ಮೂಗ್ದಾರ ಅಂದ್ರೆ ಮೂಗ್ನಾಗೆ ದಾರ ಹಾಕೋದಲ್ವಂತೆ
ಯಾಕೋ ಏನೋ ಮೈಲಾರಿ ಸೂರ್ಯ ಕಣ್ ಬುಡಕ್ಕೆ ಮುಂಚೆನೇ...
ಯಾಕೋ ಏನೋ ಮೈಲಾರಿ ಸೂರ್ಯ ಕಣ್ ಬುಡಕ್ಕೆ ಮುಂಚೆನೇ ಎದ್ದು ಯರ್ರಾಬಿರ್ರಿ ವೋಯ್ತಾಯಿದ್ದ. 'ಇದ್ಯಾಕಲೇ ಮೈಲಾರಿ, ಈ ಪಾಟಿ ಆರ್ಜೆಂಟ್ನಾಗೆ ವೋಯ್ತಾಯಿದ್ದೀಯ. ಕೆರೆಕಡೀಕೆ ಏನ್ಲಾ?' ಅಂತೇಳಿ ಆಮಾಸೆ ಸಿಕ್ಬುಟ್ಟು ಕೇಳ್ದ.
'ನಿನ್ ಮುಖ ಮುಚ್ಚ, ನಿನ್ ಕೈಗೆ ಕರಿ ನಾಗ್ರ ಕಡಿಯ, ಶುಭ ನುಡಿಯೋ ಸೋಮ ಅಂದ್ರೆ ಗೂಬೆ ಕಂಡೆ ಮಾಮ ಅಂದಂಗೆ ವೊಳ್ಳೆ ಕೆಲ್ಸುಕ್ಕೆ ವೋಗೋವಾಗ ಬೆಕ್ಕು ಅಡ್ಡ ಬಂದಂಗೆ ಬರೋದಲ್ದೆ, ಕೆರೆಕಡೀಕಾ ?, ಸುಡುಗಾಡ್ಗ ? ಅಂತ ಕೇಳ್ತಿಯಲ್ಲೋ, ವೋಗತ್ತಾಗೆ' ಅಂತೇಳಿ ಮೈಲಾರಿ ಸಿಕ್ಕಾಪಟ್ಟೆ ವುಗ್ದು ವುಪ್ಪಾಕ್ಬುಟ್ಟ.
'ವೂ ಕಣಪ್ಪ, ನೀನು ಪ್ರಧಾನಿ ಮನಮೋಹನಸಿಂಗು, ಸೋನಿಯಾಗಾಂಧಿನ ನೋಡಕ್ಕೆ ವೋಯ್ತಾಯಿದ್ದೀಯ ಅಲ್ವಾ?' ಅಂತ ಅಮಾಸೆ ಕೇಳ್ದ. 'ನನ್ನನ್ನ ಯಾಕ್ಲಾ ಮನಮೋಹನಸಿಂಗುಗೆ ವೋಲ್ಕೆ ಮಾಡ್ತೀಯ. ನಾನೇನರ ಕಂಡೋರು ಮಾತು ಕೇಳ್ಕಂಡು ಕುಣಿಯೋ ಗೊಂಬೆ ಥರುಕ್ಕೆ ಏನರ ಕಾಣುಸ್ತೀನ ? ನಿಂತಾವ ಮಾತಾಡ್ಕಂಡು ನಿಂತ್ರೆ ಕೆಲ್ಸ ಕೆಟ್ಟೋಯ್ತದೆ. ನಾನು ವೋಬೇಕು, ಟೇಮಾಯ್ತು' ಅಂದ ಮೈಲಾರಿ. 'ಅಲ್ಲಲೇ, ಇಸ್ಟೋತ್ನಾಗೆ ಎಲ್ಲಿಗ್ಲಾ ವೊಂಟೆ ಮುಂಡೇದೆ ?' ಅಂತೇಳಿ ಅಮಾಸೆ ಕೇಳ್ದ. 'ಪಾಸ್‌ಪೋರ್ಟು ಆಪೀಸ್ಗೆ ಕಣ್ಲಾ. ಅರ್ಜೆಂಟಾಗಿ ಪಾಸ್‌ಪೋರ್ಟು ಮಾಡುಸ್ಬೇಕು' ಅಂತ ಮೈಲಾರಿ ಯೋಳ್ದ. 'ಯಾಕಲಾ ಪಾಸ್‌ಪೋರ್ಟು ? ಪಾರೀನ್ಗೆ ಏನರ ವೋಯ್ತಿಯ. ನೆಟ್ಗೆ ಬಸ್ ಹತ್ಕಂಡು ಬೆಂಗ್ಳೂರು ಪ್ಯಾಟೆಗೆ ವೋಗಕ್ಕೇ ಬರಾಕಿಲ್ಲ ನಿಂಗೆ. ಪಾರೀನ್ಗೆ ವೋಯ್ತಾನಂತೆ ಪಾರೀನ್ಗೆ' ಅಂತೇಳಿ ಅಮಾಸೆ ಬೈದ. 