ಅಂಕಣಗಳು

ನಮ್ಮೆಲ್ಲ ಪಾಪಗಳಿಗೂ ತೀರ್ಥವೇ 'ಸಲ್ಯುಷನ್‌'

Published On :

ಅದನ್ನು ತೀರ್ಥವೆಂದು ಕರೆಯಲು ಮನಸ್ಸು ಒಪ್ಪುವುದೇ ಇಲ್ಲ. ಪಾಚಿಗಟ್ಟಿ ನಿಂತ ಕೊಳದಲ್ಲಿ ತನ್ನ ಎಂದಿನ ತಿಳಿ ನೀಲ ಸೌಂದರ್ಯವ ಕಳಕೊಂಡು ಹಸಿರ ಹಾವಸೆ ಹೊದ್ದು ಮಲಗಿದ್ದಂತಿರುವ ಆ ನೀರನ್ನು ಪವಿತ್ರವೆಂದು ಪರಿಗಣಿಸುವುದಾದರೂ ಹೇಗೆ? ಇದು ಒಂದು ಕಲ್ಯಾಣಿಯ ಸ್ಥಿತಿಯಲ್ಲ, ಒಂದು ತೀರ್ಥದ ಸ್ವರೂಪವಲ್ಲ, ಒಂದು ಪುಷ್ಕರಣಿಯ ದುಸ್ಥಿತಿಯಲ್ಲ. ರಾಜ್ಯದ ಯಾವುದೇ ಭಾಗಕ್ಕೆ ಹೋದರೂ ಒಂದು ಕಾಲದಲ್ಲಿ ಇವುಗಳಲ್ಲಿ ಮಿಂದರೆ ಸರ್ವ ಪಾಪಗಳೂ ಪರಿಹಾರವಾಗುತ್ತವೆ ಎಂಬ ನಂಬಿಕೆಯನ್ನು ಒಡಲಲ್ಲಿಟ್ಟುಕೊಂಡಿದ್ದವೋ ಆ ಎಲ್ಲ ತೀರ್ಥಗಳದ್ದೂ ಬಹುತೇಕ ಇದೇ ಪರಿಸ್ಥಿತಿ. ತೀರ್ಥದ ಹೆಸರಲ್ಲಿ ನಮ್ಮ ನಂಬಿಕೆಗಳಿಗೆ ಹೇತುವಾಗಿದ್ದ ದೇವ ಸನ್ನಿಧಿಗಳ ಮುಂದಿನ ಎಲ್ಲ ಜಲಮೂಲಗಳೂ ಇಂದು ಒಂದೋ ಬತ್ತಿ ಬರಡಾಗಿವೆ ಅಥವಾ ಹೇಸಿಗೆ ಹುಟ್ಟಿಸುವಷ್ಟು ಮಲಿನವಾಗಿವೆ. ಅಪವಾದಗಳನ್ನು ಬಿಟ್ಟರೆ ನಮ್ಮೆಲ್ಲ ತೀರ್ಥ ಕ್ಷೇತ್ರಗಳೂ ರೋಗಗಳ ಆಗರವೇ.
