ಅಂಕಣಗಳು

ಪ್ರೀತಿ ಹೆಚ್ಚಿದಷ್ಟೂ ಸಂಬಂಧ ಗಟ್ಟಿಯಾಗುತ್ತದೆ...

ಏರ್‌ಪೋರ್ಟ್‌ಗೆ ಒಂದರ ಹಿಂದೊಂದು ಕಾರ್‌ಗಳು ಬರುತ್ತಲೇ ಇದ್ದವು. ಒಂದು...

Published On :

ಏರ್‌ಪೋರ್ಟ್‌ಗೆ ಒಂದರ ಹಿಂದೊಂದು ಕಾರ್‌ಗಳು ಬರುತ್ತಲೇ ಇದ್ದವು. ಒಂದು ಕಾರ್‌ನಲ್ಲಿ ವಿಮಾನ ಹತ್ತುವ ವ್ಯಕ್ತಿ ಇದ್ದರೆ ಮತ್ತೊಂದು ಅಥವಾ ಎರಡು ಕಾರ್‌ನ ತುಂಬ ಅವರಿಗೆ ಹ್ಯಾಪಿ ಜರ್ನಿ ಎಂದು ಶುಭಾಶಯ ಕೋರಲು ಬಂದ ಕುಟುಂಬದ ಸದಸ್ಯರು ಅಥವಾ ಗೆಳೆಯರು ಇರುತ್ತಿದ್ದರು. ಎಲ್ಲರೂ ಒಂದೊಂದು ರೀತಿಯಲ್ಲಿ ಕಿವಿ ಮಾತು ಹೇಳುತ್ತಿದ್ದರು. ಕೆಲವರು, ವಾಪಸ್ ಬರುವಾಗ ತಮಗೆ ಮರೆಯದೇ ತರಬೇಕಿರುವ ವಸ್ತುಗಳ ಬಗ್ಗೆ ವಿವರಣೆ ನೀಡುತ್ತಿದ್ದರು. ಮತ್ತೆ ಕೆಲವರು, ಯಾವ್ಯಾವ ಊರಿನ ವಿಮಾನ ನಿಲ್ದಾಣಗಳಲ್ಲಿ ಸೆಕ್ಯೂರಿಟಿ ವ್ಯವಸ್ಥೆ ಹೇಗೆಲ್ಲಾ ಇವೆ ಎಂಬುದನ್ನು ವಿವರಿಸುತ್ತಿದ್ದರು. ಮತ್ತೊಂದಷ್ಟು ಜನ ಟಿಕೆಟ್ ಕೌಂಟರಿಗೆ ಹೋಗಿ ಯಾವುದೋ ಮಾಹಿತಿ ಕೇಳುತ್ತಿದ್ದರು.
ಈ ಗಜಿಬಿಜಿಯ ಮಧ್ಯೆಯೇ ಆ ದಂಪತಿ ಕಾಣಿಸಿದ್ದು. ಆತನ ಕೈಲಿ ಎರಡು ಬ್ಯಾಗ್‌ಗಳಿದ್ದವು. ಅವುಗಳನ್ನು ಎರಡೂ ಬದಿಯಲ್ಲಿ ಇಟ್ಟುಕೊಂಡು ಆತ ಹೊರಡಲು ಸಿದ್ಧನಾದ. ಅದೇ ವೇಳೆಗೆ-'ಇನ್ನು ಅರ್ಧ ಗಂಟೆಯಲ್ಲಿ ಸೆಕ್ಯೂರಿಟಿ ಚೆಕಪ್ ಆರಂಭವಾಗುತ್ತದೆ. ಪ್ರಯಾಣಿಕರು ತಮ್ಮ ಲಗೇಜುಗಳೊಂದಿಗೆ ಸಿದ್ಧರಾಗಬೇಕೆಂದು ವಿನಂತಿ' ಎಂಬ ಘೋಷಣೆ ಕೇಳಿ ಬಂತು. ಆತ ಮರುಕ್ಷಣವೇ, ತನ್ನ ಎಡಬದಿಯಲ್ಲಿ ನಿಂತಿದ್ದ 6 ವರ್ಷದ ಮಗನನ್ನು ಹತ್ತಿರ ಕರೆದ. ಆತನನ್ನು ತುಂಬ ಪ್ರೀತಿಯಿಂದ ಆಲಂಗಿಸಿಕೊಂಡ. ನಂತರ, ಮೆಲ್ಲಗೆ ಅವನ ಕೆನ್ನೆ ತಟ್ಟಿ ಹೇಳಿದ: 'ಪುಟ್ಟಾ, ಮಿಸ್ ಯೂ...ಆ ಮಗು, ಅಮ್ಮನ ಕಡೆ ತಿರುಗಿಕೊಂಡು, ಒಳಗೊಳಗೇ ಬಿಕ್ಕುತ್ತಾ -ಡ್ಯಾಡೀ, ನಾನೂ ಅಷ್ಟೆ. ನಿಮ್ಮನ್ನು ತುಂಬಾ ಮಿಸ್ ಮಾಡ್ಕೋತಾ ಇದೀನಿ' ಎಂದಿತು.
