ಗಡಿ ಕಾಯಲಾಗದಿದ್ದರೂ ಸಿನಿಕತೆಯ ಬೇಲಿಯನ್ನಾದರೂ ಜಿಗಿಯೋಣ!
ಬಿಸಿನೆಸ್ ಆ್ಯಸ್ ಯೂಸುವಲ್...
ಭಾರತೀಯ ಯೋಧ ಹೇಮರಾಜ್ ತಲೆ ಕಡಿದಿದ್ದು ನಾವಲ್ಲವೇ ಅಲ್ಲವಾದ್ದರಿಂದ ಛೇದಿಸಿದ ತಲೆ ತಂದುಕೊಡುವ ಪ್ರಶ್ನೆ ಎಲ್ಲಿಂದ ಬರುತ್ತದೆ ಎಂದು ಬಿಟ್ಟಿತು ಪಾಕಿಸ್ತಾನ. 'ಆದದ್ದಾಯಿತು, ಇನ್ನೇನು ಮಾಡೋಕಾಗುತ್ತೆ' ಎಂಬಂತೆ ತುಸು ಸಿಟ್ಟಾದಂತೆ ಮಾಡಿ ಸುಮ್ಮನಾಗಿದೆ ಭಾರತ ಸರ್ಕಾರ. ಇಂಥ ಘಟನೆಗಳಾದಾಗ ಭಾವಾಕ್ರೋಶಕ್ಕೆ ಪಕ್ಕಾಗುವ ಮನಸ್ಸು ಈ ಪಾಕಿಗಳ ಮೇಲೆ ಯುದ್ಧವನ್ನೇ ಸಾರಿ ಬಿಡಬೇಕು ಎಂದು ಆಶಿಸುತ್ತದೆ. ವಾಸ್ತವದ ನೆಲೆಯಲ್ಲಿ ನೋಡಿದಾಗ ಅದು ಯಾವುದೇ ದೇಶ ಕಟ್ಟಕಡೆಯ ಆಯ್ಕೆಯಾಗಿ ಇರಿಸಿಕೊಳ್ಳಬೇಕಾದ ಸಂಗತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅಷ್ಟು ಹೀನಾಯವಾಗಿ ನಡೆದುಕೊಳ್ಳುವ ನೆರೆ ದೇಶದ ಜತೆಗೆ ವ್ಯವಹರಿಸುವ ಮಾತಿನ ಧಾಟಿಯಾದರೂ ಬದಲಾಗಬೇಕು ಎಂಬ ಆಶಯದಲ್ಲೇನೂ ಭಾವಾತಿರೇಕವಿಲ್ಲ. ಇದೂ ಅವಶ್ಯವಿಲ್ಲ, ಮಾತುಕತೆ ಪ್ರಕ್ರಿಯೆಗಳು ಎಂದಿನಂತೆ ಜಾರಿಯಲ್ಲಿರಲಿ ಎನ್ನುವವರದ್ದು ಮಾತ್ರ ಭ್ರಾಂತಿಯ ಮನಸ್ಸು ಎನ್ನದೇ ವಿಧಿಯಿಲ್ಲ.
