ಅಂಕಣಗಳು

ಯಾವುದಕ್ಕೂ ಬಜೆಟ್ ಮುಗಿಯಬೇಕು

ರಾಜಕೀಯ ನಿರ್ಧಾರಗಳನ್ನು ಮುಂದಕ್ಕೆ ಹಾಕಿದಷ್ಟೂ ಅವು...

Published On :

ರಾಜಕೀಯ ನಿರ್ಧಾರಗಳನ್ನು ಮುಂದಕ್ಕೆ ಹಾಕಿದಷ್ಟೂ ಅವು ಜಟಿಲವಾಗುತ್ತಲೇ ಹೋಗುವುದು ಸಹಜ. ಅದು ದೀರ್ಘಕಾಲ ಆಡಳಿತ ಯಂತ್ರದ ಭಾಗವಾಗಿಯೇ ಕೆಲಸ ಮಾಡಿ, ಕೆಲವು ವರ್ಷಗಳ ಕಾಲ ಸರ್ಕಾರದ ಹೊರಗಡೆ ನಿಂತು ಪ್ರಕರಣಗಳ ಅಧ್ಯಯನ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲದೇ ಇರುವ ವಿಷಯವೇನೂ ಅಲ್ಲ.
ಹೊಸದಾಗಿ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಅನಂತರ, ಆರು ವಾರಗಳಾದರೂ, ಅವರು ಹೆಚ್ಚು ಕಡಿಮೆ ಎಲ್ಲ ರಾಜಕೀಯ ನಿರ್ಧಾರಗಳನ್ನು ಮುಂದಕ್ಕೆ ಹಾಕುತ್ತಲೇ ಬಂದಿರುವುದಕ್ಕೇನು ಕಾರಣ? ಅದು ಅವರಿಗೂ ಗೊತ್ತಿರಲಿಕ್ಕಿಲ್ಲ. ಆದರೆ ಜನರಿಗೆ ಮಾತ್ರ ಯಾವುದಕ್ಕೂ ಬಜೆಟ್ ಮುಗಿದ ಅನಂತರ ನಿರ್ಧಾರವನ್ನು ಪ್ರಕಟಿಸ್ತೀನಿ ಎನ್ನುವ ಭರವಸೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರೇನೂ ಹೊಸ ಬಜೆಟ್ಟನ್ನು ಶೂನ್ಯದಿಂದ ಉದ್ಭವವಾಗುವಂತೆ ಮಾಡುವುದು ಸಾಧ್ಯವಿಲ್ಲ. ಈಗಾಗಲೇ 'ಜಗದೀಶ ಶೆಟ್ಟರ್ ಮಂಡಿಸಿದ ಬಜೆಟ್ ಇದೆ. ಅದಕ್ಕೆ ಸಿದ್ದರಾಮಯ್ಯ ಅವರೂ ಸದಸ್ಯರಾಗಿದ್ದ ವಿಧಾನ ಮಂಡಲ ಲೇಖಾನುದಾನವನ್ನೂ ನೀಡಿದೆ.
ಚಾಲ್ತಿ ವರ್ಷಕ್ಕೆ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ನೆರವು, ರಾಜ್ಯ ಹಿಂದಕ್ಕೆ ಕೊಡಬೇಕಾಗಿರುವ ಸಾಲ - ಬಡ್ಡಿಯ ಮೊತ್ತ ಎಲ್ಲವೂ ಈಗಾಗಲೇ ಗೊತ್ತಾಗಿರುವ ವಿಷಯ. ಅದರಲ್ಲಿ ಹೆಚ್ಚಾಗಿ ಬದಲಾವಣೆ ಸಾಧ್ಯವಿಲ್ಲ. ಖರ್ಚನ್ನು ಕಡಿಮೆ ಮಾಡುವ ಮಾತನ್ನೇ ಇತ್ತೀಚೆಗೆ ಸರ್ಕಾರಗಳು ಕೈ ಬಿಟ್ಟಿವೆ, ಹೀಗಾಗಿ "ನೂತನ ಬಜೆಟ್ ತಯಾರಿಕೆಗೆ" (ಅವರು ಮುಖ್ಯಮಂತ್ರಿಯಾಗಿ ಮಂಡಿಸುವ ಮೊಟ್ಟ ಮೊದಲ ಬಜೆಟ್) ಸಿದ್ದರಾಮಯ್ಯ ಅವರೇನೂ ವಿಪರೀತವಾದ ಚಿಂತನೆ, ಲೆಕ್ಕಾಚಾರಗಳಲ್ಲಿ ಕಾಲ ಕಳೆಯಬೇಕಾದ ಅವಶ್ಯಕತೆ ಇಲ್ಲ. ಬಜೆಟ್ ಸಿದ್ಧತೆಯನ್ನೇ ನೆಪಮಾಡಿಕೊಂಡು ಇತರ ನಿರ್ಧಾರಗಳನ್ನು ಮುಂದಕ್ಕೆ ಹಾಕಬಾರದು. ಉದಾಹರಣೆಗೆ ಈಗ ನಡೆದ ವೃತ್ತಿ ಶಿಕ್ಷಣ ಕಾಲೇಜುಗಳ ಪ್ರವೇಶದ ನಿಯಮಗಳಿಗೆ ಸಂಬಂಧಿಸಿದಂತೆ, ಸರ್ಕಾರ ಮಾಡಲೇ ಬೇಕಾಗಿದ್ದ ಕೆಲಸವನ್ನು ಸಕಾಲದಲ್ಲಿ ಮಾಡಿದ್ದರೆ ಲಕ್ಷಾಂತರ ಯುವಕ-ಯುವತಿಯರ ಶೈಕ್ಷಣಿಕ ಭವಿಷ್ಯದ ಮುಂದೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕುವುದನ್ನು ತಪ್ಪಿಸಬಹುದಾಗಿತ್ತು. ನಿಜ. ಇದು ಮುಖ್ಯಮಂತ್ರಿಯವರೇ ಇಟ್ಟುಕೊಂಡಿರುವ ಖಾತೆ ಅಲ್ಲ. ಆದರೆ ಸರ್ಕಾರದ ಮೊಟ್ಟ ಮೊದಲ ದೊಡ್ಡ ಜವಾಬ್ದಾರಿಯ ನಿರ್ವಹಣೆಯಲ್ಲೇ ವಿಳಂಬ ರಾಕ್ಷಸನ ಹಾವಳಿಗೆ ಅವಕಾಶವನ್ನು ಮಾಡಿಕೊಟ್ಟಿದ್ದು ಒಳ್ಳೆಯ ಲಕ್ಷಣವಲ್ಲ.
ಈಗಾಗಲೇ ವಿತ್ತೀಯ ವರ್ಷದ ಮೊದಲ ಮೂರು ತಿಂಗಳು ಕಳೆದು ಹೋಗಿದೆ. ನೂತನ ಕಾಂಗ್ರೆಸ್ ಸರ್ಕಾರದ "ಹೊಸ ಬಜೆಟ್‌" ವಿಧಾನಮಂಡಲದ ಅಂಗೀಕಾರ ಮುದ್ರೆಯನ್ನು ಪಡೆಯುವ ವೇಳೆಗೆ ವರ್ಷದಲ್ಲಿ ಮೂರನೆಯ ಒಂದು ಭಾಗ. ಕಳೆದೇ ಹೋಗಿರುತ್ತದೆ. ಸದ್ಯದಲ್ಲಿ ಪ್ರತಿಪಕ್ಷಗಳು ಬೀದಿಗಿಳಿದು ಹೋರಾಡುವಂತಹ ಪರಿಸ್ಥಿತಿಯಲ್ಲಿ ಇಲ್ಲ. ಸರ್ಕಾರದ ಕೆಲಸಕ್ಕೆ ನಿಜವಾದ ಅರ್ಥದಲ್ಲಿ ಆರಂಭ ಅಂತ್ಯ ಎನ್ನುವುದೇ ಇಲ್ಲ. ಇದು ಕೃಷಿ ಹಂಗಾಮಿನ ಆರಂಭದ ದಿನಗಳು. ಮುಂದಿನ ಆಹಾರ ವರ್ಷದ ಬೆಂಬಲ ಬೆಲೆ, ಕಬ್ಬಿಗೆ ಕಾರ್ಖಾನೆಗಳು ಕೊಡಲೇ ಬೇಕಾದ ಸಲಹಾ ಬೆಲೆಗಳನ್ನು ನಿರ್ಧರಿಸಬೇಕಾದ ದಿನಗಳಿವು. ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರ ಸಮಿತಿಯ ನಿರ್ಧಾರವೂ ಪ್ರಕಟವಾಗಿದೆ. ಆ ದಿಕ್ಕಿನಲ್ಲಿ ರಾಜ್ಯ ಸರ್ಕಾರ ಏನೂ ಮಾಡಿದಂತಿಲ್ಲ. ಇಂತಹ ಸಮಸ್ಯೆಗಳನ್ನು ಸರ್ಕಾರ ಎದುರಿಸಲೇಬೇಕು.

