ಆ ನೂರು ದಿನಗಳಲ್ಲಿ ಹತ್ತುಲಕ್ಷ ಜನರ ಹತ್ಯೆ ನಡೆದುಹೋಯಿತು!
ಬೆಳಗಿನಿಂದ ಮನಸ್ಸಿನಲ್ಲಿ ಏನೋ ಖಿನ್ನತೆ, ವಿಷಾದ. ಭಾವಕೋಶಗಳೆಲ್ಲ ನಿಸ್ತೇಜವಾದ...
ಬೆಳಗಿನಿಂದ ಮನಸ್ಸಿನಲ್ಲಿ ಏನೋ ಖಿನ್ನತೆ, ವಿಷಾದ. ಭಾವಕೋಶಗಳೆಲ್ಲ ನಿಸ್ತೇಜವಾದ ಭಾವ. ಇಡೀ ವಾತಾವರಣದಲ್ಲಿ ಹರಡಿದ ಮ್ಲಾನವತೆ. ಅದು ನಮ್ಮ ಭಾವಕ್ಕೆ ಸಿಗದ ಸ್ಮಶಾನಸದೃಶ ಪರಿಸರ. ಈ ಭೂಮಿ, ಅದರ ಮೇಲೆ ಜನ ಇರುವ ತನಕ ಈ ನೆನಪು, ವಿಷಾದವನ್ನು ಅಳಿಸಿ ಹಾಕಲು ಸಾಧ್ಯವೇ ಇಲ್ಲ.
'ನೀವು ನಿಂತ ಜಾಗವಿದೆಯಲ್ಲ, ಇಲ್ಲಿ ಏನಿಲ್ಲವೆಂದರೂ ಎರಡೂವರೆ ಲಕ್ಷ ಜನರನ್ನು ಸಮಾಧಿ ಮಾಡಲಾಗಿದೆ..'
ಹಾಗಂತ ರವಾಂಡಾದ ಸ್ನೇಹಿತ ಹೇಳಿದಾಗ ಮಾತೇ ಹೊರಡಲಿಲ್ಲ. ರವಾಂಡಾದ ರಾಜಧಾನಿ ಕಿಗಾಲಿಯಲ್ಲಿರುವ ಜಿನೋಸೈಡ್ ಸೈಟ್ (ಸಾಮೂಹಿಕ ಹತ್ಯಾಕಾಂಡ ಸ್ಮಾರಕ ಪ್ರದೇಶ)ದಲ್ಲಿ ನಾನಂತೂ ಸ್ತಂಭೀಭೂತನಾಗಿ ನಿಂತು ಬಿಟ್ಟೆ. ಕಾರಣ ಆ ಹತ್ಯಾಕಾಂಡದ ದೃಶ್ಯಗಳನ್ನು ಕಲ್ಪಿಸಿಕೊಳ್ಳಲು, ಊಹಿಸಲು ಸಾಧ್ಯವಿರಲಿಲ್ಲ. ಭಾವತಂತುಗಳು ಸ್ತಬ್ಧವಾದವು. ಎರಡೂವರೆ ಲಕ್ಷ ಜನರ ಮಾರಣಹೋಮ!? ಸಂಖ್ಯೆಗೆ ಅರ್ಥವೇ ಇರಲಿಲ್ಲ. ಯಾಕೆಂದರೆ ಆ ಸಂಖ್ಯೆಯೆಂಬುದು ಬರೀ ಒಂದು ಸೌಂಡ್ ಆಗಿತ್ತು. ಮಾತು, ಪ್ರತಿಕ್ರಿಯೆಗಳಿಗೆಲ್ಲ ಅರ್ಥವೇ ಇರಲಿಲ್ಲ. ಆದರೆ ಆ ಹತ್ಯಾಕಾಂಡದಲ್ಲಿ ನರಳಿ ಪ್ರಾಣಬಿಟ್ಟವರ ಚೀತ್ಕಾರ, ಆಕ್ರಂದನ, ನೋವು, ಬೊಬ್ಬೆ, ದುಃಖ ಒಮ್ಮೆ ಭರ್ಜಿಯಿಂದ ಹಾಕಿ ತಿವಿದಂತಾಯಿತು.
ಅಂದು ಹತ್ಯಾಕಾಂಡ ಸ್ಮಾರಕ ಸಮಾಧಿಗೆ ಬೆಳಗಿನಿಂದ ನೂರಾರು ಜನ ಕೈಯಲ್ಲಿ ಹೂಗುಚ್ಛ ಹಿಡಿದು ಬರುತ್ತಿದ್ದರು. ತಮ್ಮ ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ, ಬಂಧು-ಬಾಂಧವರ ಹೆಸರುಗಳನ್ನು ಬರೆದು, ಹತ್ಯೆಯಾದವರ ಹೆಸರುಗಳನ್ನು ಬರೆದ ಅಮೃತಶಿಲೆಯ ಕೆಳಗಡೆ ಹೂಗುಚ್ಛವಿಟ್ಟು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಒಬ್ಬೊಬ್ಬರು ಬರುವಾಗಲೂ ಕಣ್ಣೀರ ಕಡಲನ್ನು ತುಂಬಿಕೊಂಡು ಸಮಾಧಿಗೆ ಬಂದು ಚೆಲ್ಲಿ ಹೋಗುತ್ತಿದ್ದಾರೆಂದು ಅನಿಸುತ್ತಿತ್ತು.
ಯಾರೂ ಸಹ ಯಾರನ್ನೂ ಸಂತೈಸುವ, ಸಮಾಧಾನಪಡಿಸುವ ಸ್ಥಿತಿಯಲ್ಲಿ ಇರಲಿಲ್ಲ. ಎಲ್ಲರೂ ಕಳಕೊಂಡವರೇ. ಎಲ್ಲರೂ ಸಮಾನ ದುಃಖಿಗಳೇ. ಸಮೂಹಸನ್ನಿಗೆ ಒಳಗಾದವರಂತೆ ಸಮಾಧಿಯಲ್ಲಿ ಜನ ದುಃಖತಪ್ತರಾಗಿ ಹೊರಳಾಡುತ್ತಿದ್ದರೆ, ಅವರ ಆಕ್ರಂದನ ಮುಗಿಲು ಮುಟ್ಟುತ್ತಿದ್ದರೆ, ಅಲ್ಲಿ ಕ್ಷಣಕ್ಷಣವನ್ನು ಕಳೆಯುವುದು ಸಹ ಅಸಹನೀಯವೆನಿಸುತ್ತಿತ್ತು. ಅಲ್ಲಿ ಯಾವ ಭಾವನೆಗಳಿಗೂ ಅರ್ಥವಿರಲಿಲ್ಲ. ಇದು ಒಂದು ದಿನದ ಕತೆಯಲ್ಲ. ವರ್ಷವಿಡೀ ಇದೇ ದೃಶ್ಯ. ನಿರ್ದಯಿ, ನಿರ್ಭಾವುಕ ಸಮಾಧಿ ಸಹ ಎಂಥ ಭಾವೋತ್ಕರ್ಷವನ್ನು ಹುಟ್ಟಿಸಿ, ಅವನ್ನೆಲ್ಲ ಅಲ್ಲಿಯೇ ಹೊಸಕಿ ಹಾಕಿಬಿಡಬಹುದು!?
'ಇಪ್ಪತ್ತು ವರ್ಷಗಳ ಹಿಂದೆ ನನ್ನ ತಂದೆ-ತಾಯಿ, ತಮ್ಮ ಹಾಗೂ ಅಕ್ಕನನ್ನು ನನ್ನ ಕಣ್ಣ ಮುಂದೆಯೇ ಕತ್ತರಿಸಿ ಹಾಕಿ ಬಿಟ್ಟರು. ಆಗ ನನಗೆ ಹನ್ನೊಂದು ವರ್ಷ. ಆ ಆಘಾತದಿಂದ ಮೂರ್ಛೆ ಹೋಗಿ ರಕ್ತದ ಮಡುವಿನಲ್ಲಿ ಬಿದ್ದು ಬಿಟ್ಟೆ. ನಾನು ಸತ್ತಿದ್ದೇನೆಂದು ಆ ಚಾಂಡಾಲರು ನನ್ನನ್ನು ಬಿಟ್ಟರು. ಇಲ್ಲದಿದ್ದರೆ ನನ್ನನ್ನು ಜೀವಸಹಿತ ಬಿಡುತ್ತಿರಲಿಲ್ಲ. ಸಾಯಿಸಿದ್ದರೇ ಎಷ್ಟೋ ಚೆನ್ನಾಗಿರುತ್ತಿತ್ತು. ಕ್ಷಣಕ್ಷಣವೂ ಈ ಸಂಕಟ, ನೋವು, ಕಹಿನೆನಪಿನಲ್ಲಿ ಬೇಯುತ್ತಿದ್ದೇನೆ.' ಎಂದು ಸಮಾಧಿಗೆ ಹಣೆಹಚ್ಚಿ ಕುಳಿತವನ ಬೆನ್ನು ಮುಟ್ಟಿದಾಗ ಅವನಿಂದ ಹೊರಹೊಮ್ಮಿದ ದುಃಖಭರಿತ ಮಾತುಗಳನ್ನು ಕೇಳಿ ಯಾಕಾದರೂ ಮಾತಾಡಿಸಿದೆನೋ ಎನಿಸಿತು. ನನ್ನ ಮೌನಕ್ಕೂ ಅಲ್ಲಿ ಯಾವುದೇ ಅರ್ಥವಿರಲಿಲ್ಲ.