ವೈನ್‌ಗ್ಲಾಸ್ ರಾಜತಾಂತ್ರಿಕತೆಯ ಉನ್ನತ ಪೋಷಾಕು ಗಣವು ನಮ್ಮೆಲ್ಲರ ಆಕ್ರೋಶವನ್ನು ಅಣಕಿಸುವ ರೀತಿಯಲ್ಲಿ ಪ್ರಶ್ನೆಯೊಂದನ್ನು ಎದಿರು ನಿಲ್ಲಿಸುತ್ತದೆ. 'ಪಾಕಿಸ್ತಾನದ ವಿರುದ್ಧ ಹೀಗೆಲ್ಲ ಕೂಗಾಡಿಕೊಂಡು, ತಕ್ಕಶಾಸ್ತಿಯಾಗಲಿ ಎನ್ನುತ್ತಿರುವವರಲ್ಲಿ ಎಷ್ಟು ಮಂದಿ ಕದನದಲ್ಲಿ ತಮ್ಮ ಪ್ರಾಣಾರ್ಪಣೆಗೆ ಸಿದ್ಧವಾಗಿದ್ದಾರೆ' ಎಂದು. ನಿಜವೇ. ಆಕ್ರೋಶಗೊಂಡವರಿಗೆಲ್ಲ ಗಡಿಯಲ್ಲಿ ಬಂದೂಕು ಹಿಡಿದು ನಿಲ್ಲುವುದು ಸಾಧ್ಯವಿಲ್ಲದ ಕೆಲಸ. ಸೇನೆಯ ಬಗ್ಗೆ ಯೋಚಿಸುವವರು, ದೇಶಾಭಿಮಾನದ ಮಾತನಾಡುವವರು ಎಲ್ಲರೂ ಸಮರಕಲೆ ಅರಿತವರೇನಲ್ಲ. ಸೈನಿಕ ಶಿಕ್ಷಣ ಕಡ್ಡಾಯವಾಗಿರುವ ದೇಶವೇನೂ ನಮ್ಮದಲ್ಲ. ಹಾಗಾದರೆ ಹೇಮರಾಜ್ ಸಾವಿನ ಕುರಿತ ಸಿಟ್ಟು, ಅನುಕಂಪ ಹಾಗೂ ಆ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಪುಟಿದೇಳುವ ವೀರಾವೇಶ ಎಲ್ಲವೂ ಪೊಳ್ಳೇ?
ಇಲ್ಲ!
ಎಲ್ಲ ಸಿನಿಕತೆಗಳ ಬೇಲಿ ಜಿಗಿದು ನಾವು ನಮ್ಮ ಸೈನಿಕರ ಬಗ್ಗೆ ಇನ್ನಷ್ಟು- ಮತ್ತಷ್ಟು ಮಾತನಾಡಬೇಕು. ಹುತಾತ್ಮರಾದವರ ಜಾಗವನ್ನು ತುಂಬಿ ಗಡಿಯಲ್ಲಿ ಪಹರೆಗೆ ನಿಲ್ಲುವುದು ನಮ್ಮಲ್ಲಿ ಬಹುತೇಕರಿಗೆ ಒಗ್ಗದ ಸಂಗತಿಯೇ ಇದ್ದೀತು. ಹೇಮರಾಜ್ ಕುಟುಂಬದ ನೋವು, ಭಾವತಲ್ಲಣಗಳ ಬಗ್ಗೆ ನೆನೆದು ನಾವು ದುಃಖಗೊಳ್ಳುವುದರಿಂದ ಅವರಿಗೇನಾದರೂ ಫಾಯಿದೆಯಾದೀತೆ ಎಂದು ತರ್ಕಕ್ಕೆ ಕೂರಬಹುದು. ಅಂಥ ನೇರಾನೇರಾ ಲಾಭಗಳು, ಕಣ್ಣಿಗೆ ರಾಚುವ ಬದಲಾವಣೆಗಳು ಗಕ್ಕೆಂದು ಘಟಿಸಿ ಬಿಡುವುದಿಲ್ಲ ಖರೆ. ಆದರೂ ಗಡಿ ಕಾಯುವವರ ಶೌರ್ಯ-ತ್ಯಾಗಗಳನ್ನು ನೆನೆ ನೆನೆದು ನಮ್ಮ ಎದೆ ಒದ್ದೆಯಾಗಲೇಬೇಕು. ಪಕ್ಕಾ ಪ್ರಾಕ್ಟಿಕಲ್ ನೆಲೆಯಲ್ಲಿ ನಿಂತು ಆಲೋಚಿಸುವವರಿಗೆ ಈ ಯೋಧರ ಸಂಕಷ್ಟಗಳನ್ನೂ, ಅವರ ಮನೆಯವರ ತಳಮಳಗಳನ್ನು ಹರವಿಡುವ ವಾಗ್ಮಿ, ಲೇಖಕ, ಕಲಾವಿದರೆಲ್ಲ ಜನರ ಭಾವನೆಗಳ ಮೇಲೆ ಸವಾರಿ ಮಾಡಿ ತಾವು ತೀರ ತಲುಪಿಕೊಳ್ಳುವ ಉದ್ದೇಶ ಹೊತ್ತವರಂತೆ ತೋರಬಹುದೇನೋ.
