ಇರಲಾರದೆ ಕೈಸುಟ್ಟುಕೊಂಡ ಪವಾರ್!
2, ಜೂನ್ 2013. ಚೆನ್ನೈನ ಪಂಚತಾರಾ ಹೋಟೆಲಿನಲ್ಲಿ ಭಾರತೀಯ ಕ್ರಿಕೆಟ್...

2, ಜೂನ್ 2013. ಚೆನ್ನೈನ ಪಂಚತಾರಾ ಹೋಟೆಲಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ನಾರಾಯಣಸ್ವಾಮಿ ಶ್ರೀನಿವಾಸನ್ ಹಣೆಬರಹ ನಿರ್ಧಾರವಾಗುವುದಿತ್ತು. ಅಳಿಯ ಹೇಸಿಗೆ ತಿಂದದ್ದಕ್ಕೆ ಮಾವ ಪಟ್ಟ ಬಿಟ್ಟು ಹೋಗಬೇಕಾದುದು ಅನಿವಾರ್ಯ ಎಂಬ ವಾತಾವರಣ ನಿರ್ಮಾಣವಾಗಿತ್ತು. ಈ ನಾಟಕದ ಸೂತ್ರಧಾರರು ಅದಾಗಲೇ ತಮ್ಮ ನೆಚ್ಚಿನ ಟಿ.ವಿ. ನ್ಯೂಸ್ ಚಾನೆಲ್‌ಗಳ ಮೂಲಕ 'ಶ್ರೀನಿವಾಸನ್ ಇಂದು ಮನೆಗೆ' ಎಂದು ಕಾಗೆ ಹಾರಿಸಿದ್ದೂ ಆಗಿತ್ತು. ಇಡೀ ವಾತಾವರಣ, ಬಿಸಿಸಿಐನ ಇಡೀ ವ್ಯವಸ್ಥೆ ಶ್ರೀನಿವಾಸನ್ ವಿರುದ್ಧ ಇದೆ ಎಂದೇ ಬಿಂಬಿಸಲಾಗಿತ್ತು. 'ಇಂದು ದೇಶದ ಅತ್ಯಂತ ಚಾಣಾಕ್ಷ ರಾಜಕಾರಣಿ ಬಿಸಿಸಿಐ ಪದಾಧಿಕಾರಿಗಳಿಗೆ ನಿಜವಾದ ರಾಜಕಾರಣದ ವರಸೆಗಳನ್ನು ಹೇಳಿಕೊಡಲಿದ್ದಾರೆ. ಕಾದು ನೋಡಿ' ಎಂದು ಸಿಎನ್‌ಎನ್-ಐಬಿಎನ್ ಚಾನೆಲ್‌ನ ರಾಜಕೀಯ ವಿಶ್ಲೇಷಕ-ಆ್ಯಂಕರ್ ಟ್ವೀಟಿಸಿದ್ದೂ ಆಯಿತು. ಭಾನುವಾರ ಮಧ್ಯಾಹ್ನ 2.30ಕ್ಕೆ ಬಿಸಿಸಿಐನ ಮಹತ್ವದ ಸಭೆ ಆರಂಭವಾಯಿತು. ಸುಮಾರು ಮೂರು ತಾಸು ಟಿವಿ ಚಾನೆಲ್‌ಗಳ ಮೂಲಕ ದೇಶವಾಸಿಗಳಿಗೆ ಈ ಸಭೆ ಕುರಿತಾಗಿ ಪುಕ್ಕಟೆ ಮನರಂಜನೆ ಒದಗಿಸಲಾಯಿತು. ಅವರು ಬಿದ್ದರಂತೆ, ಇವರು ಎದ್ದರಂತೆ, ಅವರ ಆಟ ನಡೆಯಲಿಲ್ಲವಂತೆ, ಅಂದುಕೊಂಡಂತೆಯೇ ಎಲ್ಲವೂ ಆಗುತ್ತಿದೆ... ಹೀಗೆ ಕ್ಷಣಕ್ಕೊಂದು ಬ್ರೇಕಿಂಗ್ ಸುದ್ದಿಗಳು ಒಂದಾದ ಮೇಲೆ ಒಂದರಂತೆ ಟಿ.