ಅಂಕಣಗಳು

ಹೊಸ ತಂತ್ರದ ಆವಿಷ್ಕಾರ: ಹಗಲುಗನಸಿಗೆ ಇದು ಸಕಾಲ!

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ರಕ್ಷಿಸಲೆಂದೇ ಕ್ರಿಕೆಟ್ ಹಗರಣವನ್ನು ಛೂಬಿಡಲಾಗಿದೆ...

Published On :

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ರಕ್ಷಿಸಲೆಂದೇ ಕ್ರಿಕೆಟ್ ಹಗರಣವನ್ನು ಛೂಬಿಡಲಾಗಿದೆ ಎಂದು ಯಾರಾದರೂ ಹೇಳಿದರೆ, ನಮ್ಮಲ್ಲಿ ಬಹುತೇಕ ಮಂದಿ ಅದನ್ನು ವಿಚಿತ್ರ ಕಲ್ಪನೆ ಎಂದು ತಳ್ಳಿಹಾಕಬಹುದು. ನಿಜ. ಅಶ್ವಿನಿಕುಮಾರ್, ಪವನ್ ಬನ್ಸಲ್‌ರಂಥವರು ಅಂಟಿಸಿಕೊಂಡ ಕಳಂಕವು ಭ್ರಷ್ಟಾಚಾರದ ಜಾಡನ್ನು ಪ್ರಧಾನಿಯ ಮನೆಬಾಗಿಲವರೆಗೂ ತಂದು ನಿಲ್ಲಿಸಿದೆ. ಇಲ್ಲಿಂದ ಸೋನಿಯಾ ನಿವಾಸದ ಹೊಸಿಲು ದೂರವೇನೂ ಅಲ್ಲ. ಆದರೆ, ಕಲ್ಲಿದ್ದಲು ಹಗರಣದ ಬಗ್ಗೆಯಾಗಲೀ ಇಟಲಿ ಹೆಲಿಕಾಪ್ಟರ್ ವ್ಯವಹಾರದ ಬಗ್ಗೆಯಾಗಲೀ ಯಾರೂ ಈಗ ಚಕಾರವೆತ್ತುತ್ತಿಲ್ಲ. ಎಲ್ಲರೂ ಚರ್ಚಿಸುತ್ತಿರುವುದು ಶ್ರೀನಿವಾಸನ್ ಮತ್ತು ಮೇಯಪ್ಪನ್, ಶ್ರೀಶಾಂತ್ ಮತ್ತು ಚಿಯರ್ ಗರ್ಲ್ಸ್ ಬಗ್ಗೆ ಮಾತ್ರ.
ನಮ್ಮಲ್ಲಿ ಒಂದು ಹಗರಣವನ್ನು ಇನ್ನೊಂದು ಹಗರಣದಿಂದ ಮುಚ್ಚಿ ಹಾಕಲಾಗುತ್ತಿದೆ. ಬೆಳಗ್ಗೆ ರಾಜಕಾರಣಿಗಳಿಂದ ಮೋಸ ಹೋಗುವ ಜನಸಾಮಾನ್ಯರು, ಸಂಜೆ ಕ್ರೀಡಾಕ್ಷೇತ್ರದ ವಂಚಕರಿಂದ ಟೋಪಿ ಹಾಕಿಸಿಕೊಳ್ಳುತ್ತಾರೆ. ಈ ಎರಡು ಬಗೆಯ ವಂಚನೆಗಳ ಮಧ್ಯೆ ಏನಾದರೂ ವ್ಯತ್ಯಾಸ ಇದೆಯೇ? ಈ ಪ್ರಶ್ನೆಗೆ ಇನ್ನೊಂದು ಪ್ರಶ್ನೆಯೇ ಸೂಕ್ತ ಉತ್ತರವಾಗಬಲ್ಲದು. ಟ್ಯಾಕ್ಸಿಯೊಂದರಲ್ಲಿ ನಡೆಯುವ ಗ್ಯಾಂಗ್ ರೇಪ್‌ಗೂ ಬಸ್ಸೊಂದರಲ್ಲಿ ನಡೆಯುವ ಗ್ಯಾಂಗ್ ರೇಪ್‌ಗೂ ಏನಾದರೂ ವ್ಯತ್ಯಾಸ ಇರುತ್ತದೆಯೇ? ಉನ್ನತ ಸ್ಥಾನದಲ್ಲಿರುವ ಮಂದಿ ಸಾಮಾನ್ಯ ಜನರನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ, ಶೋಷಣೆ ಮಾಡುತ್ತಾರೆ. ಇದು ಖಂಡಿತ ಸುಳ್ಳಲ್ಲ.