ಕಾಂಗ್ರೆಸ್ಸಿನ ವಿದ್ಯಮಾನ: ಕಾಂಗ್ರೆಸ್ಸಿನಲ್ಲಿ ಈಗ ಏನಾದರೂ ಆಂತರಿಕ ಚಟುವಟಿಕೆಗಳು ನಡೆಯಬೇಕಾದರೆ ಈಗಿನ ಸಮಯ ಪ್ರಶಸ್ತವಾಗಿದೆ. ಈಗ ತಾನೇ ಕರ್ನಾಟಕ ಕಾಂಗ್ರೆಸ್ ವ್ಯವಹಾರಗಳ ಉಸ್ತುವಾರಿಯ ಹೊಣೆಯನ್ನು ಹೊತ್ತಿರುವ ಹಿರಿಯ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಅವರು ಸಾಕು - ಬೇಕಾದಷ್ಟು ಉಪದೇಶ, ಎಚ್ಚರಿಕೆಯನ್ನು ನೀಡಿ ಹೋಗಿದ್ದಾರೆ. ಮುಖ್ಯಮಂತ್ರಿಯಾಗಿ ನೇಮಕಗೊಂಡ ಅನಂತರ ಸುಮಾರು ಒಂದೂವರೆ ತಿಂಗಳ ಕಾಲ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕಾರ್ಯಾಲಯಕ್ಕೇ ಹೋಗಿರಲಿಲ್ಲ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ॥ ಪರಮೇಶ್ವರ ಅವರು ಅಧಿಕಾರಸ್ಥ ಕಾಂಗ್ರೆಸ್ಸಿಗರೆಲ್ಲ ಕಾಂಗ್ರೆಸ್ ಕಾರ್ಯಾಲಯಗಳಿಗೆ ಹೋಗಿ, ಕಾರ್ಯಕರ್ತರ ಜತೆ ಸಂಪರ್ಕವನ್ನು ಇಟ್ಟುಕೊಳ್ಳಬೇಕೆಂದು ಮನವಿ ಮಾಡಿದ್ದರೂ, ಅದನ್ನು ಮಾನ್ಯ ಮಾಡಿದವರು ಕೆಲವರೇ. ಉಳಿದವರು, ಅವರವರ ಕ್ಷೇತ್ರಗಳಿಗೆ ಹೋದಾಗಲಾದರೂ ಪಕ್ಷದ ಸ್ಥಳೀಯ ಕಾರ್ಯಾಲಯಗಳಿಗೆ ಭೇಟಿ ಕೊಡುತ್ತಿದ್ದರೋ ಇಲ್ಲವೋ ಗೊತ್ತಿಲ್ಲ.
ಇಂತಹ ಸಣ್ಣ ವಿಚಾರಗಳೇ ಮುಂದೆ ಅವಕಾಶ ಸಿಕ್ಕಾಗ ಭಿನ್ನಾಭಿಪ್ರಾಯಗಳು ದೊಡ್ಡ ರೀತಿಯಲ್ಲಿ ಬೆಳೆಯುವುದಕ್ಕೆ ಅವಕಾಶ ಮಾಡಿಕೊಡುವುದು. ಈಗ ರಾಜ್ಯದಲ್ಲಿ ಹಾಗಾಗಿದೆ ಎಂದೇನೂ ಅಲ್ಲ. ಸಿದ್ದರಾಮಯ್ಯ - ಪರಮೇಶ್ವರ ಅವರು ಪರಸ್ಪರ ಭೇಟಿಯಾಗದೇ ಇರುವಂತಹದ್ದೇನೂ ಆಗಿಲ್ಲ. ಪ್ರಮುಖ ವಿಚಾರಗಳಲ್ಲಿ ಇಬ್ಬರೂ ಸಹಮನಸ್ಕರೇ ಎನ್ನುವ ಭಾವನೆ ಮೂಡಿಸಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸದೇ ಹೋದರೂ ಪರಸ್ಪರ ಸೌಹಾರ್ದವಿಲ್ಲವೆನ್ನುವುದಕ್ಕೂ ಆಸ್ಪದವನ್ನು ಕೊಟ್ಟಿಲ್ಲ. ದಿಗ್ವಿಜಯ ಸಿಂಗ್ ರಾಜ್ಯದ ಭೇಟಿಯ ಅನಂತರ ಕಾಂಗ್ರೆಸ್ಸಿನಲ್ಲಿ ಏನಾದರೂ, ಬದಲಾವಣೆಗಳಾಗುವುದೆನ್ನುವ ನಿರೀಕ್ಷೆ ಅನೇಕರಲ್ಲಿದೆ. ಅದು ಸದ್ಯಕ್ಕೆ ಪ್ರಕಟವಾಗುವಂತದ್ದಲ್ಲ.

