ಚಿಂತೆ ಮಾಡಲೇಬೇಕು ಇಂತಹ ಚಿಂತಕರಿದ್ದಾಗ!
ಆಡಳಿತ ನಡೆಸುವಾತ ಎಷ್ಟೇ ಸುಬಗನಾಗಿದ್ದರೂ ಸಹವಾಸ ಕೆಲವೊಮ್ಮೆ ದಿಕ್ಕು ತಪ್ಪಿಸುತ್ತದೆ.
ಆಡಳಿತ ನಡೆಸುವಾತ ಎಷ್ಟೇ ಸುಬಗನಾಗಿದ್ದರೂ ಸಹವಾಸ ಕೆಲವೊಮ್ಮೆ ದಿಕ್ಕು ತಪ್ಪಿಸುತ್ತದೆ. ತಾನು ತುಳಿಯುತ್ತಿರುವುದು ಅಸಂಗತ ಪಥ ಎಂಬ ಅರಿವಿದ್ದರೂ, ಹಿತೈಷಿಗಳ ಸೋಗಿನಲ್ಲಿರುವವರ ತಂಪಾದ ಮಾತು ಬುದ್ಧಿಯನ್ನು ಅಪಹರಿಸಿ ಚಿತ್ತ ಚಾಂಚಲ್ಯಕ್ಕೆ ಕಾರಣವಾಗುತ್ತದೆ. ಅಧಿಕಾರ ಗದ್ದುಗೆ ಏರುವಾಗ ಸುತ್ತ ಹುಟ್ಟಿಕೊಳ್ಳುವ ಭಟ್ಟಂಗಿಗಳ ಗುಂಪು ವಿವೇಕದ ಮಾತು ಹತ್ತಿರ ಬರದಂತೆ ದೂರವಟ್ಟುತ್ತದೆ. ಸತ್ಯ ದರ್ಶನವಾಗದಂತೆ ಕಣ್ಣಿಗೆ ಕಾಪು ಕಟ್ಟುತ್ತಾರೆ. ಸ್ವಯಂ ಚಿಂತನೆಗೆ ಗ್ರಹಣ ತರುತ್ತಾರೆ. ಅಧಿಕಾರರೂಢರಿಗೆ ಕೆಟ್ಟ ಹೆಸರು ತರುವ ಇಂಥದೊಂದು ವರ್ಗ ಸದಾ ಚಿಂರಜೀವಿ !ಮಹಾಭಾರತದಲ್ಲೂ, ನವ ಭಾರತದಲ್ಲೂ !
ಅಧಿಕಾರ ಕೇಂದ್ರದ ಸುತ್ತ ಹಾದಿ ತಪ್ಪಿಸುವವರು ಸದಾ ಇರುತ್ತಾರೆ. ಮತ್ತು ಅದಕ್ಕೆ ಮಣೆ ಹಾಕುವ ದೊರೆಗಳಿಗೂ ಬರವಿಲ್ಲ. ಇಂಥವರನ್ನು ದೃಷ್ಟಿಯಲ್ಲಿಟ್ಟುಕೊಂಡೇ 'ಅವನಿ ಪತಿಗಳು ಕಣ್ಣಿಗಿಂತಲೂ ಕಿವಿಗೆ ಆದ್ಯತೆ ನೀಡಿದರು' ಎಂದು ಕನ್ನಡದ ಕವಿಯೊಬ್ಬ ನಿಡುಸುಯ್ದದ್ದು.
ಈ ರೀತಿ ದೊರೆಯನ್ನು, ನಾಡನ್ನು ಹಾದಿ ತಪ್ಪಿಸುವವರಿಗೆ ಇರುವುದು ಒಂದೇ ಅಜೆಂಡಾ. ಅದು ಸ್ವಹಿತ ಸಾಧನೆ ಹಾಗೂ ವ್ಯಕ್ತಿಗತ ಸ್ವಾರ್ಥ. ಎಂಥ ಸಮರ್ಥರ ಆಸ್ಥಾನವನ್ನಾದರೂ ಇಂಥವರು ನುಸುಳಿ ಬಿಡುತ್ತಾರೆ. ಮಾತ್ರವಲ್ಲ ಆಪ್ತವಲಯದಲ್ಲಿ ಗುರುತಿಸಿಕೊಂಡು ಬಿಡುತ್ತಾರೆ. ಜತೆಗೆ ಕೆಟ್ಟ ಹೆಸರು ತರುವುದಕ್ಕೂ ಕಾರಣವಾಗುತ್ತಾರೆ. ಏಕೋ ಏನೋ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯ ವೈಖರಿಯನ್ನು ಇತ್ತೀಚೆಗೆ ಸೂಕ್ಷ್ಮವಾಗಿ ಗಮನಿಸಿದಾಗ ಅವರ ಸುತ್ತ ಇಂಥ ಅಸಂಗತ ಸಲಹೆ ಕೊಡುವ ಒಂದು ವರ್ಗ ಪಟ್ಟಾಗಿ ಕುಳಿತುಕೊಂಡಿರುವುದು ಗೋಚರಿಸಲಾರಂಭಿಸಿದೆ.
ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಅಧಿಕಾರ ಸ್ವೀಕರಿ 45 ದಿನ ಕಳೆದರೂ ಅವರ ಆಡಳಿತ ಪರಿಯಲ್ಲಿ ಇನ್ನೂ ಸ್ಪಷ್ಟ ಗುರಿ ಹಾಗೂ ನಿಖರತೆ ಕಾಣುತ್ತಿಲ್ಲ. ಅಧಿಕಾರಕ್ಕೆ ಬಂದ ನಂತರ ಅವರು ತೆಗೆದುಕೊಂಡ ನಾಲ್ಕು ಗೊಂದಲಕಾರಿ ನಿರ್ಣಯಗಳು ಹಾಗೂ ಅವುಗಳ ಬದಲಾವಣೆ, ಪರಿವರ್ತನೆಯ ಹಿಂದೆ ಈ 'ಅಸಂಗತ ಚಿಂತಕರ' ಛಾಯೆ ದಟ್ಟವಾಗಿ ಕಾಣಲಾರಂಭಿಸಿದೆ. ಮುಖ್ಯಮಂತ್ರಿ ಹುದ್ದೆ ನಿಭಾವಣೆ ಏಕ ವ್ಯಕ್ತಿ ಪ್ರದರ್ಶನವಲ್ಲ, ಅದೊಂದು ಸಾಂಘಿಕ ಪ್ರಯತ್ನ ಎಂಬುದು ನಿಜವಾದರೂ ಸಂಗಾತಿಗಳ ಗುಣ-ಲಕ್ಷಣಗಳು ಹಾಗೂ ಅವರು ಕೊಡುವ ಸಲಹೆಗಳೂ ಅಷ್ಟೇ ಮುಖ್ಯವಾಗುತ್ತದೆ.
