ಅಬ್ಬಬ್ಬಾ... ಮಾನವನಿಗೂ ಗೊರಿಲ್ಲಾಗಳಿಗೂ ಎಷ್ಟೊಂದು ಸಾಮ್ಯತೆ!
ನಾವು ಗೊರಿಲ್ಲಾ ಚಾರಣಕ್ಕೆ ಹೊರಟಾಗ ನಮ್ಮೊಂದಿಗೆ ಒಬ್ಬ ಸಹಾಯಕನಿದ್ದ.
ನಾವು ಗೊರಿಲ್ಲಾ ಚಾರಣಕ್ಕೆ ಹೊರಟಾಗ ನಮ್ಮೊಂದಿಗೆ ಒಬ್ಬ ಸಹಾಯಕನಿದ್ದ. ಆತನ ಹೆಸರು ಎಂಜಿಮಾನ ಅಂತ. ಆತ ಮೂಲತಃ ಆದಿವಾಸಿ. ಕಳೆದ ಇಪ್ಪತ್ತೊಂದು ವರ್ಷಗಳಿಂದ ಆತ ಒಂದು ದಿನ ಸಹ ಬಿಡದೇ ಗೊರಿಲ್ಲಾಗಳ ಜತೆ ಒಡನಾಡಿದ್ದಾನೆ. ಮನೆಯಲ್ಲಿ ಹೆಂಡತಿ, ಮಕ್ಕಳನ್ನು ಬಿಟ್ಟಿರಬಹುದು, ಆದರೆ ಕಾಡಿನಲ್ಲಿರುವ ಗೊರಿಲ್ಲಾಗಳನ್ನು ಬಿಟ್ಟಿಲ್ಲ ಅಂದ್ರೆ ಅತಿಶಯೋಕ್ತಿ ಎನಿಸಬಹುದು. ಆದರೆ ಇದು ಸತ್ಯ.
ಸುಮಾರು ನಾಲ್ಕು ವರ್ಷಗಳ ಹಿಂದೆ ಗೊರಿಲ್ಲಾ ಕುಟುಂಬವೊಂದು ಎಂಜಿಮಾನನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿತ್ತಂತೆ. ಆತ ಅವುಗಳ ಜತೆಗೆ ಹೆಜ್ಜೆ ಹಾಕಿದ್ದ. ಸುಮಾರು ಹತ್ತು ತಾಸು ಅವುಗಳ ಜತೆಯೇ ಆತ ಕಳೆದಿದ್ದನಂತೆ. ಸಾಯಂಕಾಲವಾಗುತ್ತಲೇ ಅವುಗಳ ಗಮನವನ್ನು ಬೇರೆಡೆ ಸೆಳೆದು, ನಿಧಾನವಾಗಿ ಅಲ್ಲಿಂದ ಕಾಲ್ಕಿತ್ತು ಬಂದಿದ್ದನಂತೆ.
ಗೊರಿಲ್ಲಾಗಳು ಹಾಗ್ಯಾಕೆ ವರ್ತಿಸಿದವು? ಅಂತ ಕೇಳಿದೆ.
