ಕೈ ಕೊಡುವವರ ನಡುವೆ ಕೈ ಹಿಡಿವ ಹೃದಯವಂತರು
ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರಿಬ್ಬರ ಮಧ್ಯೆ ಪ್ರೀತಿಯ ಬಳ್ಳಿ ಚಿಗುರಿದ್ದು...

'ಹೇಗಿದ್ರೂ ಆಫೀಸ್ ಕೆಲಸದ ಮೇಲೆ ಮಂಗಳೂರಿಗೆ ಹೋಗ್ತಾ ಇದೀವಿ. ಕಾರ್‌ನಲ್ಲೇ ಹೋಗೋಣ. ಇಬ್ಬರೂ ಡ್ರೈವ್ ಮಾಡೋಣ. ಆಗ ಮಾರ್ಗಾಯಾಸ ಆಗುವುದಿಲ್ಲ. ಮೀಟಿಂಗ್ ಮುಗಿಸ್ಕೊಂಡು ಅರ್ಧದಿನದ ಮಟ್ಟಿಗೆ ನಮ್ಮ ಊರಿಗೆ ಹೋಗೋಣ. ಸೊಸೆಯಾಗುವ ಹುಡುಗಿಯನ್ನು ನಮ್ಮ ಅಪ್ಪ-ಅಮ್ಮನೂ ನೋಡಲಿ. ಆಮೇಲೆ ಬೆಂಗಳೂರಿಗೆ ಹೊರಟು ಬಿಡೋಣ' ಹಾಗಂತ ಮಾಧವ ಹದಿನೈದು ದಿನ ಮೊದಲೇ ಹೇಳಿದ್ದ. ರೇವತಿಯೂ ಈ ಮಾತಿಗೆ ಒಪ್ಪಿಗೆ ಸೂಚಿಸಿದ್ದಳು. ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರಿಬ್ಬರ ಮಧ್ಯೆ ಪ್ರೀತಿಯ ಬಳ್ಳಿ ಚಿಗುರಿದ್ದು ಎರಡು ವರ್ಷಗಳ ಹಿಂದೆ. ಈ ಅವಧಿಯಲ್ಲಿ ರೇವತಿಯನ್ನು ತನ್ನ ಪೋಷಕರಿಗೆ ತೋರಿಸಲು ಮಾಧವ ಐದಾರು ಬಾರಿ ಪ್ರಯತ್ನಿಸಿದ್ದ. ಆದರೆ ಸಾಧ್ಯವಾಗಿರಲಿಲ್ಲ.
ರೇವತಿಯನ್ನು ಕಂಡು ಮಾಧವನ ಕುಟುಂಬದವರೆಲ್ಲ ಖುಷಿಪಟ್ಟರು. ಒಂದು ರಾತ್ರಿ ಇಲ್ಲಿಯೇ ಇದ್ದು ಹೋಗಿ ಎಂದು ಒತ್ತಾಯಪೂರ್ವಕ ಉಳಿಸಿಕೊಂಡರು. ಮರುದಿನ ತಿಂಡಿ ಮುಗಿಸಿ ಕಾರ್ ಹತ್ತಬೇಕು; ಅಷ್ಟರಲ್ಲಿಯೇ ಜಗುಲಿಯ ಮೇಲೆ ಕೂತಿದ್ದ ಮಾಧವನ ಅಜ್ಜಿ ತಲೆ ತಿರುಗಿ ಬಿದ್ದು ಬಿಟ್ಟರು. ತಕ್ಷಣವೇ ಆಸ್ಪತ್ರೆಗೆ ಹೋದರೆ-'ಲಘು ಹೃದಯಾಘಾತವಾಗಿದೆ. ಐದಾರು ದಿನ ಆಸ್ಪತ್ರೆಯಲ್ಲೇ ಇರಬೇಕಾಗುತ್ತೆ' ಎಂದು ವೈದ್ಯರು ಸ್ಪಷ್ಟವಾಗಿ ಹೇಳಿದರು. ಇಂಥ ಸಂಕಟದ ಸಂದರ್ಭದಲ್ಲಿ ಎಲ್ಲರನ್ನೂ ಬಿಟ್ಟು ಬೆಂಗಳೂರಿಗೆ ತೆರಳಲು ಮಾಧವನಿಗೆ ಮನಸ್ಸು ಒಪ್ಪಲಿಲ್ಲ. ಆಫೀಸಿಗೆ ಸಂಬಂಧಿಸಿದ ಕೆಲವು ಅತಿ ಮುಖ್ಯ ಫೈಲ್‌ಗಳು, ಲಕ್ಷಾಂತರ ರೂ. ಬೆಲೆಯ ಚೆಕ್‌ಗಳು ರೇವತಿಯ ಬಳಿ ಇದ್ದುದರಿಂದ ಪ್ರಯಾಣವನ್ನು ರದ್ದುಪಡಿಸುವುದೂ ಸಾಧ್ಯವಿರಲಿಲ್ಲ. ರೇವತಿಯನ್ನು ಕಳಿಸಿ ಎರಡು ದಿನಗಳ ನಂತರ ಪ್ರಯಾಣ ಆರಂಭಿಸಲು ನಿರ್ಧರಿಸಿದ ಮಾಧವ ಹೀಗೆಂದ: 'ಈಗ ಧರ್ಮಸ್ಥಳಕ್ಕೆ ಹೊರಟು ಬಿಡೋಣ. ಅರ್ಧ ಗಂಟೇಲಿ ದೇವರದರ್ಶನ ಮುಗಿಯುತ್ತೆ. ಅಲ್ಲಿಂದ ನೀನು ಕಾರ್‌ನಲ್ಲಿ ಬೆಂಗಳೂರಿಗೆ ಹೊರಟು ಬಿಡು. ಸಂಜೆಯೊಳಗೆ ಬೆಂಗಳೂರು ತಲುಪಬಹುದು. ನಾನು ದೇವಸ್ಥಾನದಿಂದ ನೇರವಾಗಿ ಆಸ್ಪತ್ರೆಗೆ ಹೋಗ್ತೇನೆ. ದೇವರ ಪ್ರಸಾದ ಕಂಡರೆ ಅಜ್ಜಿಗೂ ಖುಷಿಯಾಗುತ್ತೆ...'
'ಧರ್ಮಸ್ಥಳ ದಾಟಿದ್ರೆ ಮೊದಲು ನಿಡ್ಲೆ, ಆಮೇಲೆ ಕೊಕ್ಕಡ, ಆದಾದ ಮೇಲೆ ಉಡಾಣೆ, ಆನಂತರ ಶಿರಾಡಿಘಾಟ್, ಅದರ ನಂತರ ಗುಂಡ್ಯ, ಅದೂ ಮುಗಿದ ಮೇಲೆ ಮಾರನಹಳ್ಳಿ, ಆಮೇಲಾಮೇಲೆ ಕಾಡಮನೆ, ಅದನ್ನ ದಾಟಿದ್ರೆ ದೋಣಿಗಲ್ ಸಿಗುತ್ತೆ. ಆನಂತರದಲ್ಲಿ ಸಿಗುವುದೇ ಸಕಲೇಶಪುರ. ಅಲ್ಲಿಂದಾಚೆಗೆ ನ್ಯಾಷನಲ್ ಹೈವೇ. ಯಾವುದೇ ಚಿಂತೆಯಿಲ್ಲದೆ ಆರಾಮಾಗಿ ಡ್ರೈವ್ ಮಾಡಬಹುದು...' ಮಾಧವನ ಮಾತುಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಡ್ರೈವ್ ಮಾಡುತ್ತಿದ್ದಳು ರೇವತಿ.
ಫಾಟ್ ಸೆಕ್ಷನ್ ಶುರುವಾದ ತಕ್ಷಣ ಹೇರ್‌ಪಿನ್ ತಿರುವುಗಳು ಮತ್ತು ಕತ್ತಲು ಒಟ್ಟಿಗೇ ಜೊತೆಯಾದವು. ಮಧ್ಯಾಹ್ನ 12 ಗಂಟೆಯ ಹೊತ್ತಿನಲ್ಲೇ, ಸಂಜೆ 7 ಗಂಟೆಗೆ ಎದುರಾಗುವಂಥ ಕತ್ತಲು ಆವರಿಸಿಕೊಂಡಿತ್ತು. ಎದುರಿಗಿದ್ದ ಹಾದಿಯನ್ನು ನೋಡಿ ಆಶ್ಚರ್ಯ, ಉದ್ವೇಗದಿಂದ ರೇವತಿ ತನಗೆ ತಾನೆ ಹೇಳಿಕೊಂಡಳು: ಬಲಗಡೆಗೆ ಕಣ್ಣು ಹಾಯಿಸಿದರೆ ತಳ ಕಾಣಿಸದಂಥಾ ಕತ್ತಲ ಪ್ರಪಾತ. ಹಾಗೇ ಇನ್ನೂ ಮುಂದಕ್ಕೆ ದೃಷ್ಟಿ ಹಾಯಿಸಿದರೆ ರಮ್ಯಾದ್ಭುತ ಹಸಿರ ರಾಶಿ. ನಡುವಿನ ಕೊರಕಲ ಕಣಿವೆಗೆ ಬಿದ್ದು ಅದೆಷ್ಟು ಜೀವಗಳು ಕೊನೆಯಾಗಿವೆಯೋ; ಬಹುಶಃ ಅದರ ಲೆಕ್ಕ ಸ್ವತಃ ಕಣಿವೆಗೂ ಗೊತ್ತಿರಲಿಕ್ಕಿಲ್ಲ. ಈ ಗೊಂಡಾರಣ್ಯದಲ್ಲಿ ಉದ್ದಕ್ಕೂ ಯಮಸ್ವರೂಪಿ ತಿರುವುಗಳದ್ದೇ ಕಾರುಬಾರು. ಇಷ್ಟು ಸಾಲದೆಂಬಂತೆ ಆಗಾಗ್ಗೆ ಭರ್ರೋ ಎಂದು ಬೀಸಿ ಗಡಗಡ ನಡುಗಿಸುವ ಕುಳಿರ್ಗಾಳಿ ಬೇರೆ. ಮಾರ್ಗಮಧ್ಯೆ ಏನಾದರೂ ತೊಂದರೆಯಿಂದಾಗಿ ಸಹಾಯಕ್ಕಾಗಿ ಪ್ರಾರ್ಥಿಸೋಣವೆಂದರೆ ಸುತ್ತಮುತ್ತ ಯಾರೂ ಇರುವುದಿಲ್ಲ. ಏನಾದರಾಗಲಿ, ಈ ಘಾಟ್ ಸೆಕ್ಷನ್‌ನಿಂದ ಬೇಗ ಆಚೆ ಹೋಗಬೇಕು. ಹೀಗೆಲ್ಲ ಅಂದುಕೊಂಡು ತುಂಬ ಎಚ್ಚರಿಕೆಯಿಂದಲೇ ಒಂದೊಂದೇ ಕರ್ವ್ ಮುಗಿಸುತ್ತಿದ್ದಳು ರೇವತಿ. ಹದಿನಾಲ್ಕನೇ ಕರ್ವ್ ದಾಟಿ ಹದಿನೈದಕ್ಕೆ ಬರುತ್ತಿದ್ದಂತೆಯೇ ಕಾರು ಗಕ್ಕನೆ ನಿಂತು ಹೋಯಿತು.
ಇಂಥದೊಂದು ಸಂದರ್ಭ ಎದುರಾಗಬಹುದೆಂಬ ಕಲ್ಪನೆಯೇ ರೇವತಿಗೆ ಇರಲಿಲ್ಲ. ಆಕೆ ಕಂಗಾಲಾದಳು. ತಕ್ಷಣವೇ ಕಾರ್‌ನಿಂದ ಇಳಿದು ಬಾನೆಟ್ ಎತ್ತಿ ನೋಡಿದಳು. ಇಂಜಿನ್‌ನಿಂದ ಬುಸು ಬುಸು ಶಬ್ದ ಬರುತ್ತಿತ್ತು. ಮತ್ತೇನು ತೊಂದರೆಯಾಗಿರಬಹುದು ಎಂದು ಪರೀಕ್ಷಿಸಿದಾಗ, ಎಡಗಡೆಯ ಟೈರ್ ಪಂಕ್ಚರ್ ಆಗಿರುವುದು ಕಾಣಿಸಿತು. ಕಾರ್‌ನೊಳಗೆ ಲಕ್ಷಾಂತರ ರು. ಮೌಲ್ಯದ ಚೆಕ್‌ಗಳಿವೆ. ಅಮೂಲ್ಯ ದಾಖಲೆ ಪತ್ರಗಳಿವೆ. ಹೀಗಿರುವಾಗ ಅರ್ಧದಾರಿಯಲ್ಲೇ ಕಾರು ಕೆಟ್ಟು ಹೋಗಿದೆ. ಈಗ ಮಾಡುವುದೇನು?
ತಕ್ಷಣವೇ ಮಾಧವನಿಗೆ ಸುದ್ದಿ ತಲುಪಿಸಬೇಕು. ಆತ ಏನಾದರೂ ವ್ಯವಸ್ಥೆ ಮಾಡುತ್ತಾನೆ... ಹೀಗೆ ಯೋಚಿಸಿದ ರೇವತಿ, ಮಾಧವನ ನಂಬರ್ ಒತ್ತಿ ಅವನ ದನಿಗಾಗಿ ಕಾತರಿಸಿದಳು. ಎರಡೇ ಕ್ಷಣದಲ್ಲಿ ಮೊಬೈಲ್ ಪರದೆಯ ಮೇಲೆ No network coverage ಎಂಬ ಆಕ್ಷರಗಳು ಕಾಣಿಸಿದವು.
