ನಿಮ್ಮ ಪ್ರಾಮಾಣಿಕತೆಯಿಂದ ದೇಶಕ್ಕೇನು ಲಾಭವಾಗಿದೆ?
2006ರ ಅಕ್ಟೋಬರ್. ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಎರಡು...
2006ರ ಅಕ್ಟೋಬರ್. ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಎರಡು ವರ್ಷವಾಗಿತ್ತು. ಯಾವುದೇ ಹಗರಣಗಳ ಅಪಸ್ವರ ಇಲ್ಲದೆ ಸಾಗುತ್ತಿದ್ದ ಸರ್ಕಾರಕ್ಕೆ ಆಹಾರಕ್ಕಾಗಿ ತೈಲ ಹಗರಣದ ಮಸಿ ಮೆತ್ತಿಕೊಂಡಿತು. ಅದೂ ಸರ್ಕಾರದ ಉನ್ನತ ಸ್ಥಾನದಲ್ಲಿದ್ದ ವಿದೇಶ ವ್ಯವಹಾರಗಳ ಸಚಿವ ನಟವರ್ ಸಿಂಗ್ ಮೇಲೆಯೇ ಆರೋಪ ಬಂದಿತು. ಅಪರೂಪದ ಅವಸರ ತೋರಿದ ಕಾಂಗ್ರೆಸ್ ಪಕ್ಷ ನಟವರ್ ಅವರನ್ನು ಹೊರಗಟ್ಟಿ ಆಗ ರಕ್ಷಣಾ ಸಚಿವಾಲಯದ ಹೊಣೆ ಹೊತ್ತಿದ್ದ ಮತ್ತೊಬ್ಬ ಹಿರಿತಲೆ ಪ್ರಣಬ್ ಮುಖರ್ಜಿ ಅವರನ್ನು ನಟವರ್ ಸ್ಥಾನಕ್ಕೆ ತರಲಾಯಿತು. ರಕ್ಷಣೆಯ ಹೊಣೆ ಯಾರಿಗೆ ಎಂಬ ಪ್ರಶ್ನೆ ಎದುರಾದಾಗ, ಇನ್ನೂ ಬೋಫೋರ್ಸ್ ಭೂತದ ಗುಂಗಿನಿಂದ ಹೊರಬರದಿದ್ದ ಪಕ್ಷ ನೆಹರು-ಗಾಂಧಿ ಕುಟುಂಬ ಹಾಗೂ ಅದಕ್ಕಿಂತಲೂ ಹೆಚ್ಚಾಗಿ ರಾಜೀವ್‌ಗಾಂಧಿ ಕುಟುಂಬದ ಪರಮ ನಿಷ್ಠ, ಅಷ್ಟೇ ಪ್ರಾಮಾಣಿಕ ರಾಜಕಾರಣಿಯ ಮೊರೆ ಹೋಯಿತು. ಅದು ಬೇರಾರೂ ಅಲ್ಲ ಎ.ಕೆ. ಆ್ಯಂಟನಿ. ಕಾಂಗ್ರೆಸ್ ಸಂಸ್ಕೃತಿಗೆ ಒಗ್ಗದ ಅಪರೂಪದ ಪ್ರಾಮಾಣಿಕತೆ, ಎಂಜಲು ಕಾಸಿಗೆ ಕೈಚಾಚದ ನಿಸ್ಪೃಹ ರಾಜಕಾರಣಿ ಎನಿಸಿದ್ದ ಆ್ಯಂಟನಿ ಒಂದು ರೀತಿಯಲ್ಲಿ ಯುಕ್ತ ಆಯ್ಕೆಯೂ ಆಗಿದ್ದರು. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಡಲಾಗಲಿಲ್ಲ ಎಂಬ ಕಾರಣಕ್ಕೆ ನೈತಿಕ ಹೊಣೆ ಹೊತ್ತು ಕೇರಳ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಆ್ಯಂಟನಿಗೆ ಪುನರ್ವಸತಿ ಕಲ್ಪಿಸಬೇಕಾಗಿತ್ತು. 