ಅಂಕಣಗಳು

ಹೀಗೊಂದು ಪತ್ರದ ಕಥೆ: ಎಲ್ಲಿದೆ ಪತ್ರ?

Published On :

ಬೆಂಗಳೂರಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಲಯ ಹಾಗೂ ರಾಜ್ಯ ಸರ್ಕಾರದ ಅಧಿಕೃತ ಕಾರ್ಯಾಲಯವಾದ ವಿಧಾನಸೌಧಗಳೆರಡೂ ಒಂದೇ ರಸ್ತೆಯಲ್ಲಿವೆ. ಅವೆರಡರ ನಡುವಣ ದೂರ ಮುಕ್ಕಾಲು ಕಿಲೋಮೀಟರ್‌ಗೂ ಕಡಿಮೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ.ಪರಮೇಶ್ವರ ಅವರು ತಮ್ಮ ಕಾರ್ಯಾಲಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ಪತ್ರ ಬರೆದು ಬಜೆಟ್‌ನಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಅಳವಡಿಸಿರುವ, 'ಸರ್ವರನ್ನೂ ಒಳಗೊಂಡ ಅಭಿವೃದ್ಧಿ ಕಾರ್ಯಕ್ರಮ'ಗಳನ್ನು ಸೇರಿಸಬೇಕೆಂದು ಸಲಹೆ ಮಾಡಿದ್ದರು.
ಎರಡು ದಿನಗಳ ಅನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಒಂದು ಅನೌಪಚಾರಿಕ ಪತ್ರಕರ್ತರ ಭೇಟಿ ಸಮಯದಲ್ಲಿ ತಾವಿನ್ನೂ ಆ ಪತ್ರವನ್ನು ನೋಡಿಲ್ಲ ಎಂದಿದ್ದರು. ಪತ್ರದ ಒಕ್ಕಣೆಯ ಸಾರಾಂಶ ಮಾಧ್ಯಮದಲ್ಲೇ ಪ್ರಕಟವಾಗಿದ್ದರಿಂದ, ಅದರಲ್ಲಿ ಏನಿರಬಹುದು ಎನ್ನುವುದನ್ನು ಸಿದ್ದರಾಮಯ್ಯ ಅವರು ಊಹಿಸಿರಲೇಬೇಕು. ಪ್ರಾಯಶಃ ಆ ಕಾರಣದಿಂದಲೇ ಅವರು ಪತ್ರ ನೋಡಿಲ್ಲ ಎಂದಿರಬೇಕು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಅಧಿಕಾರವನ್ನು ವಹಿಸಿಕೊಂಡ ಕ್ಷಣದಲ್ಲೇ ರುಪಾಯಿಗೊಂದು ಕೇಜಿ ಅಕ್ಕಿಯನ್ನು ಬಡವರಿಗೆ ಒದಗಿಸುವ ಯೋಜನೆಯನ್ನು ಪ್ರಕಟಿಸಿದ್ದರು. ಅದು ಕಾಂಗ್ರೆಸ್ಸಿನ ಪ್ರಣಾಳಿಕೆಯಲ್ಲೇ ಇರುವ ಯೋಜನೆ. ಕಾಂಗ್ರೆಸ್ಸಿನ ಯೋಜನೆ ಅದು. ಅದರ ಮೇಲೆ ಡಾ. ಪರಮೇಶ್ವರ ಅವರದ್ದಾಗಲಿ, ಸಿದ್ದರಾಮಯ್ಯ ಅವರದ್ದಾಗಲಿ "ಕಾಪಿರೈಟ್‌" ಹಕ್ಕು ಇಲ್ಲ.
