ಅಂಕಣಗಳು

ಒಂದು ಹೆಣ್ಣಿಗೊಂದು ಗಂಡು ಹೇಗೊ ಏನೊ ಹೊಂದಿಕೊಂಡು

ಪ್ರೀತಿ ಎಂಬುದು ಮಾಯೆ. ಒಬ್ಬ ವ್ಯಕ್ತಿಯ ಮನಸ್ಸನ್ನು ಅದು ಎಲ್ಲಿ, ಹೇಗೆ, ಯಾವಾಗ ಪ್ರವೇಶಿಸುತ್ತದೋ ಹೇಳಲು ಬರುವುದಿಲ್ಲ. ಅವರಿವರು...

Published On :

ಪ್ರೀತಿ ಎಂಬುದು ಮಾಯೆ. ಒಬ್ಬ ವ್ಯಕ್ತಿಯ ಮನಸ್ಸನ್ನು ಅದು ಎಲ್ಲಿ, ಹೇಗೆ, ಯಾವಾಗ ಪ್ರವೇಶಿಸುತ್ತದೋ ಹೇಳಲು ಬರುವುದಿಲ್ಲ. ಅವರಿವರು ಹೇಳುವಂತೆ, ಬಹಳಷ್ಟು ಸಂದರ್ಭಗಳಲ್ಲಿ ಪ್ರೀತಿ ಹುಟ್ಟುವುದು ಹೀಗೆ: ಒಂದು ಕಂಪನಿ ಅಂದುಕೊಳ್ಳಿ. ಆ ಕಂಪನಿಯ ಅಗತ್ಯಕ್ಕೆ ತಕ್ಕಂತೆ ಒಂದಷ್ಟು ಜನ ಕೆಲಸ ಮಾಡುತ್ತಿರುತ್ತಾರೆ. ಹೀಗಿರುವಾಗಲೇ ಅಲ್ಲಿರುವ ಒಂದು ಹುಡುಗನಿಗೆ ಹುಡುಗಿಯೊಬ್ಬಳು ಪರಿಚಯವಾಗುತ್ತಾಳೆ. ಆ ಪರಿಚಯ ಹಾಗೇ ಮುಂದುವರಿದು ಗೆಳೆತನವಾಗುತ್ತದೆ. ಈ ಸಂದರ್ಭದಲ್ಲಿ ತನ್ನ ಆಸೆ, ಕನಸು, ನೋವು, ನಿರಾಸೆಯನ್ನೆಲ್ಲ ಹುಡುಗ ಅವಳೊಂದಿಗೆ ತಪ್ಪದೇ ಹೇಳಿಕೊಳ್ಳುತ್ತಾನೆ. ಎಷ್ಟೋ ಸಂದರ್ಭದಲ್ಲಿ ಅವನು ಹೇಳಿದ್ದನ್ನು ಮೌನವಾಗಿ ಕೇಳಿಸಿಕೊಳ್ಳುವುದನ್ನು ಬಿಟ್ಟರೆ, ಹುಡುಗಿ ಬೇರೇನೂ ಮಾಡುವುದಿಲ್ಲ. ಆದರೂ ಮನಸ್ಸು ತೆರೆದಿಟ್ಟು ಕೂತವನಿಗೆ ಏನೋ ಸಮಾಧಾನ. ಇಂಥವೇ ಹತ್ತಾರು ಸಂದರ್ಭಗಳು ಇಬ್ಬರ ಮಧ್ಯೆ ಬಂದು ಹೋದಾಗ, ಅವರಿಗೆ ಅರಿವಿಲ್ಲದಂತೆಯೇ ಒಂದು ಆಪ್ತ ಭಾವನೆ ಬೆಳೆದಿರುತ್ತದೆ. ಪರಸ್ಪರರನ್ನು ಒಂದೆರಡು ದಿನ ನೋಡದೇ ಹೋದರೂ ಏನನ್ನೋ ಕಳೆದುಕೊಂಡಂಥ ಭಾವ. ಇಂಥದೊಂದು ಆಸೆಯ ಭಾವ ತಮ್ಮನ್ನು ಆವರಿಸಿಕೊಂಡಿದೆ ಎಂಬುದು ಅರಿವಾಗುತ್ತಿದ್ದಂತೆಯೇ ಇವನು ಅಥವಾ ಅವಳು 'ಐ ಲವ್ ಯೂ' ಎಂದು ಪಿಸುಗುಟ್ಟಿರುತ್ತಾರೆ. ಮುಂದೆ ನಡೆಯುವುದೆಲ್ಲಾ -ಅತಿ ಮಧುರಾ ಅನುರಾಗ...