1977ರಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ (37) ಕೇರಳ ಮುಖ್ಯಮಂತ್ರಿಯಾಗಿ ಅಧಿಕಾರ ರಾಜಕಾರಣದ ಮೊದಲ ಅನುಭವ ಪಡೆದಿದ್ದ ಆ್ಯಂಟನಿ1978ರಲ್ಲಿ ಇಂದಿರಾಗಾಂಧಿ ಸೋಲಿನೊಂದಿಗೆ ಪಕ್ಷದಿಂದ ದೂರ ಸರಿದಿದ್ದರು. ಅದರಿಂದ ರಾಜಕೀಯವಾಗಿ ಬೆಳೆಯಲು ಸಾಧ್ಯವಿಲ್ಲ ಎಂದು ತಿಳಿದಾಗ 1982ರ ವೇಳೆಗೆ ರಾಜೀವ್‌ಗಾಂಧಿ ಮರ್ಜಿಯ ಮೂಲಕ ಮತ್ತೆ ಕಾಂಗ್ರೆಸ್ ಸೇರಿದ್ದರು. ಅಂದಿನಿಂದ ಇಂದಿನವರೆಗೂ ಆ್ಯಂಟನಿ ರಾಜೀವ್ ಕುಟುಂಬದಿಂದ ಋಣ ಮುಕ್ತರಾಗಲು ಸಾಧ್ಯವಾಗಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ. ಯಾವುದೇ ಆರೋಪ ಕೇಳಿ ಬಂದರೆ ತಡಮಾಡದೆ ರಾಜೀನಾಮೆ ನೀಡುವುದನ್ನು ಒಂದು ಹವ್ಯಾಸ ಮಾಡಿಕೊಂಡಿದ್ದ ಆ್ಯಂಟನಿ ಕಾಂಗ್ರೆಸ್‌ನ ಕೊಳಕುಗಳನ್ನು ಪ್ರತಿಫಲಿಸದ ಶುಭ್ರ ಕನ್ನಡಿ. ಅಂತಹ ಆ್ಯಂಟನಿ ಅತ್ಯಂತ ಆಯಕಟ್ಟಿನ ರಕ್ಷಣಾ ಸಚಿವಾಲಯದ ಹೊಣೆ ಹೊತ್ತಾಗ ನಿರೀಕ್ಷೆಗಳು ಬೆಟ್ಟದಷ್ಟಿದ್ದವು. ಹಗರಣಗಳನ್ನು ಎಂದೂ ತಮ್ಮ ಹತ್ತಿರಕ್ಕೆ ಬಿಟ್ಟುಕೊಳ್ಳದ ಆ್ಯಂಟನಿ ರಕ್ಷಣಾ ಸಚಿವಾಲಯಕ್ಕೆ ಅಂಟಿರುವ ರುಷುವತ್ತಿನ ಮಸಿ ತೊಡೆದು ಹಾಕುತ್ತಾರೆಂಬ ಭರವಸೆ ಇತ್ತು. ಇಂದು ದೇಶ ಇತಿಹಾಸದಲ್ಲಿಯೇ ಯಾವ ರಕ್ಷಣಾ ಮಂತ್ರಿಯೂ ಮಾಡದ ಸಾಧನೆಯನ್ನು ಆ್ಯಂಟನಿ ಮಾಡಿದ್ದಾರೆ. ಅತ್ಯಂತ ಹೆಚ್ಚಿನ ಕಾಲ ಈ ಹುದ್ದೆ ನಿಭಾಯಿಸಿದ ಮಂತ್ರಿ ಎಂಬ ಹೆಗ್ಗಳಿಕೆ ಆ್ಯಂಟನಿ ಅವರ ಹೆಗಲೇರಿದೆ.
