ಕೃಷ್ಣ ಪತ್ರಾಸ್ತ್ರದ 'ಮೂಲಮಂತ್ರ' ಏನು..?
ರಾಜ್ಯ ಕಾಂಗ್ರೆಸ್‌ನಲ್ಲಿ ಮೂಲನಿವಾಸಿಗಳು ಹಾಗೂ ವಲಸಿಗರ ನಡುವೆ ಹಗೆಯ ಕಿಡಿ...
ರಾಜ್ಯ ಕಾಂಗ್ರೆಸ್‌ನಲ್ಲಿ ಮೂಲ ನಿವಾಸಿಗಳು ಹಾಗೂ ವಲಸಿಗರ ನಡುವೆ ಹೊಗೆಯಾಡುತ್ತಿರುವ ಹಗೆಯಲ್ಲಿ ಮತ್ತೆ ಕಿಡಿ ಕಾಣಿಸಿಕೊಂಡಿದೆ. ಪಕ್ಷ ಮತ್ತು ಸರ್ಕಾರದಲ್ಲಿ ವಲಸಿಗರಿಗೆ ಸಿಗುತ್ತಿರುವ ಹೆಚ್ಚಿನ ಮನ್ನಣೆಗೆ ಕಡಿವಾಣ ಹಾಕಲು ಮೂಲನಿವಾಸಿಗಳು ಪಡುತ್ತಿರುವ 'ಸಂಕಟ ಪ್ರಯತ್ನ' ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಬರೆದಿರುವ ಓಲೆಯಲ್ಲಿ ಅಲೆಅಲೆಯಾಗಿ ತೇಲುತ್ತಿದೆ.
ಕಾಂಗ್ರೆಸ್‌ಗೆ ನೂರಾಇಪ್ಪತ್ತೇಳು ವರ್ಷಗಳ ಇತಿಹಾಸವಿದೆ. ತನ್ನದೇ ಆದ ಸಿದ್ಧಾಂತ ಮತ್ತು ಬದ್ಧತೆ ಇದೆ. ಸಂಸ್ಕೃತಿ ಇದೆ. ಅದನ್ನು ಜತನ ಮಾಡಲು ಪಕ್ಷದಲ್ಲಿ ಒಂದಷ್ಟು ಕಟ್ಟುಪಾಡುಗಳನ್ನು ತರುವ ಅಗತ್ಯವಿದೆ. ಹೀಗಾಗಿ ಹೊಸಬರನ್ನು ಪಕ್ಷಕ್ಕ ಸೇರಿಸಿಕೊಳ್ಳುವ ಸಂದರ್ಭದಲ್ಲಿ ಕೆಲ ನಿಬಂಧನೆಗಳನ್ನು ವಿಧಿಸಲು ರಾಜ್ಯ ಮುಖಂಡರಿಗೆ ಸೂಚನೆ ನೀಡುವಂತೆ ಕೃಷ್ಣ ಪತ್ರದಲ್ಲಿ ಕೋರಿದ್ದಾರೆ. ಪಕ್ಷಕ್ಕಾಗಿ ಕನಿಷ್ಠ ಎರಡು ವರ್ಷ ದುಡಿದವರಿಗೆ ಮಾತ್ರ ಸರ್ಕಾರ ಮತ್ತು ಪಕ್ಷದಲ್ಲಿ ಸ್ಥಾನಮಾನ ಕೊಡಬೇಕು. ಯಾರು ಯಾವುದೇ ಪಕ್ಷದಲ್ಲಿ ಎಷ್ಟೇ ದುಡಿದಿರಲಿ, ಎಷ್ಟೇ ದೊಡ್ಡವರಿರಲಿ, ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಅವರನ್ನು ಬ್ಲಾಕ್ ಕಾಂಗ್ರೆಸ್ ಮಟ್ಟದಿಂದಲೇ ಗುರುತಿಸಬೇಕು. ಯಾವುದೇ ಕಾರಣಕ್ಕೂ ಅವರನ್ನು ಏಕಾಏಕಿ ಪಕ್ಷದ ಪಡಸಾಲೆಗೆ ಬಿಟ್ಟುಕೊಳ್ಳಬಾರದು ಎಂಬ ಒಕ್ಕಣಿಕೆ ಕೂಡ ಈ ಪತ್ರದಲ್ಲಿದೆ. ಪತ್ರ ಕೃಷ್ಣ ಅವರದ್ದೇ ಇರಬಹುದು. ಆದರೆ ಅದರ ಹಿಂದಿರುವ ಧ್ವನಿ ಮಾತ್ರ ಮೂಲ ಕಾಂಗ್ರೆಸ್‌ನ ಅತೃಪ್ತ ನಾಯಕರದ್ದು!
