ಅಂಕಣಗಳು

ಕಟ್ಟುವೆವು ನಾವು ಹೊಸ ಒಡ್ಡೊಂದನು, ಸಮಸ್ಯೆಯ ಬೀಡೊಂದನು!

ಇನ್ನೇನು ಆಗಲು ಸಾಧ್ಯ? ಅಂಥ ಹರಿವನ್ನು, ಆ ಮಹಾಶಕ್ತಿಯನ್ನು ಹಿಡಿದಿಡುತ್ತೇನೆ ಎಂಬುದು...

Published On :

ಇನ್ನೇನು ಆಗಲು ಸಾಧ್ಯ? ಅಂಥ ಹರಿವನ್ನು, ಆ ಮಹಾಶಕ್ತಿಯನ್ನು ಹಿಡಿದಿಡುತ್ತೇನೆ ಎಂಬುದು ಸಾಧ್ಯವಾಗುವ ಮಾತೇ? ಮಾಡಿದ್ದುಣ್ಣೊ ಮಹರಾಯ ಎಂಬುದು ಅಕ್ಷರಶಃ ಅನ್ವಯವಾಗುತ್ತಿದೆ ಉತ್ತರಾಖಂಡದಲ್ಲಿ. ಸೊಕ್ಕಿ ಹರಿಯುತ್ತಿರುವ ನದಿಯನ್ನು ತಡೆದು ನಿಲ್ಲಿಸಿ ದೇಶ ಬೆಳಗುತ್ತೇವೆ ಎಂಬ ಹುಮ್ಮಸ್ಸಿನಲ್ಲಿದ್ದಾಗಲೇ ಅದು ಅಲ್ಲಿಂದಲೇ ಉಕ್ಕಿ ಎತ್ತೆತ್ತಲೋ ಹರಿದು ಅವಾಂತರ ಸೃಷ್ಟಿಸಿತು. ಇಂಥದ್ದೊಂದು ಅವಘಡದ ಬಗ್ಗೆ ತಜ್ಞರು ಎಚ್ಚರಿಕೆಯನ್ನು ನೀಡುತ್ತಲೇ ಬಂದಿದ್ದರು. ಪರಿಸರಾಸಕ್ತರು ವಿರೋಧ ವ್ಯಕ್ತಪಡಿಸುತ್ತಲೇ ಇದ್ದರು. ಅವೈಜ್ಞಾನಿಕ ಅಣೆಕಟ್ಟುಗಳಿಂದಾಗುವ ಅಪಾಯದ ಬಗ್ಗೆ ಸ್ವತಃ ನಮ್ಮ ದೇಶದ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ಸಹ ಉಲ್ಲೇಖಿಸಿತ್ತು. ಹುಸಿ ಅಭಿವೃದ್ಧಿಯ ಅಬ್ಬರಕ್ಕೆ ಬಿದ್ದು ಓಡುತ್ತಿರುವ ಸರಕಾರಗಳ ಜಾಣ ಕಿವುಡಿಗೆ ಇವೆಲ್ಲ ಎಲ್ಲಿ ಮನವರಿಕೆಯಾಗಬೇಕು? ಆಗಬಾರದ್ದು ಆಗಿಯೇ ಹೋಯಿತು. ಇಡೀ ಉತ್ತರಾಖಂಡ ಜಲಶಕ್ತಿಯ ಮಹಾಕೋಪಕ್ಕೆ ಸಿಲುಕಿ ತತ್ತರಿಸಿಬಿಟ್ಟಿತು. ಸರ್ವನಾಶಕ್ಕೆ ನಾಂದಿ ಹಾಡಿದ ನಮ್ಮ ಅಣೆಕಟ್ಟುಗಳ ನಿರ್ಮಾಣದ ಹುಚ್ಚಿಗೆ ಇನ್ನಾದರೂ ಕಡಿವಾಣ ಬೀಳುವ ಆಶಾ ಭಾವನೆ ಮೂಡುತ್ತಿಲ್ಲ.
ಒಂದು ರಾಜ್ಯದಲ್ಲಿ, ಒಂದು ಹರಿವಿಗೆ ಹೆಚ್ಚೆಂದರೆ ಎಷ್ಟು ಒಡ್ಡುಗಳನ್ನು ಕಟ್ಟಬಹುದು? ಹಾಗೆ ಸುಮ್ಮನೆ ನಿಮ್ಮ ಊಹೆಯನ್ನು ಹರಿಬಿಡಿ. ಹತ್ತು ಹದಿನೈದು ಬೇಡವೆಂದರೆ ಇಪ್ಪತ್ತು ಒಡ್ಡುಗಳನ್ನು ನಿರ್ಮಿಸಬಹುದೇ? ನಿಸರ್ಗದ ಮೇಲಿನ ದೌರ್ಜನ್ಯಕ್ಕೆ ನಿಂತಿರುವವರ ಲಜ್ಜೆಗೇಡಿತನದೆದುರು ನಿಮ್ಮ ಊಹಾಶಕ್ತಿ ಖಂಡಿತಾ ಸೋಲುತ್ತದೆ. ಉತ್ತರಾಖಂಡ ರಾಜ್ಯವೊಂದರಲ್ಲೇ 48 ಒಡ್ಡುಗಳನ್ನು ನದಿಗಡ್ಡಲಾಗಿ ಕಟ್ಟಲಾಗುತ್ತಿದೆ! ಒಂದಷ್ಟು ಒಡ್ಡುಗಳ ಕಾಮಗಾರಿ ಮುಗಿದಿತ್ತು. ಕೆಲವಷ್ಟು ಕಾಮಗಾರಿ ನಡೆದಿತ್ತು. ಹಾಸ್ಯಾಸ್ಪದ ಸಂಗತಿಯೆಂದರೆ ಇಂಥ ಹಲವು ಒಡ್ಡುಗಳು ಮೊನ್ನಿನ ಮಹಾಪ್ರವಾಹದಲ್ಲಿ ಹೇಳ ಹೆಸರಿಲ್ಲದಂತೆ ಕೊಚ್ಚಿ ಹೋಗಿವೆ ಎಂದು ಸ್ವತಃ ನೋಡಿ ಬಂದ ಸುವರ್ಣ ನ್ಯೂಸ್‌ನ ನನ್ನ ಸಹೋದ್ಯೋಗಿ ಅಜಿತ್ ಹನಮಕ್ಕನವರ್ ಹೇಳುತ್ತಾರೆ.
ಸಿಎಜಿ ನಾಲ್ಕು ವರ್ಷ ಹಿಂದೆಯೇ ಇಂಥದ್ದೊಂದು ಅನಾಹುತದ ಮುನ್ಸೂಚನೆಯನ್ನು ಉತ್ತರಾಖಂಡ ರಾಜ್ಯಕ್ಕೆ ನೀಡಿತ್ತು. ಆಗ ಇನ್ನೂ 203 ಒಡ್ಡುಗಳು ಅನುಮತಿ ಪಡೆಯುವ ಹಂತದಲ್ಲಿದ್ದವು. ಕಳೆದ ಮಾರ್ಚ್‌ನಲ್ಲಿ ಮಂಡಿಸಿದ ವರದಿಯಲ್ಲಂತೂ ಸಿಎಜಿ ಇನ್ನಿಲ್ಲದ ಕಳವಳ ವ್ಯಕ್ತಪಡಿಸಿತ್ತು. ಡ್ಯಾಂಗಳಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಜತೆಗೆ, ಖಾಸಗಿ ಸಹಭಾಗಿತ್ವದ ಯೋಜನೆಗಳ ಉಸ್ತುವಾರಿಯಲ್ಲಿ ಸರ್ಕಾರ ಎಡವಿರುವುದು, ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರಕ್ಕೆ ಯಾವುದೇ ಹಿಡಿತ ಇಲ್ಲದಿರುವುದು ಮೊದಲಾದ ಅಂಶಗಳ ಬಗ್ಗೆ ವಿವರವಾಗಿ ಉಲ್ಲೇಖಿಸಿತ್ತು. ಮುಖ್ಯವಾಗಿ ನದಿ ಹರಿವಿನ ಬಗ್ಗೆ ಸರ್ಕಾರಕ್ಕೇ ಗಮನವೇ ಇಲ್ಲ. ಅಣೆಕಟ್ಟು ಮತ್ತು ವಿದ್ಯುತ್ ಉತ್ಪಾದಿಸುವ ಟರ್ಬೈನ್‌ಗೆ ಸುರಂಗದ ಮೂಲಕ ಹರಿಯುವ ನೀರಿನ ಬಗ್ಗೆಯಂತೂ ಕಾಳಜಿ ಇಲ್ಲವೇ ಇಲ್ಲ. ಇದು ಭಾರಿ ಪ್ರಮಾಣದ ನೈಸರ್ಗಿಕ ಏರಿಳಿತಕ್ಕೆ ಕಾರಣವಾಗಬಲ್ಲದು ಎನ್ನುವುದನ್ನು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಹೇಳಿತ್ತು. ಆದರೂ ಸರ್ಕಾರಕ್ಕೆ ಬುದ್ಧಿ ಬರಲಿಲ್ಲ. ಜಲ ವಿದ್ಯುತ್ ಯೋಜನೆಗಳ ಕುರಿತಾಗಿ ಅದರ ವ್ಯಾಮೋಹ ಕರಗಲಿಲ್ಲ. ಉತ್ತರಾಖಂಡವನ್ನು 'ಊರ್ಜಾ ಪ್ರದೇಶ'ವಾಗಿ ಪರಿವರ್ತಿಸುವ ಹಠ ನಿಲ್ಲಲಿಲ್ಲ. ಕೊನೆಗೆ 'ನನ್ನೆದರು ನೀನು ಏನೂ ಅಲ್ಲ' ಎನ್ನುವುದನ್ನು ಪ್ರಕೃತಿಯೇ ತಿಳಿಸಿಕೊಡಬೇಕಾದ ಸನ್ನಿವೇಶ ಎದುರಾಯಿತು.
