ತನ್ನ ಬಂಡವಾಳ ಮುಚ್ಚಿಕೊಳ್ಳಲು ವಿದೇಶಿ ಬಂಡವಾಳದ ಜಪ
2012. ಭಾರತದ ಆರ್ಥಿಕತೆ ಹಳ್ಳ ಹಿಡಿಯುವ ಸ್ಪಷ್ಟ ಸೂಚನೆಗಳಿದ್ದವು. ಆರ್ಥಿಕ ತಜ್ಞ...
2012. ಭಾರತದ ಆರ್ಥಿಕತೆ ಹಳ್ಳ ಹಿಡಿಯುವ ಸ್ಪಷ್ಟ ಸೂಚನೆಗಳಿದ್ದವು. ಆರ್ಥಿಕ ತಜ್ಞ ಮನಮೋಹನ್ ಸಿಂಗ್ ವಿಫಲ ನಾಯಕ ಎಂದು ವಿದೇಶಿ ಮಾಧ್ಯಮಗಳು ಬಿಂಬಿಸಿದ್ದವು. ರೇಟಿಂಗ್ ಏಜೆನ್ಸಿಗಳ ಕಾಕದೃಷ್ಟಿ ಭಾರತದ ಮೇಲೆ ಬಿದ್ದಿತ್ತು. ಸಮಸ್ಯೆ ಜಟಿಲವಾಗಿತ್ತು. ಇದಕ್ಕೆ ಯುಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿತ್ತು. ಸತ್ತೇ ಹೋದಂತಿದ್ದ ಉದ್ಯಮ ರಂಗಕ್ಕೆ ಹೊಸ ಚೈತನ್ಯ ತುಂಬುವ ಕ್ರಮಗಳು ಅವಶ್ಯಕವಾಗಿತ್ತು. ಆದರೆ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಈ ಕ್ಲಿಷ್ಟ ಸಮಸ್ಯೆಗೆ ತೀರಾ ಸುಲಭ ಎನ್ನುವ ಪರಿಹಾರಕ್ಕೆ ಮುಂದಾಯಿತು. ಚಿಲ್ಲರೆ ವ್ಯಾಪಾರ ಕ್ಷೇತ್ರವನ್ನು ವಿದೇಶಿಯರಿಗೆ ತೆರೆದಿಟ್ಟು ಅವರು ತರುವ ಕಾಸಿನಿಂದ ಕಜ್ಜಾಯ ತಿನ್ನುವ ಪ್ರಯತ್ನ ಮಾಡಿತು. ಇದನ್ನು ಆರ್ಥಿಕ ಸುಧಾರಣೆಯ ಮೂಲ ಬೇರು ಎಂದು ಬಣ್ಣಿಸಿತು. ಈ ಕ್ರಮವನ್ನು ವಿರೋಧಿಸಿದ ಪಕ್ಷ, ಗುಂಪುಗಳನ್ನು ಸುಧಾರಣಾ ವಿರೋಧಿ, ಯಥಾಸ್ಥಿತಿವಾದಿಗಳು ಎಂದು ಜರಿಯಿತು. ಈ ಒಂದು ಕ್ರಮದಿಂದ ತುಕ್ಕು ಹಿಡಿಯುತ್ತಿದ್ದ ಭಾರತದ ಅರ್ಥ ವ್ಯವಸ್ಥೆಗೆ ಸಾಣೆ ಹಿಡಿಯುವುದಾಗಿ ಸಾರಿತು.