ಈಗಂತೂ ರೇವತಿ ಸಂಪೂರ್ಣವಾಗಿ ಹೆದರಿಬಿಟ್ಟಳು. ಬೈ ಛಾನ್ಸ್, ಸಂಜೆಯವರೆಗೂ ಕಾರು ರಿಪೇರಿಯಾಗದೇ ಹೋದರೆ ಗತಿ ಏನು ಅನ್ನಿಸಿದಾಗ, ಆ ದಾರಿಯಲ್ಲಿ ಬರುತ್ತಿದ್ದ ವಾಹನಗಳಿಗೆ ಕೈ ತೋರಿಸಿ ಹೆಲ್ಪ್ ಹೆಲ್ಪ್ ಎಂದು ಚೀರುತ್ತಿದ್ದಳು. ಕೆಲವರು ವಾಹನಗಳನ್ನು ನಿಲ್ಲಿಸಲೇ ಇಲ್ಲ. ಮತ್ತೆ ಕೆಲವರು ವಾಹನವನ್ನು ಮೊದಲು ಸ್ಲೋ ಮಾಡುತ್ತಿದ್ದರು. ಇವಳು ಹತ್ತಿರ ಹೋಗಿ ವಿಷಯ ತಿಳಿಸಲು ಮುಂದಾದ ತಕ್ಷಣ ಸ್ಪೀಡ್ ಹೆಚ್ಚಿಸಿ ಹೋಗಿ ಬಿಡುತ್ತಿದ್ದರು. ಬಹಳ ಹೊತ್ತು ಹೀಗೇ ಆದಾಗ ರೇವತಿಗೆ ದುಃಖ ಒತ್ತರಿಸಿಕೊಂಡು ಬಂತು. ಆಕೆ ಬಿಕ್ಕಿ ಬಿಕ್ಕಿ ಅಳುತ್ತಲೇ ಸಹಾಯಕ್ಕಾಗಿ ಪ್ರಾರ್ಥಿಸುತ್ತಿದ್ದಳು.
ಹೀಗೆಯೇ ಒಂದು ಗಂಟೆ ಕಳೆಯಿತು. ಅದೇ ವೇಳೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಗಾಡಿ ನಿಲ್ಲಿಸಿ ರೇವತಿಯ ಕಷ್ಟ ಆಲಿಸಿದರು. ನಂತರ-'ಇಲ್ಲಿಂದ ಎರಡು ಕಿಲೋ ಮೀಟರ್ ದೂರದಲ್ಲಿ ಮಂಜಣ್ಣ ಎಂಬ ಮೆಕ್ಯಾನಿಕ್ ಇದ್ದಾನೆ. ಅವನನ್ನು ಕಳಿಸ್ತೇವೆ. ನೀವು ಇಲ್ಲಿಯೇ ಇರಿ' ಎಂದು ಹೇಳಿ ಕಾರ್ ನಂಬರ್ ಬರೆದುಕೊಂಡು ಹೋಗಿಬಿಟ್ಟರು. ಇದಾಗಿ ಎಷ್ಟೋ ಹೊತ್ತಿನ ನಂತರ ಹಳೆಯ ಟಿವಿಎಸ್‌ನಲ್ಲಿ ವ್ಯಕ್ತಿಯೊಬ್ಬ ಬಂದ. ಸಿನಿಮಾಗಳಲ್ಲಿ ಕಾಣುವ ವಿಲನ್‌ನಂತೆಯೇ ಇದ್ದ ಆತ, ತನ್ನನ್ನು ಮೆಕ್ಯಾನಿಕ್ ಮಂಜಣ್ಣ ಎಂದು ಪರಿಚಯಿಸಿಕೊಂಡ. ನಂತರದ ಹತ್ತಿಪ್ಪತ್ತು ನಿಮಿಷಗಳಲ್ಲಿ ಅದೂ ಇದೂ ಮಾತಾಡಿದ. ಪದೇ ಪದೆ ಪೊದೆಗಳಿದ್ದ ಕಡೆಗೆ ಹೋಗಿ ಬಂದ. ಅವನ ವರ್ತನೆಯಿಂದ ರೇವತಿಗೆ ಅನುಮಾನ ಶುರುವಾಯ್ತು. ಬಹುಶಃ ಈತ ನನ್ನ ಮೇಲೆ ಆಕ್ರಮಣ ಮಾಡಲು ಯೋಚಿಸುತ್ತಿರಬಹುದು. ಬಹುಶಃ ಹೇಗೆ, ಎಲ್ಲಿಗೆ ಎಳೆದೊಯ್ಯಬಹುದು ಎಂದು ಅಂದಾಜು ಮಾಡಿಕೊಳ್ತಾ ಇದ್ದಾನೇನೋ ಅಂದುಕೊಂಡಳು. ಮರುಕ್ಷಣದಲ್ಲಿಯೇ ಆಕೆ ತನಗೇ ಅರಿವಿಲ್ಲದಂತೆ ಬ್ಯಾಗ್‌ನೊಳಗಿದ್ದ ಪುಟ್ಟ ಚಾಕು ತೆಗೆದು ಅವನಿಗೆ ಕಾಣದಂತೆ ಇಟ್ಟುಕೊಂಡಳು.
