ನಿಂತ ನೀರಾದಂತಿರುವ ರಾಜ್ಯ ರಾಜಕೀಯ
ರಾಜ್ಯದಲ್ಲಿ ವಿಧಾನ ಸಭೆಯ ಚುನಾವಣೆಯಲ್ಲಿ ಜನತಾಂತ್ರಿಕವಾಗಿ...
ರಾಜ್ಯದಲ್ಲಿ ವಿಧಾನ ಸಭೆಯ ಚುನಾವಣೆಯಲ್ಲಿ ಜನತಾಂತ್ರಿಕವಾಗಿ ನಡೆದ ಸ್ಥಾನಪಲ್ಲಟವನ್ನು ಅನುಭವಿಸಿರುವ ರಾಜಕಾರಣಿಗಳಲ್ಲಿ ಸೋತವರು ಸುಮಾರು ಎಂಬತ್ತು ದಿನಗಳ ಅನಂತರವೂ ತಲೆ ತಗ್ಗಿಸಿಕೊಂಡೇ ನಡೆಯುತ್ತಿದ್ದಾರೆ. ಗೆದ್ದವರಿಗೆ ವಿಜೃಂಭಿಸುವುದಕ್ಕೆ ಕಾರಣವಿದ್ದರೂ, ಅಧಿಕಾರದ ಸೂತ್ರಗಳನ್ನು ಹಿಡಿದವರು ವಿಳಂಬದ ನೀತಿಗೆ ಶರಣಾಗಿರುವುದರಿಂದ ಅವರೂ ಆತಂಕದಿಂದಲೇ ಓಡಾಡುತ್ತಿದ್ದಾರೆ. ಮೇಲ್ನೋಟಕ್ಕೆ ರಾಜ್ಯದ ರಾಜಕೀಯ ಈಗ ನಿಂತ ನೀರಿನಂತೆಯೇ ಆಗಿದೆ ಎನ್ನುವ ಭಾವನೆಯನ್ನು ಮೂಡಿಸುತ್ತಿದೆ.
ಚುನಾವಣೆ ಕಾಲದ ಬಿರುಸಿನ ಚಟುವಟಿಕೆಯನ್ನು ನಿರಂತರವಾಗಿ ರಾಜಕೀಯ ಪಕ್ಷಗಳು ನಡೆಸಿಕೊಂಡು ಬರಬೇಕು ಎಂದೇನೂ ಇಲ್ಲ. ಆದರೂ ಸಾರ್ವಜನಿಕ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕಾದ ರಾಜಕಾರಣಿಗಳು, ಯಾವುದೋ ಬದಲಾವಣೆ ಎಲ್ಲಿಂದಲೋ ಬರುವುದೆಂದು ಕಾಯುತ್ತ ಕೂಡುವುದು ಒಂದು ಅಸಹಜ ಪ್ರವೃತ್ತಿಯೇ.