ಹೀಗೆಲ್ಲ ಬಿಸಿಯಾಗಿ ಬಂದು ತಾಗಿ ಕಳವಳಕ್ಕೀಡು ಮಾಡುವ ಸಿನಿಕ ನಿಟ್ಟುಸಿರಿನ ನಡುವೆಯೇ ವಾಸ್ತವದ ಬೆರಗೊಂದರ ತಂಪಿದೆ. ದೇಶವನ್ನು ರಕ್ಷಿಸುವವರ ಕುರಿತ ನಮ್ಮ ಅಭಿಮಾನದ ಮಾತುಗಳು ಆಡಳಿತ ವ್ಯವಸ್ಥೆಗೆ ತಾಗುವುದು ಅಷ್ಟರಲ್ಲೇ ಇದ್ದಿರಬಹುದು. ಯೋಧನ ಕುಟುಂಬದ ಭಾವ ತಲ್ಲಣಗಳ ಬಗ್ಗೆ ಭಾವುಕರಾದ ಮಾತ್ರಕ್ಕೆ ಅವರ ಸ್ಥಿತಿ ಸುಧಾರಣೆಯೇನೂ ಆಗಿಬಿಡುವುದಿಲ್ಲ ನಿಜ. ಆದರೆ ಅವರ ನೆನಪಲ್ಲಿ ಸಮಾಜ ಒದ್ದೆಯಾಗುತ್ತಾ ಹೋದಂತೆಲ್ಲ ಅದರ ಎದೆಯಲ್ಲಿ ಸಂಕಲ್ಪದ ಬೀಜಗಳು ತಾನೇ ತಾನಾಗಿ ಮೊಳಕೆ ಒಡೆಯುತ್ತವೆ. ಸೈನಿಕರು ಮತ್ತವರ ಕುಟುಂಬಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುತ್ತ ಹೋದಂತೆಲ್ಲ ನಮ್ಮ ವೈಯಕ್ತಿಕ ಗೋಳು-ರಗಳೆಗಳು ಕ್ಷುಲ್ಲಕವಾಗಿ ಕಾಣತೊಡಗುತ್ತವೆ. ಅವರ ಸವಾಲು-ಸಂಕಷ್ಟಗಳ ಮುಂದೆ ನಮ್ಮದೇನೂ ಮಹಾ ಅನ್ನಿಸಿದ ಮರುಕ್ಷಣದಲ್ಲೇ ವ್ಯಕ್ತಿಯೊಬ್ಬನ ಕರ್ತವ್ಯದಲ್ಲಿನ ಕ್ಷಮತೆ ವೃದ್ಧಿಸುತ್ತದೆ. ಸೇನೆಯ ಮೇಲೆ ಯೋಧರ ಮೇಲೆ ಅಭಿಮಾನ ತೋರಿಸುವುದಕ್ಕೆ ಅವರನ್ನೇ ಹೋಗಿ ಸೇರಿಕೊಂಡು ಒತ್ತಾಸೆಯಾಗಬೇಕಿಲ್ಲ. ಇರುವ ವೃತ್ತಿಯಲ್ಲೇ ಸಮರ್ಪಣೆ-ಪ್ರಾಮಾಣಿಕತೆ ಮೆರೆದರೆ ಅಷ್ಟೇ ಸಾಕು. ನಾವು ಭ್ರಷ್ಟರಾಗುವುದೆಂದರೆ, ನೈತಿಕತೆ ಉಡುಗಿಸಿಕೊಳ್ಳುವುದೆಂದರೆ ಅದು ಕುಟುಂಬದಿಂದ ದೂರಾಗಿ, ನಿದ್ರೆ-ಸ್ವಂತದ ಆರಾಮುಗಳನ್ನು ಪಕ್ಕಕ್ಕೆ ಸರಿಸಿ ದೇಶ ಕಾಯುತ್ತಿರುವ ಬಂಧುಗಳಿಗೆ ಎಸಗುವ ದ್ರೋಹ ಎಂದು ಅರಿವಾದರೆ ಅದಕ್ಕಿಂತ ಹಿರಿದಾದ ಬದಲಾವಣೆ-ಚಮತ್ಕಾರ ಇನ್ಯಾವುದಿದ್ದೀತು?