ಮುಖ್ಯಮಂತ್ರಿಯ ಸುತ್ತ ಸೃಷ್ಟಿಯಾಗುವ ಅಥವಾ ಮುಖ್ಯಮಂತ್ರಿಯಾದವರು ತಮ್ಮ ಸುತ್ತ ಸೃಷ್ಟಿಸಿಕೊಳ್ಳುವ ಪ್ರಭಾವಲಯ, ಚಿಂತಕರ ಛಾವಡಿ ಹೇಗಿದ್ದರೆ ಚೆನ್ನ, ಹೇಗಿದ್ದರೆ ಅಪಾಯಕಾರಿ ಎಂಬ ಪೂರ್ವದೃಷ್ಟಾಂತ ಸಿದ್ದರಾಮಯ್ಯನವರು ಹಾಗೂ ರಾಜ್ಯದ ಕಣ್ಣ ಮುಂದೆಯೇ ಇದೆ. ಮಾಜಿ ಮುಖ್ಯಮಂತ್ರಿಗಳಾದ ದೇವರಾಜ್ ಅರಸು ಅವರಿಂದ ಹಿಡಿದು ಇತ್ತೀಚಿಗಿನ ಬಿ.ಎಸ್.ಯಡಿಯೂರಪ್ಪನವರವರೆಗೂ ಈ ಆಪ್ತವಲಯ ಹೇಗೆ ಪ್ರಭಾವ ಬೀರಿದೆ ಎಂಬುದು ಎಲ್ಲರಿಗೂ ಗೊತ್ತು. ಯಾರೇ ಮುಖ್ಯಮಂತ್ರಿಯಾದರೂ ಅವರ ಒಲವು-ನಿಲುವು, ಸೋಲು-ಗೆಲುವುಗಳನ್ನು ನಿರ್ಧರಿಸುವ ಹಾಗೂ ಪ್ರೇರೇಪಿಸುವ ವ್ಯಕ್ತಿಗಳು ಅವರ ಸುತ್ತ ಇದ್ದೇ ಇರುತ್ತಾರೆ. ಆದರೆ ಅವರನ್ನು ಹೇಗೆ ಬಳಸಿಕೊಳ್ಳಬೇಕೆಂಬ ಸ್ವಂತಿಕೆ ಮುಖ್ಯವಾಗುತ್ತದೆ. ಮಾತ್ರವಲ್ಲ ಮುಖ್ಯಮಂತ್ರಿಯ ಸುತ್ತ ಎಂಥ ವ್ಯಕ್ತಿಗಳು ಇದ್ದಾರೆ ಎಂಬುದರ ಮೇಲೆ ಇವರ ಆಡಳಿತದ ದಿಕ್ಕು-ದೆಸೆ ಹೇಗಿರಬಹುದು ಎಂದು ಜನ ಅಳೆಯಬಲ್ಲರು.
ಎಪ್ಪತ್ತರ ದಶಕದಿಂದ ಈಚೆಗೆ ರಾಜ್ಯವನ್ನಾಳಿದ ಮುಖ್ಯಮಂತ್ರಿಗಳ ಪೈಕಿ, ದಿವಂಗತ ದೇವರಾಜ್ ಅರಸು, ದಿವಂಗತ ರಾಮಕೃಷ್ಣ ಹೆಗಡೆ ಹಾಗೂ ಎಸ್.ಎಂ.ಕೃಷ್ಣ ಅವರ ಆಡಳಿತವನ್ನು ಇತ್ತೀಚಿನವರು ಒಂದಿಲ್ಲೊಂದು ಕಾರಣಕ್ಕೆ ನೆನೆಸಿಕೊಳ್ಳುತ್ತಾರೆ. ಅದು ಅವರು ಜಾರಿಗೆ ತಂದ ಜನಪರ ಯೋಜನೆಗಳಿಂದ ಹಾಗೂ ಆಡಳಿತದಿಂದ ಎಂಬುದು ಎಷ್ಟು ಸತ್ಯವೋ, ಅವರು ಎಂಥವರೊಂದಿಗೆ ಒಡನಾಟ ಹೊಂದಿದ್ದರು, ಸಾರ್ವಜನಿಕ ಬದುಕಿನಲ್ಲಿ ಹೇಗೆ ನಡೆದುಕೊಂಡರು ಹಾಗೂ ತಮ್ಮ ಸುತ್ತ ಎಂಥವರ ವಲಯ ಸೃಷ್ಟಿಸಿಕೊಂಡು ಅವರ ಅನುಭವವನ್ನು ಆಡಳಿತದಲ್ಲಿ ಅಳವಡಿಸಿಕೊಂಡರು ಎಂಬುದರಿಂದಲೂ ಹೌದು.
