ನೋಟು ಛಾಪಿಸಿದ ಚಪ್ಪರ್‌ಬಂದ್ ಬದುಕಿಗಿಲ್ಲ ಸುಖದ ಛಾಪು
ಸಮುದ್ರದ ಜೊತೆಗೆ ನಂಟು, ಉಪ್ಪಿಗೆ ಬರ ಎಂಬಂತೆ ನೋಟು, ನಾಣ್ಯಗಳು ಕೈಯ್ಯಲ್ಲಿ ...
ಸಮುದ್ರದ ಜೊತೆಗೆ ನಂಟು, ಉಪ್ಪಿಗೆ ಬರ ಎಂಬಂತೆ ನೋಟು, ನಾಣ್ಯಗಳು ಕೈಯ್ಯಲ್ಲಿ ಸದಾ ಹರಿದಾಡುತ್ತಿದ್ದರೂ ಬದುಕಿನಲ್ಲಿ ಮಾತ್ರ ಶ್ರೀಮಂತಿಕೆ ಕಾಣಲು ಆಗಲೇ ಇಲ್ಲ.
ಹೌದು. ನೋಟು ಮತ್ತು ನಾಣ್ಯಗಳನ್ನು ಮುದ್ರಿಸಿಕೊಡುವುದು ಈ ಸಮುದಾಯದವರ ಕಾಯಕವಾಗಿತ್ತು. ಹಣ ಸದಾ ಕಣ್ಣ ಮುಂದೆಯೇ ಇರುತ್ತಿತ್ತು. ಆದರೆ, ಸುಖ ಎಂಬುದು ಈ ಸಮಾಜದವರ ಬದುಕಿನೊಳಗೆ ಬರಲೇ ಇಲ್ಲ. ಆಂದಹಾಗೆ ಈ ಸಮುದಾಯದ ಹೆಸರು 'ಚಪ್ಪರ್‌ಬಂದ್'.
ಇದು ಮುಸ್ಲಿಂ ಸಮುದಾಯಕ್ಕೆ ಸೇರಿದ ಒಂದು ಪಂಗಡ. ಈ ಸಮಾಜದ ಜನ ಮೂಲತ: ಉತ್ತರ ಭಾರತವರು. ಅದರಲ್ಲೂ ಮೊಘಲರ ಕಾಲದಲ್ಲಿ ತಮ್ಮ ಅಸ್ತಿತ್ವ ಕಂಡುಕೊಂಡವರು. ಮೊಘಲರ ಸೇನೆಯಲ್ಲಿ ಸೈನಿಕರಾಗಿ ಕೆಲಸ ಮಾಡಿದವರು. ಆ ಸಂದರ್ಭದಲ್ಲಿ ಇವರು ನೋಟು, ನಾಣ್ಯಗಳನ್ನು ಛಾಪಿಸುತ್ತಿದ್ದರು. ಹೀಗಾಗಿ ಛಪ್ಪರ್ ಎಂಬ ಹೆಸರು ಬಂದಿರಬಹುದು. ಅದು ಕ್ರಮೇಣ ಚಪ್ಪರ್ ಆಗಿರಬಹುದು.
ಜೊತೆಗೆ ಮೊಘಲರಿಗೆ ಡೇರೆ, ಟೆಂಟು, ಚಪ್ಪರ ಕಟ್ಟಿಕೊಡುತ್ತಿದ್ದರಂತೆ. ಇದರಿಂದಾಗಿಯೂ ಚಪ್ಪರ್‌ಬಂದ್ ಎಂಬ ಹೆಸರು ಬಂದಿರುವ ಸಾಧ್ಯತೆ ಇದೆ. ಚಪ್ಪರ್ ಎಂದರೆ ಚಪ್ಪರ, ಬಾಂದ್ ಎಂದರೆ ಕಟ್ಟುವುದು ಎಂದರ್ಥ.