ರವಾಂಡಾ ಎಂದ ತಕ್ಷಣ ಬಹುತೇಕ ಜನರ ಮುಂದೆ ಬರುವುದೇ ಸಾಮೂಹಿಕ ಹತ್ಯಾಕಾಂಡ (genocide)ದ ದೃಶ್ಯಗಳ ಮೆರವಣಿಗೆ. ರವಾಂಡಾ ಎಂದಾಕ್ಷಣ ನಮ್ಮ ಕೈ ಜಗ್ಗಿ ಹಿಡಿದೆಳೆಯುವುದು ಸಹ ಈ ನರಮೇಧವೇ. ರವಾಂಡಾ ಕುಪ್ರಸಿದ್ಧವಾಗಿರುವುದು ಈ ಕಾರಣದಿಂದಲೇ. ಅದೇ ಸಮಾಧಿಯ ಮೇಲೆ ಈಗ ನೂತನ ರವಾಂಡಾ ಕಟ್ಟಲು ಹೊರಟಿರುವುದು ಸಹ ಅಷ್ಟೇ ಸತ್ಯ.
ರವಾಂಡಾಕ್ಕೆ ಹೊರಡುವ ಮುನ್ನ ಹತ್ಯಾಕಾಂಡಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುವಾಗ ಅಂಥ ದೇಶಕ್ಕೆ ಹೋಗುವುದು ಹೇಗೆ ಎಂದು ಮನಸ್ಸು ಹೇಳುತ್ತಿದ್ದರೂ, ಮಾನವ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಹತ್ಯಾಕಾಂಡ ಜರುಗಿದ ದೇಶ ಈಗ ಹೇಗಿರಬಹುದು, ಅಲ್ಲಿನ ಜನ ಹೇಗೆ ಈ ನೋವನ್ನು ಜೀರ್ಣಿಸಿಕೊಂಡು ಬದುಕುತ್ತಿರಬಹುದು, ಇತಿಹಾಸದಿಂದ ಅಲ್ಲಿನ ಜನ ಎಂಥ ಪಾಠ ಕಲಿತಿರಬಹುದು ಎಂಬುದನ್ನು ತಿಳಿದುಕೊಳ್ಳಬೇಕೆಂಬ ತವಕ ನನ್ನನ್ನು ರವಾಂಡಾದ ತನಕ ಕೈ ಹಿಡಿದು ಕರೆದುಕೊಂಡು ಬಂದಿತ್ತು.
ಅಂದು ಮಧ್ಯಾಹ್ನ ಕಿಗಾಲಿ ವಿಮಾನ ನಿಲ್ದಾಣದಲ್ಲಿಳಿದು, ಊರೊಳಗೆ ಹೋಗುತ್ತಿದ್ದರೆ ರಕ್ತಚಾಪೆ ಮೇಲೆ ನಡೆದ ಅನುಭವದಂತೆ. ಅಡ್ಡಾದಿಡ್ಡಿ ಬಿದ್ದ ಶವಗಳನ್ನು ದಾಟಿ ನಡೆಯುತ್ತಿರುವ ನರಳಿಕೆಯಂತೆ. ಆ ಮೌನ ರಾತ್ರಿಯಲ್ಲಿ ದೇಶಕ್ಕೆ ದೇಶವೇ ಕಿಟಾರನೆ ಕಿರುಚಿದಂತೆ.
ಇಪ್ಪತ್ತು ವರ್ಷಗಳ ಹಿಂದೆ ರವಾಂಡಾದಲ್ಲಿ ನಡೆದಿದ್ದು ಇನ್ನೂ ಭೀಕರ, ಭಯಂಕರ. 1994ರ ಏಪ್ರಿಲ್ 6ರಂದು ರವಾಂಡಾ ಅಧ್ಯಕ್ಷ ಜುವೆನಲ್ ಹಬ್ಯಾರಿಮಾನ ತಂಜಾನಿಯಾದಿಂದ ಸ್ವದೇಶಕ್ಕೆ ಮರಳುತ್ತಿದ್ದರು. ಕಿಗಾಲಿ ವಿಮಾನ ನಿಲ್ದಾಣದಲ್ಲಿ ಅವರ ವಿಮಾನ ಇಳಿಯಲು ಇನ್ನು ಮೂರ್ನಾಲ್ಕು ನಿಮಿಷಗಳಿರುವಾಗ ಕ್ಷಿಪಣಿ ದಾಳಿಯಾಯಿತು. ಕ್ಷಣಾರ್ಧದಲ್ಲಿ ಅಧ್ಯಕ್ಷರ ವಿಮಾನ ಬೆಂಕಿಯ ಉಂಡೆಯಂತೆ ನೆಲಕ್ಕೆ ಅಪ್ಪಳಿಸಿತು. ಪ್ರಧಾನಿ ಸೇರಿ ವಿಮಾನದಲ್ಲಿದ್ದವರೆಲ್ಲ ಸತ್ತರು.
