ಹೀಗೊಂದು ಪಿಗ್ಗಿ ಬಿದ್ದ ಪ್ರಸಂಗ
ಸಾಮಾನ್ಯವಾಗಿ ಕೃತಿಯನ್ನು ಓದಿ ಪ್ರಭಾವಿತರಾಗುತ್ತೇವೆ ಅಥವಾ ಅದರ...
ಸಾಮಾನ್ಯವಾಗಿ ಕೃತಿಯನ್ನು ಓದಿ ಪ್ರಭಾವಿತರಾಗುತ್ತೇವೆ ಅಥವಾ ಅದರ ಪರಿಣಾಮ ನಮ್ಮ ಮೇಲಾಗುತ್ತದೆ. ಆದರೆ ಈ ಕೃತಿಯ ಶೀರ್ಷಿಕೆಯೇ ಅಂಥ ಪರಿಣಾಮ ಮಾಡುತ್ತದೆ!
ದುಬೈಗೆ ಹೋದಾಗಲೆಲ್ಲಾ ಅಲ್ಲಿನ ವಿಮಾನ ನಿಲ್ದಾಣದ ಪುಸ್ತಕದ ಅಂಗಡಿಗೆ ಹೋಗುವುದು ರೂಢಿ. ಆ ಅಂಗಡಿಯಲ್ಲಿರುವ ಉಡುಪಿಯ ಸ್ನೇಹಿತ ವಿನೋದ್, ಸೇಲ್ಸ್ ಮ್ಯಾನೇಜರ್. ಅವನನ್ನು ನೋಡುವುದು ಒಂದು ನೆಪವಾದರೆ, ಜಗತ್ತಿನಲ್ಲಿ ಬಿಡುಗಡೆಯಾದ ಇಂಗ್ಲಿಷ್ ಪುಸ್ತಕಗಳು ಬೇಗನೆ ಅಲ್ಲಿ ಸಿಗುತ್ತವೆಂಬುದು ಇನ್ನೊಂದು ಕಾರಣ. ಮೊನ್ನೆ ರವಾಂಡಾದಿಂದ ವಾಪಸ್ ಬರುವಾಗ ಆ ಅಂಗಡಿಗೆ ಹೋಗಿದ್ದೆ. ವಿನೋದ್ ಕಾಣಲಿಲ್ಲ. ಪುಸ್ತಕಗಳ ರಾಶಿಯೊಳಗೆ ಕೆಲ ಕಾಲ ಮೈಮರೆತೆ. ಇಷ್ಟವಾದ ಕೆಲ ಪುಸ್ತಕಗಳನ್ನು ಖರೀದಿಸಿದೆ.
ಆ ಪೈಕಿ ಒಂದು ಪುಸ್ತಕ ಗಮನ ಸೆಳೆಯಿತು. ಅದರ ಶೀರ್ಷಿಕೆ F for Effort! ಅಂತ. ಈ ಕೃತಿಗೆ ಇರುವ ಅಡಿ ಶೀರ್ಷಿಕೆ More of the very Best Totally Wrong Test Answersತಪ್ಪಾಗಿ ಬರೆದಿದ್ದರೂ, ನಾವು ಅದನ್ನು ಹಾಗೆ ಓದದೇ, ಸರಿಯಾಗಿಯೇ ಓದಿರುತ್ತೇವೆ. ಅಂಥ ನೂರಾರು ನಿದರ್ಶನಗಳನ್ನು ಪಟ್ಟಿ ಮಾಡಿ ಲೇಖಕ ಈ ಪುಟ್ಟ, ಆಸಕ್ತಿದಾಯಕ ಪುಸ್ತಕವನ್ನು ರಚಿಸಿದ್ದಾನೆ. ಉದಾಹರಣೆಗೆ Noble Prize ಎಂದು ತಪ್ಪು ಬರೆದರೆ ಅದರಲ್ಲಿನ ತಪ್ಪನ್ನು (ಅದು Noble @ÄÇ Nobel ಎಂದಾಗಬೇಕು) ಗಮನಿಸದೇ ನಮ್ಮ ಪಾಡಿಗೆ ನಾವು ಸರಿಯಾಗಿಯೇ ಓದಿಕೊಂಡು ಹೋಗುತ್ತೇವೆ. ಅದೇ ಬರೀ Noble ಅಂತ ಬರೆದರೆ ನೋಬಲ್ ಎಂದು ಹೇಳುತ್ತೇವೆಯೇ ಹೊರತು ನೊಬೆಲ್ ಎಂದು ಉಚ್ಚರಿಸುವುದಿಲ್ಲ. ಪ್ರೈಜ್ ಎಂಬ ಪದದಿಂದ noble ಎಂದು ತಪ್ಪಾಗಿ ಬರೆದಿದ್ದರೂ nobel ಎಂದು ಸರಿಪಡಿಸಿಕೊಳ್ಳುತ್ತೇವೆ. Noble Prize ತಪ್ಪು ಎಂದೆನಿಸುವುದಿಲ್ಲ.
