ಭಾರತವೇಕೆ ಇಷ್ಟೊಂದು ದಾಸ್ಯಬುದ್ಧಿ ಪ್ರದರ್ಶಿಸುತ್ತಿದೆ?
ರುಪಾಯಿ ಬೆಲೆ ಕುಸಿತ ಭಾರತೀಯರ ಆತ್ಮಾಭಿಮಾನದ ಕುಸಿತವನ್ನು...
ರುಪಾಯಿ ಬೆಲೆ ಕುಸಿತ ಭಾರತೀಯರ ಆತ್ಮಾಭಿಮಾನದ ಕುಸಿತವನ್ನು ಅತಿ ವಾಸ್ತವಿಕ ರೀತಿಯಲ್ಲಿ ಪ್ರತಿಬಿಂಬಿಸುತ್ತಿದೆ ಎಂದರೆ ಉತ್ಪ್ರೇಕ್ಷೆಯಾಗದು. ಓಹ್! ನನ್ನ ದೇಶವಾಸಿಗಳೇ...ಏನೀ ಕುಸಿತ? ನಾನು ಮತ್ತು ನೀವು ಎಲ್ಲರೂ ಕುಸಿಯುತ್ತಲೇ ಹೋಗುತ್ತಿದ್ದೇವೆ, ಆದರೆ ಇದೇ ಸಮಯದಲ್ಲಿ ನಾಚಿಕೆಗೆಟ್ಟವರು ಬೆಳೆಯುತ್ತಲೇ ಇದ್ದಾರೆ.
ನಮ್ಮಲ್ಲಿ ಕಳಂಕಿತರಿಗೆ ಕ್ಲೀನ್ ಚಿಟ್ ಸಿಗುತ್ತದೆ. ಅಮೆರಿಕ, ಯೂರೋಪ್ ಕಡೆಗೆ ಪಾಕಿಸ್ತಾನ ಕೂಡ ನಮ್ಮ ಕಪಾಳಕ್ಕೆ ಬಾರಿಸಿ ನಗುತ್ತವೆ. ಆದರೆ ನಾವು ಇನ್ನೊಂದು ಕೆನ್ನೆಯನ್ನು ಅವುಗಳ ಮುಂದೆ ಒಡ್ಡುತ್ತೇವೆ. 'ಟೇಕನ್ ಫಾರ್ ಗ್ರಾಂಟೆಡ್' ಎನ್ನುವಂತಹ ದೇಶವಾಗಿ ಬದಲಾಗಿದ್ದೇವೆ ನಾವು. ಒಂದರ್ಥದಲ್ಲಿ, ಲೆಕ್ಕಕ್ಕಿಲ್ಲದವರು ನಾವು!
ಉಳಿದ ದೇಶಗಳ ಪ್ರಧಾನಿಗಳು ತಪ್ಪು ಮಾಡಿದರೆ ಅವರಿಗೆ ಜೈಲೇ ಗತಿ. ಆದರೆ ಭಾರತದಲ್ಲಿ? ರಾಜಕಾರಣಿಗಳು ಯಾವ ಪಕ್ಷಕ್ಕೆ ಸೇರಿದವರು, ಯಾರಿಗೆ ಅತಿ ಆಪ್ತರು ಎನ್ನುವುದರ ಮೇಲೆಯೇ ಎಲ್ಲವೂ ನಿರ್ಧರಿತವಾಗುತ್ತದೆ.