ನಿಜ. ಇದೇನೂ ದೊಡ್ಡ ವಿಷಯವಲ್ಲ. ಒಂದು ರುಪಾಯಿ ಕಿಲೋ ಅಕ್ಕಿ ಯೋಜನೆಯ ಪರಿಣಾಮವಾಗಿ ಕಡು ಬಡವರೆಲ್ಲ ಕೆಲಸ ಮಾಡದೇ ಸೋಮಾರಿಗಳಾಗಿ ಬಿಡುತ್ತಾರೆ ಎನ್ನುವುದಾಗಲಿ ಈ ಯೋಜನೆಯಿಂದ ರಾಜ್ಯದ 98,37,701 ಕಡು ಬಡಕುಟುಂಬಗಳ ಜನರು (ಮಕ್ಕಳೂ ಸೇರಿದಂತೆ) ಎರಡು ಹೊತ್ತೂ ಹೊಟ್ಟೆ ತುಂಬಾ ಊಟ ಮಾಡಿ, ಪುಷ್ಟಿಕರವಾದ ಆಹಾರ ಸೇವನೆಯ ಪರಿಣಾಮವಾಗಿ ಆರೋಗ್ಯವಂತರಾಗುತ್ತಾರೆನ್ನುವ ವಾದವೇ ಆಗಲಿ ಎರಡೂ ಮಿಥ್ಯ. ಬರೀ ಅಕ್ಕಿ (ಈಗ ಅನ್ನ ಭಾಗ್ಯ) ಜನರನ್ನು ಬದುಕಿಸುವುದಿಲ್ಲ ಬಡತನವನ್ನೂ ನಿವಾರಿಸುವುದಿಲ್ಲ. ಅದಕ್ಕೆ ಇನ್ನೂ ಬೇಕಾದಷ್ಟು "ಅಗತ್ಯಗಳಿವೆ". ಆ ವಿಚಾರ ಬೇರೆ.
ಸದ್ಯಕ್ಕೆ ಬೆಳವಣಿಗೆ ಅಥವಾ ಪ್ರಗತಿ ಹಾಗೂ ಸಾಮಾಜಿಕ ಸ್ವಾಸ್ಥ್ಯದ ಅಗತ್ಯಗಳಲ್ಲಿ ಯಾವುದು ಮುಖ್ಯ ಎನ್ನುವ ಚರ್ಚೆಯನ್ನು ವಿಶ್ವವಿಖ್ಯಾತ ಭಾರತೀಯ ಅರ್ಥಶಾಸ್ತ್ರ ಪಂಡಿತರಾದ ಜಗದೀಶ ಭಗವತಿ ಹಾಗೂ ಅಮರ್ತ್ಯ ಸೆನ್ ಅವರಿಗೇ ಬಿಟ್ಟು (ಆ ಚರ್ಚೆ ನಡೆಯುತ್ತಿರುವುದು ಅಮೆರಿಕದಲ್ಲಿ) ಡಾ. ಪರಮೇಶ್ವರ ಅವರು ಸಿದ್ದರಾಮಯ್ಯ ಅವರಿಗೆ ಬರೆದ  ಪತ್ರದ ಕಥೆಯನ್ನೇ ಮುಂದುವರಿಸುವುದಾದರೆ, ಕಾಂಗ್ರೆಸ್ಸಿನ ಈ ಇಬ್ಬರು ನಾಯಕರೂ ಪತ್ರ ಮುಖೇಣ ಅಥವಾ ಪತ್ರಕರ್ತರ ಮೂಲಕ ಮಾತುಕತೆ ನಡೆಸಬೇಕಾದ ಸ್ಥಿತಿ ಈಗಾಗಲೇ ನಿರ್ಮಾಣವಾಯಿತೇ ಎನ್ನುವ ಗಂಭೀರ ಸ್ಥಳೀಯ ರಾಜಕೀಯ ಸಮಸ್ಯೆ ನಿಜವಾಗಲೂ ಮುಖ್ಯವಾದದ್ದೇ.
