ಅಂಕಣಗಳು

ರವಾಂಡಾದ ಗತಿಯನ್ನು ಬದಲಿಸಿದ್ದೇ ಗೊರಿಲ್ಲಾಗಳು!

ನಾನು ಗೊರಿಲ್ಲಾಗಳ ಬಗ್ಗೆ ಬರೆದಿದ್ದು ತುಸು ಜಾಸ್ತಿಯೇ ಆಯಿತೇನೋ ಎಂದು...

ರವಾಂಡಾದ ಗತಿಯನ್ನು ಬದಲಿಸಿದ್ದೇ ಗೊರಿಲ್ಲಾಗಳು!
ಡಯಾನ್ ಫಾಸ್ಸಿ (ಒಳಚಿತ್ರದಲ್ಲಿ)
Published On :

ನಾನು ಗೊರಿಲ್ಲಾಗಳ ಬಗ್ಗೆ ಬರೆದಿದ್ದು ತುಸು ಜಾಸ್ತಿಯೇ ಆಯಿತೇನೋ ಎಂದು ಅಂದುಕೊಳ್ಳುತ್ತಿದ್ದರೆ, ಹಲವಾರು ಓದುಗರು, 'ಗೊರಿಲ್ಲಾಗಳ ಬಗ್ಗೆ ಇನ್ನಷ್ಟು ಸಂಗತಿಗಳಿದ್ದರೆ ಬರೆಯಿರಿ. ಅವುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚುತ್ತಿದೆ. ನಮಗೆ ಅವುಗಳ ಬಗ್ಗೆ ಗೊತ್ತಿರಲಿಲ್ಲ. ದಯವಿಟ್ಟು ಅರ್ಧಂಬರ್ಧ ಬರೆದು ಕೈ ಬಿಡಬೇಡಿ' ಎಂದು ವರಾತ ಮಾಡುತ್ತಿರುವುದು ನನ್ನಲ್ಲಿ ಅಚ್ಚರಿಯನ್ನು ಮೂಡಿಸಿದೆ.
ರವಾಂಡಕ್ಕೆ ಹೊರಟು ನಿಂತಾಗ ಗೊರಿಲ್ಲಾಗಳ ಸುತ್ತ ಒಂದು ಅದ್ಭುತ ಹಾಗೂ ಅನೂಹ್ಯ ಪ್ರಪಂಚವೇ ಇದೆ ಎಂಬುದು ನನಗೂ ಗೊತ್ತಿರಲಿಲ್ಲ. ಗೊರಿಲ್ಲಾಗಳಿಗೂ ಒಂದು ನಾಮಕರಣ ಸಮಾರಂಭವಾ ಎಂದು ನಾನೇ ಚೇಷ್ಟೆ ಮಾಡಿದ್ದೆ. ಆದರೆ ರವಾಂಡಾದ ದಟ್ಟ ಕಾನನದಲ್ಲಿ ಎರಡು ದಿನ ಅವುಗಳೊಂದಿಗೆ ಕಳೆದ ಬಳಿಕ, ಗೊರಿಲ್ಲಾಗಳ ಜತೆ ನಲವತ್ತು ವರ್ಷ ಕಳೆದ ಗೈಡ್‌ಗಳ ಜತೆ ಮಾತಾಡಿದಾಗ, ಮೌಂಟನ್ ಗೊರಿಲ್ಲಾಗಳ ಬಗ್ಗೆ ಜೀವಮಾನದ ಅಧ್ಯಯನ ನಡೆಸಿದವರ ಜತೆ ಚರ್ಚಿಸಿದಾಗ ಗೊರಿಲ್ಲಾಗಳ ಕುರಿತು ಇರುವ ಎರಡು ಮಹತ್ವಪೂರ್ಣ ಸಾಕ್ಷ್ಯಚಿತ್ರಗಳನ್ನು ವೀಕ್ಷಿಸಿದ ಬಳಿಕ ಅವುಗಳ ಸುತ್ತ ವ್ಯಾಪಿಸಿರುವ ಅದ್ಭುತಲೋಕದ ಪುಟ್ಟ ಅನುಭವ ಪಡೆದು ನಾನು ನಿಬ್ಬೆರಗಾಗಿದ್ದು ಸತ್ಯ.