F for Effort ಎಂದು ಹೇಳಿದರೆ, ಓದಿದರೆ ತಟ್ಟನೆ ಯಾರಿಗೂ ಅದು ತಪ್ಪು ಎಂದು ಅನಿಸುವುದಿಲ್ಲ.
ನೂರು ಜನರಿಗೆ F for Effort ಎಂದು ಬರೆದ ಕಾಗದವನ್ನು ಹಿಡಿದಾಗ ಕೇವಲ ಹನ್ನೊಂದು ಮಂದಿ ಮಾತ್ರ F for Effort ಸರಿ ಅಲ್ಲ, ಅದು E for Effort ಎಂದಾಗಲೇಬೇಕು ಅಂದರಂತೆ. ಉಳಿದವರೆಲ್ಲ ಅದೇ ಸರಿ ಎಂದು ಭಾವಿಸಿದರಂತೆ. Effort ಎಂಬ ಪದದಲ್ಲಿ ಎರಡು F ಅಕ್ಷರ ಇರುವುದರಿಂದ F For Effort ಅಂದ್ರೆ ಅದರಲ್ಲಿನ ತಪ್ಪು ತಟ್ಟನೆ ತಿಳಿಯುವುದಿಲ್ಲ. ಸರಿಯಿದೆ ಎಂದು ಭಾವಿಸಿ ಓದಿಕೊಂಡು ಹೋಗುತ್ತಾರೆ ಅಂತಾನೆ ಲೇಖಕ ರಿಚರ್ಡ್ ಬೆನ್ಸನ್.
ನಾನು ಪಿಗ್ಗಿ ಬಿದ್ದಿದ್ದೂ ಹೀಗೇ.
ಮೊದಲು ಪುಸ್ತಕದ ಶೀರ್ಷಿಕೆ ಓದಿದೆ. ಲೇಖಕನ ಹೆಸರು ಓದಿದೆ. ರಿಚರ್ಡ್ ಬೆನ್ಸನ್ - Richard Benson- ಎಂದು ಬರೆದಿತ್ತು. ನನ್ನ ತಲೆಯಲ್ಲಿ ಅವನ ಹೆಸರೇ ಕುಳಿತಿತ್ತು. ಹೀಗಾಗಿ ನಾನು ಅದನ್ನು Richard Branson- ರಿಚರ್ಡ್ ಬ್ರಾನ್ಸನ್- ಎಂದು ಓದಿಕೊಂಡೆ. ರಿಚರ್ಡ್ ಬ್ರಾನ್ಸನ್ನ ಹೊಸಕೃತಿ ಎಂದು ಭಾವಿಸಿ ಹತ್ತು ಡಾಲರ್ ಕೊಟ್ಟು ಅದನ್ನು ಖರೀದಿಸಿದೆ. ಪುಸ್ತಕ ತೆರೆದು ಓದಲಾರಂಭಿಸಿದಾಗಲೇ ಗೊತ್ತಾಗಿದ್ದು F for Effort ನ ಚಮತ್ಕಾರ! ಬೆನ್ಸನ್ ಬ್ರಾನ್ಸನ್ ಆದ ಮಜಕೂರು!
ಇಡೀ ಪುಸ್ತಕ ಓದಿದ ಬಳಿಕ ಬೇಸರವಾಗಲಿಲ್ಲ. ಅದೇ ಲೇಖಕನ ಮತ್ತೊಂದು ಜನಪ್ರಿಯ ಕೃತಿ F in Exams ಕೃತಿಗಾಗಿ ಈಗ ಹುಡುಕುತ್ತಿದ್ದೇನೆ.
ಸಾಮಾನ್ಯವಾಗಿ ಕೃತಿಯನ್ನು ಓದಿ ಪ್ರಭಾವಿತರಾಗುತ್ತೇವೆ ಅಥವಾ ಅದರ ಪರಿಣಾಮ ನಮ್ಮ ಮೇಲಾಗುತ್ತದೆ. ಆದರೆ ಈ ಕೃತಿಯ ಶೀರ್ಷಿಕೆಯೇ ಅಂಥ ಪರಿಣಾಮ ಮಾಡುತ್ತದೆ!
ಕಾಂಡೋಮ್ ಜಾಹೀರಾತು ಫಲಕ
ರವಾಂಡಾದಲ್ಲಿ ಸುತ್ತುವಾಗ ಜಾಹೀರಾತು ಫಲಕಗಳಾಗಲಿ, ಗೋಡೆ ಬರಹಗಳಾಗಲಿ, ಪೋಸ್ಟರ್ಗಳಾಗಲೀ ಕಣ್ಣಿಗೆ ರಾಚುತ್ತಿರಲಿಲ್ಲ. ಪ್ರತಿ ಮುನ್ನೂರು ಮೀಟರ್ಗೆ ಒಂದು ಫಲಕ (ಹೋರ್ಡಿಂಗ್)ವನ್ನು ನೆಡಲು ಪರವಾನಗಿ ಕೊಡುತ್ತಾರೆ. ಎಲ್ಲೆಂದರಲ್ಲಿ ಪೋಸ್ಟರ್ ಅಂಟಿಸುವಂತಿಲ್ಲ. ಗೋಡೆ ಬರಹದ ವಿಷಯದಲ್ಲೂ ಹಾಗೇ. ಇಡೀ ದೇಶ ಸುಂದರವಾಗಿ ಕಾಣಲು ಇದೂ ಒಂದು ಕಾರಣವಿದ್ದಿರಬಹುದು.
ರವಾಂಡಾದ ರಾಜಧಾನಿ ಕಿಗಾಲಿಯಲ್ಲಿ ತಿರುಗಾಡುವಾಗ ಜಾಹೀರಾತು ಫಲಕವೊಂದು ಗಮನ ಸೆಳೆಯಿತು. ಅದು ಆ ದೇಶದ ಪ್ರಖ್ಯಾತ ಪಾಪ್ ಗಾಯಕ ಲಿಜಾ ಚಿತ್ರವಿರುವ ಫಲಕ. ಅದರ ಮೇಲೆ ಎರಡು ಸಾಲು ಬರೆದಿತ್ತು- 'I Use a condom.' ಅದರ ಕೆಳಗೆ ಚಿಕ್ಕದಾಗಿ ಇನ್ನೊಂದು ಸಾಲು-' It is my right to protect myself.'
ಒಂದು ವೇಳೆ ನಮ್ಮ ಸುದೀಪ್, ಪುನೀತ್ ರಾಜ್ಕುಮಾರ್, ಉಪೇಂದ್ರ, ದರ್ಶನ್ ಈ ಹೇಳಿಕೆ ನೀಡಿ ಇಂಥದೇ ಜಾಹೀರಾತಿಗೆ ಪೋಸು ಕೊಡಬಹುದಾ? ಅವರೇ ಉತ್ತರಿಸಬೇಕು.
'ನಿಮಗೆ ಇಂಥ ಆಫರ್ ಬಂದರೆ ಏನು ಮಾಡ್ತಾ ಇದ್ದಿರಿ?' ಎಂದು ಯಾರೂ ನನ್ನನ್ನು ಕೇಳುವುದಿಲ್ಲವಲ್ಲ ಅಂದುಕೊಂಡೆ.
ಹೀಗೊಂದು ಸಂಭಾಷಣೆ
ಇದನ್ನು ಎಲ್ಲಿ ಓದಿದ್ದು ಅಂತ ನೆನಪಾಗ್ತಿಲ್ಲ, ಪ್ರಾಯಶಃ ಫೇಸ್ಬುಕ್ನಲ್ಲಿರಬಹುದು. ಇದನ್ನು ಪೋಸ್ಟ್ ಮಾಡಿದವರ ಹೆಸರು ಬರೆದಿದ್ದರೆ ಅವರಿಗೆ ಕ್ರೆಡಿಟ್ ಕೊಟ್ಟಂತಾಗುತ್ತಿತ್ತು. ಇರಲಿ, ಸಂಭಾಷಣೆಯನ್ನು ಕೇಳೋಣ.
ಹೆಂಡತಿ- ಊಟ ಆಯ್ತಾ?
ಗಂಡ- ಊಟ ಆಯ್ತಾ?
ಹೆಂಡತಿ- ನಾನು ಕೇಳ್ತಾ ಇದೀನಿ ಊಟ ಆಯ್ತಾ?
ಗಂಡ-ನಾನು ಕೇಳ್ತಾ ಇದೀನಿ ಊಟ ಆಯ್ತಾ?
ಹೆಂಡತಿ-ನಾನು ಹೇಳಿದಂತೆ ಹೇಳ್ತಾ ಇದೀರಾ?