ಹೇಗಿದ್ದರೂ, ಪರಮೇಶ್ವರ, ಸಿದ್ದರಾಮಯ್ಯ ಅವರಿಬ್ಬರೂ ಶನಿವಾರ, ಭಾನುವಾರ ಒಟ್ಟಿಗೇ ದೆಹಲಿಯಲ್ಲಿರುತ್ತಾರೆ. 'ಸೋನಿಯಾ ಗಾಂಧಿ ಅವರ ಸಮ್ಮುಖದಲ್ಲೇ ಉನ್ನತ ಮಟ್ಟದ ಸಂಪರ್ಕದ ಅಭಾವದ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡೇ ಊರಿಗೆ ಹಿಂತಿರುಗಬಹುದು. ಅದು ಆಗಬೇಕಾದ ಕೆಲಸ. ಮುಖ್ಯಮಂತ್ರಿಯಾದ ಅನಂತರ ಸಿದ್ದರಾಮಯ್ಯ ಇನ್ನೂ ಕಾಂಗ್ರೆಸ್ ಕಾರ್ಯಾಲಯಕ್ಕೆ ಹೋಗಿಲ್ಲ, ಬಜೆಟ್ ಅನಂತರ ವಾರಕ್ಕೊಮ್ಮೆ ಹೋಗುತ್ತಾರಂತೆ. ಕರ್ನಾಟಕದ ಕಾಂಗ್ರೆಸ್ಸಿನ ವ್ಯವಹಾರಗಳನ್ನು ತಮ್ಮದೇ ಆದ ರೀತಿಯಲ್ಲಿ ನೋಡಿಕೊಳ್ಳುತ್ತಿರುವ ಪಕ್ಷದ ಅತಿ ಹಿರಿಯ ಪ್ರಧಾನ ಕಾರ್ಯದರ್ಶಿ ದಿಗ್ವಿಜಯಸಿಂಗ್ ಹೇಳಿ ಹೋದ ಸಂಘಟನಾಂಗ ಹಾಗೂ ಶಾಸಕಾಂಗದ ನಡುವಣ ಸಮನ್ವಯ ಸಾಧನದ ಸಮಿತಿ ಇನ್ನೂ ರಚನೆಯಾಗಿಲ್ಲ. ಕಾಂಗ್ರೆಸ್ ಶಾಸಕಾಂಗ ಪಕ್ಷಕ್ಕೆ ಇನ್ನೂ ಪದಾಧಿಕಾರಿಗಳ ಆಯ್ಕೆಯಾಗಿಲ್ಲ. ಈಗಿನ ನಾಯಕರಿಗೆ ಇವೆಲ್ಲವೂ ಚಿಲ್ಲರೆ ವಿಷಯಗಳು.

ಅಭಿನಂದನೆಗೆ ಅರ್ಹ: ಸಿದ್ದರಾಮಯ್ಯ ಅವರು ತಮ್ಮ ಕೆಲಸವನ್ನು ಆರಂಭಿಸಿದ್ದಾರೆ. ಅದರಲ್ಲಿ ಅನುಮಾನವೇ ಇಲ್ಲ. ಅವರು ಬಹಿರಂಗವಾಗಿ ನೀಡಿದ ವಚನದಂತೆ, ಲೋಕಾಯುಕ್ತರು (ಸಂತೋಷ ಹೆಗ್ಡೆ) ಆರೋಪಗಳನ್ನು ಹೊರಿಸಿ, ತನಿಖೆಗೆ ಅನುಮತಿ ಕೇಳಿದ್ದ 130 ಹಿರಿಯ ಕಿರಿಯ ಅಧಿಕಾರಿಗಳ ವಿರುದ್ಧದ ಆರೋಪಗಳ ತನಿಖೆಗೆ ಸರ್ಕಾರದ ಅನುಮತಿಯನ್ನು 74 ಅಧಿಕಾರಿಗಳಿಗೆ ಸಂಬಂಧಿಸಿದಂತೆ ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಲೇಬೇಕು. ವಿಧಾನ ಸಭೆಯ ಉಭಯ ಸದನಗಳಲ್ಲೂ ಕಾಂಗ್ರೆಸ್ ವಿರೋಧಿ ಪ್ರತಿಪಕ್ಷಗಳಾದ ಜಾತ್ಯತೀತ ಜನತಾದಳ ಹಾಗೂ ಭಾರತೀಯ ಜನತಾ ಪಾರ್ಟಿಗಳ ನಾಯಕರು, ತಮ್ಮ ತಮ್ಮಲ್ಲೇ ಇರಬಹುದಾದ ಭಿನ್ನಾಭಿಪ್ರಾಯಗಳ ಜತೆ ರಾಜಿ ಮಾಡಿಕೊಳ್ಳದೇ ಇದ್ದರೂ ಕಾಂಗ್ರೆಸ್ ವಿರೋಧಿ ನಿಲವನ್ನು ಪ್ರದರ್ಶಿಸುವುದರಲ್ಲಿ ಒಂದೇ ರೀತಿಯಲ್ಲಿ ವರ್ತಿಸುವುದು ಸಹಜವೇ. ಸಿದ್ದರಾಮಯ್ಯ ಅವರನ್ನು ಹಣಿಯಲು ವಿಧಾನ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ತ್ರಿಮೂರ್ತಿಗಳು -ಕುಮಾರಸ್ವಾಮಿ, ಜಗದೀಶ ಶೆಟ್ಟರ್, ಯಡಿಯೂರಪ್ಪ ಅವರು ತುದಿಗಾಲ ಮೇಲೆ ನಿಂತಿರುವುದು ನಿಜ. ಅದಕ್ಕೆ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಅವರು ಮಂಡಿಸುವ ಬಜೆಟ್ ಅಷ್ಟೇ ಅಲ್ಲ ಗ್ರಾಸವನ್ನು ಒದಗಿಸುವುದು.
ವಿಧಾನ ಮಂಡಲದ ಹೊರಗಡೆ, ಕರ್ನಾಟಕದ ಹೊರಗಡೆಯ ವಿದ್ಯಮಾನಗಳ ಪ್ರಸ್ತಾಪವು ಅನಿವಾರ್ಯವಾಗುತ್ತದೆ. ಪಾಪ. ಇಲ್ಲಿ ಸಿದ್ದರಾಮಯ್ಯ ಅವರು ಒಂದು ರೀತಿಯಲ್ಲಿ ಏಕಾಂಗಿಯಾಗಿ ಬಿಡುವುದು ಖಚಿತ. ಯೋಜನಾ ಆಯೋಗದ ಪಂಡಿತರು, ದೇಶದ ಹಲವಾರು ಆರ್ಥಿಕ - ಅಭಿವೃದ್ಧಿ ತಜ್ಞರು,ಆಹಾರ ಭದ್ರತೆಯ ಸುಗ್ರೀವಾಜ್ಞೆ (ಕೇಂದ್ರದ್ದು) ರುಪಾಯಿಗೊಂದು ಕೇಜಿ ಅಕ್ಕಿಯ ಮಾರಾಟದ ನೀತಿಯನ್ನು ಅಭಿವೃದ್ಧಿಗೆ ಮಾರಕವೆಂದು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಟೀಕಿಸಿರುವುದು, ಬೌದ್ಧಿಕ ಮಟ್ಟದಲ್ಲಿ ಪ್ರತಿಪಕ್ಷಗಳಿಗೆ ಅನುಕೂಲವಾದರೂ, ವಾಸ್ತವದಲ್ಲಿ ಮೇಲ್ನೋಟಕ್ಕೇ ಕಡುಬಡವರ ಪರವಾಗಿರುವಂತೆ ಕಂಡು ಬರುವ ಅನ್ನದ ಭಾಗ್ಯ ಯೋಜನೆಯನ್ನು ನೇರವಾಗಿ ವಿರೋಧಿಸುವುದು ಕಷ್ಟ.