2013. ರೂಪಾಯಿಯ ಮೇಲೆ ಅಮೆರಿಕದ ಡಾಲರ್ ಸವಾರಿ ಮಾಡಿತು. ಚೇತರಿಕೆಗೆ ಆಸ್ಪದವೇ ನೀಡದಂತೆ ತನ್ನ ನಾಗಾಲೋಟ ಮುಂದುವರಿಸಿತು. 60-61 ರೂ.ಗಳ ಗಡಿದಾಟಿ ಆತಂಕ ಮೂಡಿಸಿತು. ರಿಸರ್ವ್ ಬ್ಯಾಂಕಿನ ಅಂಕೆಗೂ ಸಿಲುಕದಂತೆ ಡಾಲರ್ ಬಲಗೊಂಡಿತು. ತುರ್ತು, ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯ ಸ್ಥಿತಿ ಸರ್ಕಾರಕ್ಕೆ ಎದುರಾಯಿತು. ಸುತ್ತಮುತ್ತಲ ಆಗುಹೋಗುಗಳಿಗೆ ಕಿವುಡಾಗಿ ದೀರ್ಘ ನಿದ್ದೆಯಿಂದ ಆಗಷ್ಟೆ ಎಚ್ಚೆತ್ತವರಂತೆ ಕಾರ್ಯ ಪ್ರವೃತ್ತರಾದ ಪ್ರಧಾನಿ ಸಿಂಗ್ 17 ಇಲಾಖೆಗಳ ಮಂತ್ರಿಗಳ ಸಭೆ ಕರೆದರು. ಸುಮಾರು ಎರಡು ತಾಸಿನ ಚರ್ಚೆಯ ನಂತರ ಈ ಎಲ್ಲ 17 ಇಲಾಖೆಗಳ ಸುಪರ್ದಿನಲ್ಲಿ ಬರುವ ವಿಷಯಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೆಂಪು ಹಾಸು ಹಾಸಿದರು. ಮತ್ತೆ ಸರ್ಕಾರಿ ಬೆಂಬಲಿತ ಉದ್ಯಮಪತಿಗಳು, ವಿಶ್ಲೇಷಕರು ಇದನ್ನು ಒಂದು ಅತ್ಯಂತ ದೃಢ ನಿರ್ಧಾರ ಎಂದೂ, ಇದರಿಂದ ಬಲು ಬೇಗ ಭಾರತದ ಆರ್ಥಿಕ ಕ್ಷೇತ್ರದಲ್ಲಿ ಸುಧಾರಣೆ ಕಾಣಬಹುದು ಎಂದೂ ಬಡಬಡಾಯಿಸಿದರು. ಆರ್ಥಿಕ ಸಂಕಟ ಎದುರಾದಾಗಲೆಲ್ಲ ಎಫ್‌ಡಿಐ ಸೆರಗು ಸೇರುವ ಸರ್ಕಾರದ ಈ ನಿಲುವು ನೋಡಿದರೆ ಶಾಲೆಯಿಂದ ಬರುವ ಮಗು 'ಅಮ್ಮಾ ಹೊಟ್ಟೆ ಹಸಿವು. ಊಟ ಬೇಕು' ಎಂದರೆ 'ತಾಳಮ್ಮ ಪಕ್ಕದ ಮನೆ ಕುಕ್ಕರ್ ಇನ್ನೂ ಕೂಗಿಲ್ಲ' ಎಂದು ಹೇಳಿದಂತಾಗುತ್ತದೆ. ಈ ಸರ್ಕಾರದ ದೃಷ್ಟಿಯಲ್ಲಿ ವಿದೇಶಿ ಬಂಡವಾಳ ಆಕರ್ಷಣೆಯಿಂದಷ್ಟೇ ಭಾರತದಲ್ಲಿ ಪ್ರಗತಿ ಸಾಧ್ಯ. ಇದಿಲ್ಲದೆ ಭಾರತ ಉದ್ಧಾರ ಆಗಲು ಸಾಧ್ಯವೇ ಇಲ್ಲ. ಹಾಗಿದ್ದರೆ ಭಾರತದ ಎಲ್ಲ ಸಮಸ್ಯೆಗಳಿಗೆ ವಿದೇಶಿ ಬಂಡವಾಳವೇ ರಾಮಬಾಣವೇ? 