 'ತೀರ್ಥ' ಎಂಬುದೇ ನಮ್ಮ ಪಾಲಿಗೆ ಸಂಸ್ಕೃತಿ, ಸಂಪ್ರದಾಯ, ಭಾವನೆ, ನಂಬಿಕೆ, ಸನ್ನಿವೇಶ, ಸಂದರ್ಭಗಳನ್ನು ಕಟ್ಟಿಕೊಡುವ ವಿಶೇಷ ಅರ್ಥಗಳನ್ನು ಸ್ಫುರಿಸುವ ವಿಶಿಷ್ಟ ಪದ. 'ತೀರ್ಥ' ವೆಂದರೆ ಪವಿತ್ರ ಜಲ, ಪುಣ್ಯಕ್ಷೇತ್ರ, ಧಾರ್ಮಿಕ ಮಹತ್ವದ ಸ್ಥಳ, ಗೌರವಾನ್ವಿತ, ಶ್ರೇಷ್ಠತಮ ಎಂಬುದೆಲ್ಲ ಅರ್ಥವೈವಿಧ್ಯವನ್ನು ಹೊಂದಿರುವಂಥದ್ದು. ನೈಜ ಸ್ಥಿತಿ, ವಾಸ್ತವ ಸನ್ನಿವೇಶವನ್ನು ಗಮನಿಸಿದರೆ ಇಂದು ಯಾವುದೇ ದೈವ ಸನ್ನಿಧಿಯಲ್ಲಿ, ಯಾವುದೇ ತೀರ್ಥಗಳ ಅರ್ಥ ವ್ಯಾಪಕತೆ ಇದಕ್ಕೆ ಅನ್ವಯವಾದಂತೆ ಇದೆಯೇ?  ದೇವಾಲಯದಲ್ಲಿ ದೇವರಿಗೆ ಅಭಿಷೇಕ ಮಾಡಿದ 'ಅಮೃತ' ಎಂದು ಪರಿಗಣಿತವಾಗಿದ್ದ, ನಮಗೆ ಪವಿತ್ರವೆನಿಸಿದ್ದ ಜಲಮೂಲಗಳು ನಿಜಕ್ಕೂ ಅದಕ್ಕೆ ಅರ್ಹವಾಗಿ ಉಳಿದಿವೆಯೇ? ಅದನ್ನು ಹಾಗೆ ಉಳಿಸಿದ್ದೇವೆಯೇ? ಪ್ರಶ್ನೆಯನ್ನು ಯಾರಿಗೆ ಕೇಳಬೇಕು? ಇಂದಿನ ಸ್ಥಿತಿಗೆ ಯಾರು ಹೊಣೆ? ಅಕಾಲ ಮೃತ್ಯು ಮಥನಂ, ಸರ್ವವ್ಯಾಧಿ ವಿನಾಶನಂ- ಅಂದರೆ ಅದು ಅಕಾಲಮೃತ್ಯುವನ್ನು ದೂರಗೊಳಿಸಬಲ್ಲುದು, ಸಕಲ ವ್ಯಾಧಿಗಳನ್ನು ನಿವಾರಿಸಬಲ್ಲುದು, ಎಲ್ಲ ಬಗೆಯ ಪಾಪಗಳ ತಾಪವನ್ನು ಶಮನಗೊಳಿಸಬಲ್ಲುದು ಎಂದು ನಂಬಲಾಗಿತ್ತು. ಖಂಡಿತಾ ಅನ್ವರ್ಥವಾಗಿತ್ತು ನಮ್ಮ ತೀರ್ಥಗಳು. ಅಂಥ ತೀರ್ಥಕ್ಕಾಗಿ ನಡು ಬಗ್ಗಿಸಿ, ಶಿರ ತಗ್ಗಿಸಿ, ಬಲಗೈ ಒಡ್ಡಿ ಅತ್ಯಂತ ಪುನೀತ, ವಿನೀತ ಭಾವದಿಂದ ನಿಲ್ಲುತ್ತಿದ್ದೆವು. 'ಮುಪ್ಪಡರುವ, ರೋಗಕ್ಕೆ ಬಳಲುವ ಈ ಕಳೇಬರಕ್ಕೆ ಆ ಮಹಾವೈದ್ಯನ ಚರಣಾಮೃತವೇ ಮುನ್ನೆಚ್ಚರಿಕೆಯ ಮದ್ದು' ಎಂದುಕೊಳ್ಳುತ್ತೇವಲ್ಲ, ಅದು ತೀರ್ಥ. ಆ ಹೆಸರಿನಲ್ಲಿ ಇಂದು ತೀರ್ಥವನ್ನು ನೋಡಲಾದೀತೆ?