ಬಿಜೆಪಿ - ಯಡಿಯೂರಪ್ಪ: ಭಾರತೀಯ ಜನತಾ ಪಾರ್ಟಿಯ ಸಂಪ್ರದಾಯದಂತೆ, ಹಿಂದೆಲ್ಲ ಪಕ್ಷದ ನಾಯಕರು, ಕಾರ್ಯಕರ್ತರು, ಬೇರೆ ಅಗತ್ಯವಾದ ಕೆಲಸವಿಲ್ಲದೇ ಹೋದಾಗಲೆಲ್ಲ ಯಾರಿಂದಲೂ ಆಹ್ವಾನವನ್ನು ಬಯಸದೇ ಪಕ್ಷದ ಕಾರ್ಯಾಲಯಕ್ಕೆ ಭೇಟಿ ಕೊಡುತ್ತಿದ್ದರು. ದೆಹಲಿಯಲ್ಲಿ ವಾಜಪೇಯಿ ಅವರೇ ಅನೇಕ ಬಾರಿ (ಪ್ರಧಾನಿಯಾಗಿದ್ದಾಗ ಅಲ್ಲ) ಅನಿರೀಕ್ಷಿತವಾಗಿ ಬಿಜೆಪಿ ಕಾರ್ಯಾಲಯದಲ್ಲೂ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯದಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಅದು ಅವರ ರಾಜಕೀಯ ಸಂಸ್ಕೃತಿ. ಅವರು "ನಿಷ್ಕ್ರಿಯವಾಗಿ" ದಶಕ ಕಳೆದರೂ, ಇನ್ನೂ ಜನ ಅದನ್ನು ನೆನಪಿಗೆ ತಂದುಕೊಳ್ಳುತ್ತಾರೆ.
ಈಗ ಕರ್ನಾಟಕ ಬಿಜೆಪಿಯ ಅನೇಕ ನಾಯಕರು, ಕಾರ್ಯಕರ್ತರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮತ್ತೆ ಪಕ್ಷಕ್ಕೆ "ಸಕಾಲ ಮರ್ಯಾದೆಯಿಂದ" ಹಿಂತಿರುಗಿದರೆ ಒಳ್ಳೆಯದೆಂದು ಭಾವಿಸಿರುವುದು ನಿಜ.
ಯಡಿಯೂರಪ್ಪ ಅವರನ್ನು ಕರೆತರಲು ಕೆಲವು ಹಿರಿಯರು, ಅನೇಕ ಕಿರಿಯರು ಪ್ರಯತ್ನಿಸಿರುವುದೂ ನಿಜ. ಆದರೆ ಯಡಿಯೂರಪ್ಪ ಅವರು ಪಕ್ಷವನ್ನು ಬಿಟ್ಟು ಹೊರಗೆ ಹೋಗಲೇಬೇಕಾದ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆ, ಚುನಾವಣೆಯ ಪ್ರಚಾರ ಸಮರದ ಕಾಲದಲ್ಲಿ ಎರಡೂ ಕಡೆಯವರು ಪರಸ್ಪರ ನಿಂದನೆಯಲ್ಲಿ ಬಳಸಿದ್ದ ಭಾಷೆ, ಹಾಗೂ ಪಕ್ಷದ ಹಿರಿಯ ನಾಯಕ ಆಡ್ವಾಣಿ ಅವರ ಮೇಲೆ ವೈಯಕ್ತಿಕವಾಗಿ ಭ್ರಷ್ಟಾಚಾರದ ಆರೋಪವನ್ನು ಮಾಜಿ ವಕ್ತಾರ ಧನಂಜಯಕುಮಾರ್ ಅವರೇ ಹೊರಿಸಿದ ರೀತಿ-ನೀತಿಯನ್ನು ಕಂಡು ರೇಗಿರುವ ಬಿಜೆಪಿ ಸದಸ್ಯರೂ ಇದ್ದಾರೆ ಎನ್ನುವುದನ್ನು ಪಕ್ಷದಲ್ಲಿ ಅನೇಕರು ಮರೆತಿಲ್ಲ.