ಯೋಧರು ಮತ್ತವರ ಸುತ್ತಲಿನ ಪರಿಸರದ ಕತೆಗಳು ನಮ್ಮಂಥ ಸಾಮಾನ್ಯರ ಬದುಕಿನ ರಣರಂಗದಲ್ಲೂ ಸ್ಫೂರ್ತಿ-ನಿಸ್ವಾರ್ಥ ಭಾವಗಳನ್ನು ಚಿಮ್ಮಿಸಲಿ ಎಂಬ ಆಶಯವನ್ನು ಹೊತ್ತ ಪುಸ್ತಕವೇ Chicken Soup for the Indian Armed forces Soul'.
ಸೇವೆ, ನಿಷ್ಕಾಮಕರ್ಮ, ಸ್ಥೈರ್ಯಗಳನ್ನು ಬಿಂಬಿಸುವ 101 ನಿಜ ಕತೆಗಳನ್ನು ಇಲ್ಲಿ ಪೋಣಿಸಿ ಇಟ್ಟಿದ್ದಾರೆ ಕೃತಿಯ ಸಂಪಾದಕಿ ರಕ್ಷಾ ಭರಾಡಿಯಾ ಆ ಪೈಕಿ ಸೇನಾಧಿಕಾರಿಯೊಬ್ಬನ ಪತ್ನಿ ಚಿತ್ರಾ ವಶಿಷ್ಠ ದಾಖಲಿಸುವ ಅನುಭವ ಕಥನವೊಂದಿದೆ. ದೈನಿಕದ ಚಿಕ್ಕಪುಟ್ಟ ಕಿರಿಕಿರಿಗಳತ್ತ ಕೈ ತೋರಿಸಿ ಅಲವತ್ತುಕೊಳ್ಳುವ ನಾವೆಲ್ಲ, ಯೋಧನ ಕುಟುಂಬದಲ್ಲಿರುವುದರ ಅರ್ಥವೇನು ಎಂಬುದನ್ನು ತಿಳಿದುಕೊಂಡು ವಿನಮ್ರರಾಗುವುದಕ್ಕೆ ಈ ಪ್ರಸಂಗ ಕಾರಣ ಒದಗಿಸುತ್ತದೆ. ಚಿತ್ರಾ ವಶಿಷ್ಠರ ಅನುಭವಗಾಥೆಯನ್ನು ಅವರ ಮಾತುಗಳಲ್ಲೇ ಸಂಕ್ಷಿಪ್ತವಾಗಿ ಕೇಳುವುದಾದರೆ...
'ಮೇಡಂ, ಉಗ್ರರು ಸಾಹೇಬರ ಮೇಲೆ ಅಟ್ಯಾಕ್ ಮಾಡಿದ್ದಾರೆ. ನಮ್ಮ ಜತೆ ಆಸ್ಪತ್ರೆಗೆ ಬನ್ನಿ' ಎಂದು ಕೂಗಿಕೊಂಡ ಬಾಗಿಲಲ್ಲಿ ನಿಂತಿದ್ದ ವ್ಯಕ್ತಿ! ಮಕ್ಕಳಾದ ಸಂಚಿತ್ ಮತ್ತು ಅಂಚಿತ್‌ಗೆ ಕೆಲ ಸೂಚನೆಗಳನ್ನು ಕೂಗಿ ಹೇಳುತ್ತಲೇ ನನ್ನ ಮಾವ ಕೊಟ್ಟಿದ್ದ ಭಗವದ್ಗೀತೆ ಪುಸ್ತಕ ಎತ್ತಿ ಎದೆಗವುಚಿಕೊಂಡು ಹೊರಗೋಡಿದೆ. ಪತಿ ಸಂಜೀವ್ ಕಮಾಂಡರ್ ಒಡಗೂಡಿ ರಸ್ತೆ ಮಾಡುವ ಕೆಲಸದ ಸಹಾಯಕ್ಕೆ ತೆರಳಿದ್ದರು. ಜಮ್ಮು-ಕಾಶ್ಮೀರದ ಕಿಸ್ತಾವರ ಪಟ್ಟಣ ವ್ಯಾಪ್ತಿಯಿಂದ ತುಸು ದೂರದಲ್ಲಿದ್ದ ಶಾಲಿಮಾರ್ ಎಂಬ ಪ್ರಕೃತಿ ವೈಭವದ ಸುಂದರ ತಾಣದಲ್ಲಿ ನಾವು ತಂಗಿದ್ದೆವು. ಪ್ರಾರಂಭದಲ್ಲಿ ಸ್ವಿಡ್ಜರ್ಲೆಂಡ್‌ನಂತೆ ಸೆಳೆದು ಪುಳಕ ಹತ್ತಿಸಿದ್ದ ಪ್ರದೇಶ ನಂತರ ಉಗ್ರವಾದದ ಕಟು ವಾಸ್ತವವನ್ನೂ ಪರಿಚಯಿಸಿತು. ನಿಧಾನವಾಗಿ ಬಂದ್, ಕರ್ಫ್ಯೂ, ಬಂದೂಕಿನ ಮೊರೆತಗಳಿಗೆ ನಾವು ಒಗ್ಗಿಕೊಂಡೆವು.