  ತೀರ್ಥದ ವ್ಯಾಖ್ಯಾನ ಇಷ್ಟಕ್ಕೇ ಮುಗಿಯುವುದಿಲ್ಲ. ನಮ್ಮ ಹುಟ್ಟಿಗೆ ಕಾರಣರಾದ ತಂದೆ ಮತ್ತು ತಂದೆಗೆ ಸಮಾನರಾದವರನ್ನು ನಾವು 'ತೀರ್ಥರೂಪ'ರೆಂದು ಕರೆಯುತ್ತೇವೆ. ಅದು ನಮ್ಮ ಶ್ರದ್ಧೆಯ ಪ್ರತೀಕ. ಜೈನ ಧರ್ಮದವರ ಆರಾಧ್ಯ ಮಹಾಪುರುಷರನ್ನು ಗುರುತಿಸುವುದು 'ತೀರ್ಥಂಕರ'ರೆಂದೇ. ಅಂದರೆ ಅದು ಅತ್ಯಂತ ಗೌರವಪೂರ್ವಕ ಸ್ಥಾನ. ನಮ್ಮಲ್ಲಿ ಪವಿತ್ರ, ಗೌರವಾನ್ವಿತವೆನ್ನವುದನ್ನು ನಾವು ತೀರ್ಥದ ಸ್ವರೂಪದಲ್ಲೇ ನೋಡುವುದು. ಪ್ರತಿ ನದಿಯೂ ನಮಗೆ ಪವಿತ್ರವೇ, ಹಾಗಾಗಿ ಎಲ್ಲ ನದಿಗಳೂ ನಮಗೆ 'ತೀರ್ಥ'ವೇ. ನದಿಯ ಉಗಮ ತಾಣ, ಮೈತುಂಬಿ ಹರಿಯುವ ಸ್ಥಳ, ಇನ್ನೊಂದು ನದಿಯೊಂದಿಗೆ ಅದು ಸಂಗಮಿಸುವ ಪ್ರದೇಶ, ಸಮುದ್ರದೊಂದಿಗೆ ಸೇರುವ ಜಾಗ... ಹೀಗೆ ಎಲ್ಲವೂ ನಮ್ಮ ಪಾಲಿಗೆ ಪೂಜನೀಯವೇ. ಅಲ್ಲೆಲ್ಲ ನಾವು ತೀರ್ಥವನ್ನು ಕಾಣುತ್ತೇವೆ. ಸ್ಥಳ ವಿಶೇಷ, ಇತಿಹಾಸ ಎಲ್ಲವನ್ನೂ ಬದಿಗಿಟ್ಟು ನೋಡಿದರೂ ನದಿಗೆ ಹರಿವ ಗುಣವಿದೆ. ಜತೆಗೆ ತನ್ನೊಂದಿಗೆ ಕಲ್ಮಶಗಳನ್ನು ತೊಳೆದುಕೊಂಡು ಹೋಗುವ ಗುಣವಿದೆ. ಹೀಗಾಗಿ ನದಿಯೂ ಶ್ರದ್ಧೆಯ ತಾಣವಾಗಿ ಕಂಡುದರಲ್ಲಿ ಅತಿಶಯವಿಲ್ಲ.
  ತೈತ್ತರೀಯ ಅರಣ್ಯಕದಲ್ಲಿ ಬರುವ ಒಂದು ಸಾಲು, ನದಿ ನೀರಿಗೆ ಎಲ್ಲವನ್ನೂ ಶುದ್ಧಗೊಳಿಸುವ ಚಲಶೀಲ ಶಕ್ತಿ ನಿಸರ್ಗದತ್ತವಾಗುದು ಎಂದು ವ್ಯಾಖ್ಯಾನಿಸುತ್ತದೆ. 'ಪುನಂತು ಪೃಥಿವೀಂ, ಪೃಥಿವೀ ಪೂತಾ ಪುನಾತ್...' ಎಂದು ಆರಂಭವಾಗುವ ಆ ಸಾಲಿನಲ್ಲಿ ಪವಿತ್ರ ಜಲ, ತಾನಷ್ಟೇ ಅಲ್ಲ, ನೆಲವನ್ನು ಅದರ ಮೇಲಣ ಜನರನ್ನೂ ಒಳ ಹೊರಗುಗಳ ಸೇರಿ ಶುದ್ಧಗೊಳಿಸಬಲ್ಲುದೆಂಬ ಪ್ರಾರ್ಥನಾ ರೂಪದ ಆಶಯ ವ್ಯಕ್ತವಾಗುತ್ತದೆ. ನದಿ ನೀರಿಗೆ ಸರ್ವಥಾ ಈ ಗುಣ ಇದ್ದೇ ಇದೆ. ತನ್ನೊಡಲಿಗೆ ಬಂದು ಸೇರುವ ಎಲ್ಲ ಕೊಳೆಯನ್ನೂ ಹರಿವಲ್ಲಿ ಒಂದಾಗಿಸಿಕೊಂಡು ಹೋಗಿ ಮತ್ತೆ ಶುದ್ಧಗೊಳ್ಳುತ್ತದೆ.