ಸಂದೇಹವೇ ಇಲ್ಲ. ಕೃಷ್ಣ ಅವರ ಪತ್ರದ ಸಾರಾಂಶವನ್ನು ನೋಡಿದ ಯಾರಿಗೂ ಪಕ್ಷದ ಹಿತ ರಕ್ಷಣೆ ಅವರ ಮೂಲ ಉದ್ದೇಶ ಎಂಬ ಅರ್ಥ ಕೊಡುತ್ತಿದೆ. ಅದು ನಿಜವೂ ಹೌದು. ಆದರೆ ಪತ್ರದ ಸಾರದ ಹಿಂದೆ ಇರುವ ದೂರಾಲೋಚನೆಯೇ ಬೇರೆ. ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ವಲಸಿಗರಿಗೆ ಈಗಾಗಲೇ ಸಾಕಷ್ಟು ಮನ್ನಣೆ ಸಿಕ್ಕಿದೆ. ಆದರೆ ಇದೇ ಸಂಪ್ರದಾಯ ಮುಂದುವರಿದರೆ ತಾವು ಮೂಲೆಗುಂಪಾಗಬೇಕಾಗುತ್ತದೆ ಎಂಬ ಮೂಲನಿವಾಸಿಗಳ ಆತಂಕ ಕೃಷ್ಣ ಅವರು ಪತ್ರದ ಮೂಲಕ ಪ್ರಯೋಗಿಸಿರುವ 'ಸುದರ್ಶನ ಚಕ್ರದ' ಜತೆ ಗರಗರನೆ ತಿರುಗುತ್ತಿದೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕೃಷ್ಣ ಅವರು ತವರು ಜಿಲ್ಲೆ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಟಿಕೆಟ್ ಹಂಚಿಕೆ ಹಿನ್ನೆಲೆಯಲ್ಲಿ ಯಾರನ್ನೋ ಗುರಿಯಾಗಿಟ್ಟುಕೊಂಡು ಈ ಪತ್ರ ಬರೆದಿದ್ದಾರೆ ಎಂಬ ಚರ್ಚೆ ಪಕ್ಷದ ಪಡಸಾಲೆಯಲ್ಲಿ ನಡೆಯುತ್ತಿದೆ. ಒಂದು ಹಂತಕ್ಕೆ ಇದು ನಿಜವೂ ಹೌದು. ಆದರೆ ಇದನ್ನು ಮೀರಿದ ತಂತ್ರ ಇದರ ಹಿಂದಿದೆ. ಮುಂಬರುವ ಲೋಕಸಭಾ ಚುನಾವಣೆ, ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ನಡೆಯಬೇಕಿರುವ ಸಂದರ್ಭದಲ್ಲಿ ಅವರು ಬರೆದಿರುವ ಪತ್ರ ಮೂಲನಿವಾಸಿಗಳ ಹಿತರಕ್ಷಣೆ ಬಯಕೆಯನ್ನು ಒಳಗೊಂಡಿದೆ.
