ಅಂಕಣಗಳು

ಪ್ರವಾಸೋದ್ಯಮವನ್ನು ಪ್ರಯಾಸದಲ್ಲೇ ಇಟ್ಟವರು ನಾವು!

ಹನ್ನೊಂದು ದಿನಗಳಲ್ಲಿ ರವಾಂಡಾ, ಬುರುಂಡಿ ಹಾಗೂ ಕೀನ್ಯಾ ದೇಶಗಳನ್ನು ಸುತ್ತಿ ಮರಳಿ...

Published On :

ಹನ್ನೊಂದು ದಿನಗಳಲ್ಲಿ ರವಾಂಡಾ, ಬುರುಂಡಿ ಹಾಗೂ ಕೀನ್ಯಾ ದೇಶಗಳನ್ನು ಸುತ್ತಿ ಮರಳಿ ಊರಿಗೆ ಬಂದು ಇನ್ನೂ ಒಂದು ವಾರವಾಗಿಲ್ಲ. ಗಗನಚುಕ್ಕಿ, ಭರಚುಕ್ಕಿ ಜಲಪಾತಗಳಿಗೆ ಹೋಗಿ, ಬದಾಮಿಗೆ ಭೇಟಿ ಕೊಟ್ಟು ಜೋಗದ ದಾರಿಯಲ್ಲಿದ್ದೇನೆ. ಕಚೇರಿಯ ಕಾರ್ಯ ಹಾಗೂ ಖಾಸಗಿ ಕೆಲಸಗಳು ನನ್ನನ್ನು ಈ ಪರಿ ಸುತ್ತಿಸುತ್ತಿವೆ. ಓದನ್ನು ಬಿಟ್ಟರೆ ಅತಿ ಸಂತಸ ನೀಡುವುದು ಪ್ರವಾಸ. ನಾನು ನಲವತ್ನಾಲ್ಕು ದೇಶಗಳಿಗೆ ಹೋಗಿದ್ದೇನೆ. ಪ್ರತಿಸಲ ವಿದೇಶಕ್ಕೆ ಹೋಗಿ ಬಂದಾಗ ನಾನೊಬ್ಬ ಅಲ್ಪಜ್ಞಾನಿ ಎಂದೆನಿಸಿದೆ. ಒಂದಷ್ಟು ಹೊಸ ವಿಷಯ, ಸಂಗತಿ, ಜನ, ಪ್ರದೇಶ, ಊಟ, ತಿಂಡಿ, ಆಚಾರ, ವಿಚಾರ, ಸಂಸ್ಕೃತಿ, ಜನಜೀವನ, ಸಂಪ್ರದಾಯ, ಆಚರಣೆ ಮುಂತಾದವುಗಳನ್ನು ತಿಳಿದುಕೊಂಡ ಹತ್ತಾರು ಪುಸ್ತಕಗಳನ್ನು ಓದಿದ ಒಂದು ಅನೂಹ್ಯ ಅನುಭೂತಿ ಮನಸ್ಸನ್ನೆಲ್ಲ ಆವರಿಸಿಕೊಳ್ಳುತ್ತದೆ. ಬೇರೆ ಊರು, ದೇಶಗಳಿಗೆ ಹೋದಾಗ ನೋಡಿದ್ದೆಲ್ಲ ಹೊರತು, ತಾಜಾ ಕಣ್ಣಿನ ಅಂದಾಜಿಗೆ ಸಿಕ್ಕದ್ದೆಲ್ಲ ನವನವೀನ.
ಪ್ರತಿ ವಿದೇಶಯಾತ್ರೆ ಮುಗಿದು ಮರಳಿ ಬರುವಾಗ ಏನೋ ವಿಷಾದ, ಸಂಕಟ, ವಿದೇಶದ ನೆಲದಲ್ಲಿ ಪ್ರತಿ ಹೆಜ್ಜೆಗೂ ಇದೇ ಭಾವ ಡಿಕ್ಕಿ ಹೊಡೆಯುತ್ತಲೇ ಇರುತ್ತದೆ. ನಮ್ಮ ದೇಶ ಯಾಕೆ ಹೀಗಿಲ್ಲ. ಅವರಿಗೆ ಸಾಧ್ಯವಾಗಿದ್ದು ನಮಗೇಕೆ ಸಾಧ್ಯವಾಗಿಲ್ಲ, ನಾವು ಇವನ್ನೆಲ್ಲ ಸಾಧ್ಯವಾಗಿಸುವುದು ಯಾವಾಗ, we deserve better ಅಂತ ಸದಾ ಕಾಡುತ್ತಲೇ ಇರುತ್ತದೆ. ಅಮೆರಿಕ, ಇಂಗ್ಲೆಂಡ್, ದುಬೈ, ಚೀನಾ, ಸಿಂಗಾಪುರ, ಮಲೇಷಿಯಾ, ಆಸ್ಟ್ರೇಲಿಯಾ ಮುಂತಾದ ಮುಂದುವರಿದ ದೇಶಗಳಲ್ಲಿ ಅಡ್ಡಾಡುವಾಗಂತೂ ಈ ಹಳಹಳಿಕೆ, ವಿಷಾದ, ಸಂಕಟ ಉಮ್ಮಳಿಸುತ್ತಿರುತ್ತದೆ.