'ಆ ಕೋತಿ ಮುಂಡೇವುಗಳನ್ನು ನೋಡಲು ಅಷ್ಟು ದೂರ ಹೋಗ್ತೀರಲ್ಲ ನಿಮಗೆ ಬೇರೆ ಕೆಲಸ ಇಲ್ಲವಾ?' ಎಂಬ ತಮಾಷೆ ಮಾತುಗಳನ್ನು ಹೇಳಿದ್ದ ಸ್ನೇಹಿತರೊಬ್ಬರು ಫೋನ್ ಮಾಡಿ, 'ಗೊರಿಲ್ಲಾಗಳ ಕುರಿತ ಲೇಖನ, ನಿಮ್ಮ ರವಾಂಡಾ ಡೈರಿ ಓದುತ್ತಿದ್ದೇವೆ. ಖಂಡಿತವಾಗಿಯೂ ಗೊರಿಲ್ಲಾಗಳ ಬಗ್ಗೆ ನನಗೆ ಸ್ವಲ್ಪವೂ ಗೊತ್ತಿರಲಿಲ್ಲ. ಇನ್ನಷ್ಟು ಬರೆಯಿರಿ. ಯಾಕೋ ಅಂದಿನ ನನ್ನ ಮಾತುಗಳು ಸದಭಿರುಚಿಯಿಂದ ಕೂಡಿರಲಿಲ್ಲವೆಂದು ಈಗ ಅನಿಸುತ್ತಿದೆ. ನನ್ನ ಮಾತುಗಳನ್ನು ವಾಪಸ್ ಪಡೆಯುತ್ತೇನೆ' ಎಂದರು. ಅವರ ದನಿಯಲ್ಲಿ ಪ್ರಾಮಾಣಿಕತೆಯ ಒರತೆಯಿತ್ತು.
Taking up a research on Gorillas is not a monkey business ಎಂದು ಗಂಭೀರವಾಗಿ ಹೇಳಿದವನು ಮೂವತ್ತು ವರ್ಷಗಳಿಂದ ಅವುಗಳ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆ ಕೈಗೊಂಡಿರುವ ಬಿಲ್‌ವೆಬರ್.
'ಇದೊಂದು ಅಂತಾರಾಷ್ಟ್ರೀಯ ಆಂದೋಲನವಾಗಬೇಕು. ಎಲ್ಲ ದೇಶಗಳೂ ಕೈ ಜೋಡಿಸಬೇಕು. ಗೊರಿಲ್ಲಾಗಳನ್ನು ಉಳಿಸುವುದೆಂದರೆ ಮನುಕುಲವನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದಂತೆ. ಈ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಬೇಕಿದೆ. ಇಲ್ಲದಿದ್ದರೆ ಅದೊಂದು ಮಂಗನಾಟದಂತೆ ಕಾಣಬಹುದು' ಎಂಬ ಬಿಲ್‌ವೆಬರ್ ಮಾತುಗಳು ಅವನ ಅಧ್ಯಯನ ಹಾಗೂ ಆಂದೋಲನದ ಮಹತ್ವವನ್ನು ಪ್ರತಿಪಾದಿಸುತ್ತದೆ.
ಇದು 'ಮಂಕಿ ಬಿಜಿನೆಸ್‌' ಅಲ್ಲ ಎಂಬುದು ಇನ್ನೊಂದು ರೀತಿಯಲ್ಲೂ ನಿಜ ಎಂದು ಅನಿಸಿದ್ದು, ಅಂದು ಗೊರಿಲ್ಲಾ ಚಾರಣಕ್ಕೆ ಹೊರಡುವ ಮುನ್ನ ವೊಲ್ಕೆನೋ ನ್ಯಾಷನಲ್ ಪಾರ್ಕ್‌ನ ಬೇಸ್‌ಕ್ಯಾಂಪ್‌ನ ಕೌಂಟರ್ ಮುಂದೆ ನಿಂತಾಗ.