ಆ ದಿನ ಮಾರ್ಚ್ 8, 1994. ಆಸ್ಪತ್ರೆ ಪ್ರವೇಶಿಸಿದ ನನಗೆ ಮುಖದ ಮೇಲೆ ಮಂದಸ್ಮಿತ ಮೂಡಿಸಿಕೊಂಡಿದ್ದ ಸಂಜೀವ್ ಕಂಡರು. ಐದು ಗುಂಡುಗಳು ದೇಹ ಹೊಕ್ಕಿದ್ದರೆ, ಇನ್ನೂ ಹದಿನೈದಿಪ್ಪತ್ತು ಗುಂಡುಗಳು ಅವರನ್ನು ತೀವ್ರವಾಗಿ ಘಾಸಿಗೊಳಿಸಿದ್ದವು. ಎಲ್ಲವೂ ಸರಿಯಾಗುತ್ತದೆ ಎಂದು ಸಂಜೀವ್ ತಮ್ಮ ಮಂದಹಾಸದ ಮೂಲಕ ನಂಬಿಸಲು ಪ್ರಯತ್ನಿಸುತ್ತಿದ್ದರು. ಆದರೆ ಅವರ ಎಡ ಮೊಣಕಾಲು ಮತ್ತು ಎಡಗೈ ಮಣಿಕಟ್ಟು ಛಿದ್ರವಾಗಿರುವುದನ್ನು ಗಮನಿಸಿದ ನನಗೆ ಆ ನಗೆಯ ಹಿಂದಿರುವ ಯಾತನೆ ಎಂಥಾದ್ದೆಂದು ಅಂದಾಜಾಗಿತ್ತು.
ಮಾರನೇ ದಿನವೇ ಉಧಮ್‌ಪುರದ ಕಮಾಂಡರ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ. ಐಸಿಯುದಲ್ಲಿ ಮಲಗಿದ್ದ ಸಂಜೀವ್ ಮುಖದ ಮಂದಹಾಸವನ್ನೆಲ್ಲ ಭಯಾನಕ ನೋವು ನುಂಗಿ ಹಾಕಿತ್ತು. ಪ್ರಜ್ಞೆಗೆ ಬಂದಾಗಲೆಲ್ಲ ನರಳುತ್ತಿದ್ದ ಸಂಜೀವ್ ತಮ್ಮ ಮೇಲೆ ದಾಳಿ ಮಾಡಿದವರನ್ನು ಶಪಿಸುತ್ತಿದ್ದರು. ನಮ್ಮ ಬದುಕೇ ಮಗುಚಿಕೊಂಡಿತ್ತು. ಅಕಾಡೆಮಿಕ್ ವರ್ಷದ ಅರ್ಧದಲ್ಲಿ ಮಕ್ಕಳಿಬ್ಬರಿಗೆ ಶಾಲೆಗೆ ಹೋಗಲಾರದ ಪರಿಸ್ಥಿತಿ.
