ಅಂಕಣಗಳು

ಗನ್ನು ಹಿಡಿಯುವವರ ಮಧ್ಯೆ ಬ್ಯಾಟು ಹಿಡಿದ ಪರ್ವೇಜ್

ಭಾರತೀಯ ಕ್ರಿಕೆಟ್ ಎಂದರೆ ಅದು ಮುಂಬಯಿಯ ಕ್ರಿಕೆಟ್ ಎಂಬ ಕಾಲವೊಂದಿತ್ತು.

ಗನ್ನು ಹಿಡಿಯುವವರ ಮಧ್ಯೆ ಬ್ಯಾಟು ಹಿಡಿದ ಪರ್ವೇಜ್
ಪರ್ವೇಜ್ ರಸೂಲ್
Published On :

ಬ್ರೆಜಿಲ್, ಅರ್ಜೆಂಟೀನಾಗಳು ಜಾಗತಿಕ ಫುಟ್ಬಾಲ್ನ ಮುಕುಟ ಮಣಿಗಳಾಗಿದ್ದರೆ ಅದು ಅಲ್ಲಿನ ಕೊಳೆಗೇರಿ, ಊರು-ಕೇರಿಗಳಿಂದ ಹರಿದು ಬರುತ್ತಿರುವ ಪ್ರತಿಭೆಗಳಿಂದಲೇ

ಭಾರತೀಯ ಕ್ರಿಕೆಟ್ ಎಂದರೆ ಅದು ಮುಂಬಯಿಯ ಕ್ರಿಕೆಟ್ ಎಂಬ ಕಾಲವೊಂದಿತ್ತು. ಭಾರತ ಸ್ವಾತಂತ್ರ್ಯ ಪಡೆದರೂ ಭಾರತೀಯ ಕ್ರಿಕೆಟ್ ಮುಂಬೈ ಪಾರುಪತ್ಯದಿಂದ ಮುಕ್ತಿ ಪಡೆಯಲು ಹಲವಾರು ದಶಕಗಳೇ ಬೇಕಾಯಿತು. ಕ್ರಿಕೆಟ್ ಅಷ್ಟರಮಟ್ಟಿಗೆ ಮುಂಬೈಯಲ್ಲಿ ಬೇರೂರಿತ್ತು. ಹನ್ನೊಂದು ಮಂದಿಯ ಭಾರತ ತಂಡದಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಮುಂಬೈನವರೇ ತುಂಬಿರುತ್ತಿದ್ದರು. ಬಹುತೇಕ ಅವರೆಲ್ಲರೂ ತಮ್ಮ ಅರ್ಹತೆಯ ಮೇಲೆಯೇ ಸ್ಥಾನ ಪಡೆದಿದ್ದರೂ ಮುಂಬೈ ಲಾಬಿಯಿಂದಾಗಿಯೇ ಅವಕಾಶ ಗಿಟ್ಟಿಸಿಕೊಂಡ ಆಟಗಾರರಿಗೇನೂ ಕೊರತೆ ಇರಲಿಲ್ಲ. ತಂಡದ ಆಯ್ಕೆ ಸಂದರ್ಭದಲ್ಲಿ ಮುಂಬೈ ಪ್ರಾತಿನಿಧ್ಯವನ್ನು ನಿರ್ಧರಿಸಿ ಉಳಿದ ಸ್ಥಾನಗಳನ್ನು ಇತರ ವಲಯಗಳಿಗೆ ಹಂಚುವ ಮಟ್ಟಿಗೆ ಈ ಲಾಬಿ ಪ್ರಭಾವಶಾಲಿ ಆಗಿತ್ತು. ಕೇವಲ ಅರ್ಹತೆ ಮತ್ತು ಕ್ವಾಲಿಟಿಯ ಆಧಾರದ ಮೇಲೆ ಈ ಲಾಬಿಗೆ ಸಡ್ಡು ಹೊಡೆದ ರಾಜ್ಯವೆಂದರೆ ಕರ್ನಾಟಕ. ಅದರಲ್ಲೂ 70ರ ದಶಕದಲ್ಲಿ ವೆಸ್ಟ್ಇಂಡೀಸ್ ಪ್ರವಾಸಕ್ಕೆ ತೆರಳಿದ್ದ ಭಾರತ ತಂಡದಲ್ಲಿ ಆರು ಮಂದಿ ಆಟಗಾರರು ಕರ್ನಾಟಕದವರೇ ಆಗಿದ್ದರು. ಇದರ ನಡುವೆ ಹೈದರಾಬಾದ್ ಮತ್ತು ದಿಲ್ಲಿ ರಾಜ್ಯಗಳ ಅನೇಕ ಪ್ರತಿಭಾವಂತ ಆಟಗಾರರು ಮುಂಬೈನ ಪ್ರಾಬಲ್ಯಕ್ಕೆ ಸವಾಲೆಸೆದು ತಂಡ ಸೇರಿಕೊಂಡಿದ್ದರು. ಇಷ್ಟಾದರೂ ಭಾರತದಲ್ಲಿ ಕ್ರಿಕೆಟ್ ಈ ಕೆಲವೇ ರಾಜ್ಯಗಳ ಸ್ವತ್ತಾಗಿತ್ತು. ಇತರ ಅನೇಕ ರಾಜ್ಯಗಳ ಆಟಗಾರರು ರಣಜಿ, ದುಲೀಪ್ ಟ್ರೋಫಿಯಂತಹ ದೇಶೀಯ ಟೂರ್ನಿಗಳಲ್ಲಿ ತಮ್ಮ ಕೈಚಳಕ ತೋರಲಷ್ಟೇ ಶಕ್ತರಾಗಿದ್ದರು. ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ಗಗನಕುಸುಮವೇ ಆಗಿತ್ತು. ದಿಲ್ಲಿಯಲ್ಲಿನ ಸರ್ಕಾರವನ್ನು ನಿರ್ಧರಿಸುತ್ತಿದ್ದ ಅತಿ ದೊಡ್ಡ ರಾಜ್ಯ ಉತ್ತರಪ್ರದೇಶ, ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನು ಆಯ್ಕೆ ಮಾಡುತ್ತಿದ್ದ ಬಿಹಾರ, ಪಶ್ಚಿಮ ಬಂಗಾಳ (ಒಂದೆರಡು ಉದಾಹರಣೆ ಹೊರತುಪಡಿಸಿ) ಮುಂತಾದ ರಾಜ್ಯಗಳ ಕ್ರಿಕೆಟ್ ಮಂಡಳಿಗಳು ಭಾರತೀಯ ಕ್ರಿಕೆಟ್ ಮಂಡಳಿಯ ಸದಸ್ಯತ್ವ ಸಂಖ್ಯೆ ಹೆಚ್ಚಿಸಲಷ್ಟೇ ಅಸ್ತಿತ್ವದಲ್ಲಿ ಇದ್ದವು. ಇಲ್ಲೆಲ್ಲ ಅಗತ್ಯ ತರಬೇತಿ ಕೇಂದ್ರಗಳು, ಮೂಲ ಸೌಕರ್ಯ ಕಲ್ಪಿಸಿ ಯುವಕರನ್ನು ಈ ಆಟದತ್ತ ಆಕರ್ಷಿಸುವ ಕೆಲಸ ಆಗಲೇ ಇಲ್ಲ. ಆದರೆ 1983ರ ವಿಶ್ವಕಪ್ ಗೆಲುವು ಮತ್ತು ದೂರದರ್ಶನದಲ್ಲಿ ಕ್ರಿಕೆಟ್ ಪಂದ್ಯಗಳ ನೇರಪ್ರಸಾರ ಪರಿಸ್ಥಿತಿಯನ್ನು ಬದಲಿಸಿತು. ಇಂದು ಕ್ರಿಕೆಟ್ನ ಹರವು ಇಡೀ ದೇಶವನ್ನು ವ್ಯಾಪಿಸಿದ್ದರೆ ಅದಕ್ಕೆ 1983ರ 'ಕಪಿಲ್ಸ್ ಡೆವಿಲ್ಸ್' ತಂಡದ ಸಾಧನೆಯೇ ಸ್ಫೂರ್ತಿ ಮತ್ತು ಪ್ರೇರಣೆ. ದೇಶಾದ್ಯಂತ ಗಲ್ಲಿ ಗಲ್ಲಿಗಳಲ್ಲಿ ಚೆಂಡು-ದಾಂಡು ದಾಂಗುಡಿ ಇಟ್ಟಿತು. ಸ್ಥಳೀಯ ಮಟ್ಟದಲ್ಲಿ ಆಟದ ಬಗೆಗೆ ಆಕರ್ಷಣೆ ಕಾಣಿಸಿತು. ಇದಕ್ಕೆ ಪೂರಕವಾಗಿ ದೂರದರ್ಶನ ಪ್ರಸಾರ ಮತ್ತು ಭಾರತ ತಂಡದ ಕೆಲ ಅವಿಸ್ಮರಣೀಯ ಗೆಲುವು ಭಾರತದಲ್ಲಿ ಕ್ರಿಕೆಟ್ ನ ವಿಸ್ತಾರ ಮತ್ತು ವ್ಯಾಪ್ತಿಯನ್ನು ತ್ವರಿತವಾಗಿ ಹೆಚ್ಚಿಸಿತು.