ಗೊರಿಲ್ಲಾಗಳ ದರ್ಶನ, ಚಾರಣಕ್ಕೆ 750 ಅಮೆರಿಕನ್ ಡಾಲರ್ ನೀಡಬೇಕು. ಅಂದ್ರೆ ಸುಮಾರು 43 ಸಾವಿರ ರೂಪಾಯಿ! ಚೌಕಾಶಿ ವ್ಯವಹಾರವಿಲ್ಲ. ಯಾರಿಗೂ ಇಲ್ಲಿ ಉಚಿತ ಪ್ರವೇಶವಿಲ್ಲ. ಮಂತ್ರಿಗಳು, ಅತಿಗಣ್ಯರು ಬಂದರೂ ಅವರಿಗೆ ಮುಫತ್ ಇಲ್ಲ. ಅಷ್ಟು ಹಣ ತೆರಲೇಬೇಕು.
'ಹಾಗಂತ ಇದು ನಮಗೆ ಹಣ ಮಾಡುವ ದಂಧೆ ಅಲ್ಲ. ನೀವು ಕೊಡುವ ಹಣ ಗೊರಿಲ್ಲಾಗಳ ಸಂರಕ್ಷಣೆಗೇ ವ್ಯಯವಾಗುತ್ತದೆ. ಭೂಮಿಯ ಮೇಲೆ ಬದುಕಿರುವ ಐನೂರು ಚಿಲ್ಲರೆ ಗೊರಿಲ್ಲಾಗಳನ್ನು ಉಳಿಸಿಕೊಳ್ಳಬೇಕಾದ ಮಹಾನ್ ಕಾರ್ಯಕ್ಕೆ ನೀಡುವ ಕೊಡುಗೆಯಿದು. ನೀವು ಅಂಥ ಅದೃಷ್ಟಶಾಲಿಗಳಲ್ಲೊಬ್ಬರು ಎಂದು ಭಾವಿಸಿ' ಎಂಬ ಬೇಸ್ ಕ್ಯಾಂಪ್ ಮ್ಯಾನೇಜರ್ ಮಾತು ಸಮಂಜಸವೆನಿಸಿತು.
ಕಳೆದ ವರ್ಷ ರವಾಂಡಾಕ್ಕೆ ಹತ್ತು ಲಕ್ಷ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಆ ಪೈಕಿ ಶೇಕಡಾ ಎಂಭತ್ತರಷ್ಟು ಮಂದಿ ಗೊರಿಲ್ಲಾಗಳನ್ನು ನೋಡಲೆಂದೇ ಬಂದಿದ್ದಾರೆ.
ಅವರೆಲ್ಲ 750 ಡಾಲರ್ ತೆತ್ತು ಗೊರಿಲ್ಲಾಗಳ ದರ್ಶನ ಪಡೆದಿದ್ದಾರೆ. ಇದರಿಂದ ಗೊರಿಲ್ಲಾ ಸಂರಕ್ಷಣೆಗೆ ಹೇರಳ ಹಣ ಹರಿದು ಬಂದಿದೆ. ಅಷ್ಟೇ ಅಲ್ಲ, ಪ್ರವಾಸಿಗರಲ್ಲೂ ಈ ಯೋಜನೆಯ ಬಗ್ಗೆ ಕಾಳಜಿ, ಅರಿವು ಮೂಡಿರುವುದಕ್ಕೆ ಇದೇ ನಿದರ್ಶನ.
