ಶಾಸಕರು, ಅಧಿಕಾರಿಗಳಿಗೆ ನಗರ ನಿರ್ವಹಣೆಯೆಂದರೆ ಅಸಡ್ಡೆ!
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದ ನಂತರ, ಹಿಂದಿನ ಬಿಜೆಪಿ ...
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದ ನಂತರ, ಹಿಂದಿನ ಬಿಜೆಪಿ ಸರ್ಕಾರ ಮಾಡಿದಂಥ ತಪ್ಪುಗಳನ್ನು ತಾನು ಮಾಡುವುದಿಲ್ಲವೆಂದೂ, ಜನತೆಯೊಂದಿಗೆ ಉತ್ತಮ ಸಂಬಂಧ ಹೊಂದುವುದಾಗಿ ಭರವಸೆ ನೀಡಿತು. ಆದರೆ ಜೂನ್ 6 ಮತ್ತು ಜುಲೈ 11 ರಂದು ಬೆಂಗಳೂರಿನಲ್ಲಿ ನಡೆದ ಎರಡು ಘಟನೆಗಳು ಈ ಭರವಸೆಯನ್ನು ಹುಸಿ ಮಾಡಿವೆ.
ಜೂನ್ 6 ರಂದು 300ಕ್ಕೂ ಅಧಿಕ ನಿವಾಸಿ ಕಲ್ಯಾಣ ಸಂಘಗಳ ಪ್ರತಿನಿಧಿಗಳು ಮತ್ತು ನಾಗರಿಕ ಗುಂಪುಗಳು ನಮ್ಮ ಬೆಂಗಳೂರು ಫೌಂಡೇಷನ್‌ನ ಆಶ್ರಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಂದಿದ್ದವು. ಬೆಂಗಳೂರಿನ 28 ಹೊಸ ಶಾಸಕರಿಗೆ ಸನ್ಮಾನ ಮಾಡುವುದಕ್ಕಷ್ಟೇ ಅಲ್ಲದೆ ಅವರಿಗೆ `Govern Right, Govern Responsibly' ಎನ್ನುವ ಹಕ್ಕು ಪತ್ರವನ್ನು ತಲುಪಿಸುವುದು ಅವುಗಳ ಉದ್ದೇಶವಾಗಿತ್ತು. ಈ ಕಾರಣಕ್ಕಾಗಿ ನಿವಾಸಿ ಸಂಘಗಳ ಪ್ರತಿನಿಧಿಗಳು ಮತ್ತು ನಾಗರಿಕ ಗುಂಪುಗಳು ಟೌನ್ ಹಾಲ್‌ನಲ್ಲಿ ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದರು. ಶಾಸಕರೊಂದಿಗೆ ಈ ವಿಷಯವಾಗಿ ಮಾತನಾಡಬೇಕೆಂದು ಕಾಯುತ್ತಿದ್ದರು.