ವಿ. ಪರದೆಗಳಲ್ಲಿ ಅತ್ತಿಂದಿತ್ತ ಸುಳಿದಾಡಿದವು. ಶ್ರೀನಿವಾಸನ್ ಅಧಿಕಾರಾವಧಿಯ ಚಮರಗೀತೆ ಹಾಡಲು ಎಲ್ಲರೂ ತಯಾರಾಗಿದ್ದರು. ಆದರೆ ಮೂರೇ ತಾಸಿನಲ್ಲಿ ಇಡೀ ಚಿತ್ರಣವೇ ಬದಲಾಯಿತು. 'ಎಲ್ಲೂ ಹೋಗಲ್ಲ, ನಾನು ಎಲ್ಲೂ ಹೋಗಲ್ಲ' ಎಂದು ಶ್ರೀನಿವಾಸನ್ ಹಾಡಿದರೆ, 'ಏಕೆ ಹೀಗಾಯ್ತೋ ನಾನು ಕಾಣೆನು' ಎಂದು ವಿರೋಧಿ ಬಣ ಮಮ್ಮಲ ಮರುಗುತ್ತಿತ್ತು. ಅಳಿಯ ಗುರುನಾಥ್ ಮೇಯಪ್ಪನ್ ಐಪಿಎಲ್ ಪಂದ್ಯಗಳ ಮೇಲೆ ಬಾಜಿ ಕಟ್ಟಿದ್ದರ ಸಂಬಂಧ ಬಿಸಿಸಿಐ ನೇಮಕ ಮಾಡಿರುವ ತನಿಖಾ ಸಮಿತಿಯ ಕಾರ್ಯಾವಧಿ ಮುಗಿವವರೆಗೆ ತಾತ್ಕಾಲಿಕವಾಗಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಗಳಿಂದ ಹಿಂದೆ ಸರಿಯುತ್ತಿರುವುದಾಗಿ ಶ್ರೀನಿವಾಸನ್ ಘೋಷಿಸಿದರು. ಅಲ್ಲದೇ ಈ ತತ್ಕಾಲದಲ್ಲಿ ಜಗಮೋಹನ್ ದಾಲ್ಮಿಯಾ ಮಂಡಳಿಯ ಆಡಳಿತದ ನೊಗ ಹೊರಲಿದ್ದಾರೆ ಎಂದೂ ಹೇಳಿದರು. ರಾಜಕೀಯದ ಪಾಠ ಹೇಳಿಸಿಕೊಳ್ಳಬೇಕಾದವರೇ, ರಾಜಕೀಯ ಪಾಠ ಹೇಳಿಕೊಟ್ಟಿದ್ದರು. ಆ ಮೂರು ತಾಸು ಮತ್ತು ಅದಕ್ಕೆ ಮುನ್ನ ನಡೆದ ಮುಸುಕಿನ ಗುದ್ದಾಟ, ಪಿಸುಮಾತಿನ ರಾಜೀ ಸಂಧಾನ, ಕ್ರಿಕೆಟ್ ಮಂಡಳಿಯಲ್ಲಿ ಹಾಸುಹೊಕ್ಕಾಗಿರುವ ರಾಜಕಾರಣಕ್ಕೆ ಹೊಸ ದಾರಿ ಕಲ್ಪಿಸಿತ್ತು. ಈ ಇಡೀ ಪ್ರಹಸನವನ್ನು ಗಮನಿಸಿದರೆ ಅಂದು ಗೆದ್ದದ್ದು ಶ್ರೀನಿವಾಸನ್ ಅವರ ಹಠ. ಅವರ ಮಾತೇ ನಡೆದಿತ್ತು. ಹಾಗಾದರೆ ಮಣ್ಣು ಮುಕ್ಕಿದ್ದು ಯಾರು?