ಇದೇನನ್ನೂ ಗಮನಿಸದ ಮಂಜಣ್ಣ, ಬಾನೆಟ್ ಎತ್ತಿ ಒಂದೆರಡು ಭಾಗದ ನೆಟ್‌ಗಳನ್ನು ಬಿಗಿ ಮಾಡಿದ. ನಂತರ ಮುಂದಿನ ಟೈರ್ ಕಳಚಿ ಪಂಕ್ಚರ್ ಹಾಕಿದ. 'ನೀವು ಪದೇ ಪದೆ ಬ್ರೇಕ್ ಹಾಕಿದೀರ ಮೇಡಂ. ಹಾಗಾಗಿ ಎಂಜಿನ್ ತುಂಬಾ ಬಿಸಿಯಾಗಿದೆ. ಆ ಹೀಟ್‌ಗೆ ಎಂಜಿನ್ ಒಳಗೇ ಸ್ವಲ್ಪ ಡ್ಯಾಮೇಜ್ ಆಗಿ ಕೊನೆಗೆ ಟೈರ್ ಪಂಕ್ಚರ್ ಆಗಿತ್ತು. ಎಲ್ಲವನ್ನೂ ಸರಿ ಮಾಡಿದೀನಿ. ಈಗ ಆರಾಮಾಗಿ ಹೋಗಿ' ಎಂದ.
ಮಂಜಣ್ಣನ ಮಾತು ಕೇಳುತ್ತಿದ್ದಂತೆಯೇ ರೇವತಿಗೆ ನಿರಾಳವೆನ್ನಿಸಿತು. ಅವನ ಬಗ್ಗೆ ತಪ್ಪಾಗಿ ಯೋಚಿಸಿದ್ದಕ್ಕೆ ನಾಚಿಕೆಯೂ ಆಯಿತು. ಏನು ಹೇಳಬೇಕೆಂದು ತೋಚದೆ ಆಕೆ ಗೊಂದಲದಲ್ಲಿದ್ದಾಗ ಮಂಜಣ್ಣನೇ ಹೇಳಿದ: 'ಬೆಳಗ್ಗಿನಿಂದ ಒಂದೇ ಸಮನೆ ತಲೆನೋಯ್ತಿದೆ ಮೇಡಂ. ಎಷ್ಟೋ ಸಲ ವಾಂತಿ ಆಗುವಂತೆ ಭಾಸವಾಗುತ್ತೆ. ಆದ್ರೆ ಆಗ್ತಾ ಇಲ್ಲ. ವಾಂತಿ ಬರುತ್ತೇನೋ ಅಂತಾನೇ ನಾನು ಮತ್ತೆ ಮತ್ತೆ ಪೊದೆಗಳಿದ್ದ ಕಡೆಗೆ ಹೋಗಿ ಬಂದೆ. ಹುಂ, ನನ್ನ ಕಥೆ ಹಾಗಿರ್ಲಿ. ನೀವು ಹೊರಡಿ...' ಹೀಗೆಂದು ಆತ ಹೊರಟೇ ಬಿಟ್ಟ. ರಿಪೇರಿ ಮಾಡಿದ್ದಕ್ಕೆ ಆತನಿಗೆ ಹಣ ಕೊಡಲಿಲ್ಲ ಎಂಬುದು ನೆನಪಾದ ತಕ್ಷಣ ರೇವತಿ ಕೂಗಿದಳು. ಆತ ಏನು ಎಂಬಂತೆ ತಿರುಗಿ ನೋಡಿದ. ರಿಪೇರಿ ಮಾಡಿದ್ದಕ್ಕೆ ನಿಮ್ಗೆ ಎಷ್ಟು ಕೊಡಬೇಕಪ್ಪಾ ಎಂದಳು ರೇವತಿ.