ಹೀಗೆ ಪ್ರೀತಿಸುವ ಸಂದರ್ಭದಲ್ಲಿ ಎಷ್ಟೋ ಬಾರಿ ಒಂದಿಡೀ ಸಮೂಹವೇ ನಿಬ್ಬೆರಗಾಗುವಂಥ ಕಥೆಗಳು ಎದುರಾಗುವುದಂಟು. ಈ ಮಾತಿಗೆ ಸಾಕ್ಷಿಯಾಗುವ ಒಂದು ಪುಟ್ಟ ಪ್ರಸಂಗವಿದು.
'ಅರಳು ಮರಳು ಎಂಬಂಥ ಬುದ್ಧಿ, ಮಹಾಲಕ್ಷ್ಮಿಗೆ ಬಾಲ್ಯದಿಂದಲೂ ಇತ್ತು. ಬಡವನಾಗಿದ್ದ ಅವಳ ತಂದೆ ಒಂದೆರಡು ಆಸ್ಪತ್ರೆಗಳಲ್ಲಿ ತೋರಿಸಿದ. ಪ್ರಯೋಜನವಾಗಲಿಲ್ಲ. ವರ್ಷಗಳು ಕಳೆದವು. ಮಹಾಲಕ್ಷ್ಮಿ ಮದುವೆಯ ವಯಸ್ಸಿಗೆ ಬಂದಳು. ಒಂದು ಸಂಬಂಧ ಕುದುರಿದ ತಕ್ಷಣ ಅವಳ ಮದುವೆಯಾಯಿತು. ಹೆಂಡತಿಗೆ ಸ್ವಲ್ಪಮಟ್ಟಿಗಿನ ಅರಳುಮರಳು ಎಂದು ಗೊತ್ತಾಗುತ್ತಿದ್ದಂತೆಯೇ ಅವಳ ಗಂಡ ಉರಿದು ಬಿದ್ದ. ಮಹಾಲಕ್ಷ್ಮಿಗೆ ಹುಚ್ಚಿ ಎಂದು ಹಣೆಪಟ್ಟಿ ಅಂಟಿಸಿ, ತವರು ಮನೆಗೆ ಕಳಿಸಿಬಿಟ್ಟ. ಇದಾಗಿ ಎರಡೇ ವರ್ಷಕ್ಕೆ ಮಹಾಲಕ್ಷ್ಮಿಯ ತಂದೆಯೂ ತೀರಿ ಹೋದ.
ತಂದೆ ತೀರಿಕೊಂಡ ಮೇಲೆ ಮಹಾಲಕ್ಷ್ಮಿಯ ಪರವಾಗಿ ಮಾತನಾಡುವವರೇ ಇಲ್ಲವಾದರು. ಹೊಟ್ಟೆಪಾಡು ನಡೆಯಬೇಕಲ್ಲವೆ? ಈ ಹುಡುಗಿ ಫ್ಯಾಕ್ಟರಿಗೆ ಸೇರಿಕೊಂಡಳು. ಮುಂದಿನ ಕೆಲವೇ ದಿನಗಳಲ್ಲಿ ಅಲ್ಲಿದ್ದ ಪುರುಷರಿಗೆ ಇವಳ 'ಇತಿಹಾಸ' ಗೊತ್ತಾಯಿತು. ಈಕೆಗೆ ಸ್ವಲ್ಪಮಟ್ಟಿಗಿನ ಅರಳುಮರಳು ಎಂಬುದು ಗೊತ್ತಾದ ನಂತರವಂತೂ ಅಲ್ಲಿದ್ದ ಕಿಡಿಗೇಡಿಗಳು ಥ್ರಿಲ್ ಆದರು. ಯಾವುದಾದರೂ ನೆಪದಲ್ಲಿ ಅವಳ ಬಳಿ ಬಂದು ಮೈ ಕೈ ಸೋಕಿಸುತ್ತಾ, ಏನೇನೋ ಸಂಜ್ಞೆ ಮಾಡುತ್ತಾ ವಿಕೃತವಾಗಿ ನಗುತ್ತಿದ್ದರು. ಅವರ ಕಿಡಿಗೇಡಿತನ ಮಹಾಲಕ್ಷ್ಮಿಗೆ ಕೆಲವೊಮ್ಮೆ ಅರ್ಥವಾಗುತ್ತಿತ್ತು. ಕೆಲವೊಮ್ಮೆ ಅರ್ಥವಾಗುತ್ತಿರಲಿಲ್ಲ. ದೈಹಿಕ-ಮಾನಸಿಕವಾಗಿ ಪದೇಪದೆ ನಡೆದ ಹಲ್ಲೆಗಳಿಂದ ಆಕೆ ಒಂದರ್ಥದಲ್ಲಿ ಮಾನಸಿಕ ಅಸ್ವಸ್ಥೆಯೇ ಆಗಿಬಿಟ್ಟಿದ್ದಳು. ಫ್ಯಾಕ್ಟರಿಯಲ್ಲಿದ್ದ ಪುಂಡರ ವಿರುದ್ಧ ದನಿಯೆತ್ತುವ ಧೈರ್ಯ ಅಥವಾ ಚೈತನ್ಯ ಆಕೆಗೆ ಇರಲಿಲ್ಲ.
