ವಿವೇಚನೆಗೆ ಮೊದಲು ವಿವೇಕ ಇರಲಿ ಸಿದ್ದರಾಮಣ್ಣ
ಮುಖ್ಯಮಂತ್ರಿ ಸಿದ್ದರಾಮಯ್ಯ ಮುಗ್ಗರಿಸಿ ಬಿದ್ದಿದ್ದಾರೆ. ಮುಖ್ಯಮಂತ್ರಿಯಾಗಿ...

ಮುಖ್ಯಮಂತ್ರಿ ಸಿದ್ದರಾಮಯ್ಯ ಮುಗ್ಗರಿಸಿ ಬಿದ್ದಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಜೋಶ್‌ನಲ್ಲಿ ಹಿಂದೆ-ಮುಂದೆ ಆಲೋಚಿಸದೆ ಪ್ರಕಟಿಸಿದ ಜನಪ್ರಿಯ ಯೋಜನೆಗಳ ಸುಳಿಯಲ್ಲಿ ಅವರು ಸಿಕ್ಕಿಬಿದ್ದಿದ್ದಾರೆ. ವಿವೇಕವನ್ನು ಪಕ್ಕಕ್ಕಿಟ್ಟು, ವಿವೇಚನೆಯನ್ನು ಮಾತ್ರ ಬಳಸಿದ ಕಾರಣ ಬಡವರಿಗೆ ರುಪಾಯಿಗೆ ಕೆ.ಜಿ. ಅಕ್ಕಿ ವಿತರಿಸುವ ಮಹತ್ವದ ಯೋಜನೆ ತಿಂಗಳು ಮುಂದಕ್ಕೆ ಹೋಗಿದೆ. 'ಮೊದಲು ಚಿಂತನೆ, ನಂತರ ಕ್ರಿಯೆ'ಗೆ ಕೈಹಾಕುವ ಬದಲು 'ಮೊದಲು ಕ್ರಿಯೆ, ನಂತರ ಚಿಂತನೆ'ಗೆ ಕೈಹಾಕಿದ ಸಿದ್ದರಾಮಯ್ಯ ಅವರು ಇದೀಗ ಚಿಂತೆಯಲ್ಲಿ ಮುಳುಗಿದ್ದಾರೆ.
ಹೌದು, ಯಾವುದೇ ಒಬ್ಬ ಮುಖ್ಯಮಂತ್ರಿಯ ಆರಂಭದ ದಿನಗಳು ಅವರ ಆಡಳಿತ ಶೈಲಿಯ ದಿಕ್ಸೂಚಿಯಾಗುತ್ತದೆ. ಸರ್ಕಾರ ಯಾವ ರೀತಿಯಲ್ಲಿ ನಡೆಯುತ್ತದೆ ಎಂಬ ಸುಳಿವನ್ನು ನೀಡುತ್ತದೆ. ಹಿಂದೆ ಹಣಕಾಸು ಸಚಿವರಾಗಿ ಅವರು ಖಾತೆ ನಿರ್ವಹಿಸಿದ ರೀತಿ ಅವರೊಬ್ಬ ಆರ್ಥಿಕ ತಜ್ಞ ಎಂಬಷ್ಟರ ಮಟ್ಟಿಗೆ ಹೆಸರು ತಂದುಕೊಟ್ಟಿತ್ತು. ಆದರೆ, ಆತುರಾತುರದಲ್ಲಿ ಅವರು ಪ್ರಕಟಿಸಿದ ಅಗ್ಗದ ಜನಪ್ರಿಯ ಯೋಜನೆಗಳು ಅನುಷ್ಠಾನ ಕಷ್ಟವಾಗಿ ಅವರ ವರ್ಚಸ್ಸಿನ ಮೇಲೆ ಕೊಂಚ ಪ್ರತಿಕೂಲ ಪ್ರಭಾವ ಬೀರಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಸಿದ್ದರಾಮಯ್ಯ ಯಾರೂ ನಿರೀಕ್ಷಿಸದಷ್ಟು ವೇಗವಾಗಿ ಸಾಗಿದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿದ್ದ ಭರವಸೆಗಳನ್ನೆಲ್ಲಾ ಒಂದೇ ವರ್ಷದಲ್ಲಿ ಜಾರಿಗೆ ತರುವ ತರಾತುರಿ ತೋರಿದರು. ಸಂಪುಟ ರಚನೆ ಮುನ್ನವೇ ರುಪಾಯಿಗೆ ಕೆ.ಜಿ. ಅಕ್ಕಿ ವಿತರಿಸುವ ಯೋಜನೆ ಪ್ರಕಟಿಸಿದರು.