ಗಂಡ- ನಾನು ಹೇಳಿದಂತೆ ಹೇಳ್ತಾ ಇದೀಯ?
ಹೆಂಡತಿ- ನನ್ನ ಕಾಪಿ ಮಾಡ್ತಾ ಇದೀರಾ?
ಗಂಡ-ನನ್ನ ಕಾಪಿ ಮಾಡ್ತಾ ಇದೀಯಾ?
ಹೆಂಡತಿ- ಸರಿ, ಶಾಪಿಂಗ್ ಹೋಗೋಣ ಬನ್ನಿ.
ಗಂಡ- ಊಟ ಆಯ್ತಾ ಅಂತ ಕೇಳಿದೆಯಾ? ನನಗೆ ಊಟ ಆಗಿಲ್ಲ!
ಏನು ವ್ಯತ್ಯಾಸ ಹೇಳಿ?
ಇತ್ತೀಚೆಗೆ ಫೇಸ್ ಬುಕ್ ನೋಡುತ್ತಿದ್ದೆ. ಶಾಮಪ್ರಸಾದ್ ಗೋಪಾಲ ಕಜೆ ಎಂಬುವವರು "ನನಗೂ ನನ್ನ ಮಗನಿಗೂ ಸ್ವಲ್ಪವೂ ವ್ಯತ್ಯಾಸವಿಲ್ಲ" ಎಂದು ಬರೆದಿದ್ದರು. ಅದಕ್ಕೆ ಅವರು ಕಾರಣಗಳನ್ನೂ ಪಟ್ಟಿ ಮಾಡಿದ್ದರು. ಇದು ನಿಮ್ಮ ಅನುಭವವೂ ಆಗಿರಬಹುದು. ಓದಿ.
-ಇಬ್ಬರೂ ಬೆಳಗ್ಗೆ ಏಳಲೋ ಬೇಡವೋ ಎಂಬಂತೆ ಎದ್ದೇಳುತ್ತೇವೆ.
-ಬೆನ್ನಿಗೆ ಭೂತ ಕಟ್ಟಿಕೊಂಡವರಂತೆ ಓಡುತ್ತೇವೆ.
-ನನಗೆ ಆಫೀಸ್ ಐಡಿ ಕಾರ್ಡು, ಅವನಿಗೆ ಸ್ಕೂಲ್ ಐಡಿ ಕಾರ್ಡು.
-ಅವನದು ಸ್ಕೂಲ್ ಬಸ್ಸು, ನನಗೆ ಸೊ ಕಾಲ್ಡ್ ಆಫೀಸ್ ಶಟಲ್.
-ಅವನಿಗೆ ಕ್ಲಾಸ್ ಟೀಚರ್ಸ್, ನನಗೆ ಮ್ಯಾನೇಜರ್ಸ್.
-ಉಳಿದಂತೆ ಅವನಿಗೆ ಹಲವಾರು ಟೀಚರ್ಸ್, ನನಗೆ ತರಹೇವಾರಿ ಮ್ಯಾನೇಜರ್ಗಳು.
-ಅವನಿಗೂ ಪ್ರಾಜೆಕ್ಟ್ ವರ್ಕು, ಡೆಡ್ಲೈನ್ಗಳ ಸಂಭ್ರಮ..ನನಗೋ, ಅದುವೇ ಜೀವನ.
-ಅವನು ದುಡ್ಡು ಕೊಟ್ಟು (ಫೀಸು) ಬೈಸಿಕೊಳ್ಳುತ್ತಾನೆ..ನಾನು ಬೈಸಿಕೊಂಡು ದುಡ್ಡು ಪಡೆಯುತ್ತೇನೆ
(ಸಂಬಳ).
-ನಾನು ಒಂದು ವರ್ಷ ದುಡಿದು, ಎಲ್ಲವನ್ನೂ ಅವನ ಸ್ಕೂಲ್ಗೆ ಕಟ್ಟುತ್ತೇನೆ.
-ಅವನಿಗೆ ಪರೀಕ್ಷೆ, ನನಗೆ ಅಪ್ರೈಸಲ್.
-ಸ್ಕೋರ್ ಕಾರ್ಡ್ ಇಬ್ಬರಿಗೂ ಇದೆ.
-ಅವನಿಗೆ ಯೂನಿಫಾರ್ಮ್..ನನಗೆ ಡ್ರೆಸ್ ಕೋಡ್.
-ಇಬ್ಬರಿಗೂ "ಮಂಡೇ ಬ್ಲೂ" ಸಾಮಾನ್ಯ ಸಮಸ್ಯೆ.