  ಇಷ್ಟಕ್ಕೇ ನಮ್ಮ ತೀರ್ಥದ ಮಹಿಮೆಯ ಬಣ್ಣನೆ ಮುಗಿಯುವುದಿಲ್ಲ. ಬೋಧಾಯನ ಬ್ರಹ್ಮಕರ್ಮ ಸಮುಚ್ಚಯದಲ್ಲಿ ಬರುವ ಮತ್ತೊಂದು ಸಾಲು ಹೇಳುವ ಪ್ರಕಾರ ನಾವು ಸೇವಿಸುವ ಕಲ್ಮಶ ಆಹಾರ, ನಮ್ಮ ನಡತೆಯಲ್ಲಿನ ದೋಷ, ನಮ್ಮ ಒಡನಾಟ, ಸಾಂಗತ್ಯದಲ್ಲಿ ತಪ್ಪು, ನಾವು ಎಸಗುವ ಕುಕೃತ್ಯಗಳನ್ನೂ ತೀರ್ಥವೆಂದು ಕರೆಯಲ್ಪಡುವ ಶುದ್ಧ ಜಲ ಮನ್ನಿಸಿ ನಮ್ಮನ್ನು ಪುನೀತಗೊಳಿಸುತ್ತದೆ. 'ಯದ್ ಉಚ್ಛಿಷ್ಟಂ ಅಭೋಜ್ಯಂ ಯದ್ ವಾ ದುಷ್ಪರಿತಂ ಮಮ...' ಎಂಬ ಆದರ್ಶದ ಕಲ್ಪನೆಯೇ ನೀರಿನ ಶ್ರೇಷ್ಠತೆಗೆ ಸಾಕ್ಷಿ. ಎಲ್ಲವೂ ಅರಿತೇ ಆಗುವ ತಪ್ಪುಗಳಲ್ಲ. ಅಂಥ ತಪ್ಪುಗಳ ಹೊಣೆ ಹೊರಲು, ಅದಕ್ಕೆ ಹೆಗಲು ಕೊಡಲು ನಮ್ಮಿಂದ ಮಾತ್ರವೇ ಸಾಧ್ಯವಿಲ್ಲ. ಅಂಥ ಸನ್ನಿವೇಶದ ನೆರವಿಗೆ ನೀರನ್ನು ನಾವು ಪ್ರಾರ್ಥಿಸುವ, ಪಶ್ಚಾತ್ತಾಪದೊಂದಿಗೆ ಅದರಿಂದ ಮುಕ್ತರಾಗುವ ಚಿಂತನೆಯೇ ರೋಚಕ. ಯಾಜ್ಞವಲ್ಕ್ಯ ಸ್ಮೃತಿಯಲ್ಲಿಯಂತೂ 'ಮನೋ ಜ್ಞಾನಂ ತಪೋ ಜಲಮ್‌' ಎನ್ನಲಾಗಿದೆ.
