ಅಂಕಣಗಳು

ಅಧಿಕಾರ ಗದ್ದುಗೆಗೆ 'ಲಿಫ್ಟ್‌'ನಲ್ಲಿ ಹೊರಟಿರುವ ರಾಹುಲ್!

Published On :

ರಾಜೀವ್ ಗಾಂಧಿಯವರಿಗೂ ಪ್ರಧಾನಿಯಾಗುವ ಮುನ್ನ ರಾಜಕೀಯ ಮತ್ತು ಆಡಳಿತದ ಅನುಭವ ಪಡೆಯುವ ಅವಕಾಶವಿತ್ತು. ಆದರೂ ಪಡೆಯಲಿಲ್ಲ. ಈಗ ರಾಹುಲ್ ಗಾಂಧಿಗೂ ಕೇಂದ್ರದಲ್ಲಿ ಸಚಿವರಾಗಿ ಆಡಳಿತದ ಅನುಭವ ಪಡೆಯುವ ಅವಕಾಶವಿತ್ತು.

ಎಲ್ಲರೂ ಸಾಧನೆ ಮಾಡಿ ಬಿರುದು ಪಡೆದರೆ, ಇವರು ಬಿರುದು ಪಡೆದು ಸಾಧನೆ ಮಾಡಹೊರಟವರು! 'ವಿಷ'ವೆಂದು ಹೇಳುತ್ತಲೇ ಅಧಿಕಾರಕ್ಕೇರಿ ವಿಷಕಂಠನಾಗಲು ಹೊರಟವರು!!
ಯುವರಾಜ, ಭಾವೀ ಪ್ರಧಾನಿ, ಕಾಂಗ್ರೆಸ್ ಕೃಪಾಪೋಷಿತ ಯುವ ನಾಯಕ ರಾಹುಲ್ ಗಾಂಧಿ. ಅವರು ಒಮ್ಮೆಯೂ ಮುಖ್ಯಮಂತ್ರಿಯಾಗಿಲ್ಲ. ಸಚಿವರಾಗಿ ಕೆಲಸ ಮಾಡಿಲ್ಲ. ಹೋಗ್ಲಿ ಬಿಡಿ, ಪಕ್ಷವನ್ನು ಒಂದು ರಾಜ್ಯದ ಚುನಾವಣೆಯಲ್ಲಿ ಗೆಲ್ಲಿಸಿಲ್ಲ. ಆದರೂ ಇಷ್ಟೆಲ್ಲ ಬಿರುದುಗಳು. ಸಾಧನೆ ಮಾಡಿ ಬಿರುದು ಗಳಿಸಿದವನಿಗಿಂತ ಬಿರುದು ಗಳಿಸಿ ಸಾಧನೆಮಾಡಲು ಹೊರಡುವವನ ಜವಾಬ್ದಾರಿಗಳು ಹೆಚ್ಚಿರುತ್ತವೆ. ಯಾಕೆಂದರೆ ಆತ ಆ ಪ್ರಮಾಣದ ಸಾಧನೆ ಮಾಡುತ್ತಾನೆ ಎಂಬ ಉದ್ದೇಶದಿಂದಲೇ ಆತನಿಗೆ ಆ ಬಿರುದುಗಳನ್ನು ನೀಡಲಾಗಿರುತ್ತದೆ. ಹೀಗಾಗಿ ನಿರೀಕ್ಷೆಗಳೂ ಹೆಚ್ಚಿರುತ್ತವೆ. ಅದಕ್ಕೆ ಸರಿಯಾಗಿ 2014ರ ಲೋಕಸಭಾ ಚುನಾವಣೆ ಸಿದ್ಧತೆ ಎಂಬರ್ಥದಲ್ಲಿ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಸಹಜವಾಗಿ ರಾಹುಲ್ ಗಾಂಧಿ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಅದರಲ್ಲೂ ಪಕ್ಷದ ಮುದಿ ನಾಯಕರು ಈ ಯುವ ನಾಯಕ ಮತ್ತೆ ಅಧಿಕಾರ ತಂದುಕೊಡುತ್ತಾನೆ ಎಂದು ಬಾಯಿಬಿಟ್ಟುಕೊಂಡು ಕಾಯುತ್ತಿದ್ದಾರೆ. ಅನುಭವೀ ಮುದುಕರೆಲ್ಲ ಸೇರಿ ಅನನುಭವಿ ಯುವಕನನ್ನು ಮುಂದಿಟ್ಟುಕೊಂಡು 2014ರ ಲೋಕಸಭಾ ಚುನಾವಣೆಯಲ್ಲಿ ಯುವಕರ ಮತ ಸೆಳೆಯಲು ಸಿದ್ಧತೆ ನಡೆಸಿದ್ದಾರೆ. ರಾಹುಲ್ ಗಾಂಧಿಗೆ ರಾಜಕೀಯ ಬೇಡದಿದ್ದರೂ, ಕಾಂಗ್ರೆಸ್‌ಗೆ ರಾಹುಲ್ ಗಾಂಧಿ ರಾಜಕೀಯಕ್ಕೆ ಬರುವುದು ಬೇಕಾಗಿದೆ.
ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ 10 ವರ್ಷಗಳ ಸತತ ಯುಪಿಎ ಆಡಳಿತದ ತಪ್ಪು, ಹಗರಣ, ಬೆಲೆ ಏರಿಕೆ, ಗ್ಯಾಸ್ ಟ್ರಬಲ್, ಅವುಗಳ ಕೆಟ್ಟ ಹೆಸರನ್ನು, ಅಧಿಕಾರದಲ್ಲಿರುವ ಪಕ್ಷದ ಕುರಿತಾಗಿರುವ ವಿರೋಧಿ ಅಲೆಯನ್ನು ರಾಹುಲ್ ಗಾಂಧಿ ಎಂಬ ಏಕೈಕ ಹೆಸರಿನಿಂದ ಮರೆಮಾಚಿ, ಜಯಗಳಿಸುವ ಹವಣಿಕೆಯಲ್ಲಿದೆ.
ಆದರೆ ಈ ಯುವ ನಾಯಕನೋ, ದಿಲ್ಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಯುವಕರ ಪಡೆ ಬೀದಿಗಿಳಿದ ಸಂದರ್ಭದಲ್ಲಿ ಚಿಕಾಗೋದಲ್ಲಿರುವ ಸ್ಯಾಂಪಿಟ್ರೋಡಾ ಅವರ ಮನೆಯಲ್ಲಿ ಹಾಯಾಗಿ ಕುಳಿತಿದ್ದ. 10 ದಿನ ಇತ್ತ ತಲೆಹಾಕಲಿಲ್ಲ. ಅಣ್ಣಾ ಹಜಾರೆ ನೇತೃತ್ವದಲ್ಲಿ ದೇಶಾದ್ಯಂತ ಯುವಪಡೆ ಚಳವಳಿ ನಡೆಸಿದಾಗ ಈ ಯುವ ನಾಯಕ ಮಾತಾಡಲೇ ಇಲ್ಲ. ಯುವಕರು ಬೀದಿಗಿಳಿದಾಗ, ಹೋರಾಟ ನಡೆಸಿದಾಗ, ಚಳವಳಿಗೆ ಇಳಿದಾಗ ಮೌನಕ್ಕೆ ಶರಣಾಗುವ ವ್ಯಕ್ತಿ ಯುವಕರ ಮನಸ್ಸನ್ನು ಹೇಗೆ ಗೆದ್ದಾನು? ವಿವಾದ, ಸಂಕಷ್ಟಗಳು ಎದುರಾದಾಗ ಮಾತನಾಡದೇ, ತನಗೆಬೇಕಾದಾಗ, ಅನುಕೂಲವಿದ್ದಾಗ ಮಾತನಾಡುವ ವ್ಯಕ್ತಿ ಜನನಾಯಕನಾಗಲು ಸಾಧ್ಯವೇ?
ರಾಹುಲ್ ಗಾಂಧಿ 2004ರಿಂದ ಲೋಕಸಭೆ ಸದಸ್ಯರಾಗಿದ್ದಾರೆ. ಈವರೆಗೆ ಮಾತನಾಡಿದ್ದು 3-4 ಬಾರಿ ಮಾತ್ರ. ಅದೂ ಕೂಡ ಜನ ಚಪ್ಪಾಳೆ ತಟ್ಟುವಂತಹ ಭಾಷಣವಾಗಿರಲಿಲ್ಲ. ದೇಶವನ್ನು ಕಾಡುವ ಸಮಸ್ಯೆ ಇರಲಿ, ದೇಶದಲ್ಲಿ ನಡೆಯುತ್ತಿರುವ ಚಳವಳಿಗಳಿರಲಿ ರಾಹುಲ್ ಗಾಂಧಿ ತಕ್ಷಣಕ್ಕೆ ಪ್ರತಿಕ್ರಿಯಿಸುವುದಿಲ್ಲ. ಉತ್ತರಪ್ರದೇಶದ ಭಟ್ಟಾಪರ್ಸೂಲ್‌ನಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳದಂತೆ, ಒಡಿಶ್ಶಾದ ನಿಯಮಗಿರಿಯಲ್ಲಿ ಪಾಸ್ಕೋ ಮತ್ತು ವೇದಾಂತ ಕಂಪನಿ ಯೋಜನೆ ಜಾರಿಯಾಗದಂತೆ ಮಾಡಿದ ರಾಹುಲ್ ಗಾಂಧಿ, ದಿಲ್ಲಿಗೆ ಬಂದು ಎಫ್‌ಡಿಐ ಬೆಂಬಲಿಸಿ ಭಾಷಣ ಮಾಡುತ್ತಾರೆ. ಅಲ್ಲಿನ ಪರಿಸ್ಥಿತಿಗೆ, ಜನರ ಭಾವನೆ ಹೇಗಿದೆಯೋ ಹಾಗೆ ಮಾತನಾಡುವವ ನಾಯಕನಾಗಲು ಸಾಧ್ಯವೇ? ನಾಯಕ ಅಂದ ಮೇಲೆ ಕೆಲಮೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವಿರೋಧಿಸುವ ಜನರ ಮನವೊಲಿಸಬೇಕಾಗುತ್ತದೆ. ಎಲ್ಲ ಸಂದರ್ಭದಲ್ಲೂ ಅನುಕೂಲಕ್ಕೆ ತಕ್ಕಂತೆ ವರ್ತಿಸುವುದು ಸಾಧ್ಯವಿಲ್ಲ. ಇಂತಹ ನಾಟಕಗಳನ್ನು ಜನ ಬಹಳ ದಿನ ನಂಬುವುದಿಲ್ಲ.
ಭಾರತದ ರಾಜಕಾರಣ ಎಂದರೆ ಅದು ಫುಲ್‌ಟೈಂ ಉದ್ಯೋಗ. 365 ದಿನವೂ 24ಗಂಟೆಯೂ ಆತ ರಾಜಕಾರಣಿಯೇ. ಆದರೆ ರಾಹುಲ್ ಗಾಂಧಿ ರಾಜಕಾರಣವೇ ಬೇರೆ. ಅವರದ್ದೇನಿದ್ದರೂ ವಾರಕ್ಕೆ 5 ದಿನ ಕೆಲಸ, 2 ದಿನ ವಿಕೆಂಡ್, ತಿಂಗಳಿಗೊಂದು ವಿದೇಶ ಪ್ರವಾಸ, ನೈಟ್‌ಕ್ಲಬ್ ಪಾರ್ಟಿ. ಬೆಳಗ್ಗೆ 10ರಿಂದ ಸಂಜೆ 5 ಖಾದಿ, ಆಮೇಲೆ ಖಾಸಗಿ ಎಂಬುದು ಭಾರತೀಯ ರಾಜಕಾರಣಕ್ಕೆ ಹೊಂದುವುದಿಲ್ಲ.