ಅತಿ ನೋವಿನಿಂದ ಹೇಳುತ್ತಿದ್ದೇನೆ. ಮೊನ್ನೆ ರವಾಂಡಾದಂಥ ದೇಶದಲ್ಲಿ ಓಡಾಡುವಾಗಲೂ ನನಗೆ ಹೀಗೇ ಅನಿಸಿತು. ರವಾಂಡಾವನ್ನು ಯಾವ ಕೋನದಿಂದ ನೋಡಿದರೂ ನಮಗೆ ಸರಿಸಾಟಿ ಆಗುವಂಥ ದೇಶವೇ ಅಲ್ಲ, ನಮಗೆ ಪಾಠ ಹೇಳಿ ಕೊಡುವ ದೇಶ ಅಲ್ಲ. ಇಪ್ಪತ್ತು ವರ್ಷಗಳ ಹಿಂದೆ ಜನ ಹಾದಿ ಬೀದಿಯಲ್ಲಿ ಆಜನ್ಮ ವೈರಿಗಳಂತೆ ಬಡಿದಾಡಿಕೊಂಡಿದ್ದರು. ಹತ್ತು ಲಕ್ಷ ಜನ ಸತ್ತು ಹೋದರು. ಒಂದು ದೇಶದ ಶೇ. ಮೂವತ್ತರಷ್ಟು ಜನಸಂಖ್ಯೆ ನೂರು ದಿನಗಳಲ್ಲಿ ನಿರ್ನಾಮವಾಗಿ ಹೋಯಿತು. ಇಂಥ ಪೈಶಾಚಿಕ ಘಟನೆ ಈ ಭೂಮಿಯ ಮೇಲೆ ಮತ್ತೆಲ್ಲೂ ನಡೆದಿಲ್ಲ. ಆ ಪರಿ ಅಲ್ಲಿನ ಜನ ಹೊಡೆದಾಡಿ ಸತ್ತರು. ಇಡೀ ದೇಶವೇ ಸತ್ತು ಹೋಯಿತು. ಸತ್ಯಾ ನಾಶವಾಯಿತು ಎಂದು ವಿಶ್ವವೇ ಅಂದುಕೊಂಡು ಸುಮ್ಮನಾಯಿತು. ನಿಜವಾಗಿಯೂ ಅದು ರವಾಂಡಾದ ದಾರುಣ ಅಂತ್ಯವೇ ಆಗಬೇಕಿತ್ತು. ಚೇತರಿಸಿಕೊಳ್ಳುವ, ಮತ್ತೆ ಎದ್ದು ನಿಲ್ಲುವ ಯಾವ ಗುಣಲಕ್ಷಣ, ಆಶಾಕಿರಣಗಳಿರಲಿಲ್ಲ.
ಅಂಥ ಶಾಪಗ್ರಸ್ಥ ದೇಶ ಇಂದು ತಲೆಯೆತ್ತಿ ನಿಲ್ಲಲು ಪ್ರಯತ್ನಿಸುತ್ತಿದೆ. ತನ್ನ ಮನೆ ಅಂಗಳ, ಜಗುಲಿ, ಒಳಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹರಸಾಹಸ ಮಾಡುತ್ತಿದೆ. ಕಸವೇ ಇಲ್ಲದ, ಪ್ಲಾಸ್ಟಿಕ್ ಮುಕ್ತ, ಪರಿಸರಸ್ನೇಹಿ, ಅಚ್ಚುಕಟ್ಟಾದ, ವ್ಯವಸ್ಥಿತವಾದ ದೇಶವನ್ನು ಕಟ್ಟಬೇಕೆಂಬ ಸಂಕಲ್ಪಕ್ಕೆ ಶರಣಾಗಿದೆ. ದೇಶ ನಿರ್ಮಾಣದಲ್ಲಿ ನಮಗೆ ಸಿಂಗಾಪುರವೇ ಆದರ್ಶ ಎಂದು ಅಲ್ಲಿನ ರಾಷ್ಟ್ರಾಧ್ಯಕ್ಷರು ಪದೇ ಪದೆ ಹೇಳುತ್ತಾರೆ. ಮಾತು ಮಾತಿಗೆ ಅಭಿವೃದ್ಧಿ ಮಂತ್ರ ಪಠಿಸುತ್ತಾರೆ. ಜಗತ್ತಿನಲ್ಲಿ ಹೊಸತೇನಾದರೂ ಕಂಡರೆ, ಉತ್ತಮವಾದುದು ಎಲ್ಲಿಯೇ ಇದ್ದರೆ, ಅದು ನಮ್ಮ ದೇಶದಲ್ಲೂ ಇರಬೇಕೆಂದು ಹಂಬಲಿಸುತ್ತಾರೆ. ಮುಂದಿನ ಒಂದು ದಶಕದ ಅವಧಿಯಲ್ಲಿ ರವಾಂಡಾ ಹೇಗೆ ಅವತರಿಸಬಹುದೆಂಬುದನ್ನು ಇಂದು ಕಟ್ಟಿಕೊಳ್ಳಬಹುದು.
