ಅಂಕಣಗಳು

ಎಲ್ಲರ ಕಣ್ಮುಂದೆಯೇ ಮಿರಾಕಲ್ ನಡೆಯಿತು!

Published On :

ಅದೊಂದು ಪುಟ್ಟ ಕುಟುಂಬ. ಗಂಡ-ಹೆಂಡತಿ, ಮಗ-ಮಗಳು ಆ ಕುಟುಂಬದ ಸದಸ್ಯರು, ಮಗಳಿಗೆ ಎಂಟು ವರ್ಷವಾಗಿತ್ತು. ಮಗನ ನಾಲ್ಕನೇ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಲು ಆ ದಂಪತಿ 6 ತಿಂಗಳು ಮೊದಲೇ ನಿರ್ಧರಿಸಿದ್ದರು.
ಹೀಗಿರುವಾಗಲೇ ಗಂಡು ಮಗುವಿಗೆ ತಲೆಯ ಹಿಂಭಾಗದಲ್ಲಿ ಬೊಕ್ಕೆಯಂಥ ಗಾಯವೊಂದು ಕಾಣಿಸಿಕೊಂಡಿತು. ಅಂದಿನಿಂದ ಮಗು ದಿನವಿಡೀ ಒಂದೇ ಸಮನೆ ಅಳಲು ಪ್ರಾರಂಭಿಸಿತು. ಆ ದಂಪತಿ ಉಳಿದೆಲ್ಲರಂತೆಯೇ ಆಸ್ಪತ್ರೆಗೆ ಹೋದರು. ಮುಲಾಮು ಸವರಿದರು. ಮಾತ್ರೆ ನುಂಗಿಸಿದರು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಗಾಯದಲ್ಲಿ ಕ್ರಮೇಣ ಕೀವು ತುಂಬಿಕೊಂಡು ಸೋರತೊಡಗಿತು. ಗಾಯದ ತೀವ್ರತೆ ಹೆಚ್ಚಿದಂತೆಲ್ಲ ಮಗುವಿನ ಚೀರಾಟವೂ ಹೆಚ್ಚಿತು. ಈ ಸಂದರ್ಭದಲ್ಲಿ ಮಗುವನ್ನು ಹುಷಾರಾಗಿ ನೋಡಿಕೊಳ್ಳುವ ನಿರ್ಧಾರಕ್ಕೆ ಬಂದ ಹೆಂಡತಿ, ಮರುದಿನದಿಂದಲೇ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದಳು. ಮಗುವನ್ನು ಉಳಿಸಿಕೊಳ್ಳಲೇಬೇಕು ಎಂಬ ಮಹದಾಸೆಯಿಂದ ಆ ದಂಪತಿ ಒಂದೊಂದೇ ಆಸ್ಪತ್ರೆಯ ಮೆಟ್ಟಿಲು ಸವೆಸಿದರು. ಉಹುಂ, ಏನೆಂದರೆ ಏನೂ ಪ್ರಯೋಜನವಾಗಲಿಲ್ಲ. ದಿನಗಳು ಕಳೆದಂತೆಲ್ಲ ಮಗುವಿನ ಆರೋಗ್ಯ ಕ್ಷೀಣಿಸತೊಡಗಿತು.
ಅದೊಂದು ಮಧ್ಯರಾತ್ರಿ ಹೆಂಡತಿಯನ್ನು ಎಬ್ಬಿಸಿದ ಗಂಡ ಹೇಳಿದ: 'ಪರಿಚಯದ ಎಲ್ಲರ ಬಳಿಯೂ ಸಾಲ ಮಾಡಿದೆ. ಮಗುವನ್ನು ಉಳಿಸ್ಕೋಬೇಕು ಅಂತಾನೇ ಬಾಡಿಗೆ ಕಡಿಮೆ ಇರುವ ಏರಿಯಾಕ್ಕೆ ಮನೆ ಬದಲಿಸಿದೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ಮಗುವಿಗೆ ದೊಡ್ಡ ಕಾಯಿಲೇನೇ ಬಂದಿದೆ. ಮಿರಾಕಲ್‌ನಿಂದ ಮಾತ್ರ ಮಗುವಿನ ಜೀವ ಉಳಿಸಲು ಸಾಧ್ಯ ಎಂದು ಡಾಕ್ಟರು ಸ್ಪಷ್ಟವಾಗಿ ಹೇಳಿದ್ದಾರೆ. ಮುಂದೆ ಏನು ಮಾಡಬೇಕೆಂದು ನನಗಂತೂ ಗೊತ್ತಾಗ್ತಾ ಇಲ್ಲ. ಮಗುವನ್ನು ಬಿಟ್ಟು ಬದುಕುವುದಂತೂ ನನ್ನಿಂದ ಸಾಧ್ಯವಿಲ್ಲ...' ಆ ಗಂಡ-ಹೆಂಡತಿ, ಇಡೀ ರಾತ್ರಿಯನ್ನು ಗೋಳಾಡುತ್ತಲೇ ಕಳೆದರು.