ಎಲ್ಲವೂ ಹಣಕ್ಕೋಸ್ಕರ, ಸಿರಿವಂತಿಕೆಗೋಸ್ಕರ. ರಾಜಕಾರಣಿಗಳು ಜನರನ್ನು ದೋಚುವ ಮೂಲಕ ಸಿರಿವಂತರಾಗುತ್ತಾರೆ, ಕ್ರಿಕೆಟ್ ಎಂಬ ಆಟ ಅಭಿಮಾನಿಗಳನ್ನು ವಂಚಿಸುವ ಮೂಲಕ ಶ್ರೀಮಂತವಾಗುತ್ತದೆ. ವಂಚಕರ ಜತೆ ದರೋಡೆಕೋರರೂ ಕೈಜೋಡಿಸಿದಾಗ ಕ್ರಿಕೆಟ್ ಎಂಬುದು ಸಮಾಜಕ್ಕೆ ಹಾನಿಕರವಾಗಿ ಪರಿವರ್ತಿತವಾಗುತ್ತದೆ. ಸಿಮೆಂಟ್ ಶ್ರೀನಿವಾಸನ್ ಕಾರುಬಾರು ನಡೆಸುವ ಮೊದಲೂ ಇವೆಲ್ಲವನ್ನೂ ಕಂಡಿದ್ದೇವೆ. ಸಂಸತ್ತಿನಲ್ಲಿ ಕೈಕೈ ಮಿಲಾಯಿಸುವವರು ಕೂಡಾ ಕ್ರಿಕೆಟ್‌ನ ಬೋರ್ಡ್‌ರೂಮ್‌ಗಳಲ್ಲಿ ಆತ್ಮೀಯ ಸ್ನೇಹಿತರಾಗಿಬಿಡುತ್ತಾರೆ. ಕಾಂಗ್ರೆಸ್, ಬಿಜೆಪಿ ಮತ್ತು ಎನ್‌ಸಿಪಿ ಕ್ರಿಕೆಟ್‌ನ ವಿಚಾರದಲ್ಲಿ ಪ್ರದರ್ಶಿಸುವ ಸಹಕಾರ ಮನೋಭಾವದ ಅರ್ಧದಷ್ಟನ್ನು ದೇಶವನ್ನು ಮುನ್ನಡೆಸುವ ವಿಚಾರದಲ್ಲಿ ಪ್ರದರ್ಶಿಸಿರುತ್ತಿದ್ದರೆ ನಮ್ಮ ದೇಶ ಒಂದಷ್ಟು ಏಳಿಗೆ ಕಾಣುತ್ತಿತ್ತು, ಜನ ಒಂದಷ್ಟು ನೆಮ್ಮದಿ ಗಳಿಸುತ್ತಿದ್ದರು.