ಅಲ್ಲಾ ಸ್ವಾಮಿ, ನಮಗೇನಾಗಿದೆ ದಾಡಿ?
ನಮ್ಮ ದೇಶದ ಬಹುತೇಕ ಎಲ್ಲ ನಗರಗಳೂ ಅಪಾಯದ ಅಂಚಿನಲ್ಲಿವೆ, ಗಬ್ಬು ನಾರುತ್ತಿದೆ. ಪ್ರತಿಯೊಂದು ನಗರವೂ ದೊಡ್ಡ ಕಸದ ತೊಟ್ಟಿಯೇ. ನಾವೆಲ್ಲರೂ ನಗರವೆಂಬ ಬೃಹತ್ ಬಾಂಬ್‌ನೊಳಗೆ ಕುಳಿತಿದ್ದೇವೆ. ಯಾವಾಗ ಅದು ಸ್ಫೋಟಿಸುವುದೋ ಗೊತ್ತಿಲ್ಲ. ಸಣ್ಣ ಸಣ್ಣ, ಮೂಲಭೂತ ಸಮಸ್ಯೆಗಳೇ ನಮ್ಮನ್ನು ದೊಡ್ಡದಾಗಿ ಕಾಡುತ್ತಿದೆ. ಉದಾಹರಣೆಗೆ ಶೌಚಾಲಯ. ನಮಗಿನ್ನೂ ತೀರಾ ತೀರ ಪ್ರಾಥಮಿಕ ಅಗತ್ಯವಾದ ಶೌಚಾಲಯವನ್ನೇ ಕೊಡಲು ಆಗಿಲ್ಲ. ಹಳ್ಳಿಗಳಲ್ಲಂತೂ (ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ) ಬದುಕು ಯಾತನಾಮಯ. ನಗರಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಬೆಂಗಳೂರಿನಲ್ಲಿ ಎಂ.ಜಿ. ರೋಡಿನಲ್ಲಿರುವ ಬಿಗ್ ಕಿಡ್ಸ್ ಕ್ಯಾಂಪ್‌ನಿಂದ ಮೇಖ್ರಿ ಸರ್ಕಲ್ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಸುಮಾರು 30-35 ಕಿ.ಮಿ. ದೂರದ ಮಾರ್ಗದಲ್ಲಿ ಒಂದೇ ಒಂದು ಶೌಚಾಲಯವಿಲ್ಲ. ದಕ್ಷಿಣ ಕೊರಿಯಾದಲ್ಲಿ ಟ್ಯಾಕ್ಸಿಗಳಿಗೆ ಕಮೋಡ್ ಅಳವಡಿಸಲಾಗಿದೆ. ಟ್ರಾಫಿಕ್ ಜಾಮ್ ಆದಾಗ ಕಾರಿನಲ್ಲಿಯೇ ಆ ವ್ಯವಸ್ಥೆ ಕಲ್ಪಿಸಲಾಗಿದೆ. ನಮ್ಮ ಜನರಿಗೂ ಮಲ-ಮೂತ್ರ ಬಂದೇ ಬರುತ್ತದೆ ಹಾಗೂ ಅದನ್ನು ಕಾಲ ಕಾಲಕ್ಕೆ ವಿಸರ್ಜಿಸಬೇಕಾಗುತ್ತದೆ. ಎಲ್ಲಿ ಹೋಗೋದು? ಬೆಂಗಳೂರಿನಂಥ ನಗರದಲ್ಲಿ ಒಂದು ಕೋಟಿ ಜನರಿಗೆ ಸಾರ್ವಜನಿಕ ಶೌಚಾಲಯ ಅಂತ ಇರೋದು 290.
