ಅಂಕಣಗಳು

ಜಲಸಮಾಧಿ ಮೇಲೆ ಅನ್ನದ ಹುಡುಕಾಟ

ಕಣ್ಣು ಬಿಟ್ಟರೆ ಕಾರ್ಗತ್ತಲು, ನಾನೆಲ್ಲಿದ್ದೆನೆ ಎಂಬುದೇ ಅರ್ಥವಾಗುತ್ತಿಲ್ಲ. ರಾತ್ರಿ...

ಜಲಸಮಾಧಿ ಮೇಲೆ ಅನ್ನದ ಹುಡುಕಾಟ
Published On :

ಪ್ರವಾಹೋತ್ತರಕಾಂಡ, ಭಾಗ-1

ಕಣ್ಣು ಬಿಟ್ಟರೆ ಕಾರ್ಗತ್ತಲು, ನಾನೆಲ್ಲಿದ್ದೆನೆ ಎಂಬುದೇ ಅರ್ಥವಾಗುತ್ತಿಲ್ಲ. ರಾತ್ರಿ ಹತ್ತು ಮುಕ್ಕಾಲೋ ಹನ್ನೊಂದೋ ಆಗಿತ್ತು. ಸರಿಯಾಗಿ ನೆನಪಿಲ್ಲ. ಮಲಗಿದಾಗ ಎಂಟೂ ದಾಟಿರಲಿಲ್ಲ. ದೇಹ ದಣಿದಿತ್ತು. ಬೆಳಗ್ಗಿನಿಂದ ಬೆಟ್ಟ ಗುಡ್ಡಗಳಲ್ಲಿ ಸುತ್ತಿದ್ದೆ. ಸರತಿ ಸಾಲಿನಲ್ಲಿ ನಿಂತು ದೇವರ ದರುಶನಕ್ಕಾಗಿ ಕಾದಿದ್ದೆ. ಹಾಸಿಗೆ ಕಂಡಿದ್ದರೆ ಸಾಕಿತ್ತು. ದಿಂಬಿಗೆ ತಲೆ ಕೊಟ್ಟಿದ್ದಷ್ಟೇ ಗೊತ್ತು. ಅದ್ಯಾವಾಗ ನಿದ್ದೆ ಹತ್ತಿತ್ತೋ, ಮೂರ್ನಾಲ್ಕು ಗಂಟೆ ಕಳೆದಿರಬಹುದು. ಇದ್ದಕ್ಕಿದ್ದಂತೆ ನಾನು ಮಲಗಿದ ನೆಲವೇ ಅಲುಗಾಡಿದ ಅನುಭವ. ಕನಸೋ, ಎಚ್ಚರವೋ ಅರಿಯುವುದರೊಳಗೆ ತಲೆಗೆ ಏನೋ ಬಲವಾಗಿ ಅಪ್ಪಳಿಸಿತ್ತು. ಜೀವ ಹೋಗುವಂಥ ನೋವು. ಕಿರುಚಿಕೊಳ್ಳಬೇಕು ಎಂದು ಬಾಯ್ದೆರೆಯುತ್ತಿರುವಾಗಲೇ ಬಹುಶಃ ಇಡಿ ಚಾವಣಿಯೇ ಕುಸಿದು ನನ್ನ ಮೇಲೆ ಬಿದ್ದಿರಬೇಕು. ಗಂಟಲಿನಿಂದ ಹೊರಟ ಶಬ್ದ ಮುಂದೆ ಬರಲೇ ಇಲ್ಲ. ಅಷ್ಟೇ ಮತ್ತೆ ಮುಂದಿನದೇನೋ ಅರಿವಾಗಲಿಲ್ಲ. ಗಾಢ ನಿದ್ರೆ ಆವರಿಸಿದಂತೆ... ಮತ್ತೆ ಎಚ್ಚರವಾದಾಗ ಎಲ್ಲೆಲ್ಲೂ ಹಾಹಾಕಾರ.
