ಅಂಕಣಗಳು

ಅಪರಾಧಿಗಳು, ಅವರ ಪೋಷಕರು ತೀರ್ಪಿಗೆ ಬಗ್ಗುವರೇ?

Published On :

ರಾಜಕೀಯ ಕ್ಷೇತ್ರದಲ್ಲಿ ಪ್ರಮುಖ ನಾಯಕರು ಇರುತ್ತಾರೆ. ಆದರೆ ಅವರ ಪೈಕಿ ನಿಜವಾಗಿ ಜನನಾಯಕರು ಎಂದು ಕರೆಯಿಸಿಕೊಳ್ಳುವವರು ಬೆರಳೆಣಿಕೆಯ ಮಂದಿ. ಸದ್ಯದ ಪರಿಸ್ಥಿತಿಯಲ್ಲಿ ವಿಧಾನಮಂಡಲದಲ್ಲಿ ಅಪರಾಧಿಗಳ ರಕ್ಷಣೆಗಾಗಿಯೇ ಕಾನೂನುಗಳನ್ನು ಮಾಡುವಾಗ ಒಟ್ಟಾರೆ ರಾಜಕೀಯ ವ್ಯವಸ್ಥೆಯೇ ಅದನ್ನು ಖಂಡಿಸುತ್ತದೆ. ಕಳೆದ ಹಲವು ಸಮಯದಿಂದ ಇಂಥ ಕ್ರಮ ನಡೆಯುತ್ತಾ ಬಂದಿದೆ. ಕೊಲೆಗಡುಕರು, ಅತ್ಯಾಚಾರಿಗಳು ಜನಪ್ರತಿನಿಧಿಗಳಾಗಿ, ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ನಡೆಸುತ್ತಾರೆ ಮತ್ತು ಕಾನೂನು ರಚನೆ ಮಾಡುತ್ತಾರೆ. ಇಂಥ ಕ್ರಮದಿಂದಾಗಿ ಪ್ರಜಾಪ್ರಭುತ್ವದ ನಿಜವಾದ ಆಶಯ ತಲೆತಗ್ಗಿಸುವಂತಾಗಿದೆ. ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅವಮಾನವಾಗಿದೆ.
ಹೀಗಾಗಿಯೇ ಖ್ಯಾತ ನ್ಯಾಯವಾದಿ ನಾನಿ ಪಾಲ್ಖೀವಾಲಾ ಸಂಸತ್ ಅನ್ನು ವಿವೇಕಯುತ ಮತ್ತು ವಿವೇಕತೆಯಿಂದ ಕೂಡಿಲ್ಲದ ಸಂಸತ್ ಎಂದು ವಿಶ್ಲೇಷಿಸಿದ್ದಾರೆ. ಯಾವ ರೀತಿ ಅವರೆಡು ಕೆಲಸ ಮಾಡುತ್ತವೆ ಎನ್ನುವುದಕ್ಕೆ ವಿವರಣೆಯನ್ನೂ ನೀಡಿದ್ದಾರೆ. ಕಳೆದ ಹಲವು ವರ್ಷಗಳಿಂದ ವಿವೇಕತೆಯಿಂದ ಕೂಡಿಲ್ಲದ ಸಂಸತ್  ಕರ್ತವ್ಯ ನಿರ್ವಹಿಸುತ್ತಿದೆ.
ಅದರಲ್ಲಿ ಅಪರಾಧಿಕ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ವಿನಾಯಿತಿ ನೀಡುತ್ತಿದೆ ಎಂದು ಅವರು ಪ್ರತಿಪಾದಿಸುತ್ತಾರೆ. ಜತೆಗೆ ಅಂಥ ವ್ಯಕ್ತಿತ್ವ ಉಳ್ಳವರು ಸಂಸತ್ನ ಕಾರ್ಯನಿರ್ವಹಣೆಗೂ ಭಂಗ ತರುತ್ತಿದ್ದಾರೆ.