ಒಂದು ನಿಮಿಷ ಮೌನ. ಆನಂತರ, 10 ವರ್ಷದ ಹಿರಿಯ ಮಗನನ್ನು ಆತ ಹತ್ತಿರ ಕರೆದು ಅವನನ್ನು ಆಲಂಗಿಸಿಕೊಂಡು, ಬಳಿಕ ಮೆಲ್ಲಗೆ ಕೆನ್ನೆ ತಟ್ಟಿ ಹೇಳಿದ: ಮನೇಲಿ ಈಗ ನೀನೇ ದೊಡ್ಡವನು. ಹುಷಾರಾಗಿರು. ಎಲ್ಲರನ್ನೂ ಹುಷಾರಾಗಿ ನೋಡಿಕೋ...ನಿನ್ನನ್ನು ತುಂಬಾ ಮಿಸ್ ಮಾಡ್ಕೋತೇನೆ...'
ಆ ಮಗ, ಅಪ್ಪನಿಗೆ ಸಮಾಧಾನ ಹೇಳುವಂತೆ, 'ನೀವು ನಮ್ಮ ಬಗ್ಗೆ, ಮನೆಯ ಬಗ್ಗೆ ಯೋಚನೆ ಮಾಡಬೇಡಿ ಡ್ಯಾಡೀ. ನಿಮ್ಮ ನೆನಪುಗಳೊಂದಿಗೇ ನಾವಿರ್ತೇವೆ. ಖುಷಿಯಾಗಿ ಹೋಗಿ ಬನ್ನಿ...' ಎಂದ.
ಆ ಯಜಮಾನನ ದೃಷ್ಟಿ, ಈಗ ಹೆಂಡತಿಯ ಕೈಲಿದ್ದ ಮೂರು ವರ್ಷದ ಮಗಳ ಮೇಲೆ ಬಿತ್ತು. ಆತ ಮಗುವನ್ನು ಸರಕ್ಕನೆ ಎತ್ತಿಕೊಂಡ. ಆ ಮಗುವಿನ ಅಂಗೈಯನ್ನು ಕಣ್ಣಿಗೆ ಒತ್ತಿಕೊಂಡ. ಮಗುವಿನ ಹಣೆಗೆ, ಕೆನ್ನೆಗೆ ಮೇಲಿಂದ ಮೇಲೆ ಮುತ್ತಿಟ್ಟು, ನನ್ನ ಮುದ್ದೂ, ನನ್ನ ಚಿನ್ನಾ, ನನ್ನ ಬಂಗಾರಾ... ನಾನು ಹೋಗಿ ಬರ್ತೀನಿ ಮಗಳೇ. ನನಗೊಂದು ಬೆಸ್ಟ್ ಆಫ್ ಲಕ್ ಹೇಳಿ ಬಿಡು ಮಗಳೇ... ಎಂದೆಲ್ಲಾ ಬಡಬಡಿಸಿದ. ಆ ಮಗು, ತನ್ನದೇ ಮುದ್ದು ಭಾಷೆಯಲ್ಲಿ ಏನನ್ನೋ ಹೇಳಿತು. ನಂತರ, ಮಗಳನ್ನು ಪಕ್ಕದಲ್ಲಿಯೇ ನಿಂತಿದ್ದ ಹಿರಿಯ ಮಗನಿಗೆ ಕೊಟ್ಟು, ಸುಮ್ಮನೆ ಒಮ್ಮೆ ಹೆಂಡತಿಯ ಕಡೆ ನೋಡಿದ.