'ಮೇಡಂ, ಬಿಜಿನೆಸ್ ಮಾಡಲಿಕ್ಕೆ ನನ್ನ ಪಂಕ್ಚರ್ ಶಾಪ್ ಇದೆ. ಅಲ್ಲಿ ಮಾಡಿದ ಕೆಲಸಕ್ಕೆ ಖಂಡಿತ ದುಡ್ಡು ತಗೋತೇನೆ. ಆದ್ರೆ ಕಾಡಿನ ಮಧ್ಯೆ ಕಷ್ಟದಲ್ಲಿ ಇರುವವರಿಂದ ಹಣ ಪಡೆಯಲು ಮನಸ್ಸು ಒಪ್ಪುವುದಿಲ್ಲ. ಒಂದು ಕೆಲ್ಸ ಮಾಡಿ. ನನಗೆ ಕೊಡಬೇಕು ಅಂದುಕೊಂಡಿದೀರಲ್ಲ, ಆ ಹಣವನ್ನು ನನಗಿಂತ ಸಂಕಟದಲ್ಲಿರುವ ಮತ್ತೊಬ್ಬರಿಗೆ ಕೊಡಿ...' ಹೀಗೆಂದವನೇ, ರೇವತಿಯ ಉತ್ತರಕ್ಕೂ ಕಾಯದೆ ಆತ ಭರ್ರನೆ ಹೋಗಿ ಬಿಟ್ಟ. ಈವರೆಗೂ ನಡೆದುದೆಲ್ಲ ಕನಸಲ್ಲ ತಾನೆ ಎಂದು ಮತ್ತೆ ಮತ್ತೆ ಪ್ರಶ್ನಿಸಿಕೊಂಡಳು ರೇವತಿ.
ಕಾಡುಮನೆ ಇನ್ನೂ ಒಂದು ಕಿ.ಮೀ. ದೂರವಿದೆ ಎನ್ನುವಾಗಲೇ ರೇವತಿಗೆ ಹೊಟ್ಟೆ ಚುರುಗುಡಲಾರಂಭಿಸಿತು. ಗಡಿಯಾರ ಸಂಜೆ ನಾಲ್ಕು ಗಂಟೆಯನ್ನು ತೋರಿಸುತ್ತಿತ್ತು. ಇಲ್ಲಿ ಯಾವುದಾದರೂ ಹೋಟೆಲ್ ಸಿಕ್ಕರೆ ಸ್ವಲ್ಪ ತಿಂಡಿ ತಿಂದು, ಒಂದಷ್ಟು ಪಾರ್ಸಲ್ ಕಟ್ಟಿಸಿಕೊಂಡು ಹೊರಟು ಬಿಡಬೇಕು ಎಂದು ರೇವತಿ ನಿರ್ಧರಿಸುವುದಕ್ಕೂ, ಒಂದು ಪುಟ್ಟ ಹೋಟೆಲ್ ಕಾಣಿಸುವುದಕ್ಕೂ ಸರಿ ಹೋಯಿತು.
'ಇಡ್ಲಿ-ವಡೆ ಇದೆ ತಾನೆ? ಇಲ್ಲೇ ಎರಡು ಪ್ಲೇಟ್ ಕೊಡಿ. ಒಂದು ಪ್ಲೇಟ್ ಪಾರ್ಸಲ್ ಕಟ್ಟಿ ಬಿಡಿ' ಎಂದಳು. ತುಂಬಾ ಹಸಿದಿದ್ದ ಕಾರಣಕ್ಕೋ ಏನೋ; ತಿಂಡಿ ಬಹಳ ರುಚಿ ಅನ್ನಿಸಿತು. ಆಗಲೇ ರೇವತಿ ಗಮನಿಸಿದ್ದು: ಆ ಹೋಟೆಲಿನ ಓನರ್ ಕಮ್ ಸರ್ವರ್ ಆಗಿದ್ದಾಕೆ ತುಂಬು ಗರ್ಭಿಣಿ. ಆಕೆ ಗ್ರಾಹಕರಿಗೆ ತಿಂಡಿ ಪೂರೈಸಲು ಏದುಸಿರು ಬಿಡುತ್ತಲೇ ಒಂದೊಂದೇ ಹೆಜ್ಜೆ ಇಡುತ್ತಿದ್ದಳು. ಬೇರೇನಾದ್ರೂ ಬೇಕಾ ಎಂದು ಕೇಳಲು ರೇವತಿಯ ಬಳಿ ಬಂದಾಗಲೇ ಆಕೆಯ ಮೊಬೈಲ್ ರಿಂಗಣಿಸಿತು. ಆ ಕಡೆಯ ಮಾತುಗಳಿಗೆ ಈಕೆ ಉತ್ತರಿಸತೊಡಗಿದಳು: 'ಹೌದಮ್ಮಾ. ಇದು 8ನೇ ತಿಂಗಳು. ಚೆಕಪ್‌ಗೆ ಬನ್ನಿ ಅಂತ ಡಾಕ್ಟರ್ ಹೇಳಿದ್ದಾರೆ. ಮಾತ್ರೆ -ಇಂಜಕ್ಷನ್ ಸೇರಿ 5000 ರೂಪಾಯಿ ಖರ್ಚಿದೆ ಅಂದಿದ್ದಾರೆ. ಆದ್ರೆ ನಮ್ಮಲ್ಲಿ ಅಷ್ಟೊಂದು ದುಡ್ಡಿಲ್ಲ. 'ಅವರೂ' ಇಡೀ ದಿನ ದುಡೀತಾರೆ. ಆದ್ರೂ ಸಂಪಾದನೆ ಆಗ್ತಿಲ್ಲ. ದುಡ್ಡಿಲ್ಲ ಅನ್ನೋ ಕಾರಣಕ್ಕೆ ನಾವು ಆಸ್ಪತ್ರೆಗೇ ಹೋಗಿಲ್ಲ...'