ಆದರೆ ಸಮಾರಂಭಕ್ಕೆ ಆಗಮಿಸಿದ ಶಾಸಕರ ಸಂಖ್ಯೆ ಎಷ್ಟು ಗೊತ್ತೇ? 28 ರಲ್ಲಿ ಕೇವಲ 14! ಇನ್ನು ಆ 14 ಶಾಸಕರೂ ಕೂಡ, 'ಇಷ್ಟವಿಲ್ಲದೇ ಬಂದಿದ್ದೇವೆ' ಎನ್ನುವಂತೆ ವರ್ತಿಸುತ್ತಿದ್ದರು. ನಿಗದಿತ ಸಮಯಕ್ಕಿಂತ ಎಷ್ಟೊ ಹೊತ್ತಿನ ನಂತರ ಅವರು ಅಲ್ಲಿಗೆ ಬಂದರು. ಚರ್ಚಾ ಸಮಯದಲ್ಲಿ ತಾವು ಜನರ ಕೈಗೆ ಸಿಕ್ಕಿಬೀಳದಂತೆ ವಹಿಸಿದ ಎಚ್ಚರಿಕೆಯಾಗಿತ್ತದು! ಇನ್ನು ಸಿ.ಎಂ. ಸಿದ್ದರಾಮಯ್ಯನವರೂ ಅಲ್ಲಿಗೆ ಬರಬೇಕಾಗಿತ್ತು, ಆದರೆ ಅವರೂ ಆ ಕಾರ್ಯಕ್ರಮದಿಂದ ಜಾರಿಕೊಂಡರು. ಜನರ ಸಮಸ್ಯೆಗಳನ್ನು ಆಲಿಸುವುದಕ್ಕೆ ಮತ್ತು ಅವರ ಸಲಹೆಗಳನ್ನು ಕೇಳುವುದಕ್ಕೆ ಇದೊಂದು ಉತ್ತಮ ಅವಕಾಶವಾಗಿತ್ತು. ಆದರೆ ಅವರು ಮಾತ್ರ ಬರದೇ ಇರುವುದಕ್ಕೆ ನೆಪ ಹುಡುಕಿಕೊಂಡರು. ಚುನಾವಣಾ ಸಮಯದಲ್ಲಿ ಇವರೆಲ್ಲರೂ ನಮ್ಮ ಮನೆಗಳ ಮುಂದೆ ನಡುಬಗ್ಗಿಸಿಕೊಂಡು ಬಂದು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ದೊಡ್ಡ ದೊಡ್ಡ ಮಾತನಾಡಿದ್ದರು!
ಆದರೆ ಸಂಘಗಳ ಪ್ರತಿನಿಧಿಗಳು ನಗರದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ಇಡುತ್ತಿರುವ ವಿಫಲ ಹೆಜ್ಜೆಗಳ ಬಗ್ಗೆ ಹಿಂಜರಿಯದೇ ಮಾತನಾಡಿದ್ದು ಕುತೂಹಲಕರವಾಗಿತ್ತು. ಉಪಸ್ಥಿತರಿದ್ದ 14 ಶಾಸಕರುಗಳು ಕುಳಿತಲ್ಲಿಯೇ ಕೊಸರಾಡತೊಡಗಿದರು. ಸಾರ್ವಜನಿಕ ಹಣದ ದುರ್ಬಳಕೆ, ಭೂ ಒತ್ತುವರಿ, ಕಳಪೆ ರಸ್ತೆಗಳು, ಪರಿಸರ ಮಾಲಿನ್ಯ, ಅಂತರ್ಜಲ ಬತ್ತುವಿಕೆ, ಉತ್ತರದಾಯಿತ್ವದ ಅಭಾವದ ಕುರಿತ ಹಲವಾರು ಪ್ರಶ್ನೆಗಳು ಈ ಶಾಸಕರುಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಸುಳ್ಳಲ್ಲ. ಶಾಸಕರ ಪರವಾಗಿ ಸಚಿವ ರಾಮಲಿಂಗಾರೆಡ್ಡಿಯವರು ಮಾತನಾಡಿದರಾದರೂ ಅವರೂ ಹಾರಿಕೆಯ ಉತ್ತರ ಕೊಟ್ಟರು. ಸುಧಾರಣೆಯಲ್ಲಿ ನಾಗರಿಕರ ಪಾತ್ರವೂ ಅವಶ್ಯಕವಾದದ್ದು ಎಂದು ಕೊನೆಗೆ ಮಾತುಮುಗಿಸಿದರು. 'ಇದೆಲ್ಲಾ ಬೇಗ ಮುಗಿಯಲಿ' ಎಂದೇ ಕಾದು ಕುಳಿತಂತಿದ್ದ ಶಾಸಕರುಗಳು ಕೆಲವೇ ಕ್ಷಣಗಳಲ್ಲಿ ಟೌನ್‌ಹಾಲ್‌ನಿಂದ ಹೊರಬಿದ್ದು ಕಣ್ಮರೆಯಾದರು.
