಎಂಬುದನ್ನು ಆತ ಸಾಬೀತುಪಡಿಸಿದ. ಸಾಕಷ್ಟು ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಆಡಿದ. ಆದರೆ ಏನಾಯಿತೋ ಏನೋ? ತೀರಾ abrupt ಆಗಿ ಆತನ ಕ್ರಿಕೆಟ್ ಜೀವನ ಕೊನೆಗೊಂಡಿತು. ಇದು ಆತನ ವೈಯಕ್ತಿಕ ಜೀವನದ ಮೇಲೆ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರಿತು. ಆತ ಕುಡಿತಕ್ಕೆ ಬಿದ್ದ. ಸಂಬಂಧಗಳು ಮುರುಟಿಹೋದವು. ಕೈಯಲ್ಲಿದ್ದ ಕೆಲಸ ಹೊರಟುಹೋಯಿತು. ಆತನ ಕ್ರಿಕೆಟ್ ಸಾಧನೆಯೇ ಆತನ ವೈಯಕ್ತಿಕ ಜೀವನವನ್ನು ಕಸಿದುಕೊಂಡಿತು. ಆತ ಎಂದಿಗೂ ತನ್ನ ಸಾಧನೆಯಿಂದ ಸಮಾಧಾನ ಕಾಣಲೇ ಇಲ್ಲ. ಅವನ ವೃತ್ತಿ ಜೀವನದ ಕ್ಷಣಿಕ ವೈಫಲ್ಯ ಅವನ ಬದುಕಿನ ಮೇಲೆ ಶಾಶ್ವತವಾಗಿ ಬರೆ ಎಳೆದುಬಿಟ್ಟಿತು.
***
ನೀವು ಮಿಶೆಲ್ ಎಂಬ ವ್ಯಕ್ತಿಯ ಕತೆ ಕೇಳಬೇಕು. ಬದುಕಿನ ಸಂಗ್ರಾಮದಲ್ಲಿ ನಾಯಕನಾಗಿ ಹೊರಹೊಮ್ಮಬೇಕಾದವನು ಹೊಂದಿರುವ ಅತಿಮುಖ್ಯ ಗುಣವನ್ನು ಆತನ ಜೀವನ ಪ್ರತಿಬಿಂಬಿಸುತ್ತದೆ. 'ಭರವಸೆ' ಇದುವೇ ಆ ಗುಣದ ಹೆಸರು. ವಿಧಿಯೆಂಬ ವಿಲನ್ ಅದೆಂಥದೇ ಮಾರಣಾಂತಿಕ ಪ್ರಹಾರ ಕೊಟ್ಟರೂ ವಿಶ್ವಾಸವನ್ನು ಅಚಲವಾಗಿರಿಸಿಕೊಳ್ಳುವವ ಹೀರೋ ಆಗಿಯೇ ತೀರುತ್ತಾನೆ.
ಮೋಟಾರ್‌ಸೈಕಲ್‌ನ ಹೆದ್ದಾರಿ ಪ್ರಯಾಣದ ಸಂದರ್ಭದಲ್ಲಿ ಭೀಕರ ಅಪಘಾತಕ್ಕೆ ತುತ್ತಾದ ಸಂದರ್ಭದಲ್ಲಿ ಮಿಶೆಲ್‌ಗಿನ್ನೂ 28ರ ಪ್ರಾಯ. ನಿಯಂತ್ರಣ ತಪ್ಪಿದ ಆತನ ಮೋಟಾರ್‌ಸೈಕಲ್ ನಿಂತಿದ್ದ ಟ್ರಕ್‌ಗೆ ಗುದ್ದಿತ್ತು. ಆತನ ಕೈ ಮತ್ತು ಹೊಟ್ಟೆಯ ಭಾಗಗಳೆಲ್ಲ ನುಜ್ಜುಗುಜ್ಜು. ಟ್ಯಾಂಕ್‌ನಿಂದ ಪೆಟ್ರೋಲ್ ಹೊರಚಿಮ್ಮಿ ಮೈಗೆಲ್ಲ ಬೆಂಕಿ ಹೊತ್ತಿಕೊಂಡಿತು. ಆತನ ಮುಖ ಗುರುತಿಸಲಾಗದಂತೆ ಕರಕಲಾಗಿತ್ತು. ತೀವ್ರ ಸುಟ್ಟಗಾಯಗಳಿಂದ ಜರ್ಜರಿತವಾಗಿದ್ದ ಆತನ ದೇಹವನ್ನು ನೋಡಿದ ವೈದ್ಯರು ಬದುಕುಳಿಯುವ ಸಾಧ್ಯತೆಯನ್ನೇ ತಳ್ಳಿಹಾಕಿದ್ದರು. ಲೆಕ್ಕವಿಲ್ಲದಷ್ಟು ಬಾರಿ ಚರ್ಮ ಕಸಿ, ಶಸ್ತ್ರಚಿಕಿತ್ಸೆಗಳನ್ನೆಲ್ಲ ಕೈಗೊಂಡ ಮೇಲೆ ಮಿಶೆಲ್ ಬದುಕುಳಿದ. ಮುಖ ವಿಕಾರವಾಗಿತ್ತು, ಕೈಗಳಲ್ಲಿ ಬೆರಳುಗಳೇ ಇದ್ದಿರಲಿಲ್ಲ. ಆರು ತಿಂಗಳ ನಂತರ ಹೊಸ ಬದುಕನ್ನು ಕಟ್ಟಿಕೊಳ್ಳುವ ಸಂಕಲ್ಪದೊಂದಿಗೆ ಮಿಶೆಲ್ ಎದ್ದುನಿಂತ. ಕಂಪನಿಯೊಂದನ್ನು ಕಟ್ಟಿ ಕೋಟ್ಯಧಿಪತಿ ಆದ. ಕೈಗಳಲ್ಲಿ ಬೆರಳುಗಳೇ ಇಲ್ಲದಿದ್ದರೆ ಏನಾಯಿತಂತೆ, ಪೈಲಟ್ ಆಗಿ ತರಬೇತು ಹೊಂದಿದ. ಪ್ರಪಾತಕ್ಕೆ ಬಿದ್ದಂತಾಗಿದ್ದ ಬದುಕು ಮತ್ತೆ ಹಳಿಗೆ ಬಂದು ಧೌಡಿಗೆ ಶುರುವಿಟ್ಟುಕೊಂಡ ಖುಷಿ!