ಈಗಿನ ವಾತಾವರಣದಲ್ಲಿ ಅವರು ಬಹಿರಂಗವಾಗಿ ತಮ್ಮ ಅನಿಸಿಕೆಗಳನ್ನು ಪ್ರಕಟಿಸುತ್ತಿಲ್ಲ ಅಷ್ಟೇ. ಅದನ್ನು ಯಡಿಯೂರಪ್ಪ ನಾಯಕತ್ವದ ಅನಿವಾರ್ಯತೆಗೆ ಶರಣು ಎಂದೇನೂ ಯಾರೂ ಭಾವಿಸಬೇಕಾಗಿಲ್ಲ. ವಿಧಾನಸಭೆಯಲ್ಲಿ ಪ್ರಾತಿನಿಧ್ಯವೇ ಇಲ್ಲದಿರುವಾಗಲೂ ಬಿಜೆಪಿ ರಾಜ್ಯದಲ್ಲಿ ಒಂದು ರಾಜಕೀಯ ಶಕ್ತಿಯಾಗಿತ್ತು. ಆದರೆ ಈಗ ಅದೇಕೋ ಪಕ್ಷದ ಹಿರಿಯ - ಕಿರಿಯರಲ್ಲಿ ಹಿಂದಿನ ಛಲ ಕಂಡು ಬರುತ್ತಿಲ್ಲ. ಪ್ರಾಯಶಃ ಪಕ್ಷದ ಕಾರ್ಯಕರ್ತರಿಗೆ ಸದ್ಯಕ್ಕೆ ಮೌನದಿಂದಿರಬೇಕೆನ್ನುವ ಆದೇಶ ಮೇಲಿನಿಂದ ಬಂದಿರಬೇಕು.

ಲೋಕಸಭೆ ಚುನಾವಣೆ:  ಲೋಕಸಭೆ ಚುನಾವಣೆಗೆ ಇನ್ನು ಉಳಿದಿರುವುದು ಹತ್ತು ತಿಂಗಳಷ್ಟೇ. ಅದಕ್ಕೆ ಮುಂಚೆ ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಚತ್ತೀಸಗಡ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಸಹಜವಾಗಿಯೇ ಆ ರಾಜ್ಯಗಳಲ್ಲಿ ಖಡಾಖಡಿ ಹೋರಾಟಕ್ಕೆ ಸಜ್ಜಾಗಬೇಕಾದ ಕಾಂಗ್ರೆಸ್ - ಬಿಜೆಪಿ ಪಕ್ಷಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಚಟುವಟಿಕೆ ಆರಂಭವಾಗಿದೆ. ಆದರೆ ಕರ್ನಾಟಕ ಕಾಂಗ್ರೆಸ್ - ಬಿಜೆಪಿ ನಾಯಕರಿಗೂ ಆ ರಾಷ್ಟ್ರೀಯ ಮಟ್ಟದ ವ್ಯವಹಾರಕ್ಕೂ ಏನೇನೂ ಸಂಬಂಧವಿಲ್ಲ. ಜಾತ್ಯತೀತ ಜನತಾದಳದ ಕಾರ್ಯಕರ್ತರ ಸಮುದಾಯಗಳಲ್ಲಿ ಯಾವುದೇ ರೀತಿಯ ದೊಡ್ಡ ಸಂಚಲನವನ್ನು ನಿರೀಕ್ಷಿಸುವಂತಿಲ್ಲ. ಅಲ್ಲಿ ರಾಜಕೀಯ ಚಟುವಟಿಕೆ ಏನಿದ್ದರೂ ಮೇಲಿನಿಂದಲೇ ಆರಂಭವಾಗಬೇಕು. ಪಕ್ಷದ ರಾಜ್ಯ ವಿಭಾಗದ ಅಧ್ಯಕ್ಷ ಕುಮಾರಸ್ವಾಮಿ ಅವರೇ ಶಾಸಕಾಂಗ ಪಕ್ಷದ ನಾಯಕರೂ ಆಗಿ, ವಿಧಾನ ಸಭೆಯಲ್ಲಿನ ವಿರೋಧ ಪಕ್ಷದ ನಾಯಕರೂ ಆಗಿರುವುದು ಹೊರಗಿನವರಿಗೆ ಸ್ವಲ್ಪ ವಿಚಿತ್ರ ಎನಿಸಿದರೂ, ಅದನ್ನು ನಿವಾರಿಸಿಕೊಳ್ಳುವ ಶಕ್ತಿ ಪಕ್ಷಕ್ಕೆ ಇದೆ.