ಮೊನ್ನೆ ರವಾಂಡಾ ರಾಜಧಾನಿ ಕಿಗಾಲಿಯಲ್ಲಿ ಅಲ್ಲಿನ ಹಿರಿಯ ಅಧಿಕಾರಿಯೊಬ್ಬರ ಜತೆ ಮಾತಾಡುತ್ತಿದ್ದೆ. ಅವರು ಹೇಳಿದ ಮಾತುಗಳನ್ನು ಕೇಳಿ ಕಪಾಳಕ್ಕೆ ಹೊಡೆದಂತಾಯಿತು. 'ನನಗೆ ನಿಮ್ಮ ದೇಶದ ಬಗ್ಗೆ ದೊಡ್ಡ ತಕರಾರು ಇರೋದು ಟಾಯ್ಲೆಟ್‌ಗಳ ಬಗ್ಗೆ. ಬೆಂಗಳೂರಿನಲ್ಲಿ ಜನ ಹಾದಿ ಬದಿಯಲ್ಲೇ ಒಂದು, ಎರಡು... ಎಲ್ಲಾ ಮಾಡ್ತಾರಲ್ಲಾ. ಈ ದೃಶ್ಯ ನಿಮ್ಮ ದೇಶದ ಯಾವುದೇ ಊರಿಗೆ ಹೋದರೂ ಸಾಮಾನ್ಯ. ನನಗೇ ಬಹಳ ಮುಜುಗರವೆನಿಸಿತು. ನಿಮ್ಮ ಜನ ಹೀಗೇಕೆ? ಇದಂತೂ ತೀರಾ ನಾಚಿಕೆಗೇಡಿನ, ಅಮಾನವೀಯ ಪರಿಸ್ಥಿತಿ ಬಿಡಿ' ಎಂದ. ನಾನು ನಿರುತ್ತರನಾಗಿದ್ದೆ. ಬೆಂಗಳೂರಿನ ಬಗ್ಗೆ, ಇಲ್ಲಿನ ಜನರ ಬಗ್ಗೆ ಎಂಥಾ ಅಭಿಪ್ರಾಯ ಹೊಂದಿದ್ದಾನಲ್ಲಾ ಎಂದು ತೀವ್ರ ಖೇದವೆನಿಸಿತು.
ನಮಗಿಂತ ಅಭಿವೃದ್ಧಿಯಲ್ಲಿ ಕೆಳಗಿರುವ, ತೃತೀಯ ವಿಶ್ವದ ದೇಶಗಳೆಂದೇ ಕರೆಯಿಸಿಕೊಳ್ಳುತ್ತಿರುವ ರವಾಂಡಾದಲ್ಲೂ ಈ ದೃಶ್ಯಗಳು ಸಿಗಬಹುದಾ? ಎಂದು ನಾನು ಒಂದು ವಾರವಿಡೀ ಗಮನಿಸುತ್ತಿದ್ದೆ. ದೇಶದ ಉದ್ದಗಲಕ್ಕೆ ಓಡಾಡುವಾಗ ಅಂಥ ಒಂದೇ ಒಂದು ದೃಶ್ಯ ನೋಡಲಾಗಲಿಲ್ಲ. ಆ ಮಟ್ಟಿಗಿನ 'ನಾಗರಿಕತೆ' ಅಲ್ಲಿ ನೆಲೆಸಿದೆ. ಅಲ್ಲಿ ಬಡತನ, ಹಸಿವು, ಅನಕ್ಷರತೆ... ಸಮಸ್ಯೆಗಳಿವೆ. ಹಾಗಂತ ತಮ್ಮ ತಮ್ಮ ಮನೆ, ಊರು, ದೇಶವನ್ನು ಸ್ವಚ್ಛವಾಗಿಟ್ಟುಕೊಂಡಿದ್ದಾರೆ. ಆ ಅಧಿಕಾರಿ ಹೇಳಿದ ಮತ್ತೂ ಒಂದು ಮಾತು ಚಾಕು ಹಾಕಿ ತಿರುವಿದಂತಾಯಿತು. 'ನಿಮ್ಮ ಜನ ಹೀಗೇಕೆ? ಅದ್ಹೇಗೆ ಇವನ್ನೆಲ್ಲ ಸಹಿಸಿಕೊಳ್ಳುತ್ತೀರಾ? ಎಷ್ಟು ದಿನ ಅಂತ ಇವನ್ನೆಲ್ಲ  ಸಹಿಸಿಕೊಳ್ತೀರಾ? ಸುಶಿಕ್ಷಿತರೇ ತುಂಬಿರುವ ನಗರದಲ್ಲಿ ಇದು ಹೇಗೆ ಸಾಧ್ಯ? ಇನ್ನು ಎಷ್ಟು ದಿನ? ಈ ಸಮಸ್ಯೆಗೆ ಕೊನೆಯೇ ಇಲ್ಲವಾ?'
ವಿಷಯ ಬದಲಿಸಿದೆ. ಮರ್ಯಾದೆ ಉಳಿಯಿತು ಹಾಗಂತ ನಾನು ಭಾವಿಸಿದೆ. It was a shame. ವಿದೇಶಿ ನೆಲದಲ್ಲಿ ಅನೇಕ ಸಲ ಇಂಥ ಅನುಭವವಾಗಿದೆ. ವಿಚಿತ್ರ ಅಂದ್ರೆ ಎಲ್ಲರಿಗೂ ಈ ಸಮಸ್ಯೆ ಬಗ್ಗೆ ಅರಿವಿದೆ. ಇತ್ತೀಚೆಗೆ ನಮ್ಮನ್ನು ಆಳಿದ ಎಸ್.ಎಂ. ಕೃಷ್ಣ, ಧರ್ಮಸಿಂಗ್, ಕುಮಾರಸ್ವಾಮಿ, ಯಡಿಯೂರಪ್ಪ, ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್‌ಗೆ ಈ ಸಮಸ್ಯೆ ಬಗ್ಗೆ ಗೊತ್ತಿರಲಿಲ್ಲವಾ? ಚೆನ್ನಾಗಿ ಗೊತ್ತಿದೆ. ಆದರೆ ಅವರ್ಯಾರು ಈ ನಿಟ್ಟಿನಲ್ಲಿ ಏನೂ ಮಾಡದೇ ಎದ್ದು ಹೋದರು. ಹಾಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ಅವರಿಗೂ ಈ ಸಮಸ್ಯೆಯ ಅರಿವು ಚೆನ್ನಾಗಿದೆ. ಹಾಗಂತ ಅವರು ಇದನ್ನು ಸರಿಪಡಿಸುತ್ತಾರೆಂಬ ವಿಶ್ವಾಸ ಇಲ್ಲ. ಇದೆಂಥ ದೌರ್ಭಾಗ್ಯ?!
ಹಾಗಾದರೆ ನಾವು ಯಾವಜ್ಜೀವ ಇದೇ ಗಬ್ಬುನಾತದಲ್ಲಿಯೇ ಜೀವನ ಸವೆಸಬೇಕಾ? ಸಮಸ್ಯೆಗೆ ಸಮಸ್ಯೆಯೇ ಉತ್ತರವಾ? ಇನ್ನು ಎಷ್ಟು ದಿನ ಈ ಸಮಸ್ಯೆಯನ್ನು ಕಣ್ಣು ಮುಚ್ಚಿಕೊಂಡು ಸುಮ್ಮನಿರುವುದು? ಗೊತ್ತಿಲ್ಲ.
ಮೊನ್ನೆ ಗಗನಚುಕ್ಕಿ, ಭರಚುಕ್ಕಿ ಜಲಪಾತ ವೀಕ್ಷಿಸಲು ಹೋಗಿದ್ದೆ. ನಿಜಕ್ಕೂ ಅತ್ಯಂತ ರಮಣೀಯ ಜಲಪಾತ. ಆ ಧುಮ್ಮಕ್ಕುವ ಜಲಧಾರೆಯನ್ನು ನೋಡುತ್ತಿದ್ದರೆ, ಇಡೀ ಶರೀರವೇ ಸ್ಥಾವರವಾಗಿತ್ತು. ಅಂದು ಭಾನುವಾರವಾಗಿದ್ದರಿಂದ ಸುಮಾರು ಏಳೆಂಟು ಸಾವಿರ ಜನ ಆಗಮಿಸಿದ್ದರು. ಎಲ್ಲೆಲ್ಲೂ ಜನವೋಜನ, ವಾಹನಗಳೋ ವಾಹನಗಳು. ಜಲಪಾತದ ಕೆಳಗಡೆ ಜನ ಭಾವಾತೀರೇಕದಿಂದ ವರ್ತಿಸುತ್ತಿದ್ದರು. ನೀರಿನ ಸುಳಿ ಹಾಗೂ ರಭಸ ಅದೆಷ್ಟು ಜೋರಾಗಿತ್ತೆಂದರೆ ಅಲ್ಲಿ ಯಾವ ಕ್ಷಣದಲ್ಲೂ ಮೃತ್ಯುವಿನ ಆಮಂತ್ರಣ ಬರಬಹುದಿತ್ತು. ವರ್ತುಲಾಕಾರದ ದೋಣಿಯಲ್ಲಿ ಪ್ರವಾಸಿಗರನ್ನು ಕುಳ್ಳಿರಿಸಿಕೊಂಡು ಜಲಪಾತ ಧುಮ್ಮಿಕ್ಕುವ ಕಡೆ ಕರೆದುಕೊಂಡು ಹೋಗಿ ಅಲ್ಲಿ ಗಿರಗಿಟ್ಲೆ ಹೊಡೆಸುವುದನ್ನು ನೋಡಿ ಜನ ಮುಗಿ ಬೀಳುತ್ತಿದ್ದರು. ನನ್ನ ಜತೆಗಿದ್ದ ನಮ್ಮ ಮಳವಳ್ಳಿ ವರದಿಗಾರ ಉಮೇಶ, 'ಸಾರ್, ಪ್ರತಿ ವರ್ಷ ಏನಿಲ್ಲವೆಂದರೂ 50-60 ಜನ ಇಲ್ಲಿ ಸಾಯುತ್ತಾರೆ' ಅಂದ. ಇರಬಹುದೆನಿಸಿತು.
