ಅಂಕಣಗಳು

ಮಾತಿಲ್ಲದೆಯೂ ಅವರು ಸುಖವಾಗಿ ಬಾಳಿದರು!

'ಎರಡು ಕನಸು' ಚಿತ್ರವನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಅದರ ನಾಯಕ-ನಾಯಕಿ ಮುದ್ದಾಗಿರುತ್ತಾರೆ. ಪರಸ್ಪರರ ಕುರಿತು ಗೌರವ ಭಾವನೆ ಹೊಂದಿರುತ್ತಾರೆ...

Published On :

'ಎರಡು ಕನಸು' ಚಿತ್ರವನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಅದರ ನಾಯಕ-ನಾಯಕಿ ಮುದ್ದಾಗಿರುತ್ತಾರೆ.  ಪರಸ್ಪರರ ಕುರಿತು ಗೌರವ ಭಾವನೆ ಹೊಂದಿರುತ್ತಾರೆ. ಮುಖ್ಯವಾಗಿ, ಅವರಿಗೆ ಆಗ ತಾನೇ ಮದುವೆಯಾಗಿರುತ್ತದೆ. ಗಂಡ ತನ್ನನ್ನು ಮತ್ತೆ ಮತ್ತೆ ಮಾತಾಡಿಸಲಿ. ಕೈ ಹಿಡಿದು, ಕಣ್ಣು ಹೊಡೆದು, ಜಡೆ ಎಳೆದು ರೇಗಿಸಲಿ. ಯಾವುದೋ ಮಾಯದಲ್ಲಿ ಬಳಿ ಬಂದು ಛಕ್ಕನೆ ಮುತ್ತಿಟ್ಟು ರೋಮಾಂಚನಕ್ಕೆ ಈಡು ಮಾಡಲಿ ಎಂದು ಈಕೆ ಆಸೆಪಡುತ್ತಾಳೆ. ಗಂಡ ಕಾಲೇಜಿನಿಂದ ವಾಪಸ್ ಬರುವುದು ತಡವಾದಾಗ, ಈಕೆ ಸೋಫಾದ ಮೇಲೆ ಕೂತು-ಅವನು ಸುಮ್ಮಾನದಿಂದ ಬಳಿ ಬಂದಂತೆ, ಸಡಗರದಿಂದ ತಬ್ಬಿಕೊಂಡಂತೆ, ಸಂಭ್ರಮದಿಂದ ಹಾಡು ಹೇಳಿದಂತೆ ಕನಸು ಕಾಣುತ್ತಾಳೆ. ತಂನಂ ತಂನಂ ಎಂದು ಗುನುಗುತ್ತಾ ಮೈಮರೆಯುತ್ತಾಳೆ.
ಆದರೆ, ವಾಸ್ತವ ಬೇರೆಯೇ ಇರುತ್ತದೆ. ಕಥಾನಾಯಕನ 'ಮನಸ್ಸಿನೊಳಗೆ' ಇನ್ನೊಬ್ಬಳ ಚಿತ್ರವಿರುತ್ತದೆ. ಆತನ ಮನದ ತುಂಬಾ ಅವಳೇ. ಅವಳೊಬ್ಬಳೇ. ಆತ ಅವಳೊಂದಿಗೆ ಮಾತಾಡಲಾರ. ಒತ್ತಾಯಕ್ಕೆ ಮದುವೆಯಾದವಳೊಂದಿಗೂ ಮಾತಿಗೆ ನಿಲ್ಲಲಾರ. ಹೆಂಡತಿ ಏನೋ ಹೇಳಲು ಬಂದರೆ ಇವನು ಮತ್ತೇನೋ ನೆಪ ಮಾಡಿಕೊಂಡು ಎದ್ದು ಹೋಗುತ್ತಾನೆ. ಕಡೆಗೊಮ್ಮೆ ಈಕೆ ಹಠಕ್ಕೆ ಬಿದ್ದು, ಆರ್ದ್ರಳಾಗಿ ಅವನ ಮುಂದೆ ನಿಂತು ಬೇಡುತ್ತಾಳೆ: 'ಮಾತಾಡಿ, ಏನಾದ್ರೂ ಮಾತಾಡಿ...' ಆಗ ನಾಯಕ, ಒಂದರ್ಥದಲ್ಲಿ ಗದ್ಗದನಾಗಿ, ಒಂದರ್ಥದಲ್ಲಿ ನಿರುದ್ವಿಗ್ನನಾಗಿ ಕೇಳುತ್ತಾನೆ: 'ಏನು ಮಾತಾಡ್ಲಿ?'