ಈ ವೇಳೆಗೆ, ರೇವತಿಯನ್ನು ಬಿಟ್ಟರೆ ಮತ್ಯಾರೂ ಹೋಟೆಲಿನಲ್ಲಿ ಇರಲಿಲ್ಲ. ಆ ಗರ್ಭಿಣಿಯನ್ನು ನೋಡುತ್ತಿದ್ದಂತೆಯೇ ರೇವತಿಗೆ ಮೆಕ್ಯಾನಿಕ್ ಮಂಜಣ್ಣ ಹೇಳಿದ್ದ ಮಾತುಗಳು ನೆನಪಾದವು. ಪಾರ್ಸಲ್ ಪಡೆದು, 200 ರೂ. ಕೊಟ್ಟಳು. ಚಿಲ್ಲರೆ ತರಲು ಆಕೆ ಒಳಗೆ ಹೋಗುತ್ತಿದ್ದಂತೆಯೇ ರೇವತಿ ಕಾರ್ ಹತ್ತಿ ಹೊರಟು ಬಿಟ್ಟಳು. ಚಿಲ್ಲರೆ ಎಣಿಸುತ್ತಾ ಬಂದ ಗರ್ಭಿಣಿ, ಕಾರ್ ಹೋಗುತ್ತಿದ್ದನ್ನು ಕಂಡು -'ಅಯ್ಯಯ್ಯೋ, ಚಿಲ್ರೆ ಮರೆತು ಹೋಗಿಬಿಟ್ರಲ್ಲಾ' ಎಂದು ಉದ್ಗರಿಸುತ್ತಾ, ಟೇಬಲ್ ಕಡೆ ತಿರುಗಿದಳು. ಅಲ್ಲಿ ಮಡಚಿಟ್ಟಿದ್ದ ಒಂದು ಪೇಪರ್ ಇತ್ತು. ಈಕೆ ಕುತೂಹಲದಿಂದ ಅದನ್ನು ಎತ್ತಿಕೊಂಡರೆ, ಅದರಲ್ಲಿ 500 ರೂಪಾಯಿನ ಹತ್ತು ನೋಟುಗಳಿದ್ದವು. ನೋಟುಗಳಿಂದ ಕೂಡಿದ್ದ ಹಾಳೆಯಲ್ಲಿ ಹೀಗೆ ಬರೆಯಲಾಗಿತ್ತು: 'ಇವತ್ತು ಬೆಳಿಗ್ಗೆ ಕಾಡಿನಲ್ಲಿ ಕಾರ್ ಕೆಟ್ಟು ಹೋಗಿ ಸಂಕಟದ ಮಧ್ಯೆ ಒದ್ದಾಡುತ್ತಿದ್ದೆ. ಆಗ ಯಾರೋ ಪುಣ್ಯಾತ್ಮರು ದೇವರಂತೆ ಬಂದು ಸಹಾಯ ಮಾಡಿದರು. ತನ್ನ ದುಡಿಮೆಗೆ ಆತ ಪ್ರತಿಫಲವನ್ನೇ ಬಯಸಲಿಲ್ಲ. ಈ ಬಗ್ಗೆ ಒತ್ತಾಯಿಸಿದ್ದಕ್ಕೆ -ನನಗಿಂತ ಕಷ್ಟದಲ್ಲಿರುವವರು ಎದುರಾದರೆ ಅವರಿಗೆ ಹಣ ಕೊಟ್ಟು ಬಿಡಿ ಅಂದರು. ಆ ಮಹಾನುಭಾವರ ಮಾತುಗಳನ್ನು ಪಾಲಿಸುತ್ತಿದ್ದೇನೆ. ಈ ಪುಣ್ಯದ ಕೆಲಸ ಇಲ್ಲಿಗೇ ನಿಲ್ಲುವುದು ಬೇಡ. ನೀವೂ ಯಾರಿಗಾದ್ರೂ ಯಾವುದಾದ್ರೂ ರೀತೀಲಿ ನೆರವಾಗಿ. ನಾಳೆ ತಪ್ಪದೆ ಆಸ್ಪತ್ರೆಗೆ ಹೋಗಿ...' ಎಲ್ಲವನ್ನೂ ಓದಿದ ಗರ್ಭಿಣಿಗೆ ಒಂಥರಾ ಖುಷಿಯಾಯಿತು. ಮನೆಗೆ ಹೋಗಿ ಗಂಡನಿಗೆ ಎಲ್ಲವನ್ನೂ ವಿವರಿಸುವ ಆಸೆಯಿಂದ ಸರಸರನೆ ಹೋಟೆಲಿನ ಬಾಗಿಲು ಹಾಕಿ ಸಡಗರದ ಹೆಜ್ಜೆಯಿಡುತ್ತಾ ಮನೆಯ ಕಡೆ ನಡೆದಳು.