'ಅದು ತೀರಾ ಸಹಜ. ಅವುಗಳ ಹತ್ತಿರ ಹೋದರೆ ಅವು ಏನೂ ಮಾಡೊಲ್ಲ ಅಂದ್ರೆ ನಿಮ್ಮನ್ನು ಸ್ವೀಕರಿಸಿವೆ ಅಂತಾನೇ ಅರ್ಥ. ಇಲ್ಲದಿದ್ದರೆ ನಿಮ್ಮ ಮೇಲೆ ದಾಳಿ ಮಾಡುತ್ತಿದ್ದವು. ಗೊರಿಲ್ಲಾಗಳಿಗೆ ಒಂದು ವಿಚಿತ್ರ ಸ್ವಭಾವವಿದೆ. ಅದೇನೆಂದರೆ ಮನುಷ್ಯರನ್ನು ಕಂಡಾಗ ಅವು ಎಂದೂ ಪ್ರತಿರೋಧ ವ್ಯಕ್ತಪಡಿಸುವುದಿಲ್ಲ. ಅದರಲ್ಲೂ ಅವುಗಳ ಭಾಷೆಯಲ್ಲಿ ಮಾತಾಡಿದಾಗ ಅವುಗಳಿಗೆ ತಕ್ಷಣ ಸಲುಗೆ ಬೆಳೆಯುತ್ತದೆ. ನೀವು ಭಯದಿಂದ ಅಂತರ ಕಾಪಾಡಿಕೊಂಡರೂ ತಾವಾಗಿಯೇ ಹತ್ತಿರ ಬರುತ್ತವೆ, ನಿಮ್ಮಲ್ಲಿ ಮೂಡಿರುವ ಆತಂಕವನ್ನು ದೂರ ಮಾಡುತ್ತವೆ. ಆ ಮೂಲಕ ಅವಾಗಿಯೇ ವಿಶ್ವಾಸ, ಭರವಸೆ ಮೂಡಿಸುತ್ತವೆ. ನನಗೆ ಇಂಥ ಅನುಭವ ಅನೇಕ ಸಲ ಆಗಿದೆ. ಗೊರಿಲ್ಲಾಗಳ ಜತೆ ಸತತ ಸಂಪರ್ಕ ಹೊಂದುವುದರ ಅಪಾಯವೇನೆಂದರೆ ನಿಧಾನವಾಗಿ ನಾವು ಅವುಗಳನ್ನು ಸ್ವೀಕರಿಸಲಾರಂಭಿಸುತ್ತೇವೆ. ಪದೇ ಪದೆ ಅವುಗಳ ಸಾಮೀಪ್ಯವನ್ನು ಬಯಸುತ್ತೇವೆ. ಒಂದೆರಡು ದಿನ ನೋಡದಿದ್ದರೆ ಚಡಪಡಿಕೆ ಶುರುವಾಗುತ್ತದೆ.' ಎಂದು ಗೊರಿಲ್ಲಾಗಳ ಸ್ವಭಾವ, ಲಕ್ಷಣಗಳನ್ನು ಹೇಳುತ್ತಾ ಗುಣಕಥನಕ್ಕೆ ನಾಂದಿ ಹಾಕಿದ.
'ಇದು ನನ್ನದೊಂದೇ ಅನುಭವ ಅಲ್ಲ. ಗೊರಿಲ್ಲಾಗಳ ಕುರಿತು ಅಧ್ಯಯನ ಹಾಗೂ ಸಂಶೋಧನೆ ಮಾಡಲು ಬರುತ್ತಾರಲ್ಲ, ಅವರದೂ ಇದೇ ಸಮಸ್ಯೆ. ಒಂದೆರಡು ತಿಂಗಳಾದ ಬಳಿಕ ಅವುಗಳ ಜತೆ ಏನೋ ಒಂದು ಅವ್ಯಕ್ತ ಭಾವನೆ ಮೂಡುತ್ತದೆ. ಹೇಳಲಾರದ ಸಂಬಂಧ ಬಿಚ್ಚಿಕೊಳ್ಳುತ್ತದೆ. ಇದು ಏಕಮುಖ ಅಲ್ಲ. ಪರಸ್ಪರ ಇಬ್ಬರಲ್ಲೂ ಇದೇ ಭಾವನೆ ಪಸರಿಸುತ್ತದೆ. ಒಮ್ಮೆ ಗೊರಿಲ್ಲಾಗಳ ಸಹವಾಸಕ್ಕೆ ಬಿದ್ದರೆ, ಅವುಗಳ ಗುಂಗಿಗೆ ಮರುಳಾದರೆ ತಪ್ಪಿಸಿಕೊಳ್ಳುವುದು ಕಷ್ಟ. ಅದೆಂಥ ಮೋಡಿಯೋ ಏನೋ? ಅವುಗಳ ಹಿಡಿತದಿಂದ ತಪ್ಪಿಸಿಕೊಳ್ಳಲಾಗದೇ ಚಡಪಡಿಸುವ ಅವೆಷ್ಟೋ ಮಂದಿಯನ್ನು ನೋಡಿದ್ದೇನೆ' ಎಂದು ಎಂಜಿಮಾನ ಗೊರಿಲ್ಲಾಗಳ ಮೋಡಿಯ ಸೊಬಗನ್ನು ಬಣ್ಣಿಸಲಾರಂಭಿಸಿದ.
'ಗೊರಿಲ್ಲಾಗಳನ್ನು ನೋಡಿದಾಗ ಮನುಷ್ಯರ ವರ್ತನೆ ಸಹ ಸಹಜವಾಗಿರುತ್ತದೆ. ಬೇರೆ ಪ್ರಾಣಿಗಳ ಜತೆಗೆ ವರ್ತಿಸುವುದಕ್ಕಿಂತ ಭಿನ್ನವಾಗಿ ಮನುಷ್ಯರು ವರ್ತಿಸುವುದನ್ನು ಸ್ವತಃ ಕಣ್ಣಾರೆ ಕಂಡಿದ್ದೇನೆ. ನಾನು ಈ ಕಾಡಿಗೆ ಕಳೆದ ಎರಡು ದಶಕಗಳಿಂದ ಬರುತ್ತಿದ್ದೇನೆ.
ಗೊರಿಲ್ಲಾಗಳನ್ನು ನೋಡದೇ ಬರಿಗೈಲಿ ಒಮ್ಮೆಯೂ ಹೋಗಿಲ್ಲ. ಒಂದೇ ಒಂದು ಸಲ ಅವು ಮನುಷ್ಯರ ಮೇಲೆ ದಾಳಿ ಮಾಡಿಲ್ಲ. ಕೆಲವೊಮ್ಮೆ ಅಸಹನೆ, ಆಕ್ರೋಶ ತೋರಿದ್ದಿದೆ. ಕ್ಯಾಕರಿಸಿ ನೋಡುತ್ತಾ ಗುರ್‌ಗುಟ್ಟಿರಬಹುದು. ಆದರೆ ಕಚ್ಚಿ ಗಾಯಗೊಳಿಸಿ ಎಗರಿದ ಉದಾಹರಣೆಗಳಿಲ್ಲವೇ ಇಲ್ಲ. ಇಷ್ಟಾಗಿಯೂ ನಾನು ಮೊದಲ ದಿನ ಕಾಡಿಗಿಳಿದಾಗ ತೆಗೆದುಕೊಳ್ಳುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತೇನೆ. ಕಾರಣ ಎಷ್ಟೆಂದರೂ ಅವು ಪ್ರಾಣಿಗಳು. ನಾವು ಮನುಷ್ಯರು, ಒಮ್ಮೊಮ್ಮೆ ತಿಕ್ಕಲರಂತೆ ವರ್ತಿಸುತ್ತೇವೆ. ಇನ್ನು ಅವುಗಳಿಂದ ಯಾವತ್ತೂ ಉತ್ತಮ, ಆದರ್ಶದ ನಡೆಯನ್ನು ನಿರೀಕ್ಷಿಸುವುದಾದರೂ ಹೇಗೆ?' ಎಂದು ಆತ ತನ್ನ ಅನುಭವಗಳನ್ನು ಹಾಸಲಾರಂಭಿಸಿದ.