ಗೊರಿಲ್ಲಾಗಳಿಂದಾಗಿ ರವಾಂಡಾ ಸಹ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ಈ ನೆಪದಿಂದ ಜನ ಈ ದೇಶಕ್ಕೆ ಭೇಟಿ ನೀಡಲಾರಂಭಿಸಿದ್ದಾರೆ. ರವಾಂಡಾ ಸರ್ಕಾರಕ್ಕೂ ಗೊರಿಲ್ಲಾ ಸಂರಕ್ಷಣೆ ಎಷ್ಟು ಮಹತ್ವದ್ದು ಎಂಬ ಸಂಗತಿ ಮನವರಿಕೆಯಾಗಿದೆ. ಗೊರಿಲ್ಲಾಗಳಿಂದಾಗಿ ವಿಶ್ವಮಾನ್ಯತೆ, ಆಕರ್ಷಣೆ ಸಿಗುತ್ತಿದೆಯೆಂಬುದು ಗೊತ್ತಾಗಿದೆ.
ನಿಶ್ಚಿತವಾಗಿಯೂ ಇದು 'ಮಂಕಿ ಬಿಜಿನೆಸ್‌' ಅಲ್ಲ. ಗೊರಿಲ್ಲಾಗಳು ಕೋತಿ ಮುಂಡೇವು ಅಲ್ಲವೇ ಅಲ್ಲ. ಗೊರಿಲ್ಲಾಗಳಿಲ್ಲದ ರವಾಂಡಾವನ್ನು ಊಹಿಸಿಕೊಳ್ಳುವುದು ಸಹ ಅಸಾಧ್ಯ. ಕಾರಣ ರವಾಂಡಾದ ಆರ್ಥಿಕತೆ ಗೊರಿಲ್ಲಾಗಳನ್ನು ನೆಚ್ಚಿಕೊಂಡಿದೆ. ಹಾಗೆ ನೋಡಿದರೆ ಅವೇ ಆ ದೇಶದ ರಾಯಭಾರಿಗಳು!
ಗೊರಿಲ್ಲಾ ಪ್ರವಾಸೋದ್ಯಮವನ್ನು ಗಂಭೀರವಾಗಿ ಆರಂಭಿಸಿದ ಬಳಿಕ ರವಾಂಡಾದಲ್ಲಿ ಸದ್ದಿಲ್ಲದ ಕ್ರಾಂತಿಯುಂಟಾಗಿದೆಯೆಂದರೆ ತಪ್ಪಾಗಲಾರದು. ಗೊರಿಲ್ಲಾಗಳು ವಾಸಿಸುವ ವಿರುಂಗ ಪರ್ವತ ಶ್ರೇಣಿ ಪ್ರದೇಶಗಳಲ್ಲಿ ಎರಡು ದಶಕಗಳಲ್ಲಿ ಅರಣ್ಯ ಹಾಸು ಶೇಕಡಾ 21ರಷ್ಟು ಜಾಸ್ತಿಯಾಗಿದೆ. ಇದರಿಂದ ಪರಿಸರ ಸಂರಕ್ಷಣೆಗೂ ಸಹಾಯಕವಾಗಿದೆ. ಗೊರಿಲ್ಲಾಗಳು ವಾಸಿಸುವ ಅರಣ್ಯಗಳಲ್ಲಿ ಮಾನವ ಸಂಚಾರವನ್ನು ನಿಷೇಧಿಸಲಾಗಿದೆ. 1970-80ರ ಅವಧಿಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲ್ಲಿದ್ದಲು ಗಣಿಗಾರಿಕೆ ಆರಂಭವಾಗಿತ್ತು. ಇದರಿಂದ ಗೊರಿಲ್ಲಾ ವಾಸತಾಣಕ್ಕೆ ತೀವ್ರ ಧಕ್ಕೆಯಾಯಿತು. ಅಮೆರಿಕದ ಪ್ರಾಣಿಶಾಸ್ತ್ರ ತಜ್ಞೆ ಡಯಾನ್ ಫಾಸ್ಸಿ ಗಣಿಗಾರಿಕೆ ವಿರುದ್ಧ ತೀವ್ರ ಹೋರಾಟ ಮಾಡಿದಳು. ಆಕೆ ಆ ಸಂದರ್ಭದಲ್ಲಿ ಗೊರಿಲ್ಲಾಗಳ ಕುರಿತು ಅಧ್ಯಯನ ಮಾಡಲೆಂದು ಅಲ್ಲಿಗೆ ಆಗಮಿಸಿದ್ದಳು. ಅವಳ ಹೋರಾಟದ ಫಲವಾಗಿ ಗಣಿಗಾರಿಕೆ ಸ್ಥಗಿತಗೊಂಡಿತು. ಅಂದಿನಿಂದ ಇಲ್ಲಿತನಕ ಪರವಾನಗಿಯನ್ನು ನೀಡಲಾಗಿಲ್ಲ. ಈಕೆ ತನ್ನೊಂದಿಗೆ ನೂರಕ್ಕೂ ಹೆಚ್ಚು ಆಸಕ್ತ ವಿದ್ಯಾರ್ಥಿಗಳ ತಂಡವನ್ನು ಕಟ್ಟಿ ಅವರನ್ನೆಲ್ಲ ಗೊರಿಲ್ಲಾ ಸಂರಕ್ಷಣೆ ಕೆಲಸಕ್ಕೆ ತೊಡಗಿಸಿದಳು.