ಏದುಸಿರು ಹಾಗೂ ಭಾರವಾದ ಹೆಜ್ಜೆ ಸಪ್ಪಳದಿಂದಲೇ ಹೆಂಡತಿ ಬಂದಳೆಂದು ಅವನಿಗೆ ಗೊತ್ತಾಯಿತು. ಆತ ಮಗ್ಗಲು ಬದಲಿಸುವ ಪ್ರಯತ್ನವನ್ನೂ ಮಾಡಲಿಲ್ಲ. ತಿರುಗಿ ನೋಡಿದರೆ, ಆಕೆ ಹಣ ಕೇಳಬಹುದೇನೋ ಎಂಬ ಭಯ ಅವನದು. ಅವಳು ಅಡುಗೆ ಮನೆಗೆ ಹೋಗುತ್ತಿದ್ದಂತೆಯೇ ಆತ ಹೇಳಿದ: ನಂಗೆ ಊಟ ಬೇಡ. ತಪ್ಪು ತಿಳೀಬೇಡ. ಇವತ್ತೂ ಸಂಪಾದನೆ ಆಗಲಿಲ್ಲ...' ಅವಳು ಗಂಡನ ಮಾತೇನೂ ಕೇಳಿಸಲೇ ಇಲ್ಲವೆಂಬಂತೆ ಪಟ್ಟಾಗಿ ಊಟ ಮಾಡಿದಳು. ನಂತರ, ಅವನ ಮಗ್ಗುಲಲ್ಲಿ ಮಲಗಿ-'ನಾಳೆ ಆಸ್ಪತ್ರೆಗೆ ಹೋಗೋಣ. ನನ್ನ ಹತ್ರ 5000 ರುಪಾಯಿ ಇದೆ' ಅಂದುಬಿಟ್ಟಳು. ಅವನು ಆಶ್ಚರ್ಯದಿಂದ ಇವಳತ್ತ ತಿರುಗಿದ. ಆಕೆ ಹೋಟೆಲಿನಲ್ಲಿ ನಡೆದ ಪ್ರಸಂಗವನ್ನು ವಿವರಿಸಿದಳು. ಅವನು ಮಾತೇ ಆಡದೆ ಮಗ್ಗಲು ಬದಲಿಸಿದ. ಎರಡು ನಿಮಿಷದ ನಂತರ ಈಕೆ ಹೇಳಿದಳು: 'ಈ ಸಹಾಯದ ಕೆಲಸ ಇಲ್ಲಿಗೇ ನಿಲ್ಲಬಾರದು. ನೀವೂ ಯಾರಿಗಾದ್ರೂ ಸಹಾಯ ಮಾಡಿ ಅಂದಿದ್ದಾರೆ. ನಾನು ಮುಂದಿನ ನಾಲ್ಕು ತಿಂಗಳು ಹೊರಗೆ ಹೋಗುವಂತಿಲ್ಲ. ಹಂಗಾಗಿ ಒಂದು ಕೆಲ್ಸ ಮಾಡಿ ಯಜಮಾನ್ರೇ. ನಾಳೆಯಿಂದ ನೀವು ಯಾರಾದ್ರೂ ಇಬ್ಬರಿಗೆ ಫ್ರೀಯಾಗಿ ಕೆಲಸ ಮಾಡಿಕೊಡಿ. ನನ್ನ ಮಾತು ನಡೆಸಿಕೊಡ್ತೀರಿ ತಾನೆ ಮೆಕ್ಯಾನಿಕ್ ಮಂಜಪ್ಪನವರೇ...
ಹೆಂಡತಿಯ ಮಾತು ಮುಗಿಯುತ್ತಿದ್ದಂತೆಯೇ ಆತ ಅವಳತ್ತ ತಿರುಗಿದ. ಅವನ ಕಣ್ತುಂಬ ನೀರಿದ್ದವು...
- ಎ.ಆರ್. ಮಣಿಕಾಂತ್
armanikanth@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


