ಕೃಷಿ ವಲಯದ ಇಂದಿನ ಅಗತ್ಯಗಳು
ಇತ್ತೀಚೆಗೆ ಬಿಜಾಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದ ಕೋ. ಚನ್ನಬಸಪ್ಪನವರು ತಮ್ಮ ಭಾಷಣದಲ್ಲಿ ಕೃಷಿ ಭೂಮಿಯನ್ನು ಕೈಗಾರಿಕೆಗಳಿಗೆ ನೀಡುತ್ತಿರುವ ಬಗ್ಗೆ ತಮ್ಮ ನೋವನ್ನು ಹೊರಗೆಡಹಿದ್ದಾರೆ. ಬಹುಶಃ ಇದು ಇವರೊಬ್ಬರ ಮನದಾಳದ ನೋವಲ್ಲ. ವಿವಿಧ ವೃತ್ತಿಗಳಲ್ಲಿದ್ದು ಜನಪರ ಕಾಳಜಿಯುಳ್ಳ ನಾಡಿನ ಬಹಳಷ್ಟು ಜನರ ಅಭಿಪ್ರಾಯವೂ ಇದೇ ಆಗಿದೆ. ಆದರೆ ಅವರಿಗೆ ಅದನ್ನು ವ್ಯಕ್ತಪಡಿಸಲು ಸೂಕ್ತ ವೇದಿಕೆ ದೊರಕಿರಲಾರದು ಅಥವಾ ಈ ವಿಚಾರದಲ್ಲಿ ಒಂದು ಆಂದೋಲನವನ್ನು ಮುನ್ನಡೆಸುವ ಪ್ರಾಮಾಣಿಕ ನಾಯಕತ್ವದ ಕೊರತೆ ಅವರನ್ನು ಕಾಡಿರಬಹುದು. ನೂತನ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರು ಕೂಡ ಕೃಷಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲವೆಂದು ಈಗಾಗಲೇ ಸ್ಪಷ್ಟಪಡಿಸಿರುವುದು ಕೃಷಿಯನ್ನೇ ನಂಬಿರುವ ರೈತಾಪಿ ಜನರಿಗೆ ಸಮಾಧಾನ ತರುವ ವಿಷಯವಾಗಿದೆ. 2011ರಿಂದ ಬಾಕಿಯಿದ್ದ ಭೂಸ್ವಾಧೀನ ವಿಧೇಯಕವನ್ನು ಮಂಡಿಸಿ ಅಂಗೀಕರಿಸಲು ಕೇಂದ್ರ ಸರ್ಕಾರ ಮುಂದಡಿಯಿಟ್ಟಿದ್ದು ಈ ಬಗ್ಗೆ ಸರ್ವ ಪಕ್ಷ ಸಭೆಯಲ್ಲಿ ಒಮ್ಮತ ಮೂಡಿಸುವಲ್ಲಿ ಸರ್ಕಾರ ಯಶಸ್ವಿಯಾಗಿರುವ ಬಗ್ಗೆ ಕೆಲ ದಿನಗಳ ಹಿಂದೆ ವರದಿಯಾಗಿದೆ. ಸದರಿ ವಿಧೇಯಕದಲ್ಲಿ ಗಮನಿಸಬಹುದಾದ ಪ್ರಮುಖ ಅಂಶವೆಂದರೆ ಖಾಸಗಿ ಕಂಪನಿಗಳಿಗೆ ಹಾಗೂ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಯೋಜನೆಗಳಿಗೆ ಭೂಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಭೂಮಿ ಕಳೆದುಕೊಳ್ಳುವ ಜನರಲ್ಲಿ ಶೇ.80 ಜನರ ಒಪ್ಪಿಗೆ ಅಗತ್ಯವಾಗಿರುತ್ತದೆ. ಆದರೆ ಸರ್ಕಾರಿ ವಲಯದ ಉದ್ದಿಮೆಗಳಿಗೆ (PSU’s) ಇದು ಅನ್ವಯಿಸುವುದಿಲ್ಲ.