ಅಲ್ಲೇ ಪಕ್ಕದ ಅರುಣಾಚಲ ಈ ಪ್ರವಾಹದಿಂದ ಖಂಡಿತಾ ಬುದ್ಧಿ ಕಲಿಯಬೇಕಿದೆ. ಅದು ಉತ್ತರಾಖಂಡವನ್ನೂ ಮೀರಿಸಿ ಜಲವಿದ್ಯುತ್ ಯೋಜನೆಗೆಂದು ರಾಜ್ಯದಲ್ಲಿ 153 ಒಡ್ಡುಗಳ ನಿರ್ಮಾಣಕ್ಕೆ ಒಪ್ಪಂದ ಜಾರಿಗೊಳಿಸಿದೆ. ಅವೆಲ್ಲವೂ ಅನುಷ್ಠಾನಕ್ಕೆ ಬಂದರೆ ವಿಶ್ವದಲ್ಲಿ ಗರಿಷ್ಠ ಸಂಖ್ಯೆಯ ಜಲವಿದ್ಯುತ್ ಸ್ಥಾವರಗಳನ್ನು ಹೊಂದಿರುವ ರಾಜ್ಯ ಎನ್ನುವ ಕಿರೀಟ ಅರುಣಾಚಲಕ್ಕೆ ದೊರೆಯಲಿದೆ. ಇದನ್ನು ಹುಚ್ಚೆನ್ನಬೇಕೋ? ಬೆಪ್ಪುತನವೆನ್ನಬೇಕೋ? ಗಂಗೆಯನ್ನು ಶಿರದಲ್ಲಿ ಕಟ್ಟಿ ಹಾಕಲು ಸ್ವತಃ ಸೋತ ಆ ಶಿವನ ಲೀಲೆ ಎನ್ನಬೇಕೋ ತಿಳಿಯದಾಗಿದೆ. ದೇವತಾಣದಿಂದ ಧುಮುಕಿ ಶಿವನ ಹಿಡಿತದಿಂದಲೂ ತಪ್ಪಿಸಿಕೊಂಡು, ಬದರಿ, ಕೇದಾರನಾಥನ ಅಡಿದಾವರೆಗಳನ್ನು ಹೊಕ್ಕು ಸ್ವತಂತ್ರವಾಗಿ ಜುಳುಜುಳು ನಿನಾದ ಹೊಮ್ಮಿಸುತ್ತಾ ತನ್ನಿಚ್ಛೆಯಂತೆ ಹರಿಯುತ್ತಿದ್ದ ಗಂಗೆಯ ದಿಕ್ಕನ್ನೇ ಬದಲಿಸಲು ಹೊರಟಿದ್ದೇವೆ. ಅದೂ ವಿದ್ಯುತ್ ಉತ್ಪಾದನೆ ಹಾಗೂ ಆರ್ಥಿಕ ಪ್ರಗತಿ ಎನ್ನುವ ಏಕೈಕ ಕಾರಣಕ್ಕೆ. ಅದಕ್ಕಾಗಿ ನೀರಿನ ಸ್ವಾತಂತ್ರ್ಯವನ್ನು ಕಸಿದು ಇಷ್ಟೊಂದು ಅಣೆಕಟ್ಟುಗಳ ರಚನೆ! ನದಿಯನ್ನು ದೇವತೆಯೆಂದು ಪೂಜಿಸುವ ಈ ದೇಶದಲ್ಲಿ ಇದಕ್ಕಿಂಥ ದುರಂತ ಮತ್ತೊಂದಿದೆಯೇ?
ಅರುಣಾಚಲ ಪ್ರದೇಶ ಮಹಾದುರಂತವನ್ನು ತಾನಾಗಿಯೇ ಮೈಮೇಲೆಳೆದುಕೊಳ್ಳುತ್ತಿದೆ. ಏಕೆಂದರೆ ಅದು ಅಳವಡಿಸಿಕೊಳ್ಳಲು ಹೊರಟಿದ್ದು ಆರ್‌ಓಆರ್ ಅಂದರೆ ರನ್ ಓವರ್ ರಿವರ್ ಮಾದರಿ. ಸರಳವಾಗಿ ಹೇಳಬೇಕೆಂದರೆ, ನದಿಯ ಹರಿವನ್ನೇ ರಿಮೋಟ್ ಕಂಟ್ರೋಲ್ ಥರ ನಿಯಂತ್ರಿಸುವುದು. ಮುಂಜಾನೆಯಿಂದ ಸಂಜೆವರೆಗೆ ನೀರಿನ ಹರಿವಿಗೆ ತಡೆ ಒಡ್ಡಿ ಹಿಡಿದಿಡುವುದು. ಹೀಗೆ ತಡೆದಿಟ್ಟ ನೀರನ್ನು ಸಂಜೆ ಹೊತ್ತು