  ಪಂಚ ಭೂತಗಳಲ್ಲಿ ಬೇರೆಲ್ಲದಕಿಂತ ನೀರಂತೂ 'ಶುದ್ಧಿ'ಗೊಂದು ದೈವದತ್ತ ಸುಲಭ ಸಾಧನ. ಇದು ವೇದೋಕ್ತ, ವೈಜ್ಞಾನಿಕ, ವಾಸ್ತವದ ದೃಷ್ಟಿಯಿಂದಲೂ ಸತ್ಯವೇ. ಮೊರೆ ಹೊಕ್ಕವರನ್ನು, ಶರಣಾಗಿ ಬಂದವರನ್ನು, ತನ್ನೊಳಗೆ ಹೊಕ್ಕವರನ್ನು (ಮುಳುಗಿದವರನ್ನು) ಅವರ ತಪ್ಪುಗಳ ಮನ್ನಿಸಿ, ಅವರಲ್ಲಿನ ಕೊಳೆಯನ್ನು ತಾನೇ ಸ್ವೀಕರಿಸಿ ಅವರನ್ನು ಶುದ್ಧ (ಸ್ವಚ್ಛ)ರನ್ನಾಗಿ ಪರಿವರ್ತಿಸುವ ಉದಾತ್ತ ಗುಣ ನೀರಿನದು. ನೀರಿನಲ್ಲಿ ಎಲ್ಲವೂ ಮರೆಯಾಗಿ ಹೋಗುವುದರಿಂದ ಇಂಗ್ಲಿಷಿನಲ್ಲಿ ಇದಕ್ಕೆ 'ಸಲ್ಯುಷನ್‌' ಎಂದು ಕರೆಯುತ್ತಾರೆ. ಅಂದರೆ ಇದು 'ದ್ರಾವಣ' ವೂ ಹೌದು, 'ಪರಿಹಾರ' ವೂ ಆಗಬಹುದು. ಕರಗುವ(ಪಾಪ, ಕೊಳೆ) ಮತ್ತು ಬಗೆಹರಿಸುವ(ಸಮಸ್ಯೆಗಳನ್ನು) ಸುಲಭ ಮಾಧ್ಯಮ. ಅದಕ್ಕಾಗಿಯೇ ನೀರಿಗೆ ನಾವು ಪವಿತ್ರ ತೀರ್ಥದ ಸ್ಥಾನ ಕೊಟ್ಟದ್ದು.
ನಾವು ಬಳಸುವ ನೀರು ಪರಿಶುದ್ಧವಾಗಿರಬೇಕು, ದೈವಾಂಶಪೂರಿತವಾಗಿರಬೇಕು. ಇಂಥ ಆಶಯದೊಂದಿಗೇ ನಾವು ನೀರಿಗೆ ಉನ್ನತ ಸ್ಥಾನಮಾನಗಳನ್ನು ಕೊಟ್ಟು ಅದರ ಶುದ್ಧತೆಯ ರಕ್ಷಣೆಗೆ ಪ್ರಯತ್ನಿಸಿದ್ದು. ಹೊಳೆ, ಹೊನಲು, ತೊರೆ, ಕೊಳ, ಕೆರೆ, ಭಾವಿ ಕೊನೆಗೆ ಇತ್ತೀಚಿನ ಕೊಳವೆ ಬಾವಿಯಿಂದ ತಂದ ನೀರಿಗೂ 'ಗಂಗಾದಿ ಸರ್ವ ತೀರ್ಥಾನಿ ಸನ್ನಿಹಿತಾಸ್ಸಂತು' ಎಂದು ಎಲ್ಲ ಪೂಜನೀಯ ತೀರ್ಥಗಳನ್ನು ಅದರಲ್ಲಿ ಆಹ್ವಾನಿಸಿಕೊಂಡು ಬಳಸುತ್ತೇವೆ. ಎಲ್ಲ ಪುಣ್ಯ ನದಿಗಳ ಅನುಗ್ರಹವನ್ನೂ ಅ ಮೂಲಕ ಕೋರುತ್ತೇವೆ.