ಅದಿಲ್‌ಶಾಹಿ ಜೊತೆಯಲ್ಲಿ ಬಂದರು: ಚಪ್ಪರ್‌ಬಂದ್ ಸಮಾಜದವರು ಪಂಜಾಬ್, ಹರಿಯಾಣ, ದೆಹಲಿ ಸೇರಿದಂತೆ ಉತ್ತರ ಭಾರತದ ನಾನಾ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರಂತೆ. ಮೊಘಲರು ದಕ್ಷಿಣದ ಕಡೆ ದಂಡೆತ್ತಿ ಬಂದಾಗ ಇವರೂ ಅವರ ಜೊತೆಯಲ್ಲೇ ಕರ್ನಾಟಕಕ್ಕೆ ಬಂದರು. ಮೊಘಲ್ ದೊರೆಗಳು ಅದಿಲ್‌ಶಾಹಿಗಳ ಬಿಜಾಪುರಕ್ಕೆ ಬಂದಾಗ ಅವರೊಂದಿಗೆ ಅಲ್ಲಲ್ಲಿ ಡೇರೆ ಹಾಕಿಕೊಂಡು ಚಪ್ಪರ್‌ಬಂದ್ ಪಂಗಡದವರೂ ಬಂದರು. ಮೊಘಲರ ಬಳಿಕವೂ ಅವರು ಇಲ್ಲೇ ಉಳಿದುಕೊಂಡರು. ಹೀಗಾಗಿ ಬಿಜಾಪುರ, ಧಾರವಾಡ, ಗದಗ, ಧಾರವಾಡ ಜಿಲ್ಲೆಯಲ್ಲಿ ಈ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕರ್ನಾಟಕ ರಾಜ್ಯ ಚಪ್ಪರ್‌ಬಂದ್ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿ ನಕಿತ್ಸ ಇಮಾಮ್ಸ ಅವರ ಪ್ರಕಾರ, ನೋಟು,ನಾಣ್ಯ ಛಾಪಿಸುವ, ಡೇರೆ ಕಟ್ಟುವ ಕೆಲಸವನ್ನು ಬ್ರಿಟಿಷರ ಆಳ್ವಿಕೆ ಬಂದ ಬಳಿಕ ಈ ಸಮುದಾಯದ ಜನ ಕಳೆದುಕೊಂಡರು. ಆಗ ಜೀವನೋಪಾಯಕ್ಕೆ ಬೇರೆ ಮಾರ್ಗ ಇಲ್ಲದಂತಾಯಿತು. ಆಗ ಖೋಟಾ ನಾಣ್ಯಗಳನ್ನು ಮುದ್ರಿಸಿ ಚಲಾವಣೆ ಮಾಡಲು ಶುರು ಮಾಡಿದರು. ಐದು ಒಳ್ಳೆಯ ನಾಣ್ಯಗಳ ಜೊತೆಗೆ ಇನ್ನೈದು ನಕಲಿ ನಾಣ್ಯಗಳನ್ನು ಕೊಟ್ಟು ಜನರನ್ನು ವಂಚಿಸಲು ಆರಂಭಿಸಿದರು. ಈ ಸಮಾಜದ ಜನ ವಿಶೇಷವಾದ ಭಾಷೆಯನ್ನು ಬಳಕೆ ಮಾಡುತ್ತಾರೆ. ಪರ್ಸಿಯನ್, ಉರ್ದು,ಕನ್ನಡ, ಮರಾಠಿ,ಅರೇಬಿಕ್, ಹಿಂದಿ, ಬೋಜಪುರಿ ಸೇರಿದಂತೆ 16 ಭಾಷೆಗಳನ್ನು ಜೋಡಿಸಿ ಮಾತನಾಡುವ ಭಾಷೆ ಅದು. ಆ ಭಾಷೆ ಅವರ ಸಮುದಾಯದ ಜನರಿಗೆ ಮಾತ್ರ ಅರ್ಥವಾಗಲು ಸಾಧ್ಯ. ಬೇರೆಯವರಿಗೆ ಅರ್ಥವಾಗುವುದೇ ಇಲ್ಲ.