ಆದ್ದರಿಂದ ಆ ಯೋಜನೆಯನ್ನು ಜಾರಿಗೆ ತರುವುದರಲ್ಲಿ ಕಂಡುಬರಬಹುದಾದ ಲೋಪದೋಷಗಳನ್ನೆ ಪ್ರತಿಪಕ್ಷಗಳು ಟೀಕೆಗೆ ಅಸ್ತ್ರವನ್ನಾಗಿ ಬಳಸಬೇಕು. ಇಲ್ಲದಿದ್ದರೆ, ಬೇರೆ ಸ್ಥಳೀಯ ಸಮಸ್ಯೆಗಳನ್ನು ಮುಂದಕ್ಕೆ ತರಬೇಕು.

ಕುಮಾರಸ್ವಾಮಿ ಪ್ರತ್ಯೇಕ: ಈ ವಿಚಾರದಲ್ಲಿ ಅಧಿಕೃತವಾಗಿ ಮನ್ನಣೆ ಪಡೆದ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಗುರಿ ಹಾಗೂ ಪಾತ್ರವನ್ನು ಸ್ಪಷ್ಟವಾಗಿ ಗುರ್ತಿಸಿಕೊಂಡಿರುವಂತಿದೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನ ಸಾರ್ವಜನಿಕ ಸಮಾರಂಭದಲ್ಲಿ ಅವರು ಸಿದ್ದರಾಮಯ್ಯ ಅವರ ವಿರುದ್ಧ ಜಾತೀಯತೆಯ ಆರೋಪವನ್ನು ನೇರವಾಗಿ ಹೊರಿಸಿ, ಒಕ್ಕಲಿಗ ಅಧಿಕಾರಿಗಳನ್ನು ತಡವಿದರೆ ಜೋಕೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾಗಿದೆ. ಕುಮಾರಸ್ವಾಮಿ ಅವರ ಬಳಿ ಜಾತೀಯತೆಯ ಆರೋಪಕ್ಕೆ ಎಷ್ಟರ ಮಟ್ಟಿಗೆ ನಂಬಬಹುದಾದ ಸಾಕ್ಷ್ಯ - ಆಧಾರ ಇದೆಯೋ ಗೊತ್ತಿಲ್ಲ. ಆದರೆ ಕರ್ನಾಟಕ ಲೋಕ ಸೇವಾ ಆಯೋಗದ ಅವ್ಯವಹಾರದ ತನಿಖೆಯನ್ನೇ ಅವರು ಪ್ರಮುಖವಾಗಿ ಪರಿಗಣಿಸಿದರೆ, ಈ ವಿಚಾರದಲ್ಲಿ ಅವರ ಮಾತನ್ನು ಸಾರ್ವಜನಿಕರೂ ಒಪ್ಪುವುದಿಲ್ಲ, ವಿಧಾನ ಮಂಡಲದ ಇತರ ವಿರೋಧ ಪಕ್ಷಗಳೂ ಬೆಂಬಲಿಸುವುದಿಲ್ಲ.