ಕೃಷ್ಣ ಮತ್ತು ಅಂಬರೀಶ್ ನಡುವಣ ರಾಜಕೀಯ ಕಲಹ ಕಳೆದ ವಿಧಾನಸಭೆ ಚುನಾವಣೆ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಬಹಿರಂಗ ಸ್ವರೂಪ ಪಡೆದುಕೊಂಡಿತ್ತು. ಒಬ್ಬರ ವಿರುದ್ಧ ಮತ್ತೊಬ್ಬರು ಕತ್ತಿ ಮಸೆದದ್ದು ಮಂಡ್ಯ ಜಿಲ್ಲೆ ಕಾಂಗ್ರೆಸ್ ಕೈ ತಪ್ಪಲು ಕಾರಣವಾಯಿತು. ಎಂಟು ಕ್ಷೇತ್ರಗಳ ಪೈಕಿ ಎರಡರಲ್ಲಿ ಮಾತ್ರ ಪಕ್ಷ ಪಾಸಾಯಿತು. ವಿಧಾನಸಭೆ ಚುನಾವಣೆ ಕಲಹ ಈಗ ಲೋಕಸಭೆ ಚುನಾವಣೆಗೂ ವಿಸ್ತರಣೆಯಾಗುವ ಎಲ್ಲ ಲಕ್ಷಣಗಳು ಕಾಣಿಸಿಕೊಂಡಿವೆ. ವರ್ಷದ ಹಿಂದಷ್ಟೇ ಪಕ್ಷಕ್ಕೆ ಬಂದ ಎಲ್.ಆರ್. ಶಿವರಾಮೇಗೌಡರಿಗೆ ಮಂಡ್ಯ ಲೋಕಸಭೆ ಚುನಾವಣೆ ಟಿಕೆಟ್ ಕೊಡಿಸಲು ಕೃಷ್ಣ ತವರಿನ 'ಸ್ವಪಕ್ಷೀಯ ಎದುರಾಳಿ' ಸಚಿವ ಅಂಬರೀಶ್ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಿ ತಮ್ಮ ಬೆಂಬಲಿಗ ಆತ್ಮಾನಂದ ಅವರಿಗೆ ಟಿಕೆಟ್ ಕೊಡಿಸುವುದು ಕೃಷ್ಣ ಅವರ ಹಂಬಲ.
ಹಾಗೆ ನೋಡಿದರೆ ಹೈಕಮಾಂಡ್‌ನಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಕೃಷ್ಣ ಅವರು ಮನಸ್ಸು ಮಾಡಿದರೆ ಒಂದೇ ಒಂದು ಫೋನ್‌ಕಾಲ್‌ನಲ್ಲಿ ಈ ಕಾರ್ಯ ಸಾಧಿಸಬಲ್ಲರು. ಅವರಿಗೆ ಅಷ್ಟು ತಾಕತ್ತು ಇದೆ. ಆದರೆ ಇವರಿಬ್ಬರ ನಡುವಣ ಜಗಳದ ಲಾಭ ಪಡೆಯಲು ಸಿದ್ದರಾಮಯ್ಯ ಮತ್ತು ಸಂಸದ ಎಚ್. ವಿಶ್ವನಾಥ್ ಪ್ರಯತ್ನಶೀಲರಾಗಿದ್ದಾರೆ. ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್ ಅವರನ್ನು ಮಂಡ್ಯದಲ್ಲಿ ಅಭ್ಯರ್ಥಿ ಮಾಡಲು ಇವರು ಉದ್ದೇಶಿಸಿದ್ದಾರೆ. ಇದರ ಹಿಂದೆ ವಿಶ್ವನಾಥ್ ಅವರ ಸ್ವಾರ್ಥ ಅಡಗಿದೆ. ಶ್ರೀಕಂಠದತ್ತ ಒಡೆಯರ್ ಮಂಡ್ಯ ಅಭ್ಯರ್ಥಿಯಾದರೆ ವಿಶ್ವನಾಥ್ ಅವರಿಗೆ ಮೈಸೂರಲ್ಲಿ ಟಿಕೆಟ್ ಸ್ಪರ್ಧಿ ಇರುವುದಿಲ್ಲ. ಮಂಡ್ಯದಲ್ಲಿ ಒಡೆಯರ್ ಗೆದ್ದರಾಗಲಿ, ಸೋತರಾಗಲಿ ಮುಂದಿನ ಬಾರಿಯೂ ಅವರಿಗೆ ಟಿಕೆಟ್ ಸಿಗುವ ಲಕ್ಷಣ ಹೆಚ್ಚು. ಆಗ ಎರಡು ಅವಧಿಗೆ ಟಿಕೆಟ್ ಸ್ಪರ್ಧಿಯನ್ನು ನಿವಾರಿಸಿಕೊಂಡಂತಾಗುತ್ತದೆ ಎಂಬುದು ವಿಶ್ವನಾಥ್ ಮುಂದಾಲೋಚನೆ. ಆದರೆ ಕೃಷ್ಣ ಅವರಿಗೆ ಒಡೆಯರ್ ಆಗಲಿ, ಶಿವರಾಮೇಗೌಡರಾಗಲಿ ಅಭ್ಯರ್ಥಿ ಆಗುವುದು ಇಷ್ಟವಿಲ್ಲ. ಅವರ ಅಭ್ಯರ್ಥಿ ಆತ್ಮಾನಂದ.
ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗ ಉದ್ಯಮಿಯೊಬ್ಬರನ್ನು ಅಭ್ಯರ್ಥಿ ಮಾಡಲು ಸಿದ್ದರಾಮಯ್ಯ ಬಯಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಈ ಉದ್ಯಮಿ ಸಿದ್ದರಾಮಯ್ಯ ಪರವಾಗಿ ಕಾಂಗ್ರೆಸ್‌ನ ಒಂದಷ್ಟು ಅಭ್ಯರ್ಥಿಗಳಿಗೆ ನೆರವು ಒದಗಿಸಿದ್ದರು. ಅದಕ್ಕೆ ಪ್ರತ್ಯುಪಕಾರವಾಗಿ ಲೋಕಸಭೆ ಚುನಾವಣೆ ಟಿಕೆಟ್ ಕೊಡಿಸುವುದು ಅವರ ಆಕಾಂಕ್ಷೆ. ಆದರೆ ಈ ಉದ್ಯಮಿ ನಿಲ್ಲೋದು ಕೃಷ್ಣ ಆಪ್ತ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಇಷ್ಟವಿಲ್ಲ. ತಮ್ಮ ಪ್ರಾಬಲ್ಯ ಇರುವ ಗ್ರಾಮಾಂತರದಲ್ಲಿ ಬೇರೊಬ್ಬರ ಪ್ರವೇಶ ಸಹಿಸಿಕೊಳ್ಳಲು ಅವರು ಸಿದ್ಧರಿಲ್ಲ. ಹೀಗಾಗಿ ತಮ್ಮ ಸಹೋದರ ಡಿ.ಕೆ. ಸುರೇಶ್ ಅವರನ್ನೇ ಅಭ್ಯರ್ಥಿ ಮಾಡಲು ಉತ್ಸುಕರಾಗಿದ್ದಾರೆ. ಕೃಷ್ಣ ಅವರ ಸಹಾಯ ಹಸ್ತ ಬಯಸಿದ್ದಾರೆ.
ಇಲ್ಲಿ ಇನ್ನೂ ಒಂದು ವಿಷಯ. ತಮ್ಮನ್ನು ಸಂಪುಟದಿಂದ ದೂರ ಇಟ್ಟಿರುವ ಸಿದ್ದರಾಮಯ್ಯ ಮೇಲೆ ಡಿ.ಕೆ. ಶಿವಕುಮಾರ್‌ಗೆ ಸಿಟ್ಟು ಒಳಗುದಿಯಾಗಿದೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸೇರ್ಪಡೆ ಆಗಬಹುದು ಎಂಬ ನಿರೀಕ್ಷೆ ಅವರದು. ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ ಲೋಕಸಭೆ ಚುನಾವಣೆ ಇದ್ದೇ ಇದೆ ಎಂದು ಆಪ್ತವಲಯದಲ್ಲಿ ಹೇಳಿಕೊಂಡಿದ್ದಾರೆ. ಅಂದರೆ ಅದರರ್ಥ ರಾಜಕೀಯ ಒಳೇಟು ಚಿಂತನೆ. ಇದನ್ನು ನಿರೀಕ್ಷೆ ಮಾಡಿರುವ ಸಿದ್ದರಾಮಯ್ಯ ಕೂಡ ಪ್ರತಿತಂತ್ರ ರೂಪಿಸುತ್ತಿದ್ದಾರೆ. ಈ ತಂತ್ರ-ಪ್ರತಿತಂತ್ರಗಳು ಸೆಣಸಿಗೆ ಬೀಳುವುದೋ, ರಾಜಿಯಾಗುವುದೋ ನೋಡಬೇಕು.