ನಾಣ್ಯಗಳನ್ನು ಮುದ್ರಿಸುವ ಕಲೆ: ನಾಣ್ಯಗಳನ್ನು ಮುದ್ರಿಸುವ ಕಲೆಯನ್ನು ಚಪ್ಪರ್‌ಬಂದ್ ಸಮಾಜದವರು ಚೆನ್ನಾಗಿ ಬಲ್ಲವರಾಗಿದ್ದರು. ನಾಣ್ಯಗಳನ್ನು ಮುದ್ರಿಸಲು ಬೇಕಾದ ವಸ್ತುಗಳನ್ನು ಸಂಗ್ರಹಿಸಿ ಅದಕ್ಕೆ ಮಣ್ಣು ಹಾಗೂ ರಾಸಾಯನಿಕ ವಸ್ತುಗಳನ್ನು ಸೇರಿಸಿ ಅಚ್ಚಿನಲ್ಲಿ ನಾಣ್ಯಗಳನ್ನು ಮುದ್ರಿಸುತ್ತಿದ್ದರು. 1935-1936ರಲ್ಲಿ ಇವರು ನಾಣ್ಯಗಳನ್ನು ಮುದ್ರಿಸುವ ಕಸುಬು ಬಿಡಬೇಕಾಗಿ ಬಂತು.
ಮೊಘಲರ ಕಾಲದಲ್ಲಿ ರಾಜರು ನಾನಾ ರಾಜ್ಯಗಳ ಮೇಲೆ ದಂಡೆತ್ತಿ ಹೋಗುತ್ತಿದ್ದರು. ಅವರೊಂದಿಗೆ ಭಾರಿ ಪ್ರಮಾಣದಲ್ಲಿ ಸೇನೆಯೂ ಹೋಗುತ್ತಿತ್ತು. ಮಾರ್ಗಮಧ್ಯೆ ವಸತಿ ಸೌಕರ್ಯ ಇರುತ್ತಿರಲಿಲ್ಲ. ಹೀಗಾಗಿ ಡೇರೆಗಳನ್ನು ಹಾಕಲು ರಾಜರು ಚಪ್ಪರ್‌ಬಂದ್ ಸಮುದಾಯದವರನ್ನು ಕರೆದುಕೊಂಡು ಹೋಗುತ್ತಿದ್ದರು. ಹೀಗಾಗಿ ಡೇರೆ ಹಾಕುವುದೇ ಸಮಾಜದವರ ಕುಲಕಸುಬು ಆಯಿತು. ನಕಲಿ ನಾಣ್ಯಗಳನ್ನು ಚಲಾವಣೆ ಮಾಡುತ್ತಿದ್ದುದರಿಂದ ಬ್ರಿಟಿಷರು ಇವರನ್ನು ಅಪರಾಧಿಗಳೆಂದು ಪರಿಗಣಿಸಿದರು.ಬಿಜಾಪುರ ಜಿಲ್ಲೆಯ ನಾನಾ ಕಡೆ ನೆಲೆಸಿದ್ದ ಇವರಿಗೆ ಬ್ರಿಟಿಷರು ಒಂದು ಪ್ರದೇಶ ಗುರುತಿಸಿ ಅಲ್ಲಿ ನೆಲೆ ನಿಲ್ಲುವಂತೆ ಸೂಚಿಸಿದರು. ಜೊತೆಗೆ ನಾನಾ ಸೌಲಭ್ಯಗಳನ್ನು ಕಲ್ಪಿಸಿದರು.
ಬಡೇ ಭಾಯಿ, ಛೋಟೆ ಭಾಯಿ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದಾಗ ಡಾ.ಸಿ.ಎಸ್.ದ್ವಾರಕಾನಾಥ್ ಅವರು ಈ ಸಮಾಜದ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅವರ ಪ್ರಕಾರ, ಚಪ್ಪರ್‌ಬಂದ್ ಸಮುದಾಯದಲ್ಲಿ ಎರಡು ವರ್ಗಗಳಿವೆ. ಒಂದು ಬಡೇಬಾಯಿ ಮತ್ತೊಂದು ಚೋಟಾ ಬಾಯಿ. ಅಂದರೆ ದೊಡ್ಡಣ್ಣ ಮತ್ತು ಚಿಕ್ಕಣ್ಣ ಎಂದರ್ಥ. ರಾಜ್ಯದಲ್ಲಿ ಇವರ ಜನಸಂಖ್ಯೆ ಒಂದೂವರೆ ಲಕ್ಷದಷ್ಟು ಇರಬಹುದು. ಸರ್ಕಾರದ ಜಾತಿ ಪಟ್ಟಿಯಲ್ಲಿ ಇವರು ಪ್ರವರ್ಗ-1ರಲ್ಲಿ ಇದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬುದು ಸಮುದಾಯದ ಸಂಘಟನೆಯಲ್ಲಿ ತೊಡಗಿರುವ ಮುಖಂಡರ ಒತ್ತಾಯ.