ಸ್ವ ಪಕ್ಷದವರ ವಿರೋಧದ ನಡುವೆಯೂ ಭೂ ಸುಧಾರಣೆ ಕಾಯಿದೆಯನ್ನು ಜಾರಿಗೆ ತಂದು ಹಿಂದುಳಿದ ವರ್ಗಗಳ ಹರಿಕಾರ ಎನ್ನಿಸಿಕೊಂಡ ದೇವರಾಜ್ ಅರಸು ಅವರ ಸುತ್ತಲೂ ಒಂದು ಪ್ರಭಾ ವಲಯವಿತ್ತು. ಜೆ.ಎಸ್.ರಾಮಚಂದ್ರರಾವ್, ಐ.ಕೆ.ಜಾಗೀರ್‌ದಾರ್, ಕೆ.ಎಚ್.ಶ್ರೀನಿವಾಸ್, ಎಸ್.ಎಂ.ಕೃಷ್ಣ ಮೊದಲಾದವರು ಆ ಚಿಂತಕರ ಛಾವಡಿಯಲ್ಲಿದ್ದರು. ಸ್ವಯಂ ಆಡಳಿತ ದೂರದರ್ಶಿತ್ವವನ್ನು ಹೊಂದಿದ್ದ ಅರಸು ಈ ವಲಯದ ಸಲಹೆಯನ್ನು ಎಂದೂ ಅಸಡ್ಡೆ ಮಾಡಿರಲಿಲ್ಲ. ಮಾತ್ರವಲ್ಲ ತಮ್ಮ ಸುತ್ತ ಸೃಷ್ಟಿಯಾಗಿದ್ದ ಬಹು ಪರಾಕು ಮಂದಿಯನ್ನು ನಿರ್ಣಯ ತೆಗೆದುಕೊಳ್ಳುವ ಸಂದರ್ಭದಲ್ಲಿ ಜತನದಿಂದ ದೂರವಿಟ್ಟಿದ್ದರು.
ರಾಮಕೃಷ್ಣ ಹೆಗಡೆಯವರೂ ತಮ್ಮ ಆಡಳಿತಾವಧಿಯಲ್ಲಿ ಇದೇ ಸೂತ್ರವನ್ನು ಅನುಸರಿಸಿದ್ದರು. ಸಾಹಿತಿಗಳು, ಪರಿಸರ, ಕಾನೂನು, ಸಂಸದೀಯ ವ್ಯವಹಾರ ಹೀಗೆ ಆಡಳಿತದ ಮೇಲೆ ಪ್ರತ್ಯಕ್ಷ-ಪರೋಕ್ಷ ಪರಿಣಾಮ ಬೀರಬಲ್ಲ ಸಲಹಾ ವರ್ಗ ಅವರೊಂದಿಗಿತ್ತು. ಡಿ.ಆರ್.ನಾಗರಾಜ್, ಎಲ್.ಎಸ್.ಶೇಷಗಿರಿರಾವ್, ಸುಮತೀಂದ್ರ ನಾಡಿಗ್, ಜಿ.ವಿ.ಕೆ.ರೆಡ್ಡಿ, ಸುರೇಶ್ ಹೆಬ್ಳೀಕರ್, ರಾಂ ಜೇಠ್ಮಲಾನಿ, ವೈ.ಎನ್.ಕೃಷ್ಣಮೂರ್ತಿ ಸೇರಿದಂತೆ ಅನುಭವಿಗಳ ಬಳಗ ಅವರ ಜತೆಗಿತ್ತು. 'ನಮ್ಮ ಆಡಳಿತ ದಿಲ್ಲಿಯಿಂದ ಅಲ್ಲ, ಬೆಂಗಳೂರಿನಿಂದ ' ಎಂಬ ಕಡು ಕಾಂಗ್ರೆಸ್ ವಿರೋಧಿ ಘೋಷಣೆ ಹೊರ ಬಿದ್ದಿದ್ದು ಹೆಗಡೆಯವರ ಜತೆಗಿದ್ದ ಈ ಆಪ್ತವರ್ಗದಿಂದಲೇ. ತಾವು ಜಾರಿಗೆ ತರುವ ಯೋಜನೆಗಳು ಹೇಗಿರಬೇಕು? ಅದರಿಂದ ರಾಜ್ಯ ಹಿತ ಸಾಧ್ಯವೇ? ಯೋಜನೆ ಜಾರಿ ಸಂದರ್ಭದಲ್ಲಿ ಎದುರಾಗುವ ವಿಷಮ ಸನ್ನಿವೇಶಗಳೇನು? ಎಂಬೆಲ್ಲ ವಿಚಾರಗಳನ್ನು ಈ ಚಿಂತಕರ ಚಾವಡಿಯಲ್ಲಿ ಚರ್ಚಿಸಿ ಅದಕ್ಕೊಂದು ಮೂರ್ತ ಸ್ವರೂಪ ಸಿಕ್ಕ ತಕ್ಷಣವೇ ಹೆಗಡೆ ಅದನ್ನು ಘೋಷಿಸುತ್ತಿದ್ದರು. ಅಷ್ಟು ಮಾತ್ರವಲ್ಲ ತಾವು ಯಾವುದಾದರೂ ಕಾರ್ಯಕ್ರಮದಲ್ಲೋ, ಔತಣಕೂಟದಲ್ಲೋ ಭಾಗವಹಿಸುವುದಕ್ಕೆ ಮುನ್ನ, ಅಲ್ಲಿ ಎಂಥೆಂಥವರು ಭಾಗವಹಿಸುತ್ತಾರೆ, ಅವರ ಆಸಕ್ತಿ-ಅಭಿರುಚಿಗಳೇನು ? ಅವರು ಸಭೆಯಲ್ಲಿ ಯಾವೆಲ್ಲ ವಿಚಾರ ಪ್ರಸ್ತಾಪಿಸಬಹುದು, ಅದಕ್ಕೆ ತಾವು ನೀಡಬೇಕಾದ ಪ್ರತಿಕ್ರಿಯೆ ಹೇಗಿರಬೇಕೆಂಬ ಸಣ್ಣ ವಿಚಾರವನ್ನೂ ಅವರು ಆಪ್ತರ ಜತೆ ಚರ್ಚಿಸುತ್ತಿದ್ದರು; ಸಾಧ್ಯವಾದಷ್ಟರ ಮಟ್ಟಿಗೆ ಪರಿಪಾಲಿಸುತ್ತಿದ್ದರು. ಆಡಳಿತ ವಿಚಾರ ಬಂದಾಗಲೂ ಅಷ್ಟೇ.
ಅದೇ ರೀತಿ ಎಸ್.ಎಂ.ಕೃಷ್ಣ ಅವರೂ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಪ್ತವರ್ಗವನ್ನು ಬೆಳೆಸಿಕೊಂಡಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಯಾರು ಕಾಣದಷ್ಟು ವಿಷಮ ಗಳಿಗೆಗಳು, ಸಮಸ್ಯೆಗಳು ಎದುರಾದರೂ ಕೃಷ್ಣ ಅದೆಲ್ಲವನ್ನೂ ದಿಟ್ಟವಾಗಿ ಎದುರಿಸಿ ಯಶಸ್ವಿಯಾಗಿದ್ದರ ಹಿಂದೆ ಅವರ ಸ್ವಂತ ವಿವೇಚನೆ ಮತ್ತು ಸಲಹಾ ಕೂಟದ ಪಾತ್ರವಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಉಚಿತಾನುಚಿತ ನಿರ್ಣಯ ಶಕ್ತಿ ಕೃಷ್ಣ ಅವರಲ್ಲಿ ಸದಾ ಜಾಗೃತವಾಗಿರುತ್ತಿತ್ತು.