ಅಷ್ಟೇ ಅಲ್ಲ, ಅವರನ್ನು ಅಧ್ಯಯನಕ್ಕೂ ಹುರುದುಂಬಿಸಿದಳು. ಗೊರಿಲ್ಲಾಗಳ ವಿರುದ್ಧ ಯಾರೇ ಕೆಲಸ ಮಾಡಿದರೂ ಅವಳು ಅದನ್ನು ಸಹಿಸುತ್ತಿರಲಿಲ್ಲ. ಅಂಥ ಲಾಬಿ ವಿರುದ್ಧ ಆಕೆ ಬಹಿರಂಗ ಹೋರಾಟಕ್ಕೆ ಇಳಿಯುತ್ತಿದ್ದಳು. ಗೊರಿಲ್ಲಾ ಸಂರಕ್ಷಣೆ ಪಡೆ ಕಟ್ಟುವ ತನಕ ಆಕೆ ವಿರಮಿಸಲಿಲ್ಲ.
ಡಯಾನ್ ಫಾಸ್ಸಿ ಗೊರಿಲ್ಲಾಗಳ ಪರ ಜಾಗೃತಿ ಮೂಡಿಸಲು ಸ್ಥಳೀಯ ಆದಿವಾಸಿಗಳನ್ನು ಸಂಘಟಿಸಿದಳು. ಅವರ ನೆರವಿದ್ದರೆ ಮಾತ್ರ ತಾನು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂಬುದನ್ನು ಆಕೆ ಮನಗಂಡಿದ್ದಳು.
ಇವೆಲ್ಲವುಗಳ ಪರಿಣಾಮವಾಗಿ ಸರ್ಕಾರದ ಮೇಲೆ ಒತ್ತಡ ಬಿತ್ತು. ಕಲ್ಲಿದ್ದಲು, ಇದ್ದಿಲು ಸೇರಿದಂತೆ ಎಲ್ಲ ರೀತಿಯ ಗಣಿಗಾರಿಕೆಯನ್ನು ಸರ್ಕಾರ ನಿಷೇಧಿಸಿತು. ಕಾಡಿನೊಳಗೆ ಕಳ್ಳಸಾಗಣೆದಾರರು ಕಾಲಿಡದಂಥ ಉಗ್ರ ಕ್ರಮಕೈಗೊಳ್ಳಲು ಸರ್ಕಾರ ಮುಂದಾಯಿತು. ಗೊರಿಲ್ಲಾ ರಕ್ಷಣೆಗೆ ಯಾವುದೇ ಕಠಿಣ ಕ್ರಮಕೈಗೊಳ್ಳಲು ತಾನು ಕಟಿಬದ್ಧ ಎಂಬುದನ್ನು ಬಹಿರಂಗವಾಗಿ ಹೇಳುವ ತನಕ ಫಾಸ್ಸಿ ವಿರಮಿಸಲಿಲ್ಲ. ಹದಿನೇಳು ವರ್ಷಗಳ ಅವಳ ಅವಿರತ ಹೋರಾಟದ ಫಲವಾಗಿ ಸರ್ಕಾರ ಗೊರಿಲ್ಲಾಗಳ ಸಂರಕ್ಷಣೆಗೆ ಕಾನೂನನ್ನು ಜಾರಿಗೊಳಿಸಿತು.