ಭಾರಿ ವೇಗದಲ್ಲಿ ಟರ್ಬೈನ್‌ಗೆ ಹಾಯಿಸಿ ವಿದ್ಯುತ್ ಉತ್ಪಾದಿಸುವುದು! ಇದೇನು ಹುಡುಗಾಟವಾ? ಹರಿವೇ ಇಲ್ಲದ ಅದನ್ನು ನದಿ ಎಂದು ಹೇಗೆ ಹೇಳುವುದು? ಅಲ್ಲಿನ ಲೋಹಿತ್ ನದಿಯನ್ನೇ ತೆಗೆದುಕೊಳ್ಳೋಣ. ಚಳಿಗಾಲದಲ್ಲಿ ಅದರ ಹರಿವಿನ ವೇಗ ಪ್ರತಿ ಸೆಕೆಂಡ್‌ಗೆ 463 ಕ್ಯೂಬಿಕ್ ಮೀಟರ್ (ಕ್ಯುಮೆಕ್ಸ್). ಬೇಸಿಗೆಯಲ್ಲಿ ಈ ಪ್ರಮಾಣ 832 ಕ್ಯುಮೆಕ್ಸ್ ಮತ್ತು ಮಳೆಗಾಲದಲ್ಲಿ 2,050 ಕ್ಯುಮೆಕ್ಸ್. ಈ ನದಿಗೆ ಒಡ್ಡು ಕಟ್ಟಿದರೆ ವೇಗ ಹಗಲು ಹೊತ್ತಿನಲ್ಲಿ 35 ಕ್ಯುಮೆಕ್ಸ್‌ಗೆ ಇಳಿಯುತ್ತದೆ. ವಿದ್ಯುತ್ ಉತ್ಪಾದಿಸುವಾಗ 1,729 ಕ್ಯುಮೆಕ್ಸ್‌ನಲ್ಲಿ ನೀರು ಹರಿಸಲಾಗುತ್ತದೆ. ಆ ನಂತರ ಪುನಃ 35 ಕ್ಯುಮೆಕ್ಸ್‌ಗೆ ನಿಯಂತ್ರಣ. ಇದೇ ನದಿಗೆ ಮೂರು ಕಡೆ ಅಣೆಕಟ್ಟು ಕಟ್ಟುವ ಯೋಚನೆ ಸರ್ಕಾರದ್ದು. ಉದ್ದೇಶಿತ ಎಲ್ಲ 153 ಒಡ್ಡುಗಳೂ ಹೀಗೆಯೇ. ವಿಜ್ಞಾನಿಗಳು, ಪರಿಸರವಾದಿಗಳು ಇದರಿಂದಾಗುವ ಅಪಾಯಗಳ ಬಗ್ಗೆ ಇನ್ನಿಲ್ಲದ ರೀತಿಯಲ್ಲಿ ಎಚ್ಚರಿಸುತ್ತಲೇ ಬಂದಿದ್ದಾರೆ. ಕುರುಡು ಸರ್ಕಾರ ಕಿವಿಯನ್ನೂ ಮುಚ್ಚಿಕೊಂಡು ಕುಳಿತಿದೆ.
ಹಾಗೆಂದು ಅಣೆಕಟ್ಟುಗಳು, ಅಭಿವೃದ್ಧಿ ಬೇಡವೆಂತಲ್ಲ. ಆದರೆ ಪರಿಸರಕ್ಕೆ, ನಿಸರ್ಗದ ಸಹಜತೆಗೆ ಧಕ್ಕೆ ತರುವ, ಮನುಕುಲವನ್ನೇ ವಿನಾಶದ ಅಂಚಿಗೆ ತಳ್ಳುವ, ಜೀವವೈವಿಧ್ಯವನ್ನೇ ಹಾಳಗೆಡಹುವ, ಒಂದಿಡೀ ನದಿಗೆ ನದಿಯನ್ನೇ ಕಣ್ಮರೆಗೊಳಿಸುವ ಅಣೆಕಟ್ಟುಗಳು ನಮಗೆ ಅಗತ್ಯವೇ? ಜಲಮೂಲ ಸೇರಿದಂತೆ ನಿಸರ್ಗದ ಬಗೆಗಿನ ನಮ್ಮ ಭಾವನೆಗಳು ಬೇರೆಡೆಗಳಂತಲ್ಲ. ಅದು ಯಾವತ್ತಿಗೂ ನಮ್ಮ ಪಾಲಿಗೆ ಕೇವಲ ಸಂಪನ್ಮೂಲವಾಗಿ ನಿಂತಿಲ್ಲ. ಅದು ನಮ್ಮ ಸಂಸ್ಕೃತಿಯ ಭಾಗ. ಅದನ್ನು ತಾಯಿಯೆಂದು ಪೂಜಿಸಿದವರು ನಾವು. ಅದರಲ್ಲೂ ಗಂಗೆ ನಮ್ಮ ಪಾಲಿಗೆ ದೇವಮಾತೆ. ಅದನ್ನು ಒಂದು ನಿರ್ಜೀವ ನದಿಯಷ್ಟೇ ಎಂದು ನಾವು ಎಂದಿಗೂ ಪರಿಭಾವಿಸಿಲ್ಲ. ಯಾವುದೇ ದೃಷ್ಟಿಕೋನದಲ್ಲಿ ನೋಡಿದರೂ ಗಂಗೆಗೆ ವಿಶಿಷ್ಟ ಸ್ಥಾನಮಾನಗಳಿವೆ. ನೀರಾವರಿಗೋ, ವಿದ್ಯುತ್ ಯೋಜನೆಗಳಿಗಾಗಿಯೋ ಇಡೀ ನದಿಯ ಅಸ್ತಿತ್ವವನ್ನೇ ನಾಶಗೊಳಿಸಬೇಕಿಲ್ಲ. ಅದರಲ್ಲೂ ಚಾರ್‌ಧಾಮ್ ನಮ್ಮ ಅತಿ ಪವಿತ್ರ ಕ್ಷೇತ್ರ. ಅವುಗಳ ಜತೆಗೆ ಬೆಸೆದಿರುವ ಧಾರ್ಮಿಕ ಮತ್ತು ಭಾವನಾತ್ಮಕ ಬಾಂಧವ್ಯಕ್ಕೆ ಬೆಲೆ ಕಟ್ಟಲಾಗದು. ಈ ನಾಲ್ಕೂ ಕ್ಷೇತ್ರಗಳೂ ಗಂಗೆಯ ಉಗಮಸ್ಥಾನಗಳು. ಗಂಗೆ ಎಂಬುದು ಏಕಾಏಕಿ ಎಲ್ಲೋ ಒಂದು ಕಡೆಯಲ್ಲಿ ಉಕ್ಕಿ ಬರುವಂಥವಳಲ್ಲ. ಬದರಿಯಿಂದ ಅಲಕಾನಂದಾ, ಕೇದಾರದಿಂದ ಮಂದಾಕಿನೀ, ಗಂಗೋತ್ರಿಯಿಂದ ಭಾಗೀರಥಿ ಹಾಗೂ ಯಮುನೋತ್ರಿಯಿಂದ ಯಮುನೆ ಉದ್ಭವಿಸಿ ಪವಿತ್ರ ನದಿಯಾಗಿ ರೂಪುಗೊಳ್ಳುತ್ತದೆ. ಯಮುನೆ ಈಗಾಗಲೇ ದಿಲ್ಲಿಯವರ ಶೌಚಗುಂಡಿಯಾಗಿ ಮಾರ್ಪಟ್ಟಿದೆ. ಇದನ್ನು ಸಂಶೋಧನೆಗಳೇ ದೃಢಪಡಿಸಿವೆ. ಇನ್ನು ಅಲಕಾ, ಭಾಗೀರಥಿಯರನ್ನು ಒಡ್ಡುಗಳಿಂದ ನಾಶ ಮಾಡಲು ಹೊರಟಿದ್ದೇವೆ. ಇವೆರಡೂ ಜಲಮೂಲಕ್ಕೆ ಉತ್ತರಾಖಂಡದಲ್ಲಿ ಅಡ್ಡಲಾಗಿ ಸುಮಾರು ಮೂವತ್ತು ಯೋಜನೆಗಳು ಪ್ರಸ್ತಾವದಲ್ಲಿವೆ. ಡಾ.ಜಿ.ಡಿ. ಅಗರ್‌ವಾಲರ (ಈಗಿನ ಜ್ಞಾನಸ್ವರೂಪ ಸಾನಂದ ಸ್ವಾಮೀಜಿ) ಹೋರಾಟ ನಿರಂತರವಾಗಿ ನಡೆದೇ ಇದೆ. ಭಾಗೀರಥಿ ಉದ್ಭವಿಸುವ ಗಂಗೋತ್ರಿಯ ಸನಿಹದಲ್ಲೇ ಕಟ್ಟಲು ಹೊರಟಿದ್ದ ಮೂರು ಬೃಹತ್ ಯೋಜನೆಗಳನ್ನು 37 ದಿನಗಳ ಸತತ ಉಪವಾಸದ ಫಲವಾಗಿ ನಾಲ್ಕು ವರ್ಷ ಹಿಂದೆ ಅವರು ಸ್ಥಗಿತಗೊಳಿಸಿದ್ದರು. ಆದರೆ ತಿಹರಿ, ಕೋಟೇಶ್ವರ ಮೊದಲಾದೆಡೆ ಬೃಹತ್ ಅಣೆಕಟ್ಟುಗಳು ಭಾಗೀರಥಿಯನ್ನು ಹತ್ಯೆಗೈದಿವೆ.