1991ರಲ್ಲಿ ಇದೇ ಮನಮೋಹನ್ ಸಿಂಗ್ ವಿತ್ತ ಸಚಿವರ ಹೇಸಿಯತ್‌ನಲ್ಲಿ ಭಾರತದ ಪೇಟೆಯನ್ನು ವಿದೇಶಿಗರಿಗೆ ತೆರೆದು ಎರಡು ದಶಕಗಳೇ ಕಳೆದಿದೆ. ಈ ಅವಧಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿದೇಶಿ ಹಣ ಭಾರತಕ್ಕೆ ಹರಿದು ಬಂದಿದೆ. ಆದರೂ ಭಾರತ ಏಕೆ ಇನ್ನೂ ಆರ್ಥಿಕ ಸುಧಾರಣೆಗೆ, ಸುಸ್ಥಿರ ಬೆಳವಣಿಗೆಗೆ ಹಪಹಪಿಸುತ್ತಿದೆ? ಒಂದು ವೇಳೆ ಸರ್ಕಾರ ಕಳೆದ ವರ್ಷ ಹೇಳಿದಂತೆ ಚಿಲ್ಲರೆ ವ್ಯಾಪಾರದಲ್ಲಿ ಎಫ್‌ಡಿಐನಿಂದ ಭಾರತಕ್ಕೆ ದೊಡ್ಡ ಲಾಭವಾಗಿರುತ್ತಿದ್ದರೆ ಈ ನೀತಿಯಡಿ ಏಕೆ ಇನ್ನೂ ದೇಶಕ್ಕೆ ಬಂಡವಾಳ ಹರಿದು ಬಂದಿಲ್ಲ? ಇಕಿಯಾ ಮತ್ತು ವಾಲ್‌ಮಾರ್ಟ್ ಹೊರತುಪಡಿಸಿ ಉಳಿದಂತೆ ಯಾವ ರೀಟೇಲರ್‌ಗಳೂ ಏಕೆ ಭಾರತದಲ್ಲಿ ವ್ಯಾಪಾರ ಆರಂಭಿಸಲು, ಬಂಡವಾಳ ತೊಡಗಿಸಲು ಮುಂದಾಗುತ್ತಿಲ್ಲ? 10 ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಿಕೆ ಪ್ರಸ್ತಾಪಕ್ಕೆ ತಾತ್ವಿಕ ಒಪ್ಪಿಗೆ ಪಡೆದಿದ್ದರೂ ಇಕಿಯಾ ಭಾರತದಲ್ಲಿ ಇನ್ನು ಕಾರ್ಯಾರಂಭಿಸಲು ಸಾಧ್ಯವಾಗಿಲ್ಲ. ವಾಲ್‌ಮಾರ್ಟ್ ಅಂತೂ ಬಂಡವಾಳ ಹೂಡುವ ಯೋಚನೆ ಮಾಡುವ ಮುನ್ನವೆ ತನ್ನ ಪರಲಾಬಿ ಮಾಡಲು ಕೈಬೆಚ್ಚಗಾಗಿಸಿದ ಆರೋಪದ ತನಿಖೆ ಎದುರಿಸುತ್ತಿದೆ. 2008ರಲ್ಲಿ ಸರ್ಕಾರದ ಅಸ್ತಿತ್ವವನ್ನೇ ಪಣಕ್ಕಿಟ್ಟು ಅಮೆರಿಕ ಜೊತೆ ಮಾಡಿಕೊಂಡ ಅಣುಬಂಧದ ಫಲವಾಗಿ ಐದು ವರ್ಷಗಳಾದರೂ ಒಂದೇ ಒಂದು ಯುನಿಟ್ ಅಣು ವಿದ್ಯುತ್ ಉತ್ಪಾದನೆಯಾಗಿಲ್ಲ. ಈ ಒಪ್ಪಂದದ ಲಾಭ ಪಡೆದು ಯಾವುದೇ ಮುಂದುವರಿದ ದೇಶಗಳು ಭಾರತದಲ್ಲಿ ಬಂಡವಾಳ ಹೂಡಲು ಈವರೆಗೂ ಮುಂದಾಗಿಲ್ಲ. ಭಾರತದ ಮೇಲೆ ಇನ್ನಿಲ್ಲದ ಒತ್ತಡ ಹೇರಿ ಅಣುಬಂಧ ಮಾಡಿಕೊಂಡ ಅಮೆರಿಕವೇ ಈಗ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದೆ. ಕಳೆದ ಆರು ತಿಂಗಳಲ್ಲಿ ವಿತ್ತ ಸಚಿವ ಪಿ. ಚಿದಂಬರಂ ಎರಡು ಬಾರಿ ಅಮೆರಿಕಕ್ಕೆ ತೆರಳಿ ಅಲ್ಲಿನ ಉದ್ಯಮಪತಿಗಳನ್ನು ಗೋಗರೆದರೂ ಭಾರತದಲ್ಲಿ ಬಂಡವಾಳ ಹೂಡುವ ಬಗ್ಗೆ ಯಾರೂ ಉತ್ಸಾಹ ತೋರಿಲ್ಲ. ಆರ್ಥಿಕ ಚೇತರಿಕೆಗೆ, ಬಂಡವಾಳ ಆಕರಕ್ಕೆ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳು ಕೇವಲ Tokenism (ತೋರಿಕೆ) ಎಂಬ ನಿರ್ಧಾರಕ್ಕೆ ಅವರು ಬಂದಂತಿದೆ. ಆರ್ಥಿಕ ಸುಧಾರಣೆಯ ಪರ್ವದ ಈ ಎರಡು ದಶಕಗಳಲ್ಲಿ ಕೇವಲ ಸಾಫ್ಟ್‌ವೇರ್ ಹಾಗೂ ಸರ್ವೀಸಸ್ ಕ್ಷೇತ್ರದಲ್ಲಷ್ಟೇ ಭಾರತಕ್ಕೆ ವಿದೇಶಿ ಬಂಡವಾಳ ಬಂದಿರುವುದು. ಉತ್ಪಾದನೆ ಸೇರಿದಂತೆ ಯಾವುದೇ ದೇಶದ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ ನಿಲ್ಲುವ ರಂಗಗಳಲ್ಲಿ ಭಾರತದಲ್ಲಿ ಹಣ ತೊಡಗಿಸಲು ಯಾರೂ ಮುಂದಾಗಿಲ್ಲ. ಇಲ್ಲಿ ಈವರೆಗೆ ಹೊಡಲಾಗಿರುವ ವಿದೇಶಿ ಬಂಡವಾಳದ ಬಹುಪಾಲು ಸಾಫ್ಟ್‌ವೇರ್ ಮತ್ತು ಬಿಪಿಓ ಕ್ಷೇತ್ರಗಳಲ್ಲಿದ್ದು, ಇದರಿಂದ ಭಾರತಕ್ಕಿಂತ ಹೆಚ್ಚು ಲಾಭ ಆಗಿರುವುದು ವಿದೇಶಿ ಕಂಪನಿಗಳಿಗಷ್ಟೇ. ಮೊನ್ನೆ ಸಹ ರೂಪಾಯಿ ಎದುರು ಡಾಲರ್‌ನ ನಗ್ನ ನರ್ತನದಲ್ಲಿ ನಕ್ಕಿದ್ದು ಈ ಎರಡು ರಂಗಗಳ ಉದ್ಯಮಪತಿಗಳೇ ಹೊರತು ಇತರ ಸಾಮಾನ್ಯ ಕಾರ್ಮಿಕರಲ್ಲ. ಇದಕ್ಕೆಲ್ಲ ಕಾರಣ ಸರ್ಕಾರದ ತಪ್ಪು ನೀತಿ. ಬೆಳವಣಿಗೆ ಆಧಾರಿತ ಎಫ್‌ಡಿಐ ಬದಲು ಎಪ್‌ಡಿಐ ಆಧಾರಿತ ಬೆಳವಣಿಗೆ ಮೇಲೆ ಸರ್ಕಾರ ಕಣ್ಣಿಟ್ಟಿರುವುದೇ ಈ ಪರಿಸ್ಥಿತಿಗೆ ಕಾರಣವಾಗಿದೆ.