ಇದನ್ನು ಒಂದು ದೊಡ್ಡ ಸಾಧನೆ ಎನ್ನಬೇಕೆ? ಆ್ಯಂಟನಿ ಬಂದ ಮೇಲೆ ರಕ್ಷಣಾ ವ್ಯವಸ್ಥೆ ಸ್ವಾವಲಂಬಿ ಆಗಿದೆಯೇ? ಕಿಕ್‌ಬ್ಯಾಕ್ (ಮಧ್ಯವರ್ತಿಗಳಿಗೆ ನೀಡುವ ರುಷುವತ್ತು) ಹಾವಳಿ ತಪ್ಪಿದೆಯೇ? ರಕ್ಷಣಾ ವ್ಯವಹಾರ ಕಳಂಕ ಮುಕ್ತವಾಗಿದೆಯೇ? ದಿಲ್ಲಿಯಲ್ಲಿ ಪ್ರತಿ ವರ್ಷ ರಕ್ಷಣಾ ಸಾಮಾಗ್ರಿಗಳ ವಹಿವಾಟಿನ ಕುರಿತಾದ ಡಿಫೆನ್ಸ್ ಎಕ್ಸ್‌ಪೊ ಮೇಳ ನಡೆಯುತ್ತದೆ. ಜಗತ್ತಿನಾದ್ಯಂತ ಇರುವ ಶಸ್ತ್ರಾಸ್ತ್ರ ತಯಾರಕರು, ಪೂರೈಕೆದಾರರು, ಅಲ್ಲಿ ಬೀಡು ಬಿಡುತ್ತಾರೆ. ರಕ್ಷಣಾ ಇಲಾಖೆ ಸುಪರ್ದಿಯಲ್ಲಿಯೇ ನಡೆಯುವ ಈ ಮೇಳದಲ್ಲಿ ಅನೇಕ ಒಪ್ಪಂದಗಳು ಒಡಮೂಡುತ್ತಿವೆ. ದೇಶದ ಅತಿ ಗಣ್ಯರ ಹಾರಾಟಕ್ಕೆಂದು ಇಟಲಿಯಿಂದ ತರಿಸಿಕೊಳ್ಳಲಾಗಿದ್ದ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿಯಲ್ಲಿ ವ್ಯಾಪಕವಾಗಿ ಅಕ್ರಮವಾಗಿದ್ದು, ಮಧ್ಯವರ್ತಿಗಳು ಅದರ ಲಾಭ ಪಡೆದುಕೊಂಡಿರುವ ಅಂಶ ಬೆಳಕಿಗೆ ಬಂದಾಗಲೇ ಈ ಮೇಳವೂ ಆಯೋಜಿತವಾಗಿತ್ತು. ಸಹಜವಾಗಿಯೇ ರಕ್ಷಣಾ ವ್ಯವಹಾರಗಳಲ್ಲಿ ಮಧ್ಯವರ್ತಿಗಳ ಪಾತ್ರದ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದಾಗ There is none i am aware of ' (ನನ್ನ ಅರಿವಿನ ಮಟ್ಟಿಗೆ ಅಂತಹವರ್ಯಾರೂ ಇಲ್ಲ.) ಎಂದು ಆ್ಯಂಟನಿ ಹೇಳಿದರು. ವಿಪರ್ಯಾಸ ಎಂದರೆ ಆ ಮೇಳದ ಪ್ರಮುಖ ಆಕರ್ಷಣೆಯೇ ಈ ಮಧ್ಯವರ್ತಿಗಳಾಗಿದ್ದರು! ಈ ಕುರಿತು ಓಪನ್ ನಿಯತಕಾಲಿಕ ದೊಡ್ಡ ಲೇಖನವನ್ನೇ ಪ್ರಕಟಿಸಿತ್ತು. ಅಲ್ಲಿದ್ದ ಮಧ್ಯವರ್ತಿಗಳ ಗತ್ತು, ಗೈರತ್ತು ಆ್ಯಂಟನಿ ಅವರ ಮಾತುಗಳನ್ನು ವ್ಯಂಗ್ಯವಾಡಿದ ಪರಿ ವಾಸ್ತವಕ್ಕೆ ಕನ್ನಡಿ ಹಿಡಿದಂತಿತ್ತು. 'ರಕ್ಷಣಾ ಪೂರೈಕೆಗೆ ಪರಾವಲಂಬಿಯಾಗಿರುವ ಯಾವುದೇ ದೇಶ ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ (ಮಧ್ಯವರ್ತಿ) ಸಹಾಯವಿಲ್ಲದೇ ರಕ್ಷಣಾ ಸಾಮಾಗ್ರಿ ಕೊಳ್ಳುವುದು ಅಸಾಧ್ಯದ ಮಾತು. ನಾವೇನು ಪುಕ್ಕಟೆಯಾಗಿ ಈ ಕೆಲಸ ಮಾಡುವುದಿಲ್ಲ. ಇದು ನಮ್ಮ ವ್ಯವಹಾರ. ವ್ಯವಹಾರ ಎಂದ ಮೇಲೆ ಲಾಭದ ಲೆಕ್ಕ ಇರಲೇಬೇಕಲ್ಲವೇ? ಹಾಗೆಂದು ನಾವೇನು ಕಳ್ಳರಲ್ಲ. ನಮ್ಮ ಇರುವಿಕೆಯನ್ನೇ ನಿರಾಕರಿಸುವ ಜಾಣಕುರುಡು ಸಚಿವರಿಗೇಕೆ ಬೇಕು?' ಎಂದು ಹಲವರು ಪ್ರಶ್ನಿಸಿದ್ದನ್ನು ಲೇಖನದಲ್ಲಿ ವರದಿ ಮಾಡಲಾಗಿದೆ. ಹಾಗಾದರೆ ಆ್ಯಂಟನಿಗೆ ನಿಜಕ್ಕೂ ಇದರ ಅರಿವಿಲ್ಲವೇ? ಅಥವಾ ಗಾಂಧೀಜಿಯ ಮಂಗನಂತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುಳಿತರೆ ಕೆಟ್ಟದ್ದು ನಡೆಯುವುದಿಲ್ಲವೇ? ಇಲ್ಲಿ ಮತ್ತೊಂದು ಅಂಶ ಗಮನಿಸಬೇಕು. ಆ್ಯಂಟನಿ ಅವರ ಈ ಸುದೀರ್ಘ ಅವಧಿಯಲ್ಲಿ ಭಾರತವು ಜಗತ್ತಿನ ಮೂರನೇ ಅತಿ ಹೆಚ್ಚು ರಕ್ಷಣಾ ಸಾಮಾಗ್ರಿ ಆಮದುದಾರ ದೇಶವಾಗಿ ಹೊರಹೊಮ್ಮಿದೆ. ತನ್ನದೇ ಒಂದು ಸ್ವಂತ ಬ್ರ್ಯಾಂಡ್ ಕಾರು ಉತ್ಪಾದಿಸಲಾಗದ ರಷ್ಯಾದಂತಹ ದೇಶ ರಕ್ಷಣಾ ಸಾಮಾಗ್ರಿಗಳ ಪೂರೈಕೆಯ ನೆಪದಲ್ಲಿ ನಮ್ಮ ಖಜಾನೆಯನ್ನು ಲೂಟಿ ಹೊಡೆದಿದೆ. ಇಂತಹ ಎಲ್ಲಾ ವ್ಯವಹಾರಗಳಲ್ಲೂ ಕಮಿಷನ್ ಹಣ ಕೈಬದಲಾಗುವುದು ಸಹಜ ಎಂಬುದನ್ನು ಅಗಸ್ಟಾ ಹಗರಣ ಸಾಬೀತುಪಡಿಸಿದೆ. ಅಂದರೆ ಆ್ಯಂಟನಿ ಕಣ್ಣಿಗೆ ಇದ್ಯಾವುದೂ ಬಿದ್ದಿಲ್ಲವೇ? ಅಥವಾ ಎಲ್ಲ ಗೊತ್ತಿದ್ದೂ ಮಧ್ಯವರ್ತಿ ಹೇಳಿದಂತೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆಯೇ? ಆ್ಯಂಟನಿ ಅಭ್ರಷ್ಟ ನಿಜ. ಆದರೆ ಭ್ರಷ್ಟತೆಯ ಸೋಂಕು ಕೆಳಮಟ್ಟಿದಲ್ಲಿ ಹರಿದಾಡಲು ಬಿಟ್ಟಿಲ್ಲ ಎಂದು ಖಚಿತವಾಗಿ ಹೇಳಬಲ್ಲರೇ? ನಿಜಕ್ಕೂ ಆ್ಯಂಟನಿ ಸಮರ್ಥ ಆಡಳಿತಗಾರರೇ ಆಗಿದ್ದಿದ್ದರೆ ಭಾರತದ ರಕ್ಷಣಾ ಪರಾವಲಂಬನೆಯಲ್ಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ರಕ್ಷಣಾ ಇಲಾಖೆಯ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗುತ್ತಿರಲಿಲ್ಲವೇ? ಪ್ರತಿವರ್ಷ ಹಲವಾರು ಸಾವಿರ ಕೋಟಿ ರು.