ರಾಹುಲ್ ಗಾಂಧಿ ಕೆಟ್ಟವ. ಹಣ ಮಾಡಲೆಂದೇ ರಾಜಕೀಯಕ್ಕೆ ಬಂದಿದ್ದಾರೆ. ಆತ ಅಸಮರ್ಥ. ಕೆಲಸ ಮಾಡುವ ಶೈಲಿಯೇ ಸರಿಯಿಲ್ಲ ಎಂದು ಯಾರೂ ಹೇಳುತ್ತಿಲ್ಲ. ಆ ಬಗ್ಗೆ ಯಾರ ದೂರೂ ಇಲ್ಲ. ಅವರಲ್ಲಿ ಒಳ್ಳೆಯ ಗುಣಗಳಿವೆ. ಕೆಲವು ಉತ್ತಮ ಪದ್ಧತಿಗಳನ್ನು ಪಕ್ಷದಲ್ಲಿ ಜಾರಿ ಮಾಡಹೊರಟಿದ್ದಾರೆ. ಅದರಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದು ಅನುಮಾನ.
ವಯಸ್ಸಾದ ಪಕ್ಷದ  ಯುವ ನಾಯಕ. ರಾಜ ಯುವಕನಾದರೂ ಸೇನಾಧಿಪತಿಗಳು ಮುದುಕರು. ಹೀಗಾಗಿ ರಾಹುಲ್ ಗಾಂಧಿ ಭಾಷಣದಲ್ಲಿ ಹೇಳಿದಷ್ಟು ಸುಲಭವಾಗಿ ಪಕ್ಷದಲ್ಲಿ ಯುವಕರಿಗೆ ಅದರಲ್ಲೂ ಸಾಮಾನ್ಯ ಯುವಕರಿಗೆ, ಒಳ್ಳೆಯ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸುವುದು ಕಷ್ಟ. ಯುವ ಕಾಂಗ್ರೆಸ್‌ನಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಸಲು ರಾಹುಲ್ ಗಾಂಧಿ ಮುಂದಾದರು. ಈ ರೀತಿ ಚುನಾವಣೆಗಳು ನಡೆದು, ಗೆದ್ದವರು ಮುಂದೆ ತಮಗೇ ಪ್ರತಿಸ್ಪರ್ಧಿಗಳಾದಾರು ಎಂದು ಎಚ್ಚೆತ್ತ ಮುದಿ ನಾಯಕರೆಲ್ಲ ಸೇರಿ ಹೆಚ್ಚಿನ ಕಡೆಗಳಲ್ಲಿ ಬೇಕಾದವರನ್ನೇ ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ಮಾಡಿದರು. ಚುನಾವಣೆ ನಂತರವೂ ಜಾರಿಗೆ ಬಂದಿದ್ದು ಮತ್ತದೇ ಜೀ ಹಜೂರ್ ವ್ಯವಸ್ಥೆ.
ಯುವಕರಿಗೆ, ಒಳ್ಳೆಯವರಿಗೆ ಟಿಕೆಟ್ ನೀಡಲಾಗುವುದು ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಆದರೆ ಈ ಯುವಕರ ಕೋಟಾದಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದಿದ್ದು ಪ್ರಭಾವೀ ರಾಜಕಾರಣಿಗಳ ಮಕ್ಕಳೇ. ಶತಮಾನದಷ್ಟು ಹಳೆಯದಾದ ಪಕ್ಷ, ಅಷ್ಟೇ ಹಳೆಯದಾದ ವ್ಯವಸ್ಥೆ, ಅದಕ್ಕಿಂತ ಕೊಂಚ ಕಡಿಮೆ ವಯಸ್ಸಾದ ನಾಯಕರು. ಇವರನ್ನೆಲ್ಲ ಬದಲಾಯಿಸುವುದು ಭಾಷಣ ಮಾಡಿದಷ್ಟು ಸುಲಭವಲ್ಲ. ಅಂತಹ ಬದಲಾವಣೆಗೆ ಅವರು ಅವಕಾಶ ನೀಡುವುದೂ ಇಲ್ಲ. ಇಷ್ಟು ಸಮಯ ರಾಹುಲ್ ಗಾಂಧಿ ತನಗೆ ಬೇಕಾದ, ಆಪ್ತ ಕೆಲವು ಯುವ ನಾಯಕರನ್ನು ಒಟ್ಟಿಗೆ ಕಟ್ಟಿಕೊಂಡು ತಿರುಗಾಡುತ್ತಿದ್ದರು. ಈಗ ಪಕ್ಷದಲ್ಲಿ ಸಾಕಷ್ಟು ವರ್ಷದಿಂದ ಇರುವ, ತಮ್ಮದೇ ಕೋಠರಿ ಕಟ್ಟಿಕೊಂಡಿರುವ ಇತರ ಭಾರೀ ನಾಯಕರನ್ನು ಕೂಡ ನಿಭಾಯಿಸಬೇಕಿದೆ.
