ಯಾವಾಗಂದ್ರೆ ಆವಾಗ ಬಾವಿಗೆ ಬೀಳೋದು ಯಾಕೆ?
ನೀವು ಎಲ್ಲ ತಿಳ್ದೋರು. ಹಿಂಗಾ ಮಾಡಾದು? ರಾಜ್ಕೀಯ ಅಂದ್ಮೇಕೆ ವೊಂದು ಮಾತು ಬತ್ತದೆ, ವೊಂದು ಮಾತು ವೋತದೆ. ಅದುಕ್ಕೆ ವೋಗೋಗಿ ಬಾವಿಗೆ ಬೀಳೋದು ಸರೀನಾ? ಇದು ನಿಮ್ಗೆ ಸಿಲ್ಲಿ ಸಿಲ್ಲಿ ಅನ್ಸಾಕಿಲ್ವಾ?
ಕೋಳಿ ಕೂಗಕ್ಕೆ ಮುಂಚೇನೆ ಮೈಲಾರಿ ಎದ್ಬುಟ್ಟು ಕೈನಾಗೆ ಬ್ಯಾಗು ಹಿಡ್ಕಂಡು ವೋಯ್ತಾಯಿದ್ದ. ಆಮಾಸೆ ದನ ವೊಡ್ಕಂಡು ಅತ್ಲಾಗಿಂದ ಬತ್ತಾಯಿದ್ದ.
'ಇದೇನ್ಲಾ ಮೈಲಾರಿ, ಸರಿ ವೋತ್ನಾಗೆ ಎಲ್ಲೋ ವೊಂಟಂಗದೆ. ಕೈನಾಗೆ ಬ್ಯಾಗು ಬ್ಯಾರೆ ಅದೆ. ಏನ್ಲಾ ವಿಸೇಸ ಈವತ್ತು' ಅಂತ ಅಮಾಸೆ ಕೇಳ್ದ.
'ಅಯ್ಯೋ ನನ್ ಕಥೆ ಏನ್ಲಾ ಯೋಳ್ಳಿ ಅಮಾಸೆ. ಮನ್ಯಾಗೆ ಹೆಂಗುಸ್ರು ಇಲ್ಲ ಅಂತೇಳಿ ರಾತ್ರಿ ಎಣ್ಣೆ ವಸಿ ಜಾಸ್ತಿ ಬುಟ್ಕಂಬುಟ್ಟಿದ್ದೆ. ಮನೆಗೋಯ್ತಾಯಿದ್ದಂಗೆ ಎದ್ರುಗಡೆ ನಮ್ ಮಾವಂದು ಪೋಟೋ ಇತ್ತು. ಕ್ವಾಪ ಬಂದು ಅಲ್ಲಾಡುಸ್ಬುಟ್ಟೆ ವೊಡ್ದೋಯ್ತು. ನನ್ನೆಂಡ್ರು ಈವಾಗ ವೂರಿಂದ ಬತ್ತಳೆ. ಮನ್ಯಾಗೆ ಅವರಪ್ಪಂದು ಪೋಟೋ ಇಲ್ಲ ಅಂತಂದ್ರೆ ನನ್ನುನ್ನ ಸಿಗ್ದು ವೂರು ಬಾಗ್ಲುಗೆ ತೋರ್ಣ ಕಟ್ಟಾಕ್ತಳೆ. ಅದುಕ್ಕೆ ಕಿತ್ತೋಗಿರೋ ಪೋಟೋಗೆ ಕಟ್ಟು ಹಾಕುಸ್ಕಂಡು ಬರಕ್ಕೆ ವೋಯ್ತಾಯಿದ್ದೀನಿ' ಕಣ್ಲಾ ಅಂದ ಮೈಲಾರಿ. 'ಅಲ್ಲಲೇ, ಸಣ್ ಪೋಟೋ ಇಸ್ಯಕ್ಕೆ ಈ ಪಾಟಿ ತಲೆ ಕೆಡಿಸ್ಕಂಬುಟ್ಟಿದ್ದೀಯಲ್ಲೋ' ಅಂದ ಅಮಾಸೆ. 