ವಾಸ್ತವವಾಗಿ, ಕ್ರಿಕೆಟ್ ವಿಚಾರದಲ್ಲಿ ಆ ಪಕ್ಷಗಳ ನಾಯಕರು ಇಷ್ಟೊಂದು ಉತ್ಸುಕತೆ, ಸಹಕಾರ ತೋರುತ್ತಿರುವುದಾದರೂ ಯಾಕೆ? ದೇಶದಿಂದ ತಮಗಾಗಿ ಸಾಕಷ್ಟು ಗಿಟ್ಟಿಸಿಕೊಳ್ಳಲು ಎಂಬುದು ಸರ್ವವಿದಿತ. ಈ ನಾಯಕರ ಪ್ರಭಾವ ಎಷ್ಟಿದೆಯೆಂದರೆ, ಅದು  ಬಿಸಿಸಿಐಯನ್ನೂ ಕಾನೂನು ವ್ಯಾಪ್ತಿಯಿಂದ ಹೊರಗಿರಿಸಿದೆ. ಮಾಹಿತಿ ಹಕ್ಕಿನಂಥ ಕಾನೂನು ಅದಕ್ಕೆ ಅನ್ವಯವಾಗುವುದೇ ಇಲ್ಲ. ವಿಶ್ವದ ಅತ್ಯಂತ ಸಿರಿವಂತ ಸಂಸ್ಥೆಯಾಗಿರುವ ಬಿಸಿಸಿಐ ತೆರಿಗೆದಾರರನ್ನು ಬಲಿಗೊಟ್ಟು ಎಲ್ಲ ಬಗೆಯ ರಿಯಾಯಿತಿ, ವಿನಾಯಿತಿಗಳನ್ನು ಅನುಭವಿಸುತ್ತಿದೆ. ಇದೆಲ್ಲವೂ ಏತಕ್ಕಾಗಿ? ಚಿಯರ್ ಗರ್ಲ್ಸ್ ಕ್ರಿಕೆಟ್ ಮತ್ತು ಫಿಕ್ಸರ್‌ಗಳ ಕ್ರಿಕೆಟ್ ಎಂಬ ಹುಚ್ಚಾಟವನ್ನು ಆವಿಷ್ಕಾರ ಮಾಡುವುದಕ್ಕಾಗಿಯೇ? ಇಂಥ ಆವಿಷ್ಕಾರಗಳ ಮುಖ್ಯ ಸಂಶೋಧಕ ಈ ದೇಶದಲ್ಲಿ ವಾಸಿಸಲಾರ. ಏಕೆಂದರೆ, ಇಲ್ಲಿದ್ದರೆ ಆತ ಜೈಲು ಸೇರುವುದು ಖಚಿತ! ಇಂಥವರು ನಿಜಕ್ಕೂ ಬುದ್ಧಿವಂತರು. ನಿಜವಾದ ಮೂರ್ಖರು ಯಾರು ಗೊತ್ತೇ? ಕ್ರಿಕೆಟ್ ಎಂಬ ಅವಮಾನವನ್ನು ವೀಕ್ಷಿಸಲು ಇನ್ನೂ ಟಿಕೆಟ್ ಕೊಳ್ಳುತ್ತಾರಲ್ಲಾ, ಅವರು!
 ಕೆಲವೇ ಕೆಲವು ಮಂದಿಯ ತಪ್ಪಿಗಾಗಿ, ಕೆಲವೇ ಕೆಲವು ವ್ಯಕ್ತಿಗಳು ಕಾನೂನು ಉಲ್ಲಂಘಿಸಿದ್ದಕ್ಕಾಗಿ, ಇಡೀ ಕ್ರಿಕೆಟನ್ನು ದೂಷಿಸುವುದು ಸರಿಯಲ್ಲ ಎಂಬ ವಾದಕ್ಕೆ ಅವಕಾಶ ನೀಡಬೇಡಿ. ಹಠವಾದಿ ಶ್ರೀನಿವಾಸನ್ ಇಡೀ ಕ್ರಿಕೆಟನ್ನು ಪ್ರತಿನಿಧಿಸಿದವರು. ಅವರಿಗಿಂತ ಮೊದಲು ಶರದ್ ಪವಾರ್, ಪವಾರ್‌ಗಿಂತಲೂ ಮೊದಲು ಜಗಮೋಹನ್ ದಾಲ್ಮಿಯಾ ಇದೇ ರೀತಿ ಇಡೀ ಕ್ರಿಕೆಟನ್ನು ಪ್ರತಿನಿಧಿಸಿದವರು. ಹಗರಣದ ಬಗ್ಗೆ ಒಂದು ಅಕ್ಷರ ಕೂಡ ಉಚ್ಚರಿಸದೆ ಬಿಸಿಸಿಐ ಅಡಿ ಬಿಸಿಲು ಕಾಯಿಸಿಕೊಂಡು ಹಾಯಾಗಿರುವ ಹಳೆಯ ಮಹಾನ್ ಕ್ರಿಕೆಟ್ ತಾರೆಯರೂ ಒಟ್ಟಾರೆ ಕ್ರಿಕೆಟನ್ನು ಪ್ರತಿನಿಧಿಸಿದವರು. ಇಂದು ಕ್ರಿಕೆಟ್ ಕ್ಷೇತ್ರದಲ್ಲಿ ಮಿಂಚುತ್ತಿರುವವರು, ದೇವರೆಂದೇ ಬಣ್ಣಿಸಲ್ಪಡುವ ವ್ಯಕ್ತಿಯಿಂದ ಹಿಡಿದು ಕ್ಯಾಪ್ಟನ್ ಸಿಮೆಂಟ್ ಎಂಬ ಅಭಿದಾನಕ್ಕೆ ಅರ್ಹರಾದ ವ್ಯಕ್ತಿಯವರೆಗೆ ಎಲ್ಲರೂ ಈಗ ಗಾಢ ಮೌನ ತಳೆದಿದ್ದಾರೆ.