  'ಇಮಂ ಮೆ ಗಂಗೆ ಯಮುನೆ...' ಎಂದು ಆರಂಭಿಸಿ ವೇದ ಕಾಲೀನ ಎಲ್ಲ ನದಿಗಳನ್ನೂ ಸ್ಮರಿಸುವ ಪರಂಪರೆ ನಮ್ಮಲ್ಲಿ ಇಂದಿಗೂ ಮುಂದುವರಿದಿದೆ. ಇದರಲ್ಲಿ ಬಹುತೇಕವು ಭಾರತದ ಎಲ್ಲ ಮೂಲೆಗಳನ್ನು ಸಂಕೇತಿಸುವ ನದಿಗಳಾಗಿದ್ದು ದೇಶದ ಏಕತೆಯ ದ್ಯೋತಕವೂ ಹೌದು. ಹಿಂದೂಗಳಲ್ಲಿ ಮನೆಯಲ್ಲಿ ನಡೆಯುವ ವಿವಾಹ, ಚೌಲ, ಉಪನಯನ, ಸಮಾವರ್ತನ, ಸೀಮಂತ ಇತ್ಯಾದಿ ಮಂಗಲಕಾರ್ಯಗಳ ಮುನ್ನಾದಿನ 'ಉದಕ ಶಾಂತಿ' ಎಂಬ ವಿಶೇಷ ಕಾರ್ಯಕ್ರಮವನ್ನು ನಡೆಸುವುದುಂಟು. 'ನೀರೇ ಶ್ರದ್ಧೆಯ ಇನ್ನೊಂದು ರೂಪ. ಆ ಶ್ರದ್ಧೆಯಿಂದಲೇ ಎಲ್ಲ ಯಜ್ಞಗಳು ಪ್ರಾರಂಭವಾದರೆ, ನಿರ್ವಿಘ್ನವಾಗಿ ಕೊನೆಗೊಳ್ಳುತ್ತವೆ. ದೇವತೆಗಳಿಗೂ ಅದು ಪ್ರಿಯ. ಆದ್ದರಿಂದ ನೀರನ್ನು ಪವಿತ್ರಗೊಳಿಸಿಕೊಂಡು ತನ್ಮೂಲಕ ಶಾಂತಿಯನ್ನು ಆಶಿಸಬೇಕು' ಎನ್ನುತ್ತದೆ ಬೋಧಾಯನ ಗೃಹ್ಯ ಶೇಷ ಸೂತ್ರ. ಇನ್ನು ನೀರಿನಲ್ಲಿ ಮುಳುಗೇಳಬೇಕು, ಶುದ್ಧಿಗೊಂಡು ಹೊರಬಂದ ಮೇಲೇ ಉಳಿದೆಲ್ಲ ಧಾರ್ಮಿಕ ಕ್ರಿಯೆಗಳು ಎಂಬ ನಿಯಮವನ್ನು ಸಾರುತ್ತದೆ 'ಸ್ನಾತೋ ಅಧಿಕಾರೀ ಭವತಿ...' ಎಂಬ ಸ್ಮೃತಿ ಸಾಲು. ಈಗಲೂ ಹಾಗೆಯೇ ನಡವಳಿಕೆ.
ಅಷ್ಟೇ ಅಲ್ಲ, ವಿಧಿವತ್ತಾಗಿ ನೀರಲ್ಲಿ ಸ್ನಾನ ಮಾಡುವುದು ಸಹ ಒಂದು ಅತ್ಯವಶ್ಯಕ ಧಾರ್ಮಿಕ ಕ್ರಿಯೆಯಾಗಿತ್ತು. ಸ್ನಾತ ಎಂದರೆ ಮಿಂದ ಬಳಿಕದ್ದು ಎಂದರ್ಥ. ಆನಂತರವಷ್ಟೇ ಯಾವುದಕ್ಕಾದರೂ ಅಧಿಕಾರ ಪ್ರಾಜ್ಞತೆ ಬರುವುದು. ಹಾಗೆಯೇ ವಿದ್ಯಾಭ್ಯಾಸದಲ್ಲೂ. ವಿದ್ಯೆಯ ಅಧಿಕಾರ ಪ್ರಾಥಮಿಕ ಅರಿವಿನ ಬಳಿಕವೇ. ಹೀಗಾಗಿ ಅದು 'ಸ್ನಾತಕೋತ್ತರ' ವಿದ್ಯಾಭ್ಯಾಸ. ಉನ್ನತ ವ್ಯಾಸಂಗವೆಂದರೆ ಸ್ನಾಯೀತನಾದವ ಬ್ರಹ್ಮಚರ್ಯ ಮುಗಿಸಿ ಸಮಾವರ್ತ ಸ್ನಾನ ಮಾಡಿದ ಬಳಿಕವೇ ಮುಂದಿನ ಬದುಕಿಗೆ ಅಡಿ ಇಡಬೇಕು ಎನ್ನುತ್ತದೆ ಯಾಜ್ಞವಲ್ಕ್ಯ ಸ್ಮೃತಿ. ಅಂದರೆ ಬದುಕಿನ ಸ್ಥಿತ್ಯಂತರವನ್ನು ಗುರುತಿಸಲೂ ನೀರಿನ ಸಾಕ್ಷಿ ನಮಗೆ ಬೇಕೇಬೇಕು. 'ಯೇ ಅಪ್ಸು ಅಂತರ್ ಅಗ್ನಯ...' ಎಂತಲೇ ಆರಂಭವಾಗುವ ಸ್ತುತಿಯೊಂದಿಗೆ ಮಿಂದು ಮುಂದಿನ ಬದುಕಿಗೆ ಇಂದ್ರಾದಿ ಎಲ್ಲ ದೈವ ಬಲವನ್ನು, ನೈತಿಕ ಶಕ್ತಿಯನ್ನೂ ಕೋರಲಾಗುತ್ತದೆ.