ಇಷ್ಟಕ್ಕೂ ವಿದೇಶಿ ಹೂಡಿಕೆದಾರರು ಇಲ್ಲಿ ಬಂದು ಬಂಡವಾಳ ಹೂಡುವಂತಹ ಪರಿಸ್ಥಿತಿ ಇದೆಯೇ? ಉತ್ಪಾದನಾ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂ.ಗಳ ಬಂಡವಾಳ ಹೂಡಬೇಕಿದ್ದ ಪೋಸ್ಕೊ ಕಾಲ್ಕಿತ್ತಿದೆ. ಇದೇ ಸರ್ಕಾರದ ಹಿಂದಿನ ವಿತ್ತ ಮಂತ್ರಿ ಪ್ರಣಬ್ ಮುಖರ್ಜಿ ಜಾರಿಗೆ ತಂದ ಎಆಆಖ (ತೆರಿಗೆ ಬಾಕಿ ವಸೂಲಿ ಕಾಯಿದೆ) ಎಂಬ ಮೂರ್ಖತನದ ಕಾಯಿದೆ ಈಗಾಗಲೇ ಹೂಡಿಕೆದಾರರನ್ನು ದೇಶದಿಂದ ಕಾಲ್ಕೀಳುವಂತೆ ಮಾಡಿದೆ. ಇದರ ಜಾರಿಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದರೂ ಅದರ ರದ್ಧತಿ ಮಾತ್ರ ಹೂಡಿಕೆದಾರರ ಮನವೊಲಿಸಲು ಸಾಧ್ಯ. ಈಗ ಸರ್ಕಾರ ಟೆಲಿಕಾಂ ಕ್ಷೇತ್ರದಲ್ಲಿ ಶೇ.100 ವಿದೇಶಿ ಬಂಡವಾಳಕ್ಕೆ ಮುಂದಾಗಿದೆ. ಆದರೆ 2ಜಿ ಹಗರಣದ ನಂತರ ಇಲ್ಲಿ ಮತ್ತೆ ವಹಿವಾಟು ನಡೆಸಲು ವಿದೇಶಿ ಕಂಪನಿಗಳು ಹಿಂದೇಟು ಹಾಕುವುದು ಸಹಜ. ಸರ್ಕಾರದ ಭ್ರಷ್ಟ ನೀತಿಯಿಂದಾಗಿ ಅನೇಕ ವಿದೇಶಿ ಕಂಪನಿಗಳು ಟೆಲಿಕಾಂ ಕ್ಷೇತ್ರದಲ್ಲಿ ಬಂಡವಾಳ ಹೂಡಿ ಈಗ ಕೈಸುಟ್ಟುಕೊಳ್ಳುವಂತಾಗಿದೆ. ಈಗಲೂ ಅಷ್ಟೆ, ಸರ್ಕಾರ ಘೋಷಿಸಿರುವ ಕ್ರಮಗಳನ್ನು ಜಾರಿಗೆ ತರಲು ಅದರ ಕೈಯಿಂದ ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಸಂಸತ್ತಿನಲ್ಲಿ ಈ ಸಂಬಂಧದ ತಿದ್ದುಪಡಿಗಳಿಗೆ ಅಂಗೀಕಾರ ಪಡೆಯುವುದು ಈಗಿನ ಸಂದರ್ಭದಲ್ಲಿ ಅದರ ಪಾಲಿಗೆ ಗಗನ ಕುಸುಮವೇ ಸರಿ. ಆರ್ಥಿಕ ಪ್ರಗತಿಯ ವಿಷಯದಲ್ಲಿ ಪ್ರತಿಪಕ್ಷಗಳನ್ನು ಒಟ್ಟಾಗಿ ಕರೆದೊಯ್ಯುವ ಜಾಣ್ಮೆ, ದೂರದೃಷ್ಟಿ ಎರಡೂ ಯುಪಿಎ ಸರ್ಕಾರಕ್ಕೆ ಇಲ್ಲ. ಇದಿದ್ದರೆ ನಾಲ್ಕು ವರ್ಷಗಳಿಂದ ಸಾಮಾನ್ಯ ಸೇವಾ ತೆರಿಗೆ ತರಲಾಗಲಿ ಅಥವಾ ನೇರ ತೆರಿಗೆ ಸಂಹಿತೆ ಜಾರಿಗೊಳಿಸಲೇ ಆಗಲಿ ಸರ್ಕಾರ ತಿಣುಕಾಡುತ್ತಿರಲಿಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ತೆರಿಗೆ ಸ್ವರೂಪ ಯಾವುದೇ ಹೂಡಿಕೆದಾರರನ್ನು ಹಿಮ್ಮೆಟ್ಟಿಸುವುದು ಸಹಜ. ಇಂತಹ ಪರಿಸ್ಥಿತಿಯಲ್ಲಿ ಈ ಎರಡು ಉಪಕ್ರಮಗಳಿಗೆ ಸರ್ಕಾರ ಆದ್ಯತೆ ನೀಡಬೇಕಿತ್ತು. ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿ ಸಹಮತ ಮೂಡಿಸಬೇಕಿತ್ತು. ಅದು ಬಿಟ್ಟು ಪ್ರತಿಪಕ್ಷಗಳತ್ತ ಬೊಟ್ಟು ಮಾಡಿ ಸರ್ಕಾರ ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳುತ್ತಿದೆ.