ಚುನಾವಣೆ ಪ್ರಚಾರ ಸಮರದಲ್ಲಿ ಕಾಲಾಳುಗಳಂತೆ ಪಾಲುಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ, ಶಾಸಕರಾಗಲು ಅವಕಾಶ ಸಿಗದೇ ಇರುವ ನಾಯಕರಿಗೆ, ಸರ್ಕಾರದ ನಿಗಮ, ಮಂಡಳಿಗಳಲ್ಲಿ ಸ್ಥಾನಮಾನದ ಅಪೇಕ್ಷೆ ಹುಟ್ಟಿದ್ದರೆ, ಅದು ಸಹಜವಾದ ಕ್ರಿಯೆ. ತಪ್ಪೇನೂ ಇಲ್ಲ. ಆದರೆ ರಾಜ್ಯ ಮಟ್ಟದ ನಾಯಕರು ಆ ವಿಚಾರದಲ್ಲಿ ಯಾರಿಗೂ ಅರ್ಥವಾಗದ ರೀತಿಯಲ್ಲಿ ಮೌನವ್ರತವನ್ನು ಹಿಡಿದಿದ್ದಾರೆ. ಸಹಜವಾಗಿಯೇ ಈ ಬೆಳವಣಿಗೆ ಆಳುವ ಪಕ್ಷದ ಮಧ್ಯಮ ಹಂತದ ಕಾರ್ಯಕರ್ತರಲ್ಲಿ ತಳಮಳಕ್ಕೆ ಕಾರಣವಾಗಿದೆ. ಪಾಪ. ಆ ಕಾರ್ಯಕರ್ತರುತಾನೇ ಏನು ಮಾಡಿಯಾರು? ಅವಕಾಶ ಸಿಕ್ಕಿದಾಗ ಮೂಲ ಕಾಂಗ್ರೆಸ್ಸಿಗರು, ಅನಂತರ ಬಂದವರ ನಡುವಣ ವ್ಯತ್ಯಾಸ, ಜಾತಿ- ಜಾತಿಗಳ ನಡುವಣ ಮೇಲಾಟ, ಸಚಿವರ ವರ್ತನೆಗಳಂತಹ ವಿಚಾರದಲ್ಲಿ ಉತ್ಪ್ರೇಕ್ಷಿತ ವದಂತಿ- ವರದಿಗಳನ್ನು ಹಬ್ಬಿಸುವುದರಲ್ಲಿ ನಿರತರಾಗುವುದನ್ನು ಬಿಟ್ಟರೆ ಇನ್ನೇನು ಉಳಿದಿದೆ ಅವರಿಗೆ? ಕಾಂಗ್ರೆಸ್ ಕಾರ್ಯಾಲಯ ಖಾಲಿ ಖಾಲಿಯಾಗಿರುವುದಕ್ಕೆ ಇದೇ ಕಾರಣವಂತೆ. ಆದರೆ ವಾಸ್ತವ ಸ್ಥಿತಿ ಹಾಗೇನು ಇಲ್ಲ.
ಉಪ ಚುನಾವಣೆ ಸಿದ್ಧತೆ: ರಾಜ್ಯದಲ್ಲಿ ಎರಡು ಪ್ರತಿಷ್ಠಿತ ಲೋಕಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಬೇಕಾಗಿದೆ. ಅಭ್ಯರ್ಥಿಗಳ ಆಯ್ಕೆ, ಪ್ರಚಾರಕ್ಕೆ ಸಿದ್ಧತೆ ಇಂತಹ ಚಟುವಟಿಕೆ ಈ ವೇಳೆಗಾಗಲೇ ಆರಂಭವಾಗಬೇಕಾಗಿತ್ತು. ಆದರೆ ಆಗಿಲ್ಲ. ಬೆಂಗಳೂರು ಗ್ರಾಮಾಂತರ (ಈಗಿನ ರಾಮನಗರ) ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರಗಳಲ್ಲಿ ಹಿಂದೆ ಕಾಂಗ್ರೆಸ್ ಸೋತಿತ್ತು. ಅಲ್ಲಿ ಈಗಲೂ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳದ್ದೇ ಮೇಲುಗೈ ಎನ್ನುವ ಭಾವನೆ ಇದೆ. ಆ ಕ್ಷೇತ್ರಗಳಲ್ಲಿ ಗೆದ್ದಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಇನ್ನೊಬ್ಬ ಪ್ರಮುಖ ನಾಯಕ ಚಲುವರಾಯ ಸ್ವಾಮಿ ವಿಧಾನ ಸಭೆಗೆ ಆಯ್ಕೆಯಾಗಿದ್ದಾರೆ. ಆದ್ದರಿಂದಲೇ ಉಪ ಚುನಾವಣೆ. ಇಲ್ಲಿ ಬಿಜೆಪಿಯ ಶಕ್ತಿ ಕಡಿಮೆ. ಕಾಂಗ್ರೆಸ್ಸೇ ಪರ್ಯಾಯ ಪಕ್ಷ. ಆದರೆ ಉಪ ಚುನಾವಣೆಯಲ್ಲಿ ದೇವೇಗೌಡರ ಕುಟುಂಬದ ಸದಸ್ಯರು ತಮ್ಮೆಲ್ಲ ಶಕ್ತಿಯನ್ನು ಬಳಸಿ ಪಕ್ಷವನ್ನು ಗೆಲ್ಲಿಸಲೇಬೇಕಾಗಿದೆ.
