ಅಂಕಣಗಳು

ಪ್ರಜಾಪ್ರಭುತ್ವಕ್ಕೆ ಮಾರಕ ಈ ಕಾನೂನು ತಿರುಚುತಜ್ಞರು!

Published On :

ಉತ್ತರ ಪ್ರದೇಶದ ಪ್ರಮುಖ ಚುನಾವಣಾ ಗಿಮಿಕ್ ಆದ 'ಜಾತಿ ಆಧಾರಿತ ಸಾರ್ವಜನಿಕ ರ್ಯಾಲಿ' ನಡೆಸುವುದನ್ನು ನಿಷೇಧಿಸಿ ಅಲಹಾಬಾದ್ ಹೈಕೋರ್ಟ್ ಆದೇಶ ಹೊರಡಿಸಿದೆ. ಉತ್ತರ ಪ್ರದೇಶದ ಲೋಕಸೇವಾ ಆಯೋಗ, ಪ್ರಾಥಮಿಕ ಪರೀಕ್ಷೆಯ ಹಂತದಿಂದಲೇ ಮೀಸಲಾತಿ ನೀಡುವ ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ಈ ತೀರ್ಪು ಹೊರಬಿದ್ದಿದೆ. ಇದರಿಂದಾಗಿ ಬಹಳ ಗದ್ದಲಗಳಾದವು. ಕೆಲವರು ಕಾನೂನಿನ ಮೊರೆ ಹೋದರು, ಇನ್ನೂ ಕೆಲವು ವಿದ್ಯಾರ್ಥಿಗಳು ಮೀಸಲಾತಿಯನ್ನು ಬೆಂಬಲಿಸಿ ಬೀದಿಗಿಳಿದರು. ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ನಕಲು ನಡೆಯುತ್ತಿದೆ ಎನ್ನುವ ಆರೋಪಗಳೂ ಸೇರಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಕಲ್ಲು ತೂರಾಟಗಳಿಗೆ ಪ್ರತಿಯಾಗಿ ಲಾಠಿ ಚಾರ್ಜ್‌ಗಳು ನಡೆದವು! ಒಟ್ಟಿನಲ್ಲಿ ಭಾರತದ ಪ್ರಜಾಪ್ರಭುತ್ವ ಮತ್ತೊಮ್ಮೆ ಗೊಂದಲಮಯ ರೂಪ ತಾಳಿತು.
ರಾಜಕಾರಣಿಗಳು ಕಾನೂನಿನ ಜೊತೆ ಚೆಲ್ಲಾಟವಾಡಿದಾಗ ಇಡೀ ವ್ಯವಸ್ಥೆ ರೋಗಗ್ರಸ್ಥವಾಗುತ್ತದೆ. ಏಕೆಂದರೆ, ಭ್ರಷ್ಟಾಚಾರದಲ್ಲಿ ಸರ್ಕಾರದ ದೊಡ್ಡ ವ್ಯಕ್ತಿಗಳು ಭಾಗವಾಗಿರುತ್ತಾರೆ. ಹಾಗಾಗೇ ಭ್ರಷ್ಟಾಚಾರವನ್ನು ಅತಿ ದೊಡ್ಡ ಗಂಡಾಂತರ ಎಂದು ನೋಡಲಾಗುತ್ತದೆ. ಕಾನೂನನ್ನು ಕಾಪಾಡಬೇಕಾದವರು ಅದಕ್ಕೇ ಸವಾಲು ಹಾಕುತ್ತಿರುವುದು ದೇಶದ ಅತಿ ದೊಡ್ಡ ಸಮಸ್ಯೆ. ರಾಜಕೀಯವಾಗಿ ತಮಗೆ ಅನುಕೂಲ ಒದಗಿಸದಂಥ ನಿಯಮಗಳನ್ನೆಲ್ಲ ರಾಜಕಾರಣಿಗಳು ಕಡೆಗಣಿಸುತ್ತಾರೆ. ಆಡಳಿತ ವರ್ಗ ಹೀಗೆಯೇ ಮಾಡುತ್ತಿದ್ದರೆ ಜನಸಾಮಾನ್ಯರಿಗೆ ಕಾನೂನಿನ ಮೇಲಿರುವ ಗೌರವ ಕಡಿಮೆಯಾಗುವುದಿಲ್ಲವೇ? ಬಹುಶಃ ದೇಶಾದ್ಯಂತ ಮಹಿಳೆಯರು ಮತ್ತು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಈ ಅಂಶವೂ ಪ್ರಮುಖವಾಗಿ ಕಾರಣವೇನೋ?