ಗಳ ಬಜೆಟ್ ಅನುದಾನ ಲಭ್ಯವಿದ್ದರೂ, ದಶಕಗಳಿಂದ ಕುಂಟುತ್ತಲೇ ಸಾಗಿರುವ ರಕ್ಷಣಾ ಸಾಮಾಗ್ರಿಗಳ ದೇಶೀಯ ಉತ್ಪಾದನೆಯನ್ನು ಚುರುಕುಗೊಳಿಸಿ ದೇಶವನ್ನು ಸ್ವಾವಲಂಬಿ ಮಾಡಲು ಸಾಧ್ಯವಿರಲಿಲ್ಲವೇ? ನಮ್ಮದೇ ಡಿಆರ್‌ಡಿಓ, ಎಚ್‌ಎಎಲ್‌ಗಳನ್ನು ಜಾಗತಿಕ ಸ್ಪರ್ಧಾತ್ಮಕ ಮಟ್ಟಕ್ಕೆ ಕೊಂಡೊಯ್ಯಲಾಗುತ್ತಿರಲಿಲ್ಲವೇ? ರಕ್ಷಣಾ ಆಡಳಿತಶಾಹಿಯಲ್ಲಿ ಬೀಡುಬಿಟ್ಟಿರುವ ಲಾಬಿದಾರರು ಮತ್ತು ಸ್ವಹಿತಾಸಕ್ತರನ್ನು ಬಗ್ಗುಬಡಿಯುವುದು ಸುಲಭದ ಮಾತಲ್ಲ. ಯಾವುದೇ ರಕ್ಷಣಾ ಮಂತ್ರಿಯೂ ತೀರಾ ದೀರ್ಘ ಅವಧಿಗೆ ಉಳಿಯಲು ಈ ಶಕ್ತಿಗಳು ಬಿಡುವುದೂ ಇಲ್ಲ. ಆದರೆ, ಏಳು ವರ್ಷಗಳ ಕಾಲ ಅಧಿಕಾರ ಚಲಾಯಿಸಿದರೂ ಈ ನಿಟ್ಟಿನಲ್ಲಿ ಒಂದು ಹೆಜ್ಜೆಯೂ ಮುಂದೆ ಸಾಗಿಲ್ಲ ಎಂದಾದರೆ ಅದು ಆ್ಯಂಟನಿ ಅವರ ವೈಫಲ್ಯ ಅಲ್ಲವೇ? ಆಸ್ಟ್ರಿಯ ಮೂಲದ ವಾಣಿಜ್ಯ-ವ್ಯವಹಾರ ತಜ್ಞ ಪೀಟರ್ ಡ್ರಕರ್ ಒಂದು ಮಾತು ಹೇಳಿದ್ದಾರೆ. `Effective leadership is not about making speeches or being liked; leadership is defined by results not attributes' (ಬರಿಯ ಮಾತುಗಳಿಂದ ಅಥವಾ ಹತ್ತು ಜನರಿಗೆ ಇಷ್ಟವಾಗುವ ವ್ಯಕ್ತಿತ್ವದಿಂದ ಪರಿಣಾಮಕಾರಿ ನಾಯಕತ್ವ ಮೂಡುವುದಿಲ್ಲ. ನಾಯಕತ್ವವನ್ನು ಫಲಿತಾಂಶದಿಂದ ಅಳೆಯುತ್ತಾರೆಯೇ ಹೊರತು ವರ್ಚಸ್ಸಿನಿಂದಲ್ಲ.) ಈ ಮಾತು ಆ್ಯಂಟನಿ ಅವರಿಗೆ ಅಕ್ಷರಶಃ ಒಪ್ಪುತ್ತದೆ. ಜನರ ಕಣ್ಣಲ್ಲಿ ತಾನು ಪ್ರಾಮಾಣಿಕನಾಗಿಯೇ ಉಳಿಯಬೇಕು, ಆ ಪ್ರಾಮಾಣಿಕತನದ ಹಂಬಲದಲ್ಲಿ ನಿಷ್ಕ್ರೀಯತೆಯೇ ಕೈಮೇಲಾದರೂ ಸರಿ ಎಂಬಂತಿದೆ ಆ್ಯಂಟನಿ ಅವರ ಮನೋಭಾವ. ಆ್ಯಂಟನಿ ಅವರ ಈ ವೈಯಕ್ತಿಕ ಪ್ರಾಮಾಣಿಕತೆಯ ಪ್ರಜ್ಞೆ ಯಾವ ಮಟ್ಟಿಗೆ ಇದೆ ಎಂದರೆ ಅವರ ಮೇಜಿನಿಂದ ಯಾವುದೇ ಫೈಲು ಜರುಗಬೇಕಾದರೂ ತಿಂಗಳು-ವರ್ಷಗಳೇ ಕಳೆದು ಹೋಗುತ್ತದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳೇ ಹೇಳುತ್ತವೆ. ಆ್ಯಂಟನಿ ಅವರು ಇಷ್ಟೆಲ್ಲಾ ಕಾಳಜಿ ವಹಿಸಿದರೂ ಅವರ ಅವಧಿಯಲ್ಲಿ ರಕ್ಷಣಾ ಅವ್ಯವಹಾರಗಳು, ಅಕ್ರಮಗಳು ಹೇರಳವಾಗಿ ಕಾಣಸಿಗುತ್ತವೆ. ಸುಖ್ನಾ ಭೂ ಹಗರಣ, ಆದರ್ಶ ಹೌಸಿಂಗ್ ಸೊಸೈಟಿ ಅಕ್ರಮ, ಅಗಸ್ಟಾ ಅವ್ಯವಹಾರ ಹೀಗೆ ಹಲವಾರು ಕಪ್ಪು ಚುಕ್ಕೆಗಳಿವೆ. ಇಷ್ಟೆಲ್ಲ ಹಗರಣಗಳಾದರೂ ವಿರೋಧ ಪಕ್ಷಗಳು ಸಹ ಆ್ಯಂಟನಿ ತಲೆದಂಡಕ್ಕೆ ಒತ್ತಾಯಿಸಿಲ್ಲ ಎಂದಾದರೆ ಅದು ಅವರ ವೈಯಕ್ತಿಕ ವರ್ಚಸ್ಸಿನಿಂದ ಮಾತ್ರ. ಇನ್ನು ಕಾರ್ಗಿಲ್ ಕದನದ ಬಳಿಕ ರಚನೆಯಾದ ನರೇಶ್‌ಚಂದ್ರ ಸಮಿತಿಯ ಹಲವಾರು ಪ್ರಮುಖ ಶಿಫಾರಸುಗಳು ಇನ್ನೂ ಧೂಳು ತಿನ್ನುತ್ತಾ ಕುಳಿತಿವೆ. ಮೂರು ರಕ್ಷಣಾ ಪಡೆಗಳ ನಡುವೆ ಸುಸೂತ್ರ ಸಂವಹನ, ತರಬೇತಿ, ನಿರ್ವಹಣೆಯಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಏಕತೆ ಮೂಡಿಸಲು ಚೀಫ್ ಆಫ್ ಸ್ಟಾಫ್ಸ್ ಕಮಿಟಿಗೆ ಕಾಯಂ ಅಧ್ಯಕ್ಷರನ್ನು ನೇಮಿಸುವುದಕ್ಕೆ ಈ ಸಮಿತಿ ಒತ್ತು ನೀಡಿತ್ತು. ಆರಂಭದಲ್ಲಿ ಇದರಿಂದ ಸೇನಾಪಡೆಗಳ ಮುಖಂಡರ ಪಾತ್ರ ಗೌಣವಾಗಬಹುದೆಂಬ ಆತಂಕ ಇತ್ತಾದರೂ ಈಗ ಸ್ವತಃ ಸೇನಾಪಡೆಗಳೇ ಇಂತಹ ವ್ಯವಸ್ಥೆಯ ಅಗತ್ಯವನ್ನು ಮನಗಂಡಿವೆ. ಆದರೆ ಈ ವಿಷಯದಲ್ಲಿ ರಕ್ಷಣಾ ಮಂತ್ರಾಲಯದಲ್ಲಿ ಸಹಮತ ಮೂಡಿಸುವಲ್ಲಿ ಸಹ ಆ್ಯಂಟನಿ ಯಶಸ್ಸು ಕಂಡಿಲ್ಲ. ಇವರು ರಕ್ಷಣಾ ಸಚಿವಾಲಯದಲ್ಲಿ ಬಂದು ಕುಳಿತು ಏಳು ವರ್ಷವಾದರೂ ವ್ಯವಸ್ಥೆಯ ಸುಧಾರಣೆಯ ವಿಷಯದಲ್ಲಿ ಏಳು ಹೆಜ್ಜೆ ಸಹ ಮುಂದಿಟ್ಟಿಲ್ಲ. ರಾಜಕಾರಣದಲ್ಲಿ ಪ್ರಾಮಾಣಿಕರು, ಶುದ್ಧಹಸ್ತರು ಇರಬೇಕು ಸರಿ. ಆದರೆ ಪ್ರಾಮಾಣಿಕತೆ ನಿಷ್ಕ್ರಿಯತೆಯನ್ನು ಹುಟ್ಟುಹಾಕಿದರೆ ಅದರಿಂದ ವ್ಯವಸ್ಥೆಗೆ, ದೇಶಕ್ಕೆ ಯಾವುದೇ ಲಾಭವಿಲ್ಲ. ಮನಮೋಹನ್ ಸಿಂಗ್, ಆ್ಯಂಟನಿಯಂತಹವರೇ ಇದಕ್ಕೆ ಸ್ಪಷ್ಟ ಉದಾಹರಣೆ!
- ಕೆ.ಎಸ್.ಜಗನ್ನಾಥ್
jagannath.kudinoor@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