ಹಾಗೆಂದು ಬಿಪಿಎಲ್ ಕಾರ್ಡ್‌ದಾರರಿಗೆ ರುಪಾಯಿಗೆ ಕೆ.ಜಿ. ಅಕ್ಕಿ ವಿತರಿಸುವುದು ಕಷ್ಟವೇನೂ ಅಲ್ಲ. ಹಿಂದೆ ಡಿ.ಎನ್. ಜೀವರಾಜ್ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವರಾಗಿದ್ದಾಗ ಇಂತಹದ್ದೇ ಪ್ರಸ್ತಾವನೆಯೊಂದನ್ನು ಆಗಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಸಲ್ಲಿಸಿದ್ದರು. ಹಣಕಾಸು ಸಮಸ್ಯೆ ಕಾರಣವೊಡ್ಡಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿತ್ತು. ಇದೀಗ ಅಧಿಕಾರಿಗಳ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಸಿದ್ದರಾಮಯ್ಯ ಒಬ್ಬ ವ್ಯಕ್ತಿಗೆ 4 ಕೆ.ಜಿ, ಪ್ರತಿ ಕಾರ್ಡ್‌ಗೆ ಗರಿಷ್ಠ 20 ಕೆ.ಜಿ. ಎಂಬ ಯೂನಿಟ್ ವ್ಯವಸ್ಥೆ ರದ್ದುಗೊಳಿಸಿ ಪ್ರತಿ ಕಾರ್ಡ್‌ಗೆ 30 ಕೆ.ಜಿ. ಅಕ್ಕಿ ನೀಡುವುದಾಗಿ ಹೇಳಿದ್ದಾರೆ.
ಅವರು ಎಡವಿದ್ದೇ ಇಲ್ಲಿ. ಪ್ರತಿ ಬಿಪಿಎಲ್ ಕಾರ್ಡ್‌ಗೆ ನೀಡಬೇಕಾದ 30 ಕೆ.ಜಿ. ಅಕ್ಕಿ ತರುವುದು ಎಲ್ಲಿಂದ ಎಂದು ಅವರು ಯೋಚಿಸಲೇ ಇಲ್ಲ. ಅಷ್ಟೇ ಅಲ್ಲ, ಅದನ್ನೆಲ್ಲಾ ಲೆಕ್ಕಹಾಕಿ ಅಕ್ಕಿ ಸಂಗ್ರಹ ಮಾಡಿಕೊಳ್ಳಲು ಕೂಡ ಅವಕಾಶ ನೀಡದೆ ಜೂನ್ 1ರಿಂದಲೇ ಯೋಜನೆ ಜಾರಿ ಎಂದು ಹೇಳಿಬಿಟ್ಟರು. ಅಧಿಕಾರಿಗಳು ಸಾಧ್ಯವೇ ಇಲ್ಲ ಎಂದು ಗೋಗರೆದರೂ ಅವರ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಬದಲಾಗಿ ನಾನು ಹೇಳಿದ್ದನ್ನು ಮಾಡಿ ಎಂಬಂತೆ ವರ್ತಿಸಿದರು. ಆ ವರ್ತನೆಯ ಹಿಂದೆ ಸರ್ವಾಧಿಕಾರಿ ಧೋರಣೆ ಇತ್ತು.