ಉತ್ತರಾಖಂಡದ ಭೀಕರ ಪ್ರವಾಹಕ್ಕೆ ಸಿಲುಕಿ, ಅವಶೇಷದಡಿಯಲ್ಲಿ ಬಿದ್ದುಕೊಂಡು ಆರು ದಿನಗಳ ನಂತರ ಸೇನೆಯ ನೆರವಿನಲ್ಲಿ ಹೃಷಿಕೇಶದ ಆಸ್ಪತ್ರೆಗೆ ಬಂದು ಸೇರಿದ ಉತ್ತರ ಪ್ರದೇಶದ ನರೇಂದ್ರ ಸಿಂಗ್‌ನ ಧಾರುಣ ಕಥನವಿದು. ಕಾರ್ಯಾಚರಣೆ ನಿರತ ಸೇನಾ ಸಿಬ್ಬಂದಿಗೆ ಅವಶೇಷಗಳ ನಡುವೆ, ಹೆಣಗಳ ರಾಶಿಯಲ್ಲೇ ನರಳುತ್ತಾ ಬಿದ್ದಿದ್ದ ನರೇಂದ್ರ ಅದೃಷ್ಟವಶಾತ್ ಕಣ್ಣಿಗೆ ಬಿದ್ದಿದ್ದ. ಹುಚ್ಚುಕೋಡಿಯಾಗಿ ನುಗ್ಗಿದ ಮಂದಾಕಿನಿಯ ರಭಸದಲ್ಲಿ ಆತ ಉಳಿದುಕೊಂಡಿದ್ದ ಖಾಸಗಿ ಹೋಟೆಲ್ ಕುಸಿದು ಬಿದ್ದಿತ್ತು. ಆ ಸಂದರ್ಭದ ಆಘಾತದಿಂದ ಒಂದು ಕಾಲು ಸಂಪೂರ್ಣ ಜಜ್ಜಿ ಹೋಗಿದೆ. ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾನೆ. ಬದುಕಿಗಾಗಿ ಸತತ ಮೂರು ದಿನಗಳು ಸಿಕ್ಕಿದ್ದನ್ನೆಲ್ಲಾ ತಿಂದ, ಸುರಿಯುವ ಮಳೆ, ಪ್ರವಾಹದ ಭೀಕರತೆ, ಹೆಣಗಳ ರಾಶಿ ಸೃಷ್ಟಿಸಿದ ಭೀಭತ್ಸದ ನಡುವೆ ಏನೂ ಮಾಡಲಾಗದ ಆತನ ಅಸಹಾಯಕತೆ, ಹದಗೆಟ್ಟು ಹೋದ ಮಾನಸಿಕ ಸ್ಥೈರ್ಯ, ಬದುಕಲೇಬೇಕೆಂಬ ಹಂಬಲದ ನಡುವೆಯೂ ಜೀವ ಹಿಂಡುವ ನೋವು...
ಒಟ್ಟಾರೆ ನರೇಂದ್ರನಿಗೆ ದೇವಭೂಮಿಯಲ್ಲಿ ಬದುಕಿದ್ದಾಗಲೇ ನರಕದ ದರ್ಶನ.
ಅವತ್ತು ಜೂನ್ 14ರಂದು ಉತ್ತರ ಪ್ರದೇಶದ ಕಾನ್ಪುರದಿಂದ ಪ್ರವಾಸಿ ಕುಟುಂಬವೊಂದನ್ನು ಕರೆದುಕೊಂಡು ಬಾಡಿಗೆ ಪಡೆದ ಇನ್ನೋವಾದ ಸಾರಥಿಯಾಗಿ ಹೊರಟಿದ್ದ ನರೇಂದ್ರನಿಗೆ ಇಂಥದ್ದೊಂದು ಅಸಹನೀಯ ನೋವಿನ ಕೊಂಡಕ್ಕೆ ತಾನು ತಳ್ಳಲ್ಪಡುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ಮಾನವೇಂದ್ರ ಶರ್ಮಾ ಮತ್ತವರ ಕುಟುಂಬದ ಸದಸ್ಯರು ಚಾರ್ ಧಾಮಾ ಯಾತ್ರೆಗಾಗಿ ನರೇಂದ್ರ ಕೆಲಸ ಮಾಡುವ ಟ್ರಾವಲ್ ಏಜೆನ್ಸಿಯಿಂದ ಕಾರನ್ನು ಗೊತ್ತು ಪಡಿಸಿಕೊಂಡಿದ್ದರು. ಮಾನವೇಂದ್ರ ಮತ್ತವರ ತಂದೆ-ತಾಯಿ, ಹೆಂಡತಿ, ಏಳನೆಯ ತರಗತಿಯ ಮಗಳು ಎಲ್ಲರೂ ಜೂನ್ 16ರ ರಾತ್ರಿ ಕೇದಾರದ ತಪ್ಪಲಲ್ಲಿರುವ ಸೋನ್ ಪ್ರಯಾಗದಲ್ಲಿರುವ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಅವರನ್ನು ಕೆಳಗಿನ ಬಿರ್ಲಾ ಸಂಸ್ಥೆಗೆ ಸೇರಿದ ಹೊಟೇಲ್‌ನಲ್ಲಿ ಬಿಟ್ಟು ಮತ್ತೆ ಕೆಲವು ಚಾಲಕರೊಂದಿಗೆ ಅಲ್ಲೇ ತುಸು ಮೇಲಿನ ಪುಟ್ಟ ಹೊಟೇಲ್‌ವೊಂದರಲ್ಲಿಯೇ ನರೇಂದ್ರ ನಿದ್ದೆಗೆ ಜಾರಿದ್ದ. ಬೆಳಗಿನ ಸವಿ ಕಿರಣಗಳ ಆಶಯವನ್ನು ಮಂದಾಕಿನಿ ಸದ್ದಿಲ್ಲದೇ ಬಳಿದುಕೊಂಡು ಹೋಗಿತ್ತು.