ಶುರುವಾಯಿತು, ದೇಶವ್ಯಾಪಿ ಕೋಲಾಹಲ, ಅರಾಜಕತೆ, ಜನಾಂಗೀಯ ಘರ್ಷಣೆ. ಜನ ಪರಸ್ಪರ ಬಡಿದಾಡಲು ಆರಂಭಿಸಿದರು. ಬಂದೂಕು, ಪಿಸ್ತೂಲು, ಮಚ್ಚು, ಲಾಂಗು, ಸಲಾಕೆ, ಸೈಜುಗಲ್ಲು, ಕೈಗೆ ಸಿಕ್ಕ ಆಯುಧಗಳಿಂದ ಬಡಿದಾಡಲು ಶುರು ಮಾಡಿದರು. ಸಣ್ಣಗೆ ಆರಂಭವಾದ ಈ ಜನಾಂಗೀಯ ಘರ್ಷಣೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದು ನಿಯಂತ್ರಿಸಲು ಸಾಧ್ಯವಾಗದ ಹಂತ ತಲುಪಿತು. ಕಾನೂನು, ಸುವ್ಯವಸ್ಥೆಯೆಲ್ಲ ಗಾಳು-ಮೇಳಾಯಿತು. ಕೊಚ್ಚು, ಕಡಿ, ಬಡಿ, ಸುಡು, ಸಾಯಿಸು... ಎಂಬುದು ಎಲ್ಲರ ಧ್ಯೇಯ ವಾಕ್ಯವಾಯಿತು.
ಈ ಘರ್ಷಣೆ ನೂರು ದಿನಗಳು ಕಾಲ ನಡೆಯಿತು. ಹಿಂದೆಂದೂ ಕಂಡು ಕೇಳರಿಯದಂಥ ನರಮೇಧ ನಡೆದು ಹೋಯಿತು. ಐದು ಲಕ್ಷಕ್ಕೂ ಅಧಿಕ ಮಹಿಳೆಯರು ಅತ್ಯಾಚಾರಕ್ಕೊಳಗಾದರು. ಏನಿಲ್ಲವೆಂದರೂ ಸುಮಾರು ಹತ್ತು ಲಕ್ಷ ಜನರ ಬರ್ಬರ ಹತ್ಯೆಯಾಯಿತು. ಜಗತ್ತಿನ ಇತಿಹಾಸದಲ್ಲಿ ನಡೆಯದ ಹೃದಯ ವಿದ್ರಾವಕ, ಮಾರಣ ಹೋಮ ನಡೆದು ಹೋಯಿತು. ಹತ್ಯಾಕಾಂಡದ ಭೀಕರತೆಯನ್ನು, ಸ್ಮಾರಕ ಭವನದಲ್ಲಿ ಉರಿಯುವ ಜ್ಯೋತಿಯ ಕೆಳಗೆ ಕೆಲವೇ ಸಾಲುಗಳಲ್ಲಿ ಹೀಗೆ ಬರೆಯಲಾಗಿದೆ- 'Thousands of families had been totally wiped out, with no one to remember or document their deaths. More than five lakh women were raped. The streets were littered with corpses.Dogs were eating the rotten flesh of their owners. The entire country smelt of the stench of death. Rwanda was dead.' 'ರವಾಂಡಾದ ಹತ್ಯಾಕಾಂಡದ ಬಗ್ಗೆ ತಿಳಿದುಕೊಳ್ಳಬೇಕೆನಿಸಿದರೆ, ಅದರ ಬಗ್ಗೆ ಓದಬೇಕೆನಿಸಿದರೆ ಧೈರ್ಯ ಬೇಕು' ಎಂದು ಸ್ನೇಹಿತ ಹೇಳಿದಾಗ ಆತನ ಮಾತು ಎಷ್ಟು ನಿಜ ಎಂದು ಒಂದು ಕ್ಷಣ ತಣ್ಣಗೆ ಕಂಪಿಸಿದೆ.
ರವಾಂಡಾದಲ್ಲಿ ಆಗಿದ್ದೇನು? ಏನು ಹಕೀಕತ್ತು? ಒಟ್ಟಿಗೆ ಬಾಳುತ್ತಿದ್ದವರು ಹಲವು ಜನ್ಮಗಳ ವೈರಿಗಳಂತೆ ಬಡಿದಾಡಿ ಸತ್ತಿದ್ದೇಕೆ? ಅಂಥ ಹಗೆತನವಾದರೂ ಏನು? ಅದೆಲ್ಲಿತ್ತು ಆ ಪರಿ ದ್ವೇಷ, ಆಕ್ರೋಶ? ನೂರು ದಿನಗಳಲ್ಲಿ ಹತ್ತು ಲಕ್ಷ ಜನ ಹತರಾಗುತ್ತಾರೆಂದರೆ ಏನರ್ಥ?