ಇದಕ್ಕೆಲ್ಲ ಪರಿಹಾರ ಬಯಸುವ ನಾವು ದಾರಿ ಕಾಣದೆ ಚಡಪಡಿಸುವಂತಾಗಿದೆ. ಏಕೆಂದರೆ, ಸಿಮೆಂಟ್ ದೈತ್ಯನ ಉಚ್ಚಾಟನೆಯಿಂದ ಯಾವ ಪರಿಹಾರವೂ ದೊರೆಯಲಾರದು. ಆ ಸ್ಥಾನವನ್ನು ಸಕ್ಕರೆ ಅಥವಾ ಸೆಣಬು ದೈತ್ಯ ತುಂಬಬಹುದು ಇಲ್ಲವೇ ರಾಜಕೀಯ ದೈತ್ಯ ತುಂಬಬಹುದು. ಆದ್ದರಿಂದ ಕನಸು ಕಾಣುವುದೊಂದೇ ಈಗ ನಮಗೆ ಉಳಿದಿರುವ ಏಕೈಕ ಮಾರ್ಗ. ಕ್ರಿಕೆಟ್ ಎಂಬ ಮೋಸದಾಟ ನಿಷೇಧಿಸಲ್ಪಡುವ, ರಾಜಕಾರಣಿಗಳು ಸಭ್ಯ, ಸಂಭಾವಿತರಾಗಿ ಪರಿವರ್ತಿತರಾಗುವ ಕನಸು ಕಾಣಲಷ್ಟೇ ನಮಗೆ ಸಾಧ್ಯ. ರಕ್ತ ಹೀರುವ ಸೊಳ್ಳೆಗಳ ವಾಸನೆ ಗ್ರಹಣ  ಸಾಮರ್ಥ್ಯವನ್ನು ನಾಶಪಡಿಸುವ ತಂತ್ರಗಳನ್ನು ಸಂಶೋಧಕರು ಕಂಡುಹಿಡಿಯುತ್ತಿದ್ದಾರಂತೆ. ಅದೇ ರೀತಿ, ನಮ್ಮ ರಾಜಕಾರಣಿಗಳ ಸಿರಿವಂತಿಕೆಯ ಆಕರ್ಷಣೆಯನ್ನು ನಾಶಪಡಿಸಿದಲ್ಲಿ ಮಾತ್ರ ನಮ್ಮ ದೇಶ ಬಚಾವ್ ಆಗಬಲ್ಲದು.
ಸೊಳ್ಳೆಗಳು ನಮಗೆ ಪರಾವಲಂಬನೆಯನ್ನು ಕಲಿಸುತ್ತವೆ. ಕ್ರಿಕೆಟ್‌ನಿಂದ ಹಿಡಿದು ಆಡಳಿತದವರೆಗೆ ಪ್ರತಿಯೊಂದಕ್ಕೂ ಅಂಟಿಕೊಳ್ಳುವ ಪಿಡುಗು ಅದು. ಪರಾವಲಂಬಿಗಳನ್ನು ಕೂಡಾ ಕೆಲವೊಮ್ಮೆ ಇತರ ಜೀವಿಗಳು ಹೇಗೆ ಅವಲಂಬಿಸುತ್ತವೆ ಎಂಬುದನ್ನು ವಿಜ್ಞಾನಿಗಳು ವಿವರಿಸುತ್ತಾರೆ. ನಾಯಿಯನ್ನು ಆಶ್ರಯಿಸಿ ಬದುಕುವ ಚಿಕ್ಕಾಡು ತಗಣೆಯ ಜೀರ್ಣಾಂಗ ವ್ಯೂಹದಲ್ಲಿ ಪ್ರೊಟೋಝೋವಾ ಆಶ್ರಯ ಪಡೆಯುತ್ತದೆ. ಸಾರ್ವಜನಿಕ ಜೀವನದಲ್ಲಿ ಇಂಥ ಅವಲಂಬನೆ ಇನ್ನಷ್ಟು ಸಲೀಸು. ಪಕ್ಷದ ಕಾರ್ಯಕರ್ತನೊಬ್ಬ ಪ್ರೊಟೋಝೋವಾ ಇದ್ದಂತೆ. ಆತ ಶಾಸಕನ 'ಜೀರ್ಣಾಂಗ ವ್ಯೂಹ'ದೊಳಗೆ ಆಶ್ರಯ ಪಡೆಯಬೇಕೆಂದೇನೂ ಇಲ್ಲ.