ಯೂನಿಟ್ ವ್ಯವಸ್ಥೆ ಜಾರಿಯಲ್ಲಿದ್ದರೆ ಕಷ್ಟಪಟ್ಟು ಒಂದು ರುಪಾಯಿಗೆ ಅಕ್ಕಿ ವಿತರಿಸಬಹುದಿತ್ತು. ಆದರೆ, ಪ್ರತಿ ಕಾರ್ಡ್‌ಗೆ 30 ಕೆ.ಜಿ. ಅಕ್ಕಿ ವಿತರಿಸುವುದು ಕಷ್ಟಸಾಧ್ಯ. ಏಕೆಂದರೆ, ರಾಜ್ಯದಲ್ಲಿ ಸುಮಾರು 87 ಲಕ್ಷ ಬಿಪಿಎಲ್ ಕಾರ್ಡ್‌ದಾರರಿದ್ದು, ಇವರೆಲ್ಲರಿಗೂ ರುಪಾಯಿಗೆ ಕೆ.ಜಿ. ಅಕ್ಕಿ ನೀಡಬೇಕಾದರೆ 3.32 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತದೆ. ಈ ಪೈಕಿ ಕೇಂದ್ರದಿಂದ ಪೂರೈಕೆಯಾಗುವುದು 1.77 ಲಕ್ಷ ಮೆಟ್ರಿಕ್ ಟನ್ ಮಾತ್ರ. ಉಳಿದ ಅಕ್ಕಿಯನ್ನು ರಾಜ್ಯ ಸರ್ಕಾರವೇ ಸಂಗ್ರಹಿಸಬೇಕು. ಅದು ಸಾಧ್ಯವೇ? ಯೋಜನೆಗೆ ವಾರ್ಷಿಕವಾಗಿ ಬೇಕಾಗುವ ಹೆಚ್ಚುವರಿ 5,800 ಕೋಟಿಯನ್ನು ಹೊಂದಿಸುವುದು ಹೇಗೆ? ಈ ಆದಾಯಕ್ಕೆ ಮೂಲ ಯಾವುದು? ಎಂಬುದರ ಬಗ್ಗೆ ಚಿಂತಿಸುವ ಕನಿಷ್ಠ ಪ್ರಯತ್ನವನ್ನೂ ಮಾಡಲಿಲ್ಲ.
ಒಂದು ವೇಳೆ ಹೆಚ್ಚುವರಿ ಬೇಕಾದ ಹಣವನ್ನು ಹೊಂದಿಸಬಹುದು ಎಂದುಕೊಂಡರೂ ಅಕ್ಕಿ ತರುವುದಾದರೂ ಎಲ್ಲಿಂದ? ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಅಕ್ಕಿ ಕೇಳುವಂತಿಲ್ಲ. ಕೇಳಿದರೂ ಅದು ಸಿಗುವುದಿಲ್ಲ. ಏಕೆಂದರೆ, ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ನೀಡಿದರೆ ಇತರೆ ರಾಜ್ಯಗಳು ತಕರಾರು ತೆಗೆಯುತ್ತವೆ. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ಟೀಕೆ ಬರುತ್ತದೆ. ಅಂಥ ಅಪಾಯಕ್ಕೆ ಕೇಂದ್ರ ಕೈಹಾಕುವುದಿಲ್ಲ. ಆದ್ದರಿಂದ ಕೇಂದ್ರದಿಂದ ನಿರೀಕ್ಷಿತ ನೆರವೂ ಸಿಗುವುದಿಲ್ಲ. ಇನ್ನೊಂದೆಡೆ ದೇಶಾದ್ಯಂತ ಬರಗಾಲ ವ್ಯಾಪಿಸಿರುವುದರಿಂದ ಬೇರೆ ರಾಜ್ಯಗಳಿಂದ ಅಕ್ಕಿ ತರಿಸಿಕೊಳ್ಳುವುದು ಕೂಡ ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ. ಆ ರಾಜ್ಯಗಳಲ್ಲೇ ಅಕ್ಕಿ ಕೊರತೆ ಇರುವಾಗ ಅವು ನಮಗೆ ಅಕ್ಕಿ ಕೊಡುವುದಾದರೂ ಎಲ್ಲಿಂದ? ಇನ್ನು ರಾಜ್ಯದಲ್ಲೂ ಸಾಕಷ್ಟು ಅಕ್ಕಿ ಲಭ್ಯವಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಸಿಗುವ ಅಕ್ಕಿಯನ್ನು ಸರ್ಕಾರ ಖರೀದಿಸಿ ಬಿಪಿಎಲ್ ಕಾರ್ಡ್‌ದಾರರಿಗೆ ವಿತರಿಸಲು ಮುಂದಾದರೆ ಅಕ್ಕಿ ಬೆಲೆ ಹೆಚ್ಚಾಗುತ್ತದೆ. ಆಗ ಸಾರ್ವಜನಿಕರು ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆ. ಈ ದೂರಾಲೋಚನೆಯ ಕೊರತೆಯೇ ಸಿದ್ದರಾಮಯ್ಯನವರನ್ನು ಸಂಕಟದಲ್ಲಿ ಸಿಲುಕಿಸಿದೆ. ಮಾರ್ಗೋಪಾಯಗಳ ಅನ್ವೇಷಣೆಯಲ್ಲಿ ವಿಲವಿಲ ಒದ್ದಾಡುತ್ತಿದ್ದಾರೆ.
ಇಲ್ಲಿ ಇನ್ನೂ ಒಂದು ಸಮಸ್ಯೆಯಿದೆ. ಕೇಂದ್ರದಿಂದ ಪ್ರತಿ ತಿಂಗಳು ಮಂಜೂರಾದಷ್ಟೇ ಅಕ್ಕಿ ಬರುತ್ತದೆ ಎಂಬುದು ಖಾತರಿ ಇಲ್ಲ. ಏಪ್ರಿಲ್ ತಿಂಗಳಲ್ಲಿ 28 ಸಾವಿರ ಮೆಟ್ರಿಕ್ ಟನ್ ಅಕ್ಕಿ ಕಡಿಮೆ ಬಂದಿದ್ದರಿಂದ ರಾಜ್ಯ ಸರ್ಕಾರ ತೀವ್ರ ಸಮಸ್ಯೆಗೆ ಸಿಲುಕಿತ್ತು. ಯೂನಿಟ್ ಆಧಾರದ ಮೇಲೆ ವಿತರಿಸುವ ಅಕ್ಕಿ ಪ್ರಮಾಣವನ್ನೇ ಕಡಿಮೆ ಮಾಡಿತ್ತು. ಹೀಗಿರುವಾಗ ಒಂದು ತಿಂಗಳು ಕೇಂದ್ರದಿಂದ ಕಡಿಮೆ ಅಕ್ಕಿ ಬಂದರೆ ಪ್ರತಿ ಕಾರ್ಡ್‌ಗೆ 30 ಕೆ.ಜಿ ಅಕ್ಕಿ ವಿತರಿಸುವುದಾದರೂ ಹೇಗೆ? ಆದರೆ, ಭರವಸೆ ಈಡೇರಿಸುವ ಹುಮ್ಮಸ್ಸಿನಲ್ಲಿ ಸಿದ್ದರಾಮಯ್ಯ ಅವರ ವಿವೇಕ ಕೆಲಸ ಮಾಡಲೇ ಇಲ್ಲ.