ಅಷ್ಟೆ: ಅದು ಏರ್‌ಪೋರ್ಟ್ ಎಂಬುದನ್ನೂ ಮರೆತು, ತನ್ನ ಸುತ್ತಲೂ ನೂರಾರು ಜನ ಇದ್ದಾರೆ, ಪಕ್ಕದಲ್ಲಿಯೇ ಮಕ್ಕಳಿದ್ದಾರೆ ಎಂಬುದನ್ನೂ ಮರೆತು, ಆತನನ್ನು ಬಿಗಿಯಾಗಿ ತಬ್ಬಿಕೊಂಡು ಕಣ್ಣೀರು ಹಾಕಿದಳು. ಆತ ಹೆಂಡತಿಯ ಬೆನ್ನು ನೇವರಿಸುತ್ತಾ 'ಹೀಗೆಲ್ಲಾ ಎಮೋಶನಲ್ ಆದ್ರೆ ಹೇಗೆ? ಕಂಟ್ರೋಲ್ ಮಾಡ್ಕೋ. ಬೇಗ ಬರ್ತೇನೆ' ಎಂದ. ಆಕೆ ಒಂದೆರೆಡು ನಿಮಿಷದ ನಂತರ ಸಹಜ ಸ್ಥಿತಿಗೆ ಬಂದಳು. ನಂತರ-'ಅಲ್ಲಿಗೆ ಹೋದ ಮೇಲೆ ತಕ್ಷಣ ಫೋನ್ ಮಾಡಿ. ಟೈಂಗೆ ಸರಿಯಾಗಿ ಊಟ -ತಿಂಡಿ ಮುಗಿಸಿ. ಟ್ಯಾಬ್ಲೆಟ್ ತಗೊಳ್ಳಲು ಮರೆಯಬೇಡಿ' ಎಂದಳು. ಆತ ಎಲ್ಲಕ್ಕೂ ಸರಿ, ಸರಿ ಎಂದ. ನಂತರ ಎಲ್ಲರಿಂದಲೂ ಬೀಳ್ಕೊಟ್ಟು ಏರ್‌ಪೋರ್ಟಿನ ಒಳಗೆ ಬಂದ. ಅದಕ್ಕೂ ಮುಂಚೆ ಹೆಂಡತಿ ಮಕ್ಕಳನ್ನು ಉದ್ದೇಶಿಸಿ-'ನಿಮ್ಮೆಲ್ಲರನ್ನೂ ಪಡೆದ ನಾನು ನಿಜವಾಗಿ ಪುಣ್ಯವಂತ' ಎಂದು ಉದ್ಗರಿಸಿದ್ದ.
ಬಹುಶಃ ಈತ ದುಬೈನಲ್ಲೋ, ಸೌದಿಯಲ್ಲೋ ನೌಕರಿ ಮಾಡುತ್ತಿರಬಹುದು. ವಾಪಸ್ ಬರಲು ಕಡಿಮೆ ಅಂದ್ರೂ ಆರು ತಿಂಗಳು ಅಥವಾ ಒಂದು ವರ್ಷ ಆಗಬಹುದೇನೋ. ಅದೇ ಕಾರಣಕ್ಕೆ ಕುಟುಂಬದ ಸದಸ್ಯರೆಲ್ಲಾ ಸಂಕಟದಿಂದ ಬಿಕ್ಕಳಿಸುತ್ತಿದ್ದಾರೇನೋ ಅನ್ನಿಸಿತು. ಹಿಂದೆಯೇ, ನೀವು ಎಲ್ಲಿದ್ದೀರಿ? ಏನು