ಚನ್ನಪಟ್ಟಣದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರ ಸೋಲಿಗೆ ಮುಯ್ಯಿ ತೀರಿಸಬೇಕಾಗಿದೆ. ಅದು ಜಾತ್ಯತೀತ ಜನತಾ ದಳದ ಮನೋಸ್ಥಿತಿ. ಅಲ್ಲಿ ಅಭ್ಯರ್ಥಿಯ ಆಯ್ಕೆಯ ಹೊಣೆ ದೇವೇಗೌಡರದ್ದೇ. ಅವರೂ ಪ್ರಚಾರಕ್ಕೆ ಬರಲಿದ್ದಾರೆ. ಆ ಕಾರಣದಿಂದಲೂ ಎರಡು ಕ್ಷೇತ್ರಗಳು ಪ್ರತಿಷ್ಠಿತ ಕ್ಷೇತ್ರಗಳೇ. ಹಿಂದೊಮ್ಮೆ, ದೇವೇಗೌಡರು ಚುನಾವಣೆಯಲ್ಲಿ ಸೋತಿದ್ದಾಗ, ಬೆಂಗಳೂರು ಗ್ರಾಮೀಣ (ಆಗಿನ ಕನಕಪುರ) ಲೋಕಸಭೆ ಕ್ಷೇತ್ರದಿಂದ ಸಂಸತ್ತಿಗೆ ಹೋದಾಗಲೇ ಅವರ ರಾಷ್ಟ್ರೀಯ ರಾಜಕೀಯ ಆರಂಭವಾಗಿದ್ದು. ಆಗ ಜನತಾ ಪರಿವಾರದಲ್ಲಿ ದೇವೇಗೌಡರು- ರಾಮಕೃಷ್ಣ ಹೆಗಡೆ ಬೇರೆ ಬೇರೆ ಪಕ್ಷಗಳಲ್ಲಿದ್ದರು. ಚುನಾವಣೆಯಲ್ಲಿ ಸ್ಪರ್ಧಿಸಲು ಆಗ ಗೌಡರು ಹಾಕಿದ್ದ ಷರತ್ತು: ಜನತಾ ದಳದ ಅಭ್ಯರ್ಥಿ ಇರಬಾರದು.
ಅದು ಕ್ಷೇತ್ರದ ಮಹಿಮೆ. ಈಗಲೂ ದೇವೇಗೌಡರ ನೇತೃತ್ವದ ಪಕ್ಷದ ದೃಷ್ಟಿಯಲ್ಲಿ ಅಲ್ಲಿ ಬಿಜೆಪಿ ಅಥವಾ ಕೆಜೆಪಿ ಸ್ಪರ್ಧಿಸದೇ ಇದ್ದರೆ ತನ್ನ ಗೆಲವು ಸುಲಭ. ಅದಕ್ಕಾಗಿ ಸಂದೇಶಗಳ ರವಾನೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ, ಕಾಂಗ್ರೆಸ್‌ನಲ್ಲಿ ರಾಜ್ಯದ ನಾಯಕರು, ವರಿಷ್ಠರು ಅಭ್ಯರ್ಥಿಯ ಆಯ್ಕೆ ಹಾಗೂ ಪ್ರಚಾರದ ನಾಯಕತ್ವಕ್ಕಾಗಿ, ಸ್ಥಳೀಯ ರಾಜಕೀಯ ಬಾಹುಬಲಿ, ಮಾಜಿ ಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನೇ ಅವಲಂಬಿಸಿರುವಂತಿದೆ. ಶಿವಕುಮಾರ್ ಅವರನ್ನು ಮಂತ್ರಿಮಂಡಲದಿಂದ ಹೊರಗಿಟ್ಟಿರುವುದೇ ಇಲ್ಲಿನ ದೊಡ್ಡ ರಾಜಕೀಯ- ಅದನ್ನು ವರಿಷ್ಠರೇ ನಿಭಾಯಿಸಬೇಕು. ಕಾಂಗ್ರೆಸ್ಸಿನಲ್ಲಿ ಈಗ ಮೂಡಿರುವ ಆಲಸಿಕೆಗೆ, ಈ ಅನಿಶ್ಚಿತತೆಯೇ ಕಾರಣ.