ಸಮಸ್ಯೆಗಳು ಎದುರಾದಾಗಲೆಲ್ಲ ವಿದೇಶಿ ಬಂಡವಾಳದ ಮೊರೆ ಹೋಗುವುದನ್ನು ಬಿಟ್ಟು ಈ ಸರ್ಕಾರ ಮಾಡಿರುವುದಾದರೂ ಏನು? ಯಾವುದೇ ದೇಶ ಪ್ರಗತಿ ಕಾಣಬೇಕಾದರೆ ಮೊದಲು ಅಲ್ಲಿ ಅಭಿವೃದ್ಧಿಗೆ ಪೂರಕವಾದ ಮೂಲ ಸೌಕರ್ಯ ಕಲ್ಪಿಸಬೇಕು. ಕನಿಷ್ಠ ರಸ್ತೆ, ವಿದ್ಯುತ್, ಕುಶಲಕರ್ಮಿಗಳ ಪಡೆ, ಇವುಗಳಿಲ್ಲದೆ ಪ್ರಗತಿ ಮಂತ್ರ ಜಪಿಸಿದರೆ ಅದರಿಂದ ಏನುತಾನೆ ಲಾಭ? ರಸ್ತೆಗಳ ವಿಷಯಕ್ಕೆ ಬಂದಾಗ ಯಾವುದೇ ಆರ್ಥಿಕತೆಯನ್ನು ಬಲಾಢ್ಯಗೊಳಿಸುವ ತಾಕತ್ತು ಈ ರಸ್ತೆಗಳಿಗಿವೆ. ದೇಶದ ಮೂಲೆ ಮೂಲೆಗಳನ್ನು ಬೆಸೆಯುವ ಮೂಲಕ ವ್ಯಾಪಾರ, ವಹಿವಾಟು ವಿಸ್ತಾರವಾಗಲು ಅವಕಾಶ ಕಲ್ಪಿಸಬಹುದು. ಆದರೆ ಈ ಸರ್ಕಾರ ಮಾಡಿರುವುದಾದರೂ ಏನು?
ನಮ್ಮ ಹೈವೇ (ಹೆದ್ದಾರಿ)ಗಳು ಇಂದು ಶೇಮ್ ವೇಗಗಳಾಗಿವೆ. ರಸ್ತೆ ಸಂಪರ್ಕ ಜಾಲದ ಮಹತ್ವ ಅರಿತು ಹಿಂದಿನ ಎನ್‌ಡಿಎ ಸರ್ಕಾರ ಅದಕ್ಕೆ ಪ್ರಮುಖ ಆದ್ಯತೆ ನೀಡಿತ್ತು. ಅದರಿಂದ ತಾತ್ಕಾಲಿಕ ಉದ್ಯೋಗ ಸೃಷ್ಟಿಯೂ ಆಗಿತ್ತು. ಆದರೆ ಅಭಿವೃದ್ಧಿಯ ಹರಿಕಾರರು ಎಂದು ಪೋಸು ಕೊಡುತ್ತಲೇ ಮನಮೋಹನ್ ಮತ್ತು ತಂಡ ಮಾಡಿರುವುದಾದರೂ ಏನು? ರಸ್ತೆ ಸಂಪರ್ಕ ಜಾಲ ನಿರ್ಮಾಣ ಕುಂಟುತ್ತ ಸಾಗಿದೆ. ಇನ್ನು ದೇಶದಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಬಂಡವಾಳ ಆಕರ್ಷಿಸಲು ಸರ್ಕಾರ ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿಲ್ಲ. ಕಳೆದ 10 ವರ್ಷಗಳ ಆಡಳಿತದಲ್ಲಿ ಭೂಸುಧಾರಣಾ ನೀತಿ ಜಾರಿಗೆ ತರುವ ಇಚ್ಛಾಶಕ್ತಿ ತೋರಿಲ್ಲ. ವಿದೇಶಿ ಹೂಡಿಕೆದಾರರನ್ನು ಸಾಫ್ಟ್‌ವೇರ್ ಮತ್ತು ಸೇವಾ ಕ್ಷೇತ್ರಗಳಿಂದ ಉತ್ಪಾದನಾ ಕ್ಷೇತ್ರಕ್ಕೆ ಸೆಳೆಯುವ ಪ್ರಯತ್ನ ಆಗಿಲ್ಲ. ನಿಯಂತ್ರಿತ ಮಾರುಕಟ್ಟೆ ಇದ್ದಾಗ್ಯೂ ಚೀನಾ ಇಂದು ಭಾರತಕ್ಕಿಂತ ಹೆಚ್ಚಿನ ಪಟ್ಟು ವಿದೇಶಿ ಬಂಡವಾಳ ಆಕರ್ಷಿಸಿದೆ. ಆದರೆ ಈ ಬಂಡವಾಳ ಉತ್ಪಾದನಾ ವಲಯಕ್ಕೆ ಹೆಚ್ಚು ಹರಿಯುವಂತಹ ನೀತಿಗಳನ್ನು ರೂಪಿಸಿದೆ. ಸಾಫ್ಟ್‌ವೇರ್‌ಗಿಂತ ಹೆಚ್ಚು ಉದ್ಯೋಗ ಸೃಷ್ಟಿ ಮಾಡಬಲ್ಲ, ರಫ್ತು ಶಕ್ತಿಯನ್ನು ಹೆಚ್ಚಿಸಬಲ್ಲ ಹಾರ್ಡ್‌ವೇರ್ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಉದ್ಯಮಿಗಳನ್ನು ಆಕರ್ಷಿಸಲು ಸರ್ಕಾರ ವಿಫಲವಾಗಿದೆ. ತನ್ನ ರಫ್ತು ವಲಯವನ್ನು ಉತ್ತೇಜಿಸಿ ಆಮದು-ರಫ್ತು ಅನುಪಾತವನ್ನು ಕಾಯ್ದುಕೊಳ್ಳುವ ಬದಲು ಚಿನ್ನಕೊಳ್ಳಬೇಡಿ ಎಂದು ಜನರಿಗೆ ಉಪದೇಶ ಮಾಡುವ, ಮಾರದಂತೆ ಬ್ಯಾಂಕುಗಳನ್ನು ನಿರ್ಬಂಧಿಸುವ ಮೂರ್ಖತನವನ್ನು ಈ ಸರ್ಕಾರ ಪ್ರದರ್ಶಿಸುತ್ತಿದೆ. ನಾಲ್ಕು ಒಳ್ಳೆಯ ರಸ್ತೆ ನಿರ್ಮಿಸಿ, ರೈಲು ಸಂಪರ್ಕ ಸದೃಢಗೊಳಿಸಿ, ಬಂದರುಗಳನ್ನು ನವೀಕರಿಸಿ, ಉತ್ಪಾದನೆಯನ್ನು ಹುರಿದುಂಬಿಸಿ ನಂತರ ವ್ಯಾಪಾರ ಮಾಡಲು ಬನ್ನಿ ಎಂದು ಕರೆದರೆ ಯಾರಾದರೂ ಬರುತ್ತಾರೆ. ಅದು ಬಿಟ್ಟು ಎಲ್ಲಕ್ಕೂ ವಿದೇಶಿ ಬಂಡವಾಳವನ್ನೇ ನೆಚ್ಚಿ ಕುಳಿತರೆ ಅದರಿಂದ ಆಗುವುದು ದೇಶೀಯ ಆರ್ಥಿಕತೆಯ ಸರ್ವನಾಶವಷ್ಟೇ. ಆದರೆ 10 ವರ್ಷಗಳ ಆಡಳಿತ ನಡೆಸಿದರೂ ಅರ್ಥಶಾಸ್ತ್ರ ಪರಿಣತ ಮನಮೋಹನ್ ಸಿಂಗ್ ಅವರಿಗಾಗಲಿ, ಯುಪಿಎ ಸರ್ಕಾರಕ್ಕಾಗಲಿ, ಸರ್ಕಾರದ ಸೂತ್ರ ಹಿಡಿದಿರುವ ಸೋನಿಯಾ ಗಾಂಧಿಗಾಗಲಿ ಇದು ಅರ್ಥವಾಗದಿರುವುದೇ ಸೋಜಿಗ.
- ಕೆ.ಎಸ್.ಜಗನ್ನಾಥ್
jagannath.kudinoor@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