ಕೆಲಸ ಮಾಡ್ತೀರಿ? ವಾಪಸ್ ಬರುವುದು ಎಷ್ಟು ದಿನ ಆಗುತ್ತೆ ಎಂದೆಲ್ಲ ಕೇಳಬೇಕು ಅನ್ನಿಸಿತು. ಹೀಗೆ ಕೇಳುವುದು ಅಧಿಕ ಪ್ರಸಂಗ ಆಗಬಹುದೇನೋ ಅನಿಸಿದ್ದು ನಿಜ. ಆದರೆ ಆತ ಕುಟುಂಬದ ಸದಸ್ಯರನ್ನು ಬೀಳ್ಕೊಟ್ಟ ರೀತಿ ಹಾಗೂ ಹೆಂಡತಿ-ಮಕ್ಕಳು ಈತನ ಮೇಲೆ ತೋರಿದ ನಿರ್ವಾಜ್ಯ ಪ್ರೀತಿಯನ್ನು ಪ್ರತ್ಯಕ್ಷ ಕಂಡ ಮೇಲೆ ಅದೊಂದು ಪ್ರಶ್ನೆಯನ್ನು ಕೇಳಲೇಬೇಕು ಅನ್ನಿಸಿತು. ಹಾಗಾಗಿ, ಆತನ ಬಳಿ ಹೋಗಿ- ಎಕ್ಸ್‌ಕ್ಯೂಸ್ ಮಿ ಎಂದೆ. ಆತ 'ಪ್ಲೀಸ್...' ಎಂದು ನಕ್ಕ. ನನ್ನ ಅನುಮಾನದ ಪ್ರಶ್ನೆಯನ್ನು ಆತನ ಮುಂದಿಟ್ಟೆ.
ಆತ ಒಮ್ಮೆ ಮುಗುಳ್ನಕ್ಕು ಹೇಳಿದ; 'ಒಂದು ಪ್ರೈವೇಟ್ ಕಂಪನಿಯಲ್ಲಿ ಮ್ಯಾನೇಜರ್ ಆಗಿದೀನಿ. ಕಂಪನಿ ಕೆಲಸದ ಮೇಲೆ ಬಾಂಬೆಗೆ ಹೋಗ್ತಾ ಇದೀನಿ. ಮೂರು ದಿನಗಳ ನಂತರ ವಾಪಸ್ ಬರ್ತೇನೆ...'
ಅವನ ಉತ್ತರ ಕೇಳಿ ಶಾಕ್ ಆಯಿತು. ಆತ ಸುದೀರ್ಘ ಅವಧಿಯವರೆಗೆ ಕುಟುಂಬದ ಎಲ್ಲರಿಂದ ದೂರ ಇರುತ್ತಾನೇನೋ, ಅದೇ ಕಾರಣಕ್ಕೆ ಅವರೆಲ್ಲಾ ಸಂಕಟದಿಂದ ತಳಮಳಿಸುತ್ತಿದ್ದಾರೇನೋ ಎಂದೆಲ್ಲ ನಾನು ಅಂದಾಜು ಮಾಡಿಕೊಂಡಿದ್ದೆ. ಆದರೆ ಆತ, ಮೂರೇ ದಿನದಲ್ಲಿ ವಾಪಸ್ ಬರ್ತೇನೆ ಅಂದಿದ್ದ. ನಾನು ಒಂಥರಾ ಗಾಬರಿಯಾಗಿ, ಹೌದಾ, ಮೂರು ದಿನ ಅಷ್ಟೇನಾ?' ಎಂದೆ.