ಸರ್ಕಾರದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯನವರು ಆಡಳಿತದ ವಿಚಾರವಿರಲಿ, ಮುಂದಿನ ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆ ಇರಲಿ ಸ್ಥಾನ ಮಹಿಮೆಯಿಂದ ಪ್ರಾಬಲ್ಯ ಸಾಧಿಸುವುದು ಸಹಜ. ಯಾರೇ ಮುಖ್ಯಮಂತ್ರಿ ಸ್ಥಾನದಲ್ಲಿದ್ದರೂ ಇದು ನಿರೀಕ್ಷಿತ. ಎಲ್ಲಕ್ಕಿಂತ ಮಿಗಿಲಾಗಿ ಸಂಪುಟ ವಿಸ್ತರಣೆ ಇದೆ. ಒಟ್ಟು ಸಂಖ್ಯೆಯಲ್ಲಿ ಅರ್ಧಕ್ಕೂ ಹೆಚ್ಚು ಖಾತೆಗಳು ಸಿದ್ದರಾಮಯ್ಯನವರ ಸುಪರ್ದಿಯಲ್ಲೇ ಇವೆ. ಇದರ ಜತೆಗೆ ದೊಡ್ಡ ಮಟ್ಟದಲ್ಲಿ ನಿಗಮ-ಮಂಡಳಿಗಳ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ಆಗಬೇಕಿದೆ. ಇವನ್ನು ಭರ್ತಿ ಮಾಡುವಾಗ ಬೇರೆ ಪಕ್ಷದಿಂದ ನಿನ್ನೆ-ಮೊನ್ನೆ ವಲಸೆ ಬಂದ ನಾಯಕರಿಗೆ ಮತ್ತು ಅವರ ಬೆಂಬಲಿಗರಿಗೆ ಲಾಭ ಆಗಬಹುದು ಎಂಬ ಆತಂಕ ಮೂಲ ಕಾಂಗ್ರೆಸ್ಸಿಗರದು. ಇವರೆಲ್ಲರೂ ಒತ್ತಡ ಹೇರಿ ಕೃಷ್ಣ ಅವರು ಸೋನಿಯಾಗಾಂಧಿ ಅವರಿಗೆ ಈ ಪತ್ರ ಬರೆಯುವಂತೆ ಮಾಡಿದ್ದಾರೆ.
ಆದರೆ ಇದಕ್ಕೆ ಮೂಲ ಕಾಂಗ್ರೆಸ್ ವಲಯದಲ್ಲಿ ಬೇರೆಯದೇ ಆದ ವ್ಯಾಖ್ಯಾನ ಮತ್ತು ಸಮರ್ಥನೆ ಸಿದ್ದವಾಗಿದೆ. ಎಸ್.ಎಂ.ಕೃಷ್ಣ ರಾಜ್ಯದ ಮುತ್ಸದ್ಧಿ ರಾಜಕಾರಣಿಗಳಲ್ಲಿ ಒಬ್ಬರು. ನಿಗಮ-ಮಂಡಳಿ ರಾಜಕಾರಣಕ್ಕಾಗಿಯೋ, ಸಂಪುಟ ವಿಸ್ತರಣೆಯಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಿ ಎಂಬುದಕ್ಕಾಗಿಯೋ ಅಥವಾ, ಯಾವ ರಾಜಕೀಯ ಪಕ್ಷಕ್ಕೂ ಸದ್ಯಕ್ಕೆ ಅನಪೇಕ್ಷಣೀಯವಾದ ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪ್ರಾಬಲ್ಯಕ್ಕಾಗಿಯೋ ಅವರು ಪತ್ರ ಬರೆಯಬೇಕಾಗಿಲ್ಲ. ಮನಸು ಮಾಡಿದರೆ ಅವರು ಇವೆಲ್ಲವನ್ನೂ ನೇರವಾಗಿ ಸಾಧಿಸುತ್ತಾರೆ. ಆದರೆ ಪತ್ರದ ಹಿಂದೆ ಇರುವುದು ಅಪ್ಪಟ ಪಕ್ಷ ಪೋಷಣೆ ಉದ್ದೇಶ ಮಾತ್ರ ಎನ್ನುತ್ತಾರೆ.