ಮಹಾರಾಷ್ಟ್ರದ ಶಾಸಕರು ವಿಷಯವನ್ನೇ ತೆಗೆದುಕೊಳ್ಳಿ. ಬಾಂದ್ರಾ-ವರ್ಲಿಗೆ ಸಂಪರ್ಕ ಕೊಂಡಿಯಾದ ರಸ್ತೆಯಲ್ಲಿ ಜಾಗರೂಕವಾಗಿ ವಾಹನ ಚಾಲನೆ ಮಾಡಬೇಕು ಎನ್ನುವುದು ಎಂಥವರಿಗಾದರೂ ತಿಳಿದಿರುವಂಥದ್ದೆ. ಆದರೆ ಕ್ಷಿತಿಜ್ ಠಾಕೂರ್ ಎನ್ನುವ ಮಹಾನುಭಾವ ಈ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಓವರ್ ಸ್ಪೀಡಾಗಿ ಕಾರು ಚಾಲನೆ ಮಾಡುತ್ತಾ ಹೊರಟ. ಇದನ್ನು ಗಮನಿಸಿದ ಸೂರ್ಯವಂಶಿ ಎಂಬ ಪೊಲೀಸ್ ಅಧಿಕಾರಿ ಕೂಡಲೇ ಕ್ಷಿತಿಜ್‌ಗೆ ದಂಡ ಹಾಕಿದ. ಆದರೆ ಕ್ಷಿತಿಜ್ ಮುಂಬೈನ ಶಾಸಕ ಎನ್ನುವುದು ಬಡಪಾಯಿ ಸೂರ್ಯವಂಶಿಗೆ ಗೊತ್ತಿರಲಿಲ್ಲ! ಮರುದಿನ ಅಸೆಂಬ್ಲಿ ಆವರಣದಲ್ಲಿ ಹಾಜರಾಗಬೇಕೆಂದು ಸೂರ್ಯವಂಶಿಗೆ ಕ್ಷಿತಿಜ್‌ನಿಂದ ಆದೇಶ ಬಂದಿತು. ಮುಂದೆ ಆದದ್ದೇನು? ಮರುದಿನ ಹೇಳಿದ ಸಮಯಕ್ಕೆ ಅಸೆಂಬ್ಲಿಯೆದುರು ಹಾಜರಾದ ಸೂರ್ಯವಂಶಿಯನ್ನು ಕ್ಷಿತಿಜ್ ಠಾಕೂರ್ ಮತ್ತು ಆತನ ನಾಲ್ಕು ಮಿತ್ರರು(ಶಾಸಕರು) ಹೀನಾಯವಾಗಿ ಥಳಿಸಿದ್ದಾರೆ. ಬಡಪಾಯಿ ಸೂರ್ಯವಂಶಿ ಆಸ್ಪತ್ರೆ ಸೇರಬೇಕಾಯಿತಲ್ಲದೆ, ನಮ್ಮ 'ನಾಚಿಕೆಯಿಲ್ಲದ ಆಡಳಿತ' ಆತನನ್ನೂ ಕೆಲಸದಿಂದಲೂ ತೆಗೆದುಹಾಕಿತು!
ಈ ಘಟನೆಯ ವಿರುದ್ಧ ಸಾರ್ವಜನಿಕ ಪ್ರತಿಭಟನೆಗಳಾದವು. ಕೂಡಲೇ ಆ ಐದೂ ಶಾಸಕರನ್ನು ವಜಾಗೊಳಿಸಲಾಯಿತು. ಆದರೆ ಇದೊಂದು ಕಣ್ಣೊರೆಸುವ ತಂತ್ರವೆಂದು ಜನರಿಗೆ ಬಹಳ ಬೇಗ ಅರಿವಿಗೆ ಬಂತು. ಈ ಘಟನೆಯ ಕುರಿತು ವಿಚಾರಣೆ ನಡೆಸಲು ನೇಮಕವಾದ ಸಮಿತಿ ಹೇಳಿದ್ದು ಹೀಗೆ: 'ಸ್ಪೀಕರ್ ಈ ವಿಚಾರವಾಗಿ ಎಲ್ಲಾ ಮಾಹಿತಿಗಳನ್ನೂ ನೋಡಿ, ಆ ಐದೂ ಶಾಸಕರ ಅಮಾನತನ್ನು ಹಿಂಪಡೆಯಲು ಆದೇಶ ನೀಡಿದ್ದಾರೆ'!