ಬಿಜೆಪಿಯ ತುಮುಲ: ಭಾರತೀಯ ಜನತಾ ಪಕ್ಷದ ದೆಹಲಿಯ ನಾಯಕರು ಲೋಕಸಭೆಗೆ ಯಾವಾಗ ಚುನಾವಣೆ ನಡೆಸಿದರೂ ಅದನ್ನು ಎದುರಿಸಲು ಸಿದ್ಧ ಎಂದು ಸುಲಭವಾಗಿ ಹೇಳಬಹುದು. ಅವರಲ್ಲಿ ಬಹುಮಂದಿ ನೇರವಾದ ಚುನಾವಣೆಯನ್ನು ಎದುರಿಸುವುದಿಲ್ಲ. ಆದರೆ ಕರ್ನಾಟಕ ಬಿಜೆಪಿಯ ಮಟ್ಟಿಗೆ ಹೇಳುವುದಾದರೆ, ಈಗ ಪಕ್ಷದಲ್ಲಿ ನಾಯಕರಿಗೆ, ಕಾರ್ಯಕರ್ತರಿಗೆ ಆತ್ಮವಿಶ್ವಾಸ ಕಡಿಮೆಯಾಗಿರುವುದು ನಿಜ. ವಿಧಾನ ಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನಿಂದ ಪಕ್ಷ ಮೇಲಿನಿಂದ ಕೆಳಹಂತದವರೆಗೂ ಹೌಹಾರಿದೆ. ಈ ಮನೋಧರ್ಮದಿಂದ ಪಕ್ಷ ಹೊರಗೆ ಬರದೇ ಹೋದರೆ, ಅದರ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದೇ ಕಷ್ಟವಾದೀತು. ಯಾವ ದೃಷ್ಟಿಯಿಂದ ನೋಡಿದರೂ ಈಗ ಬಿಜೆಪಿಯ ರಾಜ್ಯ ಮಟ್ಟದ ನಾಯಕತ್ವ ತಲೆದಂಡವನ್ನು ತೆರಲೇಬೇಕು. ಪಕ್ಷದ ಹೀನಾಯ ಸೋಲಿಗೆ ನೈತಿಕ ಹೊಣೆಗಾರಿಕೆಯನ್ನು ಹೊರಲು ಸಿದ್ಧವಿರುವ ನಾಯಕರೇ ಆ ಪಕ್ಷದಲ್ಲಿ ಉಳಿದಿಲ್ಲವೇನು? ನಿಜ. ಉತ್ತರ ಧಾರವಾಡದ ಲೋಕಸಭೆ ಸದಸ್ಯ ಪ್ರಹ್ಲಾದ ಜೋಷಿ ಅವರು ಕರ್ನಾಟಕ ಬಿಜೆಪಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದು ಹೆಚ್ಚು ಕಡಿಮೆ ಅದು ಅಧಿಕಾರದಿಂದ ಬೀಳುವ ಸನ್ನಿವೇಶದಲ್ಲಿ. ಹೇಳಿ - ಕೇಳಿ ಜೋಷಿ ಅವರೇನೂ ರಾಜ್ಯದಲ್ಲಿ ದೊಡ್ಡ ಸಮುದಾಯದ ನಾಯಕರಲ್ಲ.
ಹುಬ್ಬಳ್ಳಿಯ ಈದ್ಗಾ ಮೈದಾನದ ರಾಷ್ಟ್ರ ಧ್ವಜಾರೋಹಣ ಆಂದೋಲನದಲ್ಲಿ, ಉಮಾಭಾರತಿ ಅವರೇ ಬಾವುಟ ಹಿಡಿಯಲು ಸಿದ್ಧವಾದಾಗಲೇ, ಧಾರವಾಡ ಸೀಮೆಯ ಹೊರಗೆ ಪ್ರಹ್ಲಾದ ಜೋಷಿ ಅವರ ಹೆಸರಿಗೆ ಪ್ರಚಾರ ಸಿಕ್ಕಿದ್ದು. ಈಗಲೂ, ಪಕ್ಷಕ್ಕೆ ಒಬ್ಬ ಹೋರಾಟಗಾರ ನಾಯಕನ ಅಗತ್ಯವಿರುವಾಗಲೂ ವರಿಷ್ಠರು ನಾಯಕತ್ವದ ಬದಲಾವಣೆಯ ಮಾತನ್ನೇ ಆಡುತ್ತಿಲ್ಲ ಎಂದರೆ ಪಕ್ಷದ ಒಳಗೆ ಏನೋ ನಡೆದಿರಬೇಕು ಎನ್ನುವ ಅನುಮಾನ ಮೂಡುತ್ತಿದೆ.