'ಹೌದಪ್ಪ, ನಿಂಗೆ ಸಣ್ ಇಸ್ಯಾನೆ, ನಂಗೆ ಇದು ಲೈಪು ಅಂಡ್ ಡೆತ್ ಪ್ರಶ್ನೆ ಇದ್ದಂಗೆ. ಮೊನ್ನೆ ನೋಡು, ಅಶೆಂಬ್ಲಿ ವೊಳ್ಗೆ ಯಾವ್ ಪಾಟಿ ಗಲಾಟಿ ಆಯ್ತು ಆಂತ. ಯಾಕೇಳು, ಸಿಯೆಮ್ಮು ಸಿದ್ರಾಮಣ್ಣೋರು ಆಪೀಸ್ನಾಗಿರೋ ದ್ಯಾವೇಗೌಡ್ರು ಪೋಟೋ ತೆಗೆಸ್ಬುಟ್ರಂತೆ. ಇಸ್ಯ ಗೊತ್ತಾಗಿ ಅವ್ರು ಪಕ್ಸದ ಸಾಸ್ಕರು ಅಶೆಂಬ್ಲಿ ವೊಳ್ಗೆ ಪುಲ್ ರಾಮಾಯ್ಣ ಮಾಡುದ್ರಂತೆ' ಅಂತ ಯೋಳ್ದ ಮೈಲಾರಿ. 'ಹೌದೇನ್ಲಾ ಮೈಲಾರಿ, ಪೋಟೋ ತೆಗುದ್ರು ಅಂತ ಗಲಾಟಿ ಆಗೋಯ್ತ? ಗಲಾಟೆ ಮಾಡುದ್ರಲ್ಲ ಸಾಸ್ಕರು ಅವ್ರು ಮನ್ಯಾಗೆ, ಆಪೀಸ್ನಾಗೆ ಗೌಡ್ರು ಪೋಟೋ ಹಾಕ್ಕಂಡವ್ರೆ ಅಂತೀಯೇನ್ಲಾ?' ಅಂತ ಆಮಾಸೆ ಕೇಳ್ದ. 'ಯಾರು ಹಾಕ್ಕಂಡವ್ರೋ, ಬುಟ್ಟವ್ರೋ, ನಾನಂತು ನನ್ ಮಾವನ ಪೋಟೋ ತಕ್ಕಂಡೋಗಿ ನೇತಾಕ್ಬೇಕು. ಇಲ್ಲಾಂದ್ರೆ ನನ್ನೆಂಡ್ರು ನನ್ನುನ್ನ ನೇತಾಕ್ಬುಡ್ತಳೆ ಕಣಲೇ' ಅಂತೇಳಿ ಮೈಲಾರಿ ಬಸ್ ಬರೋ ಕಡೀಕೆ ವೋಡ್ದ. ಆಟೋತ್ಗೆ ಉದಯರಂಗ ಬಸ್ ಬಂದು ಯಾರ್ರಿ ಬೆಂಗ್ಳೂರು ಬೆಂಗ್ಳೂರು ಅಂತೇಳಿ ಕಂಡಕ್ಟರ್ರು ಕೂಗಕ್ಕೆ ಸುರು ಮಾಡ್ಕಂಡಿದ್ದ.
ಮೈಲಾರಿ ವೋಡೋಗಿ ಬಸ್ನಾಗೆ ಕೂತ್ಕಂಡು ನೋಡ್ತನೆ ಪಕ್ಕದ ಸೀಟ್ನಾಗೆ ದ್ಯಾವೇಗೌಡ್ರು ಪಕ್ಸದ ಎಂಎಲ್‌ಸಿ ಮರಿತಿಬ್ಬೇಗೌಡ್ರು ಕೂತ್ಕಂಡಿದ್ರು. ವೋ, ಗೌಡ್ರೆ, ಇದೇನು ಬಸ್ನಾಗೆ ವೊಂಟಿದ್ದೀರಿ. ವೂರು ಕಡೀಕಾ? ಅಲ್ಲ ನಿನ್ನೆ ಪೇಪರ್ನಾಗೆ ನ್ಯೂಜು ಬಂದಿತ್ತು. ನೀವು ಬಾವಿಗೆ ಬಿದ್ದೋದ್ರಿ ಅಂತ. ಅಲ್ಲ, ಬಾವಿಗೆ ಬೀಳೋಂಥದ್ದು ಏನಾಗಿತ್ತು ಅಂತೀನಿ. ನೀವು ಎಲ್ಲ ತಿಳ್ದೋರು. ಹಿಂಗಾ ಮಾಡಾದು? ರಾಜ್ಕೀಯ ಅಂದ್ಮೇಕೆ ವೊಂದು ಮಾತು ಬತ್ತದೆ, ವೊಂದು ಮಾತು ವೋತದೆ. ಅದುಕ್ಕೆ ವೋಗೋಗಿ ಬಾವಿಗೆ ಬೀಳೋದು ಸರೀನಾ? ಇದು ನಿಮ್ಗೆ ಸಿಲ್ಲಿ ಸಿಲ್ಲಿ ಅನ್ಸಾಕಿಲ್ವಾ?' ಅಂದ ಮೈಲಾರಿ.