ಮರುಕ್ಷಣದಿಂದಲೇ ಅವರ ಮಧ್ಯೆ ಮಾತು ಸತ್ತು ಹೋಗುತ್ತದೆ. ಮೌನ ನೆಲೆಯಾಗುತ್ತದೆ. ಮುಂದೆ ಕ್ಲೈಮಾಕ್ಸ್ ಬರುವ ತನಕ ಆತನೂ ಸುಖವಾಗಿರುವುದಿಲ್ಲ. ಅವಳಿಗೂ ನೆಮ್ಮದಿಯಿರುವುದಿಲ್ಲ. ಸಂಬಂಧಗಳ ಮಧ್ಯೆ ಮಾತು ನಿಂತು ಹೋದರೆ ಆಗುವ ಅನಾಹುತ ಇದು. ಈ ಮಾತಿಗೆ ಉದಾಹರಣೆ ಬೇಕು ಅನ್ನಿಸಿದರೆ ಒಮ್ಮೆ ಹಿಂತಿರುಗಿ ನೋಡಿ. ಮನೆಯಲ್ಲಿ ಅಪ್ಪ-ಅಮ್ಮ, ಯಾವುದೋ ಜಗಳದ ನೆಪದಲ್ಲಿ ಮಾತು ಬಿಟ್ಟಿರುತ್ತಾರೆ. ಆನಂತರ ಅವರಿಬ್ಬರಿಗೂ ದುಬಾಷಿಗಳಂತೆ ಕೆಲಸ ಮಾಡುವ ಹೊಣೆ ಮಕ್ಕಳ ಮೇಲೆ ಬೀಳುತ್ತದೆ. ಯಾವುದೋ ಆಕಸ್ಮಿಕ ಕಾರಣಕ್ಕೆ ನೆರೆಹೊರೆಯ ಕುಟುಂಬದವರು ಮಾತು ಬಿಟ್ಟರೆ, ಮರುದಿನದಿಂದಲೇ ಅಲ್ಲಿ ದ್ವೇಷದ ಹುತ್ತ ಬೆಳೆಯತೊಡಗುತ್ತದೆ. ಅದಕ್ಕಿಂತ ಹೆಚ್ಚಾಗಿ, ಎದುರಿಗೇ ಇರುವವರೊಂದಿಗೆ ಮಾತಿಲ್ಲದೆ ಉಳಿಯಬೇಕು ಅನ್ನಿಸಿದಾಗ ಪರಪರನೆ ತಲೆ ಪರಚಿಕೊಳ್ಳುವಂತಾಗುತ್ತದೆ.
ಇದು, ನಮ್ಮ ನಿಮ್ಮೆಲ್ಲರ ಅನುಭವದ ಮಾತು ತಾನೆ? ಈ ಮಾತಿಗೆ, ಈ ನಂಬಿಕೆಗೆ ಗೋಲಿ ಹೊಡೆಯುವಂಥ ಕಥೆ ಇದು. ಆ ಕಥೆಯ ವಿವರಣೆ ಹೀಗೆ: ಒಂದು ಊರು. ಅಲ್ಲಿ ಒಂದು ಕುಟುಂಬ. ಹೆಂಡತಿ, ಗಂಡನಿಗಿಂತ ಹತ್ತುವರ್ಷಕ್ಕೆ ಚಿಕ್ಕವಳು. ಕಾಲಾಂತರದಲ್ಲಿ ನಾನು ಮುದುಕನಾಗಿ, ವೃದ್ಧಾಪ್ಯದ ಕಾರಣಕ್ಕೆ ನಿತ್ರಾಣನಾದಾಗ ಈಕೆ ಸೇವೆ ಮಾಡಲಿಕ್ಕಾದರೂ ಆಗುತ್ತಾಳೆ ಎಂದಾತ ಲೆಕ್ಕ ಹಾಕಿದ್ದ. ಆದರೆ, ಹೆಂಡತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ. ಆಕೆಗೆ ಹಾಡು ಗೊತ್ತಿತ್ತು. ನೃತ್ಯ ಗೊತ್ತಿತ್ತು. ಪಾಕ ಕಲೆಯಲ್ಲಿ ಅಗಾಧ ತಿಳಿವಳಿಕೆಯಿತ್ತು. ಗಂಡ ಬೇಗ ಎಚ್ಚರಗೊಂಡರೆ, ಸೋಮಾರಿಯಂತೆ ಮಲಗಿಕೊಂಡೇ ಇದ್ದರೆ, ಕೆಲಸಕ್ಕೆ ಹೊರಟರೆ, ಕೆಲಸದಿಂದ ವಾಪಸ್ ಬಂದರೆ, ಸುಮ್ಮನೆ ರೇಗಿದರೆ, ಕಾರಣವಿಲ್ಲದೇ ಮುನಿಸಿಕೊಂಡರೆ... ಇಂಥ ಎಲ್ಲ ಸಂದರ್ಭಗಳಲ್ಲೂ ಆಕೆ ಅದದೇ, ಸಂದರ್ಭಕ್ಕೆ ಹೊಂದಿಕೆಯಾಗುವ ಮಧುರ ಹಾಡುಗಳನ್ನು ಹೇಳುತ್ತಾ ಗಂಡನನ್ನು ಮೆಚ್ಚಿಸುತ್ತಿದ್ದಳು, ಬೆಚ್ಚಿಸುತ್ತಿದ್ದಳು.