ಇದಕ್ಕೆ ಅವಳಿಗೆ ಸಿಕ್ಕ ಫಲವೇನು ಗೊತ್ತಾ?
1985ರ ಬೆಳ್ಳಂಬೆಳಗ್ಗೆ ಡಯಾನ್ ಫಾಸ್ಸಿ ನಿಗೂಢವಾಗಿ ಮರ್ಡರ್ ಆಗಿ ಹೋದಳು. ಇಂದಿಗೂ ಅವಳ ಬರ್ಬರ ಹತ್ಯೆ ರಹಸ್ಯವಾಗಿಯೇ ಉಳಿದಿದೆ. ಗೊರಿಲ್ಲಾಗಳ ಸಂರಕ್ಷಣೆ ಬಗ್ಗೆ ಹೋರಾಡಿದ್ದಕ್ಕೆ ಜೀವ ತೆರುವ ಸ್ಥಿತಿ ಒದಗಿ ಬರುತ್ತದೆ ಎಂಬುದು ಅವಳಿಗೆ ಗೊತ್ತಿತ್ತು. ತನ್ನ ಹತ್ಯೆಯಾಗುವುದಕ್ಕಿಂತ ಕೆಲ ದಿನಗಳ ಮೊದಲು ಅವಳಿಗೆ ಅಂಥ ಸೂಚನೆ ಸಿಕ್ಕಿತ್ತು. ಆದರೂ ಅವಳು ಎದೆಗುಂದಲಿಲ್ಲ. ತನ್ನ ಹೋರಾಟದಿಂದ ಹಿಂದೆ ಸರಿಯಲಿಲ್ಲ. ಅಮೆರಿಕದಲ್ಲಿ ಹುಟ್ಟಿದ ಮಹಿಳೆ ತನ್ನ ಮೂವತ್ತೈದನೆ ವಯಸ್ಸಿನಲ್ಲಿ ರವಾಂಡಾಕ್ಕೆ ಬಂದು, ಮೌಂಟನ್ ಗೊರಿಲ್ಲಾಗಳ ಸ್ಥಿತಿಯನ್ನು ಕಂಡು, ತನ್ನ ಜೀವನವನ್ನೇ ಅವುಗಳ ಸಂರಕ್ಷಣೆಗೆ ಮುಡಿಪಾಗಿಡಬೇಕೆಂದು ನಿರ್ಧರಿಸಿದಳಲ್ಲ, ಅವಳ ಸಂಕಲ್ಪವನ್ನು ಹೊತ್ತಿಸಿದ ಆ ಅಗ್ನಿದಿವ್ಯ ಯಾವುದಿರಬಹುದು? ಕಾಡುಗಳ್ಳರು, ಗೊರಿಲ್ಲಾ ಹಂತಕರೇ ಅವಳನ್ನು ಮುಗಿಸಿರಬಹುದು ಎಂಬುದು ಗುಮಾನಿ. ಆದರೆ ಪ್ರಭಾವಿ ಮಾಫಿಯಾಗಳು ಹಂತಕರ ಸುಳಿವನ್ನು ಬಿಟ್ಟುಕೊಡದಿರುವುದೂ ವಿಧಿಯಾಟವೇ ಸರಿ.