ಹೀಗಿರುವಾಗ, ಅದೇ ಫ್ಯಾಕ್ಟರಿಗೆ ರಾಮಕೃಷ್ಣನೆಂಬ ತರುಣ ಕೆಲಸಕ್ಕೆ ಸೇರಿದ. ಕೆಲವೇ ದಿನಗಳಲ್ಲಿ ಅವನಿಗೆ ಮಹಾಲಕ್ಷ್ಮಿಯ ಹಿನ್ನೆಲೆ ಮತ್ತು ಆಕೆಗೆ ಆಗುತ್ತಿರುವ ಕಿರುಕುಳವೂ ಅರ್ಥವಾಯಿತು. ಅದೊಂದು ದಿನ ಊಟದ ವೇಳೆಯಲ್ಲಿ ಆಕೆಗೆ ಎಲ್ಲವನ್ನೂ ಬಿಡಿಸಿ ಹೇಳಿದ. ನೀವು ಗಟ್ಟಿಯಾಗಬೇಕು, ತಿರುಗಿ ಬೀಳಬೇಕು. ಭವಿಷ್ಯದ ಬಗ್ಗೆಯೂ ಯೋಚಿಸಬೇಕು ಎಂದೆಲ್ಲಾ ಎಚ್ಚರಿಸಿದ. ತನಗಿಂತ ಎಂಟು ವರ್ಷ ಚಿಕ್ಕವನಿದ್ದ ಈ ಹುಡುಗನ ಕಾಳಜಿ ಕಂಡು ಮಹಾಲಕ್ಷ್ಮಿಗೆ ಅಚ್ಚರಿಯಾಯಿತು. ಮರುದಿನದಿಂದ ಅವಳು ಪ್ರತಿಯೊಂದಕ್ಕೂ ರಾಮಕೃಷ್ಣನ ಸಲಹೆ ಕೇಳತೊಡಗಿದಳು. ದಿನಗಳು ಕಳೆದಂತೆ ಇವರಿಬ್ಬರ ಗೆಳೆತನ ಗಟ್ಟಿಯಾಯಿತು. ಈ ಹುಡುಗನ ಸಹವಾಸದಲ್ಲಿ ಅವಳು ಗೆಲುವಾದಳು. ನದಿಯಾದಳು. ನವಿಲಾದಳು. ಒಂದು ವರ್ಷ ಕಳೆಯುವುದರೊಳಗೆ ಆ ಗೆಳೆತನ ಪ್ರೇಮಕ್ಕೆ ತಿರುಗಿ ಕಡೆಗೊಮ್ಮೆ ದೇವಾಲಯವೊಂದರಲ್ಲಿ ಅವರ ಮದುವೆಯೂ ಆಗಿಹೋಯಿತು.