1987ರಲ್ಲಿ ಭಾರತದಲ್ಲಿಯೇ ಆಯೋಜನೆಗೊಂಡ ವಿಶ್ವಕಪ್ ಪಂದ್ಯಾವಳಿ ಈ ಆಕರ್ಷಣೆಯನ್ನು ಇನ್ನಷ್ಟು ಹಿಗ್ಗಿಸಿತು. ನಂತರದ ದಿನಗಳಲ್ಲಿ ಜಾರಿಗೆ ಬಂದ ಆರ್ಥಿಕ ಉದಾರೀಕರಣ ಪರ್ವದಲ್ಲಿ ಕ್ರೀಡಾ ಪ್ರಾಯೋಜಕತ್ವದ ಮಹತ್ವವನ್ನು ಬಲು ಬೇಗನೆ ಗುರುತಿಸಿದ ಬಿಸಿಸಿಐ ಕ್ರಿಕೆಟ್ ನ ಗ್ರಹಿಕೆ, ಸ್ವರೂಪವನ್ನೇ ಬದಲಿಸುವಲ್ಲಿ ಯಶಸ್ವಿಯಾಯಿತು. ಸಣ್ಣ-ಪುಟ್ಟ ಟೂರ್ನಿಗಳ ಸಂಖ್ಯೆ ಹೆಚ್ಚಿತು. ಬಣ್ಣದ ಟಿವಿಯಲ್ಲಿ ಕ್ರಿಕೆಟ್ನ ಓಕುಳಿ ಜನರನ್ನು ಸೆಳೆಯಿತು. ಎಳೆಯ ಹೃದಯಗಳಲ್ಲಿ ಕನಸುಗಳು ಅರಳಿದವು. ಬ್ಯಾಟು-ಬಾಲು ದೇಶದ ಯುವಜನರ ಮಹತ್ವಾಕಾಂಕ್ಷೆಯ ಸಂಕೇತಗಳಾದವು. ಇದೆಲ್ಲದರ ಫಲವಾಗಿ ಭಾರತ ತಂಡವು ಹೆಚ್ಚು ಡೆಮಾಕ್ರಟಿಕ್ ಆಗತೊಡಗಿತು. ಅದಿಲ್ಲದಿದ್ದರೆ ಅದುವರೆಗೆ ಪ್ರಾತಿನಿಧ್ಯವನ್ನೇ ಕಾಣದಿದ್ದ ಒರಿಸ್ಸಾ ರಾಜ್ಯದಿಂದ ದೇಬಶಿಶ್ ಮೊಹಂತಿ, ಶಿವಸುಂದರ್ ದಾಸ್ ಅಂಥವರು ಭಾರತ ಕ್ರಿಕೆಟ್ ಸೇರಲು ಸಾಧ್ಯವೇ ಇರಲಿಲ್ಲ. ಮುಂಬೈ ಲಾಬಿಯಂತೂ ಸಚಿನ್ ತೆಂಡೂಲ್ಕರ್ ಅವರಿಂದ ಆರಂಭವಾಗಿ ಅವರಲ್ಲಿಯೇ ಅಂತ್ಯ ಕಾಣುವ ಮಟ್ಟಿಗೆ ತಣ್ಣಗಾಯಿತು. ಅನೇಕ ಸಣ್ಣ-ಪುಟ್ಟ ರಾಜ್ಯಗಳ ಆಟಗಾರರು ಮಿಂಚಲಾರಂಭಿಸಿದರು. ಉತ್ತರ ಪ್ರದೇಶ, ಛತ್ತೀಸ್ಗಡ, ಹರ್ಯಾಣ, ಪಂಜಾಬ್, ಬರೋಡಾ ಮುಂತಾದ ಪ್ರದೇಶಗಳ ಆಟಗಾರರು ಭಾರತವನ್ನು ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದರು. ಇಂದು ದೇಶ ಕಂಡ ಅತ್ಯಂತ ಯಶಸ್ವಿ ನಾಯಕ ಎನಿಸಿರುವ, ಭಾರತಕ್ಕೆ ಎರಡು ವಿಶ್ವಕಪ್ (ಟಿ-20, ಏಕದಿನ) ಹಾಗೂ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟಿರುವ ಮಹೇಂದ್ರ ಸಿಂಗ್ ಧೋನಿ 2000ದಲ್ಲಿ ಕಣ್ಬಿಟ್ಟ ಜಾರ್ಖಂಡ್ಗೆ ಸೇರಿದವರು. ಬೆಳೆಯುತ್ತಲೇ ಸಾಗಿರುವ ಈ ಪಟ್ಟಿಗೆ ತೀರಾ ಇತ್ತೀಚಿನ ಸೇರ್ಪಡೆ ಎಂದರೆ ಜಮ್ಮು-ಕಾಶ್ಮೀರದ ಪರ್ವೇಜ್ ರಸೂಲ್ ಜರ್ಗಾರ್. ಐದು ಪಂದ್ಯಗಳ ಏಕದಿನ ಸರಣಿಗಾಗಿ ಜಿಂಬಾಬ್ವೆಗೆ ತೆರಳಲಿರುವ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ರಸೂಲ್ ಪಾಲಿಗೆ ಹಲವು ಪ್ರಥಮಗಳು ಈಗಾಗಲೇ ತಳುಕು ಹಾಕಿಕೊಂಡಿವೆ. ಕಣಿವೆ ರಾಜ್ಯ ಜಮ್ಮು-ಕಾಶ್ಮೀರ ಭೌಗೋಳಿಕವಾಗಿ ಭಾರತದ ಅವಿಭಾಜ್ಯ ಅಂಗವೇ ಆಗಿದ್ದರೂ ಈವರೆಗೆ ಇಲ್ಲಿಂದ ಒಬ್ಬೇ ಒಬ್ಬ ಕ್ರಿಕೆಟಿಗ ಭಾರತ ತಂಡವನ್ನು ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದಿರಲೇ ಇಲ್ಲ. ಅಬ್ದುಲ್ ಖಯೂಮ್ ಉತ್ತರ ವಲಯ ತಂಡವನ್ನು ಪ್ರತಿನಿಧಿಸಿದ್ದೇ ಈ ರಾಜ್ಯದ ಆಟಗಾರನೊಬ್ಬ ಸಾಗಿದ ಗರಿಷ್ಠ ದೂರವಾಗಿತ್ತು. ಆದರೆ ಇಂದು ರಸೂಲ್ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆಯುವ ಮೂಲಕ ಕಾಶ್ಮೀರದ ಮಟ್ಟಿಗೆ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಇಷ್ಟೇ ಅಲ್ಲ, ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಪುಣೆ ತಂಡದ ಪರ ಆಡುವ ಮೂಲಕ ಹಾಗೂ ಅದಕ್ಕೂ ಮುನ್ನ ಇಂಗ್ಲೆಂಡ್ ತಂಡದ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಮಂಡಳಿ ಅಧ್ಯಕ್ಷರ ತಂಡವನ್ನು ಪ್ರತಿನಿಧಿಸಿ, ಅಂತಾರಾಷ್ಟ್ರೀಯ ತಂಡವೊಂದರ ವಿರುದ್ಧ ಆಡಿದ ಮೊದಲ ಕಾಶ್ಮೀರಿ ಆಟಗಾರ ಎಂಬ ಹೆಗ್ಗಳಿಕೆಗಳೂ ಪರ್ವೇಜ್ನ ಮುಡಿಗೇರಿವೆ. ಈಗ ಇವುಗಳೆಲ್ಲವುಗಳಿಗೆ ಕಳಶಪ್ರಾಯವಾಗಿ ಭಾರತ ತಂಡದ ಪರ ಅಂತಾರಾಷ್ಟ್ರೀಯ ಪಂದ್ಯವಾಡುವ ಮುಹೂರ್ತವೂ ಸನ್ನಿಹಿತವಾಗಿದೆ.