'ಲೇ, ನಮ್ ಹಳ್ಳಿ ಮಂತ್ರಿ ಎಚ್.ಕೆ. ಪಾಟೀಲ್ರು ಯೋಳವ್ರೆ. ವೂರ್ಗೆ ಇಬ್ಬಿಬ್ರುನ್ನ ಪಾರೀನ್ಗೆ ಕಳುಸ್ತೀನಿ ಅಂತ. ಯಾವ್ ಟೇಮ್ಗೆ ಪೋನು ಬತ್ತದೋ ಏನೋ ? ಯಾವ್ದುಕ್ಕೂ ಇರ್ಲಿ ಅಂತೇಳಿ ಪಾಸ್‌ಪೋರ್ಟು ಮಾಡಿಸ್ಕಂಡು ಬತ್ತೀನಿರಪ್ಪ' ಅಂತಂದ ಮೈಲಾರಿ. 'ದಡ್ ಬಡ್ಡೀಮಗ ಕಣ್ಲಾ ನೀನು. ಆವಯ್ಯ ಏನ್ಲಾ ಯೋಳಿರಾದು. ವೂರ್ಗೆ ಎರ್ಡೆರ್ಡು ಪಾರೀನು ಕಕ್ಕಸ್ಸು ಕಟ್ಟುಸ್ತೀವಿ ಅಂತ. ಅದುನ್ನ ನೀನು ಮಿಸ್ಟೀಕು ಮಾಡ್ಕಂಡು ವೋದ್ಕಂಡಿದ್ದೀಯ. ಅದುಕ್ಕೆ ಯೋಳಾದು ಕಲರ್ ಸಾರಾಯಿ ಕುಡೀಬ್ಯಾಡ. ಅದುನ್ನ ಕುಡ್ದು ಮಲ್ಗುದ್ರೆ ವತ್ತಾರೆ ಎದ್ದೇಟ್ಗೆ ಎಡ್ವಟ್ಟು ಆಯ್ತದೆ ಅಂತ. ವೋಗಲೇ ವೋಗಿ ಕಂಬ್ಳಿ ವೊದ್ಕಂಡು ಮಲಿಕ್ಕಾವೋಗು' ಅಂತಂದು ಅಮಾಸೆ ಯೋಳ್ದ.
'ಥೂತ್ತೇರಿಕೆ, ಎಂಥ ಕೆಲ್ಸ ಆಗೋಯ್ತಾಯಿತ್ತು. ಅಲ್ಲಲೇ, ನಮ್ ಹಳ್ಳಿಗೆ ಪಾರಿನ್ನು ಕಕ್ಕಸ್ಸು ಯಾಕ್ಲಾ ಬೇಕು. ಸಿವ ಕೊಟ್ಟಂಗೆ ಬಟಾ ಬಯಲು ಐತೆ, ಕೆರೆ ತುಂಬ ನೀರದೆ ಅಲ್ವಾ? ವತ್ತಾರೆ ಎದ್ದೇಟ್ಗೆ ಚೆಂಬು ಹಿಡ್ಕಂಡು ವೋಯ್ತಾಯಿದ್ರೆ ವಾಕಿಂಗು, ಟಾಕಿಂಗು ಎಲ್ಲಾನೂವೆ ಆಗೋಯ್ತದೆ. ಈ ಸರ್ಕಾರ್ದೋರು ಪಾರೀನ್ನು, ಲೋಕಲ್ಲು ಅಂತೇಳಿ ಕಟ್ಟುಸ್ಬುಟ್ಟು ಕಾಸು ಮಡುಗ್ತರೆ. ನಾವು ಕುಡ್ದಿರೋದ್ನ, ತಿಂದಿರೋದ್ನ ಆಚೆ ಹಾಕಕ್ಕೂ ಟ್ಯಾಕ್ಸು ಕಟ್ಬೇಕಾಯ್ತದೆ. ನಮ್ಮೂರ್ಗೆ ಪಾರೀನೂ ಬ್ಯಾಡ, ಯಾವ್ ಸುಡ್ಗಾಡು ಬ್ಯಾಡ' ಅಂತೇಳಿ ಮೈಲಾರಿ ಬೈಕಂಡು ಮುಂದುಕ್ಕೆ ವೋಯ್ತಾಯಿದ್ದಂಗೆ ಸಿಎಂ ಸಿದ್ರಾಮಣ್ಣ ಸಿಕ್ಬುಟ್ರು. 