ನದಿಯ ಮೂಲಗುಣವೇ ಹರಿಯುವಿಕೆ. ಅದರ ನಿನಾದ ಮತ್ತು ಹರಿಯುವ ಗುಣಗಳಿಂದಲೇ ಅದಕ್ಕೆ ನದಿ ಎಂಬ ಹೆಸರು ಬಂದದ್ದು. ಒಡ್ಡುಗಳ ಮೂಲಕ ಹರಿವನ್ನು ತಡೆದರೆ ಅದು ಹೇಗೆ ನದಿಯಾಗಿ ಉಳಿದೀತು? ಇನ್ನೂ ಒಂದು ಪ್ರಮುಖ ಅಂಶವೆಂದರೆ, ಅಣೆಕಟ್ಟಿನಲ್ಲಿ ನಿಂತು ಸಾಗುವ ನೀರು ಮಳೆಗಾಲದಲ್ಲಿ ಹುಚ್ಚು ವೇಗ ಪಡೆಯುತ್ತದೆ. ಬೇಸಿಗೆಯಲ್ಲಿ ಒಡ್ಡಿನ ಮುಂಭಾಗದ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ದೇವಪ್ರಯಾಗ, ಹರಿದ್ವಾರ ಮೊದಲಾದೆಡೆ ಗಂಗೆಯ ಪರಿಸ್ಥಿತಿ ಬಹುತೇಕ ಹೀಗೆಯೇ ಆಗಿದೆ. ದೇವಪ್ರಯಾಗಕ್ಕೂ ಮೊದಲು ಸುಮಾರು ಇನ್ನೂರೈವತ್ತು ಕಿ.ಮೀ. ಹರಿಯುವ ಅಲಕಾನಂದೆಗೆ ಈಗಾಗಲೇ ಹತ್ತಕ್ಕಿಂತ ಹೆಚ್ಚು ಅಣೆಕಟ್ಟಿನ ಯೋಜನೆಗಳು ಆರಂಭಗೊಂಡಿವೆ, ಸುಮಾರು ಎಪ್ಪತ್ತು ಅಣೆಕಟ್ಟಿನ ಯೋಜನೆಗಳು ಸರಕಾರದಿಂದ ನಿಗದಿಯಾಗಿವೆ ಎನ್ನುತ್ತಾರೆ ಒಡ್ಡುಗಳ ವಿರುದ್ಧ ಕಾನೂನು ಹೋರಾಟಕ್ಕೆ ನಿಂತಿರುವ ಆರ್ಥಿಕ ತಜ್ಞ ಭರತ್ ಜುಂಜುನ್‌ವಾಲಾ.
ನಿಂತ ನೀರಿನ ಮತ್ತೊಂದು ದೊಡ್ಡ ಸಮಸ್ಯೆ ನದಿಯ ಶುದ್ಧಿಯ ನಾಶ. ತಿಹರಿಯ ಹಿಂಬದಿಯಲ್ಲಿ 30-40 ಕಿ.ಮೀ. ನಿಂತ ನೀರಾಗಿರುವ ಭಾಗೀರಥಿ ತನ್ನ ತಿಳಿ ನೀಲಿಯ ಬಣ್ಣವನ್ನು ಕಳೆದುಕೊಂಡು ಹಚ್ಚ ಹಸಿರು ಬಣ್ಣಕ್ಕೆ ತಿರುಗಿ ಕೊಳೆತ ನೀರಿನಂತಾಗಿದೆ ಎನ್ನುತ್ತಾರೆ ರಾಜಸ್ಥಾನದ ಭಗೀರಥ, ಮ್ಯಾಗ್ಸೆಸೆ ಪುರಸ್ಕೃತ ರಾಜೇಂದ್ರ ಸಿಂಗ್. ಪರಿಣಾಮ ಹಿಮಾಲಯದಂಥ ದುರ್ಗಮ ಪ್ರದೇಶದಲ್ಲಿನ ನೂರಾರು ಚದುರ ಕಿ.ಮೀ. ವಿಸ್ತೀರ್ಣದ ಸೂಕ್ಷ್ಮ ಜೀವಸಂಕೋಲೆಯ ಪಾರಂಪರಿಕ ಜೀವವ್ಯವಸ್ಥೆ ಹದಗೆಟ್ಟಿದೆ. ಪ್ರಾಣಿ- ಪಕ್ಷಿಗಳು, ಗಿಡ- ಮರಗಳು ಮತ್ತು ನದಿ- ಪರ್ವತಗಳ ಸಂಬಂಧ ಕಳಚಿದೆ. ಗಂಗೆಯ ಒಡಲನ್ನು ಮಾತ್ರ ಆಶ್ರಯಿಸಿದ ವಿಶ್ವದಲ್ಲೇ ಅಪರೂಪದ ಅನೇಕ ಜೀವಜಂತುಗಳು ವಿನಾಶಕ್ಕೆ ಕುಳಿತಿವೆ ಎನ್ನುತ್ತಾರೆ ಪರಿಸರ ತಜ್ಞರು.