ನಿಮಗೆ ರವಾಂಡಾದ ಇತಿಹಾಸವನ್ನು ಸಂಕ್ಷಿಪ್ತವಾಗಿ ಹೇಳದಿದ್ದರೆ ಇದು ಅರ್ಥವಾಗೊಲ್ಲ. ರವಾಂಡಾದಲ್ಲಿ ಮೂರು ಕೋಮಿಗೆ ಸೇರಿದ ಜನರಿದ್ದಾರೆ. ಅವರ್ಯಾರೆಂದರೆ ಹುಟು, ಟುಟ್ಸಿ ಹಾಗೂ ತ್ವಾ. ಈ ಮೂವರೂ ಮೂಲತಃ ದನಗಾಹಿಗಳು ಹಾಗೂ ಬೇಟೆಗಾರರು. ಇವರ ಪೈಕಿ ಅತಿ ಹೆಚ್ಚು ಜಾನುವಾರುಗಳನ್ನು ಹೊಂದಿದವರು ಟುಟ್ಸಿಗಳು ಎಂದು ಕರೆಯಿಸಿಕೊಂಡರೆ ಉಳಿದವರು ಹುಟುಗಳು. ಬೇಟೆಗಾರಿಕೆಯಲ್ಲಿ ನಿರತರಾದ ತ್ವಾಗಳು ಅಲ್ಪಸಂಖ್ಯಾತರು (ಶೇ. 1ಕ್ಕಿಂತ ಕಡಿಮೆ). ಇವರೆಲ್ಲರೂ ಅವರ ಪಾಡಿಗೆ ಅವರಿದ್ದರು, ಸಂತೋಷದಿಂದ. ಯಾವಾಗ ಜರ್ಮನರು ರವಾಂಡಾಕ್ಕೆ 19ನೇ ಶತಮಾನದ ಅಂತ್ಯದಲ್ಲಿ ಕಾಲಿಟ್ಟರೋ, ಟುಟ್ಸಿ ಹಾಗೂ ಹುಟುಗಳ ನಡುವೆ ಜಾತಿ ವೈಷಮ್ಯ ಕಾಣಿಸಿಕೊಳ್ಳಲಾರಂಭಿಸಿತು. ನೋಡಲು ಕಟ್ಟುಮಸ್ತಾದ, ಎತ್ತರ ಶರೀರದ, ಕಂದು ಮೈ ಬಣ್ಣದ ಟುಟ್ಸಿಗಳ ಬಗ್ಗೆ ಪಕ್ಷಪಾತ ತೋರಲಾರಂಭಿಸಿದರು. ಅಷ್ಟೇ ಅಲ್ಲ, ಸರ್ಕಾರದ ಪ್ರಮುಖ ಹುದ್ದೆಗಳಿಗೆ ಅವರನ್ನು ನೇಮಿಸಿ ಟುಟ್ಸಿ ಹಾಗೂ ಹುಟುಗಳ ಮಧ್ಯೆ ವರ್ಗ ಸಂಘರ್ಷ ಮೂಡಿಸಿ ಬೆಂಕಿ ಹಚ್ಚುವ ಕೆಲಸ ಮಾಡಿದರು.
ಮೊದಲನೇ ಜಾಗತಿಕ ಸಮರದ ಬಳಿಕ ಜರ್ಮನ್‌ರು ತಮ್ಮ ವಸಹಾತುಗಳನ್ನು ಕಳೆದುಕೊಂಡರು. ಪರಿಣಾಮ, ರವಾಂಡಾದಲ್ಲಿ ಜರ್ಮನ್‌ರ ಪ್ರಾಬಲ್ಯ ಕ್ಷೀಣಿಸಲಾರಂಭಿಸಿತು. ಬೆಲ್ಜಿಯನ್‌ರು ಸಂಪೂರ್ಣ ನಿಯಂತ್ರಣ ತೆಗೆದುಕೊಂಡರು. ಇವರು ಬಂದವರೇ ಟುಟ್ಸಿ, ಹುಟು ಹಾಗೂ ತ್ವಾ ಎಂದು ವರ್ಗೀಕರಿಸಿ ಅವರಿಗೆಲ್ಲ ಜಾತಿ ಆಧರಿತ ಗುರುತಿನ ಪತ್ರ ನೀಡಿದರು. ತಮಾಷೆಯೇನೆಂದರೆ, ರವಾಂಡಾದ ಒಟ್ಟು ಜನಸಂಖ್ಯೆಯಲ್ಲಿ ಟುಟ್ಸಿಗಳು ಶೇಕಡಾ ಹತ್ತರಷ್ಟು ಹಾಗೂ ಹುಟುಗಳು ಶೇಕಡಾ ತೊಂಬತ್ತರಷ್ಟಿದ್ದರೂ, ಬೆಲ್ಜಿಯನ್‌ಗಳು ಪ್ರಮುಖ ಆಯಕಟ್ಟಿನ ಜಾಗಗಳಿಗೆ ಅಲ್ಪಸಂಖ್ಯಾತ ಟುಟ್ಸಿಗಳನ್ನೇ ನೇಮಿಸಿದರು.
ಹುಟುಗಳು ಉಲ್ಟಾ ಹೊಡೆದಿದ್ದು ಆಗ. ಬೆಲ್ಜಿಯನ್ನರ ಕಪಿಮುಷ್ಟಿಯಿಂದ ಬಿಡಿಸಿಕೊಂಡು ರವಾಂಡಾ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾಗ ಅಪಾಯದ ಮುನ್ಸೂಚನೆ ಅರಿತ ಪರಕೀಯರು (ಬೆಲ್ಜಿಯನ್‌ರು) ಈ ಎರಡೂ ಗುಂಪುಗಳ ಸ್ಥಾನಮಾನಗಳನ್ನು ಅದಲು ಬದಲು ಮಾಡಿಬಿಟ್ಟರು. ಬೆಲ್ಜಿಯನ್‌ರಿಗೆ ಬೀಸುವ ದೊಣ್ಣೆಯಿಂದ ಪಾರಾಗುವುದಷ್ಟೇ ಬೇಕಾಗಿತ್ತು. ಇದರ ಫಲವಾಗಿ, ಟುಟ್ಸಿಗಳಿದ್ದ ಆಯಕಟ್ಟಿನ ಜಾಗಗಳಿಗೆ ಹುಟುಗಳನ್ನು ನೇಮಿಸಿದರು. ಇದರಿಂದ ಸಹಜವಾಗಿ ಟುಟ್ಸಿಗಳು ಕ್ರುದ್ಧರಾದರು. ಇಬ್ಬರ ಮಧ್ಯೆ ಕಂದಕ ಜಾಸ್ತಿಯಾಯಿತು. ಇದು ಸುಮಾರು ಒಂದು ದಶಕದವರೆಗೆ ಮುಂದುವರಿಯಿತು. ಅಲ್ಲಲ್ಲಿ ಸಣ್ಣ ಪುಟ್ಟ ಹೊಡೆದಾಟ, ಕೊಲೆ, ಗದ್ದಲಗಳಾಗುತ್ತಿದ್ದವು. ಆದರೆ ಪರಿಸ್ಥಿತಿ ಹಾಗೇ ತಿಳಿಯಾಗುತ್ತಿತ್ತು.
ಆದರೆ ಒಳಗಿಂದೊಳಗೇ ಲಾವಾರಸ ಕುದಿಯುತ್ತಲೇ ಇತ್ತು. 1973ರಲ್ಲಿ ಅಧಿಕಾರಕ್ಕೆ ಬಂದ ಮೂಲತಃ ಹುಟು ಜನಾಂಗಕ್ಕೆ ಸೇರಿದ ಅಧ್ಯಕ್ಷ ಹಬ್ಯಾರಿಮಾನ ಸರ್ವಾಧಿಕಾರಿಯಂತೆ ವರ್ತಿಸಲಾರಂಭಿಸಿದ. ಟುಟ್ಸಿಗಳನ್ನು ಸರ್ಕಾರದ ಎಲ್ಲ ಹುದ್ದೆಗಳಿಂದ ಕಿತ್ತು ಹಾಕಿದ. ಇದರಿಂದ ಟುಟ್ಸಿಗಳು ಬೀದಿಗಳಿದರು. ಅಧಿಕಾರಾರೂಢ ಹುಟುಗಳ ಪದಚ್ಯುತಿಗೆ ಸಂಚು ರೂಪಿಸಲಾರಂಭಿಸಿದರು. ನೆರೆಹೊರೆಯ ದೇಶಗಳ ನೆರವನ್ನು ಪಡೆಯಲು ಅಂತಾರಾಷ್ಟ್ರೀಯ ಸಮುದಾಯಗಳ ಗಮನ ಸೆಳೆಯಲು ಯಶಸ್ವಿಯಾದರು.