ಈ ನಡುವೆ ಅವರಿಗೆ ಮಕ್ಕಳಾದವು. ನೋಡ ನೋಡುತ್ತಲೇ ಮಕ್ಕಳು ಬೆಳೆದವು. ಅವುಗಳ ಮದುವೆಯಾಯಿತು. ಹೊಸ ಬದುಕಿನ ನೆಪದಲ್ಲಿ, ಸ್ವಾತಂತ್ರ್ಯ ಪಡೆದುಕೊಂಡ ಖುಷಿಯಲ್ಲಿ ಮಕ್ಕಳು ಬೇರೆ ಬೇರೆ ಮನೆಗಳನ್ನು ಸೇರಿಕೊಂಡರು. ಆನಂತರದಲ್ಲಿ ಇಡೀ ಮನೆಯಲ್ಲಿ ಇವರಿಬ್ಬರೇ. ಇಬ್ಬರಿಗೂ ವಯಸ್ಸಾಗಿತ್ತು. ಅದೇ ಕಾರಣಕ್ಕೆ ತುಂಬಾ ಬೇಗನೆ ಆಯಾಸವೂ ಆಗುತ್ತಿತ್ತು. ವಯಸ್ಸಾದ ಕಾರಣಕ್ಕೆ ಆಕೆಯ ಕೆನ್ನೆ ದಪ್ಪವಾಗಿ, ಸ್ವಲ್ಪ ಹೊಟ್ಟೆ ಬಂದು, ಚರ್ಮ ಕಂಡೂ ಕಾಣದಂತೆ ಸುಕ್ಕಾಗತೊಡಗಿತ್ತು. ಆದರೆ ಆಕೆಯ ದನಿಗೆ ವಯಸ್ಸಾಗಿರಲಿಲ್ಲ. ಮಕ್ಕಳ ನೆನಪಲ್ಲಿ, ಇನ್ಯಾವುದೋ ಸಂಕಟದಲ್ಲಿ ಗಂಡ ಕಣ್ತುಂಬಿಕೊಂಡಾಗ ಈಕೆ- 'ನಾ ನಿನಗೆ ನೀ ನನಗೆ ಜೇನಾಗುವಾ' ಎಂದು ಹಾಡಿ ಸಮಾಧಾನಿಸುತ್ತಿದ್ದಳು. ಹೀಗಿರುವಾಗಲೇ ಅದೊಂದು ದಿನ ಅನಾಹುತವಾಗಿ ಹೋಯಿತು. ಆಕೆ ಯಾವುದೋ ಹಾಡು ಗುನುಗುತ್ತಾ ಸ್ನಾನದ ಮನೆಯಿಂದ ಬರುತ್ತಿದ್ದವಳು, ಸೋಪ್‌ನ ಮೇಲೆ ಕಾಲಿಟ್ಟು ಜಾರಿ ಬಿದ್ದಳು. ಮರುಕ್ಷಣವೇ ಆಕೆಗೆ ಮಾತು ನಿಂತು ಹೋಯಿತು. ಆಸ್ಪತ್ರೆಯಲ್ಲಿ ವೈದ್ಯರು ವಿಷಾದದಿಂದ ಹೇಳಿದರು: 'ಬೆನ್ನು ಮೂಳೆಗೆ ದೊಡ್ಡ ಪೆಟ್ಟು ಬಿದ್ದಿದೆ. ಅದೇ ಕಾರಣದಿಂದ ಮೆದುಳಿನ ಒಂದು ಭಾಗಕ್ಕೂ ಪೆಟ್ಟಾಗಿದೆ. ಎರಡು ಆಪರೇಷನ್ ಮಾಡಿದರೆ ಆಕೆ ಐದು ವರ್ಷ ಬದುಕಬಹುದು. ಆದರೆ, ಈಕೆಗೆ ಅರೆಬರೆ ನೆನಪು ಮಾತ್ರ ಇರುತ್ತದೆ. ಈಕೆಗೆ ಮುಂದೆ ಮಾತು ಬರುವುದೇ ಇಲ್ಲ...