ಪೊಲೀಸ್ ಅಧಿಕಾರಿ ಸೂರ್ಯವಂಶಿಗೆ ಥಳಿಸಿ, ವಜಾಗೊಂಡಿದ್ದ ಶಾಸಕರು ನಿಶ್ಚಿಂತೆಯಿಂದ ತಮ್ಮ ಸ್ಥಾನಕ್ಕೆ ಮರಳಿದರು. ವಿರೋಧ ಪಕ್ಷದ ನಾಯಕರೇನು ಈ ವಿಷಯದಲ್ಲಿ ಸುಮ್ಮನೆ ಕೂಡಲಿಲ್ಲ. ಎಲ್ಲಾ ತಪ್ಪು ಆ ಪೊಲೀಸ್ ಅಧಿಕಾರಿಯದ್ದೇ ಎಂದು ಹೇಳಿ ತಮ್ಮ 'ರಾಜಕೀಯ ಪ್ರೀತಿ'ಯನ್ನು ಹರಿಸಿದರು!
ಕೊಳ್ಳೆಹೊಡೆಯುವಾಗ ಮತ್ತು ಹೊಲಸು ಹಂಚಿಕೊಳ್ಳುವಾಗ ಮಾತ್ರ ವಿರೋಧ ಪಕ್ಷದ ನಾಯಕರಿಗೆ ಆಡಳಿತ ಪಕ್ಷದವರ ಮೇಲೆ ಎಲ್ಲಿಲ್ಲದ ಪ್ರೀತಿ. ಈಗ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳು ಬರಬೇಕು ಎನ್ನುವ ವಿಚಾರವನ್ನೂ ಇವರೆಲ್ಲರೂ ಒಕ್ಕೊರಲಿನಿಂದ ವಿರೋಧಿಸುತ್ತಿದ್ದಾರೆ. ಜನಸಾಮಾನ್ಯರ ರಕ್ಷಣೆಗಾಗಿ ಆರಿಸಿ ಬಂದ ನಮ್ಮ ರಾಜಕಾರಣಿಗಳು ನಿಜಕ್ಕೂ ಏನು ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಆರ್‌ಟಿಐ ಅತ್ಯುತ್ತಮ ಮಾರ್ಗವಾಗಿತ್ತು. ಈ ಅಸ್ತ್ರದ ಮೂಲಕ ಅವರನ್ನೆಲ್ಲ ಉತ್ತರದಾಯಿಯನ್ನಾಗಿ ಮಾಡಬಹುದಿತ್ತು.  ರಾಜಕೀಯ ಪಕ್ಷಗಳೂ ಕೂಡ ಆರ್‌ಟಿಐನ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಇತ್ತೀಚೆಗೆ ಕೇಂದ್ರ ಮಾಹಿತಿ ಆಯೋಗ ಹೇಳಿದಾಗ, ನಿಜಕ್ಕೂ ಇದು ಪ್ರಜಾಪ್ರಭುತ್ವದ ಗೆಲುವು ಎಂದೇ ಜನತೆ ಸಂಭ್ರಮಿಸಿದ್ದರು.