ದುರಂತವೆಂದರೆ ಖ್ಯಾತ ನಾಯಕರು ಎಂದು ಪರಿಗಣಿಸಿಕೊಂಡವರೂ ಕೂಡ ತಮ್ಮ ಮೂಗಿನ ಕೆಳಗೇ ಕೆಲ ನಾಯಕರು ವರ್ತಿಸುವ ರೀತಿ ಗೊತ್ತಿದ್ದರೂ ಆ ಬಗ್ಗೆ ಚಕಾರವೆತ್ತದೆ, ಮೌನ ವಹಿಸಿದ್ದಾರೆ. ಯಾವುದೇ ಹಂತದಲ್ಲಿ ಶಾಸಕಾಂಗವನ್ನು ಅಪರಾಧೀಕರಣದಿಂದ ಮುಕ್ತಗೊಳಿಸುವುದರ ಬಗ್ಗೆ ಅವರು ಪ್ರಯತ್ನವನ್ನೇ ಮಾಡುತ್ತಿಲ್ಲ.
ಯಾವ ವಿಚಾರವನ್ನು ಮಾಡಲು ರಾಜಕಾರಣಿಗಳು ತಿರಸ್ಕರಿಸಿದ್ದಾರೋ, ಅದನ್ನು ನ್ಯಾಯಾಂಗ ಮಾಡೀತೇ? ಒಂದು ವೇಳೆ ನ್ಯಾಯಾಂಗವೇ ಮಧ್ಯಪ್ರವೇಶ ಮಾಡಿ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳು ಮಾಡಲೇಬೇಕಾದ ಸರಳ ಕರ್ತವ್ಯವನ್ನು ನೆನಪಿಸಿಕೊಡಬೇಕು ಎಂಬ ಪರಿಸ್ಥಿತಿ ನಿಮಾರ್ಣವಾದರೆ ಅದೊಂದು ವ್ಯಂಗ್ಯವೆಂದೇ ಹೇಳದೆ ವಿಧಿಯಿಲ್ಲ. ಈ ಮೂಲಕ ಸಾರ್ವಜನಿಕರಿಗೆ ವ್ಯವಸ್ಥೆಯಲ್ಲಿ ನಂಬಿಕೆ ಮೂಡಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಆ್ಯಸಿಡ್ ದಾಳಿ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ನಿಂದ ತರಾಟೆಗೆ ಒಳಗಾದರೂ ಅದು ಯಾವುದೇ ರೀತಿಯ ತಡೆಯುವ ಕ್ರಮಗಳನ್ನು ಘೋಷಣೆ ಮಾಡಿಲ್ಲ. ಕೇಂದ್ರದ ಈ ಕ್ರಮದಿಂದ ಅಸಂತುಷ್ಟಗೊಂಡಿರುವ ಸುಪ್ರೀಂಕೋರ್ಟ್ ಕಾಲಮಿತಿ ಹಾಕಿದ್ದು, ಅದರ ಒಳಗಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಸುಲಭವಾಗಿ ಮಾರಾಟವಾಗುವ ಆ್ಯಸಿಡ್ ಮೇಲೆ ನಿಷೇಧ ಹೇರುವಂತೆ ತಾಕೀತು ಮಾಡಿದೆ. ಒಂದು ವೇಳೆ ಕೇಂದ್ರ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲು ವಿಫಲವಾದಲ್ಲಿ ತಾನೇ ಆ ಬಗ್ಗೆ ವಿವರವಾದ ಕಾರ್ಯತಂತ್ರ ರೂಪಿಸುವ ಎಚ್ಚರಿಕೆ ನೀಡಿದೆ.