ಇದರ ಪರಿಣಾಮವೇ ರುಪಾಯಿಗೆ ಕೆ.ಜಿ. ಅಕ್ಕಿ ವಿತರಿಸುವ ಯೋಜನೆ ಒಂದು ತಿಂಗಳು ಮುಂದಕ್ಕೆ ಹೋಗಿದೆ. ಕಷ್ಟಪಟ್ಟು ಜುಲೈ ತಿಂಗಳಿನಿಂದ ಯೋಜನೆ ಅನುಷ್ಠಾನಕ್ಕೆ ತರಬಹುದಾದರೂ ವರ್ಷ ಪೂರ್ತಿ ಅದೇ ರೀತಿ ಮುಂದುವರಿಯುತ್ತದೆ ಎಂಬ ಧೈರ್ಯ ಸರ್ಕಾರಕ್ಕೂ ಇಲ್ಲ. ಹೀಗಾಗಿ ರುಪಾಯಿಗೆ ಕೆ.ಜಿ ಅಕ್ಕಿ ವಿತರಿಸುವ ನಿರ್ಧಾರ ಪ್ರಕಟಿಸಿದ್ದ ಸಿದ್ದರಾಮಯ್ಯ ಅವರೇ ಈಗ ತಾವು ಕೈಗೊಂಡ ತರಾತುರಿ ನಿರ್ಣಯದಿಂದ ಚಿಂತೆಗೀಡಾಗಿದ್ದಾರೆ.
ಇಷ್ಟಾದರೂ ಸಿದ್ದರಾಮಯ್ಯ ಪಾಠ ಕಲಿಯಲಿಲ್ಲ. ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳುವ ಪರಿಪಾಠವನ್ನು ನಿಲ್ಲಿಸಲಿಲ್ಲ. ಹಿಂದೆ ಮುಂದೆ ನೋಡದೆ ಗುಟ್ಕಾ ನಿಷೇಧಿಸಿದ್ದೇ ಇದಕ್ಕೆ ಉದಾಹರಣೆ. ಆರೋಗ್ಯ ಮಂತ್ರಿಗಳು ಗುಟ್ಕಾ ನಿಷೇಧಿಸಬೇಕು ಎಂಬ ಪ್ರಸ್ತಾವನೆ ಸಲ್ಲಿಸಿದ ಕೂಡಲೇ ಸಿದ್ದರಾಮಯ್ಯ ಕಣ್ಣು ಮುಚ್ಚಿ ಸಹಿ ಹಾಕಿದರು. ಇದರಿಂದ ಮುಂದೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಗಮನಿಸಲಿಲ್ಲ. ಆರೋಗ್ಯದ ದೃಷ್ಟಿಯಿಂದ ಗುಟ್ಕಾ ನಿಷೇಧ ಒಂದು ಉತ್ತಮ ಬೆಳವಣಿಗೆಯಾದರೂ ಅದನ್ನು ನಿಷೇಧಿಸುವ ಮುನ್ನ ಸಾಧಕ- ಬಾಧಕಗಳನ್ನು ಯೋಚನೆ ಮಾಡಬೇಕಿತ್ತು. ಗುಟ್ಕಾ ನಿಷೇಧಿಸಿದರೆ ಅಡಕೆ ಬೆಳೆಗಾರರಿಗೆ ಆಗುವ ಸಮಸ್ಯೆಗಳೇನು? ಅದಕ್ಕೆ ಯಾವ ರೀತಿ ಪರಿಹಾರ ಕಲ್ಪಿಸಬೇಕು? ಎಂಬುದು ಅವರ ತಲೆಗೆ ಹೊಳೆಯಲಿಲ್ಲ. ಕನಿಷ್ಠ ಅಧಿಕಾರಿಗಳು, ಅಡಕೆ ಬೆಳೆಗಾರರ ಪ್ರತಿನಿಧಿಗಳು, ಅಡಕೆ ಬೆಳೆಯುವ ಪ್ರದೇಶದ ಶಾಸಕರನ್ನು ಕರೆಸಿ ಚರ್ಚಿಸುವ ಗೋಜಿಗೂ ಹೋಗಲಿಲ್ಲ. ಗುಟ್ಕಾ ನಿಷೇಧದಿಂದ ಆತಂಕಕ್ಕೆ ಒಳಗಾಗುವ ಬೆಳೆಗಾರರಿಗೆ ಧೈರ್ಯ ತುಂಬುವ ಕೆಲಸವನ್ನೂ ಮಾಡಲಿಲ್ಲ. ಆದರೆ, ಈ ಸಂದರ್ಭದಲ್ಲೂ ಅವರು ಯೋಚನೆಗೆ ಅವಕಾಶ ನೀಡದೆ ತಕ್ಷಣದ ಕ್ರಿಯೆಗೆ ಮುಂದಾದರು. ಏಕಾಏಕಿ ಗುಟ್ಕಾ ನಿಷೇಧ ಆದೇಶ ಹೊರಬೀಳುವಂತೆ ನೋಡಿಕೊಂಡರು. ಇದರಿಂದ ಅಡಕೆ ಬೆಳೆಗಾರರ ಮೇಲೆ ಏನು ಪರಿಣಾಮವಾಗುತ್ತದೆ? ಅವರ ಬದುಕು ಬೀದಿಗೆ ಬೀಳುತ್ತದೆಯೇ ಎಂಬ ಬಗ್ಗೆ ಯೋಚಿಸಲು ನಾನು ಕೈಗೊಂಡದ್ದೇ ಅಂತಿಮ ನಿರ್ಧಾರ ಎಂಬ ಸರ್ವಾಧಿಕಾರಿ ಧೋರಣೆ ಅಡ್ಡಿಯಾಯಿತು.
ಏತನ್ಮಧ್ಯೆ ಗುಟ್ಕಾ ನಿಷೇಧವನ್ನು ಸಮರ್ಥಿಸಿಕೊಳ್ಳಲು ಕೂಡ ಅವರು ಒದ್ದಾಡುತ್ತಿದ್ದಾರೆ. ಗುಟ್ಕಾ ನಿಷೇಧದಿಂದ ರಾಜ್ಯದ ಅಡಕೆ ಬೆಳೆಗಾರರಿಗೆ ಸಮಸ್ಯೆಯಾಗುವುದಿಲ್ಲ. ಗುಟ್ಕಾಕ್ಕೆ ಬಳಸುವುದು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ಕಡಿಮೆ ಗುಣಮಟ್ಟದ ಅಡಕೆ. ಆದ್ದರಿಂದ ರೈತರು ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಹೇಳಿ ಬೆಳೆಗಾರರನ್ನು ಸಮಾಧಾನಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆಯೇ ಹೊರತು ಪರ್ಯಾಯ ಮಾರ್ಗಗಳ ಬಗ್ಗೆ ಇನ್ನೂ ಗಮನಹರಿಸಿಲ್ಲ.
ಗುಟ್ಕಾಕ್ಕೆ ಬಳಸುವುದು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿರುವ ಅಡಕೆ ಹೌದಾದರೂ ಮುಂದಿನ ದಿನಗಳಲ್ಲಿ ಈ ಅಡಕೆ ವಿಶ್ವದ ಬೇರೆ ಬೇರೆ ಮಾರುಕಟ್ಟೆಗಳಿಗೆ ಹೋಗುತ್ತದೆ. ಆಗ ಸಹಜವಾಗಿಯೇ ಜಾಗತಿಕ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಯ ರಾಜ್ಯದ ಅಡಕೆಗೆ ಬೇಡಿಕೆ ಕಡಿಮೆಯಾಗುತ್ತದೆ. ದೇಶದ ಒಟ್ಟು ಅಡಕೆ ಬೆಳೆಯ ಶೇ. 40ರಿಂದ 50 ಭಾಗದಷ್ಟು ಅಡಕೆ ಕರ್ನಾಟಕದಲ್ಲಿ ಬೆಳೆಯುತ್ತಿದ್ದು, ಇದರ ರಫ್ತು ಕ್ರಮೇಣ ಕುಸಿಯುತ್ತದೆ. ಜತೆಗೆ ಬೆಲೆಯೂ ಇಳಿಯುತ್ತದೆ. ಅಂತಿಮವಾಗಿ ನಷ್ಟ ತಡೆದುಕೊಳ್ಳಲು ಸಾಧ್ಯವಾಗದೆ ಅಡಕೆ ಬೆಳೆಗಾರ ಬೀದಿಪಾಲಾಗುತ್ತಾನೆ. ಈ ಎಲ್ಲಾ ವಿಚಾರಗಳ ಬಗ್ಗೆ ಯೋಚಿಸುವ ಸಣ್ಣ ಪ್ರಯತ್ನವೂ ಸಿದ್ದರಾಮಯ್ಯ ಅವರಿಂದ ಆಗದೇ ಇರುವುದು ಸಹಜವಾಗಿಯೇ ಅಡಕೆ ಬೆಳೆಗಾರರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸ್ವತಃ ಅವರ ಪಕ್ಷದವರೇ ಈ ನಿರ್ಧಾರದ ವಿರುದ್ಧ ಕೋಪಗೊಂಡಿದ್ದಾರೆ. ಇನ್ನೊಂದೆಡೆ ಅಡಕೆ ಬೆಳೆಗಾರರು ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಇದನ್ನೆಲ್ಲಾ ಎದುರಿಸಬೇಕಾದರೆ ಸಾಹಸವನ್ನೇ ಮಾಡಬೇಕಾಗುತ್ತದೆ.
ಗುಟ್ಕಾ ನಿಷೇಧದ ಸರ್ಕಾರದ ನಿರ್ಧಾರವನ್ನು ಗಮನಿಸಿದಾಗ ಗುಜರಾತ್, ನಾಗಾಲ್ಯಾಂಡ್ ರಾಜ್ಯಗಳಲ್ಲಿ ಪಾನ ನಿಷೇಧದ ವಿಚಾರ ಕಣ್ಣ ಮುಂದೆ ಬರುತ್ತದೆ. ಜನರನ್ನು ಹಾಳು ಮಾಡುವ ಆದಾಯ ಸರ್ಕಾರಕ್ಕೆ ಬೇಕಾಗಿಲ್ಲ ಎಂದು ಗುಜರಾತ್, ನಾಗಾಲ್ಯಾಂಡ್ ಸರ್ಕಾರಗಳು ರಾಜ್ಯದಲ್ಲಿ ಬಹಳ ಹಿಂದೆಯೇ ಪಾನ ನಿಷೇಧ ಜಾರಿಗೆ ಬಂದಿತ್ತು. ಇದೊಂದು ಕ್ರಾಂತಿಕಾರಕ ನಿರ್ಧಾರ ಎಂದು ಎಲ್ಲರೂ ಶಹಬ್ಬಾಸ್ ಹೇಳಿದ್ದೇ ಹೇಳಿದ್ದು. ಆದರೆ, ನಂತರದಲ್ಲಿ ಅಲ್ಲಿ ಏನಾಯಿತು ಗೊತ್ತೇ? ನಕಲಿ ಮದ್ಯ, ಮದ್ಯ ಕಳ್ಳಸಾಗಣೆ ಜಾಸ್ತಿಯಾದವು. ಹೊರ ರಾಜ್ಯಗಳಿಂದ ಸಾಕಷ್ಟು ಪ್ರಮಾಣದಲ್ಲಿ ಮದ್ಯ ಕಳ್ಳಸಾಗಣೆ ಆರಂಭವಾಯಿತು. ಗಡಿ ಭಾಗದ ಸುಂಕ ಕೇಂದ್ರಗಳಲ್ಲಿ ಪೊಲೀಸರಿಗೆ ದುಡ್ಡುಕೊಟ್ಟು ಮದ್ಯದ ಬಾಟಲಿಗಳನ್ನು ರಾಜ್ಯಕ್ಕೆ ತರಿಸುವಂತಾಯಿತು. ಹೀಗಾಗಿ ಪಾನ ನಿಷೇಧ ಎಂಬುದು ಅತ್ತ ಸರ್ಕಾರದ ಅಬಕಾರಿ ಆದಾಯವನ್ನು ಕಡಿಮೆ ಮಾಡಿತೇ ವಿನಃ ಪಾನ ನಿಷೇಧ ಕಟ್ಟುನಿಟ್ಟಾಗಿ ಜಾರಿಯಾಗಲೇ ಇಲ್ಲ. ಈ ಹಣ ಬೊಕ್ಕಸ ಭರ್ತಿ ಮಾಡುವ ಬದಲು ಪೊಲೀಸರ ಜೇಬು ತುಂಬಿಸಿತು.
ತರಾತುರಿಯ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಸಿದ್ದರಾಮಯ್ಯ ಈ ಎಲ್ಲಾ ವಿಚಾರಗಳ ಬಗ್ಗೆ ಯೋಚಿಸಬೇಕಿತ್ತು. ಏಕೆಂದರೆ, ಅನ್ಯ ಪಕ್ಷಗಳವರು ಮಾತ್ರವಲ್ಲ, ಅವರ ಪಕ್ಷದವರೇ ಸಿದ್ದರಾಮಯ್ಯ ಅವರ ಪ್ರತಿಯೊಂದು ನಡೆಯ ಮೇಲೆ ಕಣ್ಣಿಟ್ಟಿದ್ದಾರೆ. ಪ್ರತಿ ಹೆಜ್ಜೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ರೀತಿ ಪೂರ್ವಾಪರ ಯೋಚಿಸದೆ ಕೈಗೊಂಡ ನಿರ್ಣಯಗಳು ಸಮರ್ಪಕವಾಗಿ ಜಾರಿಯಾಗದೇ ಇದ್ದರೆ ಅದು ಪ್ರತಿಪಕ್ಷಗಳಿಗೆ ಸರ್ಕಾರದ ವಿರುದ್ಧ ಅಸ್ತ್ರಗಳನ್ನು ಒದಗಿಸಿದಂತಾಗುತ್ತದೆ. ಹೊಡೆಯಲು ಮುಂದಾದವರ ಕೈಗೆ ಕೋಲು ಕೊಟ್ಟಂತಾಗುತ್ತದೆ. ಅಂತಹ ಪರಿಸ್ಥಿತಿ ಬಂದರೆ ಸ್ವಪಕ್ಷೀಯರೇ ಸಿದ್ದರಾಮಯ್ಯ ವಿರುದ್ಧ ತಿರುಗಿ ಬೀಳಬಹುದು. ಲೋಕಸಭೆ ಚುನಾವಣೆ ಕೂಡ ಹತ್ತಿರದಲ್ಲಿದೆ. ಸಿದ್ದರಾಮಯ್ಯ ಅವರ ಕಾರ್ಯಕ್ರಮಗಳು ಸಮರ್ಪಕವಾಗಿ ಜಾರಿಯಾಗದೇ ಇದ್ದರೆ ಅದು ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ. ಕಾಂಗ್ರೆಸ್‌ನಲ್ಲಿ ಕಾಲೆಳೆಯುವವರಿಗೇನೂ ಕೊರತೆ ಇಲ್ಲ. ಸಿದ್ದರಾಮಯ್ಯ ಅವರ ನಿರ್ಧಾರಗಳು ಜಾರಿಯಾಗುವಲ್ಲಿ ವಿಫಲವಾದರೆ ಅಂತಹ ಸಂದರ್ಭದಲ್ಲಿ ಕಾಲೆಳೆಯಲು ಕಾಯುತ್ತಿದ್ದವರ ಮುಂದೆ ತಾವೇ ಕಾಲು ಜಾರಿ ಬಿದ್ದಂತಾಗುತ್ತದೆ.
ಲಗೋರಿ: ಕೆಲವೊಮ್ಮೆ ಅತಿಯಾದ ಆತ್ಮವಿಶ್ವಾಸ ಭ್ರಮೆಯಾಗಿಯೂ ಪರಿವರ್ತನೆ ಆಗುತ್ತದೆ.
- ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