ಸಾವಿರಾರು ಜನ ಅಲ್ಲಿ ನುಗ್ಗುತ್ತಿದ್ದರೆ ಅವರನ್ನು ನಿಯಂತ್ರಿಸಲು ಒಬ್ಬೇ ಒಬ್ಬ ಪೊಲೀಸು ಇರಲಿಲ್ಲ. ಕಣ್ಮುಂದೆಯೇ ಯಾರಾದರೂ ಪ್ರವಾಹದಲ್ಲಿ ತೇಲಿ ಹೋದರೆ ಅವರನ್ನು ರಕ್ಷಿಸಲು ಒಬ್ಬೇ ಒಬ್ಬ ಲೈಫ್‌ಗಾರ್ಡ್ ಸಹ ಇರಲಿಲ್ಲ. ಇದ್ದ ಒಂದೇ ಶೌಚಾಲಯಕ್ಕೆ ನೂಕು ನುಗ್ಗಲು. ಅದರೊಳಗೆ ಕಾಲಿಡಲು ನರಮಾನವರಿಂದ ಸಾಧ್ಯವಿರಲಿಲ್ಲ. ಆದರೂ ಜನ ನುಗ್ಗುತ್ತಿದ್ದರು. ಪಾರ್ಕಿಂಗ್ ಶುಲ್ಕ ವಸೂಲು ಮಾಡಲು ಐದಾರು ಪೊಲೀಸರಿದ್ದರು. ಆದರೆ ವಾಹನಗಳಿಗೆ ಮಾರ್ಗ ತೋರಲು ಒಬ್ಬ ಕಾನ್‌ಸ್ಟೇಬಲ್ ಸಹ ಇರಲಿಲ್ಲ. ಹೀಗಾಗಿ ಆ ಗುಡ್ಡದ ಮೇಲೆ ಟ್ರಾಫಿಕ್ ಜಾಮ್. ನನ್ನ ಕಾರನ್ನು ಹೊರಕ್ಕೆ ತೆಗೆದುಕೊಳ್ಳುವ ಹೊತ್ತಿಗೆ ಸಾಕೋ ಬೇಕೋ ಏನಿಸಿತು. ಅರ್ಧ ಕಿ.ಮಿ. ದೂರದ ಈ ಪ್ರಯಾಣದಲ್ಲಿ ಎರಡು ತಾಸು ಹೋಗಲು ಆಯಿತು. ಯಾಕಾದರೂ ಇಲ್ಲಿಗೆ ಬಂದೆನೋ ಎಂದು ಅನಿಸುವಷ್ಟರ ಮಟ್ಟಿಗೆ ಅಲ್ಲಿನ ವ್ಯವಸ್ಥೆಯಿತ್ತು.
ಒಂದು ಅದ್ಭುತ ಪ್ರವಾಸಿ ತಾಣವನ್ನು ಎಷ್ಟು ಕೆಟ್ಟದಾಗಿ ನಿರ್ವಹಣೆ ಮಾಡಬಹುದು ಎಂಬುದಕ್ಕೆ ಗನಗಚುಕ್ಕಿ, ಭರಚುಕ್ಕಿ ಜಲಪಾತಗಳೇ ಸಾಕ್ಷಿ. ಇಂಥದೊಂದು ಜಲಪಾತ ಅಮೆರಿಕವೋ, ಇಂಗ್ಲೆಂಡಿನಲ್ಲೋ ಇದ್ದಿದ್ದರೆ ಅದರ ಕತೆಯೇ ಬೇರೆಯಾಗುತ್ತಿತ್ತು. ಆ ಜಲಪಾತದ ಬಗ್ಗೆ ಹತ್ತಾರು ಪ್ರಚಾರ ಪತ್ರಿಕೆಗಳನ್ನು ಮುದ್ರಿಸಿ, ನೂರಾರು ವೈಬ್‌ಸೈಟ್‌ಗಳನ್ನು ರೂಪಿಸಿ ಅಲ್ಲೊಂದು ಸ್ಟಾರ್ ಹೋಟೆಲ್ ನಿರ್ಮಿಸಿ, ಮಾಹಿತಿ ಕೇಂದ್ರ ಸ್ಥಾಪಿಸಿ, ಕೇಬಲ್‌ಕಾರ್ ಅಥವಾ ರೋಪ್‌ವೇ ಅಳವಡಿಸಿ ಶ್ರೀಮಂತ ಪ್ರವಾಸಿಗರಿಗೆ ಜಲಪಾತದರ್ಶಿನಿ ಮಾಡಿಸಿ ಇದನ್ನು ಜೀವಮಾನದ ಅನುಭವ ಎಂದು ವರ್ಣಿಸಿ ಮೋಡಿ ಮಾಡುತ್ತಿದ್ದರು. ಅಲ್ಲಿಂದ ಬರುವಾಗ ಆ ಜಲಪಾತದ ಚಿತ್ರವಿರುವ ಟೀಶರ್ಟ್, ಕ್ಯಾಪು, ಕೀ ಚೈನ್, ಸ್ಮರಣಿಕೆ, ಪುಸ್ತಕಗಳನ್ನು ನಿಮ್ಮ ಕೈಗಿಟ್ಟು ನೂರಾರು ಡಾಲರ್ ತೆರುವಂತೆ ಮಾಡುತ್ತಿದ್ದರು.