ಉದ್ಯೋಗ ಸೃಷ್ಟಿ ಹಾಗೂ ವಿದೇಶಿ ವಿನಿಮಯ ಗಳಿಕೆ ಮೂಲಕ ಸರ್ಕಾರದ ಬೊಕ್ಕಸಕ್ಕೆ ಆದಾಯ ನಿರೀಕ್ಷಿಸಿ ವಿಶೇಷ ಆರ್ಥಿಕ ವಲಯಗಳು, ಕೈಗಾರಿಕಾ ನಗರಗಳು, ಮಾಹಿತಿ ತಂತ್ರಜ್ಞಾನ ಪಾರ್ಕುಗಳು, ಬೃಹತ್ ಕೈಗಾರಿಕಾ ವಸಾಹತುಗಳು ಇತ್ಯಾದಿ ಹೆಸರಿನಲ್ಲಿ ಕೈಗಾರಿಕೆ ಆರಂಭಿಸಲು ಉದ್ದಿಮೆಗಳಿಗೆ ತೆರಿಗೆ ವಿನಾಯಿತಿಯೂ ಸೇರಿದಂತೆ ವಿವಿಧ ಪ್ರೋತ್ಸಾಹಕ ಯೋಜನೆಗಳನ್ನು ದೇಶದಾದ್ಯಂತ ಎಲ್ಲಾ ಸರ್ಕಾರಗಳೂ ಘೋಷಿಸುತ್ತಿವೆ. ಅದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಮೇಳಗಳನ್ನು ಸಹ ಆಯೋಜಿಸುತ್ತಿವೆ.
ಕರ್ನಾಟಕದ ಉದಾಹರಣೆಯನ್ನೇ ತೆಗದುಕೊಂಡರೆ ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ 2008-09 ರಲ್ಲಿ ವ್ಯವಸಾಯ ಮಾಡಲಾಗಿರುವ ಭೂಮಿ 123.68 ಲಕ್ಷ ಹೆಕ್ಟೇರ್. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆ.ಐ.ಎ.ಡಿ.ಬಿ)ಯು 1999-2012ರ ನಡುವಿನ ಅವಧಿಯಲ್ಲಿ 304 ಕೈಗಾರಿಕೆಗಳಿಗಾಗಿ ಸುಮಾರು 53,312 ಎಕರೆಗಳಷ್ಟು ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವುದು ಕಂಡುಬರುತ್ತಿದೆ. ಇನ್ನೊಂದೆಡೆ ರಸ್ತೆ ಮತ್ತು ಇನ್ನಿತರ ಸಾರ್ವಜನಿಕ ಉದ್ದೇಶಕ್ಕಾಗಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಕೆಲವೆಡೆ ರೈತರು ಬತ್ತ ಮುಂತಾದ ಆಹಾರ ಧಾನ್ಯ ಬೆಳೆಯುವುದು ಲಾಭದಾಯಕವಲ್ಲವೆಂದು ಆಹಾರ ಧಾನ್ಯಗಳ ಬದಲಾಗಿ ರಬ್ಬರ್, ಶುಂಠಿ ಮೊದಲಾದ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಮುಂದಾಗುತ್ತಿದ್ದಾರೆ. ಉದಾಹರಣೆಗೆ 17.09.2011 ರಲ್ಲಿ ಕರ್ನಾಟಕದ ಜನಸಂಖ್ಯೆ 6,11,30,704 ಇದ್ದರೆ 02.04.2013 ರಲ್ಲಿ 06,24,04,572 ಕ್ಕೆ ಏರಿದ್ದು ಈ ಅವಧಿಯಲ್ಲಿ ಜನಸಂಖ್ಯೆ ಸುಮಾರು 12,73,868 ಹೆಚ್ಚಾಗಿರುವುದಂತೂ ನಿಜ. ಇದೇ ಸಂದರ್ಭದಲ್ಲಿ ನಾವು ಕೃಷಿ ಭೂಮಿಯನ್ನು ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆಯೇ ಎಂದರೆ ಉತ್ತರ ಇಲ್ಲ ಎಂಬುದಾಗಿದೆ. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸುತ್ತಿರುವುದು ಒಂದೆಡೆಯಾದರೆ ನಾಗಾಲೋಟದಲ್ಲಿ ಏರುತ್ತಿರುವ ಜನಸಂಖ್ಯೆ ಇನ್ನೊಂದೆಡೆ. ಜನ ಸಂಖ್ಯೆ ಮತ್ತು ಕೃಷಿ ಉತ್ಪಾದನೆ ಈ ಎರಡೂ ಸಮಾನಾಂತರವಾಗಿ ಹೋಗುವುದರ ಬದಲು ಇಂದು ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿರುವುದು ಆಘಾತಕಾರಿ ಅಂಶ.