-ಅವನಿಗೆ ಸ್ಕೂಲ್ ಟ್ರಿಪ್... ನಮ್ಮದು ಟೀಂ ಔಟಿಂಗ್.
-ಇಬ್ಬರದೂ ಅರ್ಧ ಜೀವನ ಟ್ರಾಫಿಕ್ ತಿಂದು ಹಾಕುತ್ತದೆ.
ಲಾಸ್ಟ್, ಬಟ್ ನೋ ವೇ ಲೀಸ್ಟ್.. ಇವೆಲ್ಲದರ ಜೊತೆಗೂ ನನ್ನ ಮಗ ನನಗಿಂತ ಸುಖಿ.. ಏಕೆಂದರೆ: 'ನನಗೆ ಹೆಂಡತಿ ಇದ್ದಾಳೆ, ಅವನಿಗೆ ಇಲ್ಲ!'
ಎರಡನೇ ಸೂಟ್ಕೇಸ್ನಲ್ಲೇನಿದೆ?
ಸರ್ಕಸ್ ಕಂಪನಿಯಲ್ಲಿ ಒಂದು ಕೆಲಸ ಗಿಟ್ಟಿಸುವ ಉದ್ದೇಶ ಅವನದಿತ್ತು. ಎರಡು ಸೂಟ್ಕೇಸ್ಗಳನ್ನು ಹಿಡಿದುಕೊಂಡೇ ಆತ ಸಂದರ್ಶನಕ್ಕೆ ಬಂದಿದ್ದ. ಅವನನ್ನು ಎದುರುಗೊಂಡ ಸರ್ಕಸ್ ಕಂಪನಿಯ ಮುಖ್ಯಸ್ಥರು ಕೇಳಿದರು: 'ನಿನಗೆ ಯಾವ ಕಸರತ್ತುಗಳು ಗೊತ್ತಿವೆ? ಪ್ರದರ್ಶಿಸಬಲ್ಲೆಯಾ?' ಖಂಡಿತ ಸರ್ ಎಂದವನೇ ಆ ವ್ಯಕ್ತಿ ತನ್ನಲ್ಲಿದ್ದ ಒಂದು ಸೂಟ್ಕೇಸ್ ತೆಗೆದ. ಅದರಲ್ಲಿ ದಪ್ಪ ಗಾತ್ರದ ಚೂಪಾದ ಹಲ್ಲುಗಳಿದ್ದವು.
ಅವುಗಳನ್ನು ಒಂದರ ಹಿಂದೊಂದರಂತೆ ಮೇಲೆಸೆದ. ನಂತರ ಎಲ್ಲ ಕಲ್ಲುಗಳನ್ನು ಹಿಡಿಯಲು ತಲೆಯನ್ನೇ ಬಳಸಿಕೊಂಡ! ಮೇಲೆ ಹೋಗಿದ್ದ ಕಲ್ಲುಗಳನ್ನು ಹಿಡಿಯಲು ಆತ ತಲೆಯನ್ನೇ ಒಡ್ಡಿದಾಗ ಕಲ್ಲುಗಳು ಬೀಳುತ್ತಿದ್ದವಲ್ಲ; ಆಗೆಲ್ಲ ಠಪ್ ಎಂದು ಸದ್ದಾಗುತ್ತಿತ್ತು. ಆದರೂ ಆ ವ್ಯಕ್ತಿ ಏನೂ ಆಗಲೇ ಇಲ್ಲವೇನೋ ಎಂಬಂತೆ ಮುಗುಳ್ನಗುತ್ತಿದ್ದ. ಈ ಹೊಸ ಬಗೆಯ ಸಾಹಸ ಕಂಡು ಸರ್ಕಸ್ ಕಂಪನಿಯ ಓನರ್ಗೆ ಖುಷಿಯಾಯಿತು. ಆತ ಹೇಳಿದ: 'ಭೇಷ್. ಬಹಳ ದೊಡ್ಡ ಸಾಹಸ ನಿನ್ನದು. ನಿನಗೆ ಕೆಲಸ ಕೊಡ್ತೇನೆ. ಆ ಇನ್ನೊಂದು ಸೂಟ್ಕೇಸ್ನಲ್ಲಿ ಏನಿದೆ ಅಂತ ಹೇಳ್ತೀಯಾ?'
ಆ ವ್ಯಕ್ತಿ-'ಸಾರ್, ಅದರೊಳಗೆ ಪೇನ್ ಕಿಲ್ಲರ್ ಇಂಜೆಕ್ಷನ್ ಹಾಗೂ ಮಾತ್ರೆಗಳಿವೆ' ಅಂದ!
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