ಆದರೆ ನಿವಾಸಿ ಕಲ್ಯಾಣ ಸಂಘಗಳು ಮತ್ತು ನಾಗರಿಕ ಗುಂಪುಗಳು ಸುಮ್ಮನೆ ಕೂಡುವುದಿಲ್ಲ. ಮುಂದಿನ ಐದು ವರ್ಷಗಳವರೆಗೂ ಸರ್ಕಾರದ ಯೋಜನೆಗಳನ್ನು ಅವು ಕೂಲಂಕಷವಾಗಿ ಗಮನಿಸಲಿವೆ. ಶಾಸಕರು ಇದರಿಂದ ಅಷ್ಟೊಂದು ಸುಲಭವಾಗಿ ತಪ್ಪಿಸಿಕೊಳ್ಳಲಾರರು.
ಜುಲೈ 11 ರಂದು ಕೂಡ ಇಂಥದ್ದೇ ಘಟನೆಯೊಂದು ನಡೆಯಿತು. ಬಿಬಿಎಂಪಿ, ಬಿಡಿಎ, ಕೆಎಸ್‌ಬಿಸಿಬಿ ಮುಂತಾದ ನಾಗರಿಕ ಸಂಸ್ಥೆಗಳ ಮುಖ್ಯಸ್ಥರುಗಳು, ಅಮೆರಿಕದ ತಾಂತ್ರಿಕ ಪರಿಣಿತ ತಂಡದ ಜೊತೆ ನಡೆಯಬೇಕಿದ್ದ ಸಭೆಗೆ ಚಕ್ಕರ್ ಹಾಕಿದರು! ಬೆಂಗಳೂರಿನಲ್ಲಿ ಅವಸಾನದ ಅಂಚಿನಲ್ಲಿರುವ ಕೆರೆಗಳ ಪುನಃಶ್ಚೇತನದ ಬಗ್ಗೆ ನಡೆದ ಸಭೆಯದು! 148 ಚ.ಕಿ.ಮಿ ಸಂಗ್ರಹಣಾ ಪ್ರದೇಶ ಹೊಂದಿರುವ ಬೆಳಂದೂರು ಕೆರೆ ಈ ಪಟ್ಟಿಯ ಮೊದಲನೇ ಸ್ಥಾನದಲ್ಲಿತ್ತು. ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಜಲಮೂಲಗಳ ಪುನಶ್ಚೇತನದಿಂದ ಮಾತ್ರ ಬೆಂಗಳೂರಿನ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು ಎನ್ನುವ ಬಗ್ಗೆ ಈ ನಿರ್ವಾಹಕರಿಗೆ ತಿಳಿಸಿಹೇಳಲಾಗಿತ್ತು. ಆದರೆ ಅವರುಗಳು ಈ ಸಭೆಗೆ ಹಾಜರಾಗುವ ಬದಲು ತಮ್ಮ ಕಿರಿಯ ಅಧಿಕಾರಿಗಳನ್ನು ಕಳುಹಿಸಿ ಕೈತೊಳೆದುಕೊಂಡರು. ಬೆಂಗಳೂರಿನ ನಿರ್ವಾಹಕರ ಬಗ್ಗೆ ಅಮೆರಿಕದ ತಂತ್ರಜ್ಞರಿಗೆ ಯಾವ ರೀತಿಯ ಭಾವನೆ ಮೂಡಿರಬಹುದೊ ಯೋಚಿಸಿ?