-
ಕೆಲವೇ ಗಂಟೆಗಳ ಮುಂಚೆ ಸೋನ್‌ಪ್ರಯಾಗ ಪ್ರವಾಸಿಗರಿಂದ, ವಾಹನಗಳಿಂದ, ಚಾಲಕರಿಂದ ತುಂಬಿ ಹೋಗಿತ್ತು. ಕೇದಾರನಾಥನ ದರ್ಶನ ಮಾಡಿ ಬಂದವರ ಕೃತಾರ್ಥತೆ, ದರುಶನಕ್ಕೆ ಹೋಗಲಿರುವವರ ಕುತೂಹಲ, ಭಕ್ತಿಭಾವ, ಅವರನ್ನು ಸೂಕ್ತ ಸಮಯಕ್ಕೆ ನಿಗದಿತ ಸ್ಥಳಕ್ಕೆ ಮುಟ್ಟಿಸುವ ಧಾವಂತದಲ್ಲಿದ್ದ ಚಾಲಕರ ಕರ್ತವ್ಯಪ್ರಜ್ಞೆ, ಪ್ರವಾಸಿಗರ ಸೇವೆಗೆ ನಿಂತಿದ್ದ ಹೊಟೇಲ್, ವಸತಿಗೃಹಗಳ ಮಾಲೀಕರು, ನೌರರರ ದುಡಿಮೆ ಎಲ್ಲವಕ್ಕೂ ಅತ್ತ ಪಟ್ಟಣವೂ ಅಲ್ಲದ, ಇತ್ತ ಹಳ್ಳಿಯೂ ಅಲ್ಲದ ದಟ್ಟ ಮಲೆಗಳ ನಡುವಿನ ಆ ಸ್ಥಳ ಸಾಕ್ಷಿಯಾಗಿತ್ತು. ಸಮುದ್ರ ಮಟ್ಟದಿಂದ ಸರಿ ಸುಮಾರು 3,583 ಮೀಟರ್ ಎತ್ತರದಲ್ಲಿರುವ ಕೇದಾರನಾಥ ಮಂದಿರದಿಂದ ಏಳು ಕಿ.ಮೀ ಕೆಳಗಿರುವ ಸೋನ್ ಪ್ರಯಾಗದ ಪಕ್ಕದಲ್ಲಿಯೇ ನೂರು ಮೀಟರ್‌ಗಳಷ್ಟು ಆಳದಲ್ಲಿ ಮಂದಾಕಿನಿ ಹರಿಯುತ್ತಿದ್ದಳು. ಗಂಗೆಯ ಪ್ರಮುಖ ಜಲಮೂಲಗಳಲ್ಲಿ ಒಂದಾದ ಅಲಕಾನಂದೆಯ ಉಪನದಿ ಮಂದಾಕಿನಿ. ಕೇದಾರನಾಥದ ಬಳಿಯ ಛೋರ್‌ಬರಿ ಎಂಬಲ್ಲಿ ಹಿಮ ಪದರು ಕರಗಿ ನದಿಯ ಸ್ವರೂಪ ತಾಳಿ ಬರುವ ಮಂದಾಕಿನಿ ಸೋನ್‌ಪ್ರಯಾಗದಲ್ಲಿಯೇ ವಾಸುಕಿನಂದೆಯನ್ನು ಕೂಡಿಕೊಳ್ಳುತ್ತಾಳೆ. ಅಲ್ಲಿ ಇನ್ನಷ್ಟು ಮೈದುಂಬಿಕೊಂಡು ರಭಸವನ್ನು ಪಡೆಯುತ್ತಾಳೆ. ಬೇಸಿಗೆಯಲ್ಲಿ ಹೆಸರಿಗೆ ತಕ್ಕಂತೆ ಶಾಂತವಾಗಿ ಮುನ್ನಡೆಯುವ ಮಂದಾಕಿನಿ, ಮಳೆಗಾಲದಲ್ಲಿ ಮಾತ್ರ ಆಗಾಗ ಮುನಿಯುವ ಮಾರಿ. ಆದರೆ ಯಾವತ್ತೂ ಜೀವ ಹಾನಿಯ ಕಳಂಕವನ್ನು ಹೊತ್ತಿರಲಿಲ್ಲ. ಆದರೆ ಜೂನ್ 16 ಆ ರಾತ್ರಿ ಮಾತ್ರ ಆಕೆಗೆ ಅದೇನು ಆಗಿ ಹೋಗಿತ್ತೋ ಗೊತ್ತಿಲ್ಲ. ನೋಡ ನೋಡುತ್ತಿದ್ದಂತೆ ಭಾರೀ ಶಬ್ದದೊಂದಿಗೆ ಬೃಹತ್ ಬಂಡೆಗಳು, ಕಲ್ಲುಮಣ್ಣು, ಬುಡ ಸಮೇತ ಕಿತ್ತು ಬಂದ ಮರಗಿಡಗಳು, ಹತ್ತಾರು ವಾಹನಗಳು, ನೂರಾರು ಜೀವಗಳನ್ನು ಕೊಸರಾಡಲೂ ಆಗದಂತೆ ತೆಕ್ಕೆಯಲ್ಲಿ ಬಿಗಿದಪ್ಪಿಕೊಂಡು ರೋಷಾವೇಶದಿಂದ ಧುಮುಖಲಾರಂಬಿಸಿದಳು. ಏನಾಗುತ್ತಿದೆ ಎಂಬುದು ಅರಿವಾಗುವುದರೊಳಗೆ ಗೌರಿಕುಂಡದ ಕಡೆಯಿಂದ ಪರ್ವತಗಳನ್ನೇ ಕೊಚ್ಚಿಕೊಂಡು ಬಂದು ರೇಸಿಗೆ ಬಿದ್ದಂತೆ ಓಡ ತೊಡಗಿದಳು. ಕ್ಷಣಗಳಲ್ಲಿ ನೂರು ಮೀಟರ್ ಆಳದಲ್ಲಿದ್ದ ಮಂದಾಕಿನಿ ಸೋನ್ ಪ್ರಯಾಗದ ಮಟ್ಟಕ್ಕೆ ಬಂದು ನುಗ್ಗಿಬಿಟ್ಟಳು. ಬೃಹತ್ ಕಟ್ಟಡಗಳು, ವಾಹನ, ಮನುಷ್ಯರು ಯಾವುದೂ ಆಕೆಗೆ ಲೆಕ್ಕಕ್ಕೆ ಇರಲಿಲ್ಲ. ಕಣ್ಣೆದುರೇ ಬೃಹತ್ ಕಟ್ಟಡಗಳು ನೀರಿನಲ್ಲಿ ಮುಳುಗಿ ಹೋದಳು. ಕೂಗುವುದರೊಳಗೆ ಸಾವಿರಾರು ಮಂದಿ ಹೆಣವಾಗಿ ಕಿಲೋಮೀಟರ್‌ಗಟ್ಟಲೆ ದೂರ ನೀರಿನಲ್ಲಿ ಸಾಗಿ ಹೋಗಿದ್ದರು.
-
ಇವತ್ತು ಶೇ.90ರಷ್ಟು ಸೋನ್ ಪ್ರಯಾಗ ನಾಶವಾಗಿದೆ. ಕಣ್ಣು ಹಾಯಿಸಿದಷ್ಟು ಉದ್ದಕ್ಕೆ ಬಂಡೆಗಳ ರಾಶಿ. ಮಂದಾಕಿನಿ ನೂರು ಮೀಟರ್ ಎತ್ತರಕ್ಕೆ ಬಂದು ಮೊದಲಿನಂತೆ ಹರಿಯುತ್ತಿದ್ದಾಳೆ. ಉಳಿದ ಹತ್ತಿಪ್ಪತ್ತು ಕಟ್ಟಡಗಳಲ್ಲಿ ಮನುಷ್ಯರ ಸುಳಿವಿಲ್ಲ. ಅಲ್ಲಿದ್ದವರೆಲ್ಲ ಎಲ್ಲಿ ಹೋದರೋ ಗೊತ್ತಿಲ್ಲ. ದಿನದಲ್ಲಿ ಒಂದಷ್ಟು ಮಂದಿ ಪ್ರವಾಹದಲ್ಲಿ ಕಣ್ಮರೆಯಾದ ಬಂಧುಗಳು, ಮಿತ್ರರನ್ನು ಹುಡುಕುತ್ತಾ ಬರುವವರು, ಮಾಧ್ಯಮದ ಮಂದಿ, ಕೆಲವೇ ಯೋಧರನ್ನು ಬಿಟ್ಟರೆ ಬೇರಾರೂ ಇಲ್ಲ. ಮಣ್ಣಿನ ರಾಶಿಯಡಿ ಕೊಳೆತ ಹೆಣಗಳಿಂದ ಸಹಿಸಲಸಾಧ್ಯ ವಾಸನೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದೆ. ತುಸು ಮಳೆ ಬಂದರೂ ಅದು ಇನ್ನಷ್ಟು ಕೆರಳುತ್ತದೆ. ಆ ಮಣ್ಣಿನ ರಾಶಿಯಡಿ ಏನಿಲ್ಲವೆಂದರೂ ಹದಿನೈದು ಸಾವಿರ ಮಂದಿಯ ಪಾರ್ಥಿವ ಶರೀರಗಳಿವೆ. ಗೌರಿ ಕುಂಡದಿಂದ ಕೇದಾರಕ್ಕೆ ಪ್ರಯಾಣಿಕರನ್ನು ಹೊತ್ತೊಯುತ್ತಿದ್ದ ಕುದುರೆಗಳ ಹೆಣವಿದೆ. ಏನಿಲ್ಲವೆಂದರೂ ಕೆಲವು ಇನ್ನೂರು ಮುನ್ನೂರು ವಾಹನಗಳ ಅವಶೇಷಗಳಿವೆ ಎನ್ನುತ್ತಾರೆ ಪಕ್ಕದ ಸೀತಾಪುರದ ವಾಸಿ ಮನೀತ್‌ಸಿಂಗ್. ಅಲ್ಲಿಂದ ಮುಂದಿನ ರಾಂಪುರ, ಸೀತಾಪುರ, ಗಢವಾಲ್, ಅಗತ್ಸ್ಯಮುನಿಗಳ ಪರಿಸ್ಥಿತಿಯೂ ಇದಕ್ಕಿಂಥ ಭಿನ್ನವಿಲ್ಲ. ಅಲ್ಲಿ ಒಂದು ತಿಂಗಳ ಹಿಂದಷ್ಟೇ ಊರಿತ್ತು ಎಂದರೆ ಖಂಡಿತಾ ನಂಬಲು ಸಾಧ್ಯವಿಲ್ಲ. ಉತ್ತರಾಖಂಡದಲ್ಲಿ ಅವತ್ತು ಪ್ರವಾಹ ಎಬ್ಬಿಸಿದ ಅವಾಂತರ ವರದಿಯಾಗಿರುವುದಕ್ಕಿಂತ, ಊಹಿಸಿಕೊಳ್ಳುತ್ತಿರುವುದಕ್ಕಿಂತ, ಸರ್ಕಾರ ಕೊಡುತ್ತಿರುವ ಅಂಕಿ ಅಂಶಗಳಿಗಿಂತ ಕನಿಷ್ಠ ನಾಲ್ಕುಪಟ್ಟು ಹೆಚ್ಚಿದೆ.
-
ಒಂದೆಡೆ ಜೀವರಾಶಿಯನ್ನೇ ನಿಸರ್ಗ ಆಪೋಶನ ತೆಗೆದುಕೊಂಡು ಸಾವಿರಾರು ಮಂದಿಯ ಕೊಳೆತ ಶರೀರದ ಕಮಟು. ಇನ್ನೊಂದೆಡೆ ಜೀವವೊಂದನ್ನು ಉಳಿಸಿಕೊಂಡು ಮತ್ತೆಲ್ಲವನ್ನೂ ಕಳೆದುಕೊಂಡು ಮುಂದೇನೆಂಬುದನ್ನು ಅರಿಯದೇ ಕುಳಿತಿರುವ ಮುಳುಗಡೆ ಸಂತ್ರಸ್ತರ ನಿಟ್ಟುಸಿರು. ಕಣ್ಣೀರಿಗೆ ಅಲ್ಲಿ ಅರ್ಥವೇ ಉಳಿದಿಲ್ಲ. ಹೊಸ ಹೊಸ, ಕೌತುಕಪೂರ್ಣ, ಆಸಕ್ತಿದಾಯಕ ಸುದ್ದಿಗಳನ್ನು ಹೆಕ್ಕಿ ತೆಗೆಯುವ ಕರ್ತವ್ಯಪರತೆಯನ್ನೂ ಮೀರಿದ ಮಾನವೀಯ ವಿಷಾದ ಆವರಿಸಿಕೊಳ್ಳುತ್ತದೆ. ಪತ್ರಕರ್ತನ ನಿರ್ದಯಿ ಮನಸ್ಸಿನಲ್ಲೂ ಅಚ್ಚಳಿಯದೇ ಉಳಿದು ಹೋಗುವ ಒಂದೊಂದೂ ಕಥೆಗಳು, ವಿನಾಶದ ಬಳಿಕದ ಚಿತ್ರಣ ಬದುಕೇ ಬೇಸರ ತರಿಸುವಂತೆ ಮಾಡುತ್ತದೆ. ಸುನಾಮಿ, ಭೂಕಂಪ, ಪ್ರವಾಹ, ಚಂಡಮಾರುತಗಳಂಥ ವಿಕೋಪಗಳಲ್ಲಿ ಮತ್ತೆ ಮತ್ತೆ ಪ್ರಕೃತಿಯ ಅಗಾಧ ಶಕ್ತಿಯ ಅರಿವಾಗುತ್ತಲೇ ಇರುತ್ತದೆ. ಕಳೆದ ತಿಂಗಳು ಉತ್ತರಾಖಂಡದಲ್ಲಿ ಬದುಕನ್ನು ಮೂರಾಬಟ್ಟೆ ಎಬ್ಬಿಸಿ ಹೋಗಿರುವ ಪ್ರವಾಹದ ಸಂದರ್ಭವೂ ಅದಕ್ಕೆ ಹೊರತಲ್ಲ. ಅದೇ ಆಕ್ರಂದನ, ಚೀರಾಟ, ವಿನಾಶ, ಸಾವಿನ ರುದ್ರನರ್ತನದ ಕ್ಷಣದಲ್ಲಿ ಬದುಕಿನ ಬಗ್ಗೆ ಇನ್ನಿಲ್ಲದ ಪ್ರೀತಿ ಬೆಳೆಸಿಕೊಂಡು, ಅಂಥ ಸಂಕಷ್ಟದಲ್ಲೂ ಧೈರ್ಯಗೆಡದೇ, ವಿವೇಚನೆ ಕಳೆದುಕೊಳ್ಳದೇ ಅತ್ಯಂತ ಜಾಣ್ಮೆಯಿಂದ ಸಾವಿಗೆ ಸವಾಲೊಡ್ಡಿ ಬದುಕಿ ಬರೋದಿದೆಯಲ್ಲಾ;  ಅದೇನು ಸಾವಿನಷ್ಟು ಸುಲಭವೆಂದುಕೊಂಡಿರಾ? ಯಾವ ಸಾಹಸಿಗೂ ಕಡಿಮೆಯಿಲ್ಲದ, ಗಂಡೆದೆಯ ಧೀರ ಮಾತ್ರ ಹಾಗೆ ಉಳಿಯಬಲ್ಲ ನಿಜ. ಆದರೆ ಅದಕ್ಕಿಂತ ಹೆಚ್ಚಾಗಿ ಅದೃಷ್ಟ ಮಾತ್ರ ಕೈಹಿಡಿದಿರಬೇಕು ಎನ್ನುವುದು ಪರಮ ಸತ್ಯ. ದುರದೃಷ್ಟವೆಂದರೆ ಬದುಕುಳಿದ ಅವರಾರನ್ನೂ ಈಗ ಕೇಳುವವರಿಲ್ಲ. ಸರ್ಕಾರ ಇನ್ನೂ ಸಾವಿನ ಲೆಕ್ಕಾಚಾರ, ನಷ್ಟದ ಅಂದಾಜು, ಕೇದಾರನಾಥ ದೇಗುಲದ ಜೀರ್ಣೋದ್ಧಾರ, ಆಗಿ ಹೋದ ದುರಂತದ ಹೊಣೆ ಕೊಡವಿಕೊಳ್ಳುವುದರಲ್ಲೇ ನಿರತವಾಗಿದೆ. ತತ್ವಜ್ಞಾನಿ ನೀಶೆಯ ಮಾತೊಂದು ನೆನಪಾಗುತ್ತದೆ. 'ಪ್ರಕೃತಿ-ಮನೆ ಹೊತ್ತಿ ಉರಿದರೆ ಊಟ, ತಿಂಡಿ ಎಲ್ಲ ಮರೆತು ಹೋಗುತ್ತದೆ. ಆ ಬಳಿಕ ಬೂದಿಯಲ್ಲೇ ಊಟ ಮಾಡಬೇಕಾಗುತ್ತದೆ'. ಹೌದು, ರುದ್ರಪ್ರಯಾಗ ಜಿಲ್ಲೆ, ಉತ್ತರಕಾಶಿ ಸುತ್ತಮುತ್ತದ ಇನ್ನೂರಕ್ಕೂ ಹೆಚ್ಚು ಹಳ್ಳಿಗಳ ಮಂದಿ ತಮ್ಮೂರ ನೆಲದಲ್ಲಿ ಹೂತು ಹೋದ ಹೆಣಗಳ ಮೇಲೆಯೇ ಕುಳಿತು ಬದುಕಿನ ತುತ್ತು ತಿನ್ನುತ್ತಿದ್ದಾರೆ; ಸಿಕ್ಕಷ್ಟನ್ನು. ಇದಕ್ಕಿಂತ ವಿಪರ್ಯಾಸ ಬೇರಿದೆಯೇ ಮುನುಕುಲದ ಇತಿಹಾಸದಲ್ಲಿ?