'ಇದ್ಯಾಕಣ್ಣ ನೀವು ಇತ್ಲಾಗೆ ಬಂದ್ಬುಟ್ಟಿದ್ದೀರಿ? ಅಂತೇಳಿ ಮೈಲಾರಿ ಕೇಳ್ದ. 'ಏನಿಲ್ಲ ಕಣ್ಲಾ, ಎಲ್ಲಾರ್ಗೂವೆ 30 ಕೆಜಿ ಅಕ್ಕಿ ಕೊಡ್ತಾಯಿದ್ದೀವಲ್ಲ. ಅದುಕ್ಕೆ ನಿಮ್ ವೂರ್ನೋರು ಪೋನು ಮಾಡಿದ್ರು. ನೀವು ಕೊಟ್ಟಿರೋ ಅಕ್ಕಿನಾಗೆ ಪಸಂದಾಗಿ ಬಿರ್ಯಾನಿ ಮಾಡಿದ್ದೀವಿ. ಬಂದು ವುಣ್ಕಂಡು ವೋಗಿ ಅಂತ ಅದುಕ್ಕೆ ಬಂದೆ' ಅಂತೇಳಿ ಸಿದ್ರಾಮಣ್ಣ ವೊಂಟ್ರು. 'ವಸಿ ನಿಂತ್ಕಳಿ. ಎಲ್ಲಿ ನಿಮ್ ಮೂಗು ವೊಂದಪ ತೋರ್ಸಿ' ಅಂತ ಮೈಲಾರಿ ಕೇಳ್ದ. 'ನನ್ ಮೂಗು ನೋಡಿ ಏನಲಾ ಮಾಡೀಯ ಬಡ್ಡೆತ್ತದೆ' ಅಂತೇಳಿ ಸಿದ್ರಾಮಣ್ಣ ಕೇಳುದ್ರು. 'ಏನಿಲ್ಲ, ನಿಮ್ಗೆ ಮೂಗುದಾರ ಹಾಕಕ್ಕೆ ನಿಮ್ ಪಕ್ಸುದೋರು ತೀರ್ಮಾನ ಮಾಡ್ಕಂಡವ್ರಂತೆ. ಅದುಕ್ಕೆ ಹೆಂಗೆ ಹಾಕವ್ರೆ ನೋಡ್ಕಳವ ಅಂತ ಕೇಳ್ದೆ' ಅಂದ ಮೈಲಾರಿ.
'ಲೇ ಮೂಗುದಾರ ಅಂದ್ರೆ ಮೂಗ್ನಾಗೆ ದಾರ ಹಾಕದು ಅಂದ್ಕಡ್ಯ. ಅದು ಹಂಗಲ್ಲಲೇ, ಸಿದ್ರಾಮಣ್ಣ ಸಿಎಂ ಆಯ್ತಾಯಿದ್ದಂಗೆ ಎಲ್ಲ ಡಿಸಿಸನ್ನು ವೊಬ್ರೇ ತಕ್ಕತಾವ್ರೆ. ಹಿಂಗಾಗ್ಬುಟ್ಟು ಬ್ಯಾರೆ ಮಂತ್ರಿಗುಳ್ಗೆ, ಪಕ್ಸುದೋರ್ಗೆ ಕೆಲ್ಸ ಇಲ್ದಂಗೆ ಆಗೋಬುಟ್ಟದೆ. ಹಿಂಗಾದಾಗ ಯಾರ್ಗಾರೂ ವುರ್ಯಾಕಿಲ್ವ. ಅದುಕ್ಕೆ ಸಮನ್ವಯ ಸಮಿತಿ ಅಂತೇಳಿ ಮಾಡ್ಕತರೆ, ಆವಾಗ ಸಮಿತಿ ಪರ್ಮಿಸನ್ನು ಇಲ್ದಂಗೆ ಏನೂ ಅನೌನ್ಸು ಮಾಡಕ್ಕಿಲ್ಲ ತಿಳೀತಾ ?' ಅಂದ ಆಮಾಸೆ.
'ವೋ ಹಂಗೆ ಇಸ್ಯ, ನಾನೆಲ್ಲೋ ಮೂಗ್ನಾಗೇ ದಾರ ಹಾಕ್ಬುಡ್ತರೆ ಅಂದ್ಕಂಬುಟ್ಟಿದ್ದೆ ಕಣಣ್ಣೋ' ಅಂತೇಳಿ ಮೈಲಾರಿ ವೊಂಟ.
- ಕೆ.ವಿ.ಪ್ರಭಾಕರ್
prabhukolar@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