ಇದಕ್ಕೆ ಉದಾಹರಣೆಗಳು ಬಹಳಷ್ಟಿವೆ. ರೇಲ್ವೆಯ ಮಾಜಿ ಸಚಿವ ಪವನ್ ಬನ್ಸಲ್ ಅವರ ವಿಷಯವನ್ನೇ ತೆಗೆದುಕೊಳ್ಳಿ. ಅವರ ಅಳಿಯ ವಿಜಯ್ ಸಿಂಗ್ಲಾ ಮತ್ತು ಇನ್ನು 8 ಜನರ ಮೇಲೆ ಚಾರ್ಜ್ ಶೀಟ್ ಸಲ್ಲಿಸಿರುವ ಸಿಬಿಐ, 'ರೇಲ್ವೆ ಬೋರ್ಡ್ ನೇಮಕಾತಿ ಪ್ರಕ್ರಿಯೆಯ ವೇಳೆ ಇವರುಗಳು ಲಂಚ ಪಡೆದಿದ್ದಾರೆ' ಎಂದು ಹೇಳಿದೆ. 'ಉಪಕಾರಿ ಮಾವನಿಲ್ಲದಿದ್ದರೆ, ಅಳಿಯನನ್ನು ಕೇಳುವವರ್ಯಾರು?'. ಬನ್ಸಲ್ ಅವರ ಬೆಂಬಲವಿಲ್ಲದಿದ್ದರೆ ಅವರ ಅಳಿಯನಿಗೆ ಲಂಚ ಕೊಡಲು ಯಾರು ಮುಂದಾಗುತ್ತಿದ್ದರು? ಹಾಗಾಗೇ ಬನ್ಸಲ್ ಅವರಿಗೆ ಸಿಕ್ಕ 'ಕ್ಲೀನ್ ಚಿಟ್', ರಾಬರ್ಟ್ ವಾದ್ರಾಗೆ ಹರ್ಯಾಣ ಸರ್ಕಾರ ಕೊಟ್ಟ ಕ್ಲೀನ್‌ಚಿಟ್‌ನ ಮುಂದುವರಿದ ಭಾಗವೆಂದೇ ಹೇಳಬಹುದು. ಈ ಸಾಲಿನಲ್ಲಿ ಕ್ರೀಡಾ ಪ್ರೇಮಿ ಸುರೇಶ್ ಕಲ್ಮಾಡಿಯೂ ಇದ್ದಾರೆ ಎನ್ನುವುದನ್ನು ಮರೆಯುವುದು ಬೇಡ. ಇದರರ್ಥ, ನಮ್ಮ ದೇಶದ ತುಂಬೆಲ್ಲ ನಿಷ್ಕಳಂಕ ಜನರೇ ತುಂಬಿದ್ದಾರೆ ಎಂದಾಯಿತು. ನಾವು ನಿಜಕ್ಕೂ ಧನ್ಯರಲ್ಲವೇ?
ಇಷ್ಟೇ ಅಲ್ಲ, ನಮ್ಮ ಸರ್ಕಾರಕ್ಕೆ ಪಶ್ಚಿಮದ ಮಿತ್ರರಾಷ್ಟ್ರಗಳಿಂದಲೂ ಕ್ಲೀನ್ ಚಿಟ್ ಸಿಗುತ್ತದೆ ಅಂದ ಮೇಲೆ ನಾವು ನಿಜಕ್ಕೂ ಭಾಗ್ಯವಂತರೇ ಇರಬೇಕಲ್ಲವೇ! ಅಮೆರಿಕ ಬಹಳಷ್ಟು ರಾಷ್ಟ್ರಗಳ ಮೇಲೆ ಬೇಹುಗಾರಿಕೆ ನಡೆಸಿದ ವಿಷಯವನ್ನೇ ತೆಗೆದುಕೊಳ್ಳಿ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಕಣ್ಗಾವಲು ಉಪಕರಣ, ಇರಾನ್‌ನಿಂದ 14 ಬಿಲಿಯನ್ ಮಾಹಿತಿಗಳನ್ನು ಕಲೆಹಾಕಿದೆ. ಅಮೆರಿಕ ಇರಾನ್‌ನ ಮೇಲೆ ಬೇಹುಗಾರಿಕೆ ನಡೆಸಿದೆ ಎನ್ನುವ ವಿಷಯವನ್ನು ಮಾನ್ಯ ಮಾಡಬಹುದೇನೋ? ಏಕೆಂದರೆ ಇವೆರಡೂ ಶತ್ರುರಾಷ್ಟ್ರಗಳು. ಆದರೆ ತಾನು 'ಮಿತ್ರರಾಷ್ಟ್ರಗಳೆಂದು' ಕರೆಯುವ ದೇಶಗಳನ್ನೂ ಅಮೆರಿಕ ಬಿಟ್ಟಿಲ್ಲವಲ್ಲ? ಪಾಕಿಸ್ತಾನದಿಂದ 13.5 ಮಿಲಿಯನ್, ಜೋರ್ಡನ್‌ನಿಂದ 12.7 ಮಿಲಿಯನ್, ಇಜಿಪ್ತ್‌ನಿಂದ 7.6 ಬಿಲಿಯನ್ ಮತ್ತು ಭಾರತದಿಂದ 6.3 ಬಿಲಿಯನ್ ಮಾಹಿತಿಗಳನ್ನು ಅದು ಕಲೆಹಾಕಿದೆ(ಕದ್ದಿದೆ).
ಮಿತ್ರದೇಶಗಳು ಮತ್ತು ಮಿಲಿಟರಿ ಸಹಯೋಗಿಗಳಾದ ಫ್ರಾನ್ಸ್, ಜರ್ಮನಿ ಮತ್ತು ಟರ್ಕಿಯ ಮೇಲೆ ಕೂಡ ಅಮೆರಿಕ ಬೇಹುಗಾರಿಕೆ ನಡೆಸಿತ್ತು. ಆದರೆ ಆ ದೇಶಗಳು ಹೆದರಿ ಸುಮ್ಮನೇ ಕೂಡಲಿಲ್ಲ. ಕೂಡಲೇ ಅಮೆರಿಕದ ವಿರುದ್ಧ ಪ್ರತಿಭಟಿಸಿದವು. ಆದರೆ ನಮ್ಮ ಭಾರತ ಸರ್ಕಾರ ಮಾಡಿದ್ದೇನು? ದಾಸ್ಯಬುದ್ಧಿಯ ಅತ್ಯುನ್ನತ ಸ್ಥಿತಿಯ ಪ್ರದರ್ಶನ ವಿದೇಶಾಂಗ ಮಂತ್ರಿ ಸಲ್ಮಾನ್ ಖುರ್ಷಿದ್ ಅವರಿಂದ ಆಯಿತು! 'ಅಮೆರಿಕ ಬೇಹುಗಾರಿಕೆ ನಡೆಸುತ್ತಿರಲಿಲ್ಲ, ಅದು ಕರೆಗಳ ಬಗ್ಗೆ ಅಧ್ಯಯನ ಮಾಡಿದೆಯಷ್ಟೇ' ಎಂದು ಹೇಳಿದರು. ಮನಮೋಹನ್ ಸಿಂಗ್ ಅವರು ಹಿಂದೆ ಜಾರ್ಜ್ ಬುಷ್‌ಗೆ 'ಭಾರತೀಯರು ನಿಮ್ಮನ್ನು ಪ್ರೀತಿಸುತ್ತಾರೆ' ಎಂದು ಹಲ್ಲುಕಿರಿದು ಹೇಳಿದ ಘಟನೆಯನ್ನು ಈಗಿನ ನಾಚಿಕೆಗೇಡಿನ ನಡೆ ನೆನಪಿಸುವುದಿಲ್ಲವೇ?
ಇಂಥ ಗುಲಾಮತನವನ್ನು ಪ್ರದರ್ಶಿಸುವ ಅಗತ್ಯವಾದರೂ ಏನಿದೆ? ಪಾಕಿಸ್ತಾನದಂತಹ ಪುಟ್ಟ ರಾಷ್ಟ್ರ ಕೂಡ ಡ್ರೋನ್ ದಾಳಿಯನ್ನು ಖಂಡಿಸಿ ಅಮೆರಿಕಕ್ಕೆ ಎಷ್ಟೋ ಬಾರಿ ಧಮಕಿ ಹಾಕಿದೆ. ಅಂಥ ದಿಟ್ಟತನದಿಂದ ಪಾಕಿಸ್ತಾನಕ್ಕೆ ಲಾಭ ಕೂಡ ಆಗಿದೆ. ಆದರೆ ಭಾರತ ಎಷ್ಟು ನಡುಬಗ್ಗಿಸುತ್ತದೆಂದರೆ, ದೊಡ್ಡ ರಾಷ್ಟ್ರಗಳೆಲ್ಲ
ಬಂದು ಅದರ ಬೆನ್ನಿನ ಮೇಲೆ ಕುಳಿತು ಸವಾರಿ ಮಾಡುವಷ್ಟು! ಅಫ್ಘಾನಿಸ್ತಾನದಲ್ಲಿನ ಸಮಸ್ಯೆ ಬಗೆಹರಿಸಲು ಪಾಕಿಸ್ತಾನಕ್ಕೆ ಕಾಶ್ಮೀರ ವಿಷಯದಲ್ಲಿ ರಿಯಾಯತಿ ನೀಡಿ ಎಂದು ಬಿಟ್ಟಿ ಸಲಹೆ ನೀಡುತ್ತದೆ ಅಮೆರಿಕ. ಇಂಥ ಮಿತ್ರರಾಷ್ಟ್ರಗಳಿದ್ದರೆ ಶತ್ರುಗಳೇ ಬೇಕಿಲ್ಲ ಅಲ್ಲವೆ?