ಮರುದಿನ, ಈ ಎಂಟು ವರ್ಷದ ಹುಡುಗಿ ಅಪ್ಪ-ಅಮ್ಮನಿಗೆ ಗೊತ್ತಾಗದಂತೆ ತಾನು ಸಂಗ್ರಹಿಸಿಟ್ಟಿದ್ದ ಹಣವನ್ನು ಪೆಟ್ಟಿಗೆಯಿಂದ ಹೊರತೆಗೆದಳು. ಅದು ಸರಿಯಾಗಿ ಮೂರು ಡಾಲರ್ ಇತ್ತು. ರಾತ್ರಿ ಅಪ್ಪ ಅಮ್ಮ ಮಾತಾಡಿದ್ದನ್ನು, ಇಡೀ ರಾತ್ರಿ ಕಣ್ಣೀರು ಸುರಿಸಿದ್ದನ್ನು ಈಕೆ ನೋಡಿಬಿಟ್ಟಿದ್ದಳು. ಸಿಕ್ಕಿದ ಅಷ್ಟೂ ಹಣವನ್ನು ಜೇಬಲ್ಲಿಟ್ಟುಕೊಂಡು ಮನೆಗೆ ಹತ್ತಿರವಿದ್ದ ಮೆಡಿಕಲ್ ಸ್ಟೋರ್‌ಗೆ ಬಂದಳು.
ಸ್ಟೋರ್‌ನ ಮಾಲೀಕ, ಜೊತೆಗಿದ್ದ ಮತ್ತೊಬ್ಬನೊಂದಿಗೆ ಅದು ಇದೂ ಮಾತಾಡುತ್ತಲೇ ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತಿದ್ದ. ಕೆಲವೇ ನಿಮಿಷಗಳಲ್ಲಿ ಗ್ರಾಹಕರ ಗುಂಪು ಕರಗಿತು. ಸ್ಟೋರ್‌ನ ಒಳಗಿದ್ದವರು ಈ ಬಾಲೆಯನ್ನು ಗಮನಿಸದೆ ಹರಟೆಯಲ್ಲಿ ಮಗ್ನರಾದರು. ಐದು ನಿಮಿಷ ಕಾದಳು ಹುಡುಗಿ. ಅವರು ತಿರುಗಿ ನೋಡಲಿಲ್ಲ. ಈಕೆ ಒಮ್ಮೆ ಸಣ್ಣದಾಗಿ ಕೆಮ್ಮಿದಳು. ಅವರು ಗಮನಿಸಲಿಲ್ಲ. ಅಂಕಲ್ ಎಂದಳು. ಅವರಿಗದು ಕೇಳಿಸಲಿಲ್ಲ. ಕಡೆಗೆ ಕೈಲಿದ್ದ ನಾಣ್ಯದಿಂದ ಗಾಜಿನ ಮೇಲೆ ಕುಟ್ಟಿ, ದನಿ ಎತ್ತರಿಸಿ -ಅಂಕಲ್ ಎಂದು ಬಿಟ್ಟಳು.
ಒಂದರ್ಥದಲ್ಲಿ ಚೀರಿದಂತಿದ್ದ ಆ ಸದ್ದಿನಿಂದ ಮೆಡಿಕಲ್ ಸ್ಟೋರ್‌ನ ಮಾಲೀಕನಿಗೆ ಸಿಟ್ಟು ಬಂತು. ಆತ ಸಿಡಿಮಿಡಿಯಿಂದ -'ನಾನಿಲ್ಲಿ ನಮ್ಮ ಅಣ್ಣನ ಜೊತೆ ಮಾತಾಡ್ತಿರೋದು ಕಾಣಿಸ್ತಾ ಇಲ್ವಾ? ಯಾಕೆ ಹಾಗೆ ಬಡ್ಕೋತಿದೀಯ? ಏನು ಬೇಕಾಗಿತ್ತು ನಿಂಗೆ?' ಎಂದು ಚೀರಿದ.