ಸದ್ಯದಲ್ಲಿ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕರಾಗಿ ತಮ್ಮ ಸ್ಥಾನ-ಮಾನದ ಸೌಲಭ್ಯ, ಪರಿಕರಗಳನ್ನು ಪಡೆಯುವುದರಲ್ಲಿ ಆಸಕ್ತರಾಗಿದ್ದರೂ, ತಮ್ಮ ನೂತನ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕೆ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಅವರೇನೂ ಸುಮ್ಮನೆ ಕೂತಿಲ್ಲ. ಪಕ್ಷದ ಹಿರಿಯ ಹಾಗೂ ಏಕೈಕ ಮಾರ್ಗದರ್ಶಿ, ಮಾಜಿ ಪ್ರಧಾನಿ ದೇವೇಗೌಡರ ಗಮನ ಈಗಾಗಲೇ ಲೋಕಸಭೆ ಚುನಾವಣೆಯತ್ತ ಹರಿದಂತಿದೆ.
ಹಿಂದೆ ಅವರು ಲೋಕಸಭೆ ಚುನಾವಣೆ ಕಾಲದಲ್ಲಿ ಅದೇ ತಮ್ಮ ರಾಜಕೀಯ ಜೀವನದ ಕೊನೆಯ ಚುನಾವಣೆ ಎಂದು ಪ್ರಕಟಿಸಿದ್ದು ಉಂಟು. ಆಗ ಅವರ ಪಕ್ಷದ ಹಿರಿಯರು, ಅವರ ಕುಟುಂಬದ ಸದಸ್ಯರು ಇದನ್ನೆಲ್ಲಾ ಹೀಗೇಕೆ ಈಗಲೇ ಹೇಳ್ತೀರಿ ಎಂದು ರೇಗಿದ್ದೂ ನಿಜ. ಈಗ ದೇವೇಗೌಡರು ವೈಯಕ್ತಿಕವಾಗಿ ಲೋಕಸಭೆ ಚುನಾವಣೆಯ ಅಖಾಡಾದ ಪ್ರವೇಶಕ್ಕೆ ಮಾನಸಿಕವಾಗಿ ಸಿದ್ಧರಾಗಿರುವಂತಿದೆ. ಅವರು ತಮ್ಮ ಪಕ್ಷವನ್ನು ಮುಂದೆ ರಚನೆಯಾಗಲಿರುವ ಯಾವ ರಂಗದ ಜತೆ ನಡೆಸುತ್ತಾರೆ ಎನ್ನುವುದೇ ಕುತೂಹಲದ ವಿಚಾರ.

ಕಿಡಿಗೇಡಿತನ: ಮುಲಾಯಂ ಸಿಂಗ್ ಯಾದವ್, ನಿತೀಶ್ ಕುಮಾರ್, ಮಮತಾ ಬ್ಯಾನರ್ಜಿ, ನವೀನ ಪಟ್ನಾಯಕ್, ಜಯಲಲಿತಾ, ನರೇಂದ್ರ ಮೋದಿ, ಅವರ ಏಕವ್ಯಕ್ತಿ ನಾಯಕರ ಪಕ್ಷಗಳ ಆಡಳಿತದಲ್ಲಿ ದೇಶದ ಜನಸಂಖ್ಯೆಯ ಅರ್ಧ ಭಾಗದಷ್ಟು ಜನ ಜೀವಿಸುತ್ತಿದ್ದಾರೆನ್ನುವ ಸತ್ಯವನ್ನು ಭಾರತೀಯರಿಗೆ ತಿಳಿಯಲು ಒಬ್ಬ ಇಂಗ್ಲಿಷ್ ಪ್ರೊಫೆಸರ್ ಬೇಕಾಯಿತು ಎನ್ನುವುದು ನಿಜವೇ?

- ಸತ್ಯ
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.