'ಕೃಷ್ಣಸಂದೇಶ'ದ ಹಿಂದಿರುವ ಉದ್ದೇಶ ಕಾರ್ಯಕರ್ತರ ಹಿತ ಕಾಪಾಡುವುದು ಎನ್ನುವ ಕೆಲ ಮೂಲ ಕಾಂಗ್ರೆಸ್ ಮುಖಂಡರು ತಮ್ಮ ವಾದ ಸಮರ್ಥನೆಗಾಗಿ ಎಐಸಿಸಿಯ ಮುಂದೆ ಇರುವ ಎರಡು ವರದಿಯನ್ನು ಕವಚವಾಗಿಸಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ರಕ್ಷಣಾ ಸಚಿವ ಎ.ಕೆ.ಆಂಟನಿ ಎಐಸಿಸಿಗೆ ಸಂಘಟನಾ ವರದಿಯೊಂದನ್ನು ಸಲ್ಲಿಸಿದ್ದಾರೆ. ಆ ವರದಿ ಪ್ರಕಾರ ಪಕ್ಷಕ್ಕೆ ಯಾರೇ ಹೊಸದಾಗಿ ಸೇರ್ಪಡೆಗೊಂಡರೂ ಅವರಿಗೆ ಕನಿಷ್ಠ ಎರಡು ವರ್ಷ ಯಾವುದೇ ಜವಾಬ್ದಾರಿ ನೀಡಕೂಡದು. ಅಧಿಕಾರ ಸ್ಥಾನದಲ್ಲಿ ಕುಳ್ಳಿರಿಸಕೂಡದು. ಕಾಂಗ್ರೆಸಿಗರ ಪಾಲಿನ ಧರ್ಮಸಭೆ ಎಂದೇ ಪರಿಗಣಿಸಲ್ಪಟ್ಟ ಎಐಸಿಸಿ ಅಧಿವೇಶನದಲ್ಲೂ ಇದು ಚರ್ಚೆಗೆ ಒಳಗಾಗಿದ್ದು, ಆಂಟನಿ ವರದಿ ಜಾರಿಗೆ ತರುವುದಕ್ಕೆ ನಿರ್ಣಯವನ್ನೇ ತೆಗೆದುಕೊಳ್ಳಲಾಗಿದೆ. ಕೃಷ್ಣ ಈ ವಿಚಾರವನ್ನು ಮತ್ತೆ ಪ್ರಸ್ತಾಪ ಮಾಡಿದ್ದಾರೆಯೇ ವಿನಾ ಇದರಲ್ಲಿ ಯಾವುದೇ ರಹಸ್ಯ ಉದ್ದೇಶವಿಲ್ಲ. ಯಾರನ್ನೋ ಲಕ್ಷ್ಯವಾಗಿಸಿಕೊಂಡು ಈ ಪತ್ರ ಬರೆದಿಲ್ಲ ಎಂಬ ಸಮರ್ಥನೆ ಆರಂಭವಾಗಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಕೃಷ್ಣ ಪತ್ರದಲ್ಲಿ ಪಕ್ಷ ಸೇರಲು ಅನೇಕರು ಮುಗಿ ಬೀಳುತ್ತಿದ್ದಾರೆ. ಅಂಥವರು ಕನಿಷ್ಠ ಎರಡು ವರ್ಷ ಪಕ್ಷ ಸಂಘಟನೆಗೆ ಕೆಲಸ ಮಾಡುವಂತೆ ಕಿವಿ ಮಾತು ಹೇಳಬೇಕು ಎಂದಿದ್ದಾರೆ. ಬೇರೆ ರಾಜಕೀಯ ಪಕ್ಷಗಳ ಜತೆಗೆ ಕೆಲ ನಿವೃತ್ತ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು, ಬೇರೆ ಬೇರೆ ಕಾರಣಗಳಿಂದ ಸೇವೆಗೆ ಸ್ವಯಂ ನಿವೃತ್ತಿ ಘೋಷಿಸಿಕೊಂಡವರು ಈಗ ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರೆ. ಮೂಲ-ವಲಸಿಗ ಪ್ರಶ್ನೆಯ ಜತೆಗೆ ನಿವೃತ್ತ ಸರ್ಕಾರಿ ನೌಕರರ ಕಾಂಗ್ರೆಸ್ ಎಂಬ ದೊಡ್ಡ ವರ್ಗವೇ ಈಗ ಸೃಷ್ಟಿಯಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ವರ್ಗಕ್ಕೆ ಸೇರಿದವರು ಟಿಕೆಟ್ ಗಿಟ್ಟಿಸಿಕೊಳ್ಳಲು ಯಾವ ಮಟ್ಟದ ಲಾಬಿ ನಡೆಸಿದ್ದರು ಎಂಬುದು ಇನ್ನು ಮರೆತು ಹೋಗಿಲ್ಲ.