ಇನ್ನು ಈ ಗುಣಗಳಿಂದ ಹೊರತಾದ ಸಲಹಾ ವರ್ಗ ಹಾಗೂ ಆಡಳಿತ ಚಿಂತನೆ ಹೊಂದಿದ ಮುಖ್ಯಮಂತ್ರಿಗಳನ್ನು ರಾಜ್ಯ ಕಂಡಿದೆ. ಅತಂತ್ರ ವಿಧಾನಸಭೆ ಸೃಷ್ಟಿಯಾದಾಗ ಅಚಾನಕ್ ಮುಖ್ಯಮಂತ್ರಿ ಹುದ್ದೆಗೇರಿದ ಎನ್.ಧರ್ಮಸಿಂಗ್ ಅವರ ಜತೆಗೂ ಕೆ.ಕೆ.ಮೂರ್ತಿ, ದ್ವಾರಕಾನಾಥ್‌ರಂಥ ತಲೆಹರಟೆ ಸಲಹೆಗಾರರಿದ್ದರು. ಅವರನ್ನಿಟ್ಟುಕೊಂಡು ಧರ್ಮಸಿಂಗ್ ರಾಜ್ಯಕ್ಕೆ ಕೊಟ್ಟ ಆಡಳಿತ ಎಷ್ಟು ಸೊಗಸಾಗಿತ್ತು ಎಂಬುದು ವಿಮರ್ಶೆಯ ವ್ಯಾಪ್ತಿಗೆ ಸಿಲುಕದ್ದು.
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೆ.ವಿ.ರಾಜು, ವೈ.ಬಿ.ರಾಮಕೃಷ್ಣ, ಎಂ.ಪಿ.ಕುಮಾರ್‌ರಂಥ ಉತ್ತಮ ಸಲಹೆಗಾರರಿದ್ದರೂ ಅವರ ಮಾತುಗಳು ಯಡಿಯೂರಪ್ಪನವರಿಗೆ ಪಥ್ಯವಾಗಲಿಲ್ಲ. ಕೃಷ್ಣಯ್ಯ ಶೆಟ್ಟಿ, ಎಂ.ಡಿ.ಲಕ್ಷ್ಮಿನಾರಾಯಣರಂಥ ಮಾರ್ಗದರ್ಶನ, ಜತೆಗೆ ಮನೆಮಂದಿಯ ಪಾರುಪಥ್ಯವೇ ಅವರ ಆಡಳಿತದ ದಿಕ್ಕು ತಪ್ಪಿಸಿತ್ತು.
ಸಿದ್ದರಾಮಯ್ಯನವರ ಆಡಳಿತವನ್ನು ಟೀಕಿಸುವುದಕ್ಕೆ ಇದು ಸಕಾಲವಲ್ಲ ಎಂಬ ವಾದದ ನಡುವೆಯೂ ಅವರ ಕೆಲವು ನಿಲುವು ಸರಿಯಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಈ ಚಿಂತಕರ ಚಾವಡಿಯೇ ಕಾರಣವಾಗುತ್ತಿದೆ. ದಕ್ಷ ಆಡಳಿತಗಾರ, ಹಣಕಾಸು ವ್ಯವಹಾರಗಳಲ್ಲಿ ಪರಿಣತಿ ಹೊಂದಿದ್ದಾರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ದಿನದಿಂದ ಇಲ್ಲಿಯವರೆಗೂ ಕೇವಲ ಅಕ್ಕಿ ಯೋಜನೆ ಜಾರಿಗಾಗಿ ಸೈಕಲ್ ತುಳಿಯುವುದನ್ನು ಗಮನಿಸಿದಾಗ ಅವರು ಆತುರಗಾರರ ಮಾತಿಗೆ ಕಿವಿಯಾದರೇ ಎಂಬ ಅನುಮಾನ ಮೂಡುವಂತಾಗಿದೆ.