ಬಿಜೆಪಿ- ಕೆಜೆಪಿ ಸಂಬಂಧ: ವಿಧಾನ ಸಭೆಯಲ್ಲಿ ಪ್ರಧಾನ ಪ್ರತಿಪಕ್ಷದ ಸ್ಥಾನವನ್ನು, ಪ್ರತಿಪಕ್ಷದ ನಾಯಕನ ಸ್ಥಾನವನ್ನು ಅಕ್ಷರಶಃ ಕೂದಲೆಳೆಯ ಅಂತರದಿಂದ ಕಳೆದುಕೊಂಡಿರುವ ಭಾರತೀಯ ಜನತಾ ಪಾರ್ಟಿ ಹಾಗೂ ಸದನದಲ್ಲಿ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ ಎನ್ನುವ ಸ್ಥಿತಿಯನ್ನು ತಲುಪಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಾರ್ಟಿಯ ನಾಯಕರಲ್ಲಿ, ಸಂಯುಕ್ತ ಪಕ್ಷದಲ್ಲಿನ ಆಂತರಿಕ ಒಡಕು (ಕಾರಣ ಏನಾದರೂ ಇರಲಿ) ಎರಡೂ ಬಣಗಳಿಗೆ ಮಾರಕವಾಗಿರುವುದು ಅರ್ಥವಾಗಿದೆ.
ಅದನ್ನು ಬಿಜೆಪಿಯ ಶಾಸಕರಲ್ಲಿ ಬಹುತೇಕ ಮಂದಿ, ಶಾಸಕಾಂಗ ಪಕ್ಷದ ಸಭೆಯಲ್ಲೇ ಪ್ರಸ್ತಾಪಿಸಿದ್ದಾರೆ. ಎರಡೂ ಬಣಗಳ ಅನೇಕ ಮುಖಂಡರಲ್ಲಿ ಎಲ್ಲರೂ ಒಟ್ಟಾಗಿ ಬದುಕದೇ ಹೋದರೆ, ಪ್ರತ್ಯೇಕವಾಗಿ ನಾಶವಾಗಬೇಕಾದೀತು ಎನ್ನುವ ಹೆದರಿಕೆಯೂ ಹುಟ್ಟಿದೆ. ವಿಧಾನ ಸಭೆಯಲ್ಲೂ ಯಡಿಯೂರಪ್ಪ ಈ ವಿಚಾರದಲ್ಲಿ ಆಡಿರುವ ಮಾತು ಗಮನಾರ್ಹ. ಆದರೆ ಅವರು ಒಮ್ಮೆಗೇ ಎಲ್ಲವನ್ನೂ ಹೇಳಿಬಿಟ್ಟರೆ ಶರಣಾಗತಿ ಎಂದು ತಮ್ಮ ಸಂಗಾತಿಗಳು ಭಾವಿಸುವ ಹೆದರಿಕೆ ಇದ್ದೇ ಇದೆ. ಬಿಜೆಪಿಯಲ್ಲಿ ಜಗದೀಶ ಶೆಟ್ಟರ್ ಅವರಂತಹವರು ಈ ವಿಚಾರದಲ್ಲಿ ಶ್ರೀಮದ್ಗಾಂಭೀರ್ಯವನ್ನು ಪ್ರದರ್ಶಿಸಲೇ ಬೇಕಾದ ಸ್ಥಿತಿಯಲ್ಲಿದ್ದಾರೆ.