ಆಗ ಆಂಕಾಂಕ್ಷೆ ವ್ಯಕ್ತಪಡಿಸಿದವರು, ಮತ್ತೆ ನಿವೃತ್ತಿ ಪಡೆದವರು ಈಗ ಲೋಕಸಭಾ ಚುನಾವಣೆಯತ್ತ ತಮ್ಮ ಚಿತ್ತ ಹರಿಸಿದ್ದಾರೆ. ಚುನಾವಣಾ ರಾಜಕಾರಣಕ್ಕೆ ಬೇಕಾದ ಹಣಬಲ ಹಾಗೂ ಸಂಪರ್ಕ ಅಂಥವರಲ್ಲಿ ಇದೆ. ಆದರೆ ಅವರೆಲ್ಲರಿಗೆ ಅವಕಾಶ ನೀಡುವ ಮನಸು ಹೆಚ್ಚಿನ ಕಾಂಗ್ರೆಸಿಗರಲ್ಲಿ ಇಲ್ಲ. ಇಂಥವರೆಲ್ಲರ ಮಹಾತ್ವಾಕಾಂಕ್ಷೆಗೆ ತಡೆಯೊಡ್ಡಿ ಪಕ್ಷಕ್ಕೆ ದುಡಿದವರಿಗೆ ಮಾತ್ರ ಮನ್ನಣೆ ಸಿಗುವಂತಾಗಬೇಕೆಂಬ ವ್ಯಾಖ್ಯಾನವೂ ನಡೆಯುತ್ತಿದೆ.
ಆದರೆ ಒಂದಂತೂ ದಿಟ. ವಿಧಾನಸಭೆ ಚುನಾವಣೆ ನಂತರ ಸಕ್ರಿಯ ರಾಜಕಾರಣದ ಯಾವುದೇ ಚಟುವಟಿಕೆ ಹಾಗೂ ಮೇಲಾಟಗಳಲ್ಲಿ ಕಾಣಿಸಿಕೊಳ್ಳದಿದ್ದ ಕೃಷ್ಣ, ಕಾಂಗ್ರೆಸ್ ಪಡಸಾಲೆ ಮಾತ್ರವಲ್ಲ ರಾಜ್ಯ ರಾಜಕಾರಣದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿರುವಾಗಲೇ ಕೃಷ್ಣ ಅವರಂತವರು ಹೈಕಮಾಡ್‌ಗೆ ಪತ್ರ ಬರೆದು ಪಕ್ಷದ ಸಂಸ್ಕೃತಿ ಜತನ ಮಾಡುವಂತೆ ಕೋರುವುದು ಸಣ್ಣ ಸಂಗತಿಯಂತೂ ಅಲ್ಲ. ಇದರ ಉದ್ದೇಶ ಏನಿರಬಹುದು ? ಫಲಿತಾಂಶ ಏನಾಗಬಹುದು ? ಎಂಬ ಕುತೂಹಲ ಇನ್ನಷ್ಟು ದಿನ ಜೀವಂತವಾಗಿರುವುದಂತೂ ಸುಳ್ಳಲ್ಲ.
ಲಗೋರಿ: ತಂತ್ರ-ಪ್ರತಿತಂತ್ರ ಮೀರಿದ್ದು ಕುತಂತ್ರ.
- ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