ನನಗೆ ಎಂಜಿಮಾನನ ಮಾತು-ಕತೆ ಯಾಕೆ ಇಷ್ಟವಾಯಿತೆಂದರೆ, ಆತನಲ್ಲಿ ಗೊರಿಲ್ಲಾಗಳ ಬಗ್ಗೆ ಸಾಕಷ್ಟು ಕತೆ, ಉಪಕತೆ, ಸ್ವಾರಸ್ಯಕರ ಸಂಗತಿಗಳಿದ್ದವು. ಆತ ಹೇಳಿದವುಗಳ ಪೈಕಿ ಪ್ರಮುಖವಾದವುಗಳನ್ನು ಬುಲೆಟ್ ಪಾಯಿಂಟ್‌ನಲ್ಲಿ ಸಂಗ್ರಹಿಸುವುದಾದರೆ...
- ಮನುಷ್ಯರ ಹಾಗೂ ಗೊರಿಲ್ಲಾಗಳ ಡಿಎನ್‌ಎಗಳಲ್ಲಿ ಶೇಕಡಾ 96-97ರಷ್ಟು ಸಾಮ್ಯತೆಯಿದೆ. ಇಂಥ ಸಾಮ್ಯತೆ ಮನುಷ್ಯನೊಂದಿಗೆ ಬೇರೆ ಯಾವ ಪ್ರಾಣಿಗಳಿಗೂ ಇಲ್ಲ.
- ಗೊರಿಲ್ಲಾಗಳು ಬೇರೆ ಪ್ರಾಣಿಗಳೊಂದಿಗೆ ಸಹ ಸ್ನೇಹಪರವಾಗಿಯೇ ವರ್ತಿಸುತ್ತವೆ. ಸ್ವಭಾವತಃ ಅವು ಸಂಘರ್ಷ ಜೀವಿಗಳಲ್ಲ, ಜಗಳಗಂಟಿಗಳಲ್ಲ. ತಮ್ಮ ಮೇಲೆ ಎಗರಿ ಬಂದಾಗ ಪ್ರತಿರೋಧ ಒಡ್ಡುತ್ತವೆಯೇ ಹೊರತು ಕಾದಾಟಕ್ಕಿಳಿಯುವುದಿಲ್ಲ.
- ಪ್ರಬುದ್ಧವಾಗಿ ಬೆಳೆಯಲು ಗೊರಿಲ್ಲಾಗಳಿಗೆ ಹನ್ನೆರಡು ವರ್ಷಗಳಾದರೂ ಬೇಕು. ಆಗ ಅವುಗಳ ಬೆನ್ನಹುರಿ ಬೆಳ್ಳಿ ಬಣ್ಣಕ್ಕೆ (Silverback) ತಿರುಗಿರುತ್ತದೆ. ಆಗ ಅವು ಆರು ಅಡಿ ಎತ್ತರ ಬೆಳೆದಿರುತ್ತವೆ. ಗಂಡು ಗೊರಿಲ್ಲಾಗಳ ಗಾತ್ರದ ಅರ್ಧದಷ್ಟು ಹೆಣ್ಣು ಗೊರಿಲ್ಲಾಗಳಿರುತ್ತವೆ. ಆರರಿಂದ ಎಂಟು ಬಲಿಷ್ಠ ಗಂಡಸರ ತಾಕತ್ತು, ಸೆಣಸುವ ಸಾಮರ್ಥ್ಯ ಒಂದು ಗೊರಿಲ್ಲಾಕ್ಕಿರುತ್ತದೆ.
- ಬೆನ್ನ ಹುರಿ ಬೆಳ್ಳಿ ಬಣ್ಣಕ್ಕೆ ತಿರುಗಿದ ಗೊರಿಲ್ಲಾಗಳು ಪ್ರಬುದ್ಧವಾಗಿ ವರ್ತಿಸುತ್ತವೆ. ಅವು ತಂಡದ ಹಿರಿಯಣ್ಣನ ಪಾತ್ರ ವಹಿಸುತ್ತವೆ. ಈ ಹಿರಿಯಣ್ಣನೇನಾದರೂ ಸತ್ತರೆ, ಇಡೀ ಕುಟುಂಬ ಛಿದ್ರವಾಗುವ ಸಂಭವವಿರುತ್ತದೆ. ಇಲ್ಲದಿದ್ದರೆ ಒಮ್ಮೊಮ್ಮೆ ಬೇರೆ ಕುಟುಂಬಕ್ಕೆ ಸೇರ್ಪಡೆಯಾಗುತ್ತವೆ. ಹೊಸ ಕುಟುಂಬಕ್ಕೆ ಸೇರುವಾಗ ಕಾದಾಟ ಮಾಡಿ ನಾಯಕನನ್ನು ಸೋಲಿಸಿ ತಾನೇ ಯಜಮಾನನಾಗುವುದುಂಟು.
- ಗೊರಿಲ್ಲಾಗಳು ಮೂಲತಃ ಸಸ್ಯಾಹಾರಿಗಳು. ಮಾಂಸಾಹಾರವನ್ನು ಮುಟ್ಟುವುದಿಲ್ಲ. ಸೊಪ್ಪು, ಸದೆ, ಟೊಂಗೆ, ಮರದ ತೊಗಟೆ, ಬೇರು ಅವುಗಳಿಗೆ ಪ್ರಿಯವಾದ ಆಹಾರ.
- ಪ್ರತಿ ಗೊರಿಲ್ಲಾದ ಫಿಂಗರ್‌ಪ್ರಿಂಟ್ ಮನುಷ್ಯರ ಹಾಗೆ ಭಿನ್ನ.
- ಮನುಷ್ಯನನ್ನು ಬಿಟ್ಟರೆ ಬುದ್ಧಿವಂತ ಪ್ರಾಣಿಗಳಲ್ಲಿ ಎರಡನೇ ಸ್ಥಾನ ಗೊರಿಲ್ಲಾಗಳಿಗೆ. ಅವು ಮನುಷ್ಯನಂತೆ ಯೋಚಿಸುವ ಶಕ್ತಿಯನ್ನು ಹೊಂದಿವೆ. ಹನ್ನೊಂದು ವರ್ಷಗಳವರೆಗಿನ ಸಂಗತಿಗಳನ್ನು ಅವು ನೆನಪಿನಲ್ಲಿಟ್ಟುಕೊಳ್ಳಬಲ್ಲವು.
- ಪ್ರತಿದಿನ ಗೊರಿಲ್ಲಾಗಳು ಆಹಾರಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುತ್ತುತ್ತವೆ. ಸತತ ಎರಡು ದಿನ ಒಂದೇ ಜಾಗದಲ್ಲಿ ಮಲಗುವುದಿಲ್ಲ. ಮಧ್ಯಾಹ್ನ ಮಲಗಿದ ಜಾಗದಲ್ಲಿ ರಾತ್ರಿ ಮಲಗುವುದಿಲ್ಲ.
- ಮನುಷ್ಯನಂತೆ ಗೊರಿಲ್ಲಾ ಸಹ ನಡೆಯಬಲ್ಲುದು. ಆದರೆ ನೂರು ಮೀಟರ್‌ಗಿಂತ ಹೆಚ್ಚು ದೂರವನ್ನಲ್ಲ. ಕೈಗಳನ್ನೇ ಕಾಲುಗಳನ್ನಾಗಿ ಮಾಡಿಕೊಂಡು ನಡೆಯುವುದನ್ನು ಇಷ್ಟಪಡುತ್ತವೆ.
- ಗೊರಿಲ್ಲಾಗಳಿಗೆ ಬಾಲ ಇಲ್ಲ. ಮನುಷ್ಯರ ಹಾಗೆ ಒಂದು ಹೆಬ್ಬೆಟ್ಟು ಹಾಗೂ ನಾಲ್ಕು ಬೆರಳುಗಳನ್ನು ಹೊಂದಿವೆ.
- ಗೊರಿಲ್ಲಾಗಳು 50-55 ವರ್ಷಗಳ ತನಕ ಬದುಕುತ್ತವೆ. ಗೊರಿಲ್ಲಾ ಮರಿ ಹಾಕಲು ಎಂಟೂವರೆ ತಿಂಗಳು ಬೇಕು. ಜನ್ಮ ತಾಳಿದ ಮೂರು ವರ್ಷಗಳವರೆಗೆ ಮರಿ ತಾಯಿಯ ಜತೆಯಲ್ಲಿಯೇ ಬೆಳೆಯುತ್ತದೆ.
- ಗೊರಿಲ್ಲಾಗಳು ಸದಾ ಒಂದು ನಿಶ್ಚಿತ ಕುಟುಂಬದೊಂದಿಗೇ ಜೀವಿಸುತ್ತವೆ. ಕುಟುಂಬದ ಹೊರಗಿನ ಸದಸ್ಯರನ್ನು ಸೇರಿಸಿಕೊಳ್ಳುವುದಿಲ್ಲ.
- ಗೊರಿಲ್ಲಾಗಳು ಕುಂಭಕರ್ಣನ ಅಪರಾವತಾರ. ಏನಿಲ್ಲವೆಂದರೂ ಹದಿಮೂರು-ಹದಿನಾಲ್ಕು ಗಂಟೆಗಳ ಕಾಲ ನಿದ್ರಿಸುತ್ತವೆ. ಮಧ್ಯಾಹ್ನ ಒಂದೆರಡು ಗಂಟೆ ವಿಶ್ರಾಂತಿ ಪಡೆಯುವುದುಂಟು. ಉಳಿದ ಸಂದರ್ಭಗಳಲ್ಲಿ ಒಂದೋ ಆಹಾರಕ್ಕಾಗಿ ಶೋಧಿಸುತ್ತಿರುತ್ತವೆ. ಇಲ್ಲವೇ ಆಹಾರ ಸೇವಿಸುತ್ತಿರುತ್ತವೆ.
- ಗೊರಿಲ್ಲಾಗಳು ಹಾವಭಾವ, ದೇಹದ ಚಲನವಲನ, ಭಂಗಿಗಳಿಂದಲೇ ಸಂವಹನ ಮಾಡುತ್ತವೆ. ದನಿ, ಮುಖದ ಅಭಿವ್ಯಕ್ತಿ, ಸಂಜ್ಞೆಗಳ ಮೂಲಕವೂ ಅರ್ಥ ಮಾಡಿಕೊಳ್ಳುತ್ತವೆ.
- ಗೊರಿಲ್ಲಾಗಳು ಭಾವಜೀವಿಗಳು ಅಂದ್ರೆ ಆಶ್ಚರ್ಯವಾದೀತು. ಅವುಗಳಿಗೆ ದುಃಖ, ಸಂತಸ, ಬೇಸರ, ವಿಷಾದ, ಆತಂಕ, ಜುಗುಪ್ಸೆ... ಮುಂತಾದ ಭಾವಗಳು ಅರ್ಥವಾಗುತ್ತವೆ. ಕಚಗುಳಿಯಿಟ್ಟರೆ ಅವು ಜೋರಾಗಿ ನಗುತ್ತವೆ. ದುಃಖವಾದಾಗ ಜೋರಾಗಿ ಕೂಗುತ್ತವೆ. ಆದರೆ ಕಣ್ಣೀರನ್ನು ಸುರಿಸುವುದಿಲ್ಲ. ತೀವ್ರ ಕೋಪ ಬಂದಾಗ ಎರಡೂ ಕೈಗಳಿಂದ ಎದೆ ಬಡಿದುಕೊಂಡು ಕಿರುಚುತ್ತವೆ.