ಇಸ್ಲಾಂ ಪಂಗಡಕ್ಕೆ ಸೇರಿರುವುದರಿಂದ ಮುಸ್ಲಿಂ ಸಂಪ್ರದಾಯಗಳನ್ನೇ ಚಪ್ಪರ್‌ಬಂದ್ ಸಮಾಜದವರು ಪಾಲಿಸುತ್ತಾರೆ. ರಂಜಾನ್ ಹಬ್ಬದ ವೇಳೆ ಉಪವಾಸ ಆಚರಣೆ, ಖುರಾನ್ ಪಠಣ, ಗಡ್ಡ ಬಿಡುವುದು, ಫಕೀರರ ಮಾದರಿಯಲ್ಲಿ ವಸ್ತ್ರ ಧರಿಸುವುದು ಮಾಡುತ್ತಾರೆ.
ಚಪ್ಪರ್‌ಬಂದ್ ಸಮುದಾಯದವರು ಎಂದರೆ ಡಕಾಯಿತರು ಎಂಬ ಭಾವನೆ ಮೊದಲು ಇತ್ತು. ಏಕೆಂದರೆ ಇವರು ಗುಡ್ಡಗಾಡು ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದರು. ನಕಲಿ ನಾಣ್ಯಗಳ ಚಲಾವಣೆಗಾಗಿ ಹೊರಗೆ ಬರುತ್ತಿದ್ದರು. ವ್ಯವಹಾರ ಮುಗಿಸಿ ಗುಡ್ಡಗಾಡು ಪ್ರದೇಶ ಸೇರಿಕೊಳ್ಳುತ್ತಿದ್ದರು. ಹೀಗಾಗಿ ಡಕಾಯಿತರು ಎಂಬ ಅನುಮಾನ ಬರಲು ಕಾರಣವಾಯಿತು. ಇದೇ ಕಾರಣಕ್ಕೆ ಬ್ರಿಟಿಷರು ನಮ್ಮನ್ನು ಅಲೆಮಾರಿ ವರ್ಗಕ್ಕೆ ಸೇರಿಸಿದ್ದರು ಎನ್ನುತ್ತಾರೆ ನಕಿತ್ಸ ಇಮಾಮ್ಸ ಅವರು. ನಮ್ಮ ಜನ ಮಿಲಿಟರಿಯಲ್ಲೂ ಸೇವೆ ಸಲ್ಲಿಸಿದ್ದಾರೆ. ಆದರೆ, ಅದನ್ನು ಸಾಬೀತುಪಡಿಸುವ ದಾಖಲೆಗಳು ನಮ್ಮಲ್ಲಿ ಇಲ್ಲ ಎನ್ನುತ್ತಾರೆ ಅವರು.
ಸೆಟ್ಲ್‌ಮೆಂಟ್ ಪ್ರದೇಶದಲ್ಲಿ: ಬ್ರಿಟಿಷರ ಕಾಲದಲ್ಲಿ ಇವರನ್ನು ಸೆಟ್ಲ್‌ಮೆಂಟ್ ಪ್ರದೇಶದಲ್ಲಿ ಇರಿಸಲಾಗಿತ್ತು. ಬಳಿಕ ಬ್ರಿಟಿಷರೇ ಹೊಲ, ಗದ್ದೆಗಳನ್ನು ಕೊಟ್ಟು ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿದ್ದರು. ಸಿಕ್ಕ ಜಮೀನಿನಲ್ಲಿ ಇಂದಿಗೂ ಕೆಲವರು ವ್ಯವಸಾಯ ಮಾಡಿಕೊಂಡಿದ್ದಾರೆ. ನಕಲಿ ನಾಣ್ಯಗಳ ಚಲಾವಣೆಯಂತೂ ಸಂಪೂರ್ಣವಾಗಿ ನಿಂತು ಹೋಗಿದೆ. ಕುಲ ಕಸುಬು ಬಿಟ್ಟು ಕೆಲವರು ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಶಾಮಿಯಾನ ಹಾಕುವ, ಬಾರ್ ಬೈಂಡಿಂಗ್ ಮಾಡುವ ಮತ್ತು ಆಟೋ ಓಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.