  ಆತ್ಮವೇ ಒಂದು ನದಿಯೆಂದೂ ವೇದಗಳು ಸಾರುತ್ತವೆ. ಇಷ್ಟೆಲ್ಲಾ ನಂಬಿಕೆಗಳ ಹಿನ್ನೆಲೆಯಲ್ಲಿ, ಅಂಥ ಸಂಸ್ಕೃತಿಯ ತೊಟ್ಟಿಲಲ್ಲಿ ಆಡಿ ಬೆಳೆದ ಜನಾಂಗದ ಉತ್ತರಾಧಿಕಾರಿಗಳಾದ ನಾವು ಇಂದು ತೀರ್ಥತಾಣಗಳನ್ನು ನಿರ್ವಹಿಸುತ್ತಿರುವ ರೀತಿ ನಿಜಕ್ಕೂ ನಾಚಿಕೆ ಹುಟ್ಟಿಸುತ್ತದೆ. ನಮ್ಮ ಪಾಲಿಗೆ ದಿವ್ಯೌಷಧಿ ಎನಿಸಿದ್ದ ತೀರ್ಥಗಳೇ ಕೊಳಚೆಗುಂಡಿಗಳಾಗಿ ಪರಿವರ್ತಿತವಾಗಿವೆ. ನಮ್ಮ ಸೋಗಲಾಡಿತನಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಅಗತ್ಯವಿದೆಯೇ? ಆಧುನಿಕತೆಯ, ಅಭಿವೃದ್ಧಿಯ ಹರಿಕಾರರೆಂದು ಹೇಳಿಕೊಳ್ಳುವ ನಾವು ನಿಜವಾಗಿ ಸಾಧಿಸಿರುವುದಾದರೂ ಏನನ್ನು? ಯಾವ ನಾಗರೀಕತೆಗೆ ಇದು ಶೋಭೆ ತಂದೀತು?  'ನೆಮ್ಮದಿ, ಸಮಾಧಾನವೇ ಶ್ರೇಷ್ಠವಾದ ತೀರ್ಥ' ಎನ್ನುತ್ತದೆ ಮತ್ಸ್ಯ ಪುರಾಣ. ಪರಿಶುದ್ಧನಾದ ಮನಸ್ಸೇ ಎಲ್ಲಕ್ಕೂ ಮಿಗಿಲಾದ ತೀರ್ಥ ಎಂಬ ಕಿವಿಮಾತೂ ಇದೆ. ಅಂಥ ಪರಿಶುದ್ಧತೆ ನಮ್ಮ ಸನಿಹದ ಜಲಮೂಲದಲ್ಲಿ ಪ್ರತಿಫಲನಗೊಳ್ಳುತ್ತಿದೆಯೇ? ಒಮ್ಮೆ ತೀರ್ಥಗಳ ಸನ್ನಿಧಿಯಲ್ಲಿ ಹೊಗಿ ನಿಂತು ಎಲ್ಲರೂ ಕೇಳಿಕೊಳ್ಳಬೇಕಾದ ಪ್ರಶ್ನೆಯಿದು.

-ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.