ಮುಂದೆ ಅವಳಿಗೆ ಆಪರೇಷನ್ ಆಗುತ್ತದೆ. ಮಕ್ಕಳು ಬಂದು, ತಂದೆಗೆ ಸಮಾಧಾನ ಹೇಳಿ ಹೋಗುತ್ತಾರೆ. ಆನಂತರದಲ್ಲಿ ಅವನು ಒಬ್ಬನೇ ಆಗುತ್ತಾನೆ. ಎದುರು ಕೂತವನು ತನ್ನ ಗಂಡ ಎಂಬುದನ್ನು ಬಿಟ್ಟರೆ ಆಕೆಗೆ ಬೇರೇನೂ ನೆನಪಿರುವುದಿಲ್ಲ. ಕೆಲವೇ ದಿನಗಳಲ್ಲಿ ಆಕೆಗೆ ಡಿಸ್‌ಚಾರ್ಜ್ ಆಗುತ್ತದೆ. ಆಪರೇಷನ್ ಕಾರಣದಿಂದ ಆಕೆಗೆ ನಾಲ್ಕು ಹೆಜ್ಜೆ ನಡೆಯಲೂ ಕಷ್ಟವಾಗುತ್ತದೆ. ಆಕೆ ಕೂತಲ್ಲೇ ಮೂತ್ರ ವಿಸರ್ಜಿಸುತ್ತಾಳೆ. ಕಕ್ಕ ಮಾಡುತ್ತಾಳೆ. ಸಂಕಟವನ್ನು ಹೇಳಿಕೊಳ್ಳಲಾಗದೆ ಮೌನವಾಗಿ ಕಣ್ಣೀರು ಹಾಕುತ್ತಾಳೆ. ಈತ ಒಂದೂ ಮಾತಾಡದೆ ಅವಳ ಎದುರು ಕೂರುತ್ತಾನೆ. ಅವಳ ವಿಸರ್ಜನೆಯನ್ನು ತೊಳೆಯುತ್ತಾನೆ. ಬಳಿಯುತ್ತಾನೆ. ಅವಳಿಗೆ ತುತ್ತು ತಿನ್ನಿಸುತ್ತಾನೆ. ಚುಕ್ಕು ತಟ್ಟಿ ಮಲಗಿಸುತ್ತಾನೆ. ಈತನ ತಲೆಯ ಮೇಲೆ ತೊಡೆಯಿಟ್ಟು ಆರ್ದ್ರಳಾಗಿ ಇವನನ್ನೇ ನೋಡಿದಾಗ ಅವಳ ಕೈ ಹಿಡಿದು ಕಣ್ಣಿಗೆ ಒತ್ತಿಕೊಳ್ಳುತ್ತಾನೆ. ಆಕೆ ಪಿಳಪಿಳನೆ ಕಣ್ಣು ಬಿಟ್ಟಾಗ 'ನಾ ನಿನಗೆ, ನೀ ನನಗೆ ಜೇನಾಗುವಾ' ಎಂದು ಹಾಳೆಯಲ್ಲಿ ಬರೆದು ತೋರಿಸುತ್ತಾನೆ. ಆನಂತರದ ಐದಾರು ವರ್ಷ, ಅವರಿಬ್ಬರೂ ಮಾತಿಲ್ಲದೆಯೂ ಸುಖವಾಗಿ ಬಾಳುತ್ತಾರೆ.
ಮಾತು ಬೆಳ್ಳಿ, ಮೌನ ಬಂಗಾರ ಎಂದಿದ್ದು ಇದಕ್ಕೇನಾ? ತಿಳಿದವರು ಹೇಳಬೇಕು...


- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.