ಶರಚ್ಚಂದ್ರ ಗೋವಿಂದರಾವ್ ಪವಾರ್! ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತು ದಿಲ್ಲಿ ರಾಜಕಾರಣದಲ್ಲಿ ಸಹ ಪಳಗಿದ ಕೈ. ಅದರಲ್ಲೂ ಮಹಾರಾಷ್ಟ್ರವನ್ನಂತೂ ತನ್ನ ಕೈಯಲ್ಲಿ ಆಡಿಸುವ ಗಟ್ಟಿ ರಾಜಕಾರಣಿ. ನಾಲ್ಕು ದಶಕಗಳ ಕಾಲ ರಾಜಕಾರಣ ಮಾಡಿದ್ದರೂ ಇವರ ಅಧಿಕಾರದಾಹ ಮಾತ್ರ ಇನ್ನೂ ಇಂಗಿಲ್ಲ. 2014ರ ನಂತರ ಅತಂತ್ರ ಸಂಸತ್ ಬಂದರೆ ಪ್ರಧಾನಿ ಕುರ್ಚಿಗೆ ಗಾಳ ಹಾಕಲು ಬೇಕಾದ ತಂತ್ರಗಳಿಗೆ ಪವಾರ್ ಈಗಾಗಲೇ ಸಜ್ಜಾಗಿದ್ದಾರೆ. 1964ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರ ವಿಧಾನಸಭೆ ಪ್ರವೇಶಿಸಿದಾಗ ಪವಾರ್ ಶಾಸನಸಭೆಯ ಅತಿ ಕಿರಿಯ ರಾಜಕಾರಣಿ. ಕಾಂಗ್ರೆಸ್ ಪಕ್ಷದ ಕಚೇರಿಯಲ್ಲೇ ವಾಸ್ತವ್ಯ. ಅದೇ ದೆಸೆಯಿಂದಲೇ ರಾಜಕಾರಣದ ಇನಿಂಗ್ಸ್ ಆರಂಭ. ಹೀಗೆ ಆರಂಭವಾದ ರಾಜಕೀಯ ಜೀವನದಲ್ಲಿ ಪವಾರ್ ಹಿಂತಿರುಗಿ ನೋಡಿದ್ದು ಕಡಿಮೆಯೇ. ಆಗ ಮಹಾರಾಷ್ಟ್ರದ ಅತ್ಯಂತ ಪ್ರಬಲ ರಾಜಕಾರಣಿ ಎನಿಸಿದ್ದ ಯಶವಂತರಾವ್ ಚವಾಣ್ ಕೃಪಾಕಟಾಕ್ಷ ಪವಾರ್‌ಗಿತ್ತು. ಚಾಣಾಕ್ಷ, ಚತುರ, ರಾಜಕೀಯದ ಸೂಕ್ಷ್ಮಗಳನ್ನು ಬಲ್ಲ ಪವಾರ್ ನಿಜಕ್ಕೂ ಸಮಯಸಾಧಕ. 1978ರಲ್ಲಿ ಇಂದಿರಾ ವಿರೋಧಿ ಅಲೆಯಲ್ಲಿ ಜನತಾ ಪರಿವಾರ ದಿಲ್ಲಿಯಲ್ಲಿ ಮೊಟ್ಟಮೊದಲ ಬಾರಿಗೆ ಅಧಿಕಾರ ಪಲ್ಲಟ ಮಾಡಿದಾಗ ಮಹಾರಾಷ್ಟ್ರದಲ್ಲಿ ಇನ್ನೂ ಕಾಂಗ್ರೆಸ್ ಸರ್ಕಾರ ಇತ್ತು. ಆದರೆ ತನ್ನದೇ ಗುಂಪು ಕಟ್ಟಿಕೊಂಡು ಕಾಂಗ್ರೆಸ್‌ನಿಂದ ಹೊರಬಂದ ಪವಾರ್ ಪ್ರತಿಪಕ್ಷಗಳ ಜತೆ ಸೇರಿ (ಆಗ ಪಕ್ಷಾಂತರ ನಿಷೇಧ ಕಾಯಿದೆ ಇರಲಿಲ್ಲ) ಸರ್ಕಾರ ರಚಿಸಿದ ಪವಾರ್ ಆ ರಾಜ್ಯದ ಅತಿ ಕಿರಿಯ ಮುಖ್ಯಮಂತ್ರಿ ಎನಿಸಿದರು. ಇದು ಇಂದಿರಾಗಾಂಧಿಯವರನ್ನು ಸಾಕಷ್ಟು ಕೆರಳಿಸಿತು. 1980ರಲ್ಲಿ ಮತ್ತೆ ಅಧಿಕಾರಕ್ಕೆ ಬಂದವರೇ ಪವಾರ್ ಸರ್ಕಾರವನ್ನು ಕಿತ್ತೊಗೆದರು. ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ಅಧಿಕಾರ ಪಡೆಯಿತು. ಪ್ರತಿಪಕ್ಷ ನಾಯಕನ ಸ್ಥಾನ ಪವಾರ್‌ಗೊಲಿಯಿತು. ಆದರೆ ಅಧಿಕಾರದ ಸುತ್ತಲೇ ಸದಾ ಇರಬಯಸುವ ಪವಾರ್‌ಗೆ ಇದು ಸಾಕಾಗಲಿಲ್ಲ. ಮತ್ತೆ ಕಾಂಗ್ರೆಸ್ ಕದ ತಟ್ಟಿದ್ದರು. ಆದರೆ ಇವರ ಸಮಯಸಾಧಕತನದ ಅರಿವಿದ್ದ ಇಂದಿರಾಗಾಂಧಿ ಇವರನ್ನು ಹತ್ತಿರ ಸಹ ಬಿಟ್ಟುಕೊಳ್ಳಲಿಲ್ಲ. ಪವಾರ್ ಅಧಿಕಾರವಿಲ್ಲದೆ ಚಡಪಡಾಯಿಸಬೇಕಾಯಿತು. ಇಂದಿರಾ ಹತ್ಯೆಯ ನಂತರ ರಾಜೀವ್ ಗಾಂಧಿ ಪ್ರತಿಷ್ಠಾಪನೆಯಾಗುತ್ತಲೇ ಪವಾರ್ ಮತ್ತೆ ಕಾಂಗ್ರೆಸ್ ಸೇರಲು ಹವಣಿಸಿದರು. ರಾಜಕೀಯವಾಗಿ ಬೆಳೆಯುತ್ತಿದ್ದ ಶಿವಸೇನೆಯನ್ನು ಮಟ್ಟಹಾಕುವುದಾಗಿ ರಾಜೀವ್‌ರನ್ನು ನಂಬಿಸಿದರು. ಅದರಂತೆ ಪವಾರ್ ಕಾಂಗ್ರೆಸ್ ವಾಪಸಿಗೆ ಹಸಿರು ನಿಶಾನೆ ತೋರಿದ ರಾಜೀವ್ ಆಗ ಸಿ.ಎಂ. ಆಗಿದ್ದ ಎಸ್.ಬಿ. ಚವಾಣ್‌ರನ್ನು ಕೆಳಗಿಳಿಸಿ ಪವಾರ್‌ಗೆ ಪಟ್ಟಕಟ್ಟಿದರು. ಆದರೆ ಪವಾರ್ ಮಾಡಿದ್ದೇನು? ಶಿವಸೇನೆಯನ್ನು ಮಟ್ಟಹಾಕುವ ಮಾತು ಹಾಗಿರಲಿ, ಅದರ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರಿಗೆ ಇನ್ನಷ್ಟು ಸನಿಹವಾಗಿ ತಮ್ಮ ಕುರ್ಚಿ ಭದ್ರಪಡಿಸಿಕೊಂಡರು.
ರಾಜೀವ್ ಜತೆಗಿನ ಸಲುಗೆಯನ್ನೇ ದಾಳವಾಗಿಸಿಕೊಂಡು ಅವರ ಹತ್ಯೆಯ ನಂತರ 1991ರಲ್ಲಿ ಕಾಂಗ್ರೆಸ್ ದಿಲ್ಲಿಯಲ್ಲಿ ಅಧಿಕಾರ ಹಿಡಿದಾಗ ಪ್ರಧಾನಿ ಕುರ್ಚಿಗೆ ಪವಾರ್ ಕರ್ಚೀಫ್ ಹಾಸಿದ್ದೂ ಉಂಟು. ಆದರೆ ನರಸಿಂಹರಾಯರ ಹಿರಿತನ, ಅನುಭವ ಮತ್ತು ರಾಜಕೀಯ ಚತುರತೆಯ ಮುಂದೆ ಪವಾರ್ ಆಟ ಸಾಗಲಿಲ್ಲ. ಆದರೂ ರಕ್ಷಣಾ ಸಚಿವಗಿರಿ ಗಿಟ್ಟಿಸಿಕೊಂಡ ಪವಾರ್ 1992ರ ಮುಂಬಯಿ ಸ್ಫೋಟ ಪ್ರಕರಣದ ನಂತರ ಒಲ್ಲದ ಮನಸ್ಸಿನಿಂದಲೇ ಮುಖ್ಯಮಂತ್ರಿಯಾಗಿ ಮಹಾರಾಷ್ಟ್ರಕ್ಕೆ ವಾಪಸಾದರು. 1995ರ ವಿಧಾನಸಭೆ ಚುನಾವಣೆಯಲ್ಲಿ ಶಿವಸೇನೆ-ಬಿಜೆಪಿಯಿಂದ ಸೋತ ಬಳಿಕ ಪವಾರ್ ಪವರ್‌ಲೆಸ್ ಆದರು. 