ಈಗ ಯುರೋಪಿಯನ್ ಒಕ್ಕೂಟ ಕೂಡ ಭಾರತದ ಮೇಲೆ ಸವಾರಿ ಮಾಡುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. 2014-2020 ಬಜೆಟ್‌ನಲ್ಲಿ ಸುಮಾರು 38 ಪ್ರತಿಶತದಷ್ಟು ಹಣವನ್ನು ಯುರೋಪ್ ಒಕ್ಕೂಟ ತನ್ನ ಕೃಷಿಗೆ ಮೀಸಲಿಟ್ಟಿದೆ. ಅತ್ಯಂತ ಹೆಚ್ಚು ಸಬ್ಸಿಡಿ ಪಡೆಯುವವರ ಪಟ್ಟಿಯಲ್ಲಿ ಯುರೋಪ್ ಒಕ್ಕೂಟದ ರೈತರು ಪ್ರಪಂಚದಲ್ಲೇ ಮೊದಲ ಸ್ಥಾನ ಪಡೆದಿದ್ದಾರೆ. ಈಗ ಅವರಿಗೆ ಇನ್ನಷ್ಟು ಲಾಭವಾಗಲಿದೆ. ಏಕೆಂದರೆ ಭಾರತ ಯುರೋಪ್‌ನೊಂದಿಗೆ ಮುಕ್ತ ವ್ಯಾಪಾರ ಸಂಬಂಧಕ್ಕೆ(ಎಫ್‌ಟಿಎ) ಸಹಿಹಾಕಲಿದೆ. ಇದಕ್ಕೆ ಅಂಕಿತ ಬಿತ್ತೆಂದರೆ, ಯುರೋಪ್‌ನಿಂದ ಭಾರತಕ್ಕೆ 'ಒನ್‌ವೇ' ಮಾರ್ಗ ತೆರೆದುಕೊಳ್ಳಲಿದೆ. ಭಾರತದ ಕಾಳು ಮೆಣಸು, ಬಾಸ್ಮತಿ ಅಕ್ಕಿ, ಟೀ, ಔಷಧಗಳು ಮತ್ತು ದೇಶೀಯ ರೇಷ್ಮೆಗೆ ದೊಡ್ಡ ಹೊಡೆತ ಬೀಳಲಿದೆ. ಯುರೋಪ್‌ನಲ್ಲಿ ಅಮೂಲ್ ಕಂಪನಿಯ ಎರಡು ಉತ್ಪಾದನಾ ಘಟಕಗಳಿವೆ. ಒಂದು ವೇಳೆ ಈ ಒಪ್ಪಂದವೇನಾದರೂ ಆಯಿತೆಂದರೆ, ಅವೆರಡೂ ಘಟಕಗಳ ಬಾಗಿಲು ಮುಚ್ಚಲಿವೆ.
ಆದರೂ ವಾಣಿಜ್ಯ ಸಚಿವ ಆನಂದ್ ಶರ್ಮ ಎಫ್‌ಟಿಎ ಯೋಜನೆಯನ್ನು 'ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ವಾಣಿಜ್ಯ ಮತ್ತು ಬಂಡವಾಳ ಒಪ್ಪಂದ' ಎಂದು ಬಣ್ಣಿಸುತ್ತಾರೆ! ಮೊನ್ಸಾಂಟೋ-ಎಂಡೋಸಲ್ಫಾನ್ ಲಾಬಿಗಳನ್ನು ಬೆಂಬಲಿಸುತ್ತಾ ಬಂದಿರುವ ನಮ್ಮ ಕೃಷಿ ಸಚಿವರು ಕೂಡ ಸಂತೋಷವಾಗಿ ಬಾಯಿಮುಚ್ಚಿಕೊಂಡಿದ್ದಾರೆ.
ನಮಗೆಲ್ಲ ಏನಾಗಿದೆ?
'ಪಾಪ ಯುರೋಪ್‌ನ ಕೆಲವು ರಾಷ್ಟ್ರಗಳಲ್ಲಿ ನಿರುದ್ಯೋಗಿಗಳ ಸಂಖ್ಯೆ 50-60 ಪ್ರತಿಶತದಷ್ಟಿದೆ. ಹಾಗಾಗಿ ನಾವು ಆ ದೇಶಕ್ಕೆ ಮಾಡುತ್ತಿರುವ ಸಹಾಯವಿದು' ಎಂದುಕೊಳ್ಳೋಣವೇ? ಆದರೆ ಅವರಿಗೆಷ್ಟೇ ಆರ್ಥಿಕ ಸಹಾಯ ಮಾಡಿದರೂ ಅಥವಾ ಅವರೊಂದಿಗೆ ಮುಕ್ತ ಮಾರುಕಟ್ಟೆ ಒಪ್ಪಂದ ಮಾಡಿಕೊಂಡರೂ ಭಾರತೀಯರಿಗೆ 'ವೀಸಾ'ಗೆ ನೀಡುವಾಗ ಅವಮಾನ ಮಾಡುವುದನ್ನು ಮಾತ್ರ ಅವರು ಬಿಡುವುದಿಲ್ಲ. ನಿಜಕ್ಕೂ ಕೃತಘ್ನರು!
-ಟಿ.ಜೆ.ಎಸ್. ಜಾರ್ಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