ಡಯಾನ್ ಫಾಸ್ಸಿಯದು ಗೊರಿಲ್ಲಾಗಳ ಬಗ್ಗೆ ಎಂಥ ಮಮತೆಯೆಂದರೆ ಮೊಟ್ಟ ಮೊದಲು ಗೊರಿಲ್ಲಾ ಟೂರಿಸಂ ಅನ್ನು ವಿರೋಧಿಸಿದಳು. ಮನುಷ್ಯರನ್ನು ಗೊರಿಲ್ಲಾಗಳ ಸನಿಹ ಬಿಟ್ಟರೆ ಸಾಂಕ್ರಾಮಿಕ ಅಥವಾ ಸೋಂಕು ರೋಗ ತಗುಲಿ ಅವುಗಳ ಜೀವಕ್ಕೆ ಅಪಾಯವಾಗಬಹುದೆಂದು ಎಚ್ಚರಿಸಿದಳು. ಗೊರಿಲ್ಲಾಗಳ ವಾಸಸ್ಥಾನದಲ್ಲಿ ಮನುಷ್ಯರಿಗೇನು ಕೆಲಸ? ಎಂದು ದನಿ ಎತ್ತಿದಳು. ಎಲ್ಲ ಸೇರಿ ಅವಳ ಹತ್ಯೆಗೆ ಸಂಚು ರೂಪಿಸಿದರಾ?
ವಿಚಿತ್ರ ಅಂದ್ರೆ ಅವಳ ಹತ್ಯೆಯ ನಂತರ ಗೊರಿಲ್ಲಾ ಸಂರಕ್ಷಣೆ ಕೂಗು ಮತ್ತಷ್ಟು ಹೆಚ್ಚಾಯಿತು. ಅದಕ್ಕೆ ಡಯಾನ್ ಫಾಸ್ಸಿಯೇ ಪ್ರೇರಣೆಯಾದಳು. ಅವಳ ಹೆಸರಿನಲ್ಲಿ ಸಂಘಗಳು ಹುಟ್ಟಿಕೊಂಡವು. ಪ್ರತಿಷ್ಠಾನಗಳು ತಲೆಯೆತ್ತಿದವು. ಗೊರಿಲ್ಲಾಗಳ ಸಂರಕ್ಷಣೆಗೆ ಆಕೆಯ ಹೆಸರಿನಲ್ಲಿ ದೇಶ-ವಿದೇಶಗಳಿಂದ ಹೇರಳ ಪ್ರಮಾಣದಲ್ಲಿ ಹಣ ಹರಿದು ಬಂದಿತು. ಅಷ್ಟೇ ಅಲ್ಲ. ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪರಿಸರವಾದಿಗಳು, ಗೊರಿಲ್ಲಾ ಅಧ್ಯಯನಕ್ಕೆಂದು ರವಾಂಡಾಕ್ಕೆ ಬಂದರು. ಫಾಸ್ಸಿ ಕುರಿತಾಗಿ ಪುಸ್ತಕಗಳು ಪ್ರಕಟವಾದವು. Gorillas in the mist ಎಂಬ ಅಪರೂಪದ ಸಾಕ್ಷ್ಯಚಿತ್ರ, ಸಿನಿಮಾ ಕೂಡ ಬಂದವು.
ಈತನಕ ಗೊರಿಲ್ಲಾಗಳ ಬಗ್ಗೆ ಐನೂರಕ್ಕೂ ಹೆಚ್ಚು ಮಂದಿ ಅಧ್ಯಯನ ಮಾಡಿದ್ದಾರೆ. ಇನ್ನೂರಕ್ಕೂ ಹೆಚ್ಚು ಸಂಶೋಧನೆಗಳಾಗಿವೆ. ಬಿಲ್‌ವೆಬರ್ ಹಾಗೂ ಎಮಿ ವೆಡೈರ್ ದಂಪತಿ ಮೂವತ್ತು ವರ್ಷಗಳ ಸಂಶೋಧನೆಯನ್ನು ಗೊರಿಲ್ಲಾಗಳಿಗೆ ಧಾರೆಯೆರೆದಿದ್ದಾರೆ.
ಈ ಎಲ್ಲ ಸಂಗತಿಗಳು ನಮಗೂ ಪ್ರೇರಣೆ ಸಿಗಲಿ. ಗೊರಿಲ್ಲಾ ಇಲ್ಲಿ ನಿಮಿತ್ತ ಮಾತ್ರ. ನಾವು ಈ ಪ್ರಸಂಗಗಳಿಂದ ಕಲಿಯುವುದಿದೆ ಎಂದು ಅನಿಸುವುದಿಲ್ಲವಾ?


- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.