ರಾಹುಲ್ ಗಾಂಧಿ ಅವರ ಕೆಲವು ವರ್ತನೆಗಳನ್ನು ಗಮನಿಸಿದರೆ ಅವರು ಅಸ್ತಿತ್ವದಲ್ಲಿರುವ 'ದರ್ಬಾರ್‌' ಪದ್ಧತಿಯನ್ನು ಕೊನೆಗಾಣಿಸುತ್ತಾರೇನೋ ಅನ್ನಿಸುತ್ತದೆ. ಅವರು ಈಗ ಪ್ರತಿ ರಾಜ್ಯದ ಪ್ರಮುಖ ನಾಯಕರನ್ನು ಕರೆಸಿಕೊಂಡು ಅವರೊಂದಿಗೆ ಆ ರಾಜ್ಯ ರಾಜಕೀಯದ ಕುರಿತು ಚರ್ಚಿಸುತ್ತಿದ್ದಾರೆ. ಪ್ರತಿ ರಾಜ್ಯದ ರಾಜಕಾರಣವನ್ನೂ ಅರ್ಥಮಾಡಿಕೊಳ್ಳಲು ಇದು ಸಹಕಾರಿ.
ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಅವರಿಗೆ ಒಂದು ದಿನ ದಿಢೀರನೆ ಕರೆ ಮಾಡಿದ ರಾಹುಲ್ ಗಾಂಧಿ, ನಾಳೆ ಬೆಳಗ್ಗೆ ನಿಮ್ಮ ಮನೆಗೆ ಉಪಾಹಾರಕ್ಕೆ ಬರುತ್ತೇನೆ ಎಂದುಬಿಟ್ಟರು. ರಶೀದ್ ಅಲ್ವಿಯವರು ಅದನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಮರುದಿನ ಬೆಳಿಗ್ಗೆ ರಾಹುಲ್ ಗಾಂಧಿ ಉಪಾಹಾರಕ್ಕೆ ಬಂದೇಬಿಟ್ಟರು. ಉಪಾಹಾರ ಮಾಡಿ ಒಂದು ತಾಸು ರಾಜಕೀಯದ ಕುರಿತು ಮಾತನಾಡಿ ಹೋದರು. ಉತ್ತರ ಪ್ರದೇಶದಲ್ಲಿ ದೇನಿಪ್ರಸಾದ್ ವರ್ಮಾ ಎಂಬ ನಾಯಕರಿದ್ದಾರೆ. ಅವರು ತುಂಬ ಸಿಗರೇಟು ಸೇದುತ್ತಿದ್ದರಂತೆ. ಇದನ್ನು ಗಮನಿಸಿದ ರಾಹುಲ್ ಗಾಂಧಿ ಅವರಿಗೊಂದು ಇಲೆಕ್ಟ್ರಿಕ್ ಸಿಗರೇಟು ತರಿಸಿಕೊಟ್ಟರಂತೆ. ಈ ರೀತಿಯ ಕೆಲವು ವರ್ತನೆಗಳಿಂದ 'ದರ್ಬಾರ್‌' ವ್ಯವಸ್ಥೆ ನಿವಾರಿಸಬಹುದು.