ಹದಿನೈದು ದಿನಗಳು ಕಳೆದ ನಂತರ ನಾನು ಹಿಂಜರಿಯುತ್ತಲೇ ವೈದ್ಯರನ್ನು ಕೇಳಿದೆ-'ಸಂಜೀವ್‌ಗೆ ಮತ್ತೆ ನಡೆಯುವುದಕ್ಕೆ ಸಾಧ್ಯವಾಗುತ್ತಾ' ಅಂತ. 'ಯಾವುದಕ್ಕೂ ಮೊದಲು ಪ್ರಾಣ ಉಳಿಯಲಿ ಎಂದು ಪ್ರಾರ್ಥಿಸಿಕೊಳ್ಳಿ' ಅಂತ ವೈದ್ಯರು ಪ್ರತಿಕ್ರಿಯಿಸಿದರು! ಇನ್ನೆರಡು ವಾರಗಳಲ್ಲಿ ಕೈಯ ಗಾಯ ಮಾಯದಿದ್ದರೆ ಅದನ್ನು ಕತ್ತರಿಸಬೇಕಾಗುತ್ತದೆ ಎಂಬ ನಿರ್ಧಾರಕ್ಕೆ ಬಂದಿದ್ದರು ವೈದ್ಯರು. ಕುಟುಂಬದಲ್ಲಿ ಹಲವರು ವೈಷ್ಣೋದೇವಿಗೆ ಪ್ರಾರ್ಥನೆ ಸಲ್ಲಿಸುವುದಕ್ಕೆ ಹೋದರು. ನನ್ನ ದುಃಖ ನೋಡಲಾಗದ ದಾದಿಯೊಬ್ಬರು ಕೇರಳದ ಫಾದರ್ ಪಣ್ಣಿಕಳ್ ಅವರಿಗೆ ಸಂಜೀವ್ ಹೆಸರಲ್ಲಿ ಪ್ರಾರ್ಥನೆ ನೆರವೇರಿಸುವಂತೆ ವಿನಂತಿಸಿ ಪತ್ರ ಬರೆಯುವುದಕ್ಕೆ ಸೂಚಿಸಿದರು. ಕೆಲ ದಿನಗಳಲ್ಲಿ ಸಂಜೀವ್ ಕೈ ಗಾಯ ವಾಸಿಯಾಗುತ್ತಾ ಬಂತು. ಬೆರಳುಗಳಲ್ಲಿ ಚಲನೆ ಹಾಗೂ ಪ್ರತಿದಿನ ಸುಧಾರಣೆ ಗೋಚರವಾಯಿತು. ನಾನು ದೇವಿ ಹಾಗೂ ಜೀಸಸ್ ಇಬ್ಬರಿಗೂ ವಂದಿಸಿದೆ.
ಆಗಸ್ಟ್ 1994ರಲ್ಲಿ ಸಂಜೀವ್ ಕಾಲು ಸುಧಾರಣೆಯಾಯಿತು. ಶಸ್ತ್ರಚಿಕಿತ್ಸೆ ನಂತರ ಎಡಗಾಲು ಎರಡು ಸೆಂಟಿಮೀಟರ್ ಚಿಕ್ಕದಾಗಿತ್ತು. ಕೈಗೆ ದಿನವೂ ಡ್ರೆಸಿಂಗ್ ಮಾಡಬೇಕಿತ್ತು. ನನ್ನ ಮಸಲ್ ಮ್ಯಾನ್ ಮೂಳೆಯ ತಡಿಕೆಯಾಗಿ ಹೋಗಿದ್ದರು. ಜೀವ ಉಳಿಯಿತು ಹಾಗೂ ಸುಧಾರಣೆ ಆಗುತ್ತಿದೆ ಎಂಬ ಸಮಾಧಾನದೆದುರು ಉಳಿದಿದ್ದು ಗೌಣವೆನಿಸಿತು. ಮಕ್ಕಳು ಮತ್ತೆ ಶಾಲೆಗೆ ಹೊರಟಿದ್ದರು. ವಾಕರ್ ಸಹಾಯದಿಂದ ಸಂಜೀವ್ ಆಗೀಗ ನಡೆದಾಡುತ್ತಿದ್ದರು. ಅದೊಂದು ದಿನ ಫಾದರ್ ಪಣಿಕ್ಕಳ್ ಅವರು ಪತ್ರ ಬರೆದು ಉಗ್ರರ ಬಗ್ಗೆ ಕ್ಷಮಾಭಾವ ತೋರುವಂತೆ ಹೇಳಿದರು. ಅದು ತುಂಬ ಕಷ್ಟದ ಕೆಲಸವಾದರೂ ದೇವರಿಗೆ ಧನ್ಯವಾದ ಅರ್ಪಿಸುವ ವಿಧವೆಂದು ಬಗೆದು ಕ್ಷಮಿಸಿ ಬಿಟ್ಟೆ. 1995ರ ಜನವರಿ 26ರಂದು ಸಂಜೀವ್‌ರಿಗೆ ಸೇನಾ ಮೆಡಲ್ ನೀಡಿ ಗೌರವಿಸಲಾಯಿತು. ಆ ಸಮಯಕ್ಕೆ ಸಂಜೀವ್ ವಾಕರ್ ಬಿಟ್ಟು ಊರುಗೋಲು ಉಪಯೋಗಿಸಿ ನಡೆವ ಹಂತಕ್ಕೆ ಬಂದಿದ್ದರು. ಅವರಿಗೆ ಲೆಫ್ಟಿನೆಂಟ್ ಕರ್ನಲ್ ಎಂದು ಪದೋನ್ನತಿಯೂ ದೊರೆಯಿತು. ಕೈ ಚಿಕಿತ್ಸೆ ಮುಂದುವರಿದಿತ್ತಾದರೂ ಅದಕ್ಕೆ ಮನೆಯಲ್ಲೇ ಡ್ರೆಸಿಂಗ್ ಮಾಡುವುದನ್ನು ನಾನು ಕಲಿತಿದ್ದೆ.