ಅಮೆರಿಕದ ತಂಡವೇನೂ ತನ್ನಷ್ಟಕ್ಕೇ ತಾನೇ ಬೆಂಗಳೂರಿಗೆ ಬಂದಿರಲಿಲ್ಲ. ಬೆಳಂದೂರು, ವರ್ತೂರು, ಅಗರಾ ಮತ್ತು ಮಡಿವಾಳ ಕೆರೆಗಳ ಪುನಶ್ಚೇತನಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನವೆಂಬರ್ 2012ರಲ್ಲಿ ಈ ತಂಡದೊಂದಿಗೆ ಒಪ್ಪಂದಮಾಡಿಕೊಂಡಿದ್ದರಿಂದ ಅವರು ಬಂದಿದ್ದರು. "ಪ್ರಪಂಚದಲ್ಲಿ ಕೇವಲ 2.5 ಪ್ರತಿಶತ ನೀರಷ್ಟೇ ಸ್ವಚ್ಛ ನೀರಾಗಿದ್ದು, ಅದರಲ್ಲಿ ಕೇವಲ 0.3 ಪ್ರತಿಶತದಷ್ಟು ಮಾತ್ರ ಕುಡಿಯಲು ಯೋಗ್ಯವಾಗಿದೆ. ದಿನನಿತ್ಯದ ಬಳಕೆ ಮತ್ತು ಸೇವನೆಗಾಗಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಅಗತ್ಯವಿದೆ. ಮುಂದಿನ 4 ಅಥವಾ 6 ವಾರಗಳಲ್ಲಿ, ಕೆರೆಗಳ ಪುನಶ್ಚೇತನಕ್ಕೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗೆಗಿನ ವರದಿಯನ್ನು ಬಿಡಿಎಗೆ ಸಲ್ಲಿಸುತ್ತೇವೆ" ಎಂದು ಹೇಳಿತು ಆ ತಂಡ.
ಹಿಂದೆ, ಸಾವಿರ ಕೆರೆಗಳ ನಗರಿ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರಿನಲ್ಲೀಗ 280 ಕೆರೆಗಳು ಮಾತ್ರ ಜೀವಂತವಾಗಿವೆ. ಕೆರೆಗಳ ಪುನಶ್ಚೇತನದಿಂದಾಗಿ ಬೆಂಗಳೂರಿನ ಜಲ ಸಮಸ್ಯೆಯನ್ನು ಬಗೆಹರಿಸಬಹುದು. ನಗರ ನಿರ್ವಾಹಕರಿಗೂ ಈ ವಿಷಯ ತಿಳಿದಿದೆ. ಆದರೆ ಸಹಾಯ ಬಂದಾಗ ಬೇರೆಡೆ ತಿರುಗಿ ಕುಳಿತುಕೊಳ್ಳುತ್ತಿದ್ದಾರವರು.
ಈಗಲೂ ಸಮಯವಿದೆ. ಶಾಸಕರು ಮತ್ತು ಅಧಿಕಾರಿಗಳು ಬೆಂಗಳೂರಿನ ಜನತೆಯ ಜೊತೆ ಕೈ ಜೋಡಿಸಿ, ನಗರಕ್ಕೆ ಈಗ ಕಾಡುತ್ತಿರುವ ಸಮಸ್ಯೆಗಳಿಂದ ಮುಕ್ತಿ ಕೊಡಿಸುವುದಕ್ಕೆ ಶಕ್ತರಾಗಿದ್ದಾರೆ.
ಕೊನೆಯ ಗುಟುಕು: 'ಥ್ಯಾಂಕ್ಯೂ' ಅನ್ನುವ ಪದ ಈಗ ಅವಸಾನದ ಅಂಚಿನಲ್ಲಿದೆ ಎನ್ನುವುದು ನಿಮಗೆ ಗೊತ್ತೇ? ಈಗ ಅದರ ಜಾಗದಲ್ಲಿ, ಸೂಪರ್, ಆಸಂ, ಚೀರ್ಸ್, ಟಿ, ಕೂಲ್, ಬ್ರಿಲಿಯಂಟ್, ಫ್ಯಾಬ್, ಲವ್ಲಿ, ಮತ್ತು ಬೂಮ್! ಎನ್ನುವ ಪದಗಳು ಬಂದು ಕುಳಿತುಕೊಳ್ಳುತ್ತಿವೆ.
- ಎಚ್.ಎಸ್. ಬಲರಾಮ್
hsbalram@gmail.com
(ಈ ಲೇಖನದ ಇಂಗ್ಲಿಷ್ ಅವತರಣಿಕೆ www.namma-bengaluru.org ಹಾಗೂ www.suvarnanews.tv/features ನಲ್ಲಿ ಕನ್ನಡ ಅಂಕಣ ಲಭ್ಯ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