1993ರ ಆಗಸ್ಟ್ 3ರಂದು ತಾಂಜಾನಿಯಾದಲ್ಲಿ ನಡೆದ ಶೃಂಗಸಭೆಯಲ್ಲಿ ಪಾಲ್ಗೊಂಡು ಮಹತ್ವದ ಅರುಷ ಒಪ್ಪಂದಕ್ಕೆ ಸಹಿ ಹಾಕಿ ವಾಪಸ್ ಆಗುವಾಗ ಅಧ್ಯಕ್ಷ ಹಬ್ಯಾರಿಮಾನ ಅವರ ವಿಮಾನವನ್ನು ಹುಟುಗಳೇ ಕ್ಷಿಪಣಿ ದಾಳಿ ಮೂಲಕ ಹೊಡೆದುರುಳಿಸಿದರು. ಆ ಒಪ್ಪಂದದ ಪ್ರಕಾರ, ರವಾಂಡಾದ ಮೇಲಿನ ಹುಟುಗಳ ಹಿಡಿತ ಕಡಿಮೆಯಾಯಿತು. ಅಲ್ಲದೇ ಸರ್ಕಾರದ ಮುಖ್ಯ ಹುದ್ದೆಗಳಿಗೆ ಟುಟ್ಸಿಗಳನ್ನು ನೇಮಿಸಬೇಕು ಎಂಬ ಕರಾರಿಗೆ ಹಬ್ಯಾರಿಮಾನ ಒಪ್ಪಬೇಕಾಯಿತು. ಇದರಿಂದ ಹುಟುಗಳು ಕೆರಳಿ ಕೆಂಡವಾದರು. ಅಧ್ಯಕ್ಷನ ಹತ್ಯೆಯಾಗುತ್ತಿದ್ದಂತೆ ಹುಟುಗಳು ಸರ್ಕಾರ, ಸೇನೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಅಧ್ಯಕ್ಷನ ಹತ್ಯೆಗೆ ಟುಟ್ಸಿಗಳೇ ಕಾರಣ ಎಂದು ಅಪಪ್ರಚಾರ ಮಾಡತೊಡಗಿದರು. ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು.
ಆಗ ಆರಂಭವಾಯಿತು ನರಮೇಧ!
ಮುಂದಿನ ನೂರು ದಿನಗಳ ಕಾಲ ರವಾಂಡಾ ಹೊತ್ತಿ ಉರಿದುಹೋಯಿತು. ಟುಟ್ಸಿಗಳು ವಾಸಿಸುವ ಕಾಲನಿಗಳಿಗೆ ನುಗ್ಗಿದ ಹುಟುಗಳು ಮನೆಮನೆಗೆ ಹೋಗಿ ಹೆಂಗಸರು, ಮಕ್ಕಳನ್ನು ಹೊರಕ್ಕೆಳೆದು ನಿರ್ದಯವಾಗಿ ಕೊಚ್ಚಿ ಕೊಚ್ಚಿ ಸಾಯಿಸಿದರು. ಬಂದೂಕು, ಬುಲೆಟ್‌ಗಳು ದುಬಾರಿಯಾಗಿದ್ದರಿಂದ ಕತ್ತಿ, ಚಾಕು, ಮಚ್ಚು, ಲಾಂಗು, ಕಬ್ಬಿಣದ ಸಲಾಕೆಗಳಿಂದ ಹೊಡೆದು ಸಾಯಿಸಿದರು.
ದಿನದಿಂದ ದಿನಕ್ಕೆ ನರಮೇಧ ಅವ್ಯಾಹತವಾಗಿ ನಡೆಯುತ್ತಿದ್ದರೆ ದ್ವೇಷ ಕೋಡಿಯಾಗಿ, ಪ್ರವಾಹದಂತೆ ಹರಿಯಲಾರಂಭಿಸಿತು. ಟುಟ್ಸಿ ಯುವತಿಯರು, ಹೆಂಗಸರನ್ನು ಹಾಡಹಗಲೇ ಬೀದಿಯಲ್ಲಿ ಅತ್ಯಾಚಾರ ಮಾಡಲಾಯಿತು. ಚರ್ಚ್, ಸರ್ಕಾರಿ ಕಟ್ಟಡ, ಆಸ್ಪತ್ರೆಗಳಲ್ಲಿ ಆಶ್ರಯ ನೀಡುತ್ತೇವೆಂದು ಟುಟ್ಸಿಗಳನ್ನು ಅಲ್ಲಿಗೆ ಕರೆಯಿಸಿಕೊಂಡು ಆ ಕಟ್ಟಡಗಳಿಗೆ ಹುಟುಗಳು ಬೆಂಕಿ ಹಚ್ಚಿ ಸಾಮೂಹಿಕವಾಗಿ ಸುಟ್ಟು ಹಾಕಿದರು. ಹಾದಿ ಬೀದಿಯಲ್ಲಿ ನಡೆದು ಹೋಗುವಾಗ ಟುಟ್ಸಿಗಳನ್ನು ಕಂಡರೆ ಹುಟುಗಳು ಕಲ್ಲು ಹೊಡೆದು, ಸೈಜುಗಲ್ಲು ಎತ್ತಿ ಹಾಕಿ, ಬಡಿಗೆಯಿಂದ ಬಡಿದು ಸಾಯಿಸುತ್ತಿದ್ದರು. ಶವ ಸಂಸ್ಕಾರಕ್ಕೂ ಅವಕಾಶವಿರಲಿಲ್ಲ. ನಾಯಿ, ನರಿ, ಹೆಗ್ಗಣಗಳು ಶವವನ್ನು ತಿನ್ನಲಾರಂಭಿಸಿದವು. ಟುಟ್ಸಿಗಳು ರವಾಂಡಾದಲ್ಲಿರಲು ಯೋಗ್ಯರಲ್ಲ ಎಂದು ಅವರ ಹೆಣಗಳನ್ನು ನದಿಗೆ ಎಸೆಯಲಾಯಿತು. ಅಲ್ಲಿ ದಯೆ, ಕರುಣೆಗೆಲ್ಲ ಆಸ್ಪದವೇ ಇರಲಿಲ್ಲ.