ಆದರೆ.... ಇದಾಗಿ ನಾಲ್ಕೇ ವರ್ಷಗಳ ನಂತರ ಅಪ್ಪಳಿಸಿತು ಇನ್ನೊಂದು ಅಪಘಾತ. ಪೈಲಟ್ ಸೀಟ್‌ನಲ್ಲಿ ಕುಳಿತು ವಿಮಾನ ಇಳಿಸುತ್ತಿದ್ದ ಸಂದರ್ಭದಲ್ಲಿ ಅದು ನೆಲಕ್ಕೆ ಉಜ್ಜಿ ಮಿಶೆಲ್‌ನ ಬೆನ್ನುಹುರಿ ಸರಿಮಾಡಲಾಗದಂತೆ ಪೆಟ್ಟು ತಿಂದಿತು. ಆತ ಇನ್ನೆಂದೂ ನಡೆಯುವಂತಿರಲಿಲ್ಲ. ಮಿಶೆಲ್ ವೀಲ್‌ಚೇರ್‌ಗೆ ಬಂಧಿ. ಆದರೂ ಆತ ಅಧೀರನಾಗಲಿಲ್ಲ. ತನ್ನ ಉದ್ಯಮವನ್ನು ಕುಳಿತಲ್ಲಿಂದಲೇ ಮುನ್ನಡೆಸುತ್ತ, ಸ್ಕೈ ಡೈವಿಂಗ್ ಮಾಡುತ್ತ, ಜಗತ್ತಿನಾದ್ಯಂತ ಜನರಲ್ಲಿ ಸ್ಫೂರ್ತಿ ತುಂಬುತ್ತ ಬಿಂದಾಸ್ ಆಗಿ ಜೀವನದ ಜೋಕಾಲಿ ಜೀಕತೊಡಗಿದ. ಮಿಶೆಲ್ ಹೇಳುತ್ತಾನೆ, 'ಅಪಘಾತ ಆಗುವುದಕ್ಕೂ ಮೊದಲು ನಾನು ಮಾಡಬಹುದಾದ ಹತ್ತು ಸಾವಿರ ಸಂಗತಿಗಳಿದ್ದವು. ಅಪಘಾತದ ಬಳಿಕ ಅದರಲ್ಲಿ ಸಾವಿರದಷ್ಟು ಕೆಲಸಗಳನ್ನು ಮಾಡಲಾಗದ ಸ್ಥಿತಿ ಬಂದೊದಗಿತು. ಹಾಗೆ ಮಾಡಲಾಗದ್ದರ ಬಗ್ಗೆ ಬೇಸರಿಸಿಕೊಂಡು ನಾನು ನನ್ನ ಉಳಿದ ಸಮಯವನ್ನು ಕಳೆಯಬಹುದು. ಆದರೆ ನಾನು ಮಾಡಲು ಸಮರ್ಥನಾಗಿರುವ ಉಳಿದ ಒಂಬತ್ತು ಸಾವಿರ ಸಂಗತಿಗಳ ಬಗ್ಗೆ ಯೋಚಿಸುವ ನಿರ್ಧಾರ ಕೈಗೊಂಡೆ...'
ಮಿಶೆಲ್ ತನ್ನ ಬೆರಳುಗಳನ್ನು ಕಳೆದುಕೊಂಡ, ಬೆನ್ನುಹುರಿ ಜಖಂ ಆಗಿ ನಡೆಯುವ ಕಸುವನ್ನೇ ಕಳೆದುಕೊಂಡ. ಆದರೆ ಒಂದನ್ನು ಮಾತ್ರ ಆತ ಕಳೆದುಕೊಳ್ಳಲಿಲ್ಲ. ಅದೆಂದರೆ ಬದುಕಿನ ಕುರಿತ ಭರವಸೆ- ವಿಶ್ವಾಸ.
- ವಿಶ್ವೇಶ್ವರ ಭಟ್
vbhat@me.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