ಆತ ಹೇಳಿದ: 'ಮೂರು ದಿನ ಅಂದ್ರೆ ಸುಮ್ನೆ ಆಯ್ತಾ ಸಾರ್? ಮೂರು ದಿನ ಅಂದ್ರೆ ಪೂರ್ತಿ 72 ಗಂಟೆ. ಮೂರು ದಿನ ಅಂದ್ರೆ 4320 ನಿಮಿಷ. ಅಷ್ಟು ಸುದೀರ್ಘ ಅವಧಿಯನ್ನು ಕುಟುಂಬದ ಸದಸ್ಯರ ಸಂಪರ್ಕದಲ್ಲಿಲ್ಲದೆ ಕಳೆಯುವುದಿದೆಯಲ್ಲ, ಅದು ನಿಜವಾದ ಹಿಂಸೆ. ನಾವು ಪರಸ್ಪರ ಮಾತಾಡದಿದ್ರೂ ಪರವಾಗಿಲ್ಲ, ಹತ್ತಿರ ಇದ್ರೆ ಸಾಕು, ಮನಸ್ಸು ನೆಮ್ಮದಿಯಿಂದಿರುತ್ತೆ. ಧೈರ್ಯದಿಂದ ಇರುತ್ತೆ. ಆದರೆ, ಮನಸ್ಸಿಗೆ ಹತ್ತಿರ ಆದವರು ಜೊತೆಗಿಲ್ಲ ಅಂದರೆ, ಯಾಕೋ ಸಂಕಟವಾಗುತ್ತದೆ. ತುಂಬ ಚಡಪಡಿಕೆಯಾಗುತ್ತದೆ. ಆಗೊಮ್ಮೆ ಈಗೊಮ್ಮೆ ಅಪಶಕುನಗಳೂ ಆದಂತೆ ಭಾಸವಾಗುತ್ತದೆ. ಮರುಕ್ಷಣವೇ ಭಯವೂ ಜೊತೆಯಾಗಿ ಸುತ್ತಲೂ ಹತ್ತು ಮಂದಿಯಿದ್ದರೂ ನಾವು ಒಂಟಿ ಅನ್ನಿಸಿ ಬಿಡುತ್ತದೆ' ಎಂದ. ಒಂದು ಕ್ಷಣ ಸುಮ್ಮನಿದ್ದು ಮತ್ತೆ ಹೇಳಿದ: 'ಹೀಗೆ, ಪರಸ್ಪರರ ಮಧ್ಯೆ ಪ್ರೀತಿ ಹೆಚ್ಚಿದಷ್ಟೂ ಸಂಬಂಧ ಗಟ್ಟಿಯಾಗುತ್ತಾ ಹೋಗುತ್ತದೆ...'
ಆ ಯಜಮಾನನ ಕಡೆಯ ಮಾತು ತುಂಬಾ ಇಷ್ಟವಾಯಿತು: 'ಪರಸ್ಪರರ ಮಧ್ಯೆ ಪ್ರೀತಿ ಹೆಚ್ಚಿದಷ್ಟೂ ಸಂಬಂಧ ಗಟ್ಟಿಯಾಗುತ್ತದೆ...' ಎಷ್ಟೊಂದು ಸತ್ಯವಾದ ಮಾತಲ್ಲವೆ?
ಕೆಲಸವೇ ಬದುಕಾಗಬಾರದು
ಆ ವ್ಯಕ್ತಿ ತುಂಬಾ ಶ್ರಮಜೀವಿ. ತನ್ನ ಮಕ್ಕಳ ಮತ್ತು ಹೆಂಡತಿಯ ಹೊಟ್ಟೆ ತುಂಬಿಸಲು ಕಷ್ಟಪಟ್ಟು ದುಡಿಯುತ್ತಿದ್ದ. ಅದೇ ಕೆಲಸದಲ್ಲಿದ್ದರೆ ಬವಣೆಯೇ ಬದುಕಾಗುತ್ತದೆ ಎನ್ನುವುದು ಅವನಿಗೆ ಗೊತ್ತಿತ್ತು. ಹಾಗಾಗೇ ಭಾನುವಾರವೊಂದನ್ನು ಹೊರತುಪಡಿಸಿ, ಪ್ರತಿ ದಿನ ಕೆಲಸ ಮುಗಿದ ಮೇಲೆ ಸಂಜೆ ಶಾಲೆಗೆ ಹೋಗತೊಡಗಿದ. ಹೆಚ್ಚು ಓದಿದರೆ ಮುಂದೆ ಒಳ್ಳೆಯ ಹುದ್ದೆ ಸಿಗಬಹುದು, ಒಳ್ಳೆಯ ಬದುಕು ಕಟ್ಟಿಕೊಳ್ಳಬಹುದು ಎನ್ನುವ ಕನಸು ಆತನಿಗೆ. 