ಅಂಗಡಿ ಮಾಲೀಕನ ದರ್ಪದ ಮಾತು ಕೇಳಿ ಆ ಹುಡುಗಿಗೆ ಅಳುವೇ ಬಂತು. ಆಕೆ ಆರ್ದ್ರಳಾಗಿ ನೋಡುತ್ತಾ ಹೇಳಿದಳು: 'ಅಂಕಲ್, ನಾನು ತಮ್ಮನಿಗೆ ಔಷಧಿ ತಗೊಳ್ಳೋಕ್ಕೆ ಬಂದಿದೀನಿ. ಅವನಿಗೆ ತುಂಬಾನೇ ಹುಷಾರಿಲ್ಲ. ಮಿರಾಕಲ್‌ನಿಂದ ಮಾತ್ರ ಅವನು ಬದುಕಲು ಸಾಧ್ಯ ಎಂದು ಡಾಕ್ಟರ್ ಹೇಳಿದರಂತೆ. ಹಾಗಂತ ಪಪ್ಪ ರಾತ್ರಿ ಮಮ್ಮಿಗೆ ಅಳುತ್ತಾ ಹೇಳಿದ್ರು. ನನ್ನ ಹತ್ತಿರ ಮೂರು ಡಾಲರ್ ಇದೆ ಅಂಕಲ್. ಪ್ಲೀಸ್ ಅಂಕಲ್, ಮಿರಾಕಲ್ ಅಂತಾರಲ್ಲ, ಅದನ್ನು ಕೊಡಿ ಅಂಕಲ್, ನಂಗೆ ತಮ್ಮ ಬೇಕು ಅಂಕಲ್. ಪ್ಲೀಸ್, ಹೆಲ್ಪ್ ಮಿ ಅಂಕಲ್...'
ಈ ಹುಡುಗಿಯ ದನಿಯಲ್ಲಿದ್ದ ಆರ್ದ್ರತೆ ಮೆಡಿಕಲ್ ಸ್ಟೋರ್ ಮಾಲೀಕನ ಕರುಳು ತಾಕಿತು. ಆತ ಈ ಹುಡುಗಿಯನ್ನು ಹತ್ತಿರ ಕರೆದು ಎಲ್ಲವನ್ನೂ ವಿಚಾರಿಸಿದ. ತನ್ನದೇ ಬಾಲಭಾಷೆಯಲ್ಲಿ ಎಲ್ಲವನ್ನೂ ವಿವರಿಸಿದ ಆಕೆ, ಹಣ ತೆಗೆದು ಅವನ ಮುಂದಿಟ್ಟು-'ಈಗಲಾದ್ರೂ ಮಿರಾಕಲ್ ಕೊಡಿ ಅಂಕಲ್ ಅಂದಳು.
'ಐ ಯಾಂ ಸಾರಿ. ನಮ್ಮ ಅಂಗಡೀಲಿ ಮಿರಾಕಲ್ಸ್ ಇಲ್ಲ. ಅದು ಎಲ್ಲಿ ಸಿಗುತ್ತೆ ಅಂತ ಕೂಡ ನನಗೆ ಗೊತ್ತಿಲ್ಲ. ಈ ವಿಷಯದಲ್ಲಿ ಕ್ಷಮಿಸಿ ಬಿಡು ಕಂದಾ' ಎಂದ ಮೆಡಿಕಲ್ ಸ್ಟೋರ್‌ನ ಮಾಲೀಕ, ಈ ಹುಡುಗಿಯನ್ನು ಮನೆಗೆ ಕಳಿಸಲು ಮುಂದಾದ. ಬಹುಷಃ ಔಷಧದ ಬೆಲೆ ಹೆಚ್ಚಿರಬೇಕು. ಅದಕ್ಕೇ ಈತ ನಿರಾಕರಣೆಯ ಮಾತಾಡುತ್ತಿದ್ದಾನೆ ಎಂದು ಭಾವಿಸಿದ ಆ ಹುಡುಗಿ -'ಅಂಕಲ್, ದುಡ್ಡು ಜಾಸ್ತಿಯಾದ್ರೆ ನಾನು ಮನೆಯಿಂದ ತಂದುಕೊಡ್ತೇನೆ. ನಂಗೆ ತಮ್ಮ ಬೇಕೇ ಬೇಕು ಅಂಕಲ್. ಅವನ ಕಾಯಿಲೆ ವಾಸಿಯಾಗೋಕೆ ಮಿರಾಕಲ್ ಕೊಡಿ ಪ್ಲೀಸ್‌' ಎಂದಳು. ಈ ಹುಡುಗೀದು ಯಾಕೋ ಅತಿಯಾಯ್ತು ಎಂದುಕೊಂಡ ಮೆಡಿಕಲ್ ಸ್ಟೋರ್ ಮಾಲೀಕ- 'ಅದು ನಮ್ಮ ಅಂಗಡೀಲಿ ಮಾತ್ರವಲ್ಲ, ಯಾವ ಅಂಗಡೀಲೂ ಸಿಗೋದಿಲ್ಲ' ಅಂದುಬಿಟ್ಟ.