ಒಂದೆಡೆ ಕೃಷಿ ಭೂಮಿ ಕಡಿಮೆಯಾಗುತ್ತಿದ್ದರೆ, ಇನ್ನೊಂದೆಡೆ ಅಕಾಲಿಕ ಹವಾಮಾನ, ಬೆಳೆದ ಬೆಳೆಯ ಸಂಗ್ರಹಾಗಾರದ ಕೊರತೆ, ವ್ಯವಸ್ಥಿತ ಮಾರುಕಟ್ಟೆ ಕೊರತೆ, ಅಸಮರ್ಪಕ ವಿದ್ಯುತ್ ಪೂರೈಕೆ ಇವುಗಳಿಂದಾಗಿ ಕೃಷಿ ಉತ್ಪಾದನೆ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಕೃಷಿ ಬಜೆಟ್ ಮಂಡನೆಯಾಗುತ್ತಿದೆ. ಇದರಿಂದ ವಾಸ್ತವವಾಗಿ ರೈತರ ಬದುಕು ಹಸನಾಗಿದೆಯೇ? ಕೃಷಿ ಉತ್ಪಾದನೆ ಹೆಚ್ಚಾಗಿದೆಯೇ? ರೈತರಿಗೆ ಮಾರುಕಟ್ಟೆ ಸೌಲಭ್ಯದಲ್ಲಿ ಸುಧಾರಣೆಯಾಗಿದೆಯೇ? ಜನ ಸಾಮಾನ್ಯರಿಗೆ ಕಡಿಮೆ ದರದಲ್ಲಿ ಕೃಷಿ ಉತ್ಪನ್ನಗಳು ಲಭ್ಯವಾಗುತ್ತಿವೆಯೇ? ಎಂಬುದನ್ನು ವಿಚಾರ ಮಾಡಬೇಕಾಗಿದೆ.
ಕೃಷಿ ರಂಗದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿದ್ದಾಗ್ಯೂ ವಿವಿಧ ಕ್ಷೇತ್ರಗಳಲ್ಲಿ ಉನ್ನತ ವ್ಯಾಸಂಗ ಮಾಡಿದ್ದು, ಉತ್ತಮ ಆದಾಯ ತರುವ ಉದ್ಯೋಗದಲ್ಲಿರುವ ಕೆಲವು ಯುವಕರು ಅಂತಹ ಉದ್ಯೋಗಗಳನ್ನು ತೊರೆದು ಕೃಷಿಯಲ್ಲಿ ತೊಡಗಿಸಿಕೊಂಡಿರುವ ವಿಷಯ ಅಗಾಗ್ಗೆ ಪತ್ರಿಕೆಗಳಲ್ಲಿ ವರದಿಯಾಗುತ್ತಿವೆ. ಇಂತಹ ಯುವಕರಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಸರ್ಕಾರಗಳ ಕೃಷಿ ಸಂಬಂಧಿ ಯೋಜನೆಗಳು ರೈತ ಸ್ನೇಹಿಯಾಗಿ ಜಾರಿಯಾಗುತ್ತಿವೆಯೇ, ಇಂತಹ ಯೋಜನೆಗಳನ್ನು ಜಾರಿಗೆ ತರುವ ಪೂರ್ವದಲ್ಲಿ ಆಯಾ ಪ್ರದೇಶದ ಪ್ರಗತಿಪರ ರೈತರೊಂದಿಗೆ ಸಮಾಲೋಚಿಸಲಾಗುತ್ತಿದೆಯೇ ಅಥವಾ ಅಧಿಕಾರಿಗಳು ಸಿದ್ಧಪಡಿಸಿದ ಯೋಜನೆಗಳನ್ನು ಸರ್ಕಾರಗಳು ಘೋಷಿಸುತ್ತಿವೆಯೇ ಎಂಬುದನ್ನು ವಿಚಾರ ಮಾಡಬೇಕಾಗಿದೆ. ಬೀದರ್ ಜಿಲ್ಲೆಗೆ ಹೊಂದಿಕೆಯಾಗುವ ಒಂದು ಯೋಜನೆ ಕೊಡಗು ಜಿಲ್ಲೆಗೆ ಹೊಂದಿಕೆಯಾಗದಿರಬಹುದು. ಅದೇ ರೀತಿ ಕೋಲಾರ ಜಿಲ್ಲೆಯಲ್ಲಿನ ತೋಟಗಾರಿಕಾ ಬೆಳೆಗಳ ಸ್ಥಿತಿಗತಿಗೂ ಮಲೆನಾಡಿನ ತೋಟಗಾರಿಕಾ ಬೆಳೆಗಳ ಸ್ಥಿತಿಗತಿಗೂ ವ್ಯತ್ಯಾಸವಿದೆ. ಹೀಗಿರುವಾಗ ವಾಸ್ತವವಾಗಿ ನಮ್ಮ ರೈತರು ಸರ್ಕಾರದಿಂದ ಯಾವ ಸೌಲಭ್ಯಗಳನ್ನು ನಿರೀಕ್ಷಿಸುತ್ತಾರೆ? ಸ್ಥಳೀಯವಾಗಿ ರೈತರಿಗೆ ಇರುವ ಸಮಸ್ಯೆಗಳು ಅವುಗಳಿಗೆ ಪರಿಹಾರಗಳು ಇವುಗಳನ್ನು ಆಯಾ ಪ್ರದೇಶದ ರೈತರೊಂದಿಗೆ ಸಮಾಲೋಚಿಸಿ ಅದಕ್ಕೆ ತಕ್ಕ ಯೋಜನೆಗಳನ್ನು ರೂಪಿಸದೇ ರಾಜ್ಯವ್ಯಾಪಿ ಯೋಜನೆಗಳನ್ನು ಘೋಷಿಸುವುದರಿಂದ ಅಂತಹ ಯೋಜನೆಗಳ ಮೂಲ ಉದ್ದೇಶ ಈಡೇರುವುದಿಲ್ಲ ಮತ್ತು ಅದರಿಂದ ಬಹು ಸಂಖ್ಯಾತ ರೈತ ಸಮುದಾಯಕ್ಕೆ ಪ್ರಯೋಜನವಾಗುವುದಿಲ್ಲ. ಉದಾಹರಣೆಗೆ ಕೋಲಾರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಟೊಮೋಟೋ ಹಣ್ಣನ್ನು ಹೆಚ್ಚಾಗಿ ಬೆಳೆಯುತ್ತಾರೆ. ಉತ್ತಮ ಬೆಳೆ ಬಂದಂತಹ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುತ್ತದೆ. ಇದರಿಂದ ಟೊಮೋಟೋ ಬೆಳೆದ ರೈತನಿಗೆ ನಷ್ಟವಾಗುತ್ತದೆ. ಒಂದು ವೇಳೆ ಈ ಪ್ರದೇಶದಲ್ಲಿ ಕನಿಷ್ಟ 2-3 ತಿಂಗಳ ಕಾಲ ಈ ಟೊಮೋಟೋವನ್ನು ಸಂಗ್ರಹಿಸಿಡುವ ಶೈತ್ಯಾಗಾರಗಳು ಆಯಾ ತಾಲೂಕುಗಳಲ್ಲಿ ಲಭ್ಯವಿದ್ದಲ್ಲಿ ಮಾರುಕಟ್ಟೆಯ ಬೇಡಿಕೆಗನುಸಾರವಾಗಿ ಅದನ್ನು ಮಾರಾಟ ಮಾಡಲು ಅನುಕೂಲವಾಗುತ್ತದೆ. ಎರಡನೆಯದಾಗಿ ಟೊಮೋಟೋವನ್ನು ಬಳಸಿ ಮಾಡಬಹುದಾದ ಉತ್ಪನ್ನಗಳನ್ನು ಸಿದ್ದಪಡಿಸಲು ಅನುಕೂಲವಾಗುವಂತೆ ಆಯಾ ತಾಲೂಕುಗಳಲ್ಲಿಯೇ ಸಣ್ಣ ಸಣ್ಣ ಕೈಗಾರಿಕಾ ಘಟಕಗಳನ್ನು ತೆರೆದಲ್ಲಿ ಉತ್ತಮ ಬೆಳೆ ಬಂದ ಸಂದರ್ಭದಲ್ಲಿ ಸೂಕ್ತ ಬೆಲೆಯಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕುವ ಸಂದರ್ಭ ತಪ್ಪುತ್ತದೆ. ಆಯಾ ಪ್ರದೇಶದ ರೈತರೊಂದಿಗೆ ಸಮಾಲೋಚಿಸಿದಾಗ ಅಂತಹ ಪ್ರದೇಶಗಳಿಗೆ ಸೂಕ್ತವಾದ ಯೋಜನೆಗಳು