 ಕೋಗಿಲೆ ತನ್ನದೇ ಆದ ಗೂಡನ್ನು ಕಟ್ಟಿಕೊಳ್ಳುವುದಿಲ್ಲ. ಮೊಟ್ಟೆಗೆ ಕಾವು ಕೊಡಲು ಇತರ ಪಕ್ಷಿಗಳ ಗೂಡನ್ನು ಆಶ್ರಯಿಸುತ್ತದೆ. ಇದನ್ನು 'ಬ್ರೂಡ್ ಪಾರಾಸೈಟಿಸಂ' ಎನ್ನುತ್ತಾರೆ. ರಾಜಕೀಯದಲ್ಲಿ ಇಂಥ ಪ್ರಕ್ರಿಯೆ ಸರ್ವೇಸಾಮಾನ್ಯ. ಯಡಿಯೂರಪ್ಪ ಏನು ಮಾಡಿದರು ನೋಡಿ. ಅವರು ತಮ್ಮ ಬಿಜೆಪಿ ತತ್ತಿಗಳನ್ನು ಕುಮಾರಸ್ವಾಮಿಯ ಜೆಡಿಎಸ್ ಗೂಡಿನಲ್ಲಿ ಇಟ್ಟರು. ಮರಿಗಳು ಹೊರ ಬಂದ ಬಳಿಕ ಅವುಗಳ ಹಿಂಡನ್ನು ಎತ್ತಿಕೊಂಡು ಹಾರಿಹೋದರು! ಇನ್ನೊಂದು ಬಗೆಯ ಪರಾವಲಂಬನೆಯನ್ನೂ ನಾವು ಕಾಣಬಹುದು. ಅದು 'ಸೋಷಿಯಲ್ ಪಾರಾಸೈಟಿಸಂ'. ಇಲ್ಲಿ ಒಂದು ವರ್ಗವು ಇನ್ನೊಂದು ವರ್ಗವನ್ನು ದುರ್ಬಳಕೆ ಮಾಡಿಕೊಳ್ಳುತ್ತದೆ. ಅಧಿಕಾರಿಗಳು ಸಚಿವರಿಂದ ಲಾಭ ಪಡೆಯುತ್ತಾರೆ, ಸಚಿವರು ಅಧಿಕಾರಿಗಳಿಂದ ಲಾಭ ಪಡೆಯುತ್ತಾರೆ. ತನ್ಮೂಲಕ ಎರಡೂ ವರ್ಗಗಳು ಸುಖವಾಗಿ ಜೀವಿಸುತ್ತವೆ. ಇಲ್ಲಿ ಒಟ್ಟಾರೆ ನೀತಿ ಇಷ್ಟೆ- ಹಣದ ಹುಚ್ಚಿನ, ಕ್ರಿಕೆಟ್ ಹುಚ್ಚಿನ, ಹುಚ್ಚು ರಾಜಕೀಯದ ನಮ್ಮ ಭಾರತದಲ್ಲಿ ವೈಜ್ಞಾನಿಕ ಸಂಶೋಧನೆಯ ಕಲ್ಪನೆ ಮಾತ್ರ ಆಶಾಕಿರಣವಾಗಬಲ್ಲದು.


-ಟಿಜೆಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.