ಲಂಡನ್‌ಗೆ ಹತ್ತಿರವಿರುವ ಸ್ಟೋನ್ ಹೆಂಜ್ ಎಂಬ ತೀರಾ ಸಾಮಾನ್ಯ ಊರನ್ನು ಮಾರ್ಕೆಟ್ ಮಾಡಿದ್ದು ಹೀಗೆಯೇ! ಅಲ್ಲಿನ ಹಸುರು ಹುಲ್ಲು ಹಾಸಿನ ಮೇಲೆ ಐದಾರು ಕಲ್ಲಿನ ಕಂಬಗಳಿವೆ. ಅವು Pre-historic ಕಾಲದ್ದು. ನಮ್ಮ ಹಂಪಿಯಲ್ಲಿ ಇಂಥ ಸಾವಿರಾರು ಸ್ಥಳಗಳಿವೆ. ಆದರೆ ಹಂಪಿಗೆ ಅಂಥ ಭಾಗ್ಯವಿಲ್ಲ. ಸ್ಟೋನ್‌ಹೆಂಜ್‌ಗೆ ಪ್ರತಿದಿನ ನಾಲ್ಕೈದು ಸಾವಿರ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಸ್ಟೋನ್‌ಹೆಂಜ್‌ನ ಮಹಿಮೆ ಸಾರುವ, ವಿವರ ನೀಡುವ ಸಾವಿರಾರು ವೈಬ್‌ಸೈಟ್‌ಗಳಿವೆ. ಒಂದು ಪುಟ್ಟ ಸ್ಥಳಕ್ಕೆ ಭೇಟಿ ಕೊಡುವುದೇ ಜೀವಮಾನದ ಅನುಭವ ಎನ್ನುವ ರೀತಿಯಲ್ಲಿ ಅದನ್ನು ಮಾರ್ಕೆಟ್ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಸ್ಟೋನ್ ಹೆಂಜ್‌ಗಳನ್ನು ಮೀರಿಸುವ ನೂರಾರು ಸ್ಥಳಗಳಿರಬಹುದು. ಆದರೆ ದರಕರಿಸುವವರಿಲ್ಲದೇ ಅನಾಥವಾಗಿವೆ. ಕೆನಡಾದ ನಯಾಗರವನ್ನು ಆಫ್ರಿಕಾದ ವಿಕ್ಟೋರಿಯಾ ಫಾಲ್ಸನ್ನು ನೆನಪಿಸುವ ಗಗನಚುಕ್ಕಿ, ಭರಚುಕ್ಕಿ ಜಲಪಾತ ಎಲ್ಲಾ ಇದ್ದೂ ಏನೂ ಇಲ್ಲದಂತಿದೆ. 'ಸಾರ್ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಸ್ಥಳೀಯ ರಾಜಕಾರಣಿ ಅನ್ನದಾನಿ ಅವರ ಆಸ್ಥೆಯಿಂದ ಸಾಕಷ್ಟು ಅಭಿವೃದ್ಧಿ ಕಂಡಿದೆ. ಅವರು ಜಲಪಾತದ ಉತ್ಸವ ಆರಂಭಿಸಿದಿನಿಂದ ಅಭಿವೃದ್ಧಿ ಕಂಡಿದೆ' ಎಂದು ಉಮೇಶ್ ಹೇಳಿದರು. ಜಲಪಾತಕ್ಕೆ ಇಳಿಯಲು ಕಲ್ಲು ಹಾಕಿಸಿದ್ದು ಹಾಗೂ ಸುತ್ತಲೂ ಸ್ಟೀಲಿನ ಬೇಲಿ ಹಾಕಿದ್ದು ಬಿಟ್ಟರೆ, ಆಧುನೀಕತೆಯ ಯಾವ ಕುರುಹೂ ಸಹ ಅಲ್ಲಿ ಕಾಣಿಸಲಿಲ್ಲ. ದರ್ಗಾದ ಕಡೆಯಿಂದ ಗಗನಚುಕ್ಕಿ, ಬ್ಲಫ್ ಅನ್ನು ವೀಕ್ಷಿಸುವ ತಾಣದಲ್ಲಿ ಎರಡು ನಿಮಿಷ ನಿಂತುಕೊಳ್ಳಲು ಸಾಧ್ಯವಿಲ್ಲ. ಅಂಥ ಕೊಳಕು, ಹೊಲಸು, ದುರ್ನಾತ, ಮಾಂಸ ಬೇಯಿಸುವ, ಮಲಮೂತ್ರ ವಿಸರ್ಜಿಸುವ ಮಾರ್ಗವನ್ನು ಬಳಸಿಕೊಂಡು ದಲಪಾತ ವೀಕ್ಷಿಸುವ ದುರ್ಗತಿ. ಆ ರುದ್ರರಮಣೀಯ ತಾಣದಲ್ಲೂ ಕಸಗಳ ರಾಶಿರಾಶಿ. ಒಂದಿಡಿ ದಿನ ಕಳೆಯಬಹುದಾದ ಜಾಗದಲ್ಲಿ ಐದು ನಿಮಿಷ ನಿಲ್ಲಲೂ ಕೂಡ ಸಾಧ್ಯವಿಲ್ಲ. ಆ ಇಡೀ ಪ್ರದೇಶದಲ್ಲಿ ಪ್ರವಾಸೋದ್ಯಮ ಇಲಾಖೆಯ ಮಯೂರ ಹೋಟೆಲ್ ಬಿಟ್ಟರೆ ಮತ್ಯಾವ ಸೌಕರ್ಯವೂ ಇಲ್ಲ. ಒಂದು ಪ್ರದೇಶವನ್ನು ಎಷ್ಟು ಕೆಟ್ಟದಾಗಿ, ಅವ್ಯವಸ್ಥಿತವಾಗಿಟ್ಟು ಕೊಳ್ಳಬಹುದೆಂಬುದಕ್ಕೆ ಗಗನಚುಕ್ಕಿ ಭರಚುಕ್ಕಿ ಜಲಪಾತ 'ಉತ್ತಮ ನಿದರ್ಶನ.'