1998ರಲ್ಲಿ ಸೋನಿಯಾ ವಿದೇಶಿತನ ಪ್ರಶ್ನಿಸಿ ಕಾಂಗ್ರೆಸ್‌ನಿಂದ ಹೊರಬಂದು ಎನ್‌ಸಿಪಿ ಕಟ್ಟಿದರೂ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜತೆಗೇ ಅಧಿಕಾರ ಹಂಚಿಕೊಳ್ಳಬೇಕಾಗಿ ಬಂತು. ಆಗ ಅವರಿಗೆ ಸೋನಿಯಾ ವಿದೇಶಿ ಪೌರತ್ವ ಅಡ್ಡಿ ಬರಲಿಲ್ಲ. ಈ ವೇಳೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸದೃಢವಾಗಿತ್ತು. ಹಣದ ಹೊಳೆಯೇ ಹರಿದಿತ್ತು. ನಿರುದ್ಯೋಗಿ ರಾಜಕಾರಣಿಯಾಗಿದ್ದ ಪವಾರ್ ಕಣ್ಣು ಇದರ ಮೇಲೆ ಬಿತ್ತು. ಮುಂಬಯಿ ಕ್ರಿಕೆಟ್ ಸಂಸ್ಥೆಗೆ 2001ರಲ್ಲಿ ನಡೆದ ಚುನಾವಣೆಯಲ್ಲಿ ಕಣಕ್ಕಿಳಿದ ಪವಾರ್ ತಮ್ಮೆಲ್ಲ ಜನ-ಧನ ಬಲ ಬಳಸಿ ಅಜಿತ್ ವಾಡೇಕರ್‌ರಂಥ ಸಭ್ಯ, ಸಜ್ಜನ ಕ್ರಿಕೆಟಿಗನನ್ನು ಪರಾಭವಗೊಳಿಸಿ ಕ್ರಿಕೆಟ್‌ನಲ್ಲಿ ತಮ್ಮ ರಾಜಕೀಯ ಬೆರೆಸಿದರು. ಅದಾದ ಬಳಿಕ ಒಂದು ದಶಕ ಕಾಲ ಪವಾರ್ ಕ್ರಿಕೆಟ್‌ನಲ್ಲಿ ರಾಜಕೀಯದಾಟ ಆಡಿದರು. 2005ರಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಪವಾರ್ ಆ ಸ್ಥಾನ ದಕ್ಕಿಸಿಕೊಳ್ಳುವುದಕ್ಕಾಗಿ ಭಾರತೀಯ ಕ್ರಿಕೆಟ್ ಹಣದ ಮುಖ ನೋಡುವಂತೆ ಮಾಡಿದ್ದ ಜಗಮೋಹನ್ ದಾಲ್ಮಿಯಾ ವಿರುದ್ಧ ಇನ್ನಿಲ್ಲದ ಷಡ್ಯಂತ್ರ ರೂಪಿಸಿದರು. ಈಗ ದೇಶಬಿಟ್ಟು ಓಡಿಹೋಗಿರುವ ಲಲಿತ್ ಮೋದಿ ಅವರನ್ನು ದಾಲ್ಮಿಯಾ ವಿರುದ್ಧ ಛೂಬಿಟ್ಟರು. 'ದಾಲ್ಮಿಯಾ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗುವುದಕ್ಕಿಂತ ಜೈಲಿನಲ್ಲಿರಬೇಕು' ಎಂದು ಮೋದಿ ಕೈಯಲ್ಲಿ ಹೇಳಿಸಿದರು. ಇದರ ಫಲವಾಗಿ ಬಿಸಿಸಿಐ ಅಧ್ಯಕ್ಷರಾಗಿದ್ದೇ ಅಲ್ಲದೆ ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷಗಿರಿಯನ್ನೂ ದಕ್ಕಿಸಿಕೊಂಡರು. ಇದರ ಜತೆ ಜತೆಗೇ ಯುಪಿಎ ಸಖ್ಯದಿಂದ ದೇಶದ ಕೃಷಿ ಮಂತ್ರಿಯೂ ಆದರು. ಇವರ ಅವಧಿಯಲ್ಲಿ ವಿದರ್ಭದಲ್ಲಿ ಸಾವಿರಾರು ರೈತರು ಸೂಕ್ತ ಕೃಷಿ ನೀತಿಯ ಕೊರತೆಯ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರೂ ಪವಾರ್‌ರ ಕಲ್ಲೆದೆ ಕರಗಲೇ ಇಲ್ಲ. ಇಂಥ ಪವಾರ್ ಮೊನ್ನೆ ಐಪಿಎಲ್ ಕಳ್ಳಾಟ ಬಯಲಾದಾಗ 'ನಾನು ಇದ್ದಿದ್ದರೆ ಇಂಥ ಘಟನೆ ನಡೆಯುತ್ತಲೇ ಇರಲಿಲ್ಲ' ಎಂದು ಬಡಬಡಾಯಿಸಿದಾಗ ಇದೆಂಥ ಸೋಜಿಗ ಎನಿಸುವುದಿಲ್ಲವೇ? ತಾವೇ ಅಧ್ಯಕ್ಷರಾಗಿದ್ದಾಗ ತಮ್ಮ ಆಪ್ತ ವಲಯದಲ್ಲಿಯೇ ಇದ್ದ ಶ್ರೀನಿವಾಸನ್‌ಗೆ ಮಂಡಳಿ ಪದಾಧಿಕಾರಿಯಾಗಿದ್ದುಕೊಂಡೂ, ಐಪಿಎಲ್ ತಂಡದ ಮಾಲೀಕತ್ವ ಪಡೆಯಲು ಅನುವಾಗುವಂತೆ ನಿಯಮಗಳನ್ನು ಗಾಳಿಗೆ ತೂರಿದ್ದಾದರೂ ಯಾರು? ಇದೇ ಪವಾರ್ ಅಲ್ಲವೆ? ಇಷ್ಟಕ್ಕೂ ಪವಾರ್ ಈಗ ಶ್ರೀನಿವಾಸನ್ ವಿರುದ್ಧ ತಿರುಗಿಬಿದ್ದಿದ್ದಾದರೂ ಏಕೆ? ಬಿಸಿಸಿಐ ಅಧ್ಯಕ್ಷರಾದ ಮೇಲೆ ಶ್ರೀನಿವಾಸನ್ ತಮ್ಮ ಹೆಜ್ಜೆ ತಾವೇ ಗುರುತಿಸಿಕೊಂಡಿದ್ದಾರೆ. ಪವಾರ್ ಪ್ರಭಾವದಿಂದ ದೂರ ಸರಿದಿದ್ದೂ ಆಗಿದೆ. ಹೇಗಾದರೂ ಮಾಡಿ ಅವರನ್ನು ದೂರ ಸರಿಸಿ ಬಿಸಿಸಿಐನಲ್ಲಿ ಮತ್ತೆ ತಮ್ಮವರನ್ನು ಕೂರಿಸಿ ಆಟ ನೋಡುವುದೇ ಪವಾರರ ಉದ್ದೇಶ ಅಲ್ಲವೇ? ಈಗ ಬಿಸಿಸಿಐಗೂ ಪವಾರ್‌ಗೂ ಯಾವುದೇ ಸಂಬಂಧ ಇಲ್ಲ. ಆದರೂ ಈ ಪರಿಯ ಆಸಕ್ತಿ ಏಕೆ? ಏಕಾಏಕಿ ಬಿಸಿಸಿಐನ ಕಾರ್ಯದರ್ಶಿ ಹಾಗೂ ಖಜಾಂಚಿ ಆಗಿದ್ದ ಸಂಜಯ್ ಜಗದಾಳೆ ಹಾಗೂ ಅಜಯ್ ಶಿರ್ಕೆ ಅವರಿಂದ ರಾಜಿನಾಮೆ ಕೊಡಿಸಿದ್ದಾದರೂ ಯಾರು? ಜಗದಾಳೆ ಪವಾರ್ ಯುಗದಲ್ಲಿ ಬಿಸಿಸಿಐನಲ್ಲಿ ಉದ್ಯೋಗ ಕಂಡುಕೊಂಡರೆ, ಶಿರ್ಕೆ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರೂ ಹೌದು. ಅದಕ್ಕೆಂದೇ ಪವಾರ್ ಅವರ ಮೇಲೆ ಒತ್ತಡ ಹೇರಿ ರಾಜಿನಾಮೆ ಕೊಡಿಸಿದ್ದು. ಇನ್ನು ಶ್ರೀನಿವಾಸನ್ ಹೋಗಲೇಬೇಕು ಎನ್ನುವ ಹಠಕ್ಕೆ ಬಿದ್ದ ಪವಾರ್ ಹೊಸ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಮಂಡಳಿಯ ವಿವೇಚನೆಗೆ ಬಿಡಬಹುದಿತ್ತು. ಆದರೆ ಆ ಸ್ಥಾನಕ್ಕೆ ತಮ್ಮವರಾದ ಶಶಾಂಕ ಮನೋಹರ್ ಅವರನ್ನೇ ತರಬೇಕೆಂದು ಹಠಹಿಡಿದಿದ್ದಾದರೂ ಏಕೆ? ಪರೋಕ್ಷವಾಗಿ ಬಿಸಿಸಿಐ ಅಧಿಕಾರ ತಮ್ಮ ಬಳಿ ಇರಲಿ ಎಂದೇ ಅಲ್ಲವೇ?