ಹುಟುಗಳ ಸ್ವಾಮ್ಯದಲ್ಲಿದ್ದ ಪತ್ರಿಕೆ ಹಾಗೂ ಸ್ಥಳೀಯ ರೇಡಿಯೋ ಸಹ ದ್ವೇಷಾಗ್ನಿ ಹಬ್ಬಲು ತುಪ್ಪವನ್ನು ಎರೆದವು. ಟುಟ್ಸಿಗಳನ್ನು ರವಾಂಡಾದಿಂದ ಒದ್ದೋಡಿಸಬೇಕು, ಇಲ್ಲವೇ ಕಂಡ ಕಂಡಲ್ಲಿ ಹಿಡಿದು ಸಾಯಿಸಬೇಕು ಎಂದು ಜನರನ್ನು ರೊಚ್ಚಿಗೆಬ್ಬಿಸಿದವು . ಬೇಕೆಂದೇ ಸುಳ್ಳು ಸುದ್ದಿ ಪ್ರಕಟಿಸಿದವು. ಹುಟುಗಳಲ್ಲಿ ಇನ್ನಷ್ಟು ದ್ವೇಷ ಉಕ್ಕಿಸಲು ಟುಟ್ಸಿಗಳು ಪ್ರತೀಕಾರಕ್ಕಿಳಿದಿದ್ದಾರೆಂಬ ಗಾಳಿ ಸುದ್ದಿ ಹಬ್ಬಿಸಿದ್ದು ಇನ್ನಷ್ಟು ಹತ್ಯೆಗೆ ಕಾರಣವಾಯಿತು. ಹುಟುಗಳು ರೇಡಿಯೋ ಸ್ಟೇಷನ್‌ನ್ನು ಆಕ್ರಮಿಸಿಕೊಂಡು ಟುಟ್ಸಿಗಳ ವಿರುದ್ಧ ಸುದ್ದಿ ಪ್ರಸಾರ ಮಾಡಲಾರಂಭಿಸಿದಾಗ ನರಮೇಧ ಉತ್ತುಂಗಕ್ಕೆ ಹೋಯಿತು.
ರವಾಂಡಾದ ಜನಸಂಖ್ಯೆಯ ನೂರರಲ್ಲಿ ಮೂವತ್ತು ಮಂದಿ ಈ ನೂರು ದಿನಗಳಲ್ಲಿ ಹತರಾದರು! ಇಡೀ ವಿಶ್ವ ಮೂಕಪ್ರೇಕ್ಷಕನಂತೆ ನಿಂತು ನೋಡಿತ್ತು. ವಿಶ್ವಸಂಸ್ಥೆ ಕೈ ಚೆಲ್ಲಿ ಕುಳಿತಿತ್ತು. 'ರವಾಂಡಾ ನರಮೇಧದಲ್ಲಿ ಸತ್ತವರಿಗೆ ಲೆಕ್ಕವಿಲ್ಲ, ಸಾವಿಗೆ ಬೆಲೆ ಇಲ್ಲ. ಆದರೆ ಪ್ರತಿ ಹತ್ಯೆಯ ಹಿಂದೆ ಘೋರ ಕತೆಯಿದೆ' ಎಂದ ನನ್ನ ಸ್ನೇಹಿತ. ಮಾತು ಮೌನದಲ್ಲಿ ಬಂಧಿಯಾಗಿ ಕುಳಿತಿತ್ತು.
ಕಾಕತಾಳೀಯ, ಇಂದು ಜುಲೈ 4. ರವಾಂಡಾ ಪಾಲಿಗೆ ಅತ್ಯಂತ ಮಹತ್ವದ ದಿನ. ಈ ದಿನವನ್ನು ಅವರು ವಿಮೋಚನಾ ದಿನ ಅಂತ ಆಚರಿಸುತ್ತಾರೆ. ಕಾರಣ ನೂರು ದಿನಗಳ ಹತ್ಯಾಕಾಂಡ ಕೊನೆಯಾಗಿದ್ದೇ ಇಂದು.
ಇಂದು ಅದೇ ಸಮಾಧಿಯ ಮೇಲೆ ರವಾಂಡಾ ತಲೆಯೆತ್ತಿ ನಿಲ್ಲಲು ಪ್ರಯತ್ನಿಸುತ್ತಿದೆ. ಗುಡ್‌ಲಕ್.
- ವಿಶ್ವೇಶ್ವರ ಭಟ್
vbhat@me.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