ಇನ್ನೂ ಕೆಲವರು ಕಟ್ಟಡ ನಿರ್ಮಾಣ ಕಾಮಗಾರಿ, ಸೈಕಲ್ ಶಾಪ್, ವರ್ಕ್‌ಶಾಪ್, ಗ್ಯಾರೇಜ್ ಇಟ್ಟುಕೊಂಡಿದ್ದಾರೆ. ಹಲವರು ಅಂತಹ ಕಡೆಗಳಲ್ಲಿ ಸಹಾಯಕರಾಗಿ ದುಡಿಯುತ್ತಿದ್ದಾರೆ. ಈ ಸಮುದಾಯದ ಜನ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದಾರೆ. ರಾಜಕೀಯ ಪ್ರಾತಿನಿಧ್ಯವಂತೂ ಇಲ್ಲವೇ ಇಲ್ಲ. ಇವರಲ್ಲಿ ಈ ಹಿಂದೆ ಎಸ್‌ಎಸ್‌ಎಲ್‌ಸಿ ಪಾಸಾದವರ ಸಂಖ್ಯೆ 10ರಿಂದ 20 ಮಾತ್ರ ಇತ್ತು. ಮಹಿಳೆಯರ ಶೈಕ್ಷಣಿಕ ಮಟ್ಟವಂತೂ ಚಿಂತಾಜನಕವಾಗಿತ್ತು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಕೊಳಚೆ ಪ್ರದೇಶಗಳಲ್ಲಿ ನೆಲೆಸಿರುವ ಈ ಸಮುದಾಯದ ಜನರ ಏಳಿಗೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ದ್ವಾರಕಾನಾಥ್ ಅವರು ಸರ್ಕಾರಕ್ಕೆ ಶಿಫಾರಸುಗಳನ್ನು ಸಹ ಸಲ್ಲಿಸಿದ್ದರು. ವಿಶೇಷ ಪ್ಯಾಕೇಜ್ ಘೋಷಿಸುವಂತೆಯೂ ಪ್ರಸ್ತಾವನೆ ಸಲ್ಲಿಸಿದ್ದರು.
ಆದರೆ, ಅವರು ಸಲ್ಲಿಸಿರುವ ವರದಿ ಇನ್ನೂ ವರದಿಯಾಗಿಯೇ ಉಳಿದುಕೊಂಡಿದೆ. ಸಂಘ ಅಸ್ತಿತ್ವಕ್ಕೆ ಬಂದ ಬಳಿಕ ಸಮಾಜದ ಸಂಘಟನೆಯಾಗುತ್ತಿದೆ. ಇದಕ್ಕಾಗಿ ನಕಿತ್ಸ ಇಮಾಮ್ಸ ಅವರು ಶ್ರಮಿಸುತ್ತಿದ್ದಾರೆ. ಅಲ್ಲಲ್ಲಿ, ಸಭೆ, ಸಮಾವೇಶಗಳನ್ನು ನಡೆಸುತ್ತಿದ್ದಾರೆ. ಸರ್ಕಾರ ನಮ್ಮ ಸಮುದಾಯದ ಕಡೆ ನೋಡುವುದು ಯಾವಾಗ ಎಂಬುದು ಅವರ ಪ್ರಶ್ನೆ.
ಚಪ್ಪರ್‌ಬಂದ್ ಸಮುದಾಯವನ್ನು ಸರ್ಕಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಮೀಸಲು ಸೌಲಭ್ಯದ ಕೋಟಾ ಜಾಸ್ತಿ ಮಾಡಬೇಕು. ಆಗ ಮಕ್ಕಳು ಶೈಕ್ಷಣಿಕವಾಗಿ ಮುಂದುವರಿಯಲು ಸಹಾಯವಾಗುತ್ತದೆ. ಉದ್ಯೋಗ ಅವಕಾಶಕ್ಕೂ ಇದು ಅನುಕೂಲ.
- ನಕಿತ್ಸ ಇಮಾಮ್ಸ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಚಪ್ಪರ್‌ಬಂದ್ ಸಮಾಜ ಸಂಘ
- ಕೆ.ವಿ.ಪ್ರಭಾಕರ
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