ಭಾರತದಲ್ಲಿ ಜನಿಸಿ ಪಾಕ್‌ನತ್ತ ಹರಿಯುವ ಜೀಲಂ, ಚಿನಾಬ್, ಸಿಂಧೂ, ಸಟ್ಲೇಜ್, ಬಿಯಾಸ್, ರಾವಿ ನದಿಗಳು, ನೇಪಾಳದಿಂದ ಭಾರತದತ್ತ ಬರುವ ಮಹಾಕಾಳಿ, ಪಂಜೇಶ್ವರ, ಕರ್ನಾಲಿ, ಕೋಶಿ, ಗಂಡಕಿಗಳಲ್ಲದೇ ಉತ್ತರ ಭಾರತದ ಜೀವ ಸೆಲೆ ಎನ್ನಿಸಿರುವ ಗಂಗಾ, ಯಮುನಾ, ಬ್ರಹ್ಮಪುತ್ರ ನದಿಗಳು ಹಿಮಗಡ್ಡೆಗಳಿಂದಲೇ ಮೈತುಂಬಿಕೊಳ್ಳುತ್ತವೆ. ಇಲ್ಲಿ ಅಪರೂಪದ ಜೀವ, ಸಸ್ಯ ಸಂಕುಲವಿದೆ. ಭಾರತದ ಅತೀ ಉದ್ದದ ನದಿ ಜಲಾನಯನ ಪ್ರದೇಶವನ್ನು ಹೊಂದಿರುವ ಗಂಗೋತ್ರಿ ವಿಶಿಷ್ಟ ಜೀವ ಸಂಕುಲದ ಗಣಿ. ಗಂಗಾ ತಟದಲ್ಲಿನ ತೀರಾ ಅವೈಜ್ಞಾನಿಕ ನೀರಾವರಿ ಯೋಜನೆಗಳು ಮತ್ತು ಅಕ್ರಮ ಗಣಿಗಾರಿಕೆ ಇವೆಲ್ಲವನ್ನೂ ನಾಶ ಮಾಡುವುದರ ಜತೆಗೆ ಅರಣ್ಯವನ್ನು ಮುಳುಗಿಸುತ್ತಿವೆ. ಇದು ಒಂದೆಡೆ ನದಿಯ ಹರಿವಿನ ದಿಕ್ಕನ್ನು ತಪ್ಪಿಸಿ ಊರೊಳಗೆ ನೀರು ನುಗ್ಗುವಂತೆ ಮಾಡಿದ್ದರೆ ಮಳೆಯ ದಿಕ್ಕನ್ನೂ ತಪ್ಪಿಸುತ್ತಿದೆ. ಭೂಮಿಯ ಮೇಲೆ ಬೀಳುವ ಮಳೆಯ ನೀರು ನದಿ ಸೇರಿ ಅಲ್ಲಿಂದ ನಿಗದಿತ ದೂರದವರೆಗೆ ಸಾಗಿ ಸಮುದ್ರ ಸೇರುತ್ತದೆ. ಸಮುದ್ರದ ನೀರು ಆವಿಯಾಗಿ, ಮೋಡವಾಗಿ ಧ್ರುವ ಪ್ರದೇಶಗಳತ್ತ ಇಳಿಯುತ್ತದೆ. ಅಲ್ಲಿಂದ ಬೀಸಿ ಬರುವ ತಂಗಾಳಿ ಭೂಮಧ್ಯ ರೇಖೆಯತ್ತ ಮೋಡಗಳನ್ನು ತಳ್ಳಿ ಭೂಮಿಯ ಮೇಲೆ ಮಳೆ ಸುರಿಸುತ್ತದೆ. ಆದರೆ ಈಗ ಭೂಮಿಯ ಮೇಲೆ ಬೀಳುವ ನೀರು ನದಿಯ ಗುಂಟ ಹರಿದು ಸಮುದ್ರ ಸೇರುವುದೇ ಇಲ್ಲ. ಬದಲಾಗಿ ಒಡ್ಡು, ಕಟ್ಟೆ, ಡ್ಯಾಂಗಳ ಪರಿಣಾಮ ಅಲ್ಲಲ್ಲಿಯೇ ಆವಿಯಾಗಿ ಮೇಲೆ ಸಾಗುತ್ತಿದೆ. ಆದರೆ ಈ ಆವಿಯನ್ನು ಒಳಗೊಂಡ ಮೋಡವನ್ನು ತಳ್ಳುವ ತಂಗಾಳಿ ಎಲ್ಲಿಯೂ ಅದನ್ನು ಸಂಧಿಸುವುದೇ ಇಲ್ಲ. ಹೀಗಾಗಿ ಒಂದೇ ಕಡೆಗಳಲ್ಲಿ ಮೋಡಗಳು ದಟ್ಟೈಸುತ್ತಾ ಸಾಗಿ ತೀರಾ ಭಾರವಾದಾಗೊಮ್ಮೆ ಒಮ್ಮೆಲೆ ಕುಸಿದು ಬಿಡುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಸೃಷ್ಟಿಯಾಗಿರುವ 'ಕೃತಕ' ಪ್ರವಾಹ  ಉತ್ತರಾಖಂಡದಲ್ಲಿ ಮೊನ್ನೆ ಕಂಡದ್ದು.