ಬಿಜೆಪಿ ನಾಯಕರು ದೆಹಲಿಯ ಮಟ್ಟದಲ್ಲಿ ಅಲ್ಲಿ ಇಲ್ಲಿ ಪ್ರಕಟವಾಗುತ್ತಿರುವ 2014ರ ಲೋಕಸಭೆ ಚುನಾವಣೆಯ ಸಮೀಕ್ಷಾ ವರದಿಗಳಲ್ಲಿ ಅವರ ಪಕ್ಷಕ್ಕೆ ಸಿಗುತ್ತಿರುವ ಮೊದಲನೇ ಸ್ಥಾನದಿಂದಲೇ ಉಬ್ಬಿ ಹೋಗಿರುವಂತೆ ಕಂಡು ಬರುತ್ತಿದೆ. 2008ರಲ್ಲಿ ಹತ್ತೊಂಬತ್ತು ಸ್ಥಾನಗಳನ್ನು ಗಳಿಸಿದ್ದ ಬಿಜೆಪಿಗೆ ರಾಜ್ಯದಲ್ಲಿ ಈಗ ಎರಡು ಮೂರು ಸ್ಥಾನಗಳೂ ಕಷ್ಟ ಎಂದು ಅದೇ ಸಮೀಕ್ಷೆಗಳು ಹೇಳುತ್ತಿರುವುದನ್ನು ದಿಲ್ಲಿ ನಾಯಕರು ಮರೆತಿರುವಂತಿದೆ.
ಮಾಜಿ ಮಿತ್ರರಲ್ಲಿ ಜಗಳವಾದ ಅನಂತರ, ಜಗಳವನ್ನು ಮುಗಿಸುವಾಗ ಯಾರು ಮೊದಲು ಕಣ್ಣು ಮಿಟುಕಿಸಬೇಕು ಎನ್ನುವುದೇ ಮುಖ್ಯ ಪ್ರಶ್ನೆಯಾಗಬಹುದು. ಈಗ ಬಿಜೆಪಿ- ಕೆಜೆಪಿಗಳು ರಾಜ್ಯದಲ್ಲಿ ಆ ಪರಿಸ್ಥಿತಿಯನ್ನು ಮುಟ್ಟಿವೆ. ಇಬ್ಬರೂ ಒಟ್ಟಿಗೇ ಕಣ್ಣು ಮಿಟುಕಿಸಿದರೂ ಮಿಟುಕಿಸಬಹುದು. ಬಿಜೆಪಿಯ ಸಂಘಟನೆ, ಕೆಜೆಪಿ ನಾಯಕ ಯಡಿಯೂರಪ್ಪ ಅವರಿಗೆ ಹಿಂದೆ ಲಭ್ಯವಾಗಿದ್ದ ದೊಡ್ಡ ರೀತಿಯ ವೀರಶೈವ ಬೆಂಬಲದ ಶಕ್ತಿಯನ್ನು ಮತ್ತೆ ಸೇರಿಸುವ ಕೆಲಸವನ್ನು ವರಿಷ್ಠರಿಂದ ನಿರೀಕ್ಷಿಸುವಂತಿಲ್ಲ. ಅಂತಹ ಪ್ರಯತ್ನ ಬೇರು ಮಟ್ಟಚದಿಂದಲೇ ನಡಿಯಬೇಕು.
ಕಾಂಗ್ರೆಸ್ ಸಮಸ್ಯೆ: ಸದ್ಯದಲ್ಲಿ ಕಾಂಗ್ರೆಸ್ಸಿನ ಸಮಸ್ಯೆ ಬಿಜೆಪಿ- ಕೆಜೆಪಿಯನ್ನು ಎದುರಿಸುವುದಲ್ಲ. ಜಾತ್ಯತೀತ ಜನತಾ ದಳದ ವಿರುದ್ಧ ಮಂಡ್ಯ- ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಗಳಲ್ಲಿ ಹೋರಾಡುವುದು.