ತಮ್ಮೊಂದಿಗೆ ಸರಿಯಾಗಿ ಸಮಯವನ್ನೇ ಕಳೆಯುತ್ತಿಲ್ಲ ಎಂದಾತನ ಕುಟುಂಬ ದೂರಿದಾಗಲೆಲ್ಲ, 'ಇದನೆಲ್ಲ ನಿಮಗೋಸ್ಕರವೇ ಮಾಡುತ್ತಿದ್ದೇನೆ' ಎಂದು ಸಮಾಧಾನ ಹೇಳುತ್ತಿದ್ದ. ಆದರೂ ಅವರೊಂದಿಗೆ ಹೆಚ್ಚು ಸಮಯ ಕಳೆಯಬೇಕೆಂಬ ತುಡಿತ ಆತನಲ್ಲಿ ಇದ್ದೇ ಇತ್ತು.
ಆ ದಿನ ಬಂತು. ಫಲಿತಾಂಶ ಹೊರಬಿತ್ತು. ಆತ ಪಾಸಾಗಿದ್ದ, ಅದೂ ಡಿಸ್ಟಿಂಕ್ಷನ್‌ನಲ್ಲಿ! ಅದಾದ ಕೆಲವೇ ದಿನಗಳಲ್ಲಿ ದೊಡ್ಡ ಕಂಪನಿಯೊಂದರಲ್ಲಿ ಸೀನಿಯರ್ ಸೂಪರ್‌ವೈಸರ್ ಕೆಲಸ ದೊರಕಿತು. ಕೈ ತುಂಬಾ ಸಂಬಳವೂ ಬಂತು. ಕನಸು ನನಸಾಗಿತ್ತು. ಜೀವನದ ಚಿಕ್ಕ ಪುಟ್ಟ ಸಂತೋಷಗಳನ್ನು ತನ್ನ ಕುಟುಂಬಕ್ಕೆ ಒದಗಿಸಲು ಆತ ಸಫಲನಾದ. ಮಕ್ಕಳಿಗೆ ಒಳ್ಳೆಯ ಬಟ್ಟೆಗಳನ್ನು ಕೊಡಿಸಿದ, ಹೊಸ ಮನೆಯನ್ನು ಬಾಡಿಗೆಗೆ ಹಿಡಿದ, ಅವರು ಕೇಳಿದ್ದನ್ನೆಲ್ಲ ಈಡೇರಿಸತೊಡಗಿದ...ಆದರೆ ತಮಗಾಗಿ ಸ್ವಲ್ಪ ಸಮಯ ಮೀಸಲಿಡಬೇಕೆಂಬ ಬೇಡಿಕೆಯೊಂದನ್ನು ಬಿಟ್ಟು!
ಇನ್ನೊಂದೆರಡು ವರ್ಷ ಒದ್ದಾಡಿದರೆ ಆತನಿಗೆ ಮ್ಯಾನೇಜರ್ ಹುದ್ದೆಗೆ ಭಡ್ತಿಯಾಗಬಹುದಿತ್ತು. ಆ ಕಾರಣದಿಂದಾಗಿ ಆತ ಇನ್ನಷ್ಟು ಕಷ್ಟ ಪಟ್ಟು ದುಡಿದ. ಅಷ್ಟೇ ಅಲ್ಲ, ಮ್ಯಾನೇಜರ್ ಹುದ್ದೆಗೆ ತಾನೇ ಸೂಕ್ತ ವ್ಯಕ್ತಿ ಎಂದು ರುಜುವಾತು ಪಡಿಸಲು ಆತ ಮುಕ್ತ ವಿಶ್ವವಿದ್ಯಾಲಯವೊಂದರಲ್ಲಿ ಇನ್ನೊಂದು ಕೋರ್ಸ್‌ಗೆ ಸೇರಿಕೊಂಡ.