'ಲೇ ಮುಚ್ಕಂಡು ಕೂತ್ಕಳಲೇ, ಬಾವಿಗೆ ಬೀಳಾದು ಅಂದ್ರೆ ವಿಧಾನ ಪರಿಸತ್ನಾಗೆ ಸ್ಪೀಕರ್ರು ಕುರ್ಚಿ ಮುಂದ್ಲಾಗಡೆ ಇರೋ ಏರಿಯಾ. ಅದ್ರೊಳಿಕ್ಕೆ ವೋದ್ರೆ ಬಾವಿಗೆ ಬೀಳಾದು ಅಂತ ಅರ್ಥ. ಅಂದ್ರೆ ಸಾಸ್ಕರು ಧರಣಿ ಸುರು ಹಚ್ಕಂಡ್ರು ಅಂತ ತಿಳ್ಕಬೇಕು' ಅಂದ್ರು ಮರಿತಿಬ್ಬೇಗೌಡ್ರು.
'ಹೋ ಇಸ್ಯ ಹಂಗಾ? ನೀವು ಪದೇ ಪದೇ ಬಾವಿಗೆ ಹಾರ್ಕಳಾದು ಯಾಕೆ ಅಂತ. ಸಣ್ಣ ವಯಸ್ನಾಗೆ ಈಜಕ್ಕೆ ಅಂತ ಬಾವಿಗೆ ಬಿದ್ದು ಬಿದ್ದು ಅಭ್ಯಾಸ ಆಗೋಗಿರ್ಬೇಕು ಅಲ್ವಾ?' ಅಂತ ಮೈಲಾರಿ ಕೇಳ್ದ. 'ಅಲ್ಲೇ ಇರಾದು ಐಡಿಯಾ ಕಣಲೇ, ರೋಡ್ನಾಗೆ ವೋಯ್ತಾಯಿದ್ರೆ ಯಾರಾದ್ರೂವೆ ನಮ್ ಕಡೀಕೆ ಗಮ್ನ ಕೊಟ್ಟು ನೋಡ್ತರೇನ್ಲಾ. ಅದೇ ಬಾವಿಗೆ ಬಿದ್ದೋಗು. ಅಯ್ಯೋ ಯಾರೋ ಬಿದ್ದೋದ್ರು ಎತ್ರೋ ಮಾಡ್ರೋ ಅಂತ ಕೂಗು ಹಾಕ್ಕಂಡು ಬತ್ತರೆ. ಹಂಗೆ ವಿಧಾನಸಭೆ ವೊಳ್ಗೆ, ವಿಧಾನ ಪರಿಸತ್ನಾಗೆ ಬಾವಿಗೆ ಬಿದ್ದೋದ್ರೆ ಎಲ್ರೂವೆ ನೋಡ್ತರೆ. ಪ್ರೆಪ್ರಾಗೆ ನ್ಯೂಜು ಬತ್ತದೆ, ಟೀವಿನೋರು ತೋರುಸ್ತರೆ. ಆವಾಗ ಪ್ರಚಾರ ಸಿಗಾಕಿಲ್ವಾ? ಹೆಂಗೆ ನನ್ ಐಡಿಯಾ?' ಅಂತ ಕೇಳುದ್ರು ಮರಿತಿಬ್ಬೇಗೌಡ್ರು.
'ವೋ, ಪೇಪ್ರಾಗೆ, ಟೀವಿನಾಗೆ ಬರ್ಬೇಕು ಅಂತೇಳಿ ನೀವು ಬಾವಿಗೆ ಬೀಳೋದಾ? ಏನು ತಲೆ ಸ್ವಾಮಿ ನಿಮ್ದು. ಸ್ಪೀಕರ್ರು ಸಾಹೇಬ್ರುಗೆ ಯೋಳಿ ಅಲ್ಲಿರೋ ಬಾವಿ ಮುಚ್ಚಾಕುಸ್ಬೇಕು' ಅಂದ ಮೈಲಾರಿ. 'ಬಾವಿ ಇಲ್ಲಾಂದ್ರೆ ಬೋರ್‌ವೆಲ್ ಇರ್ತದೆ ಬುಡ್ಲಾ' ಅಂತೇಳಿ ಗೌಡ್ರು ನಿದ್ದೆಗೆ ಜಾರ್ಕಂಬುಟ್ರು.
-ಕೆ.ವಿ.ಪ್ರಭಾಕರ್
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