ಲೋಕಸಭೆಯಲ್ಲಿ ಅಣುಒಪ್ಪಂದದ ಸಂದರ್ಭದಲ್ಲಿ ಅವರು ಮಾಡಿದ 'ಕಲಾವತಿ-ಲೀಲಾವತಿ' ಭಾಷಣಕ್ಕೆ ಹೋಲಿಸಿದರೆ, ಕಾಂಗ್ರೆಸ್ ಉಪಾಧ್ಯಕ್ಷರಾಗಿ ಜೈಪುರ ಕಾಂಗ್ರೆಸ್ ಅಧಿವೇಶನದಲ್ಲಿ ಮಾಡಿದ ಭಾಷಣ ಕೊಂಚ ಪ್ರೌಢವಾಗಿದೆ. ಅವರು ಭಾರತವನ್ನು ಸ್ವಲ್ಪ ಸ್ವಲ್ಪವಾಗಿ ಅರ್ಥಮಾಡಿಕೊಳ್ಳುತ್ತಿದ್ದಾರೆ ಅನಿಸುತ್ತಿದೆ. 1985ರ ಮುಂಬಯಿ ಕಾಂಗ್ರೆಸ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ತಂದೆ ರಾಜೀವ್ ಗಾಂಧಿ ಕೂಡ ಇದೇ ಧಾಟಿಯಲ್ಲಿ ಮಾತನಾಡಿದ್ದರು. ಅದಾದ ಕೆಲವೇ ವರ್ಷದಲ್ಲಿ ಬೋಫೋರ್ಸ್ ಹಗರಣ ಅವರನ್ನು ಹೇಗೆ ಅವರಿಸಿಕೊಂಡಿತು ಮತ್ತು ಅವರ ಆಸುಪಾಸಿನ ಜನರೇ ಹೇಗೆ ಅವರಿಗೆ ಮುಳುವಾದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ರಾಜೀವ್ ಗಾಂಧಿಯವರಿಗೂ ಪ್ರಧಾನಿಯಾಗುವ ಮುನ್ನ ರಾಜಕೀಯ ಮತ್ತು ಆಡಳಿತದ ಅನುಭವ ಪಡೆಯುವ ಅವಕಾಶವಿತ್ತು. ಆದರೂ ಪಡೆಯಲಿಲ್ಲ. ಈಗ ರಾಹುಲ್ ಗಾಂಧಿಗೂ ಕೇಂದ್ರದಲ್ಲಿ ಸಚಿವರಾಗಿ ಆಡಳಿತದ ಅನುಭವ ಪಡೆಯುವ ಅವಕಾಶವಿತ್ತು. ಅವರೂ ಅದನ್ನು ಕೈಚೆಲ್ಲಿ, ನೇರವಾಗಿ ಪ್ರಧಾನಿಯಾಗಲು ಹೊರಟಿದ್ದಾರೆ. ಅಪ್ಪನ ಹಾದಿಯಲ್ಲೇ ಹೊರಟಿರುವ ರಾಹುಲ್ ಗಾಂಧಿ ಮುಂದೆ ದೊಡ್ಡ ಸವಾಲಿದೆ. ರಾಜೀವ್ ಗಾಂಧಿ ಅಧಿಕಾರಕ್ಕೆ ಬರುವಾಗಿನ ಪರಿಸ್ಥಿತಿ ಈಗಿಲ್ಲ. ಅತ್ಯಂತ ಹೆಚ್ಚು ಸಂಸದರ ಸ್ಥಾನ ಹೊಂದಿರುವ ಉತ್ತರಪ್ರದೇಶ, ಬಿಹಾರ್ ಮತ್ತು ಪಶ್ಚಿಮಬಂಗಾಳದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಉತ್ತರಪ್ರದೇಶ, ಬಿಹಾರದಲ್ಲಿ ರಾಹುಲ್ ಗಾಂಧಿ ಚುನಾವಣೆ ಉಸ್ತುವಾರಿ ನಡೆಸಿದರೂ ಗೆಲುವು ದಕ್ಕಿಲ್ಲ. ಎಲ್ಲೆಲ್ಲಿ ಕಾಂಗ್ರೆಸ್ ಗೆಲ್ಲುತ್ತದೋ ಅಲ್ಲಿಗೆ ಮಾತ್ರ ರಾಹುಲ್ ಗಾಂಧಿಯನ್ನು ಪ್ರಚಾರಕ್ಕೆ ಕಳುಹಿಸಿ, ಅವರು ಹೋದಲ್ಲೆಲ್ಲ ಗೆದ್ದಿದೆ ಎಂಬಂತಹ ಗಿಮಿಕ್‌ಗಳು ಅರ್ಥವಾಗದಷ್ಟು ಜನ ಮೂರ್ಖರಲ್ಲ. ಇನ್ನು ರಾಜಸ್ಥಾನ ಬಿಟ್ಟರೆ ಉಳಿದೆಲ್ಲ ಕಡೆ ಕಾಂಗ್ರೆಸ್ ಅಧಿಕಾರದಲ್ಲಿರುವುದು ಸಣ್ಣ ರಾಜ್ಯಗಳಲ್ಲಿ ಮಾತ್ರ. ರಾಜಸ್ಥಾನದಲ್ಲೂ ಎಲ್ಲ ಸ್ಥಾನಗಳನ್ನು ಗೆಲ್ಲುವಷ್ಟು ಕಾಂಗ್ರೆಸ್ ಶಕ್ತವಾಗಿಲ್ಲ. ಯುವರಾಜ ಕೇಂದ್ರದಲ್ಲಿ ರಾಜನಾಗಬೇಕು ಎಂದಾದರೆ ಈ ರಾಜ್ಯಗಳಲ್ಲಿ ಗೆಲುವು ಅತ್ಯಂತ ಮುಖ್ಯ.
ಒಬ್ಬ ರಾಜಕಾರಣಿ ನಾಯಕನಾಗುವುದು ಮತ್ತು ಜನ ಅವನ ಸಾಮರ್ಥ್ಯವನ್ನು ಅಳೆಯುವುದು ಆತ ತನ್ನ ಪಕ್ಷಕ್ಕೆ ಎಷ್ಟು ಸೀಟುಗಳನ್ನು ಗೆಲ್ಲಿಸಬಲ್ಲ ಎಂಬುದರ ಆಧಾರದ ಮೇಲೆ. ಒಬ್ಬ ರಾಜಕಾರಣಿಯ ಅಂತಿಮ ಮಾನದಂಡ ಚುನಾವಣೆ.
ಇಂತಹ ಸಂದರ್ಭಗಳಲ್ಲೇ ರಾಹುಲ್ ಗಾಂಧಿ ಹಿಂದೆ ಬೀಳುತ್ತಾರೆ. ಸಂಘಟನೆಯಿಂದ ಆರಂಭಿಸಿ, ಅಧಿಕಾರದ ಪ್ರತಿ ಮೆಟ್ಟಿಲನ್ನೂ ಏರಿ, ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳಿತು, ಸತತ 3 ಅವಧಿಗೆ ಅದನ್ನು ಉಳಿಸಿಕೊಂಡು ಬಂದಿರುವ ನರೇಂದ್ರ ಮೋದಿ ಎದುರು ರಾಹುಲ್ ಗಾಂಧಿ ತುಂಬ ಎಳಸು ಅನ್ನಿಸಿಬಿಡುತ್ತದೆ. ಯಾಕೆಂದರೆ ಅಧಿಕಾರ ಸೌಧವನ್ನು ತಾವೇ ಕಟ್ಟಿ, ಒಂದೊಂದೇ ಹಂತ ಏರಿ ಬಂದವರಿಗಿರುವ ಅನುಭವ ನೇರವಾಗಿ ಲಿಫ್ಟ್‌ನಲ್ಲಿ ಟಾಪ್ ಫ್ಲೋರಿಗೆ ಬಂದವರಿಗೆ ಇರುವುದಿಲ್ಲ.

-ವಿನಾಯಕ ಭಟ್ಟ ಮೂರೂರು
ಕನ್ನಡಪ್ರಭ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.