ಅಮೆರಿಕ, ಕೆನಡಾ, ಫ್ರಾನ್ಸ್, ಬ್ರಿಟನ್, ಜರ್ಮನಿ, ಡೆನ್ಮಾರ್ಕ್, ಕೊನೆಗೆ ರಷ್ಯಾ ಹಾಗೂ ಚೀನಾಗಳಲ್ಲೂ ಕಟ್ಟಿದ ಅಣೆಕಟ್ಟೆಗಳನ್ನೆಲ್ಲ ಒಡೆದು ಹಾಕುವ 'ಘನಕಾರ್ಯ' ಇದೀಗ ನಡೆಯುತ್ತಿದೆ. ಅದಕ್ಕವರು 'ರಿವರ್ ರಿವೈವಲ್‌' (ನದಿಗಳ ಪುನಶ್ಚೇತನ) ಎಂಬ ಹೆಸರನ್ನು ಕೊಟ್ಟಿದ್ದಾರೆ. ಈಗ ತೀರಾ ಚಾಲ್ತಿಯಲ್ಲಿರುವ 'ನದಿ ತಿರುವು' ಯೋಜನೆಯ ಸ್ವರೂಪದ್ದೇ ಒಂದು ಯೋಜನೆ ಈ ತ್ರಿ ಗೋರ್ಜೆಸ್. ಯಾಂಗ್‌ತ್ಸೆ  ಎಂಬ ನದಿಯನ್ನು ಪಕ್ಕದ ತೊರೆಯೊಂದಕ್ಕೆ ತಿರುವಿಕೊಂಡು ಒಯ್ದು ಜಗತ್ತಿನ ಅತಿ ದೊಡ್ಡ ಅಣೆಕಟ್ಟೆಯೊಂದನ್ನು ನಿರ್ಮಿಸಿ ಬೀಗಬೇಕೆಂದಿತ್ತು ಚೀನಾ. ಅದು ಅಂದುಕೊಂಡಂತೆ ಆಗಿದ್ದರೆ 18,200 ಮೆಗಾವ್ಯಾಟ್ ವಿದ್ಯುತ್ ಉತ್ಪತ್ತಿ ಮಾಡಿ ಇಷ್ಟರಲ್ಲಾಗಲೇ ಚೀನಾ ಹೊಳೆಹೊಳೆಯುತ್ತಿರಬೇಕಿತ್ತು. ಆದರೆ ಯೋಜನೆ ಉದ್ಘಾಟನೆಯ ದಿನವೇ ಹಳ್ಳ ಹಿಡಿಯಿತು. ನೀರು ನಿಂತ ಒಂದೇ ದಿನದಲ್ಲಿ ಅಣೆಕಟ್ಟು ಎಂಟು-ಹತ್ತು ಕಡೆ ಬಿರುಕು ಬಿಟ್ಟಿತು. ಇದನ್ನು ಸರಿಪಡಿಸುವ ಪ್ರಯತ್ನ ಬಿರುಕನ್ನು ಇನ್ನಷ್ಟು ದೊಡ್ಡದಾಗಿಸಿತು. ಕೊನೆಗೆ ಪ್ರವಾಹ ಹೆಚ್ಚುತ್ತ ಹೋದಾಗ ಬೇರೆ ದಿಕ್ಕು ತೋಚದೆ ಕೇವಲ ತಿಂಗಳೊಪ್ಪತ್ತಿನಲ್ಲಿ ಡೈನಾಮೈಟ್ ಇಟ್ಟು ಒಡ್ಡುಗಳನ್ನು ಸಿಡಿಸಿ ಹಾಕಿದರು.
ಒಂದಲ್ಲ, ಎರಡಲ್ಲ. ಬರೋಬ್ಬರಿ ಐವತ್ತಕ್ಕೂ ಹೆಚ್ಚು ಇಂಥ ದುಸ್ಸಾಹಸದ ಇತಿಹಾಸ ಇಂದು ನಮ್ಮೆದುರಿಗೆ ಸಿಗುತ್ತಿರುವಾಗಲೇ ನಾಡಿನ ಜೀವನದಿಗಳನ್ನು ಇತಿಹಾಸವಾಗಿಸುವ ಐತಿಹಾಸಿಕ ಯೋಜನೆಗಳಿಗೆ, ಅದರಲ್ಲೂ ಗಂಗಾ ತಟದಲ್ಲಿ ನಾವು ಅಡಿ ಇಡುತ್ತಿದ್ದೇವೆ.
ಇಂದು ನದಿಗಳಿಗೆ ಕಟ್ಟಿದ ಹಲವು ಒಡ್ಡುಗಳಿಂದಾಗಿ ದೇಶದ ಶೇ. 1ರಷ್ಟು ನೆಲ ಜಲಾಶಯವಾಗಿದ್ದರೂ ಕೆರೆಗಳಲ್ಲಿ ಸಂಗ್ರಹವಾಗುತ್ತಿದ್ದ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ದೇಶದ ಶೇ. 3ರಷ್ಟು ನೆಲದ ಮೇಲಿದ್ದ ಕೆರೆಗಳು, ಬೀಳುತ್ತಿದ್ದ ಮಳೆಯ ಕಾಲುಭಾಗವನ್ನು ಹಿಡಿದು ಇರಿಸಿಕೊಳ್ಳುತ್ತಿದ್ದವಂತೆ. ಹಾಗೆಂದು ಜಲಾಶಯಗಳು ಎಲ್ಲ ರೀತಿಯ ಅಗತ್ಯವನ್ನು ಪೂರೈಸಿಲ್ಲ. ಅಂದ ಮೇಲೆ ಅಭಿವೃದ್ಧಿ ಎಂಬುದಕ್ಕೆ ಏನರ್ಥ? ಹುಸಿ ಅಭಿವೃದ್ಧಿಗಿಂತ ನಿಸರ್ಗ ಸಮತೋಲನ ರಕ್ಷಣೆಯೇ ನಮ್ಮ ಆದ್ಯತೆಯಾಗುವುದೊಳಿತು. ಇಲ್ಲದಿದ್ದರೆ ನಮ್ಮ ಅಭಿವೃದ್ಧಿ(?) ನೀರಿನಲ್ಲಿ ಕೊಚ್ಚಿಹೋಗುವುದರಲ್ಲಿ ಸಂಶಯವಿಲ್ಲ.

- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.