ಈ ಮಾತು ಕೇಳುತ್ತಿದ್ದಂತೆಯೇ ಆ ಬಾಲೆಯ ಮುಖ ವಿವರ್ಣಗೊಂಡಿತು. ಹೌದಾ? ಮಿರಾಕಲ್ ಎಲ್ಲೂ ಸಿಗಲ್ವಾ? ಹಂಗಾದ್ರೆ ನನ್ನ ತಮ್ಮ ಬದುಕೋದಿಲ್ವಾ ಎನ್ನುತ್ತಲೇ ಆಕೆ ಬಿಕ್ಕಳಿಸಿ ಅಳತೊಡಗಿದಳು. ಅದುವರೆಗೂ ಮೆಡಿಕಲ್ ಸ್ಟೋರ್‌ನ ಮತ್ತೊಂದು ಬದಿಯಲ್ಲಿ ನಿಂತಿದ್ದ ಯುವಕ ಹೊರಬಂದು -'ನನ್ನ ಹತ್ರ ಮಿರಾಕಲ್ ಇದೆಯಮ್ಮಾ. ಅದಕ್ಕೆ ಮೂರು ಡಾಲರ್ ಆಗುತ್ತೆ. ಆದ್ರೆ ಮಿರಾಕಲ್‌ನ ನಿನ್ನ ಕೈಲಿ ಕೊಡಲ್ಲ. ನಾನೇ ಬಂದು ನಿನ್ನ ತಮ್ಮನಿಗೆ ಕೊಡ್ತೇನೆ. ನಿಮ್ಮ ಮನೆ ತೋರಿಸು' ಎಂದ. ಹಾಗೆ ಹೇಳಿದಾತ ಬೇರೆ ಯಾರೂ ಅಲ್ಲ. ಅಮೆರಿಕದ ಹೆಸರಾಂತ ವೈದ್ಯ ಡಾ. ಕಾರ್ಲಟನ್ ಆರ್ಮ್‌ಸ್ಟ್ರಾಂಗ್. ರಜೆಯ ನೆಪದಲ್ಲಿ ಆತ ಮೆಡಿಕಲ್ ಸ್ಟೋರ್‌ನಲ್ಲಿ ಹರಟುತ್ತಾ ಕುಳಿತಿದ್ದಾಗ ಈ ಪ್ರಸಂಗ ನಡೆದಿತ್ತು. ಮುಂದೆ ಆರ್ಮ್‌ಸ್ಟ್ರಾಂಗ್, ಆ ಬಾಲಕಿಯ ಮನೆಗೆ ಹೋದವನೇ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ತನ್ನದೇ ಖರ್ಚಿನಲ್ಲಿ ಆಪರೇಷನ್ ಮಾಡಿದ. ಒಂದು ಪವಾಡ ಎಲ್ಲರ ಕಣ್ಮುಂದೆಯೇ ನಡೆದು ಹೋಯಿತು...
---
ಪ್ರತೀ ವಾರ ಬರೀ ಪಿ.ಜಿ. ಸುದ್ದೀನೇ ಬರೀತೀಯ. ಬೇರೆಯದೂ ಸ್ವಲ್ಪ ಬರಿ ಎಂದ ಹಲವರ ಸಲಹೆಯನ್ನು ಪಾಲಿಸುತ್ತಾ ಈ ಬರಹ. ಅಮೆರಿಕದಲ್ಲಿ ನಡೆಯಿತು ಎನ್ನಲಾದ ಈ ಪ್ರಸಂಗ ನಿಮಗೆ ಇಷ್ಟವಾಯ್ತಾ?

-ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.