ಎರಡು ವರ್ಷಗಳ ನಂತರ ಕರ್ನಲ್ ಆಗಿ ಪ್ರಮೋಷನ್ ಸಿಗುವ ವೇಳೆಗೆ ಊರುಗೋಲು ದೂರಾಗಿತ್ತು. ಡ್ರೈವಿಂಗ್ ಮೂಲಕ ಆತ್ಮವಿಶ್ವಾಸ ಮರಳಿ ಪಡೆದಿದ್ದರು ಸಂಜೀವ್. ಅಕ್ಟೋಬರ್ 2007ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಮಿಲಿಟರಿ ವರ್ಲ್ಡ್ ಗೇಮ್ಸ್‌ನಲ್ಲಿ ಪ್ರಶಸ್ತಿ ಪಡೆದ ಸಂಜೀವ್ ಬ್ರಿಗೇಡಿಯರ್ ಹಂತಕ್ಕೆ ಏರಿದರು. ಇವತ್ತು ಈ ಧೀರ ಯೋಧನಿಗೆ ಶೇಕಡಾ ಅರವತ್ತರಷ್ಟು ದೈಹಿಕ ವೈಕಲ್ಯವಿದೆ ಎಂಬ ಬಗ್ಗೆ ಯಾರಿಗೂ ಗುರುತೇ ಸಿಗುವುದಿಲ್ಲ. ಈ ಎಲ್ಲ ಹಂತಗಳಲ್ಲಿ ಸೇನೆ ಬೆಂಬಲವಾಗಿ ನಿಲ್ಲದಿದ್ದರೆ ನಾವು ಕುಸಿದು ಬಿಡುತ್ತಿದ್ದೆವು. ಪ್ರತಿದಿನವೂ ನಾನು ದೇವರಿಗೆ ಥ್ಯಾಂಕ್ಸ್ ಹೇಳ್ತೀನಿ. ಏಕೆಂದರೆ ಇನ್ನೂ ಬೇಡಿಕೊಳ್ಳುವುದಕ್ಕೆ ನನಗೇನೂ ಇಲ್ಲ! ಭಾರತ ಸೇನೆಯ ಘನತೆವೆತ್ತ ಯೋಧ ಬ್ರಿಗೇಡಿಯರ್ ಸಂಜೀವ್ ವಶಿಷ್ಠರ ಹೆಂಡತಿ ಎಂದು ಹೇಳಿಕೊಳ್ಳುವುದಕ್ಕೆ ನನಗೆ ಎಲ್ಲಿಲ್ಲದ ಹೆಮ್ಮೆ!
ಇಂಥ ಅನುಭವಗಾಥೆಗಳು ನಮ್ಮನ್ನು ಪ್ರಖರ ಕರ್ತವ್ಯಮುಖಿಗಳನ್ನಾಗಿಸಿದರೆ ಅದುವೇ ಋಣ ಸಂದಾಯ, ಅಲ್ಲವೇ?
- ಚೈತನ್ಯ ಹೆಗಡೆ
cchegde@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