ಆದರೆ ಈ ಸಾಂವಿಧಾನಿಕ ಆದೇಶವನ್ನು ನಮ್ಮ ರಾಜಕೀಯ ಪಕ್ಷಗಳು ಉಲ್ಲಂಘಿಸಿವೆ. ಎಲ್ಲಾ ಪಕ್ಷಗಳಿಗೂ ತಮ್ಮ ತಮ್ಮ ಕುಕೃತ್ಯಗಳನ್ನು ಮುಚ್ಚಿಡುವುದರಲ್ಲೇ ಹೆಚ್ಚು ಮುತುವರ್ಜಿ. ಹಾಗಾಗೇ ತಮ್ಮನ್ನು ಉತ್ತರದಾಯಿಯಾಗಿಸುವ ಸಿಐಸಿಯ ನಡೆಯನ್ನು ಅವು ಕಾಲಲ್ಲೊದ್ದಿದ್ದಿವೆ. ಗಮನಿಸಲೇಬೇಕಾದ ಅಂಶವೆಂದರೆ, ಯಾವ ಪಕ್ಷವೂ ಕೂಡ ಸಿಐಸಿ(ಮಾಹಿತಿ ಆಯೋಗ)ಯ ನಡೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲಿಲ್ಲ ಎನ್ನುವುದು. ಹಾಗೆ ನೋಡಿದರೆ ಆ ಪಕ್ಷಗಳಲ್ಲೇ ಹೆಸರಾಂತ 'ಕಾನೂನು ಜ್ಞಾನನಿಧಿ'ಗಳಿದ್ದಾರೆ. ತಮ್ಮನ್ನು ಮಾಹಿತಿ ಹಕ್ಕು ಕಾಯ್ದೆಯಡಿ ತರುವುದು ಏಕೆ ತರವಲ್ಲ ಎನ್ನುವುದನ್ನು ಅವರು ನ್ಯಾಯಾಲಯಕ್ಕೆ ವಿವರಿಸಬಹುದಿತ್ತು. ಆದರೆ ಅದರ ಬದಲಾಗಿ ಸಿಐಸಿಯ ಆದೇಶವನ್ನು 'ಕೆಟ್ಟ ಕಾನೂನು' ಎಂದು ಜರಿದು ನುಣುಚಿಕೊಂಡಿದ್ದಾರೆ. ರಾಜಕಾರಣಿಗಳು, ತಮಗೆ ಕಾನೂನು ರೂಪಿಸುವ ಅಧಿಕಾರವಿದೆಯೆಂಬ ಕಾರಣಕ್ಕೆ ತಮ್ಮ ವೈಯಕ್ತಿಕ ಆಸಕ್ತಿಗಳಿಗೆ ಅಡ್ಡಿಯಾಗುವಂಥ ವಿಷಯಗಳನ್ನೆಲ್ಲ ಹೇಗೆ ಕಡೆಗಣಿಸುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೆ. ಮುಂಬೈನಲ್ಲಿ 12 ರುಪಾಯಿಗೆ ಊಟ ಸಿಗುತ್ತದೆ ಎಂದು ಹೇಳಿರುವ ಕೆಲವು ಕಾಂಗ್ರೆಸ್ಸಿಗರು ನಿಜಕ್ಕೂ ಹುಚ್ಚರೆ. ಅವರನ್ನು ಕೂಡಲೇ ಹುಚ್ಚಾಸ್ಪತ್ರೆಗೆ ಸೇರಿಸುವುದು ಒಳಿತು. ಆದರೆ, ತಮಗೆ ಒಗ್ಗುವಂಥ ಕಾನೂನನ್ನಷ್ಟೇ ಪರಿಪಾಲಿಸುವಂಥ ಶಾಸಕರು ಮತ್ತು ಸಂಸದರು ಅವರಿಗಿಂತಲೂ ಅಪಾಯಕಾರಿಗಳು. ನಮ್ಮ ಪ್ರಜಾಪ್ರಭುತ್ವಕ್ಕೆ ನಿಜಕ್ಕೂ ಅಪಾಯವಿರುವುದು ಉತ್ತರ ಪ್ರದೇಶದ 'ಜಾತಿ ಪ್ರತಿಪಾದಕ', ಮುಂಬೈನ 'ಸ್ಪೀಡ್ ಬ್ರೇಕರ್‌' ಮತ್ತು ದೆಹಲಿಯ 'ಕಾನೂನು ತಿರುಚುತಜ್ಞ'ರಂಥ ರಾಜಕಾರಣಿಗಳಿಂದಲೇ. ಈ ಸಮಯದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಹೇಳಿದ ಮಾತೊಂದು ನೆನಪಾಗುತ್ತಿದೆ- 'ದಬ್ಬಾಳಿಕೆ ಮಾಡುವವನು ತಾನೇ ಖುದ್ದಾಗಿ ಮುಂದೆ ಬಂದು ಜನರಿಗೆ ಅವರ ಹಕ್ಕನ್ನು ಕೊಡುವುದಿಲ್ಲ, ದಬ್ಬಾಳಿಕೆಗೊಳಗಾದವರೇ ಅದನ್ನು ಪಡೆಯಲು ಪ್ರಯತ್ನಿಸಬೇಕು'!
ಜನತೆಯ ಧ್ವನಿಯನ್ನು ಬಹಳ ಕಾಲ ಅದುಮಿಟ್ಟರೆ, ಒತ್ತಡ ಹೆಚ್ಚಾಗಿ ಅದು ಸ್ಫೋಟದ ರೂಪದಲ್ಲಿ ಅನಾವರಣಗೊಳ್ಳಬಹುದು!

-ಟಿಜೆಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.