ಇದು ಕೇವಲ ಇದೊಂದು ಪ್ರವಾಸಿ ತಾಣದ ಕತೆಯಲ್ಲ. ರಾಜ್ಯದ ಯಾವುದೇ ಪ್ರವಾಸಿ ಸ್ಥಳಕ್ಕೆ ಹೋದರೂ ಇದೇ ಸ್ಥಿತಿ. ಜೋಗ ಪ್ರಸಿದ್ಧಿ ಜಗತ್ತಿಗೇ ಪಸರಿಸಿದೆ. 'ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ಗುಂಡಿ' ಎಂದು ಸಮ್ಮನೇ ಹಾಡಿದ್ದಲ್ಲ. ಅಲ್ಲಿಗೆ ಹೋದರೆ ಜಲಪಾತ ನೀಡಿ ಖುಷಿಪಡಬಹುದೇ ಹೊರತು, ಸೌಲಭ್ಯಗಳನ್ನು ನೋಡಿದರೆ ಪ್ರವಾಸಿಗರು ಜೋಗಜಲಪಾತ ಮೀರಿಸುವಂತೆ ಕಣ್ಣೀರುಹರಿಸಬೇಕಷ್ಟೇ.
ನಮ್ಮ ಪಕ್ಕದ ಕೇರಳ 'ಗಾಡ್ಸ್ ಓನ್ ಕಂಟ್ರಿ' ಎಂಬ ಹೆಸರಿನಲ್ಲಿ ಪ್ರಚಾರಮಾಡುತ್ತಿದೆ. ಇನ್ನೊಂದು ಪಕ್ಕದ ರಾಜ್ಯ ಗೋವಾ ಕೂಡ ಪ್ರವಾಸೋದ್ಯಮಕ್ಕೆ ಹೆಸರುವಾಸಿ. ನಮ್ಮ ರಾಜ್ಯ ಎಲ್ಲವೂ ಇದ್ದೂ ಪ್ರವಾಸಿ ಸ್ನೇಹಿ ರಾಜ್ಯವಾಗಿ ಹೆಸರುಮಾಡಿಲ್ಲ. ನಮ್ಮ ಈಗಿನ ಪ್ರವಾಸೋದ್ಯಮ ಸಚಿವರು ಆರ್.ವಿ. ದೇಶಪಾಂಡೆ. ಅವರ ತವರು ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಸಮುದ್ರ ತೀರವಿದೆ, ದಟ್ಟ ಅರಣ್ಯವಿದೆ, ಉಳಿದೆಲ್ಲ ಜಿಲ್ಲೆಗಳಿಗಿಂತ ಹೆಚ್ಚು ಜಲಪಾತಗಳಿವೆ. ಆದರೂ ಪ್ರವಾಸೋದ್ಯಮ ದೃಷ್ಟಿಯಿಂದ ಉತ್ತರಕನ್ನಡ ಅತ್ಯಂತ ಹಿಂದುಳಿದ ಜಿಲ್ಲೆ. ದೇಶಪಾಂಡೆ ಅವರ ಕ್ಷೇತ್ರದ ವ್ಯಾಪ್ತಿಯ ಹಳಿಯಾಳ-ಜೋಯಿಡಾ ಪ್ರದೇಶದಲ್ಲಿ ಕಾಡು, ನದಿ, ಜಲಪಾತಗಳಿವೆ. ಇವುಗಳನ್ನೆಲ್ಲ ಅವರು ಎಷ್ಟು ಅಭಿವೃದ್ಧಿಪಡಿಸಿದ್ದಾರೆ? ಇದಕ್ಕೆಲ್ಲ ಅವರಿಗೆ 'ಹೈಯರ್ ಎಜುಕೇಷನ್‌' ಅಗತ್ಯವಿಲ್ಲ ಅಂದುಕೊಳ್ಳುತ್ತೇನೆ. ಇಲ್ಲೀತನಕ ಪ್ರವಾಸೋದ್ಯಮ ಸಚಿವರು ಇದನ್ನೆಲ್ಲ ಮಾಡದೇ ಎದ್ದುಹೋಗಿದ್ದಾರೆ. ದೇಶಪಾಂಡೆಯವರು ಇದನ್ನು ಮಾಡಬಲ್ಲರಾ ಎಂಬ ಬಗ್ಗೆ ಜಿಜ್ಞಾಸೆಯಿದೆ.

- ವಿಶ್ವೇಶ್ವರ ಭಟ್
vbhat@me.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.