ಆದರೆ ಪವಾರ್ ಒಂದು ಬಗೆದರೆ, ಆಗಿದ್ದೇ ಇನ್ನೊಂದು. ಪವಾರ್ ಬಣದಿಂದ ತಮ್ಮ ನಿರ್ಗಮನದ ಆರ್ಕೆಸ್ಟ್ರಾ ನಿರಂತರವಾಗಿ ಮೊಳಗುತ್ತಿದ್ದರೂ ಶ್ರೀನಿವಾಸನ್ ತಲೆಕೆಡಿಸಿಕೊಳ್ಳಲಿಲ್ಲ. ಬದಲಿಗೆ ತಮ್ಮದೇ ಕಾಯಿ ಚಲಾಯಿಸಿದರು. ಪವಾರ್‌ರ ಕಡುವೈರಿ ಜಗಮೋಹನ್ ದಾಲ್ಮಿಯಾರನ್ನು ಮುಂದೆ ಬಿಟ್ಟರು. ಇತ್ತ ಪವಾರ್ ಅವರ ರಹಸ್ಯ ಸೂಚಿ ತಿಳಿದಿದ್ದ ಅರುಣ್ ಜೇಟ್ಲಿ, ಅನುರಾಗ್ ಠಾಕೂರ್ ಮುಂತಾದವರು ಕಡೆಯ ಕ್ಷಣದಲ್ಲಿ ದಾಲ್ಮಿಯಾ ಬೆಂಬಲಕ್ಕೆ ನಿಂತಾಗ ಪವಾರ್ ನಿಜಕ್ಕೂ ಎಕ್ಸ್‌ಪೋಸ್ ಆದರು. ಪರಿಸ್ಥಿತಿ ತಮ್ಮ ವಿರುದ್ಧವೇ ತಿರುಗುತ್ತದೆ ಎಂದು ಪವಾರ್ ಎಣಿಸಿರಲಿಲ್ಲ. ಅತ್ತ ರಾಜಕಾರಣದಲ್ಲೂ ಪವಾರ್ ಪ್ರಭಾವ ಕುಗ್ಗುತ್ತಿದೆ. ಸೋದರಳಿಯ ಅಜಿತ್ ಪವಾರ್ ಮಹಾರಾಷ್ಟ್ರ ರಾಜಕಾರಣವನ್ನು ತನ್ನ ಮಾವನ ಕೈಯಿಂದ ಕಿತ್ತುಕೊಳ್ಳಲು ಹವಣಿಸುತ್ತಿದ್ದಾರೆ. ಇತ್ತ 2014ರ ಚುನಾವಣೆಯ ನಂತರ ಮತ್ತೆ ನಿರುದ್ಯೋಗಿ ರಾಜಕಾರಣಿಯಾಗುವ ಲಕ್ಷಣಗಳೂ ಗೋಚರಿಸುತ್ತಿವೆ.
ಪವಾರ್‌ಗೆ ಇದು ಬೇಕಿತ್ತಾ? ಛೀ ಶೇಮ್‌ಲೆಸ್!
- ಕೆ.ಎಸ್.ಜಗನ್ನಾಥ್
jagannath.kudinoor@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