ಎಂದಿನಂತೆ ಮನೆಯವರ ಗೊಣಗಾಟ ಮುಂದುವರಿದಿತ್ತು. ಅಪ್ಪನ ಮುಖ ನೋಡುವುದೇ ಮಕ್ಕಳಿಗೆ ಕಷ್ಟವಾಗತೊಡಗಿತು. 'ಇಷ್ಟೆಲ್ಲ ಒದ್ದಾಟ ನಿಮಗಾಗಿಯೇ' ಎಂಬ ಎಂದಿನ ಸಬೂಬೂ ಆತನಿಂದ ಮುಂದುವರಿಯಿತು. ಆದರೂ ಆತನಿಗೆ ಮನೆಯವರೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು ಎಂಬ ತುಡಿತ ಮಾತ್ರ ಕಡಿಮೆಯಾಗಿರಲಿಲ್ಲ.  ಶ್ರಮ ಫಲ ನೀಡಿತು. ಈಗ ಆತ ಮ್ಯಾನೇಜರ್ ಆಗಿದ್ದ. ತನ್ನ ಹೆಂಡತಿಯ ಕಷ್ಟ ಕಡಿಮೆ ಮಾಡಲು ಕೆಲಸದಾಕೆಯನ್ನು ನೇಮಿಸಿದ. ಎರಡು ಕೋಣೆಗಳ ಮನೆಯಲ್ಲಿ ಇರುವುದು ಸಾಧ್ಯವಾಗದು ಎಂದು 3 ಬೆಡ್ ರೂಮಿನ ಮನೆ ಹಿಡಿದ. 'ಶ್ರಮ ಪಟ್ಟರೆ ಏನನ್ನಾದರೂ ಸಾಧಿಸಬಹುದು, ಇನ್ನಷ್ಟು ಓದಿದರೆ ಇದಕ್ಕಿಂತ ದೊಡ್ಡ ಹುದ್ದೆ ಖಚಿತ' ಎಂದು ಆತನಿಗೆ ಮನದಟ್ಟಾಗಿತ್ತು. ಹಾಗಾಗೇ ಮತ್ತೊಂದು ಕೋರ್ಸ್‌ಗೆ ಸೇರಿಕೊಂಡ. ಈಗಂತೂ ಮಕ್ಕಳಿಗೆ ಆತನ ಮುಖವೇ ಸರಿಯಾಗಿ ನೆನಪಾಗುತ್ತಿರಲಿಲ್ಲ. ಗ್ರಾಹಕರನ್ನು ಮೆಚ್ಚಿಸಲು ಭಾನುವಾರಗಳಂದೂ ಆಫೀಸಿನಲ್ಲಿರುತ್ತಿದ್ದ! ಅಂದುಕೊಂಡಂತೆಯೇ ಆತನ ಶ್ರಮ ಫಲಕೊಟ್ಟಿತ್ತು. ಈಗ ದೊಡ್ಡ ಹುದ್ದೆಯಲ್ಲಿದ್ದ. ಕೆಲಸವೂ ಕಡಿಮೆಯಾಗಿತ್ತು. ಹಾಗಾಗೇ ಆ ಊರಿನ ಸಮುದ್ರ ದಂಡೆಯ ಮೇಲೆ ಒಂದು ದೊಡ್ಡ ಬಂಗಲೆಯನ್ನು ಕಟ್ಟಿಸಿದ. 
ಆ ಮನೆಗೆ ಶಿಫ್ಟ್ ಆದ ನಂತರ, ಒಂದು ಶನಿವಾರದಂದು ತನ್ನ ಮಕ್ಕಳನ್ನು, ಮಡದಿಯನ್ನು ಕರೆದು ಹೇಳಿದ- 'ನನಗೀಗ ಪ್ರಮೋಷನ್‌ಗಳ ಅಗತ್ಯವಿಲ್ಲ. ಬದುಕಿಗೇನು ಬೇಕೋ ಅದಕ್ಕಿಂತಲೂ ಹೆಚ್ಚಿನದ್ದನ್ನು ಸಾಧಿಸಿದ್ದೇನೆ. ಇನ್ನು ನನಗೆ ಬೇರೇನೂ ಬೇಡ. ನೀವು ಬೇಕು. ನಿಮ್ಮೊಂದಿಗೆ ಸಮಯ ಕಳೆಯಬೇಕು'.
ಮನೆಯವರಿಗೆ ತಡೆಯಲಾರದಷ್ಟು ಖುಷಿ. ಅಂದು ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡಿದರು. ಹರಟೆ ಹೊಡೆಯುತ್ತಾ ಜೊತೆಯಲ್ಲಿಯೇ ಮಲಗಿದರು. ಬೆಳಕು ಹರಿಯಿತು. ಹೊಸ ಬದುಕು ಆತನೆದುರು ಹರಡಿಕೊಂಡಿತ್ತು.
ಆದರೆ, ಆತ ಏಳಲೇ ಇಲ್ಲ!


- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.