ಇದರ ಜತೆಗೆ ಚುನಾವಣೆಯ ಸಂದರ್ಭದಲ್ಲಿ ಪ್ರಣಾಳಿಕೆಗಳಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮತದಾರರಿಗೆ ಉಚಿತವಾಗಿ ಅಕ್ಕಿ ವಿತರಣೆ, ಕಂಪ್ಯೂಟರ್, ಸೈಕಲ್, ಮಂಗಳಸೂತ್ರ ವಿತರಿಸುತ್ತೇವೆ ಎಂಬ ಘೋಷಣೆಗಳ ಬಗ್ಗೆ ಸುಪ್ರೀಂಕೋರ್ಟ್ ಆಕ್ಷೇಪಿಸಿದೆ. ಇಂಥ ಘೋಷಣೆಗಳನ್ನೇ ಎಲ್ಲ ರಾಜಕೀಯ ಪಕ್ಷಗಳೂ ನೆಚ್ಚಿಕೊಂಡಿವೆ. ಹೀಗಾಗಿಯೇ ಚುನಾವಣೆ ಸಂದರ್ಭದಲ್ಲಿ ಸ್ಪರ್ಧೆಗೆ ಬಿದ್ದವರಂತೆ ಕೊಡುಗೆಗಳನ್ನು ನೀಡುವ ಭರವಸೆಯ ಮಹಾಪೂರವನ್ನೇ ಹರಿಸುತ್ತವೆ. ಇಂಥ ಕ್ರಮಗಳು ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಯ ಮೂಲ ಆಶಯಕ್ಕೇ ಪೆಟ್ಟು ಎನ್ನುವುದು ಸುಪ್ರೀಂಕೋರ್ಟ್ನ ಅಭಿಮತ. ಅದನ್ನು ರಾಜಕಾರಣಿಗಳು ಗೌರವಿಸುವರೇ ಅಥವಾ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಮತ್ತಷ್ಟು ಕೊಡಲಿ ಪೆಟ್ಟು ನೀಡುವ ಕ್ರಮವನ್ನು ಮುಂದುವರಿಸುತ್ತಾರೆಯೇ ಎಂಬ ಪ್ರಶ್ನೆ ಉಂಟಾಗಿದೆ. ಏಕೆಂದರೆ ರಾಜಕೀಯ ಪಕ್ಷಗಳು ಮಾಹಿತಿ ಹಕ್ಕು ಕಾಯ್ದೆ ಅಡಿ ಬರುವುದಕ್ಕೂ ವಿರೋಧ ವ್ಯಕ್ತಪಡಿಸಿವೆ. ಅದಕ್ಕೂ ಕೊಕ್ಕೆ ಹಾಕಲು ಅವುಗಳು ಪ್ರಯತ್ನಿಸುತ್ತವೆಯೇ?
ರಾಜಕೀಯ ಪಕ್ಷಗಳ ವಿಚಾರ ಧಾರೆಯೇ ಹೀಗಿರುವಾಗ ಸುಪ್ರೀಂಕೋರ್ಟ್ ನೀಡಿದ ತೀರ್ಪುಗಳನ್ನು ಅವುಗಳು ಜಾರಿಗೆ ತರುತ್ತವೆಯೇ ಮತ್ತು ರಾಜಕೀಯವನ್ನು ಅಪರಾಧೀಕರಣದಿಂದ ಮುಕ್ತಗೊಳಿಸಬೇಕೆಂಬ ಗೌರವಾನ್ವಿತ ನ್ಯಾಯಾಲಯದ ಸದಾಶಯಕ್ಕೆ ಸ್ಪಂದಿಸುತ್ತವೆಯೇ ಎನ್ನುವುದನ್ನು ಹೇಳಲು ಸಾಧ್ಯವೇ ಇಲ್ಲ. ಶಾಸಕ ಮತ್ತು ಸಂಸದರಾಗಿ ಆಯ್ಕೆಯಾದ ವ್ಯಕ್ತಿಗಳು ಪ್ರಕರಣಗಳಲ್ಲಿ ದೋಷಿ ಎಂದು ಪ್ರಕಟವಾದ ತಕ್ಷಣವೇ ಅವರ ಆಯ್ಕೆ ಅಸಿಂಧುವಾಗುತ್ತದೆ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಯಾವುದೇ ರೀತಿಯ ದ್ವಂದ್ವ ಇಲ್ಲ. ಆದರೆ ಸದ್ಯ ಅವರಿಗೆ ಇರುವ ಆಯ್ಕೆ ಏನೆಂದರೆ ನ್ಯಾಯಾಲಯ ನೀಡಿರುವ ತೀರ್ಪಿನ ವಿರುದ್ಧ ಅವರು ಮೇಲ್ಮನವಿ ಸಲ್ಲಿಸುವ ಮೂಲಕ ತಮ್ಮ ಸ್ಥಾನಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುತ್ತಾರೆ. ಸುಪ್ರೀಂಕೋರ್ಟ್ ನೀಡಿರುವ ಮತ್ತೊಂದು ದಾಖಲಾರ್ಹ ತೀರ್ಮಾನವೆಂದರೆ ಕಾರಾಗೃಹದಿಂದ ನಾಮಪತ್ರ ಸಲ್ಲಿಕೆ ಮಾಡಿ ವಿಧಾನಸಭೆ ಮತ್ತು ಲೋಕಸಭೆಗೆ ಸ್ಪರ್ಧಿಸುವುದರ ಮೇಲೂ ಅದು ತಡೆ ನೀಡಿದೆ. ಆದರೆ ಇದರ ಬಗ್ಗೆ ಮತ್ತಷ್ಟು ಪರಾಮರ್ಶೆ ನಡೆದು ಜಾರಿಯಾದರೆ ಉತ್ತಮ. ಇಲ್ಲದಿದ್ದರೆ, ನ್ಯಾಯಾಲಯದ ತೀರ್ಪು ದುರುಪಯೋಗವಾಗುವ ಸಾಧ್ಯತೆಯೇ ಅಧಿಕ. ಆದರೆ ರಾಜಕೀಯ ಕ್ಷೇತ್ರದ ಶುದ್ಧೀಕರಣಕ್ಕೆ ಕೈಗೊಂಡಿರುವ ಮಾರ್ಗ ಸ್ವಾಗತಾರ್ಹ.
ಸುಪ್ರೀಂಕೋರ್ಟ್ ಇಂಥ ತೀರ್ಪುಗಳನ್ನು ನೀಡುವ ಮುನ್ನವೇ ಭಾರತದ ಚುನಾವಣಾ ಆಯೋಗವೇ ಸರ್ಕಾರದ ಮುಂದೆ ಇಂಥ ಕ್ರಮಗಳ ಜಾರಿಗೆ ಶಿಫಾರಸುಗಳನ್ನು ಮುಂದಿಟ್ಟಿತ್ತು. ಈ ಮೂಲಕ ವಂಚನೆ ಮತ್ತು ಅಪರಾಧ ಕಾನೂನುಬದ್ಧವಾಗುವುದನ್ನು ತಪ್ಪಿಸಲು ಯತ್ನ ನಡೆಸಿತ್ತು. ಸರ್ಕಾರಗಳು ಅವುಗಳಲ್ಲಿ ಕೆಲವನ್ನಾದರೂ ಅನುಷ್ಠಾನಕ್ಕೆ ತರುವ ಯತ್ನ ಮಾಡಬಹುದಿತ್ತು. ಅದರ ಬದಲಾಗಿ ಹೆಚ್ಚಿನ ಪ್ರಮಾಣದಲ್ಲಿ ವಂಚನೆಗಳು ನಡೆಯುವಂತೆ ನೋಡಿಕೊಳ್ಳುತ್ತವೆ.  
ಕಾರಾಗೃಹದಲ್ಲಿ  ಶಿಕ್ಷೆ ಅನುಭವಿಸುತ್ತಿರುವ ಅಭ್ಯರ್ಥಿಗಳು ಬಿಗಿ ಭದ್ರತೆಯ ನಡುವೆ ಮೋಜು, ಮಸ್ತಿ ಮತ್ತು ಔತಣಕೂಟ ಆಯೋಜನೆ ಮಾಡುವಂತೆ ಪರೋಕ್ಷ ಸಹಕಾರ ನೀಡುತ್ತದೆ, ಜೈಲಿನಿಂದಲೇ ನಾಮಪತ್ರ ಸಲ್ಲಿಸಿ ಚುನಾವಣೆಯಲ್ಲಿ ಗೆದ್ದವರನ್ನು ಬಿಗಿ ಭದ್ರತೆಯ ನಡುವೆ ವಿಧಾನಸಭೆ ಅಥವಾ ಲೋಕಸಭೆಗೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ಕರೆದುಕೊಂಡು ಹೋಗಲು ಏರ್ಪಾಡುಗಳನ್ನೂ ಮಾಡುತ್ತದೆ. ಇಂಥ ನಿಯಮಗಳ ಉಲ್ಲಂಘನೆಯ ಪ್ರಕರಣಗಳಿಂದಾಗಿ 'ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ' ಎಂಬ ನಮ್ಮ ಹೆಗ್ಗಳಿಕೆ ನಗೆ ಪಾಟಲಿಗೆ ಈಡಾಗಿದೆ.
ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಮತ್ತು ಅಭಿಪ್ರಾಯಗಳಿಗೆ ರಾಜಕೀಯ ಪಕ್ಷಗಳೇನೋ ಉಘೇ ಉಘೇ ಎಂದಿವೆ. ಆದರೆ ಅದನ್ನು ವ್ಯಕ್ತಪಡಿಸಿದ್ದು ಮನಃಪೂರ್ವಕವಾಗಿ ಅಲ್ಲ ಎನ್ನುವುದನ್ನು ಗಮನಿಸಬೇಕಾದ್ದು ಅಗತ್ಯ. ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಗೂಂಡಾಗಳು ಮತ್ತು ಮಾಫಿಯಾ ವ್ಯಕ್ತಿಗಳು ನಾಯಕರಾಗಿದ್ದಾರೆ ಎನ್ನುವುದು ಬಹಿರಂಗ ಸತ್ಯ. 1,406 ಮಂದಿ ಶಾಸಕರು ಮತ್ತು ಸಂಸದರ ವಿರುದ್ಧ ವಿವಿಧ ಹಂತದಲ್ಲಿ ಕ್ರಿಮಿನಲ್ ಪ್ರಕರಣಗಳಿವೆ. ಅವರ ಪೈಕಿ ಹಲವರು  ಪ್ರಧಾನಮಂತ್ರಿ ಹುದ್ದೆಗಾಗಿಯೂ ಪ್ರಚಾರ ನಡೆಸುತ್ತಿದ್ದಾರೆ.  ಸಂಸತ್ ಮತ್ತು  ವಿಧಾನಸಭೆಗಳಲ್ಲಿ ಅಪರಾಧಿಕ ಹಿನ್ನೆಲೆಯುಳ್ಳ ವ್ಯಕ್ತಿಗಳು ಇರಬಾರದು ಎಂಬ ಸುಪ್ರೀಂಕೋರ್ಟ್ ಆಶಯದಂತೆ ಅವರು ತೆರೆಯ ಮರೆಗೆ ಸರಿಯುವಂತೆ ಕಾಣುತ್ತಿಲ್ಲ.
ಅಪರಾಧಿ ವರ್ಗದ ಶಕ್ತಿ ಎಷ್ಟಿದೆ ಎಂದರೆ ರಾಜಕೀಯ ಪಕ್ಷಗಳು ಮತ್ತು ಅಪರಾಧ ಕ್ಷೇತ್ರದ ನಡುವೆ ಗಾಢವಾದ ಒಂದು ನಂಟು ಬೆಳೆದು ಹೋಗಿದೆ. ಅದನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ತೋಳ್ಬಲ ಮತ್ತು ಧನ ಬಲ ನಿಜಕ್ಕೂ ರಾಜಕೀಯ ಪಕ್ಷಗಳ ಶಕ್ತಿಯಾಗಿದೆ. ಹೀಗಾಗಿ ಅವುಗಳು ನಿಜಕ್ಕೂ ಕಾನೂನಿಗೆ ಸವಾಲಾಗಿ ಪರಿಣಮಿಸಿವೆ. ಜತೆಗೆ ಮತದಾರರನ್ನು ಮೋಸಗೊಳಿಸಲು ಎಲ್ಲ ಸಿದ್ಧತೆ ಮಾಡುತ್ತವೆ. ಇಲ್ಲಿ ನಿಜವಾದ ಯುದ್ಧವೆಂದರೆ ರಾಜಕಾರಣಿಗಳು ಮತ್ತು ಜನರ ನಡುವೆ,  ಒಳ್ಳೆಯತನ ಮತ್ತು ಕೆಟ್ಟದ್ದರ ನಡುವೆ, ದೇಶವನ್ನು ಶೋಷಣೆ ಮಾಡುವವರ ಮತ್ತು ಅದನ್ನು ಪ್ರೀತಿಸುವವರ ನಡುವೆ ನಡೆಯುತ್ತದೆ.

-ಟಿ.ಜೆ.ಎಸ್ ಜಾರ್ಜ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.