ಯಾವುವು ಹಾಗೂ ರೈತರ ತುರ್ತು ಅಗತ್ಯಗಳೇನು ಎಂಬುದು ಕಂಡುಬರುತ್ತದೆ. ರೈತರಿಗೆ ಅನುಕೂಲವಾಗುವುದರ ಜೊತೆಗೆ ಅವರ ಆದಾಯ ಮೂಲವನ್ನು ಹೆಚ್ಚಿಸುವ ವಾಸ್ತವ ಯೋಜನೆಗಳಿಗೆ ಆಯವ್ಯಯದಲ್ಲಿ ಅವಕಾಶ ಕಲ್ಪಿಸಿದರೆ ರೈತರ ಹಾಗೂ ದೇಶದ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಅಂತಹ ಯೋಜನೆಗಳು ಸಾರ್ಥಕವಾಗುತ್ತವೆ.
ಇಂದು ತುರ್ತಾಗಿ ಆಗಬೇಕಾದ ಇನ್ನೊಂದು ಬಹು ಮುಖ್ಯ ಯೋಜನೆಯೆಂದರೆ ಆಯಾ ಪ್ರದೇಶಗಳ ಸ್ಥಿತಿಗತಿಗನುಗುಣವಾಗಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಕ್ರಮಗಳು. ಈ ಕಾರ್ಯಕ್ರಮದ ಬಗ್ಗೆ ವಿಶೇಷ ಆದ್ಯತೆ ನೀಡಿ ಆಂದೋಲನದ ಮಾದರಿಯಲ್ಲಿ ಜಾಗೃತಿ ಮೂಡಿಸದಿದ್ದಲ್ಲಿ ಮುಂದೆ ಕುಡಿಯುವ ನೀರಿಗೆ ಬಂದೊದಗಬಹುದಾದ ಸ್ಥಿತಿ ಭೀಕರವಾಗಲಿದೆ. ಸ್ಥಳೀಯವಾಗಿ ವಿದ್ಯುತ್ ಉತ್ಪಾದನೆ ಹಾಗೂ ವಿದ್ಯುತ್ ಸೌಲಭ್ಯ ಸುಧಾರಣೆಗೆ ಕ್ರಮ, ರೈತರಿಗೆ ಸ್ಥಳೀಯವಾಗಿ ಉತ್ಪಾದನೆ ವಿಲೆವಾರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಹಾಗೂ ಸ್ಥಳೀಯವಾಗಿ ಸಣ್ಣ ಕೈಗಾರಿಕೆಗಳ ಸ್ಥಾಪನೆ, ಸಾಂಪ್ರದಾಯಿಕ ಕೃಷಿ ಪದ್ದತಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಷ, ಕೃಷಿಯನ್ನು ಅಭಿವೃದ್ಧಿ ಹೊಂದುತ್ತಿರುವ ವಲಯವೆಂದು ಪರಿಗಣಿಸಿ ವಿದ್ಯಾವಂತ ಯುವಜನರು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ರಚನಾತ್ಮಕವಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸದಿದ್ದಲ್ಲಿ ಮುಂದೊಂದು ದಿನ ಮಾತ್ರೆಗಳ ರೂಪದಲ್ಲಿ ಆಹಾರ ಸೇವಿಸಬೇಕಾಗಬಹುದು!
- ಕೆ.ಎಸ್.ರವಿಶಂಕರ
ravikoppa2011@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