ಸಮಾಜದ ಕಣ್ಣಲ್ಲಿ ಹುಚ್ಚಿ ಅನ್ನಿಸಿಕೊಂಡವಳನ್ನು ಮದುವೆಯಾದರೆ, ಆನಂತರದಲ್ಲಿ ಹೆಜ್ಜೆ ಹೆಜ್ಜೆಗೂ ಕುಹಕದ ಮಾತು ಹಾಗೂ ಕಷ್ಟಗಳು ಎದುರಾಗುತ್ತವೆ. ರಾಮಕೃಷ್ಣನಿಗೂ ಅದು ಅರ್ಥವಾಯಿತು. ಆತ ಮೊದಲಿಗೆ, ಹೆಂಡತಿಯನ್ನು ಕೆಲಸದಿಂದ ಬಿಡಿಸಿದ. ಬದುಕನ್ನು, ಸಮಾಜವನ್ನು ಹೇಗೆ ಎದುರಿಸಬೇಕೆಂದು ಆಕೆಗೆ ಸಾವಧಾನದಿಂದ ಹೇಳಿಕೊಟ್ಟ. ಅವನ ಮಾತು, ಪ್ರೀತಿ, ಕಳಕಳಿಯನ್ನು ಮಹಾಲಕ್ಷ್ಮಿ ಬೇಗ ಅರ್ಥ ಮಾಡಿಕೊಂಡಳು. ಇವನ ಸಾಂಗತ್ಯ ಅವಳಲ್ಲಿ ಎಂಥ ಬದಲಾವಣೆ ತಂದಿತೆಂದರೆ, ಅರಳು ಮರಳಿನ ಭಾವ ಅವಳಿಂದ ಮಂಗಮಾಯವಾಯಿತು. ಈ ದಂಪತಿಯ ಪ್ರೀತಿಗೆ ವಯಸ್ಸಿನ ಅಂತರ ಅಡ್ಡಿಯಾಗಲಿಲ್ಲ. ಎರಡು ಹೆಣ್ಣು ಮಕ್ಕಳೂ ಜೊತೆಯಾದ ನಂತರ ಹೊಸ ಕಷ್ಟಗಳು ಜೊತೆಯಾದವು. ಆಗ ಮಹಾಲಕ್ಷ್ಮಿ ಇಡೀ ದಿನ ಮನೇಲಿ ಕೂತು ಹೂ ಕಟ್ಟುವುದು, ಬೆಳಗ್ಗೆ ಮತ್ತು ಸಂಜೆ ರಾಮಕೃಷ್ಣ ಅವನ್ನು ಮಾರುವುದು ಕಾಯಕವಾಯಿತು. ಈ ದಂಪತಿ ಯಾವ ಸಂದರ್ಭದಲ್ಲೂ ಅವರಿವರೊಂದಿಗೆ ತಮ್ಮ ಸಂಕಟ ಹೇಳಿಕೊಳ್ಳಲಿಲ್ಲ. ಆರ್ಥಿಕವಾಗಿ ಸ್ವಲ್ಪ ಗೆಲುವಾದ ತಕ್ಷಣ, ಮಹಾಲಕ್ಷ್ಮಿ ತಾನೇ ಮುಂದಾಗಿ ಹೋಗಿ ರಾಮಕೃಷ್ಣನ ಕುಟುಂಬದ ಎಲ್ಲರನ್ನೂ ಮಾತಾಡಿಸಿಕೊಂಡು ಬಂದಳು. ಅವಳ ಸೌಜನ್ಯ ಎಲ್ಲರ ಮನಸ್ಸನ್ನೂ ಗೆದ್ದಿತು. ಆಮೇಲೂ ಕೆಲವರು-ಇವಳಿಗೆ ಹುಚ್ಚು ಇದೆಯಂತೆ... ಅಂದದ್ದುಂಟು. ಆಗ ಮಹಾಲಕ್ಷ್ಮಿಯೇ -'ಯಜಮಾನರ ಪ್ರೀತಿಯನ್ನು ಕಂಡು ಹುಚ್ಚು ಬಿಟ್ಹೋಯ್ತು' ಎಂದು ನಕ್ಕಿದ್ದಳು.
----------
ರಾಮಕೃಷ್ಣ -ಮಹಾಲಕ್ಷ್ಮಿ ದಂಪತಿಯ ಮನೆ ನಮ್ಮ ಪಿ.ಜಿ.ಯ ಹಿಂದಿನ ಕ್ರಾಸ್‌ನಲ್ಲಿದೆ. ಹೂ ಮಾರುವ ನೆಪದಲ್ಲಿ ರಾಮಕೃಷ್ಣ ಬಂದಾಗಲೆಲ್ಲ ನನಗೆ ಕೆ.ಎಸ್.ನ ಅವರ ಪದ್ಯ ನೆನಪಾಗುತ್ತದೆ: ಒಂದು ಹೆಣ್ಣಿಗೊಂದು ಗಂಡು/ಹೇಗೋ ಏನೋ ಹೊಂದಿಕೊಂಡು/ಕಾಣದೊಂದು ಕನಸ ಕಂಡು/ಮಾತಿಗೊಲಿಯದಮೃತವುಂಡು/ದುಃಖ ಹಗುರವೆನುತಿರೆ/ಪ್ರೇಮವೆನಲು ಹಾಸ್ಯವೆ?


- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.