ಇಷ್ಟಕ್ಕೂ ಯಾರೀತ? ಕಾಶ್ಮೀರದ ಬಿಜ್ಬೆಹರಾದಲ್ಲಿ ಜನಿಸಿದ ರಸೂಲ್ ತೀರಾ ಅನುಕೂಲಸ್ಥ ಕುಟುಂಬದಿಂದ ಬಂದವನೇನೂ ಅಲ್ಲ. ಅಪ್ಪ ಇಲಾಖಾ ಮಟ್ಟದಲ್ಲಿ ಕ್ರಿಕೆಟ್ ಆಡುತ್ತಿದ್ದ. ಮತ್ತೊಬ್ಬ ಸಂಬಂಧಿ ಸಹ ಕ್ರಿಕೆಟಿಗ. ಹೀಗಾಗಿ ಈತನ ಮೇಲೆ ಕ್ರಿಕೆಟ್ ನ ದಟ್ಟ ಪ್ರಭಾವವೇನೂ ಇರಲಿಲ್ಲ. ಆದರೆ ಟಿವಿಯಲ್ಲಿ ನೋಡು ನೋಡುತ್ತಲೇ ಕ್ರಿಕೆಟ್ ಕುರಿತಾದ ಆಸಕ್ತಿ ಬೆಳೆಯಿತು. ಆದರೆ ಈ ಆಸಕ್ತಿಯನ್ನು ವಾಸ್ತವಕ್ಕೆ ತರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಈತನ ಊರು ಅನಂತನಾಗ್ ಜಿಲ್ಲೆಗೆ ಸೇರಿದ್ದು. ಅನಂತ್ನಾಗ್ ಸದಾ ಬೊಬ್ಬಿರಿವ ಬಾಂಬುಗಳ ತಾಣ. ಧರ್ಮಾಂಧತೆ ಮತ್ತು ಅಂತಹ ಪ್ರಚೋದನೆಗೆ ಮರುಳಾಗಿ ಅನೇಕ ಯುವಕರು ಗನ್ನು ಅರಸಿ ಭಯೋತ್ಪಾದನೆಯತ್ತ ಹೋದರೆ ರಸೂಲ್ ಕೈಯಲ್ಲಿ ಬ್ಯಾಟು ಹಿಡಿವ ಕನಸು ಕಂಡ. ಜಿಹಾದಿಗಳ ಅಟ್ಟಹಾಸ ಮತ್ತು ಸೈನಿಕರ ಪ್ರತ್ಯುತ್ತರದ ಗುಂಡುಗಳಲ್ಲಿ ಅಲ್ಲಿನ ಪರಿಸರ ಸದಾ ಆತಂಕದ ಗೂಡಾಗಿತ್ತು. ಎಲ್ಲಿ, ಯಾವಾಗ ಬಾಂಬು ಸಿಡಿಯುತ್ತದೆ, ಯಾವ ಮೂಲೆಯಿಂದ ಗುಂಡು ತೂರಿಬರುತ್ತದೆ ಎಂಬುದೇ ತಿಳಿಯದಾದ ಜಾಗ. ಇನ್ನು ಕ್ರಿಕೆಟ್ ಆಡುವ ವ್ಯವಧಾನವಾದರೂ ಎಲ್ಲಿ? ಇನ್ನು ಇಡೀ ದೇಶದಲ್ಲಿ ಕ್ರಿಕೆಟ್ ವ್ಯಾಪಿಸಿದರೂ ಈ ಕಣಿವೆ ರಾಜ್ಯದಲ್ಲಿ ಮಾತ್ರ ಕ್ರಿಕೆಟ್ ಎಂಬುದು ರಾಜಧಾನಿ ಶ್ರೀನಗರಕ್ಕಷ್ಟೇ ಸೀಮಿತವಾಗಿತ್ತು. ಇಂದಿಗೂ ಇಡೀ ರಾಜ್ಯದಲ್ಲಿ ಶ್ರೀನಗರದ ಎರಡು ಕಡೆ ಹೊರತುಪಡಿಸಿ ಉಳಿದೆಡೆಯಲ್ಲೆಲ್ಲೂ  ವ್ಯವಸಸ್ಥಿತ ಕ್ರಿಕೆಟ್ ಮೈದಾನ ಇಲ್ಲ. ಇಂತಹ ಪರಿಸರದಲ್ಲಿಯೂ  ರಸೂಲ್ ತನ್ನ ಕನಸು ಹಾದಿ ತಪ್ಪದಂತೆ ಎಚ್ಚರ ವಹಿಸಿದ. ಶಾಲಾ-ಕಾಲೇಜುಗಳ ಪಂದ್ಯಾಟಗಳಲ್ಲಿ ಆ ಕನಸಿಗೆ ಒಂದು ರೂಪ ಕೊಡಲು ಪ್ರಯತ್ನಿಸಿದ. ಕ್ರಿಕೆಟ್ ಆಡುವವರ ತಲೆ ಎಣಿಕೆ ಮಾಡಬೇಕಿರುವ ಸವಾಲು ಎದುರಿಸುತ್ತಿರುವ ಜಮ್ಮು-ಕಾಶ್ಮೀರದಲ್ಲಿ ವಿವಿಧ ವಯೋವುತಿಯ ಪಂದ್ಯಗಳಿಗೆ ಆಯ್ಕೆಯಾಗುವುದು ರಸೂಲ್ ಪಾಲಿಗೆ ಕಷ್ಟವಾಗಲಿಲ್ಲ. ಈತನ ಪ್ರತಿಭೆ ಗುರುತಿಸಿದ್ದ ಅಬ್ದುಲ್ ಖಯೂಮ್ ಬೆಂಗಾವಲಾಗಿ ನಿಂತ. 19 ವರ್ಷದೊಳಗಿನ ತಂಡಕ್ಕೆ ಆಯ್ಕೆಯಾದ ರಸೂಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು 2009ರಲ್ಲಿ ಬೆಂಗಳೂರಿಗೆ ಬಂದ. ಅದು ಆತನ ಪಾಲಿಗೆ ತಿರುವು ನೀಡಿದ ಭೇಟಿಯೂ ಆಯಿತು.  ಪಂದ್ಯವಾಡಲು ಚಿನ್ನಸ್ವಾಮಿ ಮೈದಾನಕ್ಕೆ ತೆರಳುತ್ತಿದ್ದಾಗ ಆತನನ್ನು ತಡೆದ ಪೊಲೀಸರು ವಿಚಾರಣೆಗೆಂದು ವಶಕ್ಕೆ ತೆಗೆದುಕೊಂಡರು. ಆತನ ಬಳಿ ಶಸ್ತ್ರಾಸ್ತ್ರ ಇದೆ ಎಂದು ಶಂಕಿಸಲಾಗಿತ್ತು. ಆದರೆ ತೀವ್ರ ವಿಚಾರಣೆ ನಂತರ ಆತನನ್ನು ನಿರ್ದೋಷಿ ಎಂದು ಪೊಲೀಸರು ಬಿಡುಗಡೆ ಮಾಡಿದರು. ಈ ಘಟನೆ ಎಳೆಯ ಮನಸ್ಸಿನಲ್ಲಿ ಆರದ ಗಾಯ ಆಗಬಹುದಿತ್ತು. ರಸೂಲ್ Persecution Complexಗೆ ಒಳಗಾಗಬಹುದಿತ್ತು. ಆದರೆ ಆತ ಅದಕ್ಕೆ ಮನಸ್ಸು ಕೊಡಲಿಲ್ಲ. ತನ್ನ ಗುರಿಯ ಪಯಣದಲ್ಲಿ ಅದೊಂದು ಕೆಟ್ಟ ಕನಸು ಎಂದಷ್ಟೇ ಭಾವಿಸಿದ. ಇಂದಿಗೂ ರಸೂಲ್ ಈ ಪ್ರಕರಣದ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಆ ಘಟನೆ ಒಬ್ಬ ಉತ್ತಮ ಕ್ರಿಕೆಟರ್ ಆಗಬೇಕೆಂಬ ಆತನ ಪರಿಶ್ರಮಕ್ಕೆ ಅಡ್ಡಿ ಆಗಲೂ ಇಲ್ಲ. ಕಳೆದ ಸಾಲಿನ ರಣಜಿ ಟ್ರೋಫಿ ಪಂದ್ಯಾವಳಿ ರಸೂಲ್ನ ಪಯಣದಲ್ಲಿ ಮಹತ್ವದ ವರ್ಷವಾಯಿತು. ಆಡಿದ ಏಳು ಪಂದ್ಯಗಳಲ್ಲಿ ಎರಡು ಶತಕ ಸೇರಿದಂತೆ 594 ರನ್ ಪೇರಿಸಿದ ರಸೂಲ್ ತನ್ನ ಆಫ್ ಸ್ಪಿನ್ ಬೌಲಿಂಗ್ನಿಂದ 33 ವಿಕೆಟ್ ಕಬಳಿಸಿ ಆಯ್ಕೆದಾರರ ಕಣ್ಣಿಗೆ ಬಿದ್ದ. ಇಂಗ್ಲೆಂಡ್ ವಿರುದ್ಧ ಮಂಡಳಿ ಅಧ್ಯಕ್ಷರ ತಂಡದ ಪರ ಆಡಿ ಅಷ್ಟೇನೂ ಯಶಸ್ಸು ಕಾಣದಿದ್ದರೂ ನಂತರ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಏಳು ವಿಕೆಟ್ ಕಬಳಿಸಿ ಗಮನ ಸೆಳೆದ. ಇಷ್ಟಕ್ಕೂ ಇಂದು ಕ್ರಿಕೆಟ್ ನಗರಗಳ ಸ್ವತ್ತಾಗಿಲ್ಲ. 2011ರಲ್ಲಿ ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್ಬೆರಾದಲ್ಲಿ  ಸರ್ ಡಾನ್ ಬ್ರಾಡ್ಮನ್ ಸ್ಮರಣಾರ್ಥ ಭಾಷಣ ಮಾಡಿದ ರಾಹುಲ್ ದ್ರಾವಿಡ್ 'ಇಂದು ಕ್ರಿಕೆಟ್ ಆಟ ದೊಡ್ಡ ನಗರಗಳಿಗೆ ಸೀಮಿತವಾಗಿಲ್ಲ. ಹಾಗೆ ನೋಡಿದರೆ ನಗರಗಳಿಗಿಂತ ಪಟ್ಟಣ, ಹೋಬಳಿ ಮಟ್ಟದಲ್ಲಿ ನಿಜವಾದ ಪ್ರತಿಭೆಗಳು ಅರಳುತ್ತಿವೆ. ಈ ವಾಸ್ತವವನ್ನು ನಾವು ಹೇಗೆ ಗ್ರಹಿಸುತ್ತೇವೆ, ಅದನ್ನು ಹೇಗೆ ಪೊರೆಯುತ್ತೇವೆ ಎಂಬುದರ ಮೇಲೆ ಕ್ರಿಕೆಟ್ ನ ಭವಿಷ್ಯ ಅಡಕವಾಗಿದೆ' ಎಂದಿದ್ದರು. ಇದು ವಾಸ್ತವ. ಇಂದು ಬ್ರೆಜಿಲ್, ಅರ್ಜೆಂಟೀನಾಗಳು ಜಾಗತಿಕ ಫುಟ್ಬಾಲ್ನ ಮುಕುಟ ಮಣಿಗಳಾಗಿದ್ದರೆ ಅದು ಅಲ್ಲಿನ ಕೊಳೆಗೇರಿ, ಊರು-ಕೇರಿಗಳಿಂದ ಅವ್ಯಾಹತವಾಗಿ ಹರಿದು ಬರುತ್ತಿರುವ ಪ್ರತಿಭಾ ಸರಬರಾಜಿನಿಂದಲೇ ಹೊರತು ಬ್ಯೂನಸ್ಐರಿಸ್, ರಿಯೊಡಿ ಜನೈರೊದಂತಹ ನಗರ ಪ್ರದೇಶಗಳಿಂದಲ್ಲ. ಈಗ ಸದ್ಯ ಭಾರತ ಕ್ರಿಕೆಟ್ ತಂಡದಲ್ಲಿರುವ ಧೋನಿ, ಉಮೇಶ್ ಯಾದವ್, ರವೀಂದ್ರ ಜಡೇಜಾ ಮತ್ತು ಈಗ ರಸೂಲ್ ಅಂತಹವರು ಇದಕ್ಕೆ ಉದಾಹರಣೆ. ಈ ವಿಚಾರಕ್ಕೆ ಬಂದರೆ ಭಾರತೀಯ ಕ್ರಿಕೆಟ್ ನ Health ಮತ್ತು Wealth  (ಮಾನವ ಸಂಪನ್ಮೂಲ) ಎರಡೂ ಉತ್ತಮವಾಗಿದೆ ಎಂದೇ ಹೇಳಬೇಕು.

- ಕೆ.ಎಸ್.ಜಗನ್ನಾಥ್
jagannath.kudinoor@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.