ಉತ್ತರ ಭಾರತದ ಮುಸ್ಲಿಮ್ ಪ್ರಭಾವದ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸಲು ಮುಸ್ಲಿಮರು ಯೋಜನಾಬದ್ಧ ಮತದಾನದ ತಂತ್ರಜ್ಞಾನವನ್ನು ಚೆನ್ನಾಗಿ ಬಳಸುವುದು ಈಗಿನ ಅನುಭವ. ಕರ್ನಾಟಕದಲ್ಲಿ ಅಂತಹ ಕ್ಷೇತ್ರಗಳ ಸಂಖ್ಯೆ ಕಡಿಮೆ. ಸಾಲದ್ದಕ್ಕೆ ಕಾಂಗ್ರೆಸ್ ಇಲ್ಲಿ ಮುಸ್ಲಿಮ್ ನಾಯಕತ್ವವನ್ನು ಬೆಳೆಸಲೇ ಇಲ್ಲ. ಒಬ್ಬಿಬ್ಬರನ್ನು ಆರಿಸಿಕೊಂಡು, ಉಳಿದವರನ್ನು ಹಿಂದಕ್ಕೆ ತಳ್ಳಿದ್ದೇ ಹೆಚ್ಚು. ಈಗ ಲೋಕಸಭೆ ಚುನಾವಣೆಗೆ ಆ ತಂತ್ರದ ಅವಶ್ಯಕತೆ ಕಂಡು ಬಂದಿರುವಂತಿದೆ.
ವಿಧಾನ ಮಂಡಲದ ಅಧಿವೇಶನ ಮುಗಿದ ಅನಂತರ, ಕಾಂಗ್ರೆಸ್ಸಿನಲ್ಲಿ ಶಾಸಕಾಂಗ- ಸಂಘಟನಾಂಗಗಳ ನಡುವಣ ಸಮನ್ವಯ ಸಮಿತಿ, ಚುನಾವಣೆ ಪ್ರಣಾಳಿಕೆ ಜಾರಿಯ ಸಮಿತಿಗಳ ಪ್ರಸ್ತಾಪಕ್ಕೆ ಒಳ್ಳೆಯ ಅವಕಾಶ ಸಿಗಬಹುದು. ಪಕ್ಷದ ನಾಯಕರ ಬಿರುಸಿನ ಪ್ರವಾಸಕ್ಕೂ ಅದೇ ಒಳ್ಳೆಯ ಸಮಯ.
ಈಗಿನ ವಿಧಾನ ಸಭೆಯ ಅಧಿವೇಶನದ ಕಾಲದಲ್ಲಿ ವಿರೋಧ ಪಕ್ಷಗಳ ಏಕತೆಯ ವೇದಿಕೆಯ ಪ್ರಸ್ತಾಪವೂ ಕೇಳಿಬರಲಿಲ್ಲ, ಅದರ ಅವಶ್ಯಕತೆಯೂ ಕಂಡು ಬರಲಿಲ್ಲ. ಜಾತ್ಯತೀತ ಜನತಾ ದಳದ ನಾಯಕ ದೇವೇಗೌಡರು ಅವರ ರಾಷ್ಟ್ರೀಯ ಸೆಕ್ಯೂಲರ್ ಪ್ರತಿಷ್ಠೆಯನ್ನು ಬಲಿಗೊಡುವುದಕ್ಕೆ ಒಪ್ಪುವುದಿಲ್ಲ.
ಭವಿಷ್ಯದ ರಾಜಕೀಯದಲ್ಲಿ ಸದ್ಯಕ್ಕೆ ತ್ರಿಕೋಣ ಸ್ಪರ್ಧೆ ಅನಿವಾರ್ಯ.