ಊಹೆ ಮೀರಿದ ಹಾನಿ
ಅಂದಾಜು 20 ಸಾವಿರ ಮಂದಿ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ಸರ್ಕಾರಿ ವರದಿಗಳು ಹೇಳುತ್ತದೆ. ಆದರೆ ಸ್ಥಳೀಯರ ಪ್ರಕಾರ ಇದು ಒಂದು ಲಕ್ಷ ಮೀರಿದೆ. ಗೌರಿಕುಂಡದಲ್ಲಿಯೇ ಸುಮಾರು 15000 ಗೋಡಾವಾಲಾಗಳು ಪ್ರತಿದಿನ ಕಾರ್ಯ ನಿರ್ವಹಿಸುತ್ತಿದ್ದರು. 5000 ಪಾಲ್ಕಿವಾಲಾಗಳಿದ್ದರು. ಹೊಟೇಲ್, ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದವರು 1000ಕ್ಕೂ ಹೆಚ್ಚು. ಆ ಹಳ್ಳಿಯ ನಿವಾಸಿಗಳ ಸಂಖ್ಯೆ ಮುನ್ನೂರಕ್ಕೂ ಹೆಚ್ಚು. ಅಪಾಯದ ಸ್ಥಳಗಳಿಂದ ಅಂದಾಜಾಗಿ 10,000 ಜನರನ್ನು ಪಾರು ಮಾಡಲಾಗಿದೆ. ದುರಂತ ಪ್ರಾರಂಭವಾದಾಗಿನಿಂದ ಈವರೆಗೆ ಸುಮಾರು 21,000 ಜನರು ಕಾಣೆಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಕನಿಷ್ಠ 4 ವರ್ಷಗಳು ಬೇಕು
ಪ್ರದೇಶದಲ್ಲಿ ದುರಂತದ ಒಂದು ವಾರದ ಬಳಿಕ ಬಿರುಗಾಳಿ ಕಡಿಮೆಯಾಗಿದೆ, ಮುಂದಿರುವ ಪುನರ್ವಸತಿ ಕೆಲಸವನ್ನು ರಾಜ್ಯ ಸರ್ಕಾರ ಮರಳಿ ಕೈಗೆತ್ತಿಕೊಂಡಿದೆ ಎಂದು ಹೇಳಿಕೊಂಡಿದ್ದರೂ ಮತ್ತೆ ಮತ್ತೆ ಸುರಿಯುತ್ತಿರುವ ಮಳೆಯಿಂದ ಇದು ಸಾಧ್ಯವಾಗುತ್ತಿಲ್ಲ. ದಿನವೆಲ್ಲ ಕೂಡಿ ಪುನರ್ ನಿರ್ಮಿಸಿದ ರಸ್ತೆ ರಾತ್ರಿ ಸುರಿಯುವ ಮಳೆಯಿಂದಾಗುವ ಭೂ ಕುಸಿತದಲ್ಲಿ ಬೆಗಾಗುವುದರೊಳಗೆ ನಾಶವಾಗುತ್ತಿದೆ. ಪ್ರವಾಸ, ಈ ಪ್ರದೇಶದ ಪ್ರಮುಖ ಆದಾಯ ಮೂಲವಾಗಿತ್ತು. ಇದಕ್ಕೆ ಪ್ರಬಲ ಹೊಡೆತ ಬಿದ್ದಿದೆ. ಅಧಿಕೃತ ವರದಿಗಳ ಪ್ರಕಾರ, ಉತ್ತರಾಖಂಡದ ಪ್ರವಾಸೋದ್ಯಮ 12,000ಕೋಟಿ ನಷ್ಟವನ್ನು ಬರುವ ದಿನಗಳಲ್ಲಿ ಎದುರಿಸುವ ಸಂಭವವಿದೆ. ಜನಪ್ರಿಯ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದೆ. ಕೇದಾರ ಯಾತ್ರೆಯನ್ನು ಇನ್ನೊಂದು ತಿಂಗಳಲ್ಲಿ ಪುನರ್ ಆರಂಭಿಸುವುದಾಗಿ ಹೇಳಿಕೊಂಡಿದ್ದರೂ ಕನಿಷ್ಠ ಇನ್ನು ಎರಡು ವರ್ಷ ಅಲ್ಲಿಗೆ ಹೋಗುವುದು ದುಸಾಧ್ಯ. ಒಟ್ಟಾರೆ ಸಂತ್ರಸ್ತ ಎರಡು ಜಿಲ್ಲೆಗಳಲ್ಲಿ ಸುಮಾರಾಗಿ 3000 ಮನೆಗಳು 150 ಸೇತುವೆಗಳನ್ನು ಮರಳಿ ಕಟ್ಟಬೇಕಾಗಿದೆ. ಮಂದಾಕಿನಿ, ಅಲಕಾನಂದೆಗೆ ನಿರ್ಮಿಸುತ್ತಿದ್ದ 9 ಜಲವಿದ್ಯುತ್ ಯೋಜನೆಗಳ ಒಡ್ಡುಗಳು ನಾಮಾವಶೇಷಗೊಂಡಿದೆ. ಇದರೊಂದಿಗೆ ವಿದ್ಯುತ್‌ಚ್ಛಕ್ತಿ ಮತ್ತು ದೂರ ಸಂಪರ್ಕ ವ್ಯವಸ್ಥೆ ನಾಶವಾಗಿವೆ. ಮಯಾಲಿ, ಅಗತ್ಸ್ಯಮುನಿ, ಗುಪ್ತಕಾಶಿ ಸುತ್ತಮುತ್ತಲಿನ ಸ್ಥಳಗಳಲ್ಲಿ ಅವತ್ತಿನಿಂದ ವಿದ್ಯುತ್ ಇಲ್ಲವೇ ಇಲ್ಲ. ಇದರ ಜೊತೆಗೆ ಆಗಾಗ್ಗೆ ಸುರಿವ ಮಳೆ ನಡೆಯುತ್ತಿರುವ ಪುನರ್‌ನಿರ್ಮಾಣ ಕಾರ್ಯಕ್ಕೆ ಲ್ಲು ಹಾಕುತ್ತಿದೆ. 4,200 ಹಳ್ಳಿಗಳು ಸಂಪರ್ಕ ಕಳೆದುಕೊಂಡಿದೆ. ಹತ್ತೊಂಬತ್ತು ಹಳ್ಳಿಗಳು ಹೆಸರಿಗಿಲ್ಲದೇ ಹೋಗಿವೆ. 3,000ಕ್ಕಿಂತ ಹೆಚ್ಚು ಹಳ್ಳಿಗಳನ್ನು ಮರಳಿ ಸಂಪರ್ಕಿಸಲು ಯತ್ನಿಸುತ್ತಿದ್ದರೂ ಅದು ವರ್ಷದ ಮಾತಾಗಿ ತೋರುತ್ತಿದೆ. ಇವೆಲ್ಲದರ ನಡುವೆ ಮೊನ್ನೆ ಜುಲೈ 21ರಂದು ಉತ್ತರಾಖಂಡದ ಮುಖ್ಯಮಂತ್ರಿ ವಿಜಯ ಬಹುಗುಣ ಕೇದಾರಕ್ಕೆ ಹೆಲಿಕಾಪ್ಟರ್‌ನಲ್ಲಿ ಹಾರಿ ಬಂದು 1200 ವರ್ಷಗಳಷ್ಟು ಪುರಾತನ ದೇಗುಲ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕಾಲು ಭಾಗ ಮಣ್ಣಿನಲ್ಲಿ ಹೂತು ಹೋಗಿರುವ ಕೇದಾರನಾಥ ದೇಗುಲ ಸ್ವಚ್ಛಗೊಳಿಸಲೇ ಇನ್ನೂ ಮೂರು ತಿಂಗಳು ಬೇಕಾಗಬಹುದು. ಅಲ್ಲೀಗ ಸರದಿಯಂತೆ ಇಪ್ಪತ್ತು ಮಂದಿ, ಒಂದು ಜೆಸಿಬಿ, ಎರಡು ಪೋಕ್ಲೈನ್ ಕೆಲಸ ನಿರತವರು ಬಿಟ್ಟರೆ ಬೇರಾರೂ ಇಲ್ಲ. ಮುಕ್ಕಾಲು ಭಾಗ ಕೇದಾರ ನಾಶವಾಗಿದೆ. ಬಂಡೆಗಳ ಸಾಮ್ರಾಜ್ಯ ದೇವನೆಲವನ್ನು ಈಗ ಆಳುತ್ತಿದೆ. ದಿಕ್ಕು ತಪ್ಪಿದ ಮಂದಾಕಿನಿ ಮತ್ತೊಂದು ಪ್ರವಾಹದ ಭ್ರಮೆಯನ್ನು ಹುಟ್ಟಿಸುತ್ತಾ ಹರಿಯುತ್ತಿದ್ದಾಳೆ.

- ರಾಧಾಕೃಷ್ಣ ಎಸ್ ಭಡ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.