ಇದು ವೈಯಕ್ತಿಕವಾಗಿ ಪ್ರಹ್ಲಾದ ಜೋಷಿ ಅವರು ಅಧ್ಯಕ್ಷರಾಗಿ ಮುಂದುವರಿಯುವ ಪ್ರಶ್ನೆ ಅಲ್ಲ, ಒಂದು ರಾಜಕೀಯ ಪಕ್ಷದ ಅಸ್ತಿತ್ವವೇ ಕರ್ನಾಟಕದಲ್ಲಿ ಅಪಾಯಕ್ಕೆ ಸಿಕ್ಕಿರುವಾಗ ಪಕ್ಷದ ರಾಷ್ಟ್ರೀಯ ನಾಯಕತ್ವದ ಈ ಡೋಲಾಯಮಾನ ನೀತಿ ಅರ್ಥವಾಗದೇ ಇರುವಂತಹದ್ದು. ಕಠಿಣ ನಿರ್ಧಾರಕ್ಕೆ ವಿಳಂಬವೇಕೆ? ನಿಜ. ಯಡಿಯೂರಪ್ಪ ಅವರು ಪಕ್ಷಕ್ಕೆ ಮರ್ಯಾದೆ ಸಂಭ್ರಮದಿಂದ ಹಿಂತಿರುಗುತ್ತಾರೋ ಇಲ್ಲವೋ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಅದನ್ನು ಇತ್ಯರ್ಥ ಪಡಿಸುವುದಕ್ಕೆ ವರಿಷ್ಠರಿಗೆ ನಿಜವಾಗಿಯೂ ಬೇಕಾಗಿರುವುದು ರಾಜಕೀಯ ವಾಸ್ತವವನ್ನು ಗೌರವಿಸುವ ಜನತಾಂತ್ರಿಕ "ಕವಿ ಸಮಯ ಬುದ್ಧಿ" ಹಾಗೂ ಮನಸ್ಸು".
ಈ ಪ್ರಶ್ನೆಗೆ ವಾದ-ವಿವಾದದ ಮೂಲಕ ಪರಿಹಾರವನ್ನು ಕಂಡುಕೊಳ್ಳುವುದು ಸಾಧ್ಯವೇ ಇಲ್ಲ. ರಾಜಕೀಯ ಲೇಪದ ಸಾಮಾನ್ಯ ಜ್ಞಾನದಿಂದಲೇ ನಿರ್ಧಾರ ಹೊರಹೊಮ್ಮಬೇಕು. ಬಿಜೆಪಿಗೆ ಹೆಚ್ಚು ಸಮಯವಿಲ್ಲ. ಈಗಲೇ ಆ ನಿರ್ಧಾರ (ಅದು ಏನಾದರೂ ಆಗಿರಲಿ) ಹೊರಬೀಳದೇ ಹೋದರೆ, ಮುಂದೆ ನಿರ್ಧಾರವಾದರೂ, ಆಗದಿದ್ದರೂ ಪರಿಣಾಮ ಒಂದೇ.

ಕಿಡಿಗೇಡಿತನ: ರಾಜ್ಯ ಸರ್ಕಾರದ ಅತಿ ಪ್ರತಿಷ್ಠಿತ ಅನ್ನದ ಭಾಗ್ಯ ಯೋಜನೆಯ ಉದ್ಘಾಟನಾ ಸಮಾರಂಭಕ್ಕೆ, ಆಳುವ ಪಕ್ಷದ ಅಧ್ಯಕ್ಷರಿಗೆ ಆಹ್ವಾನ ಪತ್ರ ಕೊಡಲು ಸರ್ಕಾರದ ಶಿಷ್ಟಾಚಾರ ಅಡ್ಡಿಯಾಯಿತು ಎಂದರೆ ರಾಜಕೀಯ ಪಕ್ಷ ಆಧರಿತ ಜನತಾಂತ್ರಿಕ ವ್ಯವಸ್ಥೆಯನ್ನೇ ಅಣಕಿಸಿದಂತೆ. ಇಷ್ಟಕ್ಕೂ ಅದು ಸಾರ್ವಜನಿಕ ಸಮಾರಂಭ. ಸರ್ವರಿಗೂ ಆದರದ ಸ್ವಾಗತವಿತ್ತು.

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.