ಕಿಡಿಗೇಡಿತನ: ಮಂಗಳವಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮೇಲಿನ ಚರ್ಚೆಗೆ ಉತ್ತರದ ರೂಪದಲ್ಲಿ ಮಾಡಿದ ಭಾಷಣ ಪ್ರಾಯಶಃ ವಿಧಾನ ಮಂಡಲದ ಇತಿಹಾಸದಲ್ಲೇ ಒಂದು ವಿಕ್ರಮ. ಸುಮಾರು ನಾಲ್ಕೂವರೆ ಗಂಟೆಗಳ ಕಾಲದ ಸುದೀರ್ಘವಾದ ಭಾಷಣ ಅದು. ಅದರಲ್ಲಿ ಕರ್ನಾಟಕ ದ ಭವ್ಯ ಭವಿಷ್ಯಕ್ಕೆ ಸರ್ಕಾರ ರೂಪಿಸಿಕೊಂಡಿರುವ ಹೆದ್ದಾರಿಯನ್ನು ಹುಡುಕುವುದು ವಿಪರೀತ ಕಷ್ಟವಾಯಿತು.
ಸದ್ಯದ ಸಮಸ್ಯೆಗಳ ವಿಚಾರದಲ್ಲಂತೂ, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷರ ಜಾತಿವಾರು ಮೀಸಲು ಪಟ್ಟಿ, ಔದ್ಯಮಿಕ ಪ್ರಗತಿಗೆ ಉದ್ಯಮಿಗಳನ್ನು ಆಕರ್ಷಿಸುವ ಕಾರ್ಯಕ್ರಮ (ಸರ್ಕಾರವೇ ನೇರವಾಗಿ ಉದ್ಯಮಗಳ ಸ್ಥಾಪನೆಯ ಸಾಧ್ಯತೆಯನ್ನು ಕನಸಿನಲ್ಲೂ ಊಹಿಸುವಂತಿಲ್ಲ, ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಹಾಗೂ ಸುಲಿಗೆಯಲ್ಲಿ ಹಿಂದೆ ಕಂಡು ಕೇಳರಿಯದಂತಹ ಬೆಳವಣಿಗೆ, ಕೌಶಲ ಶಿಕ್ಷಣ ಉದ್ಯೋಗಗಳ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾಪಗಳಿಗೂ ಪ್ರಾಮುಖ್ಯ ಸಿಗಲಿಲ್ಲ)
2013ನೇ ಇಸವಿಯಲ್ಲಿ, 2004, 2008ರ ರಾಜಕೀಯದ ಆಗಿನ ರಾಜಕೀಯ ಪಲ್ಲಟಗಳ ಹಿನ್ನೆಲೆಯಲ್ಲಿ (ಕಾಂಗ್ರೆಸ್‌ಗೆ ಬಹುಮತವಿರಲಿಲ್ಲ. ಜನತಾ ಪರಿವಾರದ ಸರ್ಕಾರದ ಮುಖ್ಯಮಂತ್ರಿಯ ಆಯ್ಕೆ) ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯ ಪದವಿಯನ್ನು ತಪ್ಪಿಸಿದ್ದು ಯಾರು ಯಾಕೆ ಎನ್ನುವ ವಿವಾದದ ಪ್ರಸ್ತಾಪಕ್ಕೇ ಹೆಚ್ಚು ಒತ್ತು. ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಕುಮಾರಸ್ವಾಮಿ ನಡುವೆ ನಡೆದ ಜಂಗೀ ಕುಸ್ತಿಯೇ ದೊಡ್ಡ ದಾಖಲೆಯಾಯಿತು. ಸಿದ್ದರಾಮಯ್ಯ, ತಮ್ಮ ಬಜೆಟ್‌ನಲ್ಲಿ ಹೇಳಿದ್ದಕ್ಕಿಂತ ಹೆಚ್ಚಾಗಿ ಯಾವುದಾದರೂ ವಿಷಯವನ್ನು ಬಜೆಟ್ ಮೇಲಿನ ಚರ್ಚೆಗೆ ಉತ್ತರ ಕೊಡುವಾಗ ಪ್ರಸ್ತಾಪಿಸಿದ್ರಾ? ಅಂತಹ ಪ್ರಸ್ತಾಪ ಆಗಿದ್ರೆ, ಬಹುಜನರಿಗೆ ಅದು ಗೊತ್ತಾಗಲೇ ಇಲ್ಲ.
- ಸತ್ಯ
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