- ಗೊರಿಲ್ಲಾಗಳು ಮೂಲತಃ ಸಂಕೋಚ ಸ್ವಭಾವದ ಪ್ರಾಣಿ. ಹಾಗೆ ನೋಡಿದರೆ ಗೊರಿಲ್ಲಾಗಳಿಗೆ ಬೇರೆ ಯಾವ ಪ್ರಾಣಿಗಳೊಂದಿಗೂ ತಕರಾರಿಲ್ಲ. ಅವುಗಳ ನಿಜವಾದ ಶತ್ರು ಮನುಷ್ಯನೇ. ಈಗಲೂ ಮಾಂಸಕ್ಕಾಗಿ ಮನುಷ್ಯ ಗೊರಿಲ್ಲಾಗಳನ್ನು ಬೇಟೆಯಾಡಿ ಸಾಯಿಸುವುದುಂಟು.
- ಗೊರಿಲ್ಲಾಗಳಲ್ಲಿ ಮೂರು ವಿಧಗಳು-ವೆಸ್ಟರ್ನ್ ಲೋಲ್ಯಾಂಡ್, ಈಸ್ಟರ್ನ್ ಲೋಲ್ಯಾಂಡ್ ಹಾಗೂ ಮೌಂಟನ್ ಗೊರಿಲ್ಲಾ. ಇವು ಆಫ್ರಿಕಾದ ಬೇರೆ ಬೇರೆ ಭಾಗಗಳಲ್ಲಿ ನೆಲೆಸುವ ಗೊರಿಲ್ಲಾಗಳು. ಮೌಂಟನ್ ಗೊರಿಲ್ಲಾಗಳೇ ವಿನಾಶದ ಅಂಚಿನಲ್ಲಿದ್ದು ಅಪಾಯವನ್ನು ಎದುರಿಸುತ್ತಿರುವುದು.
- ಮನುಷ್ಯರ ಹಾಗೆ ಗೊರಿಲ್ಲಾಗಳಿಗೂ ಮೂವತ್ತೆರಡು ಹಲ್ಲುಗಳು. ಕಾಲುಗಳಿಗಿಂತ ಕೈಗಳೇ ಉದ್ದ.
- ಮೈ ತುಂಬಾ ಕೂದಲು ಹೊಂದಿರುವ ಗೊರಿಲ್ಲಾ ಅದೆಷ್ಟು ಸೂಕ್ಷ್ಮವೆಂದರೆ ಮೈಗೆ ಇರುವೆ ಹತ್ತಿದರೂ ತಕ್ಷಣ ಗೊತ್ತಾಗುತ್ತದೆ.
- ಗೊರಿಲ್ಲಾಗಳಿಂದ ಎರಡು ಮೀಟರ್ ದೂರದಲ್ಲಿ ನಿಂತು ಸೀನಿದರೆ, ಕೆಮ್ಮಿದರೆ ಸೋಂಕು ತಗುಲಬಹುದು. ವೈರಲ್ ಜ್ವರ ಬಂದವರು ಅದರ ಹತ್ತಿರ ಹೋದರೆ ಅದಕ್ಕೂ ಅಂಟಬಹುದು.
- ನೂರು ಮರಿಗಳ ಪೈಕಿ ಬದುಕಿ ಉಳಿಯುವುದು ಕೇವಲ ನಲವತ್ತರಷ್ಟು ಮಾತ್ರ. ಗೊರಿಲ್ಲಾಗಳಿಗೆ ಹತ್ತಾರು ಬಾಲಗ್ರಹ ಪೀಡೆಗಳು.
- ಮನುಷ್ಯನ ಗರ್ಭ ನಿರೋಧಕ ಮಾತ್ರೆಗಳು ಗೊರಿಲ್ಲಾಗಳ ಮೇಲೂ ಪರಿಣಾಮ ಬೀರುತ್ತವೆ.
- ಗೊರಿಲ್ಲಾಗಳು ಮನುಷ್ಯರ ಹಾಗೆ ಪಂಚೇಂದ್ರಿಯಗಳನ್ನು ಹೊಂದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