ಏಕೆಂದರೆ ಅಗ್ಗದ ಅಕ್ಕಿ ಯೋಜನೆ ಕಾಂಗ್ರೆಸ್‌ನ ಪ್ರಣಾಳಿಕೆ ವಿಚಾರ. ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ಆಹಾರ ಭದ್ರತಾ ಕಾಯಿದೆಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಸ್ತಾಪ ಮಾಡಲಾಗಿತ್ತೇ ವಿನಾ, ಜಾರಿಗೆ ತರಲಾಗುತ್ತದೆ ಎಂಬ ವಿಶ್ವಾಸ ಕಾಂಗ್ರೆಸ್ ಪ್ರಣಾಳಿಕೆ ಸಮಿತಿಗಂತೂ ಇರಲಿಲ್ಲ. ಆದರೆ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ದಿನವೇ ಇದನ್ನು ಜಾರಿಗೆ ತರುವುದಾಗಿ ಘೋಷಿಸಿಬಿಟ್ಟರು. ಆದರೆ ಅಧಿಕಾರಿಗಳು ಹೇಳಿದ್ದ ಕಿವಿ ಮಾತು ಅವರಿಗೆ ಪಥ್ಯವಾಗಲಿಲ್ಲ. ಬದಲಾಗಿ ಅಕ್ಕಿ ಯೋಜನೆಯಿಂದ ಬರುವ ಜನಪ್ರಿಯತೆಯನ್ನು ನೆನೆದೇ ಅವರು ಪುಳಕಿತರಾಗಿದ್ದರು. ನೀವು ಘೋಷಣೆ ಮಾಡಿ, ಇತಿಹಾಸ ಸೃಷ್ಟಿಸುತ್ತೀರಿ ಎಂಬ ಪ್ರಚೋದನೆಯ ಮಾತಿನಲ್ಲಿ ಅವರು ತೇಲಿ ಹೋಗಿದ್ದರು. ಆದರೆ ಈಗ ಅಕ್ಕಿ ಯೋಜನೆ ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ತಿಂದು ಹಾಕುತ್ತಿದೆ.
ಅದರ ಜತೆಗೆ ಅಗ್ಗದ ಮದ್ಯ ಜಾರಿಗೆ ತರುವ ಪ್ರಸ್ತಾಪ, ಉಡುಪಿ ಕೃಷ್ಣ ದೇಗುಲ ವಿಚಾರದಲ್ಲಿ ನೀಡಿದ ಗೊಂದಲ ಹೇಳಿಕೆ ಮತ್ತು ತಿದ್ದುಪಡಿ, ನಿರುದ್ಯೋಗಿಗಳಿಗೆ ಬಾರ್ ಲೈಸೆನ್ಸ್ ನೀಡುವಿಕೆ, ಅಷ್ಟೇ ಏಕೆ ಶಾಲಾ ಮಕ್ಕಳಿಗೆ ಪ್ರತಿ ದಿನ ಹಾಲು ಕೊಡುವುದಾಗಿ ಹೇಳಿ ಈಗ ಅದನ್ನು ಎರಡು ದಿನಕೊಮ್ಮೆ ನೀಡುವ ತಿದ್ದುಪಡಿ ಹೇಳಿಕೆಗಳು ಸಿದ್ದರಾಮಯ್ಯನವರ ಸ್ವಂತದ್ದೋ, ಅಥವಾ ಅವರ ಸುತ್ತ ಸೇರುತ್ತಿರುವ ಚಿಂತಕರ ಸೃಷ್ಟಿಯೋ ಎಂಬ ಅನುಮಾನ ಮೂಡುತ್ತಿದೆ. ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಗೊಂಡ ಮರು ದಿನವೇ ಸಾಹಿತಿಗಳು, ಚಿಂತಕರ ಮನೆಗೆ ಭೇಟಿ ನೀಡಿ ಹೊಸ ನಿರೀಕ್ಷೆ ಹುಟ್ಟು ಹಾಕಿದ ಸಿದ್ದರಾಮಯ್ಯನವರ ಸುತ್ತ ಈಗ ಅಂತವರ್ಯಾರು ಕಾಣುತ್ತಿಲ್ಲ. ಸಿ.ಎಂ.ಇಬ್ರಾಹಿಂ, ಡಾ.ಎಚ್.ಸಿ.ಮಹದೇವಪ್ಪ, ಎಚ್.ಎಂ.ರೇವಣ್ಣ, ಕೆಂಪಯ್ಯನವರಂಥವರೇ ಠಳಾಯಿಸುತ್ತಿದ್ದಾರೆ. ಇವರೆಲ್ಲ ಸಿದ್ದರಾಮಯ್ಯನವರ ಕಷ್ಟದ ದಿನಗಳಲ್ಲಿ ಜತೆಗಿದ್ದವರು ಎಂಬುದೇನೋ ಸರಿ, ಆದರೆ ಆಡಳಿತ ನಡೆಸುವಾಗ ಇವರು ನೀಡುವ ಸಲಹೆ ಅನುಸರಿಸಿದರೆ ಅಧಿಕಾರಾವಧಿಯುದ್ದಕ್ಕೂ ಅಕ್ಕಿ ಯೋಜನೆಯಂಥ ಅನಾಹುತಗಳ ಸರಣಿಯೇ ಎದುರಾಗಬಹುದು.
ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದವರ ಲೋಪ-ದೋಷಗಳನ್ನೇ ಎತ್ತಿ ತೋರಿಸುವ ಛಾತಿ ಹಾಗೂ ಅವಕಾಶ ಹೊಂದಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಯಾವುದೇ ವಿಚಾರವನ್ನಾದರೂ ದಡ ಹತ್ತಿಸಲು ಹೆಣಗಾಡುತ್ತಿದ್ದಾರೆ. ಅವರೊಬ್ಬ ಪರಿಪಕ್ವ ಆಡಳಿತಗಾರ ಎಂಬ ಭಾವನೆ ಮರೆಯಾಗುವಷ್ಟರ ಮಟ್ಟಿಗೆ ಎಡವಟ್ಟುಗಳು ಕಾಣಿಸುತ್ತಿವೆ. ಅನುಭವದ ಕೊರತೆ ಕಾಡಲಾರಂಭಿಸಿದೆ. ಅಪಾತ್ರರ ಮಾತಿಗೆ ಸಿದ್ದರಾಮಯ್ಯ ಅಳತೆ ಮೀರಿ ಆದ್ಯತೆ ನೀಡುತ್ತಿದ್ದಾರೆಯೇ ಎಂಬ ಪ್ರಶ್ನೆ ಎಲ್ಲರನ್ನು ಕಾಡಲಾರಂಭಿಸಿದೆ.
ಹಾಗಂಥ ಸಿದ್ದರಾಮಯ್ಯ ಅವರ ಎದುರು ಒಳ್ಳೆಯ ಯೋಜನೆಗಳಿಲ್ಲ, ಉತ್ತಮ ಜತೆಗಾರರು ಇಲ್ಲ ಎಂಬ ಸನ್ನಿವೇಶವೂ ಇಲ್ಲ. ಎಚ್.ಕೆ.ಪಾಟೀಲ್, ಆರ್.ವಿ.ದೇಶಪಾಂಡೆ ಅವರತ್ತ ಹಿರಿಯ, ನುರಿತ ಸಚಿವರಿದ್ದಾರೆ. ಆದರೆ ಅವರು ಪ್ರಭಾವಲಯದಿಂದ ದೂರ ತಳ್ಳಲ್ಪಟ್ಟಿದ್ದಾರೆ. ಹೈದರಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವುದಕ್ಕೆ ಸಂವಿಧಾನದ 371 ಜೆ ತಿದ್ದುಪಡಿಯ ಅನುಷ್ಠಾನದಂಥ ವಿಚಾರವೂ ಇದೆ. ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಈ ವಿಚಾರದಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತಿರುವ ವಿಳಂಬ ನೀತಿಯ ಬಗ್ಗೆ ಸಣ್ಣದೊಂದು ಅಸಮಾಧಾನದ ಎಳೆಯನ್ನೂ ಬಿಟ್ಟು ಹೋಗಿದ್ದಾರೆ. ಇವೆಲ್ಲವನ್ನು ಸಿದ್ದರಾಮಯ್ಯ ಹೇಗೆ ಪರಿಗ್ರಹಿಸುತ್ತಾರೆ, ತಮ್ಮ ಸುತ್ತಲಿನ ವಲಯವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದಷ್ಟೇ ಮುಖ್ಯ.
ಲಗೋರಿ: ಮಾತು ಮನೆ ಕೆಡಿಸಿದಂತೆ ಸಹವಾಸ ಸರ್ಕಾರವನ್ನು ಕೆಡಿಸಬಲ್ಲದು.
- ಪಿ. ತ್